ಕಳೆದ ಕೆಲವು ವರುಶಗಳಿಂದ ಇಲೆಕ್ಟ್ರಿಕ್ ಗಾಡಿಗಳು ಸಾಲುಸಾಲಾಗಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹೆಚ್ಚಿನ ಹರವು(Range), ಕಡಿಮೆ ಸಮಯದಲ್ಲಿ 80% ಚಾರ್ಜ್ ಆಗಬಲ್ಲ ಬೇರೆ ಬೇರೆ ಗಾಡಿಗಳು ಬಂದರೂ, ಕೊಳ್ಳುಗರ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡದ್ದು ಬಿಟ್ಟರೆ, ಇವಿಯೆಂದರೆ ಮೂಗು ಮುರಿಯುವವರ ಸಂಖ್ಯೆ ಇನ್ನೂ ಕಡಿಮೆಯಾಗಿಲ್ಲ. ಇಲೆಕ್ಟ್ರಿಕ್ ವೆಹಿಕಲ್ಗಳ ಕುರಿತಾದ ಕೆಲವು ಸುಳ್ಳು ಸುದ್ದಿಗಳು, ಗಾಳಿ ಸುದ್ದಿಗಳು ಜನರಲ್ಲಿ ಅರಿವಿನ ಕೊರತೆ ಮೂಡಿಸಿ ಕೊಳ್ಳುಗರನ್ನು ಅನುಮಾನ ಹೆಚ್ಚಿಸಿ ಗೊಂದಲದಲ್ಲಿರಿಸಿವೆ. ಸರಕಾರ ಇಲೆಕ್ಟ್ರಿಕ್ ಬಂಡಿ ತಯಾರಕರಿಗೆ ಮತ್ತು ಕೊಳ್ಳುಗರಿಗೆ ಹಲವು ಕೊಡುಗೆ ನೀಡಿದರೂ, ಇವಿ ಕೊಳ್ಳುಗರ ಸಂಖ್ಯೆ ಹೇಳಿಕೊಳ್ಳುವ ಮಟ್ಟಿಗೆ ಏರಿಕೆ ಕಂಡಿಲ್ಲ. ಈ ಎಲ್ಲ ಅಂತೆಕಂತೆಗಳ ಬಗ್ಗೆ ವೈಜ್ಞಾನಿಕವಾಗಿ ಬೆಳಕು ಹರಿಸಿ ನೋಡೋಣ.
ಹರವಿನ ದುಗುಡ(Range Anxiety): ಇಲೆಕ್ಟ್ರಿಕ್ ವೆಹಿಕಲ್ ಕೊಳ್ಳುವಿಕೆಗೆ ಹಿಂದೇಟು ಹಾಕುತ್ತಿರುವುದರ ಮೊದಲ ಕಾರಣ ರೇಂಜ್ ಆಂಕ್ಷೈಟಿ ಅಂದರೆ ಹರವಿನ ದುಗುಡ. ಹರವಿನ ದುಗುಡವೆಂದರೆ, ಮುಂದಿನ ಚಾರ್ಜಿಂಗ್ ತಾಣ ಸಿಗುವ ಮೊದಲೇ ಗಾಡಿಯ ಚಾರ್ಜಿಂಗ್ ಎಲ್ಲಿ ಖಾಲಿಯಾಗಿ ಬಿಡುತ್ತೋ ಪಯಣದ ನಡು ದಾರಿಯಲ್ಲಿಯೇ ಚಾರ್ಜಿಂಗ್ ಖಾಲಿಯಾದರೆ ಹೇಗೆ ಎಂದು ಕಾಡುವ ಭಯ. ಇಲೆಕ್ಟ್ರಿಕ್ ಕಾರು ಓಡಿಸುಗರಿಗೆ, ಕಾರು ಕೊಂಡವರ ಹರವಿನ ದುಗುಡ, ಈ ಅಳಲು ಇನ್ನೂ ಇದ್ದೇ ಇದೆ. ಗಾಡಿಗೆ ಹತ್ತಿರದ ಹುರುಪು ತುಂಬುವ ತಾಣಗಳ(Charging station) ಮಾಹಿತಿ ನೀಡುವ ಸಾಕಷ್ಟು ಆಪ್ಗಳು ಬಂದರೂ ನಿಖರವಾದ ಮಾಹಿತಿಯ ಕೊರತೆ ನೀಗುವಲ್ಲಿ ಇವುಗಳಿಂದ ಸಾಧ್ಯವಾಗಿಲ್ಲ ಎಂಬುದು ಸತ್ಯ. ಇದೇ ವಿಷಯವಾಗಿ ಎರಡನೇ ಪ್ರಮುಖ ಅಂಶವೆಂದರೆ, ದೇಶದ ಉದ್ದಗಲಕ್ಕೂ ಸಾಕಷ್ಟು ಚಾರ್ಜಿಂಗ್ ತಾಣಗಳನ್ನು ಬೆಳೆಸಿರುವ ಕಂಪನಿಗಳು ಆ ಚಾರ್ಜಿಂಗ್ ತಾಣಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಕಾಲ ಕಾಲಕ್ಕೆ ಅವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂಬುದರ ಬಗ್ಗೆ ನೋಡಿ, ಸರಿಪಡಿಸುತ್ತಿಲ್ಲ. ಅದೇ ರೀತಿ ಈ ಚಾರ್ಜಿಂಗ್ ತಾಣಗಳು ಕೆಲಸ ಮಾಡುತ್ತಿವೆಯೇ ಇಲ್ಲವೇ ಎಂಬುದರ ಬಗ್ಗೆ ಈ ಮೇಲೆ ತಿಳಿಸಿದ ಆಪ್ಗಳಲ್ಲೂ ನಿಖರವಾದ ಮಾಹಿತಿ ಇರುವುದಿಲ್ಲ.

ಹಲವು ಮಾದರಿಗಳ ಕೊರತೆ: ಇವಿಗಳಲ್ಲಿ ಆಯ್ಕೆ ಕಡಿಮೆ. ಡೀಸೆಲ್, ಪೆಟ್ರೋಲ್ ಗಾಡಿಗಳಲ್ಲಿ ಚಿಕ್ಕ ಗಾಡಿಯಿಂದ ಹಿಡಿದು ಎಸ್ಯುವಿವರೆಗೂ ಹಲವು ಆಯ್ಕೆಗಳಿವೆ. ಟಾಟಾ, ಮಹೀಂದ್ರ, ಎಮ್ಜಿ, ಮುಂತಾದ ಕಾರು ತಯಾರಕರು ಹೊಸ ಇವಿಗಳನ್ನು ಮಾರುಕಟ್ಟೆಗೆ ತಂದರೂ, ಸುಜುಕಿ, ಹ್ಯುಂಡಾಯ್, ಟೊಯೊಟಾ, ಹೋಂಡಾ ರವರು ಇನ್ನೂ ತಮ್ಮ ಇವಿಗಳನ್ನು ಹೊರತಂದಿಲ್ಲ. ಇದರಿಂದ ಕೊಳ್ಳುಗರಿಗೆ ಆಯ್ಕೆಗಳು ಮಿತಿಯಲ್ಲಿವೆ.
ಚಾರ್ಜಿಂಗ್ ತಾಣಗಳ ಕೊರತೆ: ಬೆಂಗಳೂರು, ಬೊಂಬಾಯಿ, ದೆಹಲಿ ಮುಂತಾದ ದೊಡ್ಡ ನಗರಗಳಲ್ಲಿ ಚಾರ್ಜಿಂಗ್ ತಾಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಎರಡನೇ ಹಾಗೂ ಮೂರನೇ ಮಟ್ಟದ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಹುರುಪು ತುಂಬುವ ತಾಣಗಳು ಇನ್ನೂ ಬೆರಳೆಣಿಕೆಯಷ್ಟಿವೆ. ಈ ಸೌಕರ್ಯದ ಕೊರತೆಯಿಂದ ಇವಿ ಕೊಳ್ಳುಗರು ಮನಸು ಬದಲಿಸಿ ಪೆಟ್ರೋಲ್/ಡೀಸೇಲ್ ಗಾಡಿಗಳ ಮೊರೆಹೋಗುತ್ತಿದ್ದಾರೆ.
