ಹೂವಿನ ಸಿಹಿ ಜೇನಾಗುವುದು ಹೇಗೆ?

ರತೀಶ ರತ್ನಾಕರ.

Jenu

ಹೂವಿನಿಂದ ಸಿಹಿಯನ್ನು ಕದಿಯುವ ಜೇನುಹುಳವು ತನ್ನ ಗೂಡಿಗೆ ಹಿಂದಿರುಗಿ, ಆ ಸಿಹಿಯನ್ನು ಕೂಡಿಟ್ಟು ಜೇನನ್ನಾಗಿ ಮಾರ್ಪಾಡುಗೊಳಿಸುತ್ತದೆ. ಹಾಗಾದರೆ, ಜೇನುಹುಳವು ತರುವ ಹೂವಿನ ಸಿಹಿ(nectar) ಮತ್ತು ಜೇನುಗೂಡಿನಲ್ಲಿ ಸಿಗುವ ಜೇನುತುಪ್ಪ ಬೇರೆ ಬೇರೆಯೇ? ಹೂವಿನ ಸಿಹಿ ಜೇನುತುಪ್ಪವಾಗಿ ಮಾರ್ಪಾಡಾಗುವ ಬಗೆ ಹೇಗೆ? ಈ ವಿಷಯಗಳ ಸುತ್ತ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಜೇನುಹುಳಗಳಿಗೆ ಎರಡು ಹೊಟ್ಟೆಯಿರುತ್ತವೆ. ಒಂದರಲ್ಲಿ ಊಟವನ್ನು ತಿಂದು ಅರಗಿಸಿಕೊಂಡು ಮೈಗೆ ಬೇಕಾದ ಹುರುಪನ್ನು ಪಡೆದರೆ, ಇನ್ನೊಂದು ಹೊಟ್ಟೆಯಲ್ಲಿ ಹೂವಿನಿಂದ ಹೀರಿದ ಸಿಹಿಯನ್ನು ತುಂಬಿಕೊಳ್ಳುತ್ತವೆ. ಸಿಹಿ ತುಂಬಿಕೊಂಡಿರುವ ಹೊಟ್ಟೆಯನ್ನು ಸಿಹಿಚೀಲ (nectar sac) ಎಂದು ಕರೆಯುತ್ತಾರೆ. ಸಿಹಿಚೀಲದಲ್ಲಿ ಒಮ್ಮೆಗೆ ಸುಮಾರು 70 ಮಿ.ಗ್ರಾಂ ನಷ್ಟು ಸಿಹಿಯನ್ನು ಹುಳಗಳು ತುಂಬಿಕೊಳ್ಳಬಲ್ಲವು. ಇದನ್ನು ತುಂಬಿಸಿಕೊಳ್ಳಲು ಜೇನುಹುಳಗಳು ಸುಮಾರು 100 ರಿಂದ 1500 ಹೂವುಗಳನ್ನು ಬೇಟಿ ಮಾಡಬೇಕು! ತುಂಬಿದ ಸಿಹಿಚೀಲ ಮತ್ತು ಜೇನುಹುಳ ಹೆಚ್ಚುಕಡಿಮೆ ಒಂದೇ ತೂಕವಿರುತ್ತವೆ.anatomy

ಹೂವಿನಿಂದ ಸಿಹಿಯನ್ನು ಗೂಡಿಗೆ ತರುವ ಜೇನುಹುಳವು ತಿರುಗಿ ಅದೇ ಜಾಗಕ್ಕೆ ಸಿಹಿಯನ್ನು ತರಲು ಹೋಗುತ್ತದೆ. ಮೊದಲ ಬಾರಿ ಹೂವಿನ ಜಾಗವನ್ನು ತಿಳಿಯಲು ಅದು ಬೇಹುಗಾರ ಹುಳದ ‘ಕುಣಿತ’ದ ಮೂಲಕ ಮೇವಿನ ಜಾಗವನ್ನು ಅರಿಯುತ್ತದೆ. ಬಳಿಕ ಹೂವಿನ ಜಾಗದಿಂದ ಜೇನುಗೂಡಿಗೆ ಹುಳವು ಹಲವಾರು ಬಾರಿ ತಿರುಗುತ್ತದೆ. ಹಾಗಾದರೆ ಹುಳವು ಈ ಹೂವಿನ ಜಾಗವನ್ನು ಹೇಗೆ ನೆನಪಿಟ್ಟುಕೊಳ್ಳುತ್ತದೆ ಎಂಬುದರ ಮೇಲೆ ಸಾಕಷ್ಟು ಅರಕೆಗಳು ನಡೆದಿವೆ, ನಡೆಯುತ್ತಿವೆ. ಹೂವಿರುವ ಜಾಗದಲ್ಲಿ ಸಿಹಿಚೀಲವನ್ನು ತುಂಬಿಸಿಕೊಳ್ಳುವ ಹುಳವು, ಆ ಜಾಗದ ಎದುರು ಇಲ್ಲವೇ ಹತ್ತಿರದಲ್ಲಿ ಎಲ್ಲಾದರು ಗುರುತಿಟ್ಟುಕೊಳ್ಳಬಹುದಾದ ಒಂದು ನೆಲಗುರುತನ್ನು (landmark), ತನ್ನ ಕೂಡುಗಣ್ಣಿನ (compound eyes) ಮೂಲಕ ಚಿತ್ರ ತೆಗೆದುಕೊಂಡು ನೆನಪಿಟ್ಟುಕೊಳ್ಳುತ್ತದೆ. ಸಿಹಿಯನ್ನು ಗೂಡಿಗೆ ಸಾಗಿಸಿ ಹೂವಿನ ಜಾಗಕ್ಕೆ ಹಿಂದಿರುಗುವಾಗ ಮೊದಲು ತೆಗೆದುಕೊಂಡ ನೆಲಗುರುತಿನ ಚಿತ್ರವನ್ನು ದಾರಿದೀಪವಾಗಿ ಬಳಸುತ್ತದೆ ಎಂದು ಹಲವು ಅರಿಗರು ಅಭಿಪ್ರಾಯಪಟ್ಟಿದ್ದಾರೆ.

ಹೂವಿನ ಸಿಹಿಯು ಸುಮಾರು 80% ನಷ್ಟು ನೀರು ಮತ್ತು ಸಿಕ್ಕಲು ಸಕ್ಕರೆ(Complex Sugars)ಯಾದ ‘ಸುಕ್ರೋಸ್’ ಅನ್ನು ಹೊಂದಿರುತ್ತದೆ ಅಲ್ಲದೇ ರುಚಿಯಲ್ಲಿ ಸಿಹಿಯಾಗಿದ್ದು, ಮಂದ(viscous)ವಾಗಿರುತ್ತದೆ. ಹೂವಿನ ಸಿಹಿಯು ಹುಳದ ಸಿಹಿಚೀಲವನ್ನು ತಲುಪುವಾಗ ಹುಳದ ಜೊಲ್ಲುಸುರಿಗೆಯಿಂದ (salaivary gland) ಹೊರಬರುವ ‘ಇನ್ವರ‍್ಟೇಸ್ ದೊಳೆ‘(invertase enzyme) ಮತ್ತು ಅರಗಿಸುವ ಹುಳಿ(Digestive acid)ಯೊಡೆನೆ ಬೆರೆಯುತ್ತದೆ. ಈ ದೊಳೆ ಮತ್ತು ಹುಳಿಯು ಸಿಹಿಯಲ್ಲಿರುವ ಸುಕ್ರೋಸ್ ಅನ್ನು ಒಡೆದು ಸಡಿಲ ಸಕ್ಕರೆ(Simple Sugars)ಗಳಾದ ಪ್ರುಕ್ಟೋಸ್ (fructose) ಮತ್ತು ಗ್ಲೂಕೋಸ್(glucose)ಗಳಾಗಿ ಮಾರ್ಪಾಡುಗೊಳ್ಳಲು ನೆರವು ನೀಡುತ್ತವೆ. ಇದಲ್ಲದೇ, ಹುಳದ ಜೊಲ್ಲಿನಲ್ಲಿರುವ ಪಾರ‍್ಮಿಕ್ ಆಸಿಡ್ (formic acid) ಸಿಹಿಯ ಜೊತೆ ಬೆರೆಯುತ್ತದೆ, ಇದರಿಂದ ಜೇನುತುಪ್ಪವು ಕೊಳೆಯುವುದಿಲ್ಲ ಮತ್ತು ಜೇನು ಕೊಳೆಯಳಿಕ (antiseptic) ಗುಣವನ್ನು ಪಡೆದುಕೊಳ್ಳುತ್ತದೆ.

