ಕಾರಿನ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿ (ಭಾಗ-1)

ಜಯತೀರ್ಥ ನಾಡಗೌಡ

ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ಕಾರು ಬಳಕೆದಾರರು ಹೆಚ್ಚುತ್ತಿದ್ದಾರೆ. ಎಷ್ಟೋ ಮಂದಿಯ ದಿನದ ಓಡಾಟಕ್ಕೆ ಕಾರುಗಳೇ ಬೇಕೆಬೇಕು. ಹಗಲಿರುಳು ಓಡಾಟಕ್ಕೆ ಬಳಸಲ್ಪಡುವ ಕಾರುಗಾಡಿಗಳು ಕೆಲವೊಮ್ಮೆ ದಿಢೀರನೆ ಕೆಟ್ಟು ನಿಲ್ಲುವುದುಂಟು. ಕೆಲವೊಮ್ಮೆ ನೆರವುದಾಣಕ್ಕೆ (Service Centre) ಅಂದರೆ ಸರ್ವೀಸ್ ಸೆಂಟರ್‌ಗಳಿಗೆ ಕರೆದೊಯ್ದು ರಿಪೇರಿ ಮಾಡಿಸಬಹುದು, ಆದರೆ ಪ್ರತಿಸಲವೂ ಚಿಕ್ಕ ಪುಟ್ಟ ರಿಪೇರಿಗಳಿಗೆ ನೆರವುದಾಣಕ್ಕೆ ಬಂಡಿಯನ್ನು ಕರೆದೊಯ್ಯಲು ಸಾಕಷ್ಟು ಹೊತ್ತು ಮತ್ತು ದುಡ್ಡು ನೀಡಬೇಕಾಗಿ ಬರಬಹುದು. ಪ್ರತಿ ಬಾರಿ ನೆರವುದಾಣಕ್ಕೆ ಕರೆದೊಯ್ದು ರಿಪೇರಿ ಮಾಡಿಸುವ ಬದಲು ಮನೆಯಲ್ಲೇ ಸರಿಪಡಿಸಿದರೆ ಸಮಯ ಮತ್ತು ಹಣ, ಎರಡನ್ನು ಉಳಿಸಬಹುದು. ಕಾರುಗಾಡಿಗಳ ಹತ್ತಾರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮನೆಯಲ್ಲೇ ಸರಿಪಡಿಸಬಹುದಾಗಿದ್ದು, ಅವುಗಳ ಬಗ್ಗೆ ತಿಳಿಯೋಣ ಬನ್ನಿ.

  1.   ಮಂಜುಗಟ್ಟಿದ ಗಾಳಿತಡೆ (Wind shield):

ಚಳಿಗಾಲ ಹೆಚ್ಚುತ್ತಿದ್ದಂತೆ ಎಲ್ಲೆಡೆ ಇಬ್ಬನಿ, ಮಂಜುಗಟ್ಟುವುದು ಸಾಮಾನ್ಯ. ರಾತ್ರಿ ಹೊತ್ತಿನಲಿ, ಬಂಡಿಗಳನ್ನು ಚಳಿ, ಗಾಳಿಗೆ ಮಯ್ಯೊಡ್ಡಿ ನಿಲ್ಲಿಸಿರುತ್ತೇವೆ. ಬೆಳಿಗ್ಗೆ ಎದ್ದು ನೋಡಿದರೆ ವಿಂಡ್‌ಶೀಲ್ಡ್ ಗಾಜು ಮಂಜಿನಿಂದ ಹೆಪ್ಪುಗಟ್ಟಿರುತ್ತದೆ. ಕೆಲವೊಂದು ಬಂಡಿಗಳಲ್ಲಿ ಮಂಜಿಳಕ (Defogger) ಎಂಬ ಮಂಜನ್ನು ಕರಗಿಸುವ ಏರ್ಪಾಟು ಅಳವಡಿಸಿರುತ್ತಾರೆ. ಅದು ಕಾರು ಮಾಲೀಕರ ಕೆಲಸವನ್ನು ಹಗುರ ಮಾಡುತ್ತದೆ. ಆದರೆ ಆದರೆ ಕೆಲವು ಹಳೆಯ ಮಾದರಿ ಗಾಡಿಗಳಲ್ಲಿ ಈ ಏರ್ಪಾಟು ಕಂಡುಬರುವುದಿಲ್ಲ. ಆದ್ದರಿಂದ ಡಿಫಾಗರ್ ಹೊಂದಿಲ್ಲದ ಕಾರು ಹೊಂದಿರುವವರು ಅಥವಾ ಡಿಫಾಗರ್ ಕೆಲಸ ಮಾಡದ ಸಂದರ್ಭಗಳಲ್ಲಿ ಈ ರೀತಿ ಮಾಡಬಹುದು: ಗಾಳಿತಡೆಯ ಮೇಲಿನ ಧೂಳು, ಕಸ ಕಡ್ಡಿಗಳಿದ್ದರೆ ಒರೆಸಿ ತೆಗೆಯಿರಿ. ಟೂತ್ ಪೇಸ್ಟ್ ತೆಗೆದುಕೊಂಡು ಒಂಚೂರು ಗಾಳಿತಡೆಯ (Windshield) ಗಾಜಿಗೆ ಹಚ್ಚಿ. ಮೆತ್ತನೆಯ ಬಟ್ಟೆಯೊಂದನ್ನು ತೆಗೆದುಕೊಂಡು, ಗಾಜನ್ನು ಪೂರ್ತಿಯಾಗಿ ಒರೆಸಿಬಿಡಿ. ನೀರಾವಿ, ನೀರಿನ ಹನಿಗಳು ಇಂಗಿ ಮಂಜುಗಟ್ಟುವುದನ್ನು ಟೂತ್ ಪೇಸ್ಟ್ ತಡೆಯುತ್ತದೆ.