ಬೆಲೆಯ ಸಮಸ್ಯೆ: ಎಷ್ಟೇ ಹೊಸ ಕಾರುಗಳು ಮಾರುಕಟ್ಟೆಗೆ ಬಂದರೂ, ಇವಿಗಳ ಬೆಲೆ ಪೆಟ್ರೋಲ್/ಡೀಸೇಲ್ ಕಾರುಗಳಿಗಿಂತ ತುಸು ಹೆಚ್ಚು. ಇದು ಇವಿ ಕೊಳ್ಳುಗರ ಮತ್ತೊಂದು ದೂರು. ಭಾರತದಲ್ಲಿ ಹಲವಾರು ಕಾರು ಕೊಳ್ಳುಗರು ಕಾರಿನ ಬೆಲೆ ನೋಡಿ ಕೊಳ್ಳುವ ನಿರ್ಧಾರ ಮಾಡುವುದುಂಟು. ಇವಿ ಮತ್ತು ಪೆಟ್ರೋಲ್/ಡೀಸೇಲ್ ಕಾರುಗಳ ನಡುವಿರುವ ಬೆಲೆ ವ್ಯತ್ಯಾಸ, ಇವಿ ಕೊಳ್ಳುವಿಕೆಯಿಂದ ದೂರವಿರಿಸಿದೆ.
ಚಾರ್ಜಿಂಗ್ ಹಾಕದಂತಿರುವ ಅಡೆತಡೆ: ಹಲವು ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡ, ವಸತಿ ವಠಾರಗಳಲ್ಲಿ ಇವಿಗಳನ್ನು ಚಾರ್ಜಿಂಗ್ ಹಾಕಲು ಬಿಡುತ್ತಿಲ್ಲ. ಬೆಂಕಿ ಅವಘಡ, ಶಾರ್ಟ್ ಸರ್ಕ್ಯೂಟ್ ಮುಂತಾದ ಸಮಸ್ಯೆಗಳ ಕಾರಣವೊಡ್ಡಿ ನಗರಗಳ ಬಹುಮಹಡಿ ಕಟ್ಟಡ, ಕಚೇರಿಗಳಲ್ಲಿ ಚಾರ್ಜಿಂಗ್ ಹಾಕಲು ಅನುಮತಿ ನೀಡದ ಕಾರಣ, ಜನ ತಮ್ಮ ಇವಿಗಳನ್ನು ಚಾರ್ಜಿಂಗ್ ಸ್ಟೇಶನ್ಗಳಲ್ಲಿ ನಿಲ್ಲಿಸುವ ಪರಿಸ್ತಿತಿ ಇದೆ. ಇದಕ್ಕೆ ಬೇಸತ್ತು ,ಕೆಲವರು ಇವಿಗಳನ್ನು ಕೊಳ್ಳದೇ ಇರುವುದು ವಾಸಿ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಹರವಿನ ವ್ಯತ್ಯಾಸ: ಕಾರು ತಯಾರಕರು ನೀಡುವ ಹರವಿಗೂ , ನಿಜವಾಗಿ ಓಡಿಸಿದಾಗ ಕಂಡುಬರುವ ಹರವಿಗೂ ಬಹಳ ದೊಡ್ಡ ಅಂತರ ಕಂಡುಬರುತ್ತಿದೆ. ಕೆಲವು ಕಾರು ತಯಾರಕರು 300-320ಕಿಮೀ ಹರವು ಎಂದು ಹೇಳಿಕೊಂಡಿರುತ್ತಾರೆ, ತಮ್ಮ ಕಾರಿನ ಕೈಪಿಡಿಯಲ್ಲಿ ಮೂಡಿಸಿರುತ್ತಾರೆ. ಆದರೆ ಗಾಡಿಯನ್ನು ಓಡಿಸಿದಾಗ, ಹರವಿನಲ್ಲಿ 60-80 ಕಿಮೀ ಕಡಿತವಾಗಿರುವುದು ಕಂಡುಬರುತ್ತದೆ. ಇದರಿಂದ ಇವಿ ಕೊಳ್ಳಬೇಕೆಂದಿರುವ ಹಲವರಿಗೆ ಗೊಂದಲಗಳು ಮೂಡುತ್ತಿವೆ.
