ಕರೆಂಟ್ ಹುಟ್ಟುವ ಬಗೆ

ಪ್ರಶಾಂತ ಸೊರಟೂರ.

ಕಳೆದ ಬರಹದಲ್ಲಿ ಕರೆಂಟ್ ಎಂದರೆ ಮುಖ್ಯವಾಗಿ ವಸ್ತುಗಳಲ್ಲಿರುವ ಕಳೆವಣಿಗಳ (electrons) ಹರಿವು ಮತ್ತು ಮಿನ್ಸೆಳೆತನ (electromagnetism) ಎಂದು ಕರೆಯಲಾಗುವ ಮಿಂಚು-ಸೆಳೆಗಲ್ಲುಗಳ (magnets) ನಂಟಿನ ಕುರಿತು ತಿಳಿದುಕೊಂಡೆವು. ಮಿನ್ಸೆಳೆತನವನ್ನು ಬಳಸಿಕೊಂಡು ಕರೆಂಟ್ ಉಂಟುಮಾಡುವ ಬಗೆಯನ್ನು ಈಗ ನೋಡೋಣ.

ಕರೆಂಟ್ ಉಂಟುಮಾಡಲು ಅಂದರೆ ವಸ್ತುಗಳಲ್ಲಿರುವ ಕಳೆವಣಿಗಳನ್ನು (electrons) ಹರಿಸಲು ಬೇಕಾದ ಕಸುವು ಪಡೆಯಲು ಮುಖ್ಯವಾಗಿ ಈ ಕೆಳಗಿನವುಗಳು ಬೇಕಾಗುತ್ತವೆ,

1)      ಸೆಳೆಗಲ್ಲ ಬಯಲು (magnetic field)

2)      ತಾಮ್ರದಂತಹ ಬಿಡುವೆ (conductor)

3)      ಬಿಡುವೆಯನ್ನು ತಿರುಗಿಸುವ ಕಸುವು

4)      ಉಂಟಾದ ಕರೆಂಟನ್ನು ಸಾಗಿಸುವ ಮಿನ್ಸುತ್ತು (electric circuit)

minchuttuka_electric generator

(ಕರೆಂಟ್ ಹುಟ್ಟುವ ಭಾಗಗಳನ್ನು ತೋರಿಸುತ್ತಿರುವ ಚಿತ್ರ)

ಎರಡು ಸೆಳೆಗಲ್ಲುಗಳ (magnets) ಎದುರು ತುದಿಗಳನ್ನು ಅಂದರೆ ಬಡಗಣ (north) ಮತ್ತು ತೆಂಕಣ (south) ತುದಿಗಳನ್ನು ಒಂದರ ಮುಂದೊಂದು ತಂದಾಗ ಅವೆರಡಗಳ ನಡುವೆ ಸೆಳೆತ ಉಂಟಾಗುತ್ತದೆ. ಹೀಗೆ ಉಂಟಾದ ‘ಸೆಳೆತದ’ ಬಯಲಿನಲ್ಲಿ ತಾಮ್ರದ ತಂತಿಯ ಕಟ್ಟನ್ನು ಹೊತ್ತ ತಿರುಗುಣಿಯನ್ನು (rotor/turbine) ತಿರುಗಿಸಿದರೆ, ತಾಮ್ರದ ತಂತಿಯಲ್ಲಿ ಕಳೆವಣಿಗಳು (electrons) ಅಂದರೆ ಕರೆಂಟ್ ಹರಿಯತೊಡಗುತ್ತದೆ.

ಈ ಬಗೆಯಲ್ಲಿ ತಿರುಗುವ ಕಸುವಿನಿಂದ ಮಿಂಚಿನ (ಕರೆಂಟ್) ಕಸುವು ಉಂಟುಮಾಡುವ ಸಲಕರಣೆಯನ್ನು ‘ಮಿಂಚುಟ್ಟುಕ’ (electric generator) ಅಂತಾ ಕರೆಯುತ್ತಾರೆ.ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಎಂದರೆ,

ತಾಮ್ರದಂತಹ ಬಿಡುವೆ (conductor) ಅಳವಡಿಸಿದ ತಿರುಗುಣಿಯನ್ನು ತಿರುಗಿಸಲು ‘ಕಸುವು’ ದೊರೆತರೆ ಕರೆಂಟನ್ನು ಸುಲಭವಾಗಿ ಉಂಟುಮಾಡಬಹುದು.

