ಎಬಿಎಸ್(ABS) ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ

ಇಂದಿನ ಬಹುತೇಕ ಎಲ್ಲ ನಾಲ್ಗಾಲಿ ಗಾಡಿಗಳಲ್ಲಿ ಎಬಿಎಸ್ ಎಂಬ ಕಾಪಿನ(Safety) ಏರ್ಪಾಡು ಕಾಣಸಿಗುತ್ತದೆ. ಕಾರು ಬಂಡಿಗಳಲ್ಲಿ ಕಾಣಸಿಗುವ ಬಲುಮುಖ್ಯ ಕಾಪಿನ ಏರ್ಪಾಡು ಎಬಿಎಸ್. ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್(Anti-Lock Braking System) ಇದರ ಚಿಕ್ಕ ರೂಪವೇ ಎಬಿಎಸ್ ಎಂಬ ಹೆಸರು ಪಡೆದಿದೆ. ಈ ಏರ್ಪಾಡು ಹೇಗೆ ಕೆಲಸ ಮಾಡುತ್ತದೆ ನೋಡುವ ಬನ್ನಿ.

ಸಾಮಾನ್ಯವಾಗಿ ಗಾಡಿ ಓಡಿಸುವಾಗ ಎದುರಿಗೆ ಅಡೆತಡೆ ಬಂದಾಗ, ಓಡಿಸುಗ ಬ್ರೇಕ್ ತುಳಿಗೆಯನ್ನು (Pedal) ತುಳಿಯುತ್ತಾನೆ. ಇದರಿಂದ ಗಾಲಿಗಳ ಮೇಲೆ, ತಡೆತದ ಏರ್ಪಾಟಿನ ಭಾಗವಾಗಿರುವ ಸಿಲಿಂಡರ್‌ಗಳು ಒತ್ತಡ ಹಾಕಿ ಗಾಲಿಗಳು ಚಲಿಸಿದಂತೆ ಅವುಗಳನ್ನು ಬಿಗಿ ಹಿಡಿಯುತ್ತವೆ. ಇದು ಗಾಲಿಗಳನ್ನು ಹಿಂದೆ ಮುಂದೆ ಅಲ್ಲಾಡದಂತೆ ಸರ್ರನೆ ಲಾಕ್ ಮಾಡಿದಂತೆ.  ಈ ರೀತಿ ಮಾಡಿದಾಗ ತಿಗುರಿ(Steering) ಹಿಡಿತ ತಪ್ಪಿ ಗಾಡಿಯೂ ಅಕ್ಕ ಪಕ್ಕಕ್ಕೆ ಜಾರಿ ಅವಘಡ ಉಂಟಾಗುವುದು. ಎಬಿಎಸ್ ಹೊಂದಿರದ ಹಲವಾರು ಕಾರುಗಳು, ದಿಢೀರ್ ಬ್ರೇಕ್ ಹಾಕಿದಾಗ ಗಾಲಿಗಳು ಕೂಡಲೇ ಲಾಕ್‍ಆಗಿ, ತಿಗುರಿ ಹಿಡಿತ ತಪ್ಪಿ ಅಕ್ಕ ಪಕ್ಕ ಚಲಿಸಿ ಅಪಘಾತಕ್ಕೆ ಗುರಿಯಾಗಿದ್ದುಂಟು.

