ಬಿಎಮ್ಡಬ್ಲ್ಯೂ (BMW) ಕಾರು ತಯಾರಕ ಕೂಟವಾಗಿ ಹೆಸರು ಮಾಡುವ ಮೊದಲೇ ಇಗ್ಗಾಲಿ ಬಂಡಿ (ಬೈಕ್) ತಯಾರಿಕೆಯಲ್ಲಿ ಹೆಸರುವಾಸಿ ಕೂಟವಾಗಿತ್ತು. ಇಂದಿಗೂ ಬಿಎಮ್ಡಬ್ಲ್ಯೂ ಬೈಕ್ಗಳಿಗೆ ಭಾರೀ ಬೇಡಿಕೆ. ಬೈಕ್ ತಯಾರಿಕೆಯಲ್ಲಿ ಹಲವಾರು ವರುಶಗಳ ಇತಿಹಾಸ ಹೊಂದಿರುವ ಬಿಎಮ್ಡಬ್ಲ್ಯೂ, ಬೈಕ್ ಓಡಿಸುವ ಹವ್ಯಾಸಿಗರಿಗೆ ಬಲು ಅಚ್ಚುಮೆಚ್ಚು. 2016ರ ವರುಶ ಬಿಎಮ್ಡಬ್ಲ್ಯೂ ಕೂಟಕ್ಕೆ ನೂರನೇ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಇದನ್ನು ಆಚರಿಸಲೆಂದೇ ಬಿಎಮ್ಡಬ್ಲ್ಯೂ ಕೂಟ, ಹೊಸದೊಂದು ಇಗ್ಗಾಲಿ ಬಂಡಿಯ ಹೊಳಹನ್ನು (Concept) ಮುಂದಿಟ್ಟಿತ್ತು. ಬಿಎಮ್ಡಬ್ಲ್ಯೂರವರ ಈ ಹೊಸ ಹೊಳಹಿನ ಇಗ್ಗಾಲಿ ಬಂಡಿಯ ಬಗ್ಗೆ ತಿಳಿಯೋಣ ಬನ್ನಿ.
ಈಗ ಎಲ್ಲವೂ ಚೂಟಿ ಎಣಿಗಳ (Smart Devices) ಕಾಲ. ನಮ್ಮ ಮೊಬೈಲ್, ಎಣ್ಣುಕ (Computer), ಅಲ್ಲದೇ ಮುಂದೊಮ್ಮೆ ಇಂಟರ್ನೆಟ್ ಆಫ್ ತಿಂಗ್ಸ್ (Internet of Things) ಮೂಲಕ ನಾವು ಬಳಸುವ ಹೆಚ್ಚಿನ ವಸ್ತುಗಳು ಚೂಟಿಯಾಗಿರಲಿವೆ. ಬಿಎಮ್ಡಬ್ಲ್ಯೂ ಇದೀಗ ತನ್ನ ಬೈಕ್ಗಳನ್ನು ಚೂಟಿಯಾಗಿಸುವತ್ತ ಸಾಗಿದೆ. ಬಿಎಮ್ಡಬ್ಲ್ಯೂ ಮೋಟರ್ರಾಡ್ ಕೂಟದ ವಿಷನ್ ನೆಕ್ಸ್ಟ್ 100 (Vision Next 100) ಹೆಸರಿನ ಈ ವಿಶೇಷ ಬೈಕ್ ಓಡಿಸುಗರಿಗೆ ಬೇರೆಯದೇ ಆದ ಅನುಭವ ನೀಡಲಿದೆ. ಈ ಇಗ್ಗಾಲಿ ಬಂಡಿ ಸೆಲ್ಫ್ ಬ್ಯಾಲನ್ಸಿಂಗ್ (Self Balancing bike) ಎಂಬ ಏರ್ಪಾಟನ್ನು ಹೊಂದುವ ಮೂಲಕ ಪೂರ್ತಿಯಾಗಿ ತನ್ನಿಡಿತದಲ್ಲಿರಲಿದೆ. ಹೊಸಬರೂ ಕೂಡ ಈ ಬಂಡಿಯನ್ನು ಸಲೀಸಾಗಿ ಓಡಿಸಿಕೊಂಡು ಹೋಗುವಂತೆ ಅಣಿಗೊಳಿಸುತ್ತಿದ್ದಾರಂತೆ ಬಿಎಮ್ಡಬ್ಲ್ಯೂ ಬಿಣಿಯರಿಗರು(Engineers). ಇದರ ಇನ್ನೊಂದು ಪ್ರಮುಖ ವಿಶೇಷತೆಯೆಂದರೆ ಈ ಇಗ್ಗಾಲಿ ಬಂಡಿ ಓಡಿಸುಗನಿಗೆ ಯಾವುದೇ ಅಡೆತಡೆಯಾಗದಂತೆ ಸುಲಭವಾಗಿ ಕಾಪಾಡಬಲ್ಲುದು. ಹಾಗಾಗಿ ಓಡಿಸುಗರು ತಲೆಗಾಪು (Helmet) ತೊಟ್ಟುಕೊಳ್ಳುವುದು ಬೇಕಿಲ್ಲ.
