ಕಾಫಿ ಒಣಗಿಸಲೊಂದು ಚುರುಕಿನ ಚಳಕ

ರತೀಶ ರತ್ನಾಕರ.

ಕರ್ನಾಟಕದ ಹಲವು ಮುಖ್ಯ ಬೆಳೆಗಳಲ್ಲಿ ಕಾಫಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆಧಾರದ ಮೇಲೆ ಕೆಲವು ಕಡೆ ನವೆಂಬರ್ ಕೊನೆಯ ವಾರಕ್ಕೆ ಕುಯ್ಲಿಗೆ ಬಂದರೆ ಇನ್ನು ಕೆಲವು ಕಡೆ ಡಿಸೆಂಬರ್ ಕೊನೆಯ ವಾರಕ್ಕೆ ಕಾಫಿ ಹಣ್ಣು ಕುಯ್ಲಿಗೆ ಬರುತ್ತದೆ. ಹಾಗಾಗಿ ನವೆಂಬರ್ ಕೊನೆಯ ವಾರದಿಂದ ಜನವರಿಯ ಸುಗ್ಗಿ ಹಬ್ಬದವರೆಗೂ ಕಾಫಿ ಕುಯ್ಲಿನ ಕಾಲ ಎಂದು ಹೇಳಬಹುದು. ಹೀಗೆ ಕುಯ್ದ ಕಾಫಿಯನ್ನು ಮಾರುಕಟ್ಟೆಗೆ ಸಾಗಿಸುವ ಮೊದಲು ಅದನ್ನು ಒಣಗಿಸಲಾಗುತ್ತದೆ.

ಸದ್ಯಕ್ಕೆ ಕಾಫಿ ಬೆಳೆಗಾರರ ಮನೆಗಳ ಅಂಗಳದಲ್ಲಿ ನೇಸರನ ಬಿಸಿಲಿಗೆ ಹರಡಿ ಕಾಫಿಯನ್ನು ಹಲವು ದಿನಗಳ ಕಾಲ ಒಣಗಿಸಲಾಗುತ್ತದೆ. ಹೀಗೆ ಒಣಗಿಸುವುದಕ್ಕೆ, ಸಾಕಷ್ಟು ಜಾಗ ಹಾಗು ಮಯ್ಗೆಲಸದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಚಳಕಗಳನ್ನು ಬಳಸಿ ಕಾಫಿಯನ್ನು ಅತಿ ಕಡಿಮೆ ಜಾಗದಲ್ಲಿ, ಕಡಿಮೆ ಮೈಗೆಲಸದಲ್ಲಿ, ಆದಷ್ಟು ಬೇಗ ಒಣಗಿಸುವ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಂತಹ ಒಂದು ವಿಧಾನವನ್ನು ಇಲ್ಲಿ ನೋಡೋಣ ಬನ್ನಿ.

ಕಾಫಿ ಕುಯ್ಲು ಮುಗಿದ ಮೇಲೆ ಕೆಲವರು ಇಡೀ ಕಾಫಿಯನ್ನು ಸಿಪ್ಪೆಯ ಜೊತೆಗೆ ಒಣಗಿಸಿ ಮಾರುಕಟ್ಟೆಗೆ ಸಾಗಿಸಿದರೆ ಇನ್ನು ಕೆಲವರು ಹಸಿಯಾಗಿರುವ ಕಾಫಿ ಹಣ್ಣಿನ ಸಿಪ್ಪೆಯನ್ನು ಒಂದು ಬಿಣಿಗೆಯ ನೆರವಿನಿಂದ ಸಿಪ್ಪೆಯನ್ನು ತೆಗೆದು ಬಳಿಕ ಒಳಗಿನ ಕಾಳುಗಳನ್ನು ಒಣಗಿಸಿ ಮಾರುತ್ತಾರೆ. ಎರಡಕ್ಕೂ ಅವುಗಳದ್ದೇ ಆದ ಬೆಲೆಗಳಿವೆ. ಹೀಗೆ ಇಡಿಯಾಗಿ ಒಣಗಿಸಿದ ಕಾಫಿಯನ್ನು ಚೆರ‍್ರಿ ಎಂದು ಸಿಪ್ಪೆ ತೆಗೆದ ಕಾಫಿಯನ್ನು ಪಾರ‍್ಚ್ ಮೆಂಟ್ ಎಂದು ಕರೆಯುತ್ತಾರೆ.

Coffee cherry and parchment

ಹಸಿಯಾಗಿರುವ ಕಾಫಿಯಲ್ಲಿ ಸುಮಾರು 50% ನಿಂದ 70% ನಷ್ಟು ನೀರಿನ ಪಸೆ (moisture) ಇರುತ್ತದೆ. ಕಾಫಿಯು ಚೆನ್ನಾಗಿ ಒಣಗಿ ಮಾರುಕಟ್ಟೆಗೆ ಸಾಗಿಸಲು ಯೋಗ್ಯ ಎಂದು ಕರೆಸಿಕೊಳ್ಳಲು ಅದರ ಪಸೆ ಸುಮಾರು 10% ನಿಂದ 12% ಮಾತ್ರ ಇರಬೇಕು. ಕಾಫಿಯನ್ನು ಒಣಗಿಸುವುದರಲ್ಲಿ ಅದರ ಪಸೆಯನ್ನು 70% ನಿಂದ 10% ಗೆ ಇಳಿಸುವುದಾಗಿರುತ್ತದೆ.

ಒಂದು ಕಾಫಿಬೀಜದ ಪಸೆಯ ಆರುವಿಕೆ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲು ಸಿಪ್ಪೆಯ ಒಳಗಿನ ಭಾಗದ ಪಸೆಯು ಆರಿ ಹೊರಭಾಗಕ್ಕೆ ಬರುತ್ತದೆ, ಬಳಿಕ ಹೊರಭಾಗದ ಪದರದಲ್ಲಿರುವ ಪಸೆಯು ಆರಿ ಸುತ್ತಲಿನ ಗಾಳಿಗೆ ಸೇರಿಕೊಳ್ಳುತ್ತದೆ. ಹೀಗೆ ಎರೆಡು ಹಂತಗಳಲ್ಲಿ ಕಾಫಿಯು ಒಣಗಬೇಕಾದರೆ ಅದಕ್ಕೆ ಬಿಸಿಗಾಳಿಯನ್ನು ಹರಿಸುವುದರ ಮೂಲಕ ಪಸೆಯನ್ನು ಆರಿಸಿ ಒಣಗಿಸಬಹುದು ಎಂದು ಕಂಡುಕೊಂಡಿದ್ದಾರೆ.

ಯಾವುದೇ ಕಾಳುಗಳನ್ನು ಚೆನ್ನಾಗಿ ಒಣಗಿಸಲು ಗಾಳಿಯು ಈ ಮೂರು ಗುಣಗಳನ್ನು ಹೊಂದಿರಬೇಕು. ಅವು ಗಾಳಿಯು ಒಣಗಿರಬೇಕು (ಯಾವುದೇ ಪಸೆ ಗಾಳಿಯಲ್ಲಿ ಇರಬಾರದು), ಬಿಸಿಯಾಗಿರಬೇಕು ಮತ್ತು ಹರಿಯುತ್ತಿರಬೇಕು (ಒಂದೇ ಕಡೆ ನಿಂತಿರುವ ಗಾಳಿ ಕಾಳುಗಳ ಪಸೆಯನ್ನು ಹೊರಗಿನ ತಣ್ಣನೆಯ ಗಾಳಿಗೆ ಸಾಗಿಸಲಾಗದು). ಈ ಎಲ್ಲಾ ವಿವರಗಳನ್ನು ಕಲೆ ಹಾಕಿದಾಗ, ಕಾಫಿಯ ಪಸೆಯನ್ನು 10% ರಿಂದ 12% ಗೆ ಇಳಿಸಬೇಕಾದರೆ ಗಾಳಿಯನ್ನು 40 ಡಿಗ್ರಿ ಯಿಂದ 60 ಡಿಗ್ರಿಯಷ್ಟು ಬಿಸಿಯಾಗಿ ಹಾಯಿಸಿದಾಗ ಅದು ಆದಷ್ಟು ಬೇಗ ಮತ್ತು ಚೆನ್ನಾಗಿ ಒಣಗುತ್ತದೆ. (ಎಷ್ಟು ಹೊತ್ತು ಈ ಬಿಸಿಗಾಳಿಯನ್ನು ಹಾಯಿಸಬೇಕು ಎಂಬುದನ್ನು ಮುಂದೆ ತಿಳಿಯೋಣ)

ಈಗ, ಕಾಳಿನ ಒಣಗುವಿಕೆಯ ಹಂತಗಳು ಮತ್ತು ಗಾಳಿಗೆ ಇರಬೇಕಾದ ಬಿಸುಪಿನ ಬಗ್ಗೆ ತಿಳಿದೆವು. ಇನ್ನು ನೇಸರನ ಬೆಳಕು ಇಲ್ಲವೇ ಇತರ ಉರುವಲಿನ ನೆರವನಿಂದ ಬಿಸಿಗಾಳಿಯನ್ನು ಕಾಫಿಯ ಮೇಲೆ ಹಾಯಿಸಿ ಅದನ್ನು ಒಣಗಿಸುವ ಬಗೆಯನ್ನು ಅರಿಯೋಣ.