ಎಬಿಎಸ್ ಏರ್ಪಾಟಿನ ಕಾರಿನಲ್ಲಿ ಒಂದು ಗಣಕ(Control Unit), ಪ್ರತಿಯೊಂದು ಗಾಲಿಯು ವೇಗದ ಅರಿವಿಕ(Wheel Speed Sensor) ಹೊಂದಿರುತ್ತವೆ. ಓಡಿಸುಗ ಮುಂದಿರುವ ಅಡೆತಡೆ ಅರಿತು ಬ್ರೇಕ್ ತುಳಿದಾಗ, ಏರ್ಪಾಟಿನ ಗಣಕ ಗಾಲಿಗಳ ವೇಗವನ್ನು ತಿಳಿದುಕೊಳ್ಳುತ್ತದೆ. ಯಾವುದಾದರೂ ಒಂದು ಗಾಲಿ ಇನ್ನೊಂದು ಗಾಲಿಗಿಂತ ಹೆಚ್ಚು ವೇಗವಾಗಿ ತಿರುಗುತ್ತಿದ್ದರೆ, ಗಣಕವೂ ವೇಗವಾಗಿ ತಿರುಗುತ್ತಿರುವ ಗಾಲಿಯ ವೇಗವನ್ನು ಹಿಡಿತದಲ್ಲಿರುವಂತೆ ತಡೆತದ ಕೀಲೆಣ್ಣೆಯ(Brake Fluid) ಒತ್ತಡವನ್ನು ಕಡಿಮೆ ಮಾಡಿ, ಇತರೆ ಗಾಲಿಗಳ ಮಟ್ಟದಲ್ಲಿರುವಂತೆ ಮಾಡುತ್ತದೆ. ಇದರಿಂದ ಗಾಲಿಯೂ ಲಾಕ್ ಆಗದಂತೆ ತಡೆಯುತ್ತದೆ. ಗಾಲಿಯು ಮತ್ತೆ ಹಿಡಿತ ಕಂಡುಕೊಂಡಾಗ ಅಗತ್ಯ ಮಟ್ಟದ ಒತ್ತಡವನ್ನು ನೀಡಿ ಗಾಡಿ ಓಡಿಸುಗ ತಿಗುರಿ ಮೇಲಿನ ಹಿಡಿತ ತಪ್ಪದಂತೆ, ಸರಿಯಾಗಿ ಗಾಡಿ ತೆರಳುವಂತೆ ನೋಡಿಕೊಳ್ಳುತ್ತದೆ. ಈ ರೀತಿಯ ಒಂದು ಸುತ್ತು ಬ್ರೇಕಿಂಗ್ ಸಂದರ್ಭಗಳಲ್ಲಿ ಸೆಕೆಂಡ್‌ಗೆ ಹಲವಾರು ಬಾರಿ ನಡೆಯುತ್ತಿರುತ್ತದೆ. ಕಾರಿನ ಯಾವ ಗಾಲಿಯೂ ಲಾಕ್ ಆಗದಂತೆ ಒತ್ತಡ ಕಡಿಮೆ ಮಾಡುವುದು- ಹಿಡಿತಕ್ಕೆ ಬಂದಾಗ ಸರಿಯಾದ ಒತ್ತಡ ಕಾದುಕೊಳ್ಳುವುದು.  ಇದರಿಂದ ತುರ್ತು ಸಂದರ್ಭಗಳಲ್ಲಿ ಓಡಿಸುಗ ಬೆದರದೇ ತಿಗುರಿಯನ್ನು ಮುಂದಿರುವ ಅಡೆತಡೆಯನ್ನು ತಪ್ಪಿಸಿ, ತಿರುಗಿಸಿಕೊಂಡು ಅಪಾಯದಿಂದ ಪಾರಾಗಬಹುದು. ಎಬಿಎಸ್ ಏರ್ಪಾಟಿನ ಪ್ರಮುಖ ಅನುಕೂಲಗಳನ್ನು ಪಟ್ಟಿ ಮಾಡುವುದಾದರೆ, ಅವು ಹೀಗಿವೆ

  1. ಗಾಡಿಯ ಗಾಲಿಗಳು ಲಾಕ್ ಆಗಿ ಅತ್ತಿತ್ತ ಜಾರದಂತೆ ನೋಡಿಕೊಳ್ಳುವುದು ಮತ್ತು ಗಾಡಿಯು ತನ್ನ ತಿಗುರಿಯ ಹಿಡಿತ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು
  2. ಓಡಿಸುಗನ ಬ್ರೇಕ್ ಹಾಕಿದಾಗ ಸುಲಭವಾಗಿ ಗಾಡಿ ಮುಂದೆ ಗುದ್ದುವಿಕೆಯಾಗದಂತೆ ತನ್ನಿಷ್ಟದ ಕಡೆ ತಿರುಗಿಸಲು ಸಹಾಯ ಮಾಡುತ್ತದೆ
  3. ಬ್ರೇಕ್ ಹಾಕಿದಾಗ ಗಾಡಿಯು ಮುಂದಿನ ಅಡೆತಡೆಗಿಂತ ದೂರದಲ್ಲಿ ನಿಲ್ಲುವಂತೆ ಮಾಡುವುದು.