ಈ ತಿರುಗಿಸುವ ಕಸುವನ್ನು ಹಲವಾರು ಬಗೆಗಳಲ್ಲಿ ಪಡೆಯಬಹುದು. ಅವುಗಳಲ್ಲಿ ಮುಖ್ಯ ಬಗೆಗಳು ಹೀಗಿವೆ,

  • ನೀರಿನ ಬಳಕೆ: ಮೇಲಿನಿಂದ ದುಮ್ಮಿಕ್ಕುವ ನೀರನ್ನು ಕೆಳಗಿರುವ ತಿರುಗಣಿಯ ಮೇಲೆ ಹಾಯಿಸಿ ಅದು ತಿರುಗುವಂತೆ ಮಾಡಲಾಗುತ್ತದೆ. ಹೀಗೆ ನೀರಿನ ಬೀಳುವಿಕೆಯಿಂದ ಮಿಂಚು (ಕರೆಂಟ್) ಪಡೆಯುವ ತಾಣಕ್ಕೆ ‘ನೀರ‍್ಮಿಂಚು ನೆಲೆಗಳು’ (hydro-electric power station) ಅನ್ನುತ್ತಾರೆ. ಜೋಗ, ಶಿವನಸಮುದ್ರ ಮುಂತಾದ ಕಡೆ ಈ ಬಗೆಯಲ್ಲಿ ಕರೆಂಟ್ ಉಂಟುಮಾಡಲಾಗುತ್ತದೆ.
  • ಕಾವು ಬಳಸಿ ಕರೆಂಟ್: ಈ ಬಗೆಯಲ್ಲಿ ಕಲ್ಲಿದ್ದಲಿನಂತಹ ಉರುವಲನ್ನು ಬಳಸಿ ನೀರನ್ನು ಕಾಯಿಸಲಾಗುತ್ತದೆ. ಕಾದ ನೀರು ಆವಿಯ ರೂಪ ಪಡೆದಾಗ ಅದನ್ನು ತಿರುಗುಣಿಯನ್ನು ತಿರುಗಿಸಲು ಬಳಸಲಾಗುತ್ತದೆ. ಹೀಗೆ ಕರೆಂಟ್ ಉಂಟುಮಾಡುವ ತಾಣಗಳಿಗೆ ‘ಕಾವ್ಮಿಂಚು ನೆಲೆಗಳು’ (thermal power station) ಅನ್ನುತ್ತಾರೆ. ರಾಯಚೂರಿನಲ್ಲಿರುವ ಮಿಂಚಿನ-ನೆಲೆಯಲ್ಲಿ ಹೀಗೆಯೇ ಕರೆಂಟ್ ಉಂಟುಮಾಡಲಾಗುತ್ತದೆ.
  • ಅಣುಗಳ ಒಡೆತ:  ಇದೂ ಕಾವಿನಿಂದ ಕರೆಂಟ್ ಪಡೆಯುವ ಬಗೆಗಳಲ್ಲಿ ಒಂದು ಆದರೆ ಇಲ್ಲಿ ಕಲ್ಲಿದ್ದಲಿನ ಬದಲಾಗಿ ಅಣುಗಳ ಒಡೆತದಿಂದ ಉಂಟಾಗುವ ಕಾವನ್ನು ನೀರು ಕಾಯಿಸಲು ಬಳಸಲಾಗುತ್ತದೆ. ಯುರೇನಿಯಂ ನಂತಹ ಅಣುಗಳ ನಡುವಣಕ್ಕೆ (nucleus) ನೆಲೆವಣಿಗಳನ್ನು (neutrons) ಗುದ್ದಿಸಿ, ನಡುವಣ ಒಡೆಯುವಂತಾದರೆ ಅದರಿಂದ ತುಂಬಾ ಕಸುವು ಬಿಡುಗಡೆಯಾಗುತ್ತದೆ. ಈ ಕಸುವು ಬಳಸಿ ನೀರಾವಿಯನ್ನು ಉಂಟಮಾಡಿ, ಎಂದಿನ ಬಗೆಯಂತೆ ತಿರುಗುಣಿಯನ್ನು ತಿರುಗಿಸಿ ಕರೆಂಟ್ ಪಡೆಯಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ‘ಕೈಗಾ’ ದಲ್ಲಿ ಇಂತ ’ನಡುವಣ-ಮಿಂಚಿನ’ (nuclear power) ನೆಲೆಯಿದೆ.
  • ಗಾಳಿಯ ಬಳಕೆ: ಬೆಟ್ಟ-ಗುಡ್ಡಗಳ ಮೇಲೆ ಬೀಸುವ ಗಾಳಿಯನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಗದುಗಿನ ಕಪ್ಪತ್ತಗುಡ್ಡ, ಚಿತ್ರದುರ್ಗದ ಬೆಟ್ಟಗಳಲ್ಲಿ ಇಂತಹ ಗಾಳಿ ಮಿಂಚಿನ ನೆಲೆಗಳನ್ನು ಕಾಣಬಹುದು.
  • ಕಡಲ ಅಲೆಗಳ ಬಳಕೆ: ಕಡಲ ದಂಡೆಯಲ್ಲಿ ಹೊಯ್ದಾಡುವ ತೆರೆಗಳನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಈ ಬಗೆ ಇತ್ತೀಚಿಗೆ ಕಂಡುಹಿಡಿಯಲಾಗಿದ್ದು ಇನ್ನೂ ಹೆಚ್ಚಾಗಿ ಬಳಕೆಗೆ ಬರಬೇಕಾಗಿದೆ.

