ಇವಿ ಮೋಟಾರ್‌ಗಳ ಜಗತ್ತು (ಭಾಗ-೨)

ಜಯತೀರ್ಥ ನಾಡಗೌಡ

ಹಿಂದಿನ ಬರಹದಲ್ಲಿ ೩ ಬಗೆಯ ಇಲೆಕ್ಟ್ರಿಕ್ ಓಡುಗೆಗಳ ಬಗ್ಗೆ ತಿಳಿದಿದ್ದೆವು. ಇದೀಗ ಅದನ್ನು ಮುಂದುವರೆಸುತ್ತ, ಇತರೆ ಓಡುಗೆಗಳ ಬಗೆಗಳನ್ನು ತಿಳಿಯೋಣ ಬನ್ನಿ.

 

  1. ಸ್ವಿಚ್ಡ್ ರಿಲಕ್ಟನ್ಸ್ ಓಡುಗೆ (Switch Reluctance Motor):

ಇದರಲ್ಲಿ ರೋಟಾರ್‌ಗೆ ಯಾವುದೇ ಸೆಳೆಗಲ್ಲಾಗಲಿ(Magnet) ಇಲ್ಲವೇ ತಂತಿಸುರುಳಿಗಳನ್ನು(Windings) ಬಳಸುವುದಿಲ್ಲ. ಬದಲಾಗಿ ಇವು ರಿಲಕ್ಟನ್ಸ್ ನಿಂದ ಉಂಟಾಗುವ ಸೆಳೆಬಲವನ್ನೇ ಬಳಸಿಕೊಂಡು ಕೆಲಸ ಮಾಡಬಲ್ಲವು. ಇವುಗಳು ಕೆಲಸ ಮಾಡುವಾಗ ಹೆಚ್ಚಿನ ಸದ್ದುಂಟು ಮಾಡುತ್ತವೆ, ಮತ್ತು ಇವುಗಳು ಕೆಲಸ ಮಾಡುವ ಬಗೆ ತುಸು ಜಟಿಲವಾಗಿರುವುದರಿಂದ ಇವುಗಳನ್ನು ಹಿಡಿತದಲ್ಲಿಡುವುದು ಅಷ್ಟೇ ಕಷ್ಟ. ಇವುಗಳ ಕಸುವಿನ ದಟ್ಟಣೆ ಮತ್ತು ಇವುಗಳ ತಂಪಾಗಿಸುವಿಕೆ, ಇತರ ಓಡುಗೆಗಳ ಹೋಲಿಕೆಯಲ್ಲಿ ಮಧ್ಯಮ ಮಟ್ಟದಲ್ಲಿರುತ್ತದೆ. SRM ಓಡುಗೆಗಳೆಂದೇ ಕರೆಯಲ್ಪಡುವ ಈ ಓಡುಗೆಗಳ ದಕ್ಷತೆಯು 85% ಕ್ಕೂ ಹೆಚ್ಚು. ಈ ಬಗೆಯ ಮೋಟಾರ್‌ಗಳಲ್ಲಿ ಯಾವುದೇ ಸೆಳೆಗಲ್ಲು ಮತ್ತು ತಂತಿಸುರುಳಿ ಇಲ್ಲದ ಕಾರಣ ಇವುಗಳು ಬಲು ಅಗ್ಗವಾಗಿರುತ್ತವೆ. ಆದರೆ ಇವುಗಳನ್ನು ಕೆಲವೇ ಕೆಲವು ಚೀನಾ ಮೂಲದ ಇವಿ ತಯಾರಕರು ಬಳಸುತ್ತಿದ್ದಾರೆ.

  1. ಆಕ್ಷಿಯಲ್ ಫ್ಲಕ್ಸ್ ಮೋಟಾರ್ (Axial Flux Motor):

ಈ ಬಗೆಯ ಓಡುಗೆಗಳಲ್ಲಿ ಉಂಟಾಗುವ ಸೆಳೆಗಲ್ಲಿನ ಹರಿವು(Magnetic Flux) ಅದರ ನಡುಗೆರೆ(Axial) ಮೂಲಕ ಸಾಗುತ್ತದೆ. ದಕ್ಷತೆಯಲ್ಲಿ ಮತ್ತು ಕಸುವಿನ ದಟ್ಟಣೆಯಲ್ಲಿ ಎಲ್ಲ ಮೋಟಾರ್‌ಗಳಿಗಿಂತ ಮೇಲು. ಇದೇ ಕಾರಣಕ್ಕೆ ಇವುಗಳನ್ನು ಫೆರಾರಿಯಂತ ದುಬಾರಿ ಮತ್ತು ಸೂಪರ್ ಕಾರುಗಳಲ್ಲಿ ಬಳಸುತ್ತಾರೆ. ಈ ಮೋಟಾರ್‌ಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ತೂಕದಲ್ಲೂ ಹಗುರ. ಇವುಗಳನ್ನು ಹಿಡಿತದಲ್ಲಿಡುವುದು PMSM ಓಡುಗೆಗಳಂತೆ ಇರಲಿದೆ. ಇವುಗಳ ತಂಪಾಗಿಸುವಿಕೆಯೂ ಸಲೀಸು. ಆಕ್ಷಿಯಲ್ ಫ್ಲಕ್ಸ್ ಓಡುಗೆಗಳಲ್ಲಿ ಹೆಚ್ಚು ಗಟ್ಟಿಮುಟ್ಟಾದ ಸೆಳೆಗಲ್ಲಿನ ಬಳಕೆಯಿಂದ ದುಬಾರಿ ಎನಿಸಿಕೊಂಡಿವೆ.

  1. ಸಿಂಕ್ರೋನಸ್ ರಿಲಕ್ಟನ್ಸ್ ಮೋಟಾರ್ಸ್ (Synchronous Reluctance Motors):

ಇವುಗಳಲ್ಲೂ ರೋಟಾರ್‌ಗೆ ಯಾವುದೇ ಸೆಳೆಗಲ್ಲಾಗಲಿ ಇಲ್ಲವೇ ತಂತಿಸುರುಳಿಗಳನ್ನು ಬಳಸುವುದಿಲ್ಲ. ಇವುಗಳನ್ನು ಹಿಡಿತದಲ್ಲಿಡುವ ಬಗೆಯು PMSM ಬಗೆಯ ಓಡುಗೆಗಳಂತೆ ಇರಲಿವೆ. ಈ ಓಡುಗೆಗಳ ಕಸುವಿನ ದಟ್ಟಣೆ ಮತ್ತು ದಕ್ಷತೆಯೂ ಹೆಚ್ಚಾಗಿದೆ. ಬೆಲೆಯಲ್ಲಿ PMSM ಓಡುಗೆಗಳಿಗಿಂತ ಅಗ್ಗ ಮತ್ತು ಇಂಡಕ್ಷನ್ ಓಡುಗೆಗಳಿಗಿಂತ ತುಸು ಹೆಚ್ಚು. ಇವುಗಳನ್ನು ಕೈಗಾರಿಕೆಯಲ್ಲಿ ಮತ್ತು ವೋಲ್ವೋ ಟ್ರಕ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಗಾಡಿಯ ಟ್ರಾನ್ಸ್‌ಮಿಶನ್ ಬಳಕೆ ಕೈಪಿಡಿ

ಜಯತೀರ್ಥ ನಾಡಗೌಡ

ಗಾಡಿಗಳೆಂದರೆ ಯಾರಿಗೆ ಇಷ್ಟವಿಲ್ಲ, ಪುಟ್ಟ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರು ತಮ್ಮ ಬಳಿಯೂ ಗಾಡಿಯೊಂದನ್ನು ಹೊಂದ ಬಯಸುತ್ತಾರೆ. ಬೆಳೆಯುತ್ತಿರುವ ನಮ್ಮ ನಾಡಿನಲ್ಲಿ ಗಾಡಿ ಕೊಳ್ಳುಗರಿಗೂ ಬರವಿಲ್ಲ. ಅದಕ್ಕೆ ಪ್ರತಿ ತಿಂಗಳು ಹಲವಾರು ಹೊಸ ಗಾಡಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ.

ಗಾಡಿ ಓಡಿಸುವಿಕೆಯ ವಿಷಯಕ್ಕೆ ಬಂದರೆ ಬಿಡಿಭಾಗ, ಚಳಕ ಮತ್ತು ಅರಿಮೆ ಎಲ್ಲವೂ ಒಂದೇ ತೆರನಾಗಿದ್ದರೂ ಗಾಡಿ ಓಡಿಸುವ ಬಗೆ ಒಬ್ಬೊಬ್ಬರದು ಒಂದೊಂದು ರೀತಿ. ಅಗ್ಗದ ಬೆಲೆಯ ಇಂದಿನ ಹೆಚ್ಚಿನ ಪಾಲು ಗಾಡಿಗಳಲ್ಲಿ ಓಡಿಸುಗನಿಡಿತದ ಸಾಗಣಿ (Manual Transmission) ಕಂಡುಬರುತ್ತವೆ. ಓಡಿಸುಗನಿಡಿತದ ಸಾಗಣಿ ಬಳಸುವ ಓಡಿಸುಗರು ಎಷ್ಟೋ ಸಲ ಕಾರು ಸರಿಯಾಗಿ ಓಡಿಸದೇ ಇಲ್ಲವೇ ಅರೆ ತಿಳುವಳಿಕೆಯಿಂದ ತಮ್ಮ ಗಾಡಿಯ ಬಾಳಿಕೆ ಕಡಿಮೆಯಾಗುವಂತೆ ಮಾಡಿರುತ್ತಾರೆ ಇಲ್ಲವೇ ನೆರವುತಾಣಗಳಿಗೆ ಭೇಟಿಕೊಟ್ಟು ಬಿಡಿಭಾಗ ಬದಲಾಯಿಸಿ ಹೆಚ್ಚು ಹಣ ವೆಚ್ಚ ಮಾಡುತ್ತಾರೆ. ಇದನ್ನು ಕಡಿತಗೊಳಿಸಲು ಓಡಿಸುಗನಿಡಿತದ ಸಾಗಣಿ ಹೊಂದಿರುವ ಗಾಡಿಯೊಡಿಸುವ ಒಳ್ಳೆಯ ರೂಢಿಗಳನ್ನು ಮೈಗೂಡಿಸಿಕೊಂಡರೆ ಗಾಡಿಯ ಬಾಳಿಕೆಯೂ ಹೆಚ್ಚುತ್ತದೆ ಹಣದ ದುಂದುವೆಚ್ಚವೂ ಆಗದು. ಅಂತ ಕೆಲವು ಒಳ್ಳೆಯ ರೂಢಿಗಳನ್ನು ಈ ಕೆಳಗೆ ನೀಡಲಾಗಿದೆ. ಇವನ್ನು ಅಳವಡಿಸಿಕೊಂಡರೆ ಕಾರಿನ ಸಾಗಣಿಯ ಬಾಳಿಕೆ ಹೆಚ್ಚುವುದು ದಿಟ.