ಎಬಿಎಸ್ ಏರ್ಪಾಡು ಕೆಲಸ ಮಾಡುವ ಬಗೆಯನ್ನು ಕೆಳಗಿನ ತಿಟ್ಟದಲ್ಲಿ ನೋಡಿ ತಿಳಿಯಬಹುದು.

ಮೇಲಿನ ತಿಟ್ಟದಲ್ಲಿ ನೋಡಿದಾಗ, ಮೊದಲನೇಯದಾಗಿ ಎಬಿಎಸ್ ಹೊಂದಿರುವ ಕಾರು, ಓಡಿಸುಗ ಬ್ರೇಕ್ ಹಾಕಿದಾಗಲೂ ಗಾಲಿಗಳು ಲಾಕ್ ಆಗದಂತೆ ನೋಡಿಕೊಂಡು ಸರಾಗವಾಗಿ ಗಾಡಿಯು ಅಡೆತಡೆ ತಪ್ಪಿಸಿ ಸಾಗುವಂತೆ ಮಾಡುತ್ತದೆ. ಅದೇ ೨ನೇ ತಿಟ್ಟದಲ್ಲಿ ಕಾರಿನ ಗಾಲಿಗಳು ಲಾಕ್ ಆಗಿ ಓಡಿಸುಗ ಹತೋಟಿ ತಪ್ಪಿ ಮುಂದಿರುವ ಅಡೆತಡೆಗೆ ಗುದ್ದಿರುವುದನ್ನು ನೋಡಬಹುದು.

ತಿಟ್ಟ ಸೆಲೆ: spinny.com

 

ಕಾರಿನ ಮೈಲಿಯೋಟ ಹೆಚ್ಚಿಸುವುದು ಹೇಗೆ

ಜಯತೀರ್ಥ ನಾಡಗೌಡ.

ಜನರು ಲಕ್ಷಾಂತರ ಹಣ ಕೊಟ್ಟು ಹೊಸ ಗಾಡಿಗಳನ್ನು ಖರೀದಿಸುತ್ತಾರೆ. ಅಷ್ಟು ಹಣ ಕೊಟ್ಟು ಕೊಂಡ ಕಾರನ್ನು ಜೋಪಾನವಾಗಿ ಕಾಪಾಡಿಕೊಂಡು ಬಾಳಿಕೆ ಹೆಚ್ಚಿಸುವುದು ಕೊಳ್ಳುಗರ ಜವಾಬ್ದಾರಿ. ಹೊಸದಾಗಿ ಖರೀದಿಸಿದ ಗಾಡಿಗಳನ್ನು ಹೇಗೆ ಬಳಕೆ ಮಾಡಬೇಕು. ಬಂಡಿಯ ಮೈಲೇಜ್(ಮೈಲಿಯೋಟ) ಹೆಚ್ಚಿಸಿ ಅದು ಹೆಚ್ಚು ದಿನ ಬಾಳಿಕೆಯಾಗುವಂತೆ ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಅರಿಯೋಣ. ಓಡಿಸುಗರ ಹಾಗೂ ಅನುಭವಗಳಿಗೆ ತಕ್ಕಂತೆ ಇವು ಬದಲಾದರೂ ಕೆಳಗೆ ಪಟ್ಟಿ ಮಾಡಿದ ಕೆಲವು ವಿಷಯಗಳನ್ನು ಓಡಿಸುಗರು ಅಳವಡಿಸಿಕೊಂಡರೆ ಕಾರಿನ ಮೈಲಿಯೋಟ(Mileage) ಹೆಚ್ಚಿಸಿಕೊಂಡು ಹೆಚ್ಚು ದಿನ ಬಾಳಿಕೆ ಬರುವುದರಲ್ಲಿ ಎರಡು ಮಾತಿಲ್ಲ.