minchumane

(ನಡುವಣ (nucleus) ಒಡೆತದಿಂದ ಉಂಟಾದ ಕಸುವು ಬಳಸಿ ಕರೆಂಟ್ ಉಂಟುಮಾಡುತ್ತಿರುವ ಬಗೆಯನ್ನು ತೋರಿಸುವ ಚಿತ್ರ)

ಹೀಗೆ ಯಾವುದಾದರೊಂದು ಕಸುವಿನ ಸೆಲೆಯಿಂದ ತಿರುಗುಣಿ ತಿರುಗಿಸಿ ಮಿಂಚುಟ್ಟುಕದ (generator) ನೆರವಿನಿಂದ  ಕರೆಂಟ್ ಉಂಟುಮಾಡಲಾಗುತ್ತದೆ.

ಚಿತ್ರ : ವಿಕಿಪೀಡಿಯಾ , ಸೆಲೆ: iaea ,rite.or.jp

ಕಡಲ ತೆರೆಗಳಿಂದ ಮಿಂಚು

ಪ್ರಶಾಂತ ಸೊರಟೂರ.

ಕಲ್ಲಿದ್ದಲು, ಪೆಟ್ರೋಲಿಯಂ ಮುಂತಾದ ಮುಗಿದು ಹೋಗಬಹುದಾದಂತಹ ಉರುವಲುಗಳ ಬದಲಾಗಿ ಮುಗಿದು ಹೋಗಲಾರದಂತಹ ಮತ್ತು ಸುತ್ತಣಕ್ಕೆ ಕಡಿಮೆ ತೊಂದರೆಯನ್ನುಂಟು ಮಾಡುವಂತಹ ಕಸುವಿನ ಸೆಲೆಗಳ ಅರಕೆ ಜಗತ್ತಿನೆಲ್ಲೆಡೆ ಎಡೆಬಿಡದೇ ಸಾಗಿದೆ.

ಈ ನಿಟ್ಟಿನಲ್ಲಿ ಗುಡ್ಡ-ಬೆಟ್ಟದ ಮೇಲೆ ಬೀಸುವ ಗಾಳಿ ಇಲ್ಲವೇ ನೇಸರನ ಬೆಳಕಿನಿಂದ ಮಿಂಚು (ಕರೆಂಟ್) ಉಂಟುಮಾಡುವ ಹೊಸ ಸಲಕರಣೆಗಳನ್ನು ಹಲವಾರು ಕಡೆ ಅಳವಡಿಸಲಾಗುತ್ತಿದೆ. ಇದರಂತೆ ಇತ್ತೀಚಿಗೆ ಬಳಕೆಗೆ ತರಲಾಗುತ್ತಿರುವ ಕಸುವಿನ ಇನ್ನೊಂದು ಸೆಲೆಯೆಂದರೆ ಕಡಲ ತೆರೆಗಳನ್ನು ಬಳಸಿ ಕರೆಂಟ್ ಉಂಟುಮಾಡುವುದು.