  1.       ಯಾವಾಗಲೂ ಹಲ್ಲುಗಾಲಿಯ ಗುಣಿಯ (Gear lever) ಮೇಲೆ ಕೈ ಇರಿಸುವುದು ಬೇಡ:
    ಹೆಚ್ಚಾಗಿ ಓಡಿಸುಗನಿಡಿತದ ಸಾಗಣಿ ಬಳಸುವ ನಮ್ಮಲ್ಲಿ ಹಲವರಿಗೆ ಹಲ್ಲುಗಾಲಿ ಗುಣಿಯ ಮೇಲೆ ಕೈ ಇರಿಸಿ ಗಾಡಿ ಓಡಿಸುವ ರೂಢಿ. ಇಂದಿನ ಒಯ್ಯಾಟದ ದಟ್ಟಣೆಯಿಂದ ಪದೇ ಪದೇ ಹಲ್ಲುಗಾಲಿಯ ಬದಲಾಯಿಸಿ ವೇಗ ಹೆಚ್ಚು ಕಡಿಮೆ ಮಾಡಬೇಕಿರುವುದರಿಂದ ಕೆಲವರಿಗೆ ಈ ಗುಣಿಯ ಮೇಲೆ ಯಾವಾಗಲೂ ಕೈ ಇಟ್ಟುಕೊಂಡೇ ಸಾಗುವುದು ಅಭ್ಯಾಸವಾಗಿರುತ್ತದೆ. ಆದರೆ ಇದರಿಂದ ಒಳ್ಳೆಯದಕ್ಕಿಂತ ಕೆಡುಕೇ ಹೆಚ್ಚು. ಯಾಕೆಂದರೆ ಮೊದಲನೇಯದಾಗಿ ನೀವು ಎಡಗೈಯನ್ನು ಹಲ್ಲುಗಾಲಿಯ ಗುಣಿಯ ಮೇಲಿಟ್ಟು ಗಾಡಿಯ ತಿಗುರಿಯ (Steering) ಮೇಲೆ ಬಲಗೈ ಒಂದನ್ನೇ ಬಳಸುತ್ತಿರುತ್ತಿರಿ. ಆಗ ತಿಗುರಿಯ ಮೇಲಿನ ನಿಮ್ಮ ಹಿಡಿತ ಕಡಿಮೆಯಾಗುತ್ತದೆ. ಎರಡನೇಯದಾಗಿ ಯಾವಾಗಲೂ ಹಲ್ಲುಗಾಲಿಯ ಗುಣಿಯ ಮೇಲೆ ಕೈ ಇಟ್ಟುಕೊಂಡಿರುವುದರಿಂದ ಇದರ ಬಿಡಿಭಾಗಗಳು ಬೇಗನೇ ಸವೆದು ತಾಳಿಕೆ ಕಡಿಮೆಯಾಗುತ್ತದೆ. ಆದ್ದರಿಂದ ಹಲ್ಲುಗಾಲಿಯ ಗುಣಿಯನ್ನು ಅಗತ್ಯವಿದ್ದಾಗ(ಗೀಯರ್ ಬದಲಾಯಿಸಲು ಮಾತ್ರ) ಬಳಸಿ.
  2.   ಟ್ರಾಫಿಕ್ ಸಿಗ್ನಲ್‌ಗಳ ಮುಂದೆ ಕಾರನ್ನು ಗೇಯರ್‌ನಲ್ಲೇ ತಡೆಯದಿರಿ:
    ನಮ್ಮಲ್ಲಿ ಹಲವರು ಟ್ರಾಫಿಕ್ ಸಿಗ್ನಲ್‌ಗಳ ಗಾಡಿಯನ್ನು ಗೇಯರ್‌ಗಳಲ್ಲೇ ಬಿಟ್ಟು ಬೇರ್ಪಡಕ (Clutch) ಮತ್ತು ತಡೆತವನ್ನು (Brake) ತುಳಿದು ಕಾರು ಮುಂದೆ ಸಾಗದಂತೆ ನಿಲ್ಲಿಸಿರುವುದನ್ನು ನೋಡಿರಬಹುದು. ಟ್ರಾಫಿಕ್ ದೀಪಗಳ ಮುಂದೆ ಹೆಚ್ಚು ಹೊತ್ತು ನಿಲ್ಲಬೇಕಾಗಿ ಬಂದರೆ ಗಾಡಿಯನ್ನು ಪೂರ್ಣವಾಗಿ ಆರಿಸಿ ನ್ಯೂಟ್ರಲ್‌ಗೆ ತರಬೇಕು, ಕೈ ತಡೆತ (Hand Brake) ಬಳಸಿ ಗಾಡಿಯನ್ನು ಮುನ್ನುಗ್ಗದಂತೆ ತಡೆದು ನಿಲ್ಲಿಸಬಹುದು. ಇಲ್ಲದೇ ಹೋದಲ್ಲಿ ಬೇರ್ಪಡಕದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಬೇರ್ಪಡಕವೂ ಹೆಚ್ಚು ಸವೆತಕ್ಕೆ ಒಳಗಾಗುತ್ತದೆ. ಅಲ್ಲದೇ ಮೇಲಿಂದ ಮೇಲೆ ನೀವು ನೆರವುತಾಣಗಳಿಗೆ (Service Center) ತೆರಳಿ ಬೇರ್ಪಡಕ ಸರಿಯಾಗಿರುವಂತೆ ನೋಡಿಕೊಳ್ಳಲು ಹೆಚ್ಚು ಹಣ ಪೋಲು ಮಾಡಬೇಕು.
  3. ಏರಿಕೆಯಲ್ಲಿ ಸಾಗುವಾಗ ಕೈ ತಡೆತ ಬಳಸಿ ಗಾಡಿ ಜಾರದಂತೆ ತಡೆಯಿರಿ:
    ಗಾಡಿಯನ್ನು ಹೊತ್ತು ನಾವು ಏರು-ಇಳಿಜಾರು ತಾಣಗಳಲ್ಲಿ ಸಾಗುವುದು ಸಾಮಾನ್ಯ ಇದಕ್ಕೆ ಗುಡ್ಡಗಾಡು ಜಾಗಗಳೇ ಆಗಿರಬೇಕಿಲ್ಲ. ಏರಿಕೆಯಲ್ಲಿ ಮುಂದೆ ಸಾಗಲು ಗಾಡಿಗೆ ಹೆಚ್ಚಿನ ಬಲ ಬೇಕಾಗುತ್ತದೆ ಆ ಹಂತದಲ್ಲಿ ಗಾಡಿಗೆ ಬೇಕಾದ ಬಲ ಸಿಗದೇ ಇದ್ದಲ್ಲಿ ಅದು ಹಿಂದೆ ಜಾರುವುದು ಸಹಜ ಆಗ ಸಾಕಷ್ಟು ಓಡಿಸುಗರು ದಿಢೀರ್‌ನೆ ಬೇರ್ಪಡಕವನ್ನು ತುಳಿದು ಹಿಂದೆ ಜಾರದಂತೆ ತಡೆಯುತ್ತಾರೆ. ಇದರಿಂದ ಬೇರ್ಪಡಕದ ತುಳಿಗೆ ಹೆಚ್ಚು ಸವೆತಕ್ಕೆ ಒಳಗಾಗುತ್ತದೆ. ಇಂತ ಸಂದರ್ಭ ಬಂದೊದಗಿದಾಗ ಅಂದರೆ ಏರಿಕೆಗಳಲ್ಲಿ ಗಾಡಿಯನ್ನು ತಡೆಯಬೇಕಾಗಿ ಬಂದರೆ ಬೇರ್ಪಡಕದ ಬದಲು ಕೈ ತಡೆತವನ್ನು ಬಳಸುವುದು ಒಳ್ಳೆಯದು. ಗಾಡಿಯನ್ನು ಮುಂದೆ ಸಾಗಿಸಬೇಕೆಂದಾಗ ಮೆಲ್ಲಗೆ ಎಕ್ಸಲ್‌ರೇಟರ್(Accelerator) ತುಳಿಯುತ್ತ, ಬೇರ್ಪಡಕದ ತುಳಿಗೆಯನ್ನು ಬಿಡುತ್ತ ಕೈ ತಡೆತ ಹಿಂತೆಗೆಯಬಹುದು.
  1. ಗಾಡಿಯ ಓಡಿಸುವಾಗ ಸುಮ್ಮನೇ ಬೇರ್ಪಡಕದ ತುಳಿಗೆ ಮೇಲೆ ಕಾಲಿಡುವುದು:
    ಇದೊಂದು ಕೆಟ್ಟ ಅಭ್ಯಾಸವೆನ್ನಬಹುದು. ಕೆಲವು ಗಾಡಿ ಓಡಿಸುಗರಿಗೆ ಗಾಡಿಯನ್ನು ಓಡಿಸಿಕೊಂಡು ಸಾಗುವಾಗಲು ಬೇರ್ಪಡಕದ ತುಳಿಗೆ (Clutch Pedal) ಮೇಲೆ ಎಡಗಾಲನ್ನು ಕಾಲಿಟ್ಟುಕೊಂಡೇ ಹೋಗುವ ಅಭ್ಯಾಸವಾಗಿರುತ್ತದೆ. ಇದರ ಅಗತ್ಯವೇ ಇಲ್ಲ. ಇಂತ ಓಡಿಸುಗರಿಗೆ, ಕೆಲವು ಗಾಡಿಗಳಲ್ಲಿ ಕಾಲಿಡಲು ಬೇರೆಯದೇ ಒಂದು ತುಳಿಗೆ ನೀಡಲಾಗಿರುತ್ತದೆ ಇದನ್ನು ಡೆಡ್ ಪೆಡಲ್ (Dead Pedal) ಎನ್ನುವರು. ಬೇರ್ಪಡಕದ ತುಳಿಗೆಯ ಬದಲು ಡೆಡ್ ಪೆಡಲ್ ಮೇಲೆ ಕಾಲಿಟ್ಟು ಜುಮ್ಮನೆ ಓಡಾಡಲು ಇದು ನೆರವಾಗುತ್ತದೆ. ಈ ರೀತಿಯ ಓಡಿಸುಗರು, ತಮ್ಮ ಗಾಡಿಯಲ್ಲಿ ಈ ಡೆಡ್-ಪೆಡಲ್ ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ಬೇರ್ಪಡಕದ ತುಳಿಗೆ ಮೇಲೆ ಕಾಲಿಡದೇ ಗಾಡಿ ಓಡಿಸುವುದನ್ನು ರೂಢಿಸಿಕೊಳ್ಳಬೇಕು.
  1.     ಹೆಚ್ಚು ಕಸುವು ಪಡೆಯಲು ಹೆಚ್ಚಿನ ವೇಗದ ಹಲ್ಲುಗಾಲಿಗೆ ಹೋಗುವುದು ಬೇಕಿಲ್ಲ:
    ಎತ್ತುಗೆಗೆ 5-ವೇಗದ ಓಡಿಸುಗನಿಡಿತದ ಸಾಗಣಿ(5-speed manual transmission) ಅಳವಡಿಸಲಾಗಿರುವ ಕಾರೊಂದು ಇದೆ ಎಂದುಕೊಳ್ಳಿ. ಸರಿಯಾದ ತಿಳುವಳಿಕೆಯಿಲ್ಲದ ಓಡಿಸುಗನೊಬ್ಬ ಹೆಚ್ಚು ಕಸುವು ಮತ್ತು ತಿರುಗುಬಲ ಪಡೆಯಲು ಗಾಡಿಯ ಸಾಗಣಿಯನ್ನು ಕೊನೆಯ ಅಂದರೆ 5-ನೇ ವೇಗದ ಹಲ್ಲುಗಾಲಿಗೆ ಬದಲಾಯಿಸಿ ಎಕ್ಸಲ್‌ರೇಟರ್(Accelerator)  ಪೂರ್ತಿಯಾಗಿ ತುಳಿದು ಕಾರನ್ನು ಓಡಿಸುತ್ತಿರುತ್ತಾನೆ. ಆದರೆ ಇದು ತಪ್ಪು. ಬಿಣಿಗೆಯಿಂದ ಹೆಚ್ಚು ಕಸುವು ಮತ್ತು ತಿರುಗುಬಲ ಪಡೆಯಲು ಓಡಿಸುಗ ಕೊನೆಯ ವೇಗದ ಹಲ್ಲುಗಾಲಿಗೆ ಬದಲಾಯಿಸಿಕೊಳ್ಳಬೇಕೆಂದೇನು ಇಲ್ಲ. ಸಾಗಣಿಯನ್ನು 4ನೇ ಇಲ್ಲವೇ 3ನೇ ವೇಗದ ಹಲ್ಲುಗಾಲಿಗೆ ಬದಲಾಯಿಸಿಕೊಂಡಾಗ ನಿಮಗೆ ಹೆಚ್ಚಿನ ಕಸುವು ಮತ್ತು ತಿರುಗುಬಲ ಸಿಗುವ ಸಾಧ್ಯತೆ ಇರುತ್ತದೆ. ಇದು ಬಹುತೇಕ ಬಿಣಿಗೆಗಳ ಗುಣವಾಗಿರುವುದರಿಂದ ಕೊನೆಯ ಹಲ್ಲುಗಾಲಿಗೆ ಸಾಗಣಿ ಬದಲಾಯಿಸಿಕೊಂಡರೆ ಹೆಚ್ಚು ಕಸುವು ಪಡೆಯಲಾಗದು.  ಗಾಡಿಯನ್ನು ರಸ್ತೆ, ವೇಗ ಮತ್ತು ಸಾರಿಗೆ ಮಿತಿಗಳಿಗೆ ತಕ್ಕಂತೆ ಗೀಯರ್ ಬದಲಾಯಿಸಿ ಓಡಿಸಿಕೊಂಡು ಹೋದರೆ, ಯಾವುದೇ ಗಾಡಿಯ ಸಾಗಣಿ ಬಹುಕಾಲ ಬಾಳಿಕೆ ಬರುವುದು.

 

ಮಾಹಿತಿ ಮತ್ತು ತಿಟ್ಟ ಸೆಲೆ:

www.cartoq.com

aftonchemical.com

ಈ ಗಾಲಿ ಅಂತಿಂತದ್ದಲ್ಲ

ಜಯತೀರ್ಥ ನಾಡಗೌಡ

ಗಾಲಿಯ ಅರಕೆ ಮನುಷ್ಯರ ಪ್ರಮುಖ ಅರಕೆಗಳಲ್ಲೊಂದು. ಇದರಿಂದ ನಾಗರೀಕತೆ ಬೆಳವಣಿಗೆ ಕಂಡು ಇಂದು ಈ ಮೊಬೈಲ್ ಯುಗದ ಹಂತಕ್ಕೆ ಬಂದು ತಲುಪಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಾಲಿಯಿಂದ ನಿಧಾನವಾಗಿ ಎತ್ತಿನಬಂಡಿ, ಕುದುರೆ ಜಟಕಾಬಂಡಿ ಕೊನೆಗೆ ರೈಲು,ಕಾರು,ಬಸ್ಸಿನ ಸಾರಿಗೆಗಳು ಕಂಡುಹಿಡಿಯಲ್ಪಟ್ಟು ನಮ್ಮ ಬದುಕಿನಲ್ಲಿ ಪಯಣವನ್ನು ಸುಲಭಗೊಳಿಸಿವೆ.

 ಟೆಸ್ಲಾ ಮೋಟರ‍್ಸ್ ನ ಕೊಳವೆ ಸಾರಿಗೆ, ಕೊರಿಯಾದ ಮಡಚಿಡುವ ಕಾರುಗಳು, ನೇಸರ ಕಸುವಿನ ದೊಡ್ಡ ಬಾನೋಡಗಳು ದಿನೇ ದಿನೇ ಈ ರೀತಿ ಹೊಸದೊಂದು ಚಳಕಗಳು(technologies) ಮೂಡಿಬರುತ್ತಿದ್ದರೂ ಹೊಗೆ ಇಲ್ಲದ ಸಾರಿಗೆಯ ಸೆಲೆ ಸೈಕಲ್‌ಗೆ ಬೇಡಿಕೆ ಮಾತ್ರ ಎಂದೂ ಕುಂದಿಲ್ಲ. ಇಂದು ಜಗತ್ತಿನ ಹಲವಾರು ನಾಡುಗಳಲ್ಲಿ ಸೈಕಲ್ ಬಳಕೆ ಹೆಚ್ಚುತ್ತಿದೆ. ಬಂಡಿ ದಟ್ಟಣೆ ಒಯ್ಯಾಟ ಮತ್ತು ಹೊಗೆ ಉಗುಳದ ಹಸಿರು ಸಾರಿಗೆ ಸೆಲೆ ಸೈಕಲ್ ಮಂದಿಯ ದೇಹಕ್ಕೂ ವ್ಯಾಯಾಮ ತಂದು ಕೊಟ್ಟು ಅನುಕೂಲಕರವಾಗಿದೆ. ಇದೇ ಸೈಕಲ್‌ಗಳಿಗೆ, ಜಗತ್ತಿನ ಪ್ರಮುಖ ವಿಶ್ವವಿದ್ಯಾನಿಲಯ “ಎಮ್.ಆಯ್.ಟಿ (ಮಸಾಚುಸೇಟ್ಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ)”ಯ ಇಂಜಿನೀಯರ್‌ಗಳ ತಂಡವೊಂದು “ಕೊಪನ್‌ಹೆಗನ್ ಗಾಲಿ” ಅಳವಡಿಸಿ ಸಾಕಷ್ಟು ಸುದ್ದಿ ‍ಮಾಡಿತ್ತು . ಈ ಕೊಪನ್‌ಹೆಗನ್ ಗಾಲಿಗಳ ಬಗ್ಗೆ ತಿಳಿಯುವ ಬನ್ನಿ.