1.ಕಾರಿನ ಗಾಲಿ

ಬಂಡಿಯ ಗಾಲಿಗಳು ಬಲು ಮುಖ್ಯವಾದ ಭಾಗ. ಇವುಗಳಲ್ಲಿ ಕಡಿಮೆ ಗಾಳಿಯಿದ್ದರೆ ಹೆಚ್ಚಿನ ಪೆಟ್ರೋಲ್ ಇಲ್ಲವೇ ಡೀಸೇಲ್ ಬೇಕಾಗುತ್ತದೆ. ಉದಾಹರಣೆಗೆ ನಿಮ್ಮ ಬಂಡಿಯ ಗಾಲಿಗಳು ಪೂರ್ತಿ ಗಾಳಿಯಿಂದ ತುಂಬಿದಾಗ ಒಂದು ಲೀಟರ್‌ಗೆ 20ಕಿಮೀ ಓಡುತ್ತದೆ ಎಂದಾದರೆ, ಇದರಲ್ಲಿ ಅರ್ಧದಶ್ಟು ಗಾಳಿ ಕಡಿಮೆಯಾದಾಗ ಒಂದು ಲೀಟರ್ 15 ಇಲ್ಲವೇ 18 ಕಿಮೀಗೆ ಇಳಿಯಬಹುದು. ಇದರಿಂದ ಬಂಡಿಗೆ ಹೆಚ್ಚು ಉರುವಲು(Fuel) ಬೇಕಾಗುತ್ತದೆ.

ಇದನ್ನು ತಡೆಯಲು ಮೇಲಿಂದ ಮೇಲೆ ನಿಮ್ಮ ಗಾಲಿಗಳಲ್ಲಿರುವ ಗಾಳಿಯ ಮಟ್ಟವನ್ನು ತಿಳಿದುಕೊಂಡು ಗಾಳಿಯು ಕಡಿಮೆಯಿದ್ದಾಗ ನಿಮ್ಮ ಹತ್ತಿರದ ನೆರವುತಾಣಗಳಿಗೆ ಭೇಟಿಕೊಟ್ಟು ಗಾಲಿಗಳನ್ನು ಗಾಡಿ ತಯಾರಕರು ತಿಳಿಸಿದ ಒತ್ತಡದ ಮಟ್ಟಕ್ಕೆ ಪೂರ್ತಿಯಾಗಿ ತುಂಬಿಸಿಕೊಳ್ಳಿ. ಹೆಚ್ಚಿನ ಕಾರುಬಂಡಿಗಳ ಗಾಲಿಗಳು ರಬ್ಬರ್‌ನಿಂದ ತಯಾರಿಸಲ್ಪಟ್ಟಿರುತ್ತವೆ. ಹೀಗಾಗಿ ಇವುಗಳು ವಾತಾವರಣದ ಬಿಸುಪುನಲ್ಲಿ ಹೆಚ್ಚು ಕಡಿಮೆಯಾದಾಗ ಬದಲಾವಣೆ ಹೊಂದುತ್ತವೆ. ನಮ್ಮ ಇಂಡಿಯಾದಂತ ದೇಶದಲ್ಲಿ ಬೇಸಿಗೆಯಲ್ಲಿ ಕೆಲವು ಗಾಲಿಗಳು ಬಿಸುಪು ತಾಳದೇ ಒಡೆಯುವುದನ್ನು ನೀವು ನೋಡಿರಬಹುದು. ಇನ್ನೂ ಚಳಿಗಾಲದಲ್ಲಿ ಗಾಲಿಗಳು ಕುಗ್ಗುವುದನ್ನು ನಾವುಗಳು ನೋಡಿರುತ್ತೇವೆ. ಹೀಗಾಗಿ ತಕ್ಕ ಗುಣಮಟ್ಟದ ಒಳ್ಳೆಯ ಗಾಲಿಗಳನ್ನು ಬಳಸಿ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸಿದರೆ ಹೆಚ್ಚು ಉರುವಲು ಬೇಕಾಗದು ಮತ್ತು ಓಡಿಸುಗರ ಜೇಬಿಗೂ ಕತ್ತರಿ ಬೀಳದು. ಹೆಚ್ಚಿನ ಚಳಿ ಅನುಭವಿಸುವ ಅಮೇರಿಕಾ,ಕೆನಡಾ ಮತ್ತು ಯೂರೋಪ್ ಒಕ್ಕೂಟದ ನಾಡುಗಳಲ್ಲಿ ಚಳಿಗಾಲ ಮತ್ತು ಬೇಸಿಗೆಗೆ ತಕ್ಕಂತೆ ಬೇರೆ ಬೇರೆ ಗಾಲಿಗಳನ್ನು ಬಳಸುತ್ತಾರೆ. ಇದರಿಂದ ಗಾಲಿಗಳು ಹೆಚ್ಚು ಬಾಳಿಕೆ ಬರುವುದಲ್ಲದೇ ಉರುವಲಿನ ಅಳವುತನವೂ(Fuel Efficiency) ಹೆಚ್ಚುವಂತೆ ಮಾಡುತ್ತವೆ.