ಹೊಸಬಗೆಯ ಒಣಗಿಸುವಿಕೆಯಲ್ಲಿ ಎರೆಡು ಬಗೆಗಳಲ್ಲಿ ಬಿಸಿಗಾಳಿಯನ್ನು ಹಾಯಿಸಬಹುದು, ಒಂದು ನೇಸರನ ಬೆಳಕಿನಿಂದ ಮತ್ತೊಂದು ಉರುವಲುಗಳಿಂದ (ಬಯೋಮಾಸ್, ಸವ್ದೆ ಮತ್ತಿತರೆ ಉರುವಲು). ಚಿತ್ರ 1 ರಲ್ಲಿ ಇದರ ಮಾದರಿಯನ್ನು ನೀಡಲಾಗಿದೆ. ಅದರ ಒಂದೊಂದು ಭಾಗಗಳು ಮತ್ತು ಒಣಗಿಸುವುದರಲ್ಲಿ ಅವುಗಳ ಕೆಲಸವನ್ನು ತಿಳಿಯೋಣ.

Coffee Drying 1

(ಕಾಫಿಯನ್ನು ಒಣಗಿಸುವ ಮಾದರಿ)

ಒಣಗಿಸುವ ಕೋಣೆ: ಒಣಗಿಸುವ ಕೋಣಯು ಬೇಕಾದಷ್ಟು (ಎತ್ತುಗೆಗಾಗಿ 20×30 (ಉದ್ದ x ಅಗಲ)ರಷ್ಟು) ಜಾಗದಲ್ಲಿ ಕಟ್ಟಿರಬೇಕು. ಕೋಣೆಯ ಒಳಗಿನ ಗೋಡೆಗಳಿಗೆ ಮರದ ಹಲಗೆ (ಪ್ಲಯ್ ವುಡ್) ಹೊಡೆದಿರಬೇಕು, ಇದು ಬಿಸಿಗಾಳಿಯನ್ನು ಹೊರಗೆ ಹೋಗದಂತೆ ತಡೆಯುತ್ತದೆ. ಕೋಣೆಯ ಮಾಡು (ಸೂರು) ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ಮುಖ ಮಾಡಿರಬೇಕು, ಇದರಿಂದ ಹೆಚ್ಚು ಹೊತ್ತು ನೇಸರನ ಬೆಳಕು ಮಾಡಿನ ಮೇಲೆ ಬೀಳುವಂತಾಗುತ್ತದೆ. (ಚಿತ್ರ 2 ನ್ನು ನೋಡಿ)

Coffee Drying 2

(ನೇಸರ ಪಟ್ಟಿ, ಬಿಸಿಗಾಳಿ ಕೊಳವೆಯ ಸೀಳುನೋಟ)

ನೇಸರ ಪಟ್ಟಿ: ಕೋಣೆಯ ಮಾಡಿನ ಮೇಲೆ ಮರದ ಹಲಗೆಗಳನ್ನು (ಪ್ಲಯ್ ವುಡ್) ಹೊಡೆದು ಅದರ ಮೇಲೆ ಮರದ ಪಟ್ಟಿಯನ್ನು ಮಾಡಿನ ಇಳಿಜಾರಿಗೆ ಅಡ್ಡಲಾಗಿ ಹೊಡೆದಿರಬೇಕು (ಎತ್ತುಗೆಗೆ ಸುಮಾರು 3 ಇಂಚುಗಳಷ್ಟು ದಪ್ಪದ ಮರದ ಪಟ್ಟಿ). ಈ ಮರದ ಪಟ್ಟಿಗಳ ಮೇಲೆ ನೇಸರ ಪಟ್ಟಿಗಳನ್ನು ಹೊಡೆಯಬೇಕು (ಸಾಮಾನ್ಯವಾಗಿ ಕಪ್ಪು ಬಣ್ಣದ ತಗಡಿನ ಪಟ್ಟಿಗಳನ್ನು ಬಳಸಲಾಗುವುದು). ಈಗ ನೇಸರ ಪಟ್ಟಿ ಮತ್ತು ಮಾಡಿನ ಹಲಗೆಯ ನಡುವೆ ಸಣ್ಣ ಜಾಗ ಇರುತ್ತದೆ. ಈ ಜಾಗದಲ್ಲಿ ಗಾಳಿಯು ಸುಳಿದಾಡುತ್ತದೆ. ಗಾಳಿಯು ತೆಂಕಣ/ಬಡಗಣ ದಿಕ್ಕಿನಿಂದ ಬಡಗಣ ಇಲ್ಲವೇ ತೆಂಕಣ ದಿಕ್ಕಿನ ಮೂಲಗ ಈ ಜಾಗದ ಒಳಗೆ ಬರುತ್ತಿರುತ್ತದೆ. (ಚಿತ್ರ 2 ನ್ನು ನೋಡಿ)

ಬಿಸಿಗಾಳಿ ಕೊಳವೆ: ನೇಸರ ಪಟ್ಟಿ ಮತ್ತು ಮಾಡಿನ ನಡುವೆ ಉಂಟಾಗುವ ಬಿಸಿಗಾಳಿಯನ್ನು ಕೋಣೆಯ ಒಳಗೆ ಸಾಗಿಸಲು ದೊಡ್ಡದ್ದಾದ ಒಂದು ಕೊಳವೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮಾಡಿಗೆ ಸೇರಿಸಬೇಕು. ಈ ಕೊಳವೆಯು ಬಿಸಿಯನ್ನು ಹೊರಹಾಕದಿರುವ ವಸ್ತುವಿನಿಂದ ಮಾಡಿರಬೇಕು.

ಬಲೆ/ಬುಟ್ಟಿ: ಇದರಲ್ಲಿ ಕಾಫಿ ಬೀಜಗಳನ್ನು ಒಣಗಿಸಲು ಹಾಕಲಾಗುವುದು. ಬಿಸಿಯನ್ನು ತಡೆದುಕೊಳ್ಳುವ ವಸ್ತುವಿನಿಂದ ಇದನ್ನು ಮಾಡಿರಬೇಕು. ಇದರ ಬುಡದಲ್ಲಿ ಸಣ್ಣ ಕಿಂಡಿಗಳಿದ್ದು, ಗಾಳಿಯ ಒಳಬರುವಂತಿರಬೇಕು (ಬಲೆಯ ಹಾಗೆ ಸಣ್ಣ ಸಣ್ಣ ಕಿಂಡಿಗಳಿರಬೇಕು)

ಬೀಸಣಿಕೆ: ಕೊಳವೆಯಿಂದ ಬಂದ ಬಿಸಿಗಾಳಿಯನ್ನು ಒಣಗಲು ಹಾಕಿರುವ ಕಾಫಿ ಬೀಜದ ಬುಟ್ಟಿಯ ಕಡೆ ಜೋರಾಗಿ ಹಾಯಿಸಲು ಮತ್ತು ಗಾಳಿಯ ಬಿಸುಪನ್ನು ಆದಷ್ಟು ಹೆಚ್ಚಿನ ಬಿಸುಪಿನಲ್ಲಿ ಕಾದಿಡಲು ಇದು ನೆರವಾಗುತ್ತದೆ.

