ಜೇನುಹುಳವು ಗೂಡನ್ನು ಕಟ್ಟುವ ಬಗೆ

ರತೀಶ ರತ್ನಾಕರ.

1024px-Natural_Beehive_and_Honeycombs

ಗಿಡದ ಟೊಂಗೆಯಲ್ಲೋ, ಮರದ ಪೊಟರೆಯಲ್ಲೋ ಇಲ್ಲವೇ ದೊಡ್ಡ ಕಟ್ಟಡದ ಮಾಳಿಗೆಯಲ್ಲೋ ನಾವು ಜೇನುಗೂಡುಗಳನ್ನು ಕಂಡಿರುತ್ತೇವೆ. ಹೀಗೆ ಸಾವಿರಾರು ಹುಳಗಳು ಸೇರಿ ಗೂಡನ್ನು ಕಟ್ಟಿ, ಸಿಹಿಯನ್ನು ಕೂಡಿಟ್ಟು ಬದುಕನ್ನು ನಡೆಸುವ ಪರಿ ಬೆರಗಿನಿಂದ ಕೂಡಿದೆ. ಇವು ಒಂದೇ ಗೂಡಿನಲ್ಲಿ ಹೆಚ್ಚುಕಾಲ ವಾಸಮಾಡದೇ ತಮ್ಮ ಗೂಡನ್ನು ಆಗಾಗ ಬದಲಿಸುತ್ತಲೇ ಇರುತ್ತವೆ. ಹೊಸ ಜಾಗವೊಂದನ್ನು ಹುಡುಕಿ, ಹೊಸ ಗೂಡೊಂದನ್ನು ಕಟ್ಟಿ ತಮ್ಮ ಬಾಳ್ವೆಯನ್ನು ಮುಂದುವರಿಸುತ್ತವೆ. ಈ ಜೇನುಹುಳಗಳು ಹೊಸ ಗೂಡನ್ನು ಹೇಗೆ ಕಟ್ಟುತ್ತವೆ, ಅದರ ವಿಶೇಷತೆಗಳೇನು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಬರಹ.

ಹಳೆಯ ಗೂಡನ್ನು ಬಿಟ್ಟು…
ಜೇನುಹುಳದ ಬಾಳ್ಮೆಸುತ್ತು ಬರಹದಲ್ಲಿ ಓದಿದ ಹಾಗೆ ಒಂದು ಗೂಡಿನಲ್ಲಿ ಹೊಸ ಒಡತಿ ಜೇನು ಹುಟ್ಟಿದರೆ, ಆಗ ಹಳೆಯ ಒಡತಿ ಜೇನುಹುಳವು ಒಂದಷ್ಟು ದುಡಿಮೆಗಾರ ಹುಳಗಳ ಜೊತೆಗೂಡಿ ಹೊಸ ಗೂಡನ್ನು ಕಟ್ಟಲು ಹೊರಡುತ್ತದೆ. ಇದಲ್ಲದೇ, ಈಗಿರುವ ಜೇನುಗೂಡಿಗೆ ಇತರ ಪ್ರಾಣಿಗಳು, ಬಿರುಗಾಳಿ ಇಲ್ಲವೇ ಜೋರಾದ ಮಳೆಯಿಂದಾಗಿ ಏನಾದರು ತೊಂದರೆಯಾದರೆ ಅವು ಇರುವ ಗೂಡನ್ನು ಬಿಡಬೇಕಾಗವುದು. ಹೀಗೆ ಗೂಡನ್ನು ಬಿಟ್ಟು ಹೋಗುವ ಕೆಲದಿನಗಳ ಮುಂಚೆ ಜೇನುಹುಳಗಳು ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತವೆ. ಅವನ್ನು ಈ ಕೆಳಗೆ ನೀಡಲಾಗಿದೆ;

1. ಮೊಟ್ಟೆಯನ್ನು ಇಡುತ್ತಿರುವ ಹಳೆಯ ಒಡತಿಯು ಹೆಚ್ಚು ದೂರ ಹಾರುವ ತಾಕತ್ತನ್ನು ಹೊಂದಿರುವುದಿಲ್ಲ, ಅದಕ್ಕಾಗಿ ಗೂಡು ಬಿಡುವ ಕೆಲವು ದಿನಗಳ ಮುಂಚೆ ದುಡಿಮೆಗಾರ ಹುಳಗಳು ಒಡತಿ ಹುಳಕ್ಕೆ ‘ಜೇನುಗಂಜಿ‘(Royal Jelly) ನೀಡುವುದನ್ನು ನಿಲ್ಲಿಸುತ್ತವೆ. ಇದರಿಂದ ಒಡತಿಯು ಮೊಟ್ಟೆ ಇಡುವುದನ್ನು ನಿಲ್ಲಿಸುತ್ತದೆ, ಇದು ಒಡತಿಗೆ ದೂರ ಹಾರಲು ನೆರವಾಗುತ್ತದೆ.
2. ಈಗಿರುವ ಗೂಡಿನ ಹತ್ತಿರದಲ್ಲೇ ಇರುವ ತಕ್ಕುದಾದ ಜಾಗವನ್ನು ‘ಬೇಹುಗಾರ’ ಹುಳಗಳು ಗುರುತಿಸಿರುತ್ತವೆ. ಗೂಡನ್ನು ಬಿಟ್ಟು ಹಾರುವ ಹುಳಗಳು ನೇರವಾಗಿ ಹೊಸ ಗೂಡು ಕಟ್ಟುವ ಜಾಗಕ್ಕೆ ಹೋಗುವುದಿಲ್ಲ, ಬದಲಾಗಿ ಬೇಹುಗಾರ ಹುಳಗಳು ಗುರುತಿಸಿದ ಜಾಗದಲ್ಲಿ ತುಸುಹೊತ್ತು ತಂಗಿರುತ್ತವೆ.