Honey

ಸಿಹಿಯನ್ನು ತುಂಬಿಕೊಂಡು ಗೂಡಿನತ್ತ ಬರುವ ಹುಳವು ಗೂಡಿಗೆ ಬಂದೊಡನೆ ಸಿಹಿಯನ್ನು ಗೂಡಿನ ಕೋಣೆಗಳಲ್ಲಿ ನೇರವಾಗಿ ಇರಿಸುವುದಿಲ್ಲ. ತಾನು ಹೊತ್ತು ತಂದ ಸಿಹಿಯನ್ನು ಗೂಡಿನಲ್ಲಿರುವ ಇನ್ನೊಂದು ದುಡಿಮೆಗಾರ ಹುಳಕ್ಕೆ ಸಾಗಿಸುತ್ತದೆ. ಸಿಹಿಯನ್ನು ಹೊತ್ತುತಂದ ಹುಳವು ತನ್ನ ಸಿಹಿಚೀಲದಲ್ಲಿರುವ ಸಿಹಿಯನ್ನು ಎಳೆದು, ತನ್ನ ನಾಲಗೆಯ ಬುಡದಲ್ಲಿ ಹನಿಯ ರೂಪದಲ್ಲಿ ಹೊರತರುತ್ತದೆ. ಮತ್ತೊಂದು ದುಡಿಮೆಗಾರ ಹುಳವು ತನ್ನ ಉದ್ದ ನಾಲಗೆಯನ್ನು ಬಳಸಿ ಸಿಹಿಯ ಹನಿಯನ್ನು ಹೀರಿ, ಕೆಲವು ಹೊತ್ತು ಅದನ್ನು ಬಾಯಿಯಲ್ಲಿಯೇ ಅಗಿಯುತ್ತದೆ. ಇದರಿಂದ ಸಿಹಿಯಲ್ಲಿರುವ ಸುಕ್ರೋಸ್ ಮತ್ತಷ್ಟು ಒಡೆದು ಪ್ರುಕ್ಟೋಸ್ ಮತ್ತು ಗ್ಲೂಕೋಸ್ ಗಳಾಗುತ್ತಾ ಹೋಗುತ್ತದೆ. ಹೀಗೆ ಸಿಹಿಯನ್ನು ಸಾಗಿಸುವಾಗ ಗೂಡಿನ ಬಿಸುಪಿಗೆ ಸಿಹಿಯಲ್ಲಿನ ನೀರಿನ ಅಂಶವು ಕಡಿಮೆಯಾಗುತ್ತಾ ಹೋಗುತ್ತದೆ. ಒಟ್ಟಿನಲ್ಲಿ, ಸಿಹಿಯಲ್ಲಿರುವ ಸಿಕ್ಕಲು ಸಕ್ಕರೆಗಳು ಒಡೆದು ಸಡಿಲ ಸಕ್ಕರೆಗಳಾಗುವುದು ಮತ್ತು ಅದರಲ್ಲಿರುವ ನೀರು ಆರಿದರೆ ಅದು ಜೇನಾದಂತೆ.

ಸಿಹಿಯಲ್ಲಿರುವ ಹೆಚ್ಚಿನ ಸುಕ್ರೋಸ್ ಒಡೆದು ಗ್ಲುಕೋಸ್ ಮತ್ತು ಪ್ರುಕ್ಟೋಸ್‍ಗಳಾಗಿ, ಅದು ಜೇನಾಗಿದೆ ಎಂದು ಹುಳಗಳಿಗೆ ಅನಿಸಿದ ಮೇಲೆ ಸಿಹಿಯನ್ನು ಗೂಡಿನ ಕೋಣೆಯಲ್ಲಿರಿಸುತ್ತವೆ. ಆದರೆ ಇದೇ ಪೂರ್ತಿಯಾದ ಜೇನಲ್ಲ! ಗೂಡಿನಲ್ಲಿರುವ ಜೇನಿನಲ್ಲಿ ಇನ್ನೂ 40-50% ನೀರಿನ ಅಂಶ ಇರುತ್ತದೆ. ಆಗ ಗೂಡಿನ ಹುಳಗಳು ತನ್ನ ರೆಕ್ಕೆಯನ್ನು ಬಡಿದು, ಗಾಳಿಯನ್ನು ಬೀಸಿ ನೀರು ಆರುವಂತೆ ಮಾಡುತ್ತವೆ. ರೆಕ್ಕೆ ಬಡಿತದ ಗಾಳಿ ಮತ್ತು ಗೂಡಿನ ಬಿಸುಪಿಗೆ ಜೇನಿನಲ್ಲಿರುವ ನೀರು ಆರಿಹೋಗಿ ನೀರಿನಂಶವು 20% ಗಿಂತ ಕಡಿಮೆಯಾಗುತ್ತದೆ. ಆಗ ಇದು ಹುಳಗಳ ಊಟಕ್ಕೆ ತಕ್ಕುದಾದ ಜೇನಾದಂತೆ. ಹೂವಿನಿಂದ ಹೊತ್ತು ತರುವ ಸಿಹಿಯನ್ನು ಅಗಿದು, ಹುಳದಿಂದ ಹುಳಕ್ಕೆ ಸಾಗಿಸಿ, ಬಳಿಕ ಕೋಣೆಯಲ್ಲಿರಿಸಿ, ಗಾಳಿ ಬೀಸಿ ಗುಣಮಟ್ಟದ ಜೇನಾಗಿಸಲು ಸುಮಾರು 4 ದಿನಗಳು ಬೇಕಾಗುತ್ತವೆ.

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸ್ಪೇನಿನಲ್ಲಿರುವ 8000 ವರುಶಗಳಶ್ಟು ಹಳೆಯದಾದ, ಅರನ್ಯ ಹೆಸರಿನ ಕಲ್ಲುಗುಹೆಗಳಲ್ಲಿ ಕಂಡುಬಂದ ಜೇನುಕೀಳುವ ಕೆತ್ತನೆ. (ಅದರ ಚಿತ್ರರೂಪವಿದು)

ಸಿಹಿಯಲ್ಲಿರುವ ನೀರನ್ನು ಗೂಡಿನ ಕೋಣೆಯಲ್ಲಿಟ್ಟು ಆರಿಸುವಾಗ ಹುಳಗಳು ತಮ್ಮ ಜಾಣತನವನ್ನು ತೋರುತ್ತವೆ. ಮೊದಲು ಬರಿದಾಗಿರುವ ಕೋಣೆಯ ಕಾಲುಬಾಗದಷ್ಟು ಮಾತ್ರ ಸಿಹಿಯನ್ನು ತುಂಬಿಸುತ್ತವೆ. ಆಗ ಆ ಸಿಹಿಯು ಗಾಳಿ ಮತ್ತು ಬಿಸುಪಿಗೆ ಬೇಗ ಆರುತ್ತದೆ. ಸಿಹಿಯಲ್ಲಿರುವ ನೀರು ಆರಿದ ಮೇಲೆ ಆ ಕೋಣೆಯಲ್ಲಿ ಅರ್ಧಬಾಗದಷ್ಟು ಸಿಹಿಯನ್ನು ತುಂಬಿಸುತ್ತವೆ. ಅದೂ ಆರಿದ ಮೇಲೆ ಮತ್ತಷ್ಟು ಸಿಹಿಯನ್ನು ತುಂಬಿಸುತ್ತವೆ. ಹೀಗೆ ಹಂತ ಹಂತವಾಗಿ ಕೋಣೆಯಲ್ಲಿ ಸಿಹಿಯನ್ನಿರಿಸಿ ಅದರ ನೀರನ್ನು ಆರಿಸಿ ಜೇನಾಗಿಸುತ್ತದೆ. ಒಂದು ಕೋಣೆಯಲ್ಲಿರುವ ಸಿಹಿಯು ಪೂರ್ತಿಯಾಗಿ ಜೇನಾದ ಮೇಲೆ ಹುಳವು ಕೊಣೆಯ ಬಾಯನ್ನು ತೆಳುವಾದ ಮೇಣದ ಪದರವನ್ನು ಬಳಸಿ ಮುಚ್ಚುತ್ತವೆ. ಇದು ಜೇನು ಹಾಳಾಗದಂತೆ ಕಾಪಾಡುತ್ತದೆ.

ಜೇನಿನಲ್ಲಿ ನೀರಿನಂಶವಿದ್ದರೆ ಏನಾಗುತ್ತೆ?
ಹೂವಿನ ಸಿಹಿಯಲ್ಲಿ ಸುಮಾರು 80% ನೀರಿನಂಶ ಇರುತ್ತದೆ. ಸಿಹಿಯು ಒಡೆದು ಜೇನಾದ ಮೇಲೆ ಹುಳವು ಅದರಲ್ಲಿರುವ ನೀರನ್ನು ಆರಿಸಲು ದುಡಿಯುತ್ತದೆ. ಒಂದು ವೇಳೆ ಆ ಜೇನಿನಲ್ಲಿ ನೀರಿನಂಶ 20% ಗಿಂತ ಹೆಚ್ಚಿದ್ದರೆ ಮತ್ತು ಸುತ್ತಲಿನ ಬಿಸುಪು 25 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಿದ್ದರೆ, ಜೇನಿನಲ್ಲಿರುವ ಹುದುಗೆಬ್ಬಿಸುವ ಅಣಬೆ(Yeast)ಗಳು ತಮ್ಮ ಕೆಲಸ ಮಾಡಲು ಹುರುಪನ್ನು ಪಡೆಯುತ್ತವೆ. ಇವು ಜೇನಿನ ಸಕ್ಕರೆಯನ್ನು ಹುದುಗೆಬ್ಬಿಸಿ ಹೆಂಡವಾಗಿ (alcohol) ಮಾರ್ಪಾಟುಗೊಳಿಸುತ್ತವೆ. ಜೇನನ್ನು ಹೆಚ್ಚು ದಿನಗಳ ಕಾಲ ಕಾಪಿಡಬೇಕಾದರೆ ಅದರ ನೀರಿನಂಶವು 20% ಗಿಂತ ಮೇಲಿರಬಾರದು ಮತ್ತು ಬಿಸುಪು 25 ಡಿಗ್ರಿಗಿಂತ ಹೆಚ್ಚಿರಬಾರದು, ಇವೆರಡೂ ಅಂಶಗಳನ್ನು ಜೇನುಹುಳಗಳು ಗೂಡಿನಲ್ಲಿ ಕಾದುಕೊಳ್ಳುತ್ತವೆ.