ಬಯೋಮಾಸ್/ಉರುವಲಿನ ಒಲೆ: ಬಯೋಮಾಸ್/ಉರುವಲಿನ ಒಲೆಯಿಂದ ಹೊರಗಿನ ಗಾಳಿಯನ್ನು ಬಿಸಿಮಾಡಿ ಹಾಯಿಸ ಬಹುದಾಗಿದೆ. ಬಗೆಬಗೆಯ ಉರುವಲಿನ/ಬಯೋಮಾಸ್ ಒಲೆಗಳು ಮಾರುಕಟ್ಟೆಯಲ್ಲಿ ಸಿಗಲಿದ್ದು, ಗಾಳಿಯನ್ನು 40 ಡಿಗ್ರಿಯಿಂದ 60 ಡಿಗ್ರಿಯವರೆಗೆ ಕಾಯಿಸುವ ಸಾಮರ್‍ತ್ಯವುಳ್ಳ ಒಲೆಗಳನ್ನು ಬಳಸಬೇಕಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ:

ಮೊದಲು ನೇಸರನಿಂದ ಬಿಸಿಗಾಳಿಯನ್ನು ಪಡೆದು ಒಣಗಿಸುವ ಬಗೆಯನ್ನು ನೋಡೋಣ. ನೇಸರನ ಬೆಳಕು ಪಟ್ಟಿಯ ಮೇಲೆ ಬಿದ್ದೊಡನೆ ಪಟ್ಟಿಯ ಮೇಲ್ಬಾಗ ಮತ್ತು ಕೆಳಭಾಗದಲ್ಲಿರುವ ಗಾಳಿಯು ಬಿಸಿಯಾಗುತ್ತದೆ. ನೇಸರನ ಪಟ್ಟಿಯ ಸುತ್ತ ಗಾಳಿಯ ಬಿಸುಪು ಹೆಚ್ಚಿದಂತೆ ಗಾಳಿಯು ಕಡಿಮೆ ಬಿಸುಪಿನ ಕಡೆಗೆ ನಡೆಯುತ್ತದೆ. ಬಿಸಿಗಾಳಿಯ ಕೊಳವೆಯಲ್ಲಿ ಪಟ್ಟಿಯ ಬಳಿಗಿಂತ ಕಡಿಮೆ ಬಿಸುಪು ಇರುತ್ತದೆ, ಅಲ್ಲದೇ ಬೀಸಣಿಕೆಯು ಗಾಳಿಯನ್ನು ಕೊಳವೆಯಿಂದ ಸೆಳೆದು ಕಾಫಿ ಬುಟ್ಟಿಯ ತಳಕ್ಕೆ ಸಾಗಿಸುತ್ತಿರುತ್ತದೆ.

ಇದರಿಂದ ಬೀಸಣಿಕೆಯಿರುವ ಕೊಳವೆಯ ಭಾಗದ ಗಾಳಿಯ ಒತ್ತಡವು ನೇಸರನ ಪಟ್ಟಿಯ ಕೆಳಗಿನ ಗಾಳಿಯ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹಾಗಾಗಿ ನೇಸರನ ಪಟ್ಟಿಯ ಸುತ್ತಲಿರುವ ಬಿಸಿಗಾಳಿಯು ಕೊಳವೆಯಲ್ಲಿ ಸಾಗಿ ಬೀಸಣಿಕೆಯ ಬಳಿ ಬರುತ್ತದೆ. ಈ ಬೀಸಣಿಕೆಯು ದೊಡ್ಡ ಕೊಳವೆಯಿಂದ ಬಂದ ಬಿಸಿಗಾಳಿಯನ್ನು ತನ್ನ ಮುಂದಿನ ಸಣ್ಣಕೊಳವೆಗೆ ಜೋರಾಗಿ ಸಾಗಿಸುತ್ತದೆ. ಈ ಗಾಳಿಯು ಬುಟ್ಟಿಯಲ್ಲಿರುವ ಕಾಫಿ ಬೀಜಗಳ ನಡುವೆ ಸಾಗಿ ಅದರ ಪಸೆಯನ್ನು ಆರಿಸತೊಡಗುತ್ತದೆ. ಮೇಲೆ ಬಂದ ಪಸೆ(Moisture)ಯು ಕೋಣೆಯ ಗಾಳಿಗೆ ಸೇರಿಹೋಗುತ್ತದೆ.

ಕಾಫಿ ಒಣಗಿಸುವ ಹಂತಗಳು:
ಕಾಫಿಯನ್ನು ಎರಡು ಹಂತಗಳಲ್ಲಿ ಒಣಗಿಸಲಾಗುತ್ತದೆ.
1. ಮೊದಲು ಹಸಿಯಾದ ಕಾಫಿಯಲ್ಲಿರುವ ನೀರಿನ ಅಂಶವನ್ನು ತೆಗೆಯಬೇಕಾಗುತ್ತದೆ ಅದಕ್ಕಾಗಿ ಕಾಫಿಯನ್ನು ಒಂದು ಬುಟ್ಟಿಗೆ ಹಾಕಿ ಬುಟ್ಟಿಯ ಮೇಲಿನಿಂದ ಸಾಮಾನ್ಯಗಾಳಿ ಇಲ್ಲವೇ ಕೊಂಚ ಬಿಸಿ ಇರುವ ಗಾಳಿ(40 ಡಿಗ್ರಿಗಿಂತ ಕಡಿಮೆ)ಯನ್ನು ಹಾಯಿಸಲಾಗುತ್ತದೆ. ನೀರಿನಿಂದ ಕೂಡಿರುವ ಕಾಫಿಯ ಮೇಲೆ 40 ಡಿಗ್ರಿಗಿಂತ ಬಿಸಿ ಇರುವ ಗಾಳಿಯನ್ನು ಹಾಯಿಸಿದರೆ ಅದು ಕಾಫಿಯ ಬಣ್ಣ ಮತ್ತು ಪರಿಮಳದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆಗಳಿವೆ. ಹೀಗೆ ಕಾಫಿಯ ಬುಟ್ಟಿಯ ಮೇಲಿನಿಂದ ಗಾಳಿಯನ್ನು ಹಾಯಿಸಿದಾಗ ಅದರ ಮೇಲಿರುವ ನೀರಿನಂಶವು ಬುಟ್ಟಿಯ ಕೆಳಗಿಳಿದು ಬುಟ್ಟಿಯ ತೂತುಗಳಲ್ಲಿ ಹರಿದು ಹೊರಹೋಗುತ್ತದೆ.

ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಹೀಗೆ ಗಾಳಿಯನ್ನು ಹಾಯಿಸಿ ನೀರನ್ನು ಹೊರತೆಗೆಯಬೇಕಾಗುತ್ತದೆ. ಈ ಬಗೆಯನ್ನು ಮುನ್ನಾರಿಕೆ(ಪ್ರೀ-ಡ್ರಯಿಂಗ್) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 6×6 ಅಡಿಗಳಷ್ಟು ದೊಡ್ಡದಿರುವ ಕಾಫಿ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಕಾಫಿಯನ್ನು ಹರಡಿ ನೀರನ್ನು ತೆಗೆಯಲು 1.5 ಹಾರ‍್ಸ್ ಪವರ್ ಸಾಮರ್ಥ್ಯ ಹೊಂದಿರುವ ಮತ್ತು 18 ಇಂಚು ದುಂಡಳತೆ ಇರುವ ಬೀಸಣಿಕೆಯನ್ನು ಬಳಸಲಾಗುತ್ತದೆ.

2. ಎರಡನೆಯ ಹಂತದಲ್ಲಿ ನೀರನ್ನು ಆರಿಸಿದ ಕಾಫಿಯನ್ನು ಬಿಸಿಗಾಳಿ ಬರುವ ಬುಟ್ಟಿಗೆ ಹಾಕಿ ಒಣಗಿಸಲಾಗುತ್ತದೆ. ಈ ಬುಟ್ಟಿಯೂ ಕೂಡ ಮುನ್ನಾರಿಕೆಯಲ್ಲಿ ಬಳಸಿದಷ್ಟು ದೊಡ್ಡದಾಗಿಯೇ ಇದ್ದು, 40-60 ಡಿಗ್ರಿ ಬಿಸುಪಿರುವ ಗಾಳಿಯನ್ನು ಮಾತ್ರ ಬುಟ್ಟಿಯ ತಳಭಾಗದಿಂದ ಹಾಯಿಸಲಾಗುತ್ತದೆ. ಇದರಲ್ಲೂ ಕೂಡ ಬೀಸಣಿಕೆಯ ಸಾಮರ್ಥ್ಯವು 1.5 ಹಾರ‍್ಸ್ ಪವರ್ ಇದ್ದು 18 ಇಂಚು ದುಂಡಳತೆ ಹೊಂದಿರುತ್ತದೆ.