ಒಡತಿಯೊಂದಿಗೆ ಗೂಡನ್ನು ಬಿಡುವಾಗ ಹೊಟ್ಟೆ ತುಂಬಾ ಜೇನನ್ನು ಹೀರಿಕೊಂಡು ಹಾರುತ್ತವೆ. ಹೊಸ ಜಾಗವನ್ನು ತಲುಪುವವರೆಗೆ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಇದು ನೆರವಾಗುತ್ತದೆ. ಸುಮಾರು 1000 ದಿಂದ 10,000 ಸಾವಿರ ಹುಳಗಳು ಗೂಡುಬಿಟ್ಟು ಒಮ್ಮೆಲೆ ಹೊರ ಹೋಗಬಹುದು. ಗೂಡುಬಿಟ್ಟು ಹಾರುವ ಜೇನುಹುಳದ ಹಿಂಡು ಮೊದಲು ಬೇಹುಗಾರ ಹುಳಗಳು ಗುರುತಿಸಿದ ಹತ್ತಿರದ ಜಾಗಕ್ಕೆ ಬಂದು ತಂಗುತ್ತವೆ. ಅಲ್ಲಿಂದ ಸುಮಾರು 25-50 ಬೇಹುಗಾರ ಹುಳಗಳು ಹೊಸ ಜಾಗವನ್ನು ಅರಸುತ್ತಾ ಹೊರಡುತ್ತವೆ. ಈ ಹೊತ್ತಿನಲ್ಲಿ ಉಳಿದ ದುಡಿಮೆಗಾರ ಹುಳಗಳು ಒಡತಿಯನ್ನು ಸುತ್ತುವರೆದು ಒಡತಿಗೆ ಬೇಕಾದ ಬಿಸಿಯನ್ನು ಕಾಯ್ದುಕೊಳ್ಳುತ್ತವೆ. ಗೂಡಿನಲ್ಲಿ ಹೀರಿದ ಜೇನನ್ನು ಹೆಚ್ಚುಹೊತ್ತು ಉಳಿಸಿಕೊಳ್ಳಲು ದುಡಿಮೆಗಾರ ಹುಳಗಳು ಯಾವುದೇ ಕೆಲಸವನ್ನು ಮಾಡದೆ ಒಡತಿಯನ್ನು ಸುತ್ತುವರಿದಿರುತ್ತವೆ.

ಬೇಹುಗಾರ ಹುಳಗಳು ಕೆಲವು ಗಂಟೆ ಇಲ್ಲವೇ ಒಂದು ದಿನದೊಳಗಾಗಿ ಹೊಸ ಜಾಗದ ಮಾಹಿತಿಯನ್ನು ತರುತ್ತವೆ. ಇರುವ ಹಲವಾರು ಬೇಹುಗಾರ ಹುಳಗಳು ಬೇರೆ ಬೇರೆ ಜಾಗದ ಮಾಹಿತಿಯನ್ನು ತಂದಿರುತ್ತವೆ. ಆ ಹುಳಗಳು ಹೊಸ ಜಾಗದ ಮಾಹಿತಿಯನ್ನು ‘ಜೇನುಹುಳದ ಕುಣಿತ‘ದ ಮೂಲಕ ಇತರೆ ಬೇಹುಗಾರ ಹುಳಗಳಿಗೆ ತಿಳಿಸುತ್ತವೆ. ಒಂದು ಬೇಹುಗಾರ ಹುಳವು ತಾನು ಕಂಡುಬಂದ ಜಾಗವು, ಗೂಡುಕಟ್ಟಲು ತುಂಬಾ ಚೆನ್ನಾಗಿದೆ ಎಂದು ತಿಳಿಸಲು ಹೆಚ್ಚು ಹುರುಪಿನಿಂದ ಕುಣಿತವನ್ನು ಹಾಕುತ್ತದೆ. ಉಳಿದ ಬೇಹುಗಾರ ಹುಳಗಳು ಬೇಕಾದರೆ ಒಮ್ಮೆ ಆ ಜಾಗವನ್ನು ಹೋಗಿ ನೋಡಿಕೊಂಡು ಬರುತ್ತವೆ. ಕೊನೆಗೆ, ಹೆಚ್ಚು ಬೇಹುಗಾರ ಹುಳಗಳಿಗೆ ಒಪ್ಪಿತವಾಗುವ ಜಾಗಕ್ಕೆ ಎಲ್ಲಾ ಹುಳಗಳು ಪ್ರಯಾಣ ಮಾಡುತ್ತವೆ. ಹೀಗೆ ಹಿಂಡು ಹಿಂಡಾಗಿ ಸಾಗಿ ಹೊಸ ಗೂಡನ್ನು ಕಟ್ಟುವ ಬಗೆಗೆ ‘ಜೇನುಹುಳದ ಬಿಡಯ‘ (Swarming) ಎಂದು ಕರೆಯುತ್ತಾರೆ.