ಜೇನಿನಲ್ಲಿ ಏನಿದೆ?
ಜೇನು ನೀರಿನಲ್ಲಿ ಕರಗುವಂತಹ ಮಂದವಾದ ರಸ. 10 ರಿಂದ 18 ಡಿಗ್ರಿ ಸೆಲ್ಸಿಯಸ್ ಬಿಸುಪಿನಲ್ಲಿ ಕಾಳು-ಕಾಳಾಗುವ ಗುಣವನ್ನು ಹೊಂದಿದೆ. ಜೇನುತುಪ್ಪವು ಕೊಂಚ ಹುಳಿಯ ಅಂಶವನ್ನು ಹೊಂದಿದ್ದು ಇದರ ಹುಳಿಯಳತೆ (pH) 3.4-6.1 ಇರುತ್ತದೆ. ಜೇನಿನಲ್ಲಿ ಹೆಚ್ಚಿರುವ ಸಕ್ಕರೆ, ಹುಳಿ, ಹೈಡ್ರೋಜನ್ ಪೆರಾಕ್ಸೈಡ್, ಪ್ಲೆವೊನಾಯ್ಡ್ಸ್(flavonoids), ಪಿನಾಲಿಕ್ಸ್ (phenolics) ಮತ್ತು ಟರ‍್ಪೆನೆಸ್ (terpenes)ಗಳಿರುವುದರಿಂದ ಜೇನು ಒಳ್ಳೆಯ ಕೊಳೆಯಳಿಕ (antiseptic) ಹಾಗು ಸೀರುಸಿರಿಗಳ (micro-organisms) ಬೆಳವಣಿಗೆ ತಡೆಯುವ ಗುಣವನ್ನು ಪಡೆದುಕೊಂಡಿದೆ.

ಜೇನಿನಲ್ಲಿರುವ ಮತ್ತಷ್ಟು ಅಡಕಗಳು:Jenu_aDaka

ಬಾಳುಳುಪು (Vitamins): ಎ, ಬೀಟಾ ಕೆರೋಟೀನ್ (Beta carotene), ಬಿ1 ತಯಾಮೀನ್(B1 Thiamin), ಬಿ2 ರೈಬೋಪ್ಲವಿನ್ (B2 Riboflavin), ಬಿ3 ನಯಾಸಿನ್ (B3 Niacin), ಬಿ5 ಪೆಂಟಾತನಿಕ್ ಹುಳಿ (B5 Pantothenic acid), ಬಿ6 ಪೈರಿಡೊಕ್ಸಿನ್ (B6 Pyridoxine), ಬಿ8 ಬಯೋಟಿನ್ (B8 Biotin), ಬಿ9 ಪೊಲೇಟ್ (B9 Folate), ಸಿ, ಡಿ, ಇ ಮತ್ತು ಕೆ.

ಮಿನರಲ್ಸ್: ಕ್ಯಾಲ್ಸಿಯಂ, ತಾಮ್ರ, ಅಯೋಡಿನ್, ಕಬ್ಬಿಣ, ಮೆಗ್ನೇಶಿಯಂ, ಮ್ಯಾಂಗನೀಸ್, ಪೊಟಾಸಿಯಂ, ಸೋಡಿಯಂ, ಸಲ್ಪರ್, ಪಾಸ್ಪರಸ್ ಮತ್ತು ಜಿಂಕ್.

ಅಮೈನೊ ಹುಳಿಗಳು ಮತ್ತು ಕಳೆವಣಿಕಾಪು (Anti-oxidants) ಗಳು ಜೇನಿನಲ್ಲಿರುವ ಇತರ ಕೆಲವು ಮುಖ್ಯವಾದ ಅಡಕಗಳು. ಜೇನುತುಪ್ಪದ ತಿಣ್ಮೆ(Density) 1.36 ಕಿ.ಗ್ರಾಂ/ಲೀಟರ್ (ನೀರಿಗಿಂತ 36% ಹೆಚ್ಚಿನ ತಿಣ್ಮೆಯನ್ನು ಇದು ಹೊಂದಿದೆ.)

ಜೇನು ಕೆಡದಿರಲು ಕಾರಣವೇನು?
ಜೇನಿನಲ್ಲಿರುವ ನೀರಿನ ಅಂಶವು 20% ಕಡಿಮೆ ಇರುವುದರಿಂದ ಇದರ ನೀರಿನ ಚಟುವಟಿಕೆ (water activity) 0.6 (0 ಯಿಂದ 1 ರ ಅಳತೆಯಲ್ಲಿ) ಇರುತ್ತದೆ. ಬ್ಯಾಕ್ಟೀರಿಯಾ ಹಾಗು ಪಂಗಸ್ ನಂತಹ ಸೀರುಸಿರುಗಳು ತಮ್ಮ ಕೆಲಸವನ್ನು ನಡೆಸಲು ನೀರಿನ ಚಟುವಟಿಕೆಯು 0.75 ಗಿಂತ ಹೆಚ್ಚಿರಬೇಕು. ಹಾಗಾಗಿ ಜೇನಿನಲ್ಲಿ ಯಾವುದೇ ಸೀರಿಸುರಿಗಳು ತಮ್ಮ ಕೆಲಸ ಮಾಡಲಾಗದೇ ಜೇನು ಹಲವು ಕಾಲ ಕೆಡದಂತೆ ಇರುತ್ತದೆ. ಇದಲ್ಲದೇ ಜೇನಿನ ಹುಳಿಯಳತೆ (pH), ಜೇನಿನಲ್ಲಿರುವ ಗ್ಲೂಕೊನಿಕ್ ಆಸಿಡ್ ಹಾಗು ಇತರೆ ಅಡಕಗಳು ಇದನ್ನು ಕೆಡದಂತೆ ಇರಲು ನೆರವಾಗುತ್ತವೆ. ಹೀಗೆ ಹಲವು ಹಂತಗಳ ಮೂಲಕ ಹೂವಿನ ಸಿಹಿಯು ಜೇನಾಗಿ ಹಲವು ವರುಶಗಳ ಕಾಲ ಕೆಡದಂತೆ ಉಳಿಯುವ ತಿನಿಸಾಗಿ ಮಾರ್ಪಾಡಾಗುತ್ತದೆ.

(ಮಾಹಿತಿ ಸೆಲೆ: westmtnapiary.com)
(ಚಿತ್ರ ಸೆಲೆ: ಅಭಿಲಾಷ್, ವಿಕಿಪೀಡಿಯಾ)

 

ಕಾಫಿಗಿಡ ನೆಡುವುದು ಮತ್ತು ಆರಯ್ಕೆ

ರತೀಶ ರತ್ನಾಕರ.

ಹಿಂದಿನ ಬರಹಗಳಲ್ಲಿ ಕಾಫಿ ಬೀಜದ ಬಿತ್ತನೆ ಮತ್ತು ಪಾತಿಯ ಬುಟ್ಟಿಗಳಲ್ಲಿ ಕಾಫಿ ಗಿಡದ ಬೆಳವಣಿಗೆಯ ಕುರಿತು ತಿಳಿದುಕೊಂಡೆವು. ಬುಟ್ಟಿಯಲ್ಲಿರುವ ಕಾಫಿ ಗಿಡಗಳನ್ನು ತೋಟದ ಜಾಗದಲ್ಲಿ ನೆಡುವುದು ಮುಂದಿನ ಕೆಲಸವಾಗಿರುತ್ತದೆ. ಈ ಕೆಲಸದ ಕುರಿತು ಈ ಬರಹದಲ್ಲಿ ಅರಿಯೋಣ.

ತೋಟಕ್ಕೆಂದು ಜಾಗದ ಆಯ್ಕೆ:
ಕಾಫಿ ಬೆಳೆಯಲು ಬೇಕಾದ ಗಾಳಿಪಾಡು ಮತ್ತು ಜಾಗದ ಗುಣದ ವಿವರವನ್ನು ಕೂಡ ಕಾಫಿಯ ಹುಟ್ಟು ಮತ್ತು ಹರವು ಬರಹದಲ್ಲಿ ತಿಳಿದಿದ್ದೇವೆ. ಕಾಫಿಗೆ ಇಳಿಜಾರಿನ, ತಂಪಿರುವ ಹಾಗು ಸಾಕಷ್ಟು ಮಳೆಯಾಗುವ ಜಾಗವು ಬೇಕಾಗುತ್ತದೆ. ತೋಟದ ಮಣ್ಣು ಸಾಕಷ್ಟು ಫಲವತ್ತತೆಯಿಂದ ಕೂಡಿರಬೇಕು. ಕಾಫಿಯ ಬೆಳವಣಿಗೆ ಚೆನ್ನಾಗಿರಲು ಮಣ್ಣಿನ ಹುಳಿಯಳತೆಯು (pH) 6.1 ಇರಬೇಕು. ಗಿಡಗಳ ಬೆಳವಣಿಗೆಗೆ ಬೇಕಾಗಿರುವ, ಮಣ್ಣಿನಲ್ಲಿರುವ ಆರಯ್ಕೆಯು ಹಾಳಾಗದಂತಿರಲು ಈ ಹುಳಿಯಳತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ ಮಣ್ಣನ್ನು ಹುಳಿಯಳಕದಲ್ಲಿ ಒರೆಹಚ್ಚಿ ಇದರ ಹುಳಿಯಳತೆಯನ್ನು ಅರಿತುಕೊಳ್ಳಬೇಕು, ಮತ್ತು ಅದು ಹೆಚ್ಚು-ಕಡಿಮೆಯಾಗಿದ್ದರೆ ರಾಸಾಯನಿಕ ಇಲ್ಲವೇ ಸಾವಯವ ಪದ್ಧತಿಯಿಂದ ಮಣ್ಣಿನ ಹುಳಿಯಳತೆ ಸರಿಪಡಿಸಿಕೊಳ್ಳಬೇಕು.