ಹೊಸ ಓಡಿಸುಗರಿಗೆ ಇದೊಂದು ವರವಾದರೆ, ಅನುಭವಿ ಓಡಿಸುಗರಿಗೆ ಇದು ಹೆಚ್ಚಿನ ನೆರವು ನೀಡಲಿದೆಯಂತೆ. ಈ ಬೈಕ್ನೊಂದಿಗೆ ವೈಸರ್ (Visor) ಎಂಬ ಕನ್ನಡಕವನ್ನು ಓಡಿಸುಗರು ಧರಿಸಬೇಕಾಗುತ್ತದೆ. ಈ ವೈಸರ್ ಕನ್ನಡಕ ಸುತ್ತಮುತ್ತಲಿನ ಸ್ಥಿತಿಗತಿ ಬಗ್ಗೆ, ದಾರಿಯ ಬಗ್ಗೆ ಓಡಿಸುಗನಿಗೆ ಮಾಹಿತಿ ಕಳಿಸುತ್ತಿರುತ್ತದೆ. ಇದಕ್ಕೆ ತಕ್ಕಂತೆ ಓಡಿಸುಗರು ಬದಲಾವಣೆ ಮಾಡಿಕೊಂಡು ಬಂಡಿ ಓಡಿಸಿಕೊಂಡು ಹೋಗಬಹುದು. ಓಡಿಸುಗನ ಕಣ್ಣಾಡಿಸುವಿಕೆಯ ಮೂಲಕವೇ ಈ ವೈಸರ್ ಕನ್ನಡಕ ಬಂಡಿಗೆ ಮಾಹಿತಿ ಹಂಚಿಕೊಳ್ಳಲಿದೆ. ಇದಲ್ಲದೇ ಓಡಿಸುಗನ ಬಗೆ (Rider’s Style) ಅರಿಯಬಲ್ಲ ಚಳಕ(technology) ಈ ಇಗ್ಗಾಲಿ ಬಂಡಿ ಹೊಂದಿದ್ದು ಅದಕ್ಕೆ ತಕ್ಕಂತೆ ಸಾಗಬಲ್ಲದಾಗಿದೆ. ಗೂಗಲ್, ಟೆಸ್ಲಾ ಕೂಟದವರು ಬೆಳೆಸುತ್ತಿರುವ ತಂತಾನೇ ಸಾಗಬಲ್ಲ ಕಾರುಗಳಲ್ಲಿರುವ ಚಳಕಗಳಿಗೆ ಈ ಇಗ್ಗಾಲಿ ಬಂಡಿಯ ಚಳಕ ಸರಿಸಾಟಿಯಾಗಿ ನಿಲ್ಲಬಲ್ಲದು.