ಜೇನುಗೂಡು:
ಜೇನುಹುಳಗಳು ಗೂಡನ್ನು ಕಟ್ಟಲು ಹೊರಗಿನ ಪ್ರಾಣಿಗಳಿಂದ ಹೆಚ್ಚು ತೊಂದರೆಗಳಿಲ್ಲದ ಮತ್ತು ವಾಸಕ್ಕೆ ಬೇಕಾದ ಬಿಸುಪು (temperature) ಇರುವ ಜಾಗವನ್ನು ಆರಿಸಿಕೊಳ್ಳುತ್ತವೆ. ಹೊಸ ಗೂಡನ್ನು ಕಟ್ಟುವ ಜಾಗವನ್ನು ತಲುಪಿದೊಡನೆ ದುಡಿಮೆಗಾರ ಹುಳಗಳು ಗೂಡು ಕಟ್ಟುವ ಕೆಲಸವನ್ನು ಮೊದಲು ಮಾಡುತ್ತವೆ. ಜೇನುಗೂಡನ್ನು ‘ಜೇನುಮೇಣ’ದಿಂದ ಕಟ್ಟಲಾಗುತ್ತದೆ. ಆರ‍್ಮೂಲೆಯ (hexagon) ಆಕಾರದಲ್ಲಿರುವ ಚಿಕ್ಕಚಿಕ್ಕ ಕೋಣೆಗಳು (Cells) ಸೇರಿ ಒಂದು ಜೇನುಗೂಡಾಗಿರುತ್ತದೆ. ಒಂದು ಗೂಡಿನಲ್ಲಿ ಸುಮಾರು 1 ಲಕ್ಶದವರೆಗೆ ಕೋಣೆಗಳಿರುತ್ತವೆ. ಇದಕ್ಕಾಗಿ ಸುಮಾರು 1 ರಿಂದ 1.5 ಕೆ.ಜಿ. ಗಳಷ್ಟು ಜೇನುಮೇಣವು ಬೇಕಾಗುತ್ತದೆ. ಜೇನುಗೂಡಿನ ಮೇಲ್ಬಾಗದ ಕೋಣೆಗಳಲ್ಲಿ ಸಿಹಿ, ನಡುಭಾಗದಲ್ಲಿ ಮೊಟ್ಟೆ ಹಾಗು ಗೂಡುಹುಳಗಳು ಮತ್ತು ಕೆಳಭಾಗದ ಕೋಣೆಗಳಲ್ಲಿ ಗಂಡು ಜೇನುಹುಳಗಳಿರುತ್ತವೆ. ಒಡತಿ ಹುಳಕ್ಕಾಗಿ ಗೂಡಿನ ಕೆಳಭಾಗದಲ್ಲಿ ಒಂದು ವಿಶೇಷ ಕೋಣೆಯಿರುತ್ತದೆ.

ಜೇನುಗೂಡು ಕಟ್ಟುವ ಬಗೆ:
ಜೇನುಗೂಡನ್ನು ಕಟ್ಟಲು ಬೇಕಾದ ಜೇನುಮೇಣವು ಹೇಗೆ ಸಿಗುತ್ತದೆ ಎಂಬುದನ್ನು ಮೊದಲು ನೋಡೋಣ; ದುಡಿಮೆಗಾರ ಹುಳಗಳು ಸುಮಾರು 6 ವಾರಗಳಷ್ಟು ಮಾತ್ರ ಬದುಕುತ್ತವೆ. ತಮ್ಮ 10-16 ನೇ ದಿನದ ವಯಸ್ಸಿನಲ್ಲಿದ್ದಾಗ ಇವುಗಳ ಹೊಟ್ಟೆಯ ಭಾಗದಲ್ಲಿರುವ ಮೇಣದ ಸುರಿಗೆ(Wax gland)ಯಿಂದ ಮೇಣವು ಒಸರುತ್ತದೆ(secrete). ಹೀಗೆ ಒಸರಿದ ಮೇಣವು ಹೊಟ್ಟೆಯ ಹೊರಭಾಗದಲ್ಲಿರುವ ಹೊಟ್ಟೆಯ ತಟ್ಟೆಗಳ (Abdominal plates) ಸುತ್ತಲೂ ಅಂಟಿಕೊಂಡು ಚಿಕ್ಕ ಹಲ್ಲೆಗಳ ರೂಪದಲ್ಲಿ ಇರುತ್ತದೆ. ಮೇಣವು ಅಂಟಿರುವ ಹೊಟ್ಟೆಯ ತಟ್ಟೆಗಳನ್ನು ಕೆಳಗೆ ನೀಡಿರುವ ಚಿತ್ರದಲ್ಲಿ ನೋಡಬಹುದು.