ಹೆಚ್ಚಾಗಿ ಇಳಿಜಾರಿನ ಬೆಟ್ಟದಂತಹ ಜಾಗಗಳೇ ಕಾಫಿ ಬೆಳೆಯಲು ಬೇಕಾಗಿರುವುದರಿಂದ ಈ ಇಳಿಜಾರಿನ ಜಾಗದಲ್ಲಿ ಸಾಕಷ್ಟು ನೆರಳು ಇರಬೇಕಾಗುತ್ತದೆ. ತೋಟದ ಜಾಗವು ಯಾವುದೇ ಮರಗಳಿಲ್ಲದೆ ಬೋಳುಬೆಟ್ಟವಾಗಿದ್ದರೆ, ನೆರಳಿಗಾಗಿ ಸಿಲ್ವರ್, ಅಗರ್, ಶ್ರಿಗಂದ, ಸಾಗುವಾನಿಯಂತಹ ಮರಮಟ್ಟಾಗುವ (Timber) ಗಿಡಗಳನ್ನು ಮೊದಲು ನೆಡಬೇಕು. ಇಲ್ಲವೇ ಬೆಳೆಯುವವರು ತಾವೇ ಆಯ್ದುಕೊಂಡ ಗಿಡಗಳನ್ನು ನೆರಳಿಗಾಗಿ ನೆಡಬಹುದು. ಈಗಾಗಲೇ ಸಾಕಷ್ಟು ಮರಗಳು ತೋಟದ ಜಾಗದಲ್ಲಿದ್ದರೆ ಮರಗಸಿ ಮಾಡಿ ಬೇಕಾದಷ್ಟು ನೆರಳನ್ನು ಮಾತ್ರ ಕಾಯ್ದುಕೊಳ್ಳಬೇಕು. ಕಡುಹೆಚ್ಚು ನೆರಳು ಇಲ್ಲವೇ ಹೆಚ್ಚು ಬಿಸಿಲು ಗಿಡದ ಬೆಳವಣಿಗೆಯನ್ನು ಹಾಳುಮಾಡುತ್ತದೆ.

ಗಿಡನೆಡುವ ಮೊದಲು ಜಾಗದಲ್ಲಿರುವ ಕಳೆಗಿಡ ಮತ್ತು ಕಾಡುಗಿಡಗಳನ್ನು ತೆಗೆಯಬೇಕು. ಕಳೆಗಿಡಗಳನ್ನು ತೆಗೆದು, ಒಣಗಿಸಿ ಸುಡುವ ಪರಿಪಾಟ ಈ ಹಿಂದೆ ಇತ್ತು, ಆದರೆ ಅದು ತೋಟದ ಜಾಗದಲ್ಲಿನ ಉಸಿರಿಗಳ ಬದುಕನ್ನು ಹಾಳುಗೆಡುವುತ್ತದೆ ಮತ್ತು ಮಣ್ಣಿನ ಫಲವತ್ತತೆಗೆ ಒಂದಲ್ಲ ಒಂದು ಬಗೆಯಲ್ಲಿ ನೆರವಾಗುವ ಗಿಡ, ಕೀಟ ಹಾಗು ಪ್ರಾಣಿಗಳನ್ನು ಸಾಯಿಸುತ್ತದೆ. ಆದ್ದರಿಂದ ಈಗ ಕಳೆಗಿಡಗಳನ್ನು ತೆಗೆದು ಅಲ್ಲಿಯೇ ಕೊಳೆಯಿಸಿ ಮಣ್ಣಿಗೆ ಗೊಬ್ಬರವಾಗುವಂತೆ ಮಾಡುತ್ತಾರೆ.

ತೋಟದ ಜಾಗವನ್ನು ಸರಿಮಟ್ಟದ ದೊಡ್ಡ ತುಂಡುಗಳನ್ನಾಗಿ ಅಳತೆ ಮಾಡಿಕೊಳ್ಳಬೇಕು. ಒಂದೊಂದು ತುಂಡಿನಲ್ಲೂ ಕಾಫಿಗಿಡಗಳನ್ನು ಹಲವು ಸಾಲುಗಳಲ್ಲಿ ನೆಡಲಾಗುವುದು. ಎರೆಡು ತುಂಡುಗಳ ನಡುವೆ ನಾಲ್ಕು ಗಾಲಿಯ ಗಾಡಿಗಳು ಓಡಾಡುವಷ್ಟು ಜಾಗವಿದ್ದರೆ ಒಳ್ಳೆಯದು. ಪ್ರತಿ ತುಂಡಿನಲ್ಲೂ ಕಾಫಿಗಿಡಗಳನ್ನು ಸಾಲಾಗಿ ನೆಡಲು ಗುರುತುಗಳನ್ನು ಮೊದಲು ಮಾಡಬೇಕಾಗುತ್ತದೆ. ಅರಾಬಿಕಾ ಮತ್ತು ರೊಬಸ್ಟಾ ಗಿಡಗಳನ್ನು ಈ ಕೆಳಗಿನ ಅಳತೆಯಲ್ಲಿ ಹಲವು ಸಾಲುಗಳಲ್ಲಿ ನೆಡಬಹುದು.

ಅರಾಬಿಕಾ – 7‍ X 7, 5 X 5 ಇಲ್ಲವೇ 8 X 8 ಅಡಿಗಳು (ಒಂದು ಸಾಲಿನಲ್ಲಿರುವ ಗಿಡಗಳ ನಡುವಿನ ದೂರ x ಎರೆಡು ಸಾಲುಗಳ ನಡುವಿನ ದೂರ)
ರೊಬಸ್ಟಾ – 8 X 8 ಇಲ್ಲವೇ 10 X 10 ಅಡಿಗಳು

ಗುಂಡಿ ತೆಗೆಯುವುದು:

ಕಾಫಿ ಗಿಡಗಳನ್ನು ನೆಡಲು ಗುರುತು ಮಾಡಿರುವ ಸಾಲಿನಲ್ಲಿ ಗುಂಡಿಯನ್ನು ತೆಗೆಯುವುದು ಮುಂದಿನ ಕೆಲಸವಾಗಿರುತ್ತದೆ. ಈ ಗುಂಡಿಗಳನ್ನು ತೆಗೆಯುವಾಗ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ;

1. ಕಾಫಿಗಿಡದಲ್ಲಿ ನಲ್ಲಿಬೇರುಗಳಿರುತ್ತವೆ ಇವು ಮಣ್ಣಿನ ಆಳಕ್ಕೆ ನೇರವಾಗಿ ಹೋಗುತ್ತವೆ. ಕಾಫಿಗಿಡದ ಬದಿಯ ಬೇರುಗಳು ಕೂಡ ಮಣ್ಣಿನಲ್ಲಿ ಸಾಕಷ್ಟು ಹರಡಿಕೊಳ್ಳುತ್ತವೆ. ಹೀಗಾಗಿ ಮಣ್ಣು ಸಡಿಲವಾಗಿದ್ದರೆ ಒಳ್ಳೆಯದು ಮತ್ತು ಗುಂಡಿಯು ಆಳವಿದ್ದಷ್ಟು ಒಳ್ಳೆಯದು.

2. ಗಿಡ ನೆಡಲು ಗುರುತು ಮಾಡಿರುವ ಜಾಗದ ಸುತ್ತ, ಬೇರುಗಳ ಬೆಳವಣಿಗೆಗೆ ಅಡ್ಡಿಯಾಗುವ ಕಲ್ಲುಗಳು ಇರದಂತೆ ನೋಡಿಕೊಳ್ಳಬೇಕು.

3. ಹೆಚ್ಚಾಗಿ ಕಾಫಿಗಿಡಗಳನ್ನು ಜುಲೈ ಇಲ್ಲವೇ ಆಗಸ್ಟ್ ತಿಂಗಳಿನ ಮುಂಗಾರು ಮಳೆಯ ಹೊತ್ತಿನಲ್ಲಿ ತೋಟದಲ್ಲಿ ನೆಡಲಾಗುವುದು. ಅದಕ್ಕಾಗಿ ಬೇಕಾದ ಕಾಫಿಗುಂಡಿಗಳನ್ನು ಎರೆಡು ತಿಂಗಳು ಮುಂಚೆಯೇ ತೋಡಿದರೆ ಒಳ್ಳೆಯದು. ಇದರಿಂದ ಗಿಡನೆಡುವ ಜಾಗದ ಸುತ್ತಲಿನ ಮಣ್ಣು ಸಡಿಲವಾಗುತ್ತದೆ.