ಮರುಮಾರಾಟದ ಬೆಲೆ: ಬೆಲೆಯ ವಿಷಯಕ್ಕೆ ಬಂದರೆ, ಭಾರತದಲ್ಲಿ ಹಲವರು ತಮ್ಮ ಹಳೆಯ ಕಾರುಗಳನ್ನು ಮಾರಿ ಹೊಸ ಕಾರುಗಳನ್ನು ಕೊಳ್ಳುವ ವಾಡಿಕೆಯವರು. ಆಗ ಇಂತಹ ಕೊಳ್ಳುಗರು ತಾವು ಕೊಂಡ ಕಾರು ಮುಂದಿನ ಕೆಲವು ವರ್ಷಗಳಲ್ಲಿ ಮಾರಬೇಕಾಗಿ ಬಂದಾಗ, ಮರುಮಾರಾಟಕ್ಕೆ ಎಷ್ಟು ಬೆಲೆ ಬರಬಹುದೆಂದು ಲೆಕ್ಕಾಚಾರ ಮಾಡಿಯೇ ಹೊಸ ಗಾಡಿ ಕೊಳ್ಳುವ ತೀರ್ಮಾನ ಮಾಡಿರುತ್ತಾರೆ.ಇವಿ ವಿಷಯದಲ್ಲಿ, ಮರುಮಾರಾಟದ ಬೆಲೆ ಹೆಚ್ಚು ಹೇಳಿಕೊಳ್ಳುವಂತಿಲ್ಲ. ಇವಿ ತಯಾರಕರು, ಬ್ಯಾಟರಿಗೆ 8-10 ವರ್ಷಗಳ ವಾರಂಟಿ ನೀಡಿದರೂ ಬ್ಯಾಟರಿಗಳು ಬೇಗನೆ ಸವೆದು,ಹೆಚ್ಚು ವರ್ಷ ಬಾಳಿಕೆ ಬರುವಿದಿಲ್ಲ ಎಂಬ ತಿಳುವಳಿಕೆ ಜನರಲ್ಲಿ ಮಾಡಿದೆ. ಮುಂದೊಮ್ಮೆ ಬ್ಯಾಟರಿಯನ್ನು ಬದಲಾಯಿಸುವ ಪರಿಸ್ತಿತಿ ಬಂದರೆ, ಬ್ಯಾಟರಿ ಬದಲಾಯಿಸುವ ಬೆಲೆಯ ಹೊರೆ ಹೆಚ್ಚಲಿದೆ ಎಂದು ಮರುಮಾರಾಟಗೊಳ್ಳುವ ಇವಿಗಳಿಗೆ ಬೇಡಿಕೆ ಇಲ್ಲವೇ ಇಲ್ಲ ಎನ್ನಬಹುದು. ಬ್ಯಾಟರಿಗಳ ಕುರಿತಾಗಿ ಇನ್ನೊಂದು ಪ್ರಮುಖ ಅಂಶವೆಂದರೆ, 8-10 ವರ್ಷಗಳ ನಂತರ ಈ ಗಾಡಿಗಳ ಬ್ಯಾಟರಿಗಳನ್ನು ಬದಲಿಸಬೇಕೆ ಇಲ್ಲವೇ ಎಂಬ ಬಗ್ಗೆ ಅನುಮಾನಗಳಿವೆ. ಒಂದೊಮ್ಮೆ ಬ್ಯಾಟರಿ ಬದಲಿಸುವ ಸಂದರ್ಭ ಬಂದಾಗ ಗಾಡಿಯ 40-50% ಹಣ ಬ್ಯಾಟರಿ ಮೇಲೆ ಸುರಿಯಬೇಕು. ಇದಕ್ಕೆ ಇವಿ ಕೊಳ್ಳುವ ಮುಂಚೆ, ಖರೀದಿಸಲು ಹತ್ತಾರು ಬಾರಿ ಯೋಚನೆ ಮಾಡುವಂತಾಗಿದೆ.