ಬಿಎಮ್ಡಬ್ಲ್ಯೂ ಮುಂದಾಳುಗಳಲ್ಲೊಬ್ಬರಾದ ಹೋಲ್ಗರ್ ಹಾಂಪ್ (Holger Hampf) ಹೇಳುವಂತೆ,”ವಿಷನ್ ನೆಕ್ಸ್ಟ್ 100 ಬಂಡಿಯ, ಮಾಡುಗೆಯ ಜಾಣ್ಮೆಯು (Artificial Intelligence) ತನ್ನ ಸುತ್ತಲಿನ ಬಗ್ಗೆ, ಹೆಚ್ಚು ಹರವಿನ ಮಾಹಿತಿ ಪಡೆಯಬಲ್ಲದಾಗಿದ್ದು, ಬಂಡಿಯ ಮುಂದೆ ಕಾಣಲಿರುವ ದಾರಿಯ ಬಗ್ಗೆ ಕರಾರುವಕ್ಕಾದ ವಿವರ ಓಡಿಸುಗನ ಮುಂದಿಡಲಿದೆ.” ಸಾಮಾನ್ಯವಾಗಿ ಬಂಡಿಗಳನ್ನು ತಿರುಗಿಸುವಾಗ ಬಂಡಿಯ ವೇಗವನ್ನು ಕಡಿಮೆಗೊಳಿಸಿ ಅದರ ಹಿಡಿಕೆಯನ್ನು(Handle bar) ಸಂಪೂರ್ಣವಾಗಿ ವಾಲಿಸಿಕೊಳ್ಳುತ್ತ ಬಂಡಿಯ ಅಡಿಗಟ್ಟು (Chassis frame) ಪೂರ್ತಿಯಾಗಿ ತಿರುಗುವಂತೆ ಮಾಡಬೇಕಾಗುತ್ತದೆ. ಹೆಚ್ಚಿನ ವೇಗದಿಂದ ಬಂಡಿಯನ್ನು ತಿರುಗಿಸಬೇಕೆಂದಾಗ ಬಂಡಿಯ ಮೇಲಿನ ಹಿಡಿತ ತಪ್ಪಿ ಬಂಡಿ ಬೇರೆಡೆಗೆ ವಾಲುವ ಸಾಧ್ಯತೆ ಹೆಚ್ಚು. ಆದರೆ ಬಿಎಮ್ಡಬ್ಲ್ಯೂ ಕೂಟದವರ ಹೊಳಹಿನ ಬೈಕ್, “ಫ್ಲೆಕ್ಸ್ ಫ್ರೇಮ್” (Flex Frame) ಚಳಕವನ್ನು ಅಳವಡಿಸಿಕೊಂಡಿದ್ದು ವೇಗದಿಂದ ಬೈಕ್ ತಿರುಗಿಸಿದಾಗಲೂ ಸಲೀಸಾಗಿ ಮುನ್ನುಗ್ಗಲಿದೆ. ಈ ಚಳಕದ ನೆರವಿನಿಂದ, ಬಂಡಿ ಓಡಿಸುಗರು 100 ಮೈಲಿ ಪ್ರತಿ ಗಂಟೆ ವೇಗದಲ್ಲೂ ಯಾವುದೇ ಅಳುಕಿಲ್ಲದೆ ಬಂಡಿಯನ್ನು ಸರ್ರನೆ ತಿರುಗಿಸಿ ಕೊಂಡೊಯ್ಯಬಹುದೆಂಬುದು ಕೂಟದವರ ಅಂಬೋಣ.
” ನಮ್ಮ ಬೈಕುಗಳು, ಹತ್ತಾರು ವರುಶಗಳ ಮುಂದಿರುವ ಸಮಸ್ಯೆಗಳನ್ನು ನೀಗಿಸಬಲ್ಲ ಈಡುಗಾರಿಕೆ (Design) ಹೊಂದಿರುತ್ತವೆ. ಈ ಹೊಸ ಹೊಳಹಿನ ಬಂಡಿಯಲ್ಲಿ ಅಡೆತಡೆಯಿಲ್ಲದ ಓಡಾಟದ ಅನುಭವ ನಿಮ್ಮದಾಗಿರಲಿದೆ, ತಲೆಗಾಪಿನಂತ ಯಾವುದೇ ಕಾಪಿನ ಎಣಿಗಳು (Safety Devices) ನಿಮಗೆ ಬೇಕಿಲ್ಲ “, ಎಂಬುದು ಬಿಎಮ್ಡಬ್ಲ್ಯೂ ಈಡುಗಾರಿಕೆಯ ಮುಂದಾಳು ಎಡ್ಗಾರ್ ಹೆನ್ರಿಶ್ (Edgar Heinrich) ಅನಿಸಿಕೆ. 2030-40ರ ಹೊತ್ತಿಗೆ ಈ ಹೊಳಹನ್ನು ದಿಟವಾಗಿಸುವತ್ತ ಬಿಎಮ್ಡಬ್ಲ್ಯೂ ಕೂಟ ಹೆಜ್ಜೆ ಇಡುತ್ತಿದೆ. ಅಲ್ಲಿಯವರೆಗೆ ಈ ವಿಶೇಷ ಬೈಕ್ಗಾಗಿ ಕಾಯಲೇಬೇಕು.
(** ಬಿಎಮ್ಡಬ್ಲ್ಯೂ ಮೋಟರ್ರಾಡ್ ಎಂಬುದು ಬಿಎಮ್ಡಬ್ಲ್ಯೂ ಬೈಕ್ ಕೂಟದ ಹೆಸರು)
ಮಾಹಿತಿ ಮತ್ತು ತಿಟ್ಟ ಸೆಲೆ: bmw-motorrad