4. ಕಾಫಿಗುಂಡಿಯು 1.5 ‍X 1.5 X 1.5 (ಉದ್ದ x ಅಗಲ x ಆಳ) ಅಡಿಗಳಷ್ಟು ಇರಬೇಕು.

5. ಬೇಕಾದ ಆಳದ ಗುಂಡಿಯನ್ನು ತೆಗೆದ ಬಳಿಕ ಗುಂಡಿಯನ್ನು ಕೇವಲ ಮಣ್ಣಿನಿಂದ ಮುಚ್ಚಬೇಕು. ಮಣ್ಣನ್ನು ಯಾವುದೇ ಕಾರಣಕ್ಕೂ ಗುಂಡಿಗೆ ಒತ್ತಿ ತುಂಬಬಾರದು. ಸಣ್ಣ ಕಲ್ಲು ಮತ್ತು ಇತರೆ ಕಸಗಳಿದ್ದರೆ ಅವನ್ನು ತುಂಬಬಾರದು. ಹೀಗೆ ಮಣ್ಣು ಮುಚ್ಚಿದ ಗುಂಡಿಯ ಮೇಲೆ ಗುರುತಿಗಾಗಿ ಒಂದು ಬಿದಿರಿನ ಕಡ್ಡಿಯನ್ನೋ, ಕೋಲನ್ನೋ ನೆಡಬಹುದು (ನೆನಪಿರಲಿ, ನಾವಿನ್ನು ಕಾಫಿಗಿಡವನ್ನು ನೆಟ್ಟಿಲ್ಲ)

ಗಿಡನೆಡುವುದು ಮತ್ತು ಆರಯ್ಕೆ:
ಪಾತಿಯ ಬುಟ್ಟಿಗಳಲ್ಲಿರುವ ಕಾಫಿಗಿಡಗಳನ್ನು ತೋಟದ ಜಾಗಕ್ಕೆ ಸಾಗಿಸಿಟ್ಟಿರಬೇಕು. ಈಗಾಗಲೇ ಮಣ್ಣನ್ನು ಮುಚ್ಚಿರುವ ಕಾಫಿಗುಂಡಿಗಳನ್ನು ಕೈಯಿಂದಲೇ ಬಗೆಯಬಹುದು, ಕಾಫಿ ಬುಟ್ಟಿಯ ಅಳತೆಗೆ ಸರಿಹೊಂದುವಂತೆ ಗುಂಡಿಗೆ ಮುಚ್ಚಿದ್ದ ಮಣ್ಣನ್ನು ಕೈಯಿಂದ ತೆಗೆಯಬೇಕು. ಪ್ಲಾಸ್ಟಿಕ್ ಬುಟ್ಟಿಯನ್ನು ಜೋಪಾನವಾಗಿ ಹರಿದು ತೆಗೆದು, ಕಾಫಿ ಗಿಡದ ಬೇರಿನ ಸುತ್ತಲಿನ ಮಣ್ಣು ಒಡೆದುಹೋಗದಂತೆ, ಆ ಬುಟ್ಟಿಯ ಮಣ್ಣಿನ ಸಮೇತ ಗಿಡವನ್ನು ಗುಂಡಿಯೊಳಗೆ ನೇರವಾಗಿ ನೆಡಬೇಕು. ಬಳಿಕ ಸುತ್ತಲಿನ ಮಣ್ಣಿನಿಂದ ಮುಚ್ಚಿ ಗಿಡವನ್ನು ಗಟ್ಟಿಯಾಗಿ ಊರಬೇಕು. ಹೀಗೆ ನೆಟ್ಟ ಗಿಡವು ಬಾಗದಂತೆ ನೆರವಿಗಾಗಿ ಒಂದು ಮರದ ಕೋಲನ್ನು ನೆಡುವುದು ಒಳ್ಳೆಯದು.

ಗಿಡವನ್ನು ನೆಡುವಾಗ ಕೊಟ್ಟಿಗೆ ಗೊಬ್ಬರ ಇಲ್ಲವೇ ಪ್ರತಿ ಗುಂಡಿಗೆ 50-100 ಗ್ರಾಂ ನಷ್ಟು ರಾಕ್ ಪಾಸ್ಪೇಟ್ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಗಿಡದ ಬೆಳವಣಿಗೆಗೆ ನೆರವಾಗುತ್ತದೆ. ಸಾವಯವ ಬೆಳೆಗಾರರು ಬೆಳವಣಿಗೆಗೆ ನೆರವಾಗುವ ಸಾವಯವ ಗೊಬ್ಬರವನ್ನು ಬಳಸಬಹುದು.

ಆರಯ್ಕೆ:

1. ಗಿಡವನ್ನು ನೆಟ್ಟ ಒಂದು ತಿಂಗಳೊಳಗೆ ಮಳೆ ಬಂದರೆ ಒಳ್ಳೆಯದು ಇಲ್ಲವಾದರೆ ಗಿಡಕ್ಕೆ ನೀರಿನ ಏರ್ಪಾಡನ್ನು ಮಾಡಬೇಕು.

2. ಮಳೆಗಾಲ ಮುಗಿಯುವ ಹೊತ್ತಿಗೆ, ಕಾಡುಮರದ ಸೊಪ್ಪಿನಿಂದ ಗಿಡದ ಸುತ್ತಲು ಮರೆಯನ್ನು ಮಾಡಿ ನೇಸರನ ಬಿಸಿಲು ಸುಡದಂತೆ ಎಚ್ಚರ ವಹಿಸಬೇಕು.

3. ಗಿಡವನ್ನು ನೆಟ್ಟ ಕೆಲವು ದಿನದಲ್ಲಿ ಅದರ ಬುಡದಲ್ಲಿರುವ ಮಣ್ಣು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರೆ, ಗಿಡದ ಸುತ್ತಲಿನ ಮಣ್ಣನ್ನು ಕಡೆದು ಗಿಡದ ಬುಡಕ್ಕೆ ಹಾಕಿ ಮಣ್ಣನ್ನು ಏರಿಸಬೇಕು. ಇದು ಗಿಡವು ಗಟ್ಟಿಯಾಗಿ ಹಾಗು ನೇರವಾಗಿ ಬೆಳೆಯಲು ನೆರವಾಗುತ್ತದೆ.

4. ಕಾಫಿ ಗಿಡದ ಸಾಲುಗಳ ನಡುವೆ, ಹೆಚ್ಚಿನ ನೆರಳು ಮತ್ತು ಸೊಪ್ಪಿನ ಗೊಬ್ಬರಕ್ಕಾಗಿ ಹಾಲುವಾಣ/ಪಂಗಾರು ಗಿಡಗಳನ್ನು ನೆಡುತ್ತಾರೆ. ಇದು ಗಿಡಕ್ಕೆ ಬೇಕಾದ ನೆರಳನ್ನು ಒದಗಿಸುತ್ತದೆ. ಕಾಫಿಗಿಡಗಳು ಸಾಕಷ್ಟು ಎತ್ತರಕ್ಕೆ ಬಂದಾಗ ನೆರಳು ಹೆಚ್ಚಾದರೆ ಇವನ್ನು ಕಡಿದು ತೆಗೆಯಲಾಗುತ್ತದೆ. ಈ ಗಿಡಗಳ ಸೊಪ್ಪು ತೊಟಕ್ಕೆ ಒಳ್ಳೆಯ ಗೊಬ್ಬರವಾಗಿದೆ.

5. ಸಾವಯವ ಇಲ್ಲವೇ ರಾಸಾಯನಿಕ ಬೇಸಾಯ ಪದ್ಧತಿಯ ಆದಾರದ ಮೇಲೆ ಗಿಡಕ್ಕೆ ಗೊಬ್ಬರವನ್ನು ಹಾಕಬೇಕು.

6. ಗಿಡಗಳನ್ನು ತೋಟದಲ್ಲಿ ನೆಟ್ಟಾಗ ಗಿಡಗಳ ನಡುವೆ ಸಾಕಷ್ಟು ಜಾಗ ಇರುವುದರಿಂದ ಅಲ್ಲಿ ಕಳೆಗಿಡಗಳು ಹುಟ್ಟುತ್ತಲೇ ಇರುತ್ತವೆ. ಕಳೆಗಿಡಗಳು ಗಿಡದ ಬೆಳವಣಿಗೆಗೆ ತೊಂದರೆ ನೀಡುತ್ತವೆ. ಈ ಕಳೆಗಿಡಗಳನ್ನು ಕೊಚ್ಚಿ ತೆಗೆಯುತ್ತಿರಬೇಕು ಇದನ್ನು ‘ಹಳ ಹೊಡೆಯುವುದು’ ಎಂದು ನಮ್ಮಲ್ಲಿ ಕರೆಯುತ್ತಾರೆ.