Wax and mandible

ಹೀಗಿರುವ ಮೇಣವನ್ನು ಜೇನುಹುಳಗಳು ತಮ್ಮ ಹಿಂಗಾಲುಗಳ ನೆರವಿನಿಂದ ಕೆರೆದು ಕೆಳದವಡೆಗಳಿಗೆ ಸಾಗಿಸುತ್ತವೆ. ಕೆಳದವಡೆಗಳ ನೆರವಿನಿಂದ ಮೇಣವನ್ನು ಚೆನ್ನಾಗಿ ಜಗಿದು ತಮಗೆ ಬೇಕಾದ ಹಾಗೆ ಬಾಗುವಂತೆ ಮೆತ್ತಗೆ ಮಾಡಿಕೊಂಡು, ಗೂಡನ್ನು ಕಟ್ಟಲು ಬಳಸುತ್ತವೆ. ಸುಮಾರು ಅರ‍್ದ ಕೆ.ಜಿ. ಮೇಣಕ್ಕಾಗಿ, ಹೆಚ್ಚು-ಕಡಿಮೆ 4 ಕೆ.ಜಿ ಜೇನನ್ನು ದುಡಿಮೆಗಾರ ಹುಳವು ತಿನ್ನಬೇಕಾಗುತ್ತದೆ. ಹಾಗಾಗಿ, ಜೇನುಹುಳಗಳ ಮಟ್ಟಿಗೆ ಈ ಮೇಣವು ತುಂಬಾ ಬೆಲೆಬಾಳುವಂತದ್ದು. ಮೇಣದಿಂದ ಕಟ್ಟುವ ಜೇನುಗೂಡಿನ ಹಲ್ಲೆಯನ್ನು ಜೇನುಹಲ್ಲೆ ಇಲ್ಲವೇ ಜೇನುಹುಟ್ಟು (honeycomb) ಎಂದು ಕರೆಯುತ್ತಾರೆ.

ಜೇನುಮೇಣದ ವಿವರ:
– ತಿರುಳಿನ ಅಡಕದ ಬರೆಹ: C15 H31 CO2 C30 H61
– ನೀರಿನಲ್ಲಿ ಇದು ಕರಗುವುದಿಲ್ಲ.
– ಸುಮಾರು 18 ಡಿಗ್ರಿ ಸೆಲ್ಶಿಯಸ್ ನಲ್ಲಿ ಗರಗಾಗಿ (brittle) ಬಿರುಕು ಬಿರುಕಾಗುವ ಗುಣಹೊಂದಿದೆ.
– ಸುಮಾರು 35- 40 ಡಿಗ್ರಿ ಸೆಲ್ಶಿಯಸ್ ನಲ್ಲಿ ಮೆದುವಾಗಿ ಮೇಣದಂತಿರುತ್ತದೆ.
– 65 ಡಿಗ್ರಿ ಸೆಲ್ಶಿಯಸ್ ನಲ್ಲಿ ಇದು ಕರಗುತ್ತದೆ.
– ಯಾವ ಕಾಲಕ್ಕೂ ಇದು ಹದಗೆಡುವುದಿಲ್ಲ. ಹಲವು ಪಳೆಯುಳಿಕೆಗಳಲ್ಲಿಯೂ ಕೂಡ ಜೇನುಮೇಣ ಸಿಕ್ಕಿದೆ.