2.ಓಡಿಸುವ ವೇಗ:

ಬಂಡಿ ಓಡಿಸುವ ವೇಗ ಓಡಿಸುಗರು ಮುಖ್ಯವಾಗಿ ತಿಳಿದಿರಬೇಕಾದ ಸಂಗತಿ. ಕಡಿಮೆ ವೇಗದಲಿ ಹೆಚ್ಚಾಗಿ ಓಡಿಸುವದರಿಂದ ಅಳವುತನವೂ ಕಡಿತಗೊಳ್ಳುತ್ತದೆ. ಪದೇ ಪದೇ ಗೇರ್ ಬದಲಾಯಿಸಿ ಕಡಿಮೆ ವೇಗದ ಸಾಗಣಿಯಲ್ಲಿ(transmission) ಹೊರಟರೇ ಬಂಡಿ ಸಾಗಲು ಹೆಚ್ಚು ಸೆಳೆಬಲ(Torque) ತಗಲುತ್ತದೆ. ಇದರಿಂದ ಬಂಡಿಗೆ ಹೆಚ್ಚು ಉರುವಲು ಬೇಕಾಗುತ್ತದೆ ಮತ್ತು ಮೈಲಿಯೋಟ ಕಡಿತಗೊಳ್ಳುತ್ತದೆ.

ಬಹುತೇಕ ಕಾರುಗಳಲ್ಲಿ ಈಗ ಸುಯ್‌ಅಂಕೆ ಏರ್ಪಾಟು ಒದಗಿಸಿರುತ್ತಾರೆ, ಹೆದ್ದಾರಿಗಳಲ್ಲಿ ಸಾಗುವಾಗ ಸುಯ್ಅಂಕೆ(Cruise Control) ಬಳಕೆ ಮಾಡಿಕೊಳ್ಳಬಹುದು. ಹೆದ್ದಾರಿಗಳಲ್ಲಿ ಹೆಚ್ಚಿನ ವೇಗದಲ್ಲಿ ಸಾಗುವ ಅವಕಾಶವಿರುತ್ತದೆ. ಹಾಗಾಗಿ ಬಂಡಿಯನ್ನು ಒಂದು ವೇಗಕ್ಕೆ ಹೊಂದಿಸಿಕೊಂಡು ಸುಯ್ಅಂಕೆ ಏರ‍್ಪಾಟು ಬಳಸಿದರೆ ಉರುವಲಿನ ಬಳಕೆಯನ್ನು ತಕ್ಕಮಟ್ಟದಲ್ಲಿ ಹಿಡಿತದಲ್ಲಿಡಬಹುದು.

3.ಸೋಸುಕಗಳು:

ಸಾಮಾನ್ಯವಾಗಿ ಪ್ರತಿ ಗಾಡಿಯ ಬಿಣಿಗೆಯಲ್ಲಿ ಒಂದು ಗಾಳಿಯ ಸೋಸುಕ(Air Filter) ಮತ್ತು ಒಂದು ಉರುವಲು ಸೋಸುಕಗಳನ್ನು(Fuel Filter) ಜೋಡಿಸಲಾಗಿರುತ್ತದೆ. (ದೊಡ್ದ ಗಾಡಿಗಳಲ್ಲಿ 4-6 ಸೋಸುಕಗಳು ಇರುತ್ತವೆ). ಹೆಚ್ಚು ಓಡಾಟದಿಂದ ಬಂಡಿಯ ಸೋಸುಕಗಳಲ್ಲಿ ಹೆಚ್ಚು ಕಸ ಇತರೆ ಬೇಡದ ವಸ್ತುಗಳು ಸೋಸುಕದ ಹೊರಭಾಗಕ್ಕೆ ಮೆತ್ತಿಕೊಂಡಿರುತ್ತವೆ. ಇವುಗಳು ಹೆಚ್ಚಾದಂತೆ ಸೋಸುಕದ ಕೆಲಸಕ್ಕೆ ಅಡ್ಡಿಪಡಿಸಿ ಅವುಗಳು ಕೆಲಸ ಮಾಡದಂತೆ ನಿಲ್ಲಿಸುತ್ತವೆ. ಇದರಿಂದ ಬಿಣಿಗೆಯು ಬೇಗನೆ ಆರಂಭಗೊಳ್ಳುವುದಿಲ್ಲ. ಕೆಲವೊಮ್ಮೆ ಬಿಣಿಗೆಯಲ್ಲಿ ಕಸದಿಂದ ಕೂಡಿದ ಗಾಳಿ ಮತ್ತು ಉರುವಲು ಸೇರಿಕೊಂಡು ಬಿಣಿಗೆಯ ಆಡುಬೆಣೆ (Piston), ಕೂಡುಸಳಿಗಳಿಗೆ (Connecting Rod) ಕೆಡುಕುಂಟು ಮಾಡುತ್ತವೆ. ಇವೆಲ್ಲದರ ಪರಿಣಾಮವಾಗಿ ಬಂಡಿಯ ಅಳವುತನ ಕಡಿಮೆಯಾಗುವುದಲ್ಲದೇ ಮೈಲಿಯೋಟವು ಇಳಿಮುಖವಾಗುತ್ತದೆ. ಇದನ್ನು ತಡೆಯಲು ಆಗಾಗ ನಿಮ್ಮ ಬಂಡಿಯ ಸೋಸುಕಗಳನ್ನು ನೆರವು ತಾಣಗಳಿಗೆ ಭೇಟಿ ಇತ್ತು ಪರೀಕ್ಷೆ ಮಾಡಬೇಕು. ಹೆಚ್ಚು ಕಸದಿಂದ ಕೂಡಿರುವುದು ಕಂಡುಬಂದಲ್ಲಿ ಬದಲಾಯಿಸಿಕೊಳ್ಳಬೇಕು. ಇದು ಬಿಣಿಗೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ.

4.ಗಾಡಿಯ ತೂಕ:

ನೀವು ಓಡಾಡುವಾಗ ಬಂಡಿಯ ತೂಕ ತಕ್ಕಮಟ್ಟಿಗೆ ಹಗುರ ಇದ್ದಷ್ಟು ಒಳ್ಳೆಯದು. ಮೇಲಿಂದ ಮೇಲೆ ಬಹಳ ಭಾರ ಹೇರುವುದರಿಂದ ಗಾಡಿಗೆ ಹೆಚ್ಚು ಉರುವಲು ತಗಲುತ್ತದೆ. ಗಾಡಿಯಲ್ಲಿ ಬೇಕಿಲ್ಲದ ವಸ್ತುಗಳನ್ನು ನಿಮ್ಮ ಮನೆಯಲ್ಲೋ ಇಲ್ಲವೇ ಗ್ಯಾರೇಜ್‌ನಲ್ಲಿ ಇಡಬೇಕು. ಬೇಕೆನ್ನಿಸಿದಾಗ ಮಾತ್ರ ಈ ವಸ್ತುಗಳನ್ನು ಕಾರಿನಲ್ಲಿ ಕೊಂಡೊಯ್ಯುವುದು ಬಂಡಿಯ ಬಾಳಿಕೆಗೂ ಒಳ್ಳೆಯದು.

5. ಗಾಡಿಯ ಅರಿವಿಕಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದು ತಿಳಿಯಿರಿ:

ಇತ್ತಿಚೀನ ಬಹುಪಾಲು ಬಂಡಿಗಳಲ್ಲಿ ಹೆಚ್ಚಿನ ಅರಿವಿಕಗಳಿರುತ್ತವೆ. ಗಾಳಿ ಹರಿವಿನ ಅರಿವಿಕ (Air flow Sensor), ಕೆಡುಗಾಳಿ ಅರಿವಿಕ(Oxygen Sensor), ಬಿಣಿಗೆ ವೇಗದ ಅರಿವಿಕ(Engine Speed Sensor) ಹೀಗೆ ಹಲವು ಅರಿವಿಕಗಳಿರುತ್ತವೆ. ಇವುಗಳನ್ನು ಆಗಾಗ ಪರೀಕ್ಷಿಸುತ್ತಿರಬೇಕು ಇಲ್ಲವಾದಲ್ಲಿ ಬಿಣಿಗೆಯು ಹೆಚ್ಚು ಕೆಡುಗಾಳಿ ಉಗುಳಬಹುದು ಮತ್ತು ಅದನ್ನು ಹಿಡಿತದಲ್ಲಿಡಲು ಸಾಧ್ಯವಾಗದೇ ಇರಬಹುದು. ಹೆಚ್ಚು ಕೆಡುಗಾಳಿ ಉಗುಳುತ್ತ ಬಂಡಿಯು Emission Test ಪಾಸಾಗದೇ ಹೋದಲ್ಲಿ ಪೋಲೀಸರಿಗೆ ದಂಡ ತೆರುವ ಪರಿಸ್ಥಿತಿಯೂ ತಪ್ಪಿದ್ದಲ್ಲ. ಕೆಲವು ಅರಿವಿಕಗಳು ಕೆಲಸಮಾಡುವುದು ನಿಲ್ಲಿಸಿದಾಗ ಬಂಡಿ ಓಡಿಸುಗನಿಗೆ ತಿಳಿದಿರುವುದೇ ಇಲ್ಲ. ಹಾಗಾಗಿ ನೆರವು ತಾಣಗಳಲ್ಲಿ ಇವುಗಳನ್ನೊಮ್ಮೆ ಒರೆಗೆಹಚ್ಚುತ್ತಿರಬೇಕು.