ಹೀಗೆ ಗಿಡವನ್ನು ನೆಟ್ಟ ಮೊದಲ ವರುಶ ಅದರ ಆರಯ್ಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಕಾಫಿಗಿಡವು ಬೆಳೆದು ಇಳುವರಿಯನ್ನು ಕೊಡಲು ಸುಮಾರು ನಾಲ್ಕರಿಂದ ಅಯ್ದು ವರುಶಗಳು ಬೇಕಾಗುತ್ತವೆ. ಇಳುವರಿ ಕೊಡುತ್ತಿರುವ ಗಿಡದಿಂದ ವರುಶಕ್ಕೆ ಒಮ್ಮೆ ಕಾಫಿಬೆಳೆಯ ಕುಯ್ಯಲನ್ನು ಮಾಡಬಹುದು. ಕಾಫಿ ತೋಟಕ್ಕೆಂದು ಇರುವ ಜಾಗದಲ್ಲಿ ಹೆಚ್ಚಿನ ಮರಗಳನ್ನು ಕಡಿಸದೇ, ಇತರೆ ಉಸಿರಿಗಳ ಬದುಕಿಗೆ ಹಾನಿ ಮಾಡದೇ, ಕಾಡಿನ ನಡುವೆಯೇ ಒಂದು ಬೆಳೆ ನೀಡುವ ಗಿಡಗಳಾಗಿ ಈ ಕಾಫಿಗಿಡಗಳನ್ನು ಬೆಳೆಸಬಹುದು. ತಾನೂ ಒಂದು ಬಗೆಯ ಗಿಡವಾಗಿ ಕಾಡಿನಲ್ಲಿರುವ ಮರಗಿಡಗಳ ಹಲತನದೊಂದಿಗೆ ಸೇರಿಕೊಳ್ಳುವುದು ಈ ಬೆಳೆಯ ಮೇಲ್ಮೆ.

(ಚಿತ್ರಸೆಲೆ: homongfoundation)

ಹಸಿರುಮನೆಯ ಗುಟ್ಟು

ರತೀಶ ರತ್ನಾಕರ.

ಸಣ್ಣ ಸಣ್ಣ ಗಿಡಗಳನ್ನು ಬೆಳಸಲು ಇಲ್ಲವೇ ಹೆಚ್ಚಾಗಿ ಹೂವಿನ ಗಿಡಗಳನ್ನು ಬೆಳಸಲು ಹಸಿರು ಬಣ್ಣದ ಇಲ್ಲವೇ ಬಣ್ಣವಿಲ್ಲದ ಗಾಜು ಇಲ್ಲವೇ ಪ್ಲಾಸ್ಟಿಕ್ ಹೊದ್ದಿರುವ ‘ಹಸಿರು ಮನೆಗಳನ್ನು’ ಎಲ್ಲಾದರೂ ಕಂಡಿರುತ್ತೇವೆ. ಗಿಡಗಳ ಬೆಳವಣಿಗೆಗೆ ಈ ಬಗೆಯ ಬೆಳಸುವಿಕೆ ನೆರವಾಗುತ್ತದೆ ಎಂದು ಅಲ್ಲಲ್ಲಿ ಕೇಳಿರುತ್ತೇವೆ. ಹಾಗದರೆ ಈ ಹಸಿರು ಮನೆಗಳು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತವೆ? ಇದರ ಕೆಲಸವೇನು ಎಂಬುದನ್ನು ಅರಿಯೋಣ ಬನ್ನಿ.

ಹಸಿರುಮನೆಯ ಹಿಂದಿರುವ ಅರಿಮೆ:

ನೇಸರನಿಂದ ನೆಲಕ್ಕೆ ಬೀಳುವ ಬೆಳಕಿನಿಂದಾಗಿ ನೆಲದಲ್ಲಿರುವ ಮಣ್ಣು, ನೀರು ಹಾಗು ಇತರೆ ವಸ್ತುಗಳು ಬಿಸಿಯಾಗುತ್ತವೆ. ಅಂದರೆ ನೇಸರನ ಬೆಳಕಿನ ಶಕ್ತಿಯನ್ನು ಹೀರಿಕೊಂಡು ಅದೇ ಶಕ್ತಿಯನ್ನು ಬಿಸಿಯ ರೂಪದಲ್ಲಿ ಹೊರಬಿಡುತ್ತವೆ ಹೀಗೆ ಹೊರಸೂಸುವ ಬಿಸಿಯು ತಿಳಿಗೆಂಪು ಕದಿರಾಗಿರುತ್ತದೆ (infrared rays). ನೇಸರನ ಬೆಳಕಿನ ಅಲೆಯಗಲ (wavelength) ಮತ್ತು ಮಣ್ಣು/ನೀರು ಹೊರಬಿಡುವ ತಿಳಿಗೆಂಪು ಕದಿರಿನ (infrared rays) ಅಲೆಯಗಲ ಬೇರೆ ಬೇರೆಯಾಗಿರುತ್ತದೆ. ಈ ಅಲೆಯಗಲದ ಆದಾರದ ಮೇಲೆ ಈ ಕಿರಣಗಳು ಕೆಲವು ವಸ್ತುಗಳ ಮೂಲಕ ಹಾದುಹೋಗಲಾರವು. ಉದಾಹರಣೆಗೆಗೆ , ನೇಸರನ ಬೆಳಕು ಗೋಡೆಗಳ ಮೂಲಕ ಹಾದುಹೋಗಲಾಗದು ಆದರೆ ರೇಡಿಯೋ ಅಲೆಗಳು ಗೋಡೆಗಳಮೂಲಕ ಹಾದುಹೋಗವುವು ಅದಕ್ಕೆ ಕಾರಣ ಅವುಗಳ ಅಲೆಯಗಲವೂ ಒಂದು. ಹೀಗೆ ನೇಸರನ ಬೆಳಕು ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗುವುದು ಆದರೆ ತಿಳಿಗೆಂಪು ಕದಿರು ತಮ್ಮ ಅಲೆಯಗಲದಿಂದಾಗಿ ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗಲಾರವು.

ಒಂದು ಹಸಿರುಮನೆಯು ಕಾಲಿ ಕೋಣೆಯಂತಿದ್ದು ಅದರ ಗೋಡೆ ಹಾಗು ಮಾಡನ್ನು ಗಾಜು ಇಲ್ಲವೇ ಪ್ಲಾಸ್ಟಿಕ್ ನಿಂದ ಕಟ್ಟಿರುತ್ತಾರೆ. ಈ ಗಾಜು/ಪ್ಲಾಸ್ಟಿಕ್ ನಿಂದ ನೇಸರನ ಬೆಳಕು ಹರಿದು ಹಸಿರುಮನೆಯ ಒಳಗೆ ಬರುತ್ತದೆ. ಹೀಗೆ ಒಳಗೆ ಬಂದ ನೇಸರನ ಬೆಳಕು ಮಣ್ಣಿನ ಮೇಲ್ಬಾಗ ಇಲ್ಲವೇ ಗಿಡಗಳಲ್ಲಿರುವ ತೇವವನ್ನು (humidity) ಆರಿಸುತ್ತದೆ ಮತ್ತು ಬಿಸಿಯನ್ನು ಅಂದರೆ ತಿಳಿಗೆಂಪು ಕದಿರನ್ನು (infrared rays) ಹೊರಹಾಕತೊಡಗುತ್ತವೆ.

ಹಸಿರುಮನೆಯ ಒಳಗಿರುವ ಮಣ್ಣು ನೇಸರನ ಬೆಳಕು ಬಿದ್ದೊಡನೆ ಬಿಸಿಯಾಗಿ ಆ ಬಿಸಿಯನ್ನು ಮಣ್ಣಿನ ಮೇಲ್ಬಾಗದಲ್ಲಿರುವ ಗಾಳಿಗೆ ಸಾಗಿಸುತ್ತದೆ. ಇದರಿಂದ ಮಣ್ಣಿನ ಮೇಲ್ಭಾಗದ ಗಾಳಿ ಮೊದಲು ಬಿಸಿಯಾಗತೊಡಗುತ್ತದೆ. ಹೀಗೆ ಬಿಸಿಯಾದ ಗಾಳಿಯ ದಟ್ಟಣೆ (Density) ಕಡಿಮೆಯಿರುವುದರಿಂದ ಇದು ಹರಡಿಕೊಂಡು ನೆಲದಿಂದ ಮೇಲೇರುವುದು ಅದರ ಗುಣ ಹಾಗಾಗಿ ಬಿಸಿಗಾಳಿಯು ಹರಡಿಕೊಂಡು ಮೇಲೇರುತ್ತದೆ. ಹಸಿರುಮನೆಯ ಚಾವಣಿಯ ಹತ್ತಿರದ ತಂಪನೆಯಗಾಳಿಯು ಬಿಸಿಗಾಳಿಗಿಂತ ಹೆಚ್ಚು ದಟ್ಟಣೆ ಹೊಂದಿರುವುದರಿಂದ ಇದು ಕೆಳಭಾಗಕ್ಕೆ ಬರುತ್ತದೆ. ಈ ತಂಪುಗಾಳಿಯು ಮಣ್ಣಿನಿಂದ ಹೊರಬರುತ್ತಿರುವ ಬಿಸಿಯನ್ನು ಹೀರಿಕೊಂಡು ಬಿಸಿಗಾಳಿಯಾಗಿ ಮತ್ತೆ ಮೇಲೇರತೊಡಗುತ್ತದೆ. ಹೀಗೆ ಮಣ್ಣಿನ ಮೇಲ್ಬಾಗದ ಕಡೆಯಿಂದ ಹಸಿರುಮನೆಯ ಚಾವಣಿಯ ಕಡೆಗೆ ಗಾಳಿಯು ಬಿಸಿಯಾಗತೊಡಗುತ್ತದೆ.