ದುಡಿಮೆಗಾರ ಹುಳಗಳು ತಮ್ಮ ಗೂಡು ಕಟ್ಟುವಿಕೆಯನ್ನು ಮೇಲಿನಿಂದ ಕೆಳಕ್ಕೆ ಮಾಡುತ್ತವೆ. ಮರದ ಪೊಟರೆ, ಟೊಂಗೆ, ಕಲ್ಲಿನ ಹಾಸು ಇಲ್ಲವೇ ಗೋಡೆಯ ಭಾಗವನ್ನು, ಗೂಡು ಕಟ್ಟಲೆಂದು ಮೊದಲು ನಿಗದಿಮಾಡಿಕೊಳ್ಳುತ್ತವೆ. ಆ ಜಾಗವನ್ನು ಎಲ್ಲಾ ದುಡಿಮೆಗಾರ ಹುಳಗಳು ಕೂಡಿ ಚೊಕ್ಕಮಾಡುತ್ತವೆ. ಮರ, ಗೋಡೆ ಇಲ್ಲವೇ ಕಲ್ಲಿನ ಯಾವ ಭಾಗಕ್ಕೆ ಗೂಡು ಅಂಟಿಕೊಳ್ಳುವುದೋ ಆ ಜಾಗದಲ್ಲಿರುವ ಕಸ-ಕಡ್ಡಿಗಳನ್ನು, ಟೊಳ್ಳಾದ ಭಾಗಗಳನ್ನು ತಮ್ಮ ಕಾಲುಗಳ ನೆರವಿನಿಂದ ಕೆಳಗೆ ಉದುರಿಸುತ್ತವೆ. ಬಳಿಕ ತಮ್ಮ ಜೇನುಮೇಣವನ್ನು ಅಂಟಿಸಿ ಒಂದೊಂದಾಗಿ ಆರ‍್ಮೂಲೆ(hexagon) ಆಕಾರದ ಕೋಣೆಗಳನ್ನು ಮೇಲಿನಿಂದ ಕೆಳಕ್ಕೆ ಹಂತ ಹಂತವಾಗಿ ಕಟ್ಟುತ್ತಾ ಬರುತ್ತವೆ. ಈ ಕೆಳಗಿನ ಚಿತ್ರದಲ್ಲಿ ಜೇನುಗೂಡನ್ನು ಬೇರೆ ಬೇರೆ ಹಂತದಲ್ಲಿ ಕಟ್ಟುವ ಬಗೆಯನ್ನು ಕಾಣಬಹುದು.

jenugoodu halle

ಆರ‍್ಮೂಲೆಯೇ ಏಕೆ?
ಜೇನುಗೂಡಿನಲ್ಲಿರುವ ಆರ‍್ಮೂಲೆಯ ಕೋಣೆಗಳ ಬಗ್ಗೆ ಅರಿಯಲು ಹಲವು ಅರಕೆಗಳೇ ನಡೆದಿವೆ. ಜೇನುಗೂಡಿನ ಹಲ್ಲೆಯನ್ನು ನೋಡಿದರೆ ಆರುಬದಿಯ ಕೋಣೆಗಳು ಒಂದರ ಹಿಂದೆ ಒಂದು ಇರುತ್ತವೆ. (ಕೆಳಗಿನ ಚಿತ್ರವನ್ನು ನೋಡಿ) ಸಾವಿರಾರು ವರುಶಗಳಿಂದ ಗೂಡುಗಳನ್ನು ಕಟ್ಟುತ್ತಾ ಬಂದಿರುವ ಜೇನುಹುಳಗಳು ಆರ‍್ಮೂಲೆಯ ಆಕಾರದಲ್ಲಿಯೇ ಏಕೆ ಕೋಣೆಗಳನ್ನು ಕಟ್ಟುತ್ತವೆ? ಇದು ಹೇಗೆ ನೆರವಾಗುತ್ತದೆ? ಇಂತಹ ಕುತೂಹಲ ಹಲವರಲ್ಲಿತ್ತು. ಅದಕ್ಕೆ ಸಿಕ್ಕ ಮರುನುಡಿಯೇ ‘ಜೇನುಹುಟ್ಟಿನ ಗೆರೆಯರಿಮೆ‘ (Geometry of Honeycomb).800px-Bienenwabe_mit_Eiern_und_Brut_5

ನಾವು ಮೊದಲೇ ತಿಳಿದಂತೆ ಜೇನುಹುಳಗಳಿಗೆ ಜೇನುಮೇಣವು ತುಂಬಾ ಬೆಲೆಬಾಳುವಂತದ್ದು. ಹಾಗಾಗಿ ಅವು ಕಡಿಮೆ ಮೇಣವನ್ನು ಬಳಸಿ ಹೆಚ್ಚು ಸಿಹಿಯನ್ನು ಕೂಡಿಡುವ ಗೂಡನ್ನು ಕಟ್ಟಬೇಕು. ಗೂಡನ್ನು ಕಟ್ಟುವಾಗ ಜೇನುಹುಳಗಳಿಗೆ ಇದೇ ಮೂಲ ಗುರಿ. ಮುಮ್ಮೂಲೆ (triangle), ನಾಲ್ಮೂಲೆ (quadrangle) ಹಾಗು ಆರ‍್ಮೂಲೆ ಆಕಾರದಲ್ಲಿರುವ ಕೋಣೆಗಳ ಆಳವು ಒಂದೇ ಆಗಿದ್ದರೆ ಅವುಗಳಲ್ಲಿ ಒಂದೇ ಅಳತೆಯ ಜೇನನ್ನು ಕೂಡಿಡಬಹುದು. ಆದರೆ ಒಂದು ಜಾಗದಲ್ಲಿ ಮುಮ್ಮೂಲೆ ಮತ್ತು ನಾಲ್ಮೂಲೆಯ ಕೋಣೆಗಳನ್ನು ಕಟ್ಟಲು ಆರ‍್ಮೂಲೆಗಿಂತ ಹೆಚ್ಚಿನ ಮೇಣ ಬೇಕಾಗುತ್ತದೆ. ಮೂಮ್ಮೂಲೆ ಮತ್ತು ನಾಲ್ಮೂಲೆಯಲ್ಲಿ ಬದಿಗಳು ದೊಡ್ಡದಾದ್ದರಿಂದ ಅವು ಹೆಚ್ಚು ಮೇಣವನ್ನು ಬಳಸಿಕೊಳ್ಳುತ್ತವೆ. ಇನ್ನು ಸುತ್ತುಗಳ ಆಕಾರದಲ್ಲಿ ಇದ್ದರೂ ಹೆಚ್ಚಿನ ಮೇಣ ಬೇಕಾಗುತ್ತದೆ. ಆದರೆ ಆರ‍್ಮೂಲೆಯ ಸುತ್ತಳತೆಯು ಉಳಿದ ಆಕಾರಗಳಿಗಿಂತ ಕಡಿಮೆ ಇದ್ದು ಉಳಿದ ಆಕಾರಗಳಷ್ಟೇ ಜೇನನ್ನು ಕೂಡಿಡಬಲ್ಲದು. ಸಾವಿರಾರು ವರುಶಗಳ ಲೆಕ್ಕಾಚಾರ ಜೇನುಹುಳಗಳನ್ನು ಈ ಆಕಾರದಲ್ಲಿ ಕೋಣೆಯನ್ನು ಕಟ್ಟುವಂತೆ ಮಾಡಿದೆ.