  1. ಬಂಡಿ ಘಮಘಮಿಸುವಂತೆ ಹೀಗೆ ಮಾಡಿ:

ದೂರದ ಊರುಗಳಿಗೆ ಪಯಣಿಸುವಾಗ ಬಂಡಿಯಲ್ಲೇ ಕುಳಿತು ತಿಂಡಿ ತಿನಿಸುಗಳನ್ನು ತಿನ್ನಬೇಕಾಗಿ ಬರುತ್ತದೆ. ಕೆಲವೊಮ್ಮೆ ತಿನಿಸಿನ ಸಾಮಾನುಗಳನ್ನು ಬಂಡಿಯಲ್ಲಿಟ್ಟು ಹಬ್ಬ ಹರಿದಿನಗಳಂದು ಸಾಗಿಸುವುದು ಉಂಟು. ಇಂತ ಸಂದರ್ಭಗಳಲ್ಲಿ ತಿಂಡಿ ತಿನಿಸಿನ ವಾಸನೆ ಒಂದೆರಡು ದಿನಗಳವರೆಗೆ ಬಂಡಿಗಳಲ್ಲಿಯೇ ಉಳಿದು . ಕೆಟ್ಟ ವಾಸನೆ ಬರುವುದುಂಟು. ಕಳೆಯೇರಿಸುಕಗಳಿದ್ದರೆ (Air Freshener) ಅವುಗಳನ್ನು ಬಳಸಿ ಈ ಕೆಟ್ಟ ವಾಸನೆಗೆ ತಡೆ ಹಾಕಬಹುದು. ಬಂಡಿಯೊಳಗಿನ ಎರ್ ಫ್ರೆಶ್ನರ್ ಖಾಲಿಯಾಗಿದ್ದರೆ ಅಥವಾ ಎರ್ ಫ್ರೆಶ್ನರ್‌ಗಳಿಂದ ಅಲರ್ಜಿಯಿದ್ದರೆ, ಚಿಂತೆಬೇಡ. ಇದಕ್ಕೊಂದು ಮನೆ ಮದ್ದು ಉಂಟು. ಕಲ್ಲಿದ್ದಿಲು ತೆಗೆದುಕೊಂಡು ಕಲ್ಲಿದ್ದಲನ್ನು ಪುಡಿಯಾಗಿಸಿ, ಅದರೊಂದಿಗೆ ಅಡುಗೆ ಸೋಡಾ ಬೆರೆಸಬೇಕು. ಈ ಬೆರಕೆಯನ್ನು ಕಾರಿನ ಒಳಭಾಗದಲ್ಲೆಲ್ಲ ಚಿಮುಕಿಸಿ ಸ್ವಲ್ಪ ಹೊತ್ತು ಬಿಡಬೇಕು. ಸುಮಾರು ಒಂದು ಗಂಟೆಯ ನಂತರ ಈ ಪುಡಿಯನ್ನು ಗುಡಿಸಿ , ಬಂಡಿಯನ್ನು ಹಸನಾಗಿಸಿ. ಗಾಡಿಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಮಂಗ ಮಾಯವಾಗಿರುತ್ತದೆ.