Coffee Drying 3

(ಕಾಫಿ ಒಣಗುವ ಪಟ್ಟಿಗಳು)

ಕಾಫಿ ಒಣಗುವುದು ಒಣಗಿಸುವ ಬುಟ್ಟಿ ಇಲ್ಲವೇ ಬಲೆಯ ಆದರಾದ ಮೇಲೆ ಬೇರೆ ಬೇರೆ ಪಟ್ಟಿಗಳಲ್ಲಿ ಒಣಗುತ್ತಾ ಬರುತ್ತದೆ. ಚಿತ್ರ 3ಅ ನಲ್ಲಿ ತೋರಿಸುರುವಂತೆ ಬುಟ್ಟಿಯಲ್ಲಿ ಕಾಫಿಯನ್ನು ದಪ್ಪನಾಗಿ ಹಾಕಿದ್ದಾಗ, ಬಿಸಿಗಾಳಿಯು ಕೆಳಗಿನಿಂದ ಮೇಲಕ್ಕೆ ಹರಿಯುತ್ತಿರುತ್ತದೆ. ಬಿಸಿಗಾಳಿಯು ಮೊದಲು ಬುಡದಲ್ಲಿರುವ ಕಾಫಿಯ ಪಸೆ (moisture)ಯನ್ನು ಹೀರುಕೊಳ್ಳುತ್ತಾ ಬರುತ್ತದೆ, ಹೀಗೆ ಹೀರಿಕೊಳ್ಳುವ ಗಾಳಿಯು ಬುಟ್ಟಿಯಲ್ಲಿ, ಕಾಳುಗಳ ನಡುವೆ ಮೇಲೆ ಸರಿದಂತೆ ತನ್ನ ಬಿಸುಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ, ಮೇಲಿನ ಭಾಗದಲ್ಲಿರುವ ಕಾಫಿಯೂ ಕೆಳಗಿನ ಭಾಗದ ಕಾಫಿಗಿಂತ ಬೇಗ ಒಣಗುವುದಿಲ್ಲ.

ಹೀಗೆ ಬುಟ್ಟಿಯಲ್ಲಿ ದಪ್ಪನಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಮೊದಲಿಗೆ ಮೂರು ಪಟ್ಟಿಗಳು ಮೂಡುತ್ತವೆ ಅವು ಒಣಗಿದ ಪಟ್ಟಿ, ಒಣಗುತ್ತಿರುವ ಪಟ್ಟಿ ಮತ್ತು ಒಣಗಿರದ ಪಟ್ಟಿಗಳು. ಈ ಪಟ್ಟಿಗಳ ಅಗಲವು ಕಾಫಿಯಲ್ಲಿರುವ ಪಸೆ, ಹರಿಯುತ್ತಿರುವ ಗಾಳಿಯ ಬಿಸುಪು ಮತ್ತು ಗಾಳಿಯ ವೇಗಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಕಾಫಿಯ ಸರಿಯಾದ ಒಣಗುವಿಕೆಗೆ ಬುಟ್ಟಿಯಲ್ಲಿರುವ ಕಾಳುಗಳನ್ನು ಕೆಲವು ಗಂಟೆಗಳ ಅಂತರದಲ್ಲಿ ಮಗುಚುತ್ತಿರಬೇಕು. ಆಗ ಒಣಗಿದ ಕಾಫಿ ಮೇಲೆ ಬಂದು ಒಣಗಿರದ ಕಾಫಿ ತಳಕ್ಕೆ ಹೋಗಿ ಒಣಗಲಾರಂಬಿಸುತ್ತದೆ.

ಇನ್ನು ತೆಳುವಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಚಿತ್ರ 3ಇ ನಲ್ಲಿ ತೋರಿಸುರುವಂತೆ ಕೇವಲ ಒಂದೇ ಪಟ್ಟಿ ಇದ್ದು ಅದು ಒಣಗುತ್ತಿರುವ ಪಟ್ಟಿಯಾಗಿರುತ್ತದೆ. ಗಾಳಿಗೆ ಕಾಳುಗಳ ನಡುವೆ ಸಾಗಲು ಸಾಕಷ್ಟು ಜಾಗ ಇರುವುದರಿಂದ ಇದು ಬಲೆ/ಬುಟ್ಟಿಯಲ್ಲಿ ಹರಡಿರುವ ಎಲ್ಲಾ ಕಾಳುಗಳನ್ನು ಒಂದೇ ಬಗೆಯಲ್ಲಿ ಒಣಗಿಸುತ್ತದೆ.

ಕಾಫಿಯನ್ನು ಒಣಗಿಸುವ ಬುಟ್ಟಿಯ ಅಳತೆ, ಬೀಸಣಿಕೆಯ ಸಾಮರ‍್ತ್ಯ ಎಲ್ಲವೂ ಮತ್ತು ಒಣಗಿಸಲು ಬೇಕಾದ ಜಾಗವು ಬೆಳೆಗಾರರು ವರುಶಕ್ಕೆ ಎಷ್ಟು ಬೆಳೆ ಬೆಳೆಯುತ್ತಾರೆ ಎಂಬುದರ ಮೇಲೆ ತೀರ‍್ಮಾನಿಸಬೇಕಾಗುತ್ತದೆ. ಹಲವು ಅರಕೆಗಳ ಮೂಲಕ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.

  1. ವರುಶಕ್ಕೆ ಒಬ್ಬ ಬೆಳೆಗಾರ 200 ಮೂಟೆ (10000 ಕಿಲೋ) ಕಾಫಿ ಬೆಳೆಯುತ್ತಿದ್ದರೆ, ಆತ 10×10 ಆಡಿಗಳಷ್ಟು ದೊಡ್ಡ ಬುಟ್ಟಿಗಳಲ್ಲಿ ಒಣಗಿಸಬೇಕಾಗುತ್ತದೆ (ಇದರಲ್ಲಿ ಸುಮಾರು 250 ಕಿಲೋ ಕಾಫಿ ಹಿಡಿಯುತ್ತದೆ).
  2. ಬೀಸಣಿಕೆಯ ಸಾಮರ‍್ತ್ಯವು 100 ಸಿ. ಎಪ್. ಎಮ್ (ಕ್ಯುಬಿಕ್ ಪೀಟ್ ಪರ್‍ ಮಿನಿಟ್) ಪರ್ ಸ್ಕ್ವಯರ್ ಪರ್ ಡ್ರಯಿಂಗ್ ಏರಿಯಾ. ಅಂದರೆ 10×10 ಅಡಿಗಳಷ್ಟು ದೊಡ್ಡದಾದ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಹರಡಿರುವ ಕಾಫಿಗೆ ಒಂದು ಇಂಚಿನಷ್ಟು ಒತ್ತಡದಲ್ಲಿ ಗಾಳಿಯನ್ನು ಹಾಯಿಸಲು 1000 ಸಿ.ಎಪ್.ಎಮ್ ಸಾಮರ್ಥ್ಯ ಹೊಂದಿರುವ ಬೀಸಣಿಕೆ ಬಳಸಬೇಕಾಗುತ್ತದೆ.
  3. ಗಾಳಿಯನ್ನು 10 ರಿಂದ 60 ಡಿಗ್ರೀ ಬಿಸುಪಿನಲ್ಲಿ ತಡೆಯಿಲ್ಲದೇ ಹರಿಸಿದರೆ, 10×10 ಬುಟ್ಟಿಯಲ್ಲಿ ಒಂದು ಅಡಿ 24 ಗಂಟೆಗಳಲ್ಲಿ ಕಾಫಿಯ ಪಸೆಯು 10% ರಿಂದ 12%ಗೆ ಇಳಿದು, ಕಾಫಿಯು ಒಣಗಿ ಸಿದ್ದವಾಗುತ್ತದೆ. ಇಶ್ಟೇ ಕಾಫಿಯನ್ನು ಅಂಗಳದಲ್ಲಿ ನೇರವಾದ ನೇಸರನ ಬಿಸಿಲಿನಲ್ಲಿ ಒಣಗಿಸಲು ಸುಮಾರು 4 ರಿಂದ 5 ದಿನಗಳು ತಗಲುತ್ತವೆ. ಮತ್ತು ಅದಕ್ಕೆ ಹೆಚ್ಚಿನ ಮಯ್ಗೆಲಸದ ಅವಶ್ಯಕತೆ ಇದೆ. ಅಲ್ಲದೇ ಪಡುವಣ ಬೆಟ್ಟದ ಸಾಲಿನಲ್ಲಿ ಡಿಸೆಂಬರ್‍ ಹಾಗು ಜನವರಿ ಮೊದಲವಾರ ಕೆಲವೊಮ್ಮೆ ಮಳೆಯಾಗುವ ಸಾದ್ಯತೆಗಳು ಇರುವುದರಿಂದ ಕಾಫಿ ಯನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.