Jenu goodu

ಹುಳಗಳು ಮೊದಲು ಕೋಣೆಯ ತಳವನ್ನು ಕಟ್ಟತೊಡಗುತ್ತವೆ. ಒಂದು ಗೂಡಿನಲ್ಲಿ ಹೆಚ್ಚಾಗಿ ಎರೆಡು ಪದರದ ಕೋಣೆಗಳು ಒಂದರ ಹಿಂದೆ ಒಂದು ಇರುತ್ತವೆ, ಇವು ಒಂದೇ ತಳವನ್ನು ಹಂಚಿಕೊಳ್ಳುತ್ತವೆ. ಕೆಳಗಿನ ಚಿತ್ರದಲ್ಲಿ (ಅ) ತೋರಿಸಿರುವಂತೆ ಎರಡು ಬದಿಯ ಕೋಣೆಗಳಿಗೆ ಒಂದೇ ತಳವಿದೆ. ಚಿತ್ರ (ಇ) ದಲ್ಲಿ ತೋರಿಸಿರುವಂತೆ ತಳದ ಬದಿಗಳಾಗಿ 1, 2, 3 ಸರಿಬದಿಯುಳ್ಳ ನಾಲ್ಮೂಲೆಗಳನ್ನು ಮೊದಲು ಕಟ್ಟುತ್ತವೆ, ಈ ನಾಲ್ಮೂಲೆಗಳನ್ನು ಇನ್ನೊಂದು ಬದಿಯಲ್ಲಿರುವ ಕೋಣೆಗಳಿಗೂ ತಳವಾಗಿ ಬಳಸಲಾಗುತ್ತದೆ. ಹೀಗೆ, ತಳವು ಎರಡೂ ಬದಿಗೆ ಹಂಚಿಕೆಯಾಗುವುದರಿಂದ ಕಡಿಮೆ ಜೇನುಮೇಣದಿಂದ ಹೆಚ್ಚು ಕೋಣೆಗಳನ್ನು ಕಟ್ಟಬಹುದು, ಮತ್ತು ಗೂಡನ್ನು ಕಟ್ಟಲು ಬೇಕಾಗುವ ಹೊತ್ತು ಮತ್ತು ಹುರುಪನ್ನು ಕಡಿಮೆಮಾಡಬಹುದು ಎಂಬುದು ಜೇನುಹುಳಗಳ ಲೆಕ್ಕಾಚಾರ! ಬಳಿಕ ಉದ್ದದ ಬದಿಯನ್ನು ಹುಳಗಳು ಕಟ್ಟುತ್ತವೆ. ತಳವು ಮೂರು ನಾಲ್ಮೂಲೆಗಳಿಂದ ಮಾಡಿರುವುದರಿಂದ ಅದು ಹೊಂಡದಂತಾಗಿ ಆಳವು ಹೆಚ್ಚಿರುತ್ತದೆ, ಇದು ಹೆಚ್ಚು ಜೇನನ್ನು ಕೂಡಿಡಲು ನೆರವಾಗುತ್ತದೆ. ಜೇನುಹುಳದ ಆರುಕಾಲುಗಳು ಆರ‍್ಮೂಲೆಯ ಕೋಣೆಯನ್ನು ಒಂದೇ ಅಳತೆಯಲ್ಲಿ ಕಟ್ಟಲು ನೆರವಾಗುತ್ತದೆ ಎಂದು ಕೆಲವು ಅರಿಗರ ಅನಿಸಿಕೆ.