  1. ಕೊಳೆಯಾದ ಕೂರುಮಣೆ ಸುಚಿಯಾಗಿಸಿ:

ಗಾಡಿಯಲ್ಲಿ ಕುಳಿತು ತಿಂಡಿ ತಿಂದಾಗ ಕೆಲವೊಮ್ಮೆ ಚಹಾ, ಕಾಪಿ ಬಿದ್ದು ಕೂರುಮಣೆಯ (Seat) ಮೇಲೆ ಜಿಡ್ಡಿನ ಕಲೆಗಳಾಗಿ ಬಿಡಬಹುದು. ಈ ಕಲೆಗಳನ್ನು ತೆಗೆಯಲು ಸರ್ವೀಸ್ ಸೆಂಟ ರ್‌ಗಳಿಗೆ ಹೋದರೆ ಅಲ್ಲಿ ದುಬಾರಿ ಹಣನೀಡಬೇಕಾಗುವುದು. ಇದರ ಬದಲಾಗಿ ಮನೆಯಲ್ಲಿ ಇದನ್ನು ಸುಳುವಾಗಿ ಹಸನಾಗಿಸಬಹುದು. ಮನೆಯಲ್ಲಿ ಗಾಜು ಒರೆಸಲು ಬಳಸುವ ಎಣ್ಣೆಯನ್ನು ತೆಗೆದುಕೊಂಡು, ಮೆತ್ತನೆಯ ಹಾಳೆ ಇಲ್ಲವೇ ಬಟ್ಟೆಗೆ ಸಿಂಪಡಿಸಬೇಕು. ಹೀಗೆ ಒದ್ದೆಯಾದ ಬಟ್ಟೆ/ಹಾಳೆಯನ್ನು ಕಲೆಯಾದ ಜಾಗದಲ್ಲಿ 5 ನಿಮಿಷಗಳವರೆಗೆ ಇಡಬೇಕು. ನೋಡು ನೋಡುತ್ತಿದ್ದಂತೆ ಕಲೆ ಹೊರಟು ಹೋಗಿರುತ್ತದೆ. ಬಟ್ಟೆ/ಹಾಳೆಯನ್ನು ಕಲೆಯಿರುವ ಜಾಗದಲ್ಲಿ ತಿಕ್ಕಿದರೆ, ಕಲೆ ಎಲ್ಲೆಡೆ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರವಹಿಸಬೇಕು. ಕೀಲೆಣ್ಣೆ (Grease) ಜಿಡ್ಡಿನ ಕಲೆಗಳಿದ್ದರೆ ಹೀಗೆ ಮಾಡಿ. ಬಟ್ಟೆ ಒಗೆಯಲು ಬಳಸುವ ಲಿಕ್ವಿಡ್ ಡಿಟರ್ಜಂಟ್ ಅನ್ನು ನೀರಿನೊಂದಿಗೆ ಬೆರೆಸಿ, ಜಿಡ್ಡು ಇರುವ ಜಾಗದ ಮೇಲೆ ಚೆನ್ನಾಗಿ ತಿಕ್ಕಬೇಕು. ಬಂಡಿಯಲ್ಲಿ ಹೆಚ್ಚು ಹೊತ್ತು ಪಯಣಿಸುವಾಗ ಕೆಲವರಿಗೆ ವಾಂತಿಯಾಗುವುದು ಸಹಜ. ಇಂತಹ ವಾಂತಿ ಕಲೆಗಳೇನಾದರೂ ಇದ್ದರೆ, ಆ ಜಾಗವನ್ನು ಸಾಬೂನಿನಿಂದ ತೊಳೆಯಬೇಕು. ನಂತರ ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಕಲೆಯಿರುವ ಜಾಗಕ್ಕೆ ಒರೆಸಿದರೆ, ಅಡುಗೆ ಸೋಡಾ ಕೆಟ್ಟ ವಾಸನೆ ಬರುವುದನ್ನು ತಡೆಯುತ್ತದೆ. ನೀರು ಬಳಸಿ ತೊಳೆಯುವುದರಿಂದ, ಜಾಗ ಹಸಿಯಾಗಿರುತ್ತದೆ. ಇದನ್ನು ಬೇಗನೆ ಒಣಗಿಸಲು, ಕೂದಲು ಒಣಗಿಸಲು ಬಳಸುವ ಹೇರ್ ಡ್ರೈಯರ್ (Hair Dryer) ಉಪಯೋಗಿಸಬಹುದು.