ದಂಡೆಯಲ್ಲಿ ಹೊಯ್ದಾಡುವ ತೆರೆಗಳನ್ನು ಇಲ್ಲವೇ ಕಡಲ ನಡುವೆ ಏಳುವ ದೊಡ್ಡ ಅಲೆಗಳು ಹೊಮ್ಮಿಸುವ ಕಸುವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಂತಾದರೆ ಜಗತ್ತಿನ ಹಲವು ನಾಡುಗಳಿಗೆ ಯಾವುದೇ ಅಡೆತಡೆ ಇಲ್ಲದೇ ಮಿಂಚು (ಕರೆಂಟ್) ನೀಡಬಹುದೆಂದು ಎಣಿಕೆಮಾಡಲಾಗಿದೆ. ಆದರೆ ಬಿರುಸಾಗಿ ಅಪ್ಪಳಿಸುವ ಕಡಲ ಅಲೆಗಳನ್ನು ತಡೆದುಕೊಂಡು ಮಿಂಚು ಉಂಟಮಾಡಬಲ್ಲ ಗಟ್ಟಿಯಾದ ಮಿಂಚುಟ್ಟುಕಗಳನ್ನು (electric generators) ತಯಾರಿಸುವುದು ಇಂದು ದೊಡ್ಡ ತೊಡಕಾಗಿದೆ. ಹಾಗಾಗಿ ಕಡಲ ತೆರೆಯ ಕರೆಂಟ್ ಸಲಕರಣೆಗಳು ಇನ್ನೂ ಹೆಚ್ಚಾಗಿ ಬಳಕೆಯಾಗುತ್ತಿಲ್ಲ.

ಈ ನಿಟ್ಟಿನಲ್ಲಿ ಅಮೇರಿಕಾದ ‘Ocean Renewable Power Company’ ಹಲವಾರು ಹೊಸ ಅರಕೆಯ ಕೆಲಸಗಳನ್ನು ನಡೆಸುತ್ತಿದ್ದು, ಇತ್ತೀಚಿಗೆ ಕಡಲೊಳಗೆ 150 ಅಡಿ ಆಳದಲ್ಲಿ ಹೊಸದೊಂದು ಮಿಂಚುಟ್ಟುಕವನ್ನು ಅಣಿಗೊಳಿಸಿದೆ. 98 ಅಡಿ ಅಗಲ ಮತ್ತು 31 ಅಡಿ ಎತ್ತರ ಇರುವ ಅಡಿಪಾಯದ ಮೇಲೆ ಅಲೆಗಳಿಂದ ತಿರುಗುವ ಮಿಂಚುಟ್ಟುಕವನ್ನು ಅಳವಡಿಸಲಾಗಿದೆ.

ಮೊದಲ ಹಂತದಲ್ಲಿ ಕಡಲ ಅಲೆಗಳಿಂದ 150 ಕಿಲೋ ವ್ಯಾಟ್ ಕರೆಂಟಿನ ಕಸುವನ್ನು ಉಂಟುಮಾಡಬಲ್ಲ ಈ ಮಿಂಚುಟ್ಟುಕವು ಮುಂದಿನ ಕೆಲವು ವರುಶಗಳಲ್ಲಿ 5 ಮೆಗಾ ವ್ಯಾಟ್ ಕಸುವನ್ನು ಉಂಟು ಮಾಡುವಷ್ಟು ದೊಡ್ಡದಾಗಿಸಲು ಅಮೇರಿಕಾದ ಕೂಟವು ಗುರಿ ಇಟ್ಟುಕೊಂಡಿದೆ.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಡಲ ತೆರೆಯ ಕಸುವು ಹೇರಳವಾಗಿ ದೊರೆಯುವಂತದು. ಅಮೇರಿಕಾದಂತೆ ಈ ಕಸುವನ್ನು ನಾವು ಕೂಡ ಸರಿಯಾಗಿ ಬಳಸಿಕೊಳ್ಳಬೇಕಾಗಿದೆ.

(ಸುದ್ದಿಸೆಲೆ: popsci)