ಕಾಫಿ ಬೆಳೆಯುವ ಜಾಗದಲ್ಲಿ ಎಲ್ಲಾ ದಿನಗಳೂ ಒಂದೇ ಬಗೆಯ ಬಿಸಿಲು ಇರುವುದಿಲ್ಲ, ಹಾಗಾಗಿ 40 ರಿಂದ 60 ಡಿಗ್ರಿ ಬಿಸುಪಿನಲ್ಲಿ ಯಾವಗಲೂ ಗಾಳಿಯನ್ನು ಹಾಯಿಸಲು ಆಗುವುದಿಲ್ಲ ಇದಕ್ಕಾಗಿ ಬಯೋಮಾಸ್/ಉರುವಲಿನ ಒಲೆಯ ನೆರವನ್ನು ಪಡೆಯಬಹುದು. ಇರುಳಿನಲ್ಲಿ ನೇಸರ ಬಿಸಿಲು ಸಿಗದೇ ಇರುವುದರಿಂದ ಈ ಒಲೆಗಳ ನೆರವಿನಿಂದ ಬಿಸಿಗಾಳಿಯನ್ನು ಹಾಯಿಸಿ ಒಣಗಿಸಬಹುದು. ಹೀಗೆ ಬಿಟ್ಟಿಯಾಗಿ ಸಿಗುವ ನೇಸರನ ಬಿಸಿಲು ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಉರುವಲುಗಳನ್ನು ಬಳಸಿ ಬಿಸಿಗಾಳಿಯನ್ನು ಒದಗಿಸಿ ಕಾಫಿಯನ್ನು ಕಡಿಮೆ ಮಯ್ಗೆಲಸ ಮತ್ತು ಹೆಚ್ಚಿನ ಗುಣಮಟ್ಟದಲ್ಲಿ ಒಣಗಿಸಬಹುದು.

ಬೆಳೆಗಾರರು ವರುಶಕ್ಕೆ ಬೆಳೆಯುವ ಕಾಫಿಯ ಅಳತೆ, ಆ ಜಾಗದಲ್ಲಿನ ಬಿಸುಪು ಮತ್ತು ಹಣಕಾಸಿನ ವಿವರಗಳನ್ನು ಕಲೆಹಾಕಿ ಪರಿಣಾಮಕಾರಿಯಾದ ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಈ ಬಗೆಯಿಂದ ಕಾಫಿ ಒಂದೇ ಅಲ್ಲ ಬೇರೆ ಬೇರೆ ಕಾಳುಗಾಳನ್ನು ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು.

 

(ಮಾಹಿತಿಸೆಲೆ: academic.uprm.eduaee-intec.at)

ಜಿ-ಕ್ಯಾನ್ಸ್: ನೆರೆಗೊಂದು ಬಗೆಹರಿಕೆ

ರತೀಶ ರತ್ನಾಕರ.

G-Cans-9003

ನೆಲನಡುಗುವಿಕೆ ಮತ್ತು ನೆರೆಯಂತಹ ಪ್ರಕೃತಿ ವಿಕೋಪಗಳು ಜಪಾನ್ ನಾಡಿಗೆ ಹೊಸದೇನಲ್ಲ. ಇಂತಹ ಹಲವಾರು ಆಪತ್ತುಗಳನ್ನು ಎದುರಿಸಲು ಅಲ್ಲಿನ ಮಂದಿ ಎಂದಿಗೂ ಅಣಿಯಾಗಿರುತ್ತಾರೆ. ಇಂತಹ ಆಪತ್ತುಗಳಿಂದ ಕಾಪಾಡಿಕೊಳ್ಳಲು ಹೆಚ್ಚಾಗಿ ಅವರು ಅರಿಮೆಯ ಮೊರೆಹೋಗಿ, ಅದರ ಆಧಾರದ  ಮೇಲೆ ತಮ್ಮ ಮನೆ ಹಾಗು ಊರುಗಳನ್ನು ಕಟ್ಟಿಕೊಂಡಿದ್ದಾರೆ. ಇಂತಹದ್ದೇ ಒಂದು ಹಮ್ಮುಗೆಗಳಲ್ಲಿ ಜಿ-ಕ್ಯಾನ್ಸ್ ಹಮ್ಮುಗೆಯೂ ಒಂದು. ಜಪಾನಿನ ರಾಜಧಾನಿ ಟೋಕಿಯೋ ನಗರವನ್ನು ನೆರೆಯಿಂದ ಕಾಪಾಡಿಕೊಳ್ಳಲು ಹಾಕಿಕೊಂಡ ಹಮ್ಮುಗೆಯೇ ಜಿ-ಕ್ಯಾನ್ಸ್ (G-Cans). ಇದು ನೆರೆಯಿಂದ ಕಾಪಾಡಿಕೊಳ್ಳಲು ಇರುವ ಹಮ್ಮುಗೆಗಳಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಹಮ್ಮುಗೆಯಾಗಿದೆ.

ಟೋಕಿಯೋ ನಗರವು ಹಲವಾರು ನದಿಗಳಿಂದ ಕೂಡಿದೆ, ಮಳೆಯು ಹೆಚ್ಚಾದಂತೆ ಈ ನದಿಗಳಲ್ಲಿ ನೆರೆ ಬಂದು ಟೋಕಿಯೋ ನಗರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲೆಂದೇ ಜಿ-ಕ್ಯಾನ್ಸ್ ಹಮ್ಮುಗೆಯನ್ನು ಕಯ್ಗೆತ್ತಿಕೊಳ್ಳಲಾಯಿತು. ಇದನ್ನು ಮೆಟ್ರೋಪಾಲಿಟನ್ ಏರಿಯಾ ಅವ್ಟರ್ ಅಂಡರ್ ಗ್ರವ್‍ಂಡ್ ಡಿಸ್‍ಚಾರ್‍ಜ್ ಚಾನೆಲ್ (Metropolitan Area Outer Underground Discharge Channel) ಎಂದು ಕೂಡ ಕರೆಯುತ್ತಾರೆ. ಈ ಹಮ್ಮುಗೆಯಲ್ಲಿ ನದಿಯಿಂದ ಬರುವ ಹೆಚ್ಚಿನ ನೀರನ್ನು ಉರುಳೆ ಆಕಾರವಿರುವ ಅಯ್ದು ಬೇರೆ ಬೇರೆ ಹೆಗ್ಗಂಬ(silos)ಗಳು ಮತ್ತು ಸುರಂಗದ ನೆರವಿನಿಂದ ಟೋಕಿಯೋ ನಗರದ ಹೊರಕ್ಕೆ ಕಳುಹಿಸಲಾಗುವುದು. ನೀರನ್ನು ಟೋಕಿಯೋ ನಗರದಿಂದ 30 ಕಿ. ಮೀ ದೂರವಿರುವ ಕಸುಕಾಬೆ ನಗರದ ಬಳಿ ಇರುವ ಎಡೊಗೊವಾ ನದಿಗೆ ಹರಿಸಲಾಗುವುದು. ಬನ್ನಿ ಇದನ್ನು ಹೇಗೆ ಮಾಡಲಾಗಿದೆ ಎಂಬುದನ್ನು ತಿಳಿಯೋಣ.

l_tecb130312

ಟೋಕಿಯೋದಲ್ಲಿ ಬರುವ ನೆರೆಯ ನೀರನ್ನು ಸುರಂಗಕ್ಕೆ ತಲುಪಿಸಲು ನಗರದ ಅಯ್ದು ಕಡೆಗಳಲ್ಲಿ ಉರುಳೆ ಆಕಾರಾದ ಹೆಗ್ಗಂಬಗಳನ್ನು ಕಟ್ಟಲಾಗಿದೆ. ಒಂದೊಂದು ಹೆಗ್ಗಂಬ 65 ಮೀ. ಎತ್ತರ ಮತ್ತು 32 ಮೀ. ಅಡ್ಡಗಲವಿದೆ. ಈ ಹೆಗ್ಗಂಬದ ತುದಿಗಳು ನೆಲದಿಂದ ಕೆಲವೇ ಮೀಟರುಗಳಷ್ಟು ಎತ್ತರವಿದ್ದು ಉಳಿದ ಭಾಗವೆಲ್ಲ ನೆಲದ ಅಡಿಗೆ ಹೋಗಿರುತ್ತದೆ. ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಹೆಗ್ಗಂಬಗಳ ನಡುವೆ ಸುರಂಗವಿದೆ. ಈ ಸುರಂಗದ ಅಡ್ಡಳತೆ 10.6 ಮೀ ಆಗಿದೆ, ಮತ್ತು ಈ ಸುರಂಗವು ನೆಲದಿಂದ ಮೇಲಿಂದ 50 ಮೀಟರ್ ನಷ್ಟು ಆಳಕ್ಕೆ ಇದೆ. ಹೀಗೆ ಬೇರೆ ಬೇರೆ ಕಡೆಗಳಲ್ಲಿರುವ ಅಯ್ದು ಹೆಗ್ಗಂಬಗಳು ಸುರಂಗದಿಂದ ಕೂಡಿಕೊಂಡು ಒಟ್ಟು 6 ಕಿಲೋ ಮೀಟರ್ ನಷ್ಟು ಉದ್ದಕ್ಕೆ ಹರಡಿಕೊಂಡಿದೆ.