6. ಏಸಿ ಬಳಕೆ ಎಚ್ಚರ:

ನಮ್ಮಲ್ಲಿ ಹಲವರು ಬಂಡಿ ಶುರು ಮಾಡಿ ಏರಿ ಕುಳಿತ ತಕ್ಷಣ ಏಸಿ (Air Conditioning System) ಗುಂಡಿ ಅದುಮುತ್ತಾರೆ. ಇದು ಬಿಣಿಗೆಗೆ ಹಾಗೂ ಗಾಳಿದೂಡುಕಗಳಿಗೆ(Turbocharger) ಕೆಡುಕುಂಟು ಮಾಡುತ್ತದೆ. ಬಂಡಿಯನ್ನು ಶುರು ಮಾಡಿದ ತಕ್ಷಣ ಗಾಳಿದೂಡುಕಗಳಿಗೆ ತಕ್ಕ ಮಟ್ಟಿನ ಗಾಳಿಯ ಹರಿವುಗೊಳ್ಳುವುದಿಲ್ಲ. ಈ ಹೊತ್ತಿನಲ್ಲಿ ಗಾಳಿದೂಡುಕ ನಿಧಾನವಾಗಿ ಗಾಳಿಯೆಳೆದುಕೊಳ್ಳುತ್ತಿರುತ್ತದೆ.  ಇಂತಹ ಹೊತ್ತಲ್ಲಿ ಏಸಿ ಗುಂಡಿ ಅದುಮಿದಾಗ ಬಿಣಿಗೆಗೆ ಮತ್ತು ಗಾಳಿದೂಡುಕದ (Turbocharger) ಕೆಲಸಕ್ಕೆ ಹೆಚ್ಚಿನ ಹೊರೆ ಬೀಳುತ್ತದೆ, ಪರಿಣಾಮ ಹೆಚ್ಚಿನ ಡಿಸೇಲ್/ಪೆಟ್ರೋಲ್ ಉರಿಯುವಂತೆ ಮಾಡುತ್ತದೆ. ಗಾಳಿದೂಡುಕ ಮತ್ತು ಬಿಣಿಗೆಯ ಬಾಳಿಕೆಯನ್ನು ಹೆಚ್ಚಾಗಿಸಲು ಬಂಡಿ ಶುರು ಮಾಡಿದ ಕೆಲವು ನಿಮಿಷಗಳ ಬಳಿಕ ಏಸಿ ಏರ‍್ಪಾಟಿನ ಗುಂಡಿ ಅದುಮಬೇಕು.

 ಗಾಡಿಯೂ ನಮ್ಮ ದೇಹವಿದ್ದಂತೆ, ದೇಹದ ಎಲ್ಲ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಿದರೆ ನಾವು ಆರೋಗ್ಯವಿರುತ್ತೇವೆ ಹಾಗೆಯೇ ಗಾಡಿಯ ಎಲ್ಲ ಏರ್ಪಾಟು ಬಿಡಿಭಾಗಗಳು ಸರಿಯಾಗಿ ಕೆಲಸ ಮಾಡಿದರೆ ಗಾಡಿಗಳು ಹೆಚ್ಚಿನ ಬಾಳಿಕೆ ಬರುತ್ತವೆ.

ತಿಟ್ಟಸೆಲೆ: (www.carid.com)