Soolugoodu

ಹೀಗೆ ಕಟ್ಟಿದ ಕೋಣೆಗಳು ಹೆಚ್ಚಾಗಿ ನೆಲಕ್ಕೆ ಒಂದೇ ತೆರಪಿನಲ್ಲಿರುತ್ತವೆ (parallel – 0 ಡಿಗ್ರಿ ಕೋನ). ಒಂದು ಹಂತದ ಗೂಡನ್ನು ಕಟ್ಟಿದ ಕೂಡಲೆ ಕೆಲವು ದುಡಿಮೆಗಾರ ಹುಳಗಳು ತಮ್ಮ ತಲೆ ಹಾಗು ಬಗ್ಗರಿಯ ಭಾಗವನ್ನು ಕೋಣೆಯ ಒಳಕ್ಕೆ ಹಾಕಿ ಸುಮಾರು 9 ರಿಂದ 14 ಡಿಗ್ರಿಗಳಷ್ಟು ಮೇಲ್ಬದಿಗೆ ಬಾಗಿಸುತ್ತವೆ. ದುಡಿಮೆಗಾರ ಹುಳಗಳ ಮೈಬಿಸಿಯಿಂದ ಮೇಣವು ಕೊಂಚ ಸಡಿಲಾಗಿ ಕೋಣೆಯು ಬಾಗುತ್ತದೆ. ಇದರಿಂದ ಕೋಣೆಯ ಬಾಯಿಯು ಮೇಲ್ಮುಕವಾಗಿ, ಕೂಡಿಟ್ಟ ಜೇನು/ಮೊಟ್ಟೆ ಸೋರಿ ನೆಲಕ್ಕೆ ಬೀಳುವುದಿಲ್ಲ.

ಕೋಣೆಗಳ ಕಟ್ಟುವಿಕೆ ಮುಗಿಯುತ್ತಿದ್ದಂತೆ ಕೆಲವು ದುಡಿಮೆಗಾರ ಹುಳಗಳು ಅದನ್ನು ಚೊಕ್ಕ ಮಾಡುತ್ತಾ ಬರುತ್ತವೆ. ಗೂಡಿನಲ್ಲಿರುವ ಸಣ್ಣ ಕಸ-ಕಡ್ಡಿಗಳನ್ನು ತೆಗೆಯುತ್ತವೆ, ಯಾವುದಾದರು ಸಣ್ಣ ಬಿರುಕಿದ್ದರೆ ಅದನ್ನು ಮರದಂಟಿನಿಂದ (propolis) ಇವು ಮುಚ್ಚುತ್ತವೆ. ಈ ಮರದಂಟನ್ನು ಗಿಡ ಇಲ್ಲವೇ ಮರದ ಮೇಣ ಮತ್ತು ಜೇನುಮೇಣವನ್ನು ಕೂಡಿಸಿ ಮಾಡಿರುತ್ತವೆ. ಇದಕ್ಕೆ ಬ್ಯಾಕ್ಟೀರಿಯಗಳನ್ನು ಕೊಲ್ಲುವ ತಾಕತ್ತಿರುತ್ತದೆ, ಅಲ್ಲದೇ ಜೇನುಮೇಣಕ್ಕಿಂತ ಹೆಚ್ಚು ಅಂಟುವ ಮೇಣವಾಗಿರುತ್ತದೆ. ಈ ಮೇಣವನ್ನು ಬಳಸಿ ಗೂಡುಗಳ ಬಿರುಕು ಮತ್ತು ಗೋಡೆಗಳ ಏರು-ತಗ್ಗುಗಳನ್ನು ಮುಚ್ಚುವುದರಿಂದ ಕೋಣೆಗಳಿಗೆ ನೀರು ಸೋರುವುದು ಮತ್ತು ಸಿಹಿಯನ್ನು ಹಾಳುಗೆಡುವ ‘ಸೀರುಸಿರಿ‘ಗಳ (micro organisms) ಬೆಳವಣಿಗೆ ನಿಲ್ಲುತ್ತದೆ.

ಇಶ್ಟೆಲ್ಲಾ ಕಷ್ಟಪಟ್ಟು ಕಟ್ಟುವ ಗೂಡನ್ನು ಕಾಪಾಡಿಕೊಳ್ಳಲು ಜೇನುಹುಳಗಳು ಸಾಕಷ್ಟು ಕೆಲಸ ಮಾಡುತ್ತವೆ. ಜೇನುಮೇಣವನ್ನು ಹಾಳುಮಾಡುವ ಕೀಟಗಳನ್ನು ಮತ್ತು ಜೇನನ್ನು ತಿನ್ನಲು ಬರುವ ಇರುವೆಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ಹಲವು ದುಡಿಮೆಗಾರ ಹುಳಗಳಿಗೆ ಇವುಗಳಿಂದ ಗೂಡನ್ನು ಕಾಪಾಡುವುದೇ ಕೆಲಸವಾಗಿರುತ್ತದೆ. ಇದಲ್ಲದೇ ಗೂಡಿನ ಬಿಸುಪನ್ನು ಯಾವಾಗಲು 35 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿ ಕಾದುಕೊಳ್ಳಬೇಕು, ಗೂಡಿನ ತೇವಾಂಶ (humidity)ವನ್ನು ಮತ್ತು ಗಾಳಿಯ ಹರಿದಾಟವನ್ನು ಕೂಡ ಕಾದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಗೂಡಿನಲ್ಲಿರುವ ಮೊಟ್ಟೆ, ಮರಿಹುಳ, ಗೂಡುಹುಳದ ಬೆಳವಣಿಗೆಗೆ ತೊಂದರೆಯಾಗುತ್ತದೆ ಮತ್ತು ಕೂಡಿಟ್ಟಿರುವ ಜೇನು ಕೆಡುವ ಸಾದ್ಯತೆ ಇರುತ್ತದೆ.