ಕೊಪನ್‌ಹೆಗನ್ ಗಾಲಿಯು ವಿಶೇಷ ಗಾಲಿಯಾಗಿದ್ದು ಸೈಕಲ್ ಬಂಡಿ ಓಡಿಸುಗನ ಪೆಡಲ್ ತುಳಿಯುವ ಮತ್ತು ಬ್ರೇಕ್ ಹಾಕಿದ ಬಲವನ್ನು ಶೇಖರಿಸಿಕೊಳ್ಳುತ್ತದೆ ಅಗತ್ಯವಿದ್ದಾಗ ಈ ಬಲವನ್ನು ಮರಳಿಸಿ ಓಡಿಸುಗನ ಕೆಲಸವನ್ನು ಹಗುರಗೊಳಿಸುತ್ತದೆ. ಗಾಡಿಗಳ ಬಿಣಿಗೆಯಲ್ಲಿ ಗಾಲಿತೂಕದಂತೆ(Flywheel) ಇದು ಬಲ ಕೂಡಿಟ್ಟುಕೊಳ್ಳುತ್ತದೆ. ಇಷ್ಟೇ ಅಲ್ಲದೇ ಸೈಕಲ್ ಸಾಗುವ ದಾರಿಯ ಒಯ್ಯಾಟದ ದಟ್ಟಣೆ(Traffic congestion), ಕೆಡುಗಾಳಿಗಳು ಯಾವ ಹಂತದಲ್ಲಿವೆ ಹಾಗೂ ರಸ್ತೆಯ ಸ್ತಿತಿಗತಿಗಳ ರೀಯಲ್ ಟೈಮ್ ಮಾಹಿತಿ ನೀಡುತ್ತದಂತೆ. ನಿಮ್ಮ ಸೈಕಲ್ ಓಡಿಸುವ ರೂಢಿ ಮತ್ತು ಅನುಕೂಲಗಳಿಗೆ ತಕ್ಕುದಾಗಿ ಈ ಗಾಲಿ ಹೊಂದಿಕೊಂಡು ಕೆಲಸಮಾಡುತ್ತದೆ .ಓಡಿಸುಗ ಎಷ್ಟು ಬಲದಿಂದ ಪೆಡಲ್ ತುಳಿಯುವರು ಅದರ ಮೇಲೆ ಓಡಿಸುಗನಿಗೆ ಎಷ್ಟು ಓಡುಗೆಯ(Motor) ಕಸುವು ಬೇಕು ಎಂಬುದನ್ನ ನಿರ್ಧರಿಸಿ ಈ ಸೈಕಲ್ ಓಡಿಸಬಹುದು. ಇಳಿಜಾರಿನಲ್ಲಿ ಹೋಗುವಾಗ, ಮೇಲೇರುವಾಗ ಇದರ ಹೆಚ್ಚಿನ ಲಾಭ ಪಡೆಯಬಹುದು.

ಓಡಿಸುಗ ತನ್ನ ಸೈಕಲ್ ಬಂಡಿ ಹಿಂದಿನ ಗಾಲಿಗೆ ಕೊಪನ್‌ಹೆಗನ್ ಗಾಲಿಯನ್ನು ಜೋಡಿಸಿ ತನ್ನ ಮೊಬೈಲ್‌ನೊಂದಿಗೆ ಜೋಡಿಸಿದರಾಯಿತು. ಓಡಿಸುಗ ಸಾಗುತ್ತಿರುವ ದಾರಿಯ ವಾತಾವರಣ ಎಂತದ್ದು ಅದರಲ್ಲಿ ಕಾರ್ಬನ್ ಆಕ್ಸೈಡ್ (CO), ನೈಟ್ರೋಜನ್ ಆಕ್ಸೈಡ್ (NOX) ನಂತ ವಿಷದ ಗಾಳಿಗಳ ಮಟ್ಟವನ್ನು ಕೊಪನ್‌ಹೆಗನ್ ಗಾಲಿಯ ಮೂಲಕ ತಿಳಿಯಬಹುದಾಗಿದ್ದು ಇತರರೊಂದಿಗೆ ಹಂಚಿಕೊಳ್ಳಲೂಬಹುದು. ಕೊಪನ್‌ಹೆಗನ್ ಗಾಲಿಯನ್ನು ಈ ಎಲ್ಲವನೂ ಗಮನದಲ್ಲಿರಿಸಿ  ಮಾಡಲಾಗಿದ್ದು ನಿಮಗೆ ಯಾವುದೇ ತಂತಿ, ವಾಯರ್ ಗಳನ್ನು ಹೊರಗಡೆಯಿಂದ ಜೋಡಿಸುವ ಕಿರಿಕಿರಿ ಇಲ್ಲ.  ಮಿಂಚಿನ ಕಸುವಿನ ಸೈಕಲ್‌ಗಳಿಗಿಂತ (E-Bikes) ಈ ಗಾಲಿಯ ಕಟ್ಟಳೆ ಬೇರೆ ಮತ್ತು ತುಂಬಾ ಸರಳವಾಗಿದೆ. ಒಂದು ಪುಟಾಣಿ ಮಿಂಚುಕದ ಓಡುಗೆ(Electric Motor), ಚಿಕ್ಕ ಬ್ಯಾಟರಿ, 3-ವೇಗದ ಹಲ್ಲುಗಾಲಿ(3-Gear Transmission), ತಿರುಗುಬಲ(torque), ವಾತಾವರಣದ ತೇವ(humidity),ಬಿಸಿಲು,ಸದ್ದು ಮತ್ತು ಕೆಡುಗಾಳಿಗಳ ಮಟ್ಟ ಅಳಿಯುವ ವಿವಿಧ ಅರಿವಿಕಗಳು(sensors) ಸೇರಿ ಕೊಪನ್‌ಹೆಗನ್  ಗಾಲಿಯು ತಯಾರುಗೊಂಡಿದೆ.

ಕೊಪನ್‌ಹೆಗನ್ ಗಾಲಿಯ ಮೂಲಕವೇ ನೀವು ಸೈಕಲ್‌ಗಳಿಗೆ ಬೀಗ ಹಾಕಿ ತೆಗೆಯಲೂಬಹುದು. ಕೊಪನ್‌ಹೆಗನ್ ಗಾಲಿಯಲ್ಲಿ ಬ್ಲೂಟೂತ್‌ನ ಚಳಕವಿದ್ದು, ಬ್ಲೂಟೂತ್ ಮೂಲಕವೇ ನಿಮ್ಮ ಮೊಬೈಲ್‌ನೊಂದಿಗೆ ಇದು ಮಾಹಿತಿಯನ್ನು ನೀಡುತ್ತಿರುತ್ತದೆ. ನೀವು ಓಡಾಡುತ್ತಿರುವ ದಾರಿಯ ಟ್ರಾಫಿಕ್ ವಿವರಗಳನ್ನು ನೇರವಾಗಿ ಗೆಳೆಯರು, ಬಂಧುಗಳೊಂದಿಗೆ ಇಲ್ಲವೇ ಒಯ್ಯಾಟವನ್ನು ಹಿಡಿತದಲ್ಲಿಡಲು ಕೆಲಸಮಾಡುವ ಪೋಲಿಸ್‌ರಿಗೂ ಕಳಿಸಿ ಇತರರಿಗೂ ನೆರವಾಗಬಹುದು.

ಕೊಪನ್‌ಹೆಗನ್  ಗಾಲಿ ಬಳಸಲು ಹೊಸ ಸೈಕಲ್ ಕೊಳ್ಳುವ ಅಗತ್ಯವಿಲ್ಲ. ನಿಮ್ಮ ಬಳಿಯಿರುವ ಸೈಕಲ್ಲಿಗೆ ಕೊಪನ್‌ಹೆಗನ್ ಗಾಲಿ ಜೋಡಿಸಿ  ಹ್ಯಾಂಡಲ್ ಸರಳಿಗೆ ಮೊಬೈಲ್ ಸಿಕ್ಕಿಸಿ ಜುಮ್ಮನೆ ಸಾಗಬಹುದು. ಕೊಪನ್‌ಹೆಗನ್ ಊರಿನ ಮೇಯರ್(ಊರಾಳ್ವಿಗ) ಒಬ್ಬರು ಈ ಹಮ್ಮುಗೆಗೆ ಬೆಂಬಲ ನೀಡಿದ್ದರ ಸಲುವಾಗಿ ಇದಕ್ಕೆ ಕೊಪನ್‌ಹೆಗನ್ ಗಾಲಿ ಎಂಬ ಹೆಸರು ಬಂದಿರಬಹುದು. ಇಷ್ಟೆಲ್ಲ ಅನುಕೂಲವಾಗಿರುವ ಕೊಪನ್‌ಹೆಗನ್ ಗಾಲಿಯ ಸೈಕಲ್ಗಳು ರಸ್ತೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿಲ್ಲವೆಂಬುದು ಅಚ್ಚರಿ ಮೂಡಿಸಿದ ಸಂಗತಿ. ಇವುಗಳು ನಮ್ಮ ನಾಡುಗಳಲ್ಲಿ ಮಾರಾಟಕ್ಕೆ ಬಿಡುಗಡೆಗೊಂಡರೆ ಈಗಿರುವ ಒಯ್ಯಾಟ ಕಡಿಮೆಗೊಂಡರೆ ಅಚ್ಚರಿಪಡಬೇಕಿಲ್ಲ.  

 

ಮಾಹಿತಿ ಮತ್ತು ತಿಟ್ಟ ಸೆಲೆ:

http://electricbikereview.com

http://senseable.mit.edu

 

 

ಇವಿ ಮೋಟಾರ್‌ಗಳ ಜಗತ್ತು (ಭಾಗ-೧)

ಜಯತೀರ್ಥ ನಾಡಗೌಡ

ಇಲೆಕ್ಟ್ರಿಕ್ ಗಾಡಿಗಳಲ್ಲಿ ಬಳಸಲಾಗುವ ಬ್ಯಾಟರಿಗಳ ಬಗ್ಗೆ ಕಳೆದ ಬರಹದಲ್ಲಿ ತಿಳಿಸಿದ್ದೆ. ಇದೀಗ ಇವಿಗಳಲ್ಲಿ ಬಳಸುವ ಬಗೆಬಗೆಯ ಮೋಟಾರ್ಸ್‌ಗಳ ಬಗ್ಗೆ ತಿಳಿಯೋಣ. ಇವಿಗಳಲ್ಲಿ ಬಳಸುವ ಓಡುಗೆಗಳಲ್ಲಿ(Motor) ಹಲವು ಬಗೆಗಳು ಇವೆ. ಬಂಡಿಯ ಅಗತ್ಯತೆ, ಬಳಕೆ, ಬೆಲೆ, ಕಸುವಿಗೆ ತಕ್ಕಂತೆ,  ಇವುಗಳ ಆಯ್ಕೆ ಮಾಡಲಾಗುತ್ತದೆ.

  1. ಪಿಎಮ್‌ಎಸ್‌ಎಮ್ ಓಡುಗೆ (PMSM Motor)

ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ , ‍ಹೆಸರೇ ಹೇಳುವಂತೆ  ಇವುಗಳಲ್ಲಿ ಪರ್ಮನೆಂಟ್ ಮ್ಯಾಗ್ನೆಟ್ ಬಳಕೆ ಮಾಡುತ್ತಾರೆ. ಯಾವುದೇ ಎಲೆಕ್ಟ್ರಿಕ್ ಮೋಟಾರ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಬಿಡಿಭಾಗಗಳೆಂದರೆ, ತಿರುಗೋಲು/ ರೋಟಾರ್, ನಿಲ್ಕ/ಸ್ಟೇಟರ್ ಮತ್ತು ವೈಂಡಿಂಗ್ ಅಂದರೆ ಸುತ್ತುವ ತಂತಿಗಳು. ಪಿಎಮ್‌ಎಸ್‌ಎಮ್ ಓಡುಗೆಗಳಲ್ಲಿ ಸ್ಟೇಟರ್‌ಗೆ ತಾಮ್ರ ಇಲ್ಲವೇ ಅಲ್ಯುಮಿನಿಯಂ ತಂತಿಗಳನ್ನು ಸುತ್ತಲಾಗಿರುತ್ತದೆ, ಮತ್ತು ತಿರುಗೋಲಿಗೆ ಸೆಳೆಗಲ್ಲನ್ನು (Magnet) ಅಳವಡಿಸಿರುತ್ತಾರೆ. ಇದೇ ಕಾರಣಕ್ಕೆ ಇವುಗಳನ್ನು ಪರ್ಮನೆಂಟ್ ಮ್ಯಾಗ್ನೆಟ್ ಮೋಟಾರ್ಸ್ ಎನ್ನಲಾಗುತ್ತದೆ.

ಈ ತರಹದ ಓಡುಗೆಗಳು ಹೆಚ್ಚಿನ ದಕ್ಷತೆ(Efficiency) ಹೊಂದಿರುತ್ತವೆ. ಇವುಗಳಲ್ಲಿ ಕಸುವಿನ ದಟ್ಟಣೆಯೂ(Energy Density) ಹೆಚ್ಚು. ಇದೇ ಕಾರಣಕ್ಕೆ ಹೆಚ್ಚಿನ ಇವಿಗಳಲ್ಲಿ ಇವುಗಳ ಬಳಕೆಯಾಗುತ್ತವೆ. ಈ ಓಡುಗೆಗಳ ಕೆಲಸ ಮಾಡುವ ಬಗೆ ಸ್ವಲ್ಪ ಕಷ್ಟವಾಗಿರುತ್ತದೆ. ಈ ಮೋಟಾರ್‌ಗಳಿಗೆ ಹೆಚ್ಚಿನ ತಂಪಾಗಿಸುವಿಕೆಯ ಅಗತ್ಯವಿರುವುದರಿಂದ, ಇದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಲೇಬೇಕು. ಇಂತ ಮೋಟಾರ್‌ಗಳಲ್ಲಿ ಸೆಳೆಗಲ್ಲಿನ ಬಳಕೆಯಿಂದ ಇವು ದುಬಾರಿಯಾಗಿರುತ್ತವೆ.