  1. ಡಿಕ್ಕಿಕಾಪನ್ನು(Bumper) ಹೀಗೆ ಸರಿಪಡಿಸಿ:

ಇಂದಿನ ದಿನಗಳಲ್ಲಿ ಸಂಚಾರಿ ದಟ್ಟಣೆಗೆ (Traffic Jam) ಹಲವು ಊರುಗಳು ನಲಗುತ್ತಿವೆ. ಎಶ್ಟೋ ಸಾರಿ, ಎರಡು ಗಾಡಿಗಳ ಮಧ್ಯೆ ಎಳ್ಳಷ್ಟೂ ಜಾಗವಿರದಷ್ಟು ದಟ್ಟಣೆ. ಈ ವಾಹನಗಳ ದಟ್ಟಣೆಯಲ್ಲಿ ಆಮೆ ವೇಗದಲ್ಲಿ ಸಾಗುವ ಕಾರುಗಳು ಒಮ್ಮೊಮ್ಮೆ ಗುದ್ದಿಕೊಳ್ಳುವುದುಂಟು. ಮೆಲ್ಲಗೆ ಸಾಗುತ್ತಿರುವ ಗಾಡಿಗಳ ಗುದ್ದುವಿಕೆಯಿಂದ ದೊಡ್ಡ ಅನಾಹುತ ಆಗದೇ ಹೋದರು, ಬಂಡಿಗಳ ಡಿಕ್ಕಿಕಾಪು (Bumper) ಸುಲಭವಾಗಿ ನೆಗ್ಗಿ ಬಿಡುತ್ತವೆ. ನೆಗ್ಗಿದ ಬಂಡಿಯ ಡಿಕ್ಕಿಕಾಪಿನ ಭಾಗವನ್ನು ಸುಳುವಾಗಿ ಮನೆಯಲ್ಲೇ ಸರಿಪಡಿಸಬಹುದು. ಅದಕ್ಕಾಗಿ ಒಂದರ್ಧ ಬಕೆಟ್‌ನಶ್ಟು ಬಿಸಿ ನೀರು ತೆಗೆದುಕೊಳ್ಳಬೇಕು. ಈ ಬಿಸಿ ನೀರನ್ನು ನೆಗ್ಗಿದ ಭಾಗದಲ್ಲಿ ಸುರಿಯಬೇಕು. ಬಿಸಿ ನೀರು ಬೀಳುವುದರಿಂದ ಡಿಕ್ಕಿ ಕಾಪು ಹಿಗ್ಗಿ ತನ್ನ ಮೊದಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ. ಮೊದಲಿನ ಆಕಾರಕ್ಕೆ ಹೊಂದಿಕೊಳ್ಳದೇ ಹೋದರೆ, ಒಳಗಡೆಯಿಂದ ಮೆಲ್ಲನೆ ದೂಡಿದರೆ ಸಾಕು, ಅದು ಮೊದಲಿನಂತಾಗಿರುತ್ತದೆ. ಇದನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆವಹಿಸಿ ಮಾಡಬೇಕು.

  1. ಮಿಂಕಟ್ಟು(Battery) ಕೆಲಸ ಮಾಡದೇ ಹೋದಾಗ?:

ಎಷ್ಟೋ ಸಾರಿ ಗಾಡಿ ಶುರು ಮಾಡಲು ಹೋದಾಗ, ಬಿಣಿಗೆ(Engine) ಶುರು ಆಗುವುದೇ ಇಲ್ಲ. ಕಾರಿನ ಮಿಂಕಟ್ಟು ಸರಿಯಾಗಿ ಮಿಂಚಿನ ಪೂರೈಕೆ ಮಾಡದೇ ಇರುವುದರಿಂದ ಹೀಗಾಗುತ್ತದೆ. ಬ್ಯಾಟರಿ ಚಾರ್ಜ್ ಕಳೆದುಕೊಂಡು ಬಾಳಿಕೆ ಕಡಿಮೆಯಾಗುತ್ತಿದೆ ಎಂದೇ ಇದರರ್ಥ. ಆದರೂ ಚಿಂತಿಸಬೇಕಿಲ್ಲ, ಈ ಗಾಡಿಯನ್ನು ಇನ್ನೊಂದು ಬಂಡಿಯ ಬ್ಯಾಟರಿ ಮೂಲಕ ಶುರು ಮಾಡಬಹುದು. ಇದಕ್ಕೆ ಜಂಪರ್ ತಂತಿಗಳ(Jumper Cable) ಅಗತ್ಯವಿದೆ. ಹೀಗೆ ಜಂಪರ್ ತಂತಿ ಬಳಸಿ ಗಾಡಿಯನ್ನು ಶುರು ಮಾಡುವುದನ್ನು ಜಂಪ್ ಸ್ಟಾರ‍್ಟ್(Jump Start) ಎಂದೇ ಕರೆಯುತ್ತಾರೆ. ಇದನ್ನು ಸುಳುವಾಗಿ ಅರಿಯಲು, ಶುರುವಾಗದೇ ಇರುವ ಗಾಡಿಯನ್ನು ಗಾಡಿ-1 ಮತ್ತು ಅದಕ್ಕೆ ಚಾರ್ಜ್ ಒದಗಿಸಲಿರುವ ಗಾಡಿಯನ್ನು ಗಾಡಿ-2 ಎಂದುಕೊಳ್ಳಿ. ಎರಡು ಗಾಡಿಗಳ ಬಿಣಿಗವಸು(Bonnet/Hood) ಮೇಲೆತ್ತಿ ಮಿಂಕಟ್ಟಿನ ಕೂಡು ತುದಿ(Positive Terminal) ಪತ್ತೆ ಹಚ್ಚಿಕೊಳ್ಳಿ. ಹೆಚ್ಚಿನ ಬ್ಯಾಟರಿಗಳಲ್ಲಿ ಕೂಡು ತುದಿಯನ್ನು ಕೆಂಪನೆ ಬಣ್ಣದ ಮುಚ್ಚಳದಿಂದ ಮುಚ್ಚಿರುತ್ತಾರೆ ಮತ್ತು ಅದು ಕಳೆ ತುದಿಗಿಂತ(Negative Terminal) ಕೊಂಚ ದೊಡ್ಡದಾಗಿರುತ್ತದೆ. ಕೆಂಪು ಬಣ್ಣದ ಜಂಪರ್ ತಂತಿ ಮೂಲಕ ಎರಡು ಕಾರುಗಳ ಮಿಂಕಟ್ಟಿನ ಕೂಡು ತುದಿಗಳನ್ನು ಸೇರಿಸಿ. ಗಾಡಿ-2 ರ ಕಳೆ ತುದಿಗೆ ಕಪ್ಪು ಬಣ್ಣದ ಜಂಪರ್ ಸಿಕ್ಕಿಸಿ ಅದನ್ನು ಗಾಡಿ-1ರ ಲೋಹದ ಭಾಗಕ್ಕೆ(Metal Surface) ಮುಟ್ಟಿಸಿ. ಗಾಡಿಗಳ ಮಿಂಕಟ್ಟಿನ ಎರಡು ತುದಿಗಳು ಒಂದಕ್ಕೊಂದು ತಾಗದಂತೆ ಎಚ್ಚರವಹಿಸಿ. ಈಗ ಗಾಡಿ-2 ನ್ನು ಶುರು ಮಾಡಿ 10ನಿಮಿಷಗಳವರೆಗೆ ಹಾಗೇ ಬಿಡಿ. 10 ನಿಮಿಷಗಳಲ್ಲಿ ಗಾಡಿ-2ರ ಮಿಂಕಟ್ಟಿನಿಂದ ಸಾಕಶ್ಟು ಮಿಂಚು ಗಾಡಿ-1ರ ಮಿಂಕಟ್ಟಿಗೆ ಪೂರೈಕೆಯಾಗಿ, ಅದರಲ್ಲಿ ಮಿಂಚಿನ ಹುರುಪು (Electric Charge) ತುಂಬಿಕೊಂಡಿರುತ್ತದೆ. ಈಗ ಗಾಡಿ-1 ನ್ನು ಶುರು ಮಾಡಿ, ಯಾವುದೇ ತೊಂದರೆಯಿಲ್ಲದೇ ಬಂಡಿ ಶುರುವಾಗುತ್ತದೆ.