ಹಸಿರುಮನೆಗೆ ಬಳಸುವ ಗಾಜು/ಪ್ಲಾಸ್ಟಿಕ್‍ನ ಗುಣವೆಂದರೆ ಅದು ನೇಸರನ ಬೆಳಕನ್ನು ತನ್ನ ಮೂಲಕ ಹರಿಯಲು ಬಿಡುತ್ತದೆ ಆದರೆ ಹೆಚ್ಚು ಅಲೆಯಗಲ ಹೊಂದಿರುವ ಕಿರಣಗಳನ್ನು ಅಂದರೆ infrared rays ನ್ನು ತನ್ನ ಮೂಲಕ ಹರಿಯಲು ಬಿಡುವುದಿಲ್ಲ ಎಂದು ಮೊದಲೇ ತಿಳಿದಿದ್ದೇವೆ. ಹೀಗಾಗಿ ಮಣ್ಣಿನಿಂದ ಹೊರಬಂದ ಬಿಸಿಯು ಹಸಿರುಮನೆಯ ಗಾಳಿಗೆ ಸೇರಿ ಗಾಜು/ಪ್ಲಾಸ್ಟಿಕ್ ಮೂಲಕ ಹೊರಹೋಗಲಾಗದೆ ಇರುತ್ತದೆ. ಇದರಿಂದ ಹಸಿರುಮನೆಯ ಒಳಗಿನ ಗಾಳಿಯು ಬಿಸಿಯಾಗಿ, ಹಸಿರುಮನೆ ಹೊರಗಿನ ಗಾಳಿಯ ಬಿಸುಪಿಗಿಂತ (temperature) ಹೆಚ್ಚಿನ ಬಿಸುಪನ್ನು ಹೊಂದಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಹಸಿರುಮನೆಯ ಒಳಗೆ ಯಾವಾಗಲೂ ಹೊರಗಿನ ಗಾಳಿಪಾಡಿಗಿಂತ ಹೆಚ್ಚಿನ ಬಿಸುಪು ಇರುತ್ತದೆ. ಈ ಹೆಚ್ಚಿನ ಬಿಸುಪು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಮುಂದೆ ನೋಡೋಣ.

ಹಗಲಿನ ಹೊತ್ತು ನೇಸರನ ಬೆಳಕಿನಿಂದ ಹಸಿರುಮನೆಯ ಒಳಗೆ ಹೆಚ್ಚಿನ ಬಿಸುಪು ಇದ್ದರೆ ಇನ್ನೂ ಇರುಳಿನ ಹೊತ್ತಿನಲ್ಲಿ ಇಲ್ಲಿ ಬೆಚ್ಚಗಿನ ಗಾಳಿ ಇರುತ್ತದೆ. ಇದಕ್ಕೆ ಕಾರಣ, ಹಗಲೆಲ್ಲಾ ನೇಸರನ ಬೆಳಕಿನಿಂದ ಬಿಸಿಯಾದ ಹಸಿರು ಮನೆಯೊಳಗಿನ ಮಣ್ಣು ತನ್ನಲ್ಲಿರುವ ಬಿಸುಪನ್ನು ರಾತ್ರಿಯ ಹೊತ್ತು ಹೊರಗಾಳಿಗೆ ಬಿಡಲಾರಂಬಿಸುತ್ತದೆ. ಹಾಗು ಈ ಬಿಸಿಯನ್ನು ಗಾಜು/ಪ್ಲಾಸ್ಟಿಕ್ಕಿನ ಗೊಡೆಯ ನೆರವಿನಿಂದ ಹಸಿರುಮನೆಯ ಒಳಗೇ ಹಿಡಿದಿಡಿಲಾಗುತ್ತದೆ. ಹಾಗಾಗಿ ಹಸಿರು ಮನೆಯ ಒಳಗಿನ ಬಿಸುಪು ಹೊರಗಿನ ಗಾಳಿಯ ಬಿಸುಪಿಗಿಂತ ಹೆಚ್ಚಿರುತ್ತದೆ ಮತ್ತು ಇದು ಗಿಡಗಳ ಸುತ್ತಲಿನ ಗಾಳಿಯನ್ನು ಕೂಡಲೇ ತಂಪಾಗುವುದನ್ನು ತಡೆಯುತ್ತದೆ.

ಗಿಡಗಳ ಬೆಳವಣಿಗೆಗೆ ಹಸಿರುಮನೆ ಹೇಗೆ ನೆರವಾಗುತ್ತದೆ?
ನೇಸರನ ಬೆಳಕನ್ನು ಹಸಿರುಮನೆಯ ಒಳಗೆ ಹಾಯಿಸಿ ಅದರಿಂದ ಬಿಸಿಯಾದ ಮಣ್ಣು/ಗಿಡ/ನೀರಿನಿಂದ ಹೊರಬರುವ ತಿಳಿಗೆಂಪು ಕದಿರನ್ನು (infrared rays) ಹಿಡಿದಿಟ್ಟುಕೊಳ್ಳುವುದರಿಂದ ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.

 

1. ಹೆಚ್ಚಿನ ಬಿಸುಪು ಗಿಡದ ಬೆಳವಣಿಗೆಗೆ ಉಪಕಾರಿ:
ಪ್ರತಿಯೊಂದು ಮರಗಿಡಗಳು ಸೂಲುಗೂಡುಗಳಿಂದ (cell) ಆಗಿರುತ್ತದೆ. ಈ ಸೂಲುಗೂಡುಗಳಲ್ಲಿ ದಿನಕ್ಕೆ ನೂರಾರು ಬಗೆಯ ರಾಸಾಯನಿಕ ಚಟುವಟಿಕೆಗಳು (chemical reaction) ನಡೆಯುತ್ತಿರುತ್ತವೆ, ಇವು ಸೂಲುಗೂಡುಗಳ ಬೆಳವಣಿಗೆಗೆ ನೆರವಾಗುತ್ತವೆ. ಹೀಗೆ ನಡೆಯುವ ರಾಸಾಯನಿಕ ಚಟುವಟಿಕೆಗಳಿಗೆ ದೊಳೆಗಳು (enzymes) ನೆರವನ್ನು ನೀಡುತ್ತವೆ. ಈ ದೊಳೆಗಳು ರಾಸಾಯನಿಕ ಚಟುವಟಿಕೆಗೆ ಬಿರುಗೆ (catalyst)ಯಂತೆ ಕೆಲಸ ಮಾಡುತ್ತವೆ. ಗಿಡದ ಸೂಲುಗೂಡುಗಳ ರಾಸಾಯನಿಕ ಚಟುವಟಿಕೆಯಲ್ಲಿ ‘ಬೆಳಕಿನ ಅಡುಗೆ ‘(photosynthesis) ಕೂಡ ಒಂದು. ಹೀಗೆ ಬೆಳಕಿನ ಒಂದುಗೆಗೆ ನೆರವಾಗುವ ದೊಳೆಗಳು ಕೆಲವು ಹುಳಿಯಳತೆ (pH) ಮತ್ತು ಬಿಸುಪಿನಲ್ಲಿ ಚೆನ್ನಾಗಿ ಕೆಲಸಮಾಡುತ್ತವೆ. ಅತಿ ಕಡಿಮೆ ಹುಳಿಯಳತೆ ಮತ್ತು ಕಡಿಮೆ ಬಿಸುಪು ಇದ್ದರೆ ಈ ದೊಳೆಗಳ ಕೆಲಸ ಕುಂದುತ್ತದೆ. ಹಾಗೆಯೇ ಅತಿ ಹೆಚ್ಚು ಹುಳಿಯಳತೆ ಮತ್ತು ಬಿಸುಪು ಇದ್ದರೂ ಈ ದೊಳೆಗಳು ತಮ್ಮ ಕೆಲಸಮಾಡಲಾರವು ಮತ್ತು ಸಾಯುಲೂ ಬಹುದು. ಹಾಗಾಗಿ, ಈ ದೊಳೆಗಳು ಚೆನ್ನಾಗಿ ತಮ್ಮ ಬಿರುಗೆಯ ಕೆಲಸವನ್ನು ಚೆನ್ನಾಗಿ ಮಾಡಲು ಒಂದು ಒಳ್ಳೆಯ ಬಿಸುಪು ಇರಬೇಕಾಗುತ್ತದೆ. ದೊಳೆಗಳ ಬಗೆಯ ಆಧಾರದ ಮೇಲೆ ಅವು ಹೆಚ್ಚು ಕೆಲಸ ಮಾಡುವ ಬಿಸುಪು ಬೇರೆ ಬೇರೆಯಾಗಿರುತ್ತದೆ.