ಬಳಕೆ: ಬಹುತೇಕ ಇಂದಿನ ಪ್ರಮುಖ ಕಾರುಗಳಾದ ಟಾಟಾ ನೆಕ್ಸಾನ್, ಟಿಯಾಗೊ, ಪಂಚ್,  ಎಮ್ಜಿ ವಿಂಡ್ಸರ್, ಕಾಮೆಟ್, ಮಹೀಂದ್ರಾ ಎಕ್ಸ್‌ಇವಿ9ಇ , ಬಿಇ6 ಮುಂತಾದವುಗಳಲ್ಲಿ ಇದೇ ತರಹದ ಪಿಎಮ್‌ಎಸ್‌ಎಮ್ ಓಡುಗೆ ಬಳಸುತ್ತಾರೆ.

  1. ಇಂಡಕ್ಷನ್ ಮೋಟಾರ್ (Induction Motor):

ಇಲ್ಲಿ ನಿಲ್ಕಕ್ಕೆ(Stator) ಎಸಿ ಕರೆಂಟ್ ನೀಡಲಾಗುತ್ತದೆ. ಇದರಲ್ಲಿರುವ ತಂತಿಗಳ ಮೂಲಕ, ಸುತ್ತುವ ಸೆಳೆಬಲ (Rotating Magnetic field) ಹುಟ್ಟುತ್ತದೆ. ಈ ಸುತ್ತುವ ಸೆಳೆಬಲದ ಮೂಲಕ ತಿರುಗೋಲಿನಲ್ಲಿ(Rotor) ಕರೆಂಟ್ ಉಂಟಾಗುತ್ತದೆ. ಇದನ್ನು Induction current ಎನ್ನುತ್ತಾರೆ.

ಇವುಗಳ ದಕ್ಷತೆ ಮಧ್ಯಮ ಮಟ್ಟದಲ್ಲಿರುತ್ತದೆ ಅಂದರೆ ಸುಮಾರು 85-90%. ಇವುಗಳ ಕಸುವಿನ ದಟ್ಟಣೆ ಪಿಎಮ್‌ಎಸ್‌ಎಮ್ ಓಡುಗೆಗಳಿಗಿಂತ ಕಡಿಮೆ ಮತ್ತು ಹೆಚ್ಚಿನ ತಂಪಾಗಿರಿಸುವಿಕೆಯ ಅಗತ್ಯವಿರುತ್ತದೆ. ಇದಲ್ಲದೇ, ಇವುಗಳು ಹೆಚ್ಚಿನ ಬಿಡಿಭಾಗಗಳು ಬಳಸುವುದರಿಂದ ತೂಕವೂ ಹೆಚ್ಚು. ಇವುಗಳಲ್ಲಿ ಸೆಳೆಗಲ್ಲಿನಂತ ದುಬಾರಿ ಲೋಹಗಳ ಅಗತ್ಯವಿರುವುದಿಲ್ಲ, ಆದಕಾರಣ ಇವುಗಳು ಅಗ್ಗ. ಇವುಗಳು ವಿವಿಧ ಬಿಸುಪಿಗೆ ಹೆಚ್ಚು ಹೊಂದಿಕೊಂಡು ಸುಲಭವಾಗಿ ಕೆಲಸ ಮಾಡಬಲ್ಲವು.

ಹಳೆಯ ಟಾಟಾ ನೆಕ್ಸಾನ್ ಮಾದರಿ, ಮಹೀಂದ್ರಾ ಈ-ವೆರಿಟೊ, ಯೂಲರ್ ಮೋಟಾರ್ಸ್ ನವರ ಸರಕು ಸಾಗಿಸುವ ಗಾಡಿಗಳಲ್ಲಿ ಈ ಮಾದರಿಯ ಮೋಟಾರ್ಸ್ ಬಳಕೆ ಹೆಚ್ಚಿದೆ.

  1. ಬ್ರಶ್‍ಲೆಸ್ ಡಿಸಿ ಮೋಟಾರ್:

ಬಿಎಲ್‌ಡಿಸಿ ಮೋಟಾರ್ಸ್  ‍ಎಂದೇ ಇವುಗಳು ಹೆಸರುವಾಸಿ. ಇವುಗಳು ಹೆಚ್ಚು ಕಡಿಮೆ ಪಿಎಮ್‌ಎಸ್‌ಎಮ್ ನಂತೆಯೇ ಕೆಲಸ ಮಾಡುತ್ತವೆ. ಆದರೆ, ಇವುಗಳಲ್ಲಿ ಕಮ್ಯೂಟೇಟರ್‌ಗಳು ಟ್ರಪೇಜಿಯಂ ಆಕಾರದಲ್ಲಿ ಜೋಡಿಸಿರುತ್ತಾರೆ. ಇವುಗಳು ಹೆಚ್ಚು ದಕ್ಷತೆ ಹೊಂದಿವೆ ಮತ್ತು ಮೋಟಾರ್‌ಗಳ ವೇಗವನ್ನು ನಿಖರವಾಗಿ ನಿಯಂತ್ರಿಸಬಲ್ಲವು. ಇವುಗಳು ಪಿಎಮ್‌ಎಸ್‌ಎಮ್ ತರಹ ಸೆಳೆಗಲ್ಲು ಹೊಂದಿರುವುದರಿಂದ ಕೊಂಚ ದುಬಾರಿ. ಇವುಗಳಿಗೂ ಓಡುಗೆಯ ಗಾತ್ರಕ್ಕೆ ತಕ್ಕಂತೆ, ಮೋಟಾರ್‌ನ ತಂಪಾಗಿಡುವ ಏರ್ಪಾಡು ಮಾಡಬೇಕು.

ಬ್ರಶ್ಡ್ ಮೋಟಾರ್ ಒಂದು ಕೆಲಸ ಮಾಡುವ ನೋಟ

ಹೆಚ್ಚಾಗಿ ಈ ತೆರನಾದ ಓಡುಗೆಗಳನ್ನು ಸ್ಕೂಟರ್, ಬೈಕ್, ರಿಕ್ಷಾ ದಂತಹ 2-3 ಗಾಲಿಗಳ ಗಾಡಿಗಳಲ್ಲಿ ಬಳಸುತ್ತಾರೆ. ಅಥರ್ 450X, ಬಜಾಜ್ ಚೇತಕ್, ಮಹೀಂದ್ರಾ ಈ-ಅಲ್ಫಾ ಆಟೋರಿಕ್ಷಾಗಳಲ್ಲಿ ಈ ಬಿಎಲ್‌ಡಿಸಿ ಮೋಟಾರ್ಸ್ ಬಳಸುತ್ತಿದ್ದಾರೆ.

ಮುಂದುವರೆಯಲಿದೆ………………………………………………………..

 

ತಿಟ್ಟ ಸೆಲೆ: components101.com  

ಇವಿ ಬ್ಯಾಟರಿಗಳ ಲೋಕದಲ್ಲೊಂದು ಇಣುಕು

ಜಯತೀರ್ಥ ನಾಡಗೌಡ

ಇಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳ ಕುರಿತಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. 4-6 ವರುಶಗಳ ಹಿಂದೆ ಇಲೆಕ್ಟ್ರಿಕ್ ಬಂಡಿಗಳೆಂದರೆ ಲಿಥಿಯಂ-ಅಯಾನ್ ಬ್ಯಾಟರಿ ಒಂದೇ ಗತಿ ಎನ್ನುವಂತಿತ್ತು. ಹಿಂದೊಮ್ಮೆ ಅರಿಮೆ ಬರಹವೊಂದರಲ್ಲಿ ತಿಳಿಸಿದಂತೆ ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲದೇ, ವಿವಿಧ ಹೊಸ ಆಯ್ಕೆಗಳು ಬಂದಿವೆ. ಇವುಗಳು ಹೇಗೆ ಇಲೆಕ್ಟ್ರಿಕ್ ಗಾಡಿಗಳಿಗೆ ಅನುಕೂಲ ಮತ್ತು ಅನಾನುಕೂಲಗಳಾಗಲಿವೆ ಎಂಬುದನ್ನು ಈ ಬರಹದಲ್ಲಿ ತಿಳಿಸಿರುವೆ.

  1.       ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಗಳು: ಇವುಗಳು ಎಲ್‌ಎಫ್‌ಪಿ(LFP) ಬ್ಯಾಟರಿಗಳೆಂದೇ ಚಿರಪರಿಚಿತ. ಈ ಬ್ಯಾಟರಿಗಳು ಅಗ್ಗವಾಗಿರುತ್ತವೆ. ಕಾರಣ, ನಿಕ್ಕೆಲ್ ಕೋಬಾಲ್ಟ್ ನಂತ ಲೋಹಗಳನ್ನು ಈ ಬ್ಯಾಟರಿಗಳು ಬಳಸುವುದಿಲ್ಲ. ಇವುಗಳು ಹೆಚ್ಚು ಸುರಕ್ಷಿತ. ಹೆಚ್ಚು ಕಾಲದ ಬಾಳಿಕೆ ಮತ್ತು ಇಂತಹ ಬ್ಯಾಟರಿಗಳನ್ನು ನೀವು ಮೇಲಿಂದ ಮೇಲೆ ಪೂರ್ತಿಯಾಗಿ 100% ವರೆಗೆ ಹುರುಪು ತುಂಬಿದರೂ ಇವುಗಳು ಸರಿಯಾಗಿ ಕೆಲಸ ಮಾಡಲಿವೆ.

ಈ ಮಾದರಿಯ ಬ್ಯಾಟರಿಗಳ ಅನಾನುಕೂಲಗಳೆಂದರೆ, ಇವುಗಳು ಗಾಡಿಗಳಿಗೆ ಹೆಚ್ಚಿನ ಹರವು(Range) ನೀಡಲಾರವು. ಕಾರಣ ಇವುಗಳಲ್ಲಿ ಕಸುವಿನ ದಟ್ಟಣೆ(Energy Density) ಕಡಿಮೆ. ಎಲ್‌ಎಫ್‌ಪಿ ಬ್ಯಾಟರಿಗಳ ತೂಕವು ಜಾಸ್ತಿ. ಕಡಿಮೆ ಬಿಸುಪಿನ/ಚಳಿಗಾಲದ ತಂಪಿನ ವಾತಾವರಣವಿರುವ ಹಿಮಾಚಲ, ಕಾಶ್ಮೀರದಂತ ಪ್ರದೇಶಗಳಲ್ಲಿ ಇವುಗಳು ಅಷ್ಟೊಂದು ತಕ್ಕುದಲ್ಲ.

ಬಳಕೆ:

ದಿನದ ಬಳಕೆಯ ಗಾಡಿಗಳಾದ ಸ್ಕೂಟರ್,ಬೈಕ್, ಆಟೋರಿಕ್ಷಾ, 3-ಗಾಲಿಗಳ ಸರಕು ಸಾಗಣೆ ಬಂಡಿಗಳಿಗೆ ಇವು ಯೋಗ್ಯ. ನಗರ ಪ್ರದೇಶಗಳಲ್ಲಿ ಸುತ್ತಾಡುವ ಟ್ಯಾಕ್ಸಿಗಳು,ಮತ್ತು ವೈಯುಕ್ತಿಕ ಕಾರುಗಳಲ್ಲಿ ಈ ಬ್ಯಾಟರಿಗಳು ಬಳಸಲ್ಪಡುತ್ತವೆ.

  1. ನಿಕ್ಕೆಲ್ ಕೋಬಾಲ್ಟ್ ಅಲ್ಯುಮಿನಿಯಮ್ ಮತ್ತು ನಿಕ್ಕೆಲ್ ಮ್ಯಾಂಗನೀಸ್ ಕೋಬಾಲ್ಟ್ ಬ್ಯಾಟರಿಗಳು: ಇವು ಹೆಚ್ಚಿನ ಕಸುವಿನ ದಟ್ಟಣೆ ಹೊಂದಿವೆ, ಹೀಗಾಗಿ ದೂರದ ಹರವು ಪಡೆದಿವೆ. ಕಡಿಮೆ ಬಿಸುಪು ಮತ್ತು ಚಳಿಯ ವಾತಾವರಣದಲ್ಲೂ ಒಳ್ಳೆಯ ಅಳವುತನ ಹೊಂದಿವೆ. ಟೆಸ್ಲಾ, ಬಿಎಮ್‌ಡಬ್ಲ್ಯೂ, ಹ್ಯುಂಡಾಯ್ ಸೇರಿದಂತೆ ಹಲವು ಕಾರು ತಯಾರಕರು ಇವುಗಳನ್ನು ಅಳವಡಿಸಕೊಂಡಿರುವುದರಿಂದ ಇಂತಹ ಬ್ಯಾಟರಿಗಳ ಬಗ್ಗೆ ಒಳ್ಳೆಯ ಅನುಭವವಿದೆ.

ಇವುಗಳ ಪ್ರಮುಖ ಅನಾನುಕೂಲಗಳು ಹೀಗಿವೆ: ಕೋಬಾಲ್ಟ್, ನಿಕ್ಕೆಲ್ ನಂತಹ ದುಬಾರಿ ಲೋಹಗಳ ಬಳಕೆಯಿಂದ ಇವುಗಳು ದುಬಾರಿ ಬ್ಯಾಟರಿಗಳಾಗಿವೆ. ಎಲ್‌ಎಫ್‌ಪಿ ಬ್ಯಾಟರಿಗಳಿಗಿಂತ ಕಡಿಮೆ ಬಾಳಿಕೆ ಹೊಂದಿವೆ. ಈ ಬ್ಯಾಟರಿಗಳು ಕೆಟ್ಟರೆ ಇಲ್ಲವೇ ಪದೇ ಪದೇ ಪೂರ್ತಿ ಹುರುಪು ತುಂಬಿದರೆ, ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚು.