ಚಳಿಗಾಲ ಇಲ್ಲವೇ ಮಳೆಗಾಲದಲ್ಲಿ ಹೊರಗಿನ ಬಿಸುಪು ಕಡಿಮೆಯಿರುತ್ತದೆ ಆಗ ಗೂಡಿನ ಬಿಸುಪು 35 ಡಿಗ್ರಿಗಿಂತ ಕೆಳಗಿಳಿಯುತ್ತದೆ, ಆಗ ಹುಳಗಳು ಗೂಡನ್ನು ಸುತ್ತುವರಿದು ಗೊಂಚಲ ಹಾಗೆ ಆಗುತ್ತವೆ, ಜೊತೆಗೆ ತಮ್ಮ ಹಾರುವ ಕಂಡಗಳನ್ನು (flight muscles) ಜೋರಾಗಿ ಅಲುಗಾಡಿಸುತ್ತವೆ. ಇದರಿಂದ ಹುಳದ ಮೈಬಿಸಿ ಹೆಚ್ಚಿ ಅದು ಗೂಡಿನ ಒಟ್ಟಾರೆ ಬಿಸುಪನ್ನು ಏರಿಸಲು ನೆರವಾಗುತ್ತದೆ. ಇನ್ನು, ಬೇಸಿಗೆಯ ಕಾಲದಲ್ಲಿ ಹೊರಗಿನ ಬಿಸುಪಿನಿಂದ ಗೂಡಿನ ಬಿಸುಪು ಹೆಚ್ಚಾಗುತ್ತದೆ ಆಗ ಹುಳಗಳು ತಮ್ಮ ರಕ್ಕೆಯನ್ನು ಬೀಸಣಿಗೆಯಂತೆ ಬಡಿದು ಗಾಳಿಯನ್ನು ಬೀಸಿ ಗೂಡಿನ ಬಿಸುಪನ್ನು ಕಡಿಮೆಗೊಳಿಸುತ್ತವೆ.

ಗೂಡಿನಲ್ಲಿರುವ ಜೇನಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ತೇವಾಂಶ, ಬಿಸುಪು ಮತ್ತು ಗಾಳಿಯ ಹರಿದಾಟದ ಜೊತೆಗೆ ಹೊರಗಿನ ಕೀಟಗಳು ಗೂಡಿಗೆ ಲಗ್ಗೆ ಹಾಕದಂತೆ ನೋಡಿಕೊಳ್ಳುತ್ತವೆ, ಗೂಡಿನ ಒಳಗೇ ಸೀರುಸಿರಿಗಳು, ಬ್ಯಾಕ್ಟೀರಿಯಗಳು ಬೆಳೆಯದಂತೆ ತಡೆಯಲು ಮರದಂಟನ್ನು (propolis) ಬಳಸುತ್ತವೆ. ಹಾಗೇನಾದರು ಇವುಗಳ ಬೆಳವಣಿಗೆ ಕಂಡು ಬಂದರೆ ಮರದಂಟಿನಿಂದ ಆ ಜಾಗವನ್ನು ಮುಚ್ಚುತ್ತವೆ. ಗೂಡಿನಲ್ಲಿ ಸತ್ತಿರುವ ಜೇನುಹುಳ, ಮರಿಹುಳ, ಗೂಡುಹುಳ ಮತ್ತು ಹಾಳಾದ ಮೊಟ್ಟೆಗಳನ್ನು ಗೂಡಿನಿಂದ ಹೊರಹಾಕುತ್ತವೆ. ಹೀಗೆ ತಮ್ಮ ಹೊಟ್ಟೆಗೆ ಬೇಕಾದ ಜೇನನ್ನು ಕಾಪಾಡಿಕೊಂಡು ಬದುಕನ್ನು ನಡೆಸಲು ಜೇನುಹುಳಗಳು ಗೂಡನ್ನು ಕಟ್ಟಿಕೊಂಡು ಬಾಳುತ್ತವೆ.

(ಮಾಹಿತಿ ಸೆಲೆ: westmtnapairy.cominsect.tamu.