gcans4_1024x683

ಈ ಸುರಂಗ ಹಾಗು ಹೆಗ್ಗಂಬದ ಕೊನೆಗೆ ದೊಡ್ಡದೊಂದು ನೀರಿನ ತೊಟ್ಟಿಯನ್ನು ನೆಲದೊಳಗೆ ಕಟ್ಟಲಾಗಿದೆ. ಇದನ್ನು ದಿ ಟೆಂಪಲ್ (The Temple) ಎಂದು ಕರೆಯುತ್ತಾರೆ. ಇದು ಕೇವಲ 25.4 ಮೀ ಎತ್ತರವಿದೆ ಆದರೆ ಇದರ ಉದ್ದ ಸುಮಾರು 177 ಮೀ. ಮತ್ತು ಅಗಲ 78 ಮೀ. ಇದೆ. ಇಷ್ಟು ದೊಡ್ಡ ನೀರಿನ ತೊಟ್ಟಿಯ ನಡುವೆ ಆನಿಕೆಗಾಗಿ (support) ಸುಮಾರು 59 ಕಂಬಗಳನ್ನು (20 ಮೀ. ಉದ್ದ) ಕಟ್ಟಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಟೋಕಿಯೋ ನಗರದ ಸುತ್ತಮುತ್ತ ಮಳೆ ಹೆಚ್ಚಾಗಿ ನದಿಗಳಲ್ಲಿ ನೆರೆ ಬಂದಾಗ, ನದಿಯು ತುಂಬಿ ಹೆಚ್ಚಾದ ನೀರನ್ನು ಹೆಗ್ಗಂಬಗಳ ಮೇಲ್ತುದಿಯ ಕಡೆಗೆ ಸಾಗಿ

ಸುವ ಏರ್ಪಾಡನ್ನು ಮಾಡಲಾಗಿದೆ. ಈ ಹೆಗ್ಗಂಬಗಳ ತಳದಲ್ಲಿ ನದಿಯ ನೀರು ತುಂಬಿಕೊಳ್ಳುತ್ತಾ ಹೋಗುತ್ತದೆ, ತುಂಬಿಕೊಂಡ ನೀರು ಸುರಂಗದ ಮೂಲಕ ಮತ್ತೊಂದು ಹೆಗ್ಗಂಬವನ್ನು ಸೇರುತ್ತದೆ. ಹೀಗೆ ಮುಂದುವರಿದು ಹೆಚ್ಚಿನ ನೀರು ಸುರಂಗದ ಮೂಲಕ ಕೊನೆಯ ಹೆಗ್ಗಂಬದಲ್ಲಿ ತುಂಬಿಕೊಳ್ಳುತ್ತದೆ. ಕೊನೆಯ ಹೆಗ್ಗಂಬದಿಂದ ನೀರು ಮುಂದುವರಿದು ದೊಡ್ಡ ನೀರಿನ ತೊಟ್ಟಿಯಲ್ಲಿ ತುಂಬಿಕೊಳ್ಳುತ್ತದೆ.

ಈ ದೊಡ್ಡ ನೀರಿನ ತೊಟ್ಟಿಗೆ 10 ಮೆಗಾ ವ್ಯಾಟ್ ಹುರುಪಿರುವ 78 ನೀರೆತ್ತುಕ (water pump)ಗಳನ್ನು ಮತ್ತು 14000 ಎಚ್ ಪಿ ಹುರುಪುಳ್ಳ ಟರ್ಬೈನ್ ಗಳನ್ನು ಅಳವಡಿಸಲಾಗಿದೆ. ಇದರ ನೆರವಿನಿಂದ 200 ಟನ್ ನೀರನ್ನು ಒಂದು ಸೆಕೆಂಡಿಗೆ ನೀರಿನ ತೊಟ್ಟಿಯಿಂದ ಎತ್ತಿ ಹೊರ ಹಾಕಬಹುದಾಗಿದೆ. ಹೀಗೆ ಹೊರಗೆತ್ತುವ ನೀರನ್ನು ಎಡೊಗೊವಾ ನದಿಗೆ ಬಿಡಲಾಗುವುದು. ಟೋಕಿಯೋ ನಗರವು ಎಡಗೋವಾ ನದಿಗಿಂತ ಎತ್ತರದ ಬಾಗದಲ್ಲಿದೆ, ಮತ್ತು ಎಡೊಗೊವಾ ನದಿಯು ಕಡಲಿಗೆ ಹತ್ತಿರವಾಗಿದೆ. ಹಾಗಾಗಿ ಎಡಗೋವಾ ನದಿಗೆ ಹರಿಸುವ ಹೆಚ್ಚಿನ ನೀರಿನಿಂದ ಟೋಕಿಯೋ ನಗರಕ್ಕಾಗಲಿ ಇಲ್ಲವೇ ಆ ನದಿಯ ದಡದಲ್ಲಿರುವ ಬೇರೆ ನಗರಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ ನೀರಿನ ಹರಿವನ್ನು ಗಮನಿಸಲು ಮತ್ತು ಹತೋಟಿಯಲ್ಲಿಡಲು ಒಂದು ಹತೋಟಿ ಕೋಣೆ (control room) ಕೂಡ ಕೆಲಸ ಮಾಡುತ್ತಿರುತ್ತದೆ.

tokyo-underground-temple-6

ಈ ಹಮ್ಮುಗೆಗೆ ಬೇಕಾದ ನೆಲದಡಿಯ ಕಾಲುವೆಯನ್ನು ‘ಕಾಪಿಡುವ ಸುರಂಗ ಕಟ್ಟುವ ಚಳಕ‘ (Shield Tunneling Technology)ವನ್ನು ಬಳಸಿ ಕಟ್ಟಲಾಗಿದೆ. ಈ ಚಳಕದಲ್ಲಿ, ಮೊದಲು ಗಟ್ಟಿಯಾದ, ಬಲಪಡಿಸುವಂತಹ ಪಟ್ಟಿಗಳನ್ನು ನೆಲಕ್ಕೆ ತಳ್ಳಿ ಒಂದು ಚೌಕಟ್ಟನ್ನು ಮಾಡಿಕೊಳ್ಳಲಾಗುವುದು. ಈ ಚೌಕಟ್ಟಿನಲ್ಲಿ ನಡುವಿನ ಮಣ್ಣನ್ನು ತೆಗೆದು ಸುರಂಗ ಇಲ್ಲವೆ ಹೆಗ್ಗಂಬ ಕಟ್ಟುವ ಕೆಲಸ ಮಾಡಲಾಗುವುದು. ಸುತ್ತಲಿನ ಮಣ್ಣು ಜಾರದಂತೆ ಈ ಚೌಕಟ್ಟು ನೆರವಾಗುತ್ತದೆ. ಹೀಗೆ ಚೌಕಟ್ಟನ್ನು ಕಟ್ಟಿಕೊಂಡು ನೆಲವನ್ನು ಅಗೆಯುತ್ತಾ ಕೆಲಸವನ್ನು ಮುಂದುವರಿಸಲಾಗುವುದು.

ಹೀಗೆ, ನೆರೆಯಿಂದ ಬಳಲುತ್ತಿದ್ದ ಟೋಕಿಯೋ ನಗರವನ್ನು ಕಾಪಾಡಲು ನೆರೆಯ ನೀರನ್ನು ಕೂಡಿಹಾಕಿ, ನೆಲದಡಿಗೆ ಕಳುಹಿಸಿ, ಸುರಂಗದ ಮೂಲಕ ಟೋಕಿಯೋ ನಗರವನ್ನು ದಾಟಿಸಿ, ದೂರದ, ತೊಂದರೆಗೊಳಗಾಗದ ಜಾಗವಾದ ಎಡೊಗೊವಾ ನದಿಗೆ ತಲುಪಿಸಿದ್ದಾರೆ. ಈ ಹಮ್ಮುಗೆಯನ್ನು 1992 ರಿಂದ 2009 ರವರೆ ಅಂದರೆ ಸುಮಾರು 17 ವರುಶಗಳ ಕಾಲ ತೆಗೆದುಕೊಂಡು ಮುಗಿಸಿದ್ದಾರೆ. ಇನ್ನು ಮಳೆಗಾಲವಲ್ಲದ ಹೊತ್ತಿನಲ್ಲಿ ಈ ಹಮ್ಮುಗೆಯು ಪ್ರವಾಸಿ ತಾಣವಾಗಿ ಮಾರ್‍ಪಡುತ್ತದೆ. ಹೆಗ್ಗಂಬಗಳಲ್ಲಿರುವ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಸುರಂಗ ಮತ್ತು ದೊಡ್ಡ ನೀರಿನ ತೊಟ್ಟಿಯನ್ನೆಲ್ಲಾ ನೋಡಿಕೊಂಡು ಬರಬಹುದು.

(ಮಾಹಿತಿ ಮತ್ತು ಚಿತ್ರ ಮೂಲinterestingengineering.com g-cans)

ಕಾಯಿಯೊಂದು ಹಣ್ಣಾಗುವ ಬಗೆ

ರತೀಶ ರತ್ನಾಕರ.