ಬಳಕೆ:

– ದೂರ ಸಾಗಬಲ್ಲ ಕಾರು, ಬಸ್ಸುಗಳಂತಹ ಗಾಡಿಗಳಿಗೆ ಇವು ಸೂಕ್ತ.

– ಹೆಚ್ಚಿನ ಅಳವುತನ ಹೊಂದಿರುವ ಗಾಡಿಗಳು (ಸ್ಪೋರ್ಟ್ಸ್ ಯುಟಿಲಿಟಿ ಗಾಡಿಗಳು ಮುಂತಾದವು)

– ಚಳಿಯ ವಾತಾವರಣವಿರುವ ಪ್ರದೇಶಗಳಿಗೆ ಯೋಗ್ಯ.

  1. ಸಾಲಿಡ್ ಸ್ಟೇಟ್ ಬ್ಯಾಟರಿಗಳು: ಈ ಬ್ಯಾಟರಿಗಳು ಇತರೆ ಎಲ್ಲ ಬ್ಯಾಟರಿಗಳಿಗಿಂತ ಹೆಚ್ಚು ಕಸುವಿನ ದಟ್ಟಣೆ ಹೊಂದಿವೆ. ಇವುಗಳು ಬಳಕೆಯಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಕಡಿಮೆ. ಇವುಗಳಿಗೆ ಬೇಗ ಹುರುಪು ತುಂಬಬಹುದಾಗಿರುತ್ತದೆ. ವಾತಾವರಣದ ಏರುಪೇರುಗಳು ಇವುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲವಾದ್ದರಿಂದ ಬಿಸುಪಿನ/ತಂಪಿನ ಪ್ರದೇಶಗಳಲ್ಲಿ ಸಾಲಿಡ್ ಸ್ಟೇಟ್ ಬ್ಯಾಟರಿಗಳು ಚೆನ್ನಾಗಿ ಕೆಲಸ ಮಾಡಬಲ್ಲವು. 

ಪ್ರಮುಖ ಅನಾನುಕೂಲವೆಂದರೆ ಇವುಗಳಿನ್ನೂ ಬೆಳವಣಿಗೆಯ ಹಂತದಲ್ಲಿವೆ, ಸಾಲಿಡ್ ಸ್ಟೇಟ್ ಬ್ಯಾಟರಿ ಅಳವಡಿಸಿರುವ ಗಾಡಿಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಹಾಗಾಗಿ ಇವುಗಳ ಬಳಕೆಯ ಅನುಭವ ಇಲ್ಲ. ಬೆಳ್ಳಿಯಂತಹ ದುಬಾರಿ ಲೋಹಗಳನ್ನು ಈ ಬ್ಯಾಟರಿಗಳಲ್ಲಿ ಬಳಸುವುದರಿಂದ ಇವುಗಳು ತುಂಬಾ ದುಬಾರಿ ಹಣೆಪಟ್ಟಿ ಹೊಂದಿವೆ.. ಇವುಗಳು ಹೆಚ್ಚಿನ ಕಾಲದ ತಾಳಿಕೆ(Durability) ಮತ್ತು ಮುಂದಿನ ದಿನಗಳಲ್ಲಿ ಹೇಗೆ ಸ್ಕೇಲ್‌ಅಪ್(Scale-up) ಆಗಲಿವೆ ಎಂಬುದರ ಬಗ್ಗೆ ಖಚಿತವಾಗಿ ಮಾಹಿತಿಯಿರದಿರುವುದು.

ಬಳಕೆ:

ಹೆಚ್ಚು ದೂರದ ಸಾಗಣೆಯ ಗಾಡಿಗಳಾದ ಟ್ರಕ್‌ಗಳು, ಭಾರಿ ಅಳವುತನ (Efficiency) ಬಯಸುವ ಆಟೋಟದ ಬಳಕೆಯ ಕಾರುಗಳು, ದುಬಾರಿ ಶ್ರೀಮಂತಿಕೆಯ ಗಾಡಿಗಳಿಗೆ ಇವು ತಕ್ಕುದಾಗಿವೆ.

 ಈ ಕೆಳಗೆ ನೀಡಿರುವ ಪಟ್ಟಿಯಲ್ಲಿ ಮೇಲೆ ಚರ್ಚಿಸಿದ ಬ್ಯಾಟರಿಗಳನ್ನು ಹೋಲಿಕೆ ಮಾಡಲಾಗಿದೆ.

 

ಗಾಳಿಯಿಂದ ನೀರು

ಜಯತೀರ್ಥ ನಾಡಗೌಡ

ಮನುಕುಲಕ್ಕೆ ಕುಡಿಯುವ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ, ಕೈಗಾರಿಕೆಗಳು ಹೆಚ್ಚಾದಂತೆ, ಕಾಂಕ್ರೀಟ್ ಕಾಡಿನ ನಗರಗಳು ಬೆಳೆಯುತ್ತಿದ್ದಂತೆ ನೀರಿನ ಮೂಲಗಳನ್ನು ತಾನಾಗೇ ಮುಚ್ಚಿ, ನೀರಿಲ್ಲದಂತೆ ಮಾಡಿಕೊಂಡಿರುವುದು ನಮ್ಮ ದೇಶದ ಮಟ್ಟಕ್ಕಂತೂ ಸರಿಹೊಂದುತ್ತದೆ. ಅದರಲ್ಲೂ ನೂರಾರು ಕೆರೆಗಳಿಂದ ಕೂಡಿದ್ದ ಬೆಂಗಳೂರಿನಲ್ಲಿ ಕಾಂಕ್ರೀಟ್ ಕಾಡುಗಳು ಹೆಚ್ಚುತ್ತ ನೀರಿನ ಸೆಲೆಗಳಿಲ್ಲದಂತೆ ಮಾಡಿಕೊಂಡಿದ್ದೇವೆ. ಹೀಗಾದಾಗ ನೀರಿನ ಅಭಾವ ತಪ್ಪಿದ್ದಲ್ಲ. ಈ ಅಭಾವ ತಪ್ಪಿಸಲು, ಗಾಳಿಯಿಂದ ಕುಡಿಯುವ ನೀರು ತಯಾರಿಸುವ ಯಂತ್ರವೊಂದು ಹೊರಬಂದಿದೆ.

ಈ ಯಂತ್ರ ಕೆಲಸ ಮಾಡುವ ಬಗೆ ತಿಳಿಯೋಣ ಬನ್ನಿ. ಅತಿ ದೊಡ್ಡ ನೀರಿನ ಸೆಲೆ ನಮ್ಮ ವಾತಾವರಣ. ನಮ್ಮ ವಾತಾವರಣದ ಗಾಳಿಯಲ್ಲಿನ ತೇವಾಂಶ ಆವಿಯಾಗಿ ಮಳೆ ಬರುವುದು ಸಾಮಾನ್ಯ. ಇದೇ ಗಾಳಿಯಲ್ಲಿ ತೇವ ಕಡಿಮೆಯಿದ್ದರೂ, ಅದನ್ನು ಆವಿಯಾಗಿಸಿ ನೀರು ಪಡೆಯಬಲ್ಲವು ಈ ಯಂತ್ರಗಳು. ವಾತಾವರಣದಲ್ಲಿ ಹೈಡ್ರೋಜನ್ ಹೆಚ್ಚಾಗಿ ತುಂಬಿರುವುದರಿಂದ, ಗಾಳಿಯಲ್ಲಿ ತೇವದ ಕೊರತೆ ತುಂಬಾ ವಿರಳ. ವಾತಾವರಣದ ಬಿಸುಪಿನಿಂದ ತೇವಾಂಶದ ಪ್ರಮಾಣ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಗಾಳಿಯನ್ನು ನೀರಾಗಿಸುವ ಈ ಯಂತ್ರ, ಸುಮಾರು 70-75% ರಷ್ಟು  ತೇವಾಂಶವಿರುವ ಗಾಳಿಯನ್ನು ಬಳಸಿಕೊಂಡು, 25-32 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸುಲಭವಾಗಿ ನೀರಾಗಿ ಪರಿವರ್ತಿಸಬಲ್ಲುದು.

5 ಹಂತದಲ್ಲಿ ಗಾಳಿಯನ್ನು ನೀರಾಗಿಸುವ ಕೆಲಸ ನಡೆಯುತ್ತದೆ. ಮೊದಲು ವಾತಾವರಣದ ಗಾಳಿ ಯಂತ್ರದ ಒಳಗೆ ಸಾಗುತ್ತದೆ. ಅದು 3-ಪದರದ ಸೋಸುಕದ ಮೂಲಕ ಹಾದು, ಶುದ್ಧವಾಗುತ್ತದೆ. ಮುಂದೆ ಶುದ್ಧಗೊಂಡ ಈ ಗಾಳಿ ಇಂಗುಕದಲ್ಲಿ(Condenser) ಇಂಗಿ ನೀರಾಗುತ್ತದೆ. ಒಮ್ಮೆ ನೀರಾಗಿ ಮಾರ್ಪಟ್ಟರೆ ಈ ನೀರು ಕುಡಿಯಲು ಯೋಗ್ಯವಿರುವುದಿಲ್ಲ. ಅದಕ್ಕಾಗಿಯೇ, ಈ ನೀರು ಅಲ್ಟ್ರಾಸೋನಿಕ್ ಸೋಸುಕದ(Filter) ಮೂಲಕ ಸೋಸಲ್ಪಡುತ್ತದೆ. ಹೀಗೆ ಗಾಳಿಯನ್ನು ಬಳಸಿ ನೀರು ಪಡೆಯುವ ಯಂತ್ರ ಕೆಲಸ ಮಾಡುತ್ತದೆ. ಗಾಳಿಯಿಂದ ನೀರು ಪಡೆಯುವ ಯಂತ್ರ ಗಾಳಿಯಲ್ಲಿರುವ ತೇವಾಂಶ ಮತ್ತು ವಾತಾವರಣದ ಬಿಸುಪಿನ ಮೇಲೆ ಅವಲಂಬಿತವಾಗಿರುತ್ತವೆ. ಅಕ್ವೋ ಎಂಬ ಹೆಸರಿನ ಕಂಪನಿಯ ಪ್ರಕಾರ, 35-40% ರಷ್ಟು ಕಡಿಮೆ ತೇವಾಂಶದ ಗಾಳಿಯನ್ನು 18-45 ಡಿಗ್ರಿ ಬಿಸುಪಿನಲ್ಲೂ ಈ ಯಂತ್ರ ಕೆಲಸ ಮಾಡಿ ಚೊಕ್ಕಟವಾದ ಕುಡಿಯುವ ನೀರು ನೀಡುವ ಕ್ಷಮತೆ ಪಡೆದಿವೆಯಂತೆ. ಈ ಯಂತ್ರದಲ್ಲಿ ತಿರುಗುವ ಬಿಡಿಭಾಗಗಳು ಕಡಿಮೆಯಿರುವುದರಿಂದ ಯಂತ್ರವೂ ಹೆಚ್ಚುಕಾಲ ಬಾಳಿಕೆ ಬರಲಿದ್ದು, ಕಡಿಮೆ ನಿರ್ವಹಣಾ ವೆಚ್ಚ ತಗುಲುತ್ತದಂತೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವ ಇಂದಿನ ದಿನದಲ್ಲಿ ಇವುಗಳ ಬೇಡಿಕೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿವೆ.

 

ಬರಹ ಮತ್ತು ತಿಟ್ಟ ಸೆಲೆ:akvosphere.com

ಕಾಲ್ತುಳಿತದ ಮೂಲಕ ಕರೆಂಟ್

ಜಯತೀರ್ಥ ನಾಡಗೌಡ

ಜಪಾನೀಯರು ಮೊದಲಿನಿಂದಲೂ ಹೊಸ ಸಂಶೋಧನೆ, ತಂತ್ರಜ್ಞಾನದ ವಿಷಯಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ. ಎಷ್ಟೇ ಹಿನ್ನಡೆಯಾದರೂ ಛಲಬಿಡದ ಮಲ್ಲನಂತೆ ಮುಂದೆಬರುವುದು ಇವರ ಹುಟ್ಟುಗುಣವೇ ಎನ್ನಬಹುದು. ಜಪಾನೀಯರ ಹೊಸ ತಂತ್ರಜ್ಞಾನವೊಂದು ಇದೀಗ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ.

ಕೆಲವರು ಕಾಲಿಟ್ಟರೆ ಕೆಲಸ ಕೆಡುತ್ತದೆ, ಐರನ್ ಲೆಗ್(Iron Leg) ಎಂದೆಲ್ಲ ನಮ್ಮಲ್ಲಿ ಕೆಲವರು ಆಡಿಕೊಳ್ಳುವುದು ನೋಡಿರುತ್ತೇವೆ. ಆದರೆ ಇದೀಗ ಜಪಾನಿನಲ್ಲಿ ಎಂಥವರೇ ಕಾಲಿಟ್ಟರು ದೇಶಕ್ಕೆ ಶುಭ ಶಕುನ. ಹೌದು, ಇದು ನಿಜ. ನೀವು ದಾರಿಯಲ್ಲಿ ಹೋಗುವಾಗ ಕಾಲಿಟ್ಟರೆ ಅದು ಹೇಗೆ ಶುಭ ಎಂದೀರಾ? ಬರೀ, ನಿಮ್ಮ ನಡಿಗೆಯ ಮೂಲಕ ವಿದ್ಯುತ್ ಹುಟ್ಟುಹಾಕಬಹುದು. ಈ ರೀತಿಯ ಹೊಸ ತಂತ್ರಜ್ಞಾನವೊಂದನ್ನು ಜಪಾನನಲ್ಲಿ ಜಾರಿಗೆ ತರಲಾಗುತ್ತಿದೆ.