ಹಸಿರುಮನೆಯ ಒಳಗೆ ಹೊರಗಿನ ಗಾಳಿಗಿಂತ ಹೆಚ್ಚಿನ ಬಿಸುಪು ಇರುವುದರಿಂದ ಗಿಡದ ಸೂಲುಗೂಡುಗಳ ದೊಳೆಗಳು ಈ ಬಿಸುಪಿನಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿ ನಡೆಸಿ ಬೆಳಕಿನ ಒಂದುಗೆಯನ್ನು ನಡೆಸುತ್ತಿರುತ್ತವೆ. ಗಿಡಗಳಿಗೆ ಬೇಕಾದ ಬಿಸುಪನ್ನು ಮೊದಲೇ ತಿಳಿದುಕೊಂಡು ಆ ಬಿಸುಪನ್ನು ಹಸಿರುಮನೆಯ ಒಳಗೆ ಕಾದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೇಸರನ ಬೆಳಕು ಹೆಚ್ಚಾಗಿ ಹಸಿರುಮನೆಯ ಒಳಗಿನ ಬಿಸುಪು ಬೇಕಾದ ಬಿಸುಪಿಗಿಂತ ಹೆಚ್ಚಾದರೆ ಗಾಳಿಕಿಂಡಿಗಳ (Ventilator) ಮೂಲಕ ಬಿಸಿಗಾಳಿಯನ್ನು ಹೊರಹಾಕಿ ಹೊರಗಿನ ತಂಪುಗಾಳಿಯನ್ನು ಹಸಿರುಮನೆಯ ಒಳಗೆ ಬರುವಂತೆ ಏರ್ಪಾಡು ಮಾಡಬೇಕಾಗುತ್ತದೆ. ಅದಕ್ಕಾಗಿ ಹಸಿರುಮನೆಯಲ್ಲಿ ಗಾಳಿಕಿಂಡಿಗಳನ್ನು ಇಟ್ಟಿರಬೇಕಾಗುತ್ತದೆ. ಹಸಿರುಮನೆಯ ಕಿಟಕಿ ಬಾಗಿಲುಗಳು ಕೂಡ ಗಾಳಿಕಿಂಡಿಗಳಾಗಿ ಕೆಲಸ ಮಾಡುತ್ತವೆ. ಹೀಗೆ ಹಗಲೆಲ್ಲಾ ಬಿಸುಪಿನಲ್ಲಿ ಹೆಚ್ಚಿನ ಏರುಪೇರಾಗದೇ, ಬೇಕಾದ ಬಿಸುಪನ್ನು ಕಾಯ್ದುಕೊಳ್ಳುವುದರಿಂದ ಗಿಡದ ದೊಳೆಗಳು ನೇಸರನ ಬೆಳಕು ಸಿಗುವವರೆಗೂ ಚೆನ್ನಾಗಿ ಕೆಲಸಮಾಡಿ ಬೆಳಕಿನ ಅಡುಗೆಯನ್ನು ನಡೆಸುತ್ತವೆ. ಇದರಿಂದ ಹಸಿರು ಮನೆಯ ಒಳಗೆ ಗಿಡಗಳು ಬೇಗನೇ ಮತ್ತು ಚೆನ್ನಾಗಿ ಬೆಳೆಯುತ್ತವೆ.

2. ಹೆಚ್ಚಿನ ತೇವ (humidity) ಗಿಡದ ಬೆಳವಣಿಗೆಗೆ ಉಪಕಾರಿ:
ನೇಸರನ ಬೆಳಕಿದ್ದಾಗ ಬೆಳಕಿನ ಒಂದುಗೆಯನ್ನು ಗಿಡಗಳು ನಡೆಸುತ್ತವೆ ಎಂದು ನಾವು ಮೊದಲೇ ತಿಳಿದಿದ್ದೇವೆ. ಈ ಬೆಳಕಿನ ಒಂದುಗೆಗೆ ನೀರನ್ನೂ ಕೂಡ ಗಿಡಗಳು ಬಳಸುತ್ತವೆ. ಹಾಗಾಗಿ ಹಸಿರುಮನೆಯ ಒಳಗೆ ಸಾಕಷ್ಟು ನೀರಿನ ಏರ್ಪಾಡು ಗಿಡಗಳಿಗೆ ಬೇಕಾಗುತ್ತದೆ. ಮಣ್ಣಿನಿಂದ ಆವಿಯಾದ ನೀರಿನ ತೇವ ಮತ್ತು ಗಿಡಗಳ ಬೆಳಕಿನ ಅಡುಗೆಯಿಂದ ಹೊರಬಂದ ತೇವ ಹಸಿರುಮನೆಯ ಒಳಗೆಯೇ ಇರುತ್ತದೆ, ಗಾಜು/ಪ್ಲಾಸ್ಟಿಕ್ ಗೋಡೆಗಳನ್ನು ದಾಟಿ ತೇವಾಂಶವು ಹೊರಹೋಗಲಾಗದು. ಇದರಿಂದ ಮಣ್ಣಿನಲ್ಲಿರುವ ನೀರು ಬೇಗನೆ ಆವಿಯಾಗುವುದನ್ನು ತಪ್ಪಿಸಬಹುದು ಮತ್ತು ಈ ನೀರನ್ನು ಗಿಡಗಳ ಬೆಳಕಿನ ಅಡುಗೆಗೆ ಒದಗಿಸುತ್ತಿರ ಬಹುದು. ಒಂದು ವೇಳೆ, ಹಸಿರು ಮನೆಯ ಒಳಗೆ ತೇವಾಂಶವು ಅಗತ್ಯಕ್ಕಿಂತ ಹೆಚ್ಚಾದರೆ ಗಿಡಗಳಿಗೆ ಬೆಳಕಿನ ಅಡುಗೆಯಿಂದ ತೇವಾಂಶವನ್ನು ಹೊರಹಾಕಲು ತೊಡಕಾಗುತ್ತದೆ. ಹಾಗಾಗಿ ತೇವಾಂಶವನ್ನು ಬೇಕಾದಷ್ಟು ಮಾತ್ರ ಕಾಯ್ದುಕೊಳ್ಳಲು ಮತ್ತೊಮ್ಮೆ ಗಾಳಿಕಿಂಡಿಗಳ ನೆರವನ್ನು ಪಡೆಯಬಹುದು. ಒಳಗಿರುವ ತೇವದ ಗಾಳಿ ಹೊರಹೋಗಿ ಹೊರಗಿನ ಗಾಳಿ ಒಳಬರುವಂತೆ ಗಾಳಿಕಿಂಡಿಗಳನ್ನು ಹಸಿರುಮನೆಗಳಲ್ಲಿ ಅಳವಡಿಸಲಾಗಿರುತ್ತದೆ.

3. ಹೊರಗಿನ ಕ್ರಿಮಿಕೀಟಗಳಿಂದ ಕಾಯುವುದು.
ಹಸಿರುಮನೆಯು ಗಾಜು/ಪ್ಲಾಸ್ಟಿಕ್ ನ ಗೋಡೆಗಳಿಂದ ಕಟ್ಟಿರುವುದರಿಂದ ಗಿಡಗಳ ಬೆಳವಣಿಗೆಗೆ ತೊಂದರೆ ಕೊಡುವ ಹೊರಗಿನ ಕ್ರಿಮಿಕೀಟಗಳಿಂದ ದೂರವಿಡಬಹುದಾಗಿದೆ.

4. ಕೆಟ್ಟ ಗಾಳಿಪಾಡಿನಿಂದ ಕಾಯುವುದು.
ಹಸಿರುಮನೆಯ ಗಿಡಗಳನ್ನು ಅತಿ ಹೆಚ್ಚಿನ ಮಳೆ, ಗಾಳಿ ಮತ್ತು ಬಿಸಿಲಿನಿಂದ ಆಗುವ ತೊಂದರೆಗಳಿಂದ ಕಾಪಾಡಬಹುದು. ಅಲ್ಲದೇ ಇರುಳಿನ ಹೆಚ್ಚು ಹೊತ್ತು ಹಸಿರುಮನೆಯ ಒಳಗೆ ಬೆಚ್ಚಗಿನ ಗಾಳಿ ಇರುವುದರಿಂದ ತಂಪುಗಾಳಿಯಿಂದ ಗಿಡಗಳಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು. ಕೆಲವು ಕಡೆ ಹಸಿರುಮನೆಗಳಿಗೆ ಹಸಿರುಬಣ್ಣದ ಗಾಜು/ಪ್ಲಾಸ್ಟಿಕ್ ಅನ್ನು ಬಳಸಿರುತ್ತಾರೆ, ಇದು ನೇಸರನ ಬಿಸಿಲು ಅಗತ್ಯಕ್ಕಿಂತ ಹೆಚ್ಚಾಗಿ ಹಸಿರುಮನೆಯ ಒಳಗೆ ಬರದಂತೆ ತಡೆಯುತ್ತದೆ.

ಹೀಗೆ, ಹಸಿರುಮನೆಯನ್ನು ಬಳಸಿ ಗಿಡಗಳನ್ನು ಬೆಳಸುವುದರಿಂದ ಗಿಡಗಳಿಗೆ ಬೇಕಾದ ಬಿಸುಪು ಮತ್ತು ತೇವಾಂಶ ದಿನದ ಹೆಚ್ಚುಕಾಲ ಸಿಗುತ್ತಿರುತ್ತದೆ. ಇದರಿಂದ ಗಿಡಗಳು ತಮ್ಮ ಬೆಳಕಿನ ಒಂದುಗೆಯನ್ನ್ಯು ನಡೆಸಿ ಆದಷ್ಟು ಬೇಗ ಮತ್ತು ಚೆನ್ನಾಗಿ ಬೆಳೆಯುತ್ತವೆ. ಹಸಿರುಮನೆಯ ಬಿಸುಪು ಹಾಗು ತೇವಾಂಶವನ್ನು ನಮಗೆ ಬೇಕಾದ ಬಗೆಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಗಿದೆ. ಇದು ಹೆಚ್ಚು ಇಳುವರಿ ತರುವಲ್ಲಿ ನೆರವಾಗುತ್ತದೆ.

(ಮಾಹಿತಿ ಸೆಲೆ: www.ishs.org420magazine)

(ಚಿತ್ರ ಸೆಲೆ: wikipedia)