ಹಣ್ಣುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಬಣ್ಣ-ಬಣ್ಣದ, ರುಚಿ-ರುಚಿಯಾದ ಹಣ್ಣುಗಳು ಹೆಚ್ಚಿನವರನ್ನು ಸೆಳೆಯುತ್ತವೆ. ಯಾವುದೇ ಮರ ಇಲ್ಲವೇ ಗಿಡದಿಂದ ಸಿಗುವ ಹಣ್ಣು, ಹಣ್ಣಾಗುವ ಮೊದಲು ಕಾಯಿಯಾಗಿರುತ್ತದೆ. ಯಾವುದೇ ಒಂದು ಕಾಯಿ ಮತ್ತು ಹಣ್ಣಿನ ನಡುವೆ ಬೇರ್ಮೆಯನ್ನು ಗುರುತಿಸಿದರೆ ಅದು ಹೆಚ್ಚಾಗಿ ಅದರ ಬಣ್ಣ ಮತ್ತು ರುಚಿಯಲ್ಲಿ ಬೇರೆ ಬೇರೆಯಾಗಿರುತ್ತವೆ. ಕಾಯಿಗಳು ಹೆಚ್ಚಾಗಿ ಹಸಿರು ಬಣ್ಣದಲ್ಲಿದ್ದು, ರುಚಿ ಮತ್ತು ಕಂಪು ಇಲ್ಲದೆ ಗಟ್ಟಿಯಾಗಿ ಇರುತ್ತವೆ. ಕಾಯಿಯು ಹಣ್ಣಾಗುತ್ತಾ ಬಂದಂತೆ ಬೇರೆ ಬಣ್ಣವನ್ನು ಪಡೆಯುತ್ತದೆ, ಕಾಯಿಗಿಂತ ಮೆತ್ತಗಾಗುತ್ತದೆ, ರುಚಿ ಮತ್ತು ಕಂಪನ್ನು ಪಡೆದುಕೊಳ್ಳುತ್ತದೆ. ಈ ಕಾರಣದಿಂದಾಗಿ ಹಣ್ಣುಗಳು ಪ್ರಾಣಿ ಮತ್ತು ಹಕ್ಕಿಗಳನ್ನು ಸೆಳೆಯುತ್ತವೆ.

ಹೌದಲ್ಲ, ಈ ಕಾಯಿಯು ಹಣ್ಣಾದ ಮೇಲೆ ನಮಗೆ ಉಪಕಾರಿ. ಹಾಗಾದರೆ ಈ ಕಾಯಿಯು ಹೇಗೆ ಹಣ್ಣಾಗುತ್ತದೆ? ಬಣ್ಣ, ರುಚಿ, ಕಂಪನ್ನು ಹೇಗೆ ಪಡೆದುಕೊಳ್ಳುತ್ತದೆ? ಕಾಯಿಯಲ್ಲಿ ನಡೆಯುವ ಯಾವ ತಿರುಳು ಹಣ್ಣಾಗಲು ಕಾರಣ? ಬನ್ನಿ, ಈ ವಿಷಯಗಳ ಕುರಿತು ನಾವಿಂದು ಅರಿಯೋಣ.

ಹೂವಿನ ಗಂಡೆಳೆಗಳು(Anther) ಹೆಣ್ದುಂಡುಗಳೊಡನೆ(Stigma) ಸೇರುವುದನ್ನು ಹೂದುಂಬುವಿಕೆ (Pollination) ಎಂದು ಕರೆಯಲಾಗುತ್ತದೆ. ಯಾವುದೇ ಗಿಡ ಇಲ್ಲವೇ ಮರದಲ್ಲಿ ಹೂದುಂಬುವಿಕೆ ನಡೆದಾಗ ಹೀಚುಗಾಯಿ ಉಂಟಾಗುತ್ತದೆ. ಹೀಗೆ ಉಂಟಾದ ಹೀಚುಗಾಯಿಯ ತತ್ತಿಚೀಲದೊಳಗೆ(Ovary) ಹೊಸ ಬೀಜ ಹುಟ್ಟುತ್ತದೆ. ಈ ಬೀಜಗಳು ಬೆಳೆಯುತ್ತಿದ್ದಂತೆ ಸಯ್ಟೋಕಿನಿನ್ಸ್ (Cytokinins) ಎನ್ನುವ ಸೋರುಗೆಯನ್ನು (Hormone) ಹೊರಹಾಕುತ್ತವೆ. ಈ ಸೋರುಗೆಗಳು ತತ್ತಿಚೀಲದ ಗೋಡೆಯ ಬಳಿ ಬಂದು ಸೂಲುಗೂಡುಗಳನ್ನು (Cells) ಒಡೆದು ಹೊಸ ಹೊಸ ಸೂಲುಗೂಡುಗಳು ಮೂಡಿ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ. ಹಾಗೆಯೇ ಮುಂದುವರಿದು ಈ ಬೀಜಗಳು ಜಿಬ್ಬೆರೆಲಿಕ್ (Gibberellic) ಹುಳಿಯನ್ನು ಹೊರಹಾಕುತ್ತವೆ. ಈ ಹುಳಿಯು ಸೂಲುಗೂಡುಗಳನ್ನು ಹಿಗ್ಗಿಸಲು ನೆರವಾಗುತ್ತದೆ. ಹೀಗೆ ಸೂಲುಗೂಡುಗಳ ಒಡೆಯುವಿಕೆ ಮತ್ತು ಹಿಗ್ಗುವಿಕೆಯಿಂದ ಹೀಚುಗಾಯಿ ದೊಡ್ಡದಾಗುತ್ತಾ ಹೋಗುತ್ತದೆ.

ಮರ, ಗಿಡ ಹಾಗು ಬಳ್ಳಿಗಳ ತಳಿಗಳ ಆಧಾರದ ಮೇಲೆ ಕಾಯಿಯು ಒಂದು ಹಂತದವರೆಗೆ ದೊಡ್ಡದಾಗುತ್ತಾ ಹೋಗುತ್ತದೆ. ಕಾಯಿಯು ಸಾಕಷ್ಟು ದೊಡ್ಡದಾದ ಮೇಲೆ ತಾಯಿಗಿಡವು ಅಬ್ಸಿಸಿಕ್ ಎನ್ನುವ ಸೋರುಗೆಯನ್ನು ಹೊರಬಿಡುತ್ತದೆ ಅದು ಕಾಯಿಯ ಬೀಜದೊಳಗಿರುವ ಬಸಿರನ್ನು (Embryo) ಒರಗಿದ(Dormant) ಸ್ಥಿತಿಯಲ್ಲಿ ದೂಡುತ್ತದೆ. ಆಗ ಬೀಜ ಮತ್ತು ಕಾಯಿ ತನ್ನ ಬೆಳವಣಿಗೆಯನ್ನು ನಿಲ್ಲಿಸುತ್ತವೆ.

ಒಂದು ಕಾಯಿಯಲ್ಲಿ ಸಾಮಾನ್ಯವಾಗಿ ಈ ಕೆಳಗಿನ ರಾಸಾಯನಿಕಗಳು ಇರುತ್ತವೆ.

ಗಂಜಿ (Starch) – ಕಾಯಿಯು ರುಚಿಯಾಗದಿರಲು ಇದೇ ಕಾರಣವಾಗಿರುತ್ತದೆ.
ಎಲೆಹಸಿರು (Chlorophyll) – ಕಾಯಿಯ ಹಸಿರು ಬಣ್ಣಕ್ಕೆ ಇದು ಕಾರಣವಾಗಿರುತ್ತದೆ.
ಹುಳಿ (acids) – ಇದರಿಂದ ಕಾಯಿಯು ತುಂಬಾ ಹುಳಿ ಹುಳಿಯಾಗಿ ಇಲ್ಲವೇ ಒಗರಾಗಿರುತ್ತದೆ.
ಪೆಕ್ಟಿನ್ (Pectin) – ಇದೊಂದು ಬಗೆಯ ಪಾಲಿಸೆಕರಯ್ಡ್ ಆಗಿದ್ದು, ಕಾಯಿಯಲ್ಲಿನ ಸೂಲುಗೂಡುಗಳು ಒಂದಕ್ಕೊಂದು ಗಟ್ಟಿಯಾಗಿ ಅಂಟಿಕೊಂಡಿರುವಂತೆ ನೋಡಿಕೊಳ್ಳುತ್ತದೆ. ಪೆಕ್ಟಿನ್ ದೆಸೆಯಿಂದಾಗಿ ಕಾಯಿಯು ಗಟ್ಟಿಯಾಗಿರುತ್ತದೆ.
ಹೆಬ್ಬುಸುರಿ (Large Organics)- ಇವು ಒಂದು ಬಗೆಯ ಸೀರಕೂಟಗಳಾಗಿದ್ದು (Molecules) ಕಾಯಿಯಲ್ಲಿ ಇರುತ್ತವೆ.