ನಾವು ಕಾಲಿಟ್ಟಾಗ, ಕಾಲು ನೆಲದ ಮೇಲೆ ಒತ್ತಡ ಅಂದರೆ ಸ್ಟ್ರೆಸ್(Stress) ಹಾಕುತ್ತದೆ. ಈ ಒತ್ತಡವನ್ನೇ ವಿದ್ಯುತ್ತಾಗಿ ಬದಲಾಯಿಸಬಹುದು. ಕಾಲಿನ ಒತ್ತಡ-ಮೆಕ್ಯಾನಿಕಲ್ ಸ್ಟ್ರೆಸ್ ಹಾಕಿದಾಗ ಕೆಳಗೆ ಸಾಮಾನ್ಯ ನೆಲದ ಬದಲು ಪೀಝೊಇಲೆಕ್ಟ್ರಿಕ್  ಅರಿವಿಕಗಳು(Piezoelectric Sensors) ಕೂಡಲೇ ಈ ಒತ್ತಡವನ್ನು ವಿದ್ಯುತ್ತಾಗಿ ಬದಲಾಯಿಸುತ್ತವೆ. ಪೀಝೊಇಲೆಕ್ಟ್ರಿಕ್ ವಸ್ತುಗಳು, ಸಾಮಾನ್ಯವಾಗಿ ವಸ್ತುವೊಂದರ ಮೇಲೆ ಬೀಳುವ ಒತ್ತಡ/ಬಲವನ್ನು ಬಳಸಿ ಅದನ್ನು ವಿದ್ಯುತ್ ಶಕ್ತಿಯಾಗಿ ಬದಲಾಯಿಸುವಂತವು. ಸಾಮಾನ್ಯವಾಗಿ ಮ್ಯೂಸಿಕಲ್ ಗ್ರೀಟಿಂಗ್ ಕಾರ್ಡ್ಸ್, ಮೊಬೈಲ್, ಸದ್ದು ಮಾಡುವ ಆಟಿಕೆ, ಮ್ಯೂಸಿಕಲ್ ಬಲೂನ್, ಕಾರಿನ ಬೀಗದ ಕೈ, ಮೆಡಿಕಲ್ ಸಂಬಂಧಿತ ಉಪಕರಣಗಳು, ಅಲ್ಟ್ರಾಸೋನಿಕ್ ಸದ್ದು ಹೊರಸೂಸಿ ಇಲಿ/ಹೆಗ್ಗಣ ದೂರವಿಡುವ ಉಪಕರಣಗಳು ಹೀಗೆ ಮುಂತಾದ ದಿನಬಳಕೆಯ ಸಾಮಗ್ರಿಗಳಲ್ಲಿ ಪೀಝೊಇಲೆಕ್ಟ್ರಿಕ್ ವಸ್ತುಗಳನ್ನು ಬಳಸಲಾಗುತ್ತದೆ. ಇದೇ ಚಳಕವನ್ನು ಬಳಸಿ ಕಾಲಿನ ಒತ್ತಡದ ಮೂಲಕ ವಿದ್ಯುತ್ ತಯಾರಿಸುವ ಜಪಾನಿನ ನಡೆ ಎಲ್ಲರಿಗೆ ಮೆಚ್ಚುಗೆಯಾಗಿದೆ.

 ಜನ ಓಡಾಡುವ ಹಲವು ಜಾಗಗಳಲ್ಲಿ, ಈ ಪೀಝೊಇಲೆಕ್ಟ್ರಿಕ್ ಟೈಲ್ಸ್(ನೆಲಹಾಸು)ಗಳನ್ನು ಅಳವಡಿಸಲಾಗಿದೆ. ಜನ ಹೆಜ್ಜೆಯಿಟ್ಟ ತಕ್ಷಣ ವಿದ್ಯುತ ಉತ್ಪಾದನೆಯಾಗುತ್ತಿರುತ್ತದೆ. ಪೀಝೊಇಲೆಕ್ಟ್ರಿಕ್ ವಸ್ತುಗಳು ಸಾಮಾನ್ಯವಾಗಿ ಕಿರುಮಟ್ಟದಲ್ಲಿ ವಿದ್ಯುತ್ ಉಂಟು ಮಾಡುತ್ತವೆ. ಜನ ಹೆಜ್ಜೆಯಿಟ್ಟಷ್ಟು ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚುತ್ತ ಹೋಗುತ್ತದೆ. ಜನನಿಬಿಡ ಮಾರುಕಟ್ಟೆ, ರೈಲು ನಿಲ್ದಾಣ, ಬಾನೋಡ ನಿಲ್ದಾಣ, ಮಾಲ್‌ಗಳಲ್ಲಿ ಈ ತೆರನಾದ ನೆಲಹಾಸುಗಳನ್ನು ಜಪಾನನಲ್ಲಿ ಅಳವಡಿಸಲಾಗಿದೆ. ಈ ಪೀಝೊಇಲೆಕ್ಟ್ರಿಕ್ ನೆಲದ ಹಾಸುಗಳಿಗೆ ಜೋಡಿಸಿರುವ ವಿದ್ಯುತ್ ಕೂಡಿಡುವ ಉಪಕರಣದ ಮೂಲಕ ವಿದ್ಯುತ್ತನ್ನು ಕೂಡಿಟ್ಟುಕೊಳ್ಳಬಹುದು. ಇದೇ ವಿದ್ಯುತ್ ಬಳಸಿ, ಜಪಾನನಲ್ಲಿ ಬೀದಿ ದೀಪಗಳು, ಟ್ರಾಫಿಕ್ ದೀಪಗಳು, ಮುಂತಾದ ದೈನಂದಿನ ಅಗತ್ಯತೆಗೆ ಬಳಸಿಕೊಳ್ಳಲಾಗುತ್ತಿದೆ. ಈ ರೀತಿ ಮಾಡುವುದರಿಂದ ಜಪಾನ್ ಅಳಿದುಹೋಗುವ ಮೂಲಗಳನ್ನು ಬಳಸದೇ ವಿದ್ಯುತ್ ಪಡೆಯುವ ಕೆಲಸಮಾಡುತ್ತಿದೆಯಲ್ಲದೇ, ಜಾಗತಿಕ ಬಿಸುಪು ಹೆಚ್ಚಳವಾಗುವುದನ್ನು ತಡೆಯುವುದರಲ್ಲಿ ತನ್ನದೇ ಕಾಣಿಕೆ ನೀಡುತ್ತಿದೆ.

ಯಾವುದೇ ತಂತ್ರಜ್ಞಾನ ಅನುಕೂಲಗಳೊಂದಿಗೆ ಅನಾನುಕೂಲಗಳನ್ನು ಹೊತ್ತು ತರುತ್ತದೆ. ಮುಂಚೆ ಹೇಳಿದಂತೆ ಪೀಝೊಇಲೆಕ್ಟ್ರಿಕ್‌ಗಳು ಕಿರುಮಟ್ಟದ ವಿದ್ಯುತ್ ಮಾತ್ರ ಉಂಟುಮಾಡಬಲ್ಲವು. ಇವುಗಳ ಅಳವಡಿಕೆಗೆ ಹೂಡಿಕೆಯ ವೆಚ್ಚವೂ ಹೆಚ್ಚಿನ ಮಟ್ಟದಲ್ಲಿದೆ. ಈ ಎರಡು ಪ್ರಮುಖ ಅನಾನುಕೂಲಗಳನ್ನು ಬಿಟ್ಟರೆ , ಈ ಹೊಸ ಚಳಕ ನಿಜಕ್ಕೂ ಅನುಕೂಲಕರವಾಗಿದೆ. ಕಡಿಮೆ ಪ್ರಮಾಣದ ವಿದ್ಯುತ್ ಮಾಡುವ ಪೀಝೊಇಲೆಕ್ಟ್ರಿಕ್ ನೆಲದಹಾಸುಗಳಿಂದ ಯಾವುದೇ ಶಾಕ್ ಹೊಡೆಯುವ ಭಯವೂ ಇಲ್ಲ. ಅಳವಡಿಕೆಯ ವೆಚ್ಚ ತಗ್ಗಿಸಲು, ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ, ರೈಲು ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಇದನ್ನು ಬಳಸುತ್ತ ಸಾಗಿದರೆ ಇದು “ಸ್ಕೇಲಿಂಗ್” ಆಗಿ ವೆಚ್ಚ ತಗ್ಗಿಸಬಹುದು. ಬೇರೆ ದೇಶಗಳು ಇದನ್ನು ಅಳವಡಿಸಿ, ಜಾಗತಿಕ ಬಿಸುಪು ಹೆಚ್ಚಳ ತಡೆಯಬಹುದು.

 

ತಿಟ್ಟ ಸೆಲೆ: piezo.com

 

ಇಲೆಕ್ಟ್ರಿಕ್ ಗಾಡಿಗಳನ್ನು ಹೀಗೆ ಕಾಪಾಡಿ

ಜಯತೀರ್ಥ ನಾಡಗೌಡ

ಇಲೆಕ್ಟ್ರಿಕ್ ವಾಹನಗಳ ಸಂಖ್ಯೆ ಇತ್ತಿಚೀನ ದಿನಗಳಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. 2023ಕ್ಕೆ ಹೋಲಿಸಿದರೆ 2024ರಲ್ಲಿ ಇಲೆಕ್ಟ್ರಿಕ್ ಇಗ್ಗಾಲಿ ಗಾಡಿಗಳ(2Wheelers) ಸಂಖ್ಯೆ ಸುಮಾರು 33% ರಷ್ಟು ಹೆಚ್ಚಿವೆ. ಗಾಡಿಗಳ ಸಂಖ್ಯೆ ಹೆಚ್ಚಿದಂತೆ ಅವುಗಳ ಬಾಳಿಕೆ ಹೆಚ್ಚುವಂತೆ ನೋಡಿಕೊಳ್ಳುವುದು ಅಗತ್ಯ. ಪೆಟ್ರೋಲ್/ಡೀಸೆಲ್ ಗಾಡಿಗಳ ಹೋಲಿಕೆಯಲ್ಲಿ ಇಲೆಕ್ಟ್ರಿಕ್ ಗಾಡಿಗಳು ಬ್ಯಾಟರಿ ಗೂಡು(Battery Pack), ಇಲೆಕ್ಟ್ರಿಕ್ ಮೋಟಾರ್ ನಂತಹ ಬೇರೆ ಹಾಗೂ ಕಡಿಮೆ ಮೆಕ್ಯಾನಿಕಲ್ ಬಿಡಿಭಾಗ‍ಗಳನ್ನು ಹೊಂದಿರುತ್ತವೆ. ಹಾಗಾಗಿ ಇವುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತಾಗಿ ಈ ಬರಹ.

 

  • ಮೊದಲನೇಯದಾಗಿ ಬ್ಯಾಟರಿ:

ಬ್ಯಾಟರಿ ಅಂದರೆ ಮಿಂಕಟ್ಟು, ಇದರ ಆರೋಗ್ಯ ಬಲುಮುಖ್ಯ. ಸಾಮಾನ್ಯವಾಗಿ ಬ್ಯಾಟರಿಗಳು ಹಲವು ದಿನಗಳವರೆಗೆ ಬಳಸದೇ ಹಾಗೇ ಬಿಟ್ಟರೆ ತಮ್ಮ ಹುರುಪು(Charge) ಕಳೆದುಕೊಳ್ಳುತ್ತಾ ಹೋಗುತ್ತವೆ. ಬ್ಯಾಟರಿಗಳು ಹೆಚ್ಚಿನ ಬಿಸಿಲಿಗೊಡ್ಡಿಕೊಂಡಾಗಲೂ ಬೇಗನೆ ಹುರುಪು ಕಳೆದುಕೊಳ್ಳುತ್ತವೆ. ಒಮ್ಮೆ ಪೂರ್ತಿಯಾಗಿ ಹುರುಪು ತುಂಬಿ, ಬ್ಯಾಟರಿ ಹುರುಪು ಕಳೆದುಕೊಳ್ಳುವವರೆಗೆ ಅದನ್ನು ಒಂದು “ಚಾರ್ಜಿಂಗ್ ಸೈಕಲ್” ಎನ್ನುತ್ತಾರೆ. ಮಿಂಕಟ್ಟುಗಳು ಪದೇ ಪದೇ ಈ ರೀತಿಯ ಸುತ್ತಿಗೆ(Cycle) ಒಳಪಡುತ್ತಿರುತ್ತವೆ. ಇದೆಲ್ಲವೂ ಬ್ಯಾಟರಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದೆಲ್ಲರಿಂದ ಕಾಪಾಡಲು, ನಿಮ್ಮ ಗಾಡಿಗಳನ್ನು ಆದಷ್ಟು ನೆರಳಿರುವ ಜಾಗಗಳಲ್ಲೇ ನಿಲ್ಲಿಸಿ.ಬ್ಯಾಟರಿಗಳಿಗೆ ಅಗತ್ಯವಿರುವ ಹುರುಪು ತುಂಬಿ,ಕೆಲವು ಗಾಡಿಗಳ ತಯಾರಕರು 85-90% ರಷ್ಟು ಮಾತ್ರ ಹುರುಪು ತುಂಬಿಸುವಂತೆ ತಿಳಿಸಿರುತ್ತಾರೆ, ಇವುಗಳನ್ನು ಪಾಲಿಸಬೇಕು. ದಿಢೀರನೆ ಗಾಡಿಯನ್ನು ಜೋರಾಗಿ ಓಡಿಸುವುದು, ದಿಢೀರನೆ ಬ್ರೇಕ್ ಹಾಕಿ ನಿಲ್ಲಿಸುವುದು ಪದೇ ಪದೇ ಮಾಡುವುದು ಒಳ್ಳೆಯದಲ್ಲ. ಈ ರೀತಿಯ ಗಾಡಿ ಓಡಿಸುವ ಅಭ್ಯಾಸ ಬಿಟ್ಟು ಬಿಡಿ. ತಗ್ಗು-ದಿಣ್ಣೆ ರಸ್ತೆ, ಅತಿ ಬಿಸಿಲು, ಕೆಸರು, ನೀರಿನಿಂದ ಕೂಡಿದ ದಾರಿಗಳಲ್ಲಿ ಓಡಿಸುವ ಅಗತ್ಯ ಬಂದಾಗ “ಬ್ಯಾಟರಿ ಸೇವರ್” ಮೋಡ್‌ನಲ್ಲಿ ಓಡಿಸುವುದು ಒಳ್ಳೆಯದು. ಪದೇ ಪದೇ, ಗಾಡಿಯ ಮಿಂಕಟ್ಟಿನ ಹುರುಪು 20%ಗಿಂತ ಕಡಿಮೆಯಾದಾಗ ಗಾಡಿಯನ್ನು ಓಡಿಸುವುದು ಬ್ಯಾಟರಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಈಗ ಬಹುತೇಕ ಗಾಡಿಗಳಿಗೆ ಡಿಸಿ ಫಾಸ್ಟ್‌ಚಾರ್ಜಿಂಗ್ ಅಂದರೆ 20-30 ನಿಮಿಷಗಳಲ್ಲಿ ಗಾಡಿಗೆ ವೇಗದಲ್ಲಿ ಹುರುಪು ತುಂಬುವ ಏರ್ಪಾಟುಗಳು ಸಿಗುತ್ತವೆ. ಇವುಗಳನ್ನು ಅತಿ ಅಗತ್ಯದ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಅತಿಯಾಗಿ ಈ ಫಾಸ್ಟ್‌ಚಾರ್ಜಿಂಗ್ ಬಳಕೆಯಿಂದ ಬ್ಯಾಟರಿಯ ಒಳಗೆ ಹೆಚ್ಚಿನ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಇದರಿಂದ ಅವುಗಳ ಬಾಳಿಕೆ ಕಡಿಮೆಯಾಗುತ್ತದೆ.