ಮಾರಾಟದ ನಂತರ ನೆರವು ಮತ್ತು ಬೆಂಬಲದ ಕೊರತೆ: ಇವಿಗಳಲ್ಲಿ ಹಲವು ಹೊಸ ಕಾರುಗಳು ಬಂದರೂ, ಕಾರು ತಯಾರಕರ ಕಡೆಯಿಂದ ಮಾರಾಟದ ನಂತರ ಗುಣಮಟ್ಟದ ನೆರವು ಮತ್ತು ಬೆಂಬಲ ಸಿಗುತ್ತಿಲ್ಲ. ಕೆಲವು ಗಾಡಿಗಳ ತಯಾರಕರ ಒಳ್ಳೆಯ ನೆರವಿನ ಜಾಲವನ್ನು ಹೊಂದಿಲ್ಲ, ಒಂದು ಪಕ್ಷ ಹೊಂದಿದ್ದರೂ ಅವರಲ್ಲಿ ನುರಿತ ಸಿಬ್ಬಂದಿಯ ಕೊರತೆಯಿದೆ. ಇವಿಗಳನ್ನು ಸರ್ವೀಸ್ ಮಾಡಿ, ರೀಪೆರ್ ಮಾಡುವ ನುರಿತ ತಂತ್ರಜ್ಞರು ಸಿಗುತ್ತಿಲ್ಲ. ಇದರಿಂದ ಇವಿ ಮಾಲೀಕರು ಸರಿಯಾಗಿ ತಮ್ಮ ಕಾರುಗಳ ಸರ್ವೀಸ್ ಮಾಡುತ್ತಿಲ್ಲ, ಹಲವು ದಿನಗಳವರೆಗೂ ಕಾರು ಸರ್ವೀಸ್ ಮಾಡಿ ಮರಳಿಸುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ. ಇದು , ಇವಿ ಕೊಳ್ಳಬಯಸುವವರನ್ನು ಚಿಂತೆಗೀಡು ಮಾಡಿದೆ. ಇದು ಅಲ್ಲದೇ, ಕೆಲವು ಗಾಡಿ ಮಾಲೀಕರು ತಾವು ಕೊಂಡ ಗಾಡಿಗಳನ್ನು ತಮಗಿಷ್ಟದ ರೀತಿಯಾಗಿ ಚಿಕ್ಕ-ಪುಟ್ಟ ಮಾರ್ಪಾಡು ಮಾಡುವ ಹವ್ಯಾಸಿಗಳಾಗಿರುತ್ತಾರೆ. ಇಂತವರು ಒಂದು ಚಿಕ್ಕ ಪುಟ್ಟ ದೀಪದ ಬಲ್ಬ್ ಬದಲಿಸಿದರೂ, ಹೊಸದಾಗಿ ಇಲೆಕ್ಟ್ರಾನಿಕ್ ಕ್ಯಾಮೆರಾಗಳನ್ನು ಅಳವಡಿಸಿಕೊಂಡರೂ ವಾರಂಟಿ ಮೀರುತ್ತದೆಂದು ಇವಿ ತಯಾರಕರು ಕಟ್ಟಳೆ ಹೇರಿರುವುದು, ಕಿರಿಕಿರಿಯಾಗಿದೆ.
ಗಾಲಿಗಳುಳ್ಳ ಕಂಪ್ಯೂಟರ್: ಹೆಚ್ಚುತ್ತಿರುವ ತಂತ್ರಜ್ಞಾನ, ADAS ನಂತ ವಿಶೇಷತೆ ಹೆಚ್ಚಳದಿಂದ, ಟೆಕ್-ಸ್ಯಾವಿಯಿಲ್ಲದ ಜನತೆ ಇವಿಗಳನ್ನು, ಗಾಲಿಗಳನ್ನು ಹೊಂದಿರುವ ಕಂಪ್ಯೂಟರ್ಗಳೆಂದು ನೋಡುತ್ತಿದ್ದಾರೆ. ತಂತ್ರಜ್ಞಾನ ಅರಿವಿಲ್ಲದ ಜನತೆ ಇವಿಗಳು ನಮಗಲ್ಲ ಎನ್ನುವ ಭಾವನೆಗೆ ಬಂದಂತಿದೆ, ಇದು ಕೂಡ ಇವಿ ಕೊಳ್ಳುವಿಕೆಗೆ ಹಿನ್ನಡೆಯೊಡ್ಡಿದೆ.
ಮುಂದಿನ ಬರಹದಲ್ಲಿ ಈ ಎಲ್ಲ ಸಮಸ್ಯೆಗಳಿರುವ ಪರಿಹಾರಗಳತ್ತ ನೋಟ ಹರಿಸೋಣ.
ತಿಟ್ಟ ಸೆಲೆ: elecvulum.com