ಹಾಗಾದರೆ ಹಣ್ಣಾಗುವುದು ಹೇಗೆ?

ಯಾವುದೇ ಕಾಯಿಯು ಹಣ್ಣಾಗುವುದರಲ್ಲಿ ಇತಯ್ಲಿನ್ (Ethylene) ಪ್ರಮುಖ ಪಾತ್ರ ವಹಿಸುತ್ತದೆ. ಗಿಡದಲ್ಲಿರುವ ETR1 ಮತ್ತು CTR1 ಎಂಬ ಪೀಳಿಗಳು(genes) ಕಾಯಿಯನ್ನು ಹಣ್ಣಾಗದಂತೆ ತಡೆಹಿಡಿದಿರುತ್ತವೆ. ಯಾವುದೇ ಒಂದು ಮರ, ಗಿಡ ಇಲ್ಲವೇ ಬಳ್ಳಿಯ ಗುಣವೆಂದರೆ ತನ್ನಲ್ಲಿರುವ ಕಾಯಿ ಇಲ್ಲವೇ ಹಣ್ಣುಗಳಿಗೆ ಗಾಯವಾದಾಗ, ಕಾಯಿ/ಹಣ್ಣನ್ನು ಗಿಡದಿಂದ ಕಿತ್ತಾಗ, ಸುತ್ತಲಿನ ಗಾಳಿಪಾಡಿನಲ್ಲಿ ಏರುಪೇರಾಗಿ ತನ್ನ ಎಂದಿನ ಚಟುವಟಿಕೆಗಳಿಗೆ ಒತ್ತಡ ಬಂದಾಗ, ಒಟ್ಟಿನಲ್ಲಿ ಹೇಳುವುದಾದರೆ ತನ್ನ ಎಂದಿನ ಚಟುವಟಿಕೆಗೆ ಯಾವುದೇ ತೊಡಕಾದ ಕೂಡಲೆ ಅದು ಇತಯ್ಲಿನ್ ಗಾಳಿಯನ್ನು ಹೊರಹಾಕತೊಡಗುತ್ತದೆ. ಇತಯ್ಲಿನ್ ಅನ್ನು ತನ್ನ ಕಾಂಡ, ಬೇರು, ಹೂವು, ಕಾಯಿಗಳ ಮೂಲಕ ತನ್ನ ಸುರಕ್ಷತೆಗಾಗಿ ಹೊರಹಾಕುತ್ತದೆ. ಈ ಇತಯ್ಲಿನ್ ಮುಂದೆ ಕಾಯಿ ಹಣ್ಣಾಗುವಲ್ಲಿ ನೆರವಾಗುತ್ತದೆ.

 

ಯಾವುದೇ ಕಾಯಿ ಇತಯ್ಲಿನ್ ಗಾಳಿಗೆ ತಾಕಿದಾಗ ಅದರಲ್ಲಿರುವ ETR1 ಮತ್ತು CTR1 ಪೀಳಿಗಳು ತನ್ನ ಕೆಲಸವನ್ನು ನಿಲ್ಲಿಸುತ್ತವೆ ಮತ್ತು ಬೇರೆ ಪೀಳಿಗಳಿಗೆ ಕೆಲಸಮಾಡಲು ದಾರಿ ಮಾಡಿಕೊಡುತ್ತವೆ. ಕಾಯಿಯಲ್ಲಿರುವ ಇತರೆ ಪೀಳಿಗಳು ಅಮಯ್ಲೇಸಸ್ (amylases), ಹಯ್ಡ್ರೋಲೇಸಸ್ (hydrolases), ಕಯ್ನೇಸಸ್(kinases) ಮತ್ತು ಪೆಕ್ಟಿನೇಸಸ್ (pectinases) ಎಂಬ ದೊಳೆಗಳನ್ನು(enzyme) ಬಿಡುಗಡೆ ಮಾಡುತ್ತವೆ. ಈ ದೊಳೆಗಳು ಕಾಯಿಯನ್ನು ಹಣ್ಣು ಮಾಡಲು ನೆರವಾಗುತ್ತವೆ.

– ಅಮಯ್ಲೇಸಸ್ ದೊಳೆಯು ಕಾಯಿಯಲ್ಲಿರುವ ಗಂಜಿಯನ್ನು ಕಾರ್ಬೋಹೈಡ್ರೇಟ್ ಗಳಾಗಿ(Sugars) ಮಾರ್‍ಪಾಟುಗೊಳಿಸುತ್ತವೆ. ಇದು ಹಣ್ಣಿನ ರುಚಿಗೆ ಕಾರಣವಾಗಿರುತ್ತದೆ.
– ಹೈಡ್ರೊಲೇಸಸ್ ದೊಳೆಯು ಕಾಯಿಯಲ್ಲಿರುವ ಎಲೆಹಸಿರನ್ನು ಅಂತೋಸಯ್ನಿನ್ಸ್ (anthocynins) ಆಗಿ ಮಾರ್ಪಾಟುಗೊಳಿಸುತ್ತವೆ. ಇದು ಹಣ್ಣಿನ ಬಣ್ಣವನ್ನು ಹಸಿರಿನಿಂದ ಮತ್ತೊಂದು ಬಣ್ಣಕ್ಕೆ ತಿರುಗಿಸುತ್ತದೆ.
– ಕಯ್ನೇಸಸ್ ದೊಳೆಯು ಕಾಯಿಯಲ್ಲಿರುವ ಹುಳಿಗಳನ್ನು ತಟಸ್ಥ ಸೀರಕೂಟಗಳಾಗಿ (neutral molecules) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಹುಳಿ ಮತ್ತು ಒಗರನ್ನು ಕಡಿಮೆ ಮಾಡುತ್ತದೆ.
– ಪೆಕ್ಟಿನೇಸಸ್ ದೊಳೆಯು ಕಾಯಿಯ ಗಟ್ಟಿತನಕ್ಕೆ ಕಾರಣವಾದ ಪೆಕ್ಟಿನಿನ್ ಅನ್ನು ಕಡಿಮೆಗೊಳಿಸಿ ಹಣ್ಣನ್ನು ಕಾಯಿಗಿಂತ ಮೆತ್ತಗಾಗಿಸುತ್ತದೆ.
– ಹೈಡ್ರೊಲೇಸಸ್ ದೊಳೆಯು ಹೆಬ್ಬುಸುರಿಗಳನ್ನು ಕಂಪು ಬೀರುವ ಸೀರುಗಳಾಗಿ (aromatic compounds) ಮಾರ್ಪಾಟುಗೊಳಿಸುತ್ತದೆ. ಇದು ಹಣ್ಣಿನ ಕಂಪಿಗೆ ಕಾರಣವಾಗುತ್ತದೆ.

ಹೀಗೆ ಕಾಯಿಯು ಇತಯ್ಲಿನ್ ಗಾಳಿಗೆ ತೆರೆದುಕೊಂಡೊಡನೆ ಹಲವಾರು ರಾಸಾಯನಿಕೆ ಚಟುವಟಿಕೆಗಳು ನಡೆದು ಹಣ್ಣಾಗುತ್ತದೆ. ಕೆಲವು ಕಾಯಿಗಳು ಮರ/ಗಿಡದಿಂದ ಕಿತ್ತ ಮೇಲೂ ಇತಯ್ಲೀನ್ ಗಾಳಿಯ ನೆರವಿನಿಂದ ಹಣ್ಣಾಗುತ್ತವೆ ಇಂತಹವನ್ನು ಬಿಡಿಮಾಗು (Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಎತ್ತುಗೆಗೆ, ಸೇಬು, ಬಾಳೆಹಣ್ಣು, ಸೀಬೆಹಣ್ಣು. ಇನ್ನು ಕೆಲವು ಹಣ್ಣುಗಳು ಮರ/ಗಿಡದಲ್ಲಿ ಇದ್ದರೆ ಮಾತ್ರ ಹಣ್ಣಾಗಬಲ್ಲವು, ಕಿತ್ತರೆ ಹಣ್ಣಾಗಲಾರವು ಅಂತವುಗಳನ್ನು ಗಿಡಮಾಗು (Non- Climacteric) ಹಣ್ಣುಗಳು ಎಂದು ಕರೆಯುತ್ತಾರೆ. ಉದಾಹರಣೆಗೆಗೆ ದ್ರಾಕ್ಷಿ, ಸ್ಟ್ರಾಬೆರ್‍ರಿ.

 

ಸೆಲೆ:-

www.researchgate.net, ncbi, www.scientificamerican.com,