  • ಎರಡನೇಯದಾಗಿ ಗಾಡಿಯ ಇಲೆಕ್ಟ್ರಿಕ್ ಮೋಟಾರ್:

ಮೋಟಾರ್‌ಗಳು ಅನುಮಾನಾಸ್ಪದವಾಗಿ ಸದ್ದು ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ಬಳಿ ಗಾಡಿಯನ್ನು ತೆಗೆದುಕೊಂಡು ಹೋಗಿ ನೆರವು ಪಡೆಯುವುದು ಒಳಿತು. ಮೋಟಾರ್‌ನ ತಂಪಿನ ಏರ್ಪಾಟು ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಆಗಾಗ ಪರೀಕ್ಷಿಸಿಕೊಳ್ಳಿ.  ಮೋಟಾರ್ ಇಲ್ಲವೇ ಇತರೆ ಬಿಡಿಭಾಗಗಳು ಸರಿಯಾಗಿ ಕೆಲಸ ಮಾಡದೇ ಇದ್ದಾಗ ಗಾಡಿಯ ತೋರುಮಣೆಯಲ್ಲಿಯ(Dashboard) ದೀಪಗಳು ಹೊಳೆಯುವುದರ ಮೂಲಕ ಕೆಲಸ ಮಾಡದ ಏರ್ಪಾಟಿನ ಬಗ್ಗೆ ನಮಗೆ ಮಾಹಿತಿ ಒದಗಿಸುತ್ತಿರುತ್ತವೆ. ಇದನ್ನು ಗಮನಿಸಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

  • ಕೊನೆಯದಾಗಿ ಹೇಳಬೇಕೆಂದರೆ

 ಪೆಟ್ರೋಲ್/ಡೀಸೆಲ್ ಮುಂತಾದ ಒಳಉರಿವಿನ ಇಂಜೀನ್(IC Engine) ಹೊಂದಿರುವ ಗಾಡಿಗಳಂತೆ, ಇಲೆಕ್ಟ್ರಿಕ್ ಗಾಡಿಗಳಲ್ಲೂ ಬ್ರೇಕ್ ಏರ್ಪಾಟು(Brake System), ಒರೆಸುಕ(Wiper) ಮತ್ತು ಗಾಲಿಗಳು ಇದ್ದೇ ಇರುತ್ತವೆ. ತಡೆತದ ಏರ್ಪಾಟಿನ ತಂಪುಕ, ಒರೆಸುಕಕ್ಕೆ ಬೇಕಾಗುವ ನೀರು/ತಂಪುಕಗಳು ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಗಾಲಿಗಳಲ್ಲಿ ಗಾಳಿಯ ಒತ್ತಡದ ಮಟ್ಟ ಸರಿಯಾಗಿರಬೇಕು. ಇಂದಿನ ಬಹುಪಾಲು ಇಲೆಕ್ಟ್ರಿಕ್ ಗಾಡಿಗಳಲ್ಲಿ ರೀಜನರೇಟಿವ್ ಬ್ರೇಕಿಂಗ್ ಏರ್ಪಾಟು ಇರುತ್ತದೆ ಅಂದರೆ, ಗಾಡಿಗೆ ತಡೆ ಹಾಕಿದಾಗ(Brake Applied) ಗಾಲಿಗಳಲ್ಲಿರುವ ಕದಲಿಕೆಯ ಬಲ(Kinetic Energy) ಉಳಿಸಿಕೊಂಡು ಮೋಟಾರ್ ಮೂಲಕ ಗಾಡಿಗೆ ಅಗತ್ಯವಿರುವ ಸಂದರ್ಭದಲ್ಲಿ ಬಲ ಒದಗಿಸುವ ಏರ್ಪಾಟು. ಈ ಏರ್ಪಾಟುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು.

ಇಲೆಕ್ಟ್ರಿಕ್ ಬಂಡಿಗಳಲ್ಲಿ ಹೈ ವೋಲ್ಟೇಜ್, ಲೋ ವೋಲ್ಟೇಜ್ ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಹೆಚ್ಚಿನ ಬಿಡಿಭಾಗಗಳು ಇರುತ್ತವೆ. ಇವುಗಳ ಬಳಕೆ ಮಾಡುವಾಗ ಹೆಚ್ಚು ಎಚ್ಚರಿಕೆ ವಹಿಸಿ. ಮನೆಗಳಲ್ಲಿ ರಿಪೇರಿ, ಸರ್ವೀಸ್ ಮಾಡುವ ಸಾಹಸಕ್ಕೆ ಕೈಹಾಕಬಾರದು. ಇದಕ್ಕೆ ನುರಿತ ಮೆಕ್ಯಾನಿಕ್, ನೆರವುದಾಣಗಳಲ್ಲಿ ಕೊಂಡೊಯ್ದು ರಿಪೇರಿ ಮಾಡಿಸುವುದೇ ಸರಿಯಾದದ್ದು. ಗಾಡಿ ಬಳಕೆಯ ಕೈಪಿಡಿಯಲ್ಲಿ(Manual) ನೀಡಿರುವ ಎಲ್ಲ ಮಾಹಿತಿಗಳನ್ನು ಅನುಸರಿಸಿಕೊಂಡು ಹೋಗಬೇಕು.

 

ಮಾಹಿತಿ ಮತ್ತು ತಿಟ್ಟ ಸೆಲೆ: evpedia.co.in     freepik.com

ಚಳಿಗಾಲಕ್ಕೆ ಕಾರಿನ ಆರೈಕೆ

ಜಯತೀರ್ಥ ನಾಡಗೌಡ

ನಮ್ಮ ದೇಹ ಮತ್ತು ಆರೋಗ್ಯವನ್ನು ನಾವು ಹೇಗೆ ಬಿಸಿಲು, ಮಳೆ, ಮತ್ತು ಚಳಿಗಾಲಕ್ಕೆ ತಕ್ಕಂತೆ ಕಾಪಾಡಿಕೊಳ್ಳುತ್ತೇವೋ ಅದೇ ತರಹ ನಮ್ಮ ಗಾಡಿಗಳನ್ನು ನಾವು ನೋಡಿಕೊಳ್ಳಬೇಕು. ಈ ಬರಹದಲ್ಲಿ ಗಾಡಿಗಳನ್ನು ಚಳಿಗಾಲದಲ್ಲಿ ಹೇಗೆ ಆರೈಕೆ ಮಾಡಬೇಕು ಎಂಬುದರ ಕುರಿತಾಗಿ ತಿಳಿಸಿಕೊಡುವೆ.

  1. ಗಾಡಿಯ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಗಲು ಕಿರಿದಾಗಿದ್ದು, ಸೂರ್ಯ ತಡವಾಗಿ ಹುಟ್ಟಿ ಬೇಗನೆ ಮುಳುಗುವವನು. ಇದರಿಂದ ಗಾಡಿ ಓಡಿಸುಗರಿಗೆ ಗಾಡಿಯ ದೀಪದ ಅಗತ್ಯ ಹೆಚ್ಚು. ಕೆಲವೊಮ್ಮೆ ಬೆಳಗಿನ ಜಾವದಲ್ಲಿ ಇಬ್ಬನಿ ಕವಿದು ದಾರಿ ಮಂಜು ಮಂಜಾಗುವುದು ಹೆಚ್ಚು, ಆಗ ಕೂಡ ಗಾಡಿಗಳ ದೀಪ ಆನ್ ಮಾಡಿ ಗಾಡಿಗಳನ್ನು ಓಡಿಸಿಕೊಂಡು ಹೋಗಬೇಕು. ಆದ್ದರಿಂದ ಬಂಡಿಯ ಮುಂದೀಪ, ಹಿಂದೀಪ, ಇಬ್ಬನಿಗೆಂದೇ ನೀಡಿರುವ(Fog Lamp) ದೀಪಗಳು ಹಾಗೂ ತೋರುಕ(Indicator) ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು. ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ, ನುರಿತ ಮೆಕ್ಯಾನಿಕ್‌ಗಳ ಬಳಿ ತೋರಿಸಿ ಸರಿಪಡಿಸಿಕೊಳ್ಳಬೇಕು.

  1. ಗಾಡಿಯ ಮಿಂಕಟ್ಟು:

ಗಾಡಿಯ ಮಿಂಕಟ್ಟು ಸರಿಯಾಗಿ ಕೆಲಸ ಮಾಡಬೇಕು. ಚಳಿಗಾಲದಲ್ಲಿ ಸಂಜೆ ಮತ್ತು ಬೆಳಗಿನ ಜಾವ ಕಡಿಮೆ ತಾಪಮಾನ ಇರುವುದರಿಂದ, ಗಾಡಿಗಳ ಬ್ಯಾಟರಿ ತಣ್ಣಗಾಗಿರುತ್ತದೆ. ಕೆಲವೊಮ್ಮೆ, ರಾತ್ರಿಯಿಡೀ ನಿಂತಿರುವ ಗಾಡಿಗಳು ಬೆಳಗಿನ ಜಾವ ಬೇಗನೇ ಶುರುವಾಗಲ್ಲ, ಕಾರಣ ಬ್ಯಾಟರಿ ವಾರ್ಮ್-ಅಪ್ ಆಗಿರುವುದಿಲ್ಲ. ಗಾಡಿಯ ಬ್ಯಾಟರಿ ಹಳೆಯದಾಗಿದ್ದಾಗ ಈ ತೊಂದರೆ ಕಂಡುಬರುವುದುಂಟು. ಈ ಸಮಯದಲ್ಲಿ ಜಂಪರ್ ತಂತಿಗಳು ಇದ್ದರೆ, ಅವುಗಳನ್ನು ನೆರೆಹೊರೆಯವರ ಕಾರಿನ ಬ್ಯಾಟರಿಗೆ ಜೋಡಿಸಿ ಜಂಪ್ ಸ್ಟಾರ್ಟ್ ಮಾಡಬಹುದು. ಅಕ್ಕಪಕ್ಕದಲ್ಲಿ ಬೇರೆ ಕಾರು ಸಿಗದೇ ಇದ್ದಲ್ಲಿ, ಹೀಗೆ ಮಾಡಬಹುದು. ಬಹಳಷ್ಟು ಕಾರಿನ ವಿಮೆಗಳು ಇಲ್ಲವೇ ಶೋರೂಮ್‌ಗಳು ದಾರಿಬದಿ ನೆರವು(roadside assist) ಎಂಬ ಸೇವೆಗಳನ್ನು ನೀಡಿರುತ್ತಾರೆ. ದಾರಿಬದಿ ನೆರವು ನವರಿಗೆ ಕರೆಮಾಡಿದರೆ, ಉಚಿತವಾಗಿ ಬಂದು ನಿಮಗೆ ಜಂಪ್ ಸ್ಟಾರ್ಟ್ ಮಾಡಿಕೊಡುತ್ತಾರೆ. ದಾರಿಬದಿ ನೆರವು ಎಂಬುದು ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ನೆರವಿಗೆ ಬರುತ್ತದೆ. ಪದೇ ಪದೇ ಈ ರೀತಿ ಗಾಡಿಯ ಬ್ಯಾಟರಿ ಕೆಟ್ಟು ನಿಲ್ಲುತ್ತಿದ್ದರೆ, ಬ್ಯಾಟರಿಯನ್ನು ಒಂದೊಮ್ಮೆ ನುರಿತ ಮೆಕ್ಯಾನಿಕ್ ಬಳಿ ತೋರಿಸಿ ಹೊಸ ಬ್ಯಾಟರಿಗೆ ಬದಲಾಯಿಸಿಕೊಳ್ಳುವುದು ಒಳ್ಳೆಯದು.

3.ಕೀಲೆಣ್ಣೆ ಮತ್ತು ತಂಪುಕಗಳ ಮಾಹಿತಿ:

ಗಾಡಿಯ ಕೀಲೆಣ್ಣೆ (Engine Oil) ಮತ್ತು ತಂಪುಕಗಳ(Coolant) ಮಟ್ಟವನ್ನು ಆಗಾಗ ಪರೀಕ್ಷಿಸಿ. ಇವುಗಳ ಮಟ್ಟ ಕಡಿಮೆ ಎನ್ನಿಸಿದರೆ, ಗಾಡಿಯ ಬಳಕೆ ಕೈಪಿಡಿಯಲ್ಲಿ ಹೆಸರಿಸಿದ ಗುಣಮಟ್ಟದ ಕೀಲೆಣ್ಣೆ ಮತ್ತು ತಂಪುಕವನ್ನು ತುಂಬಿಸಬೇಕು.ಅತಿಯಾದ ಚಳಿಯ ವಾತಾವರಣದಲ್ಲಿ ಗಾಡಿಯು ಸುಮಾರು ಹೊತ್ತು ಶುರು ಮಾಡದೇ ಬಿಟ್ಟರೆ, ಕೀಲೆಣ್ಣೆ ಮುಂತಾದವು ಕೆಲವೊಮ್ಮೆ ಹೆಪ್ಪುಗಟ್ಟುವುದುಂಟು, ಇದರಿಂದ ಗಾಡಿಯು ಬೇಗನೇ ಶುರುವಾಗದೇ ಇರಬಹುದು. ಒಂದೊಮ್ಮೆ, ಗಾಡಿಯನ್ನು ಒಂದೇ ಕಡೆ ಹಲವಾರು ದಿನ ನಿಲ್ಲಿಸುವ ಸಂದರ್ಭ ಬಂದರೆ, ದಿನವೂ ಒಂದು ಸಲ ಕಾರನ್ನು ಶುರು ಮಾಡಿ ಇಲ್ಲವೇ ಮನೆಯ ಅಕ್ಕಪಕ್ಕದಲ್ಲಿ 2-3 ಸುತ್ತು ಹಾಕಿ ಬಂದರೆ ಒಳ್ಳೆಯದು.

  1. ಒರೆಸುಕ ಮತ್ತು ಗಾಳಿತಡೆ ಗಾಜುಗಳು:

ಚಳಿಗಾಲದಲ್ಲಿ ಒರೆಸುಕ(Wiper) ಮತ್ತು ಗಾಳಿತಡೆ ಗಾಜುಗಳು(Wind Shield Glass) ಸರಿಯಾಗಿ ಕೆಲಸ ಮಾಡುತ್ತಿರಬೇಕು. ಗಾಳಿತಡೆ ಗಾಜುಗಳಲ್ಲಿ ಯಾವ ಚಿಕ್ಕ ಪುಟ್ಟ ತೂತುಗಳು ಇರದೇ ಭದ್ರವಾಗಿರಬೇಕು. ಒರೆಸುಕಗಳು ಹಳತಾಗಿದ್ದರೆ, ಬದಲಾಯಿಸಿ ಬಿಡಿ. ಗಾಡಿಯನ್ನು ಆಚೆ ಕಡೆ, ಯಾವುದೇ ಹೊದಿಕೆಯಿರದೇ ರಾತ್ರಿಹೊತ್ತು ನಿಲ್ಲಿಸಬೇಕಾಗಿ ಬಂದರೆ, ಬೆಳಿಗ್ಗೆ ಗಾಡಿಯ ಗಾಳಿತಡೆ ಗಾಜಿನ ಮೇಲೆ ಸಾಕಷ್ಟು ಮಂಜು ಸೇರಿಕೊಂಡು, ಗಾಡಿ ಮುಂದೆ ಏನೂ ಕಾಣದಂತೆ ಅಡ್ಡಿಯಾಗುತ್ತದೆ. ಆಗ, ಗಾಡಿಯಲ್ಲಿರುವ ಮಂಜು ಕರಗಿಸುಕ(Defroster) ಶುರು ಮಾಡಿ ಸ್ವಲ್ಪ ಹೊತ್ತು ಬಿಟ್ಟರೆ ಮಂಜು ಕರಗಿ, ಮುಂದಿನ ದಾರಿ ಸ್ಪಷ್ಟವಾಗಿ ಕಾಣುತ್ತದೆ. ಗಾಡಿಯಲ್ಲಿರುವ ಮಂಜು ಕರಗಿಸುಕ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ.

  1. ಗಾಲಿಯ ಸ್ಥಿತಿ:

ಗಾಡಿಯ ಗಾಲಿಗಳ ಒತ್ತಡದ ಮಟ್ಟ ಕುಸಿದಿದ್ದರೆ, ಗಾಳಿ ತುಂಬಿಸಿ ಸರಿಯಾದ ಮಟ್ಟದಲ್ಲಿರುವಂತೆ ನೋಡಿಕೊಳ್ಳಬೇಕು. ಇಂದಿನ ಹೆಚ್ಚಿನ ಕಾರುಗಳಲ್ಲಿ ಗಾಲಿಗಳ ಒತ್ತಡದ ಮಟ್ಟ ತಿಳಿಸುವ ಅರಿವಿಕ(Tyre pressure monitroing sensor) ಇರುತ್ತವೆ. ಇವುಗಳು ಕಾರಿನ ತೋರುಮಣೆ(Dashboard) ನಲ್ಲೇ ಗಾಲಿಗಳ ಒತ್ತಡದ ಮಟ್ಟ ತೋರಿಸುತ್ತವೆ. ಗಾಲಿಗಳಲ್ಲಿ ಗಾಳಿ ಕಡಿಮೆಯಾದಾಗ ಅರಿವಿಕಗಳು ಸರಿಪಡಿಸುವಂತೆ ಮಾಹಿತಿ ಕೊಡುತ್ತವೆ. ಅದನ್ನು ಬಳಸಿಕೊಂಡು, ಗಾಳಿ ಒತ್ತಡ ಸರಿಯಾದ ಮಟ್ಟದಲ್ಲಿ ಇರುವಂತೆ ಗಾಳಿ ತುಂಬಿಸಬೇಕು. ಹಾಗೆಯೇ ಗಾಲಿಗಳು ಅತಿಯಾಗಿ ಸವೆದಿದ್ದರೆ, ಒಮ್ಮೆ ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಗಾಲಿಗಳ ಸವೆತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರಿನ ಬಳಕೆದಾರರ ಕೈಪಿಡಿಯಲ್ಲಿ ನೋಡಿ ತಿಳಿಯಬಹುದು. ಕಾರಿನಲ್ಲಿರುವ ಬಿಡಿ-ಗಾಲಿ(spare wheel)ಯನ್ನು ತುರ್ತು ಅಗತ್ಯಕ್ಕೆ ಬಳಸಿಕೊಳ್ಳಿ.

 

ದೂರದೂರಿಗೆ, ಮಂಜುಬೀಳುವ ಅತಿಚಳಿಯ ಪ್ರದೇಶಗಳ ತೆರಳುವ ಮುನ್ನ ಅಲ್ಲಿನ ವಾತಾವರಣ ಬಗ್ಗೆ ತಿಳಿದುಕೊಂಡು, ಕಾರಿನ ಎಲ್ಲ ಏರ್ಪಾಟು ಸರಿಯಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಂಡಿರಿ.

 

ತಿಟ್ಟ ಸೆಲೆ: acko.com

ಬೆಳ್ಳಿ ಕಿರಣ ಮೂಡಿಸಿದ ಸಾಲಿಡ್ ಸ್ಟೇಟ್ ಬ್ಯಾಟರಿ

ಜಯತೀರ್ಥ ನಾಡಗೌಡ

ಬಹುತೇಕ ವಿದ್ಯುತ್ತಿನ ಕಾರುಗಳಲ್ಲಿ ಬಳಸಲ್ಪಡುವ ಲಿಥಿಯಮ್ ಅಯಾನ್ ಬ್ಯಾಟರಿ ಬದಲಿಗೆ ಸೋಡಿಯಮ್ ಅಯಾನ್ ಬ್ಯಾಟರಿಗಳ ಬಗ್ಗೆ ಸಂಶೋಧನೆಗಳು ಒಂದೆಡೆ ನಡೆಯುತ್ತಿದ್ದರೆ, ಸ್ಯಾಮ್‌ಸಂಗ್ ರವರ ಹೊಸದಾದ ಸಂಶೋಧನೆ ಬ್ಯಾಟರಿಗಳ ಲೋಕದಲ್ಲಿ ಸಂಚಲನ ಮೂಡಿಸಿದೆ. ಹೆಸರುವಾಸಿ ಸ್ಯಾಮ್‌ಸಂಗ್ ಕಂಪನಿಯವರು ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಯನ್ನು ಕಂಡುಹಿಡಿದಿದ್ದು. ಬ್ಯಾಟರಿ ಉದ್ದಿಮೆಯಲ್ಲಿ ಇದು ಹೊಸತಾಗಿದೆ. ಇಂದು ಹೆಚ್ಚಾಗಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಬಳಸಲ್ಪಡುವ ಎಲೆಕ್ಟ್ರೋಲೈಟ್‌ಗಳು ದ್ರವ ರೂಪದಲ್ಲಿರುತ್ತವೆ(Liquid State). ಆದರೆ, ಸ್ಯಾಮ್‌ಸಂಗ್ ಮುಂದಿಟ್ಟಿರುವ ಸಿಲ್ವರ್ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲಿ ಗಟ್ಟಿಯಾದ ಬೆಳ್ಳಿಯ ಎಲೆಕ್ಟ್ರೋಲೈಟ್‌ಗಳು ಇರಲಿವೆ.

ಸಾಮಾನ್ಯ ಮಿಂಕಟ್ಟುಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್‌ಗಳೇ ಅಯಾನ್‌ಗಳು ಕ್ಯಾಥೋಡ್ ಮತ್ತು ಅನೋಡ್ ಬದಿ ಬೇರ್ಪಡುವಂತೆ ಮಾಡುತ್ತವೆ. ಈ ದ್ರವರೂಪದ ಎಲೆಕ್ಟ್ರೋಲೈಟ್ ಬದಲು ಇದೇ ಮೊದಲ ಬಾರಿಗೆ ಘನರೂಪದ ಗಟ್ಟಿಯಾದ ಬೆಳ್ಳಿ-ಇಂಗಾಲದ(Silver-Carbon, Ag-C) ಎಲೆಕ್ಟ್ರೋಲೈಟ್ ಅಭಿವೃದ್ಧಿ ಪಡಿಸಲಾಗಿದೆ. ಗಟ್ಟಿಯಾದ ಎಲೆಕ್ಟ್ರೋಲೈಟ್ ಹೆಚ್ಚಿನ ಅಳುವು ಹೊಂದಿವೆ. ಸಾಮಾನ್ಯ ದ್ರವ ರೂಪದ ಎಲೆಕ್ಟ್ರೋಲೈಟ್ ಸುಮಾರು 270 Wh/kg ಅಳುವು ಹೊಂದಿದ್ದರೆ, ಗಟ್ಟಿಯಾದ ಎಲೆಕ್ಟ್ರೋಲೈಟ್ 500 Wh/kg ನಷ್ಟು ಹೆಚ್ಚಿನ ಅಳುವು ಹೊಂದಿದೆ. ಇದು ಅಲ್ಲದೇ, ದ್ರವರೂಪದ ಎಲೆಕ್ಟ್ರೋಲೈಟ್‌ಗಳು ಉರಿ ಹೊತ್ತಿಕೊಳ್ಳಬಲ್ಲವಂತವು, ಇದರಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಸ್ಯಾಮ್‌ಸಂಗ್ ರವರ ಗಟ್ಟಿಯಾದ ಬೆಳ್ಳಿಯ ಮಿನ್ನೊಡೆಕಗಳಲ್ಲಿ(Electrolyte) ಈ ಅಪಾಯ ಇರುವುದಿಲ್ಲ.  ಹೆಚ್ಚಿನ ಅಳುವು ಹೊಂದಿರುವ ಸಾಲಿಡ್ ಸ್ಟೇಟ್ ಎಲೆಕ್ಟ್ರೋಲೈಟ್ ಮಿಂಕಟ್ಟುಗಳು ಒಮ್ಮೆ ಹುರುಪು(Charge) ತುಂಬಿದರೆ ಹೆಚ್ಚಿನ ದೂರದವರೆಗೆ ಸಾಗಬಲ್ಲವು ಅಂದರೆ ಸುಮಾರು 960 ಕಿಮೀಗಳಷ್ಟು.

ಈ ಬ್ಯಾಟರಿಗಳಿಗೆ ಕೇವಲ 9-10 ನಿಮಿಷಗಳಲ್ಲಿ ಪೂರ್ತಿಯಾಗಿ ಹುರುಪು ತುಂಬಬಹುದಾಗಿದೆ. ಹೆಚ್ಚಿನ ಅಳುವು(Efficiency), ಒಮ್ಮೆ ಹುರುಪು ತುಂಬಿಸಿದರೆ ಹೆಚ್ಚು ದೂರದವರೆಗೆ ಸಾಗಣೆ ಹಾಗೂ ಕಡಿಮೆ ಸಮಯದಲ್ಲಿ 100% ಚಾರ್ಜ್ ಆಗುವ ಈ ಬ್ಯಾಟರಿಗಳು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ದಿಮೆಗೆ ಸಾಕಷ್ಟು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಸಂಸ್ಥೆ ಹೇಳಿಕೊಂಡಿದೆ.  ಈಗಾಗಲೇ ಇಂತಹ ಬೆಳ್ಳಿಯ ಮಿಂಕಟ್ಟುಗಳ ಮಾದರಿಗಳನ್ನು ತಯಾರಿಸಿ ಕೆಲವು ಕಾರುತಯಾರಕರಿಗೆ ಸ್ಯಾಮ್‌ಸಂಗ್ ಸಂಸ್ಥೆ ನೀಡಿದ್ದು, ಅವರ ಮೊದಲ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿವೆಯಂತೆ.

ಬೆಳ್ಳಿ ಲೋಹ ದುಬಾರಿಯಾಗಿರುವುದು ಇಂತಹ ಬ್ಯಾಟರಿಗಳ ಬೆಳವಣಿಗೆಗೆ ಇರುವ ಮೊದಲ ತೊಡಕು. ಈ ಬೆಳವಣಿಗೆಯಿಂದ ಬೆಳ್ಳಿಗೆ ಬೇಡಿಕೆ ಏರಿಕೆಯಾಗಿ ಅದರ ಬೆಲೆ ಇನ್ನೂ ದುಬಾರಿಯಾಗಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಘನರೂಪದ ಮಿಂಕಟ್ಟುಗಳು ಹೆಚ್ಚಿನ ಮಿಂಚಿನ ಕಾರುಗಳಲ್ಲಿ ಬಳಕೆಯಾಗಲಿದ್ದು, ಚೀನಾ ಮೂಲದ ಲಿಥಿಯಮ್-ಅಯಾನ್ ಬ್ಯಾಟರಿ ಕಂಪನಿಗಳಿಗೆ ಇದು ಪಣವೊಡ್ಡಲಿದೆ ಎಂಬುದು ಆಟೋಮೊಬೈಲ್ ಉದ್ಯಮದಲ್ಲಿ ಕೇಳಿ ಬರುತ್ತಿರುವ ಸುದ್ದಿ.

ತಿಟ್ಟ ಮತ್ತು ಮಾಹಿತಿ ಸೆಲೆ:

chargedevs.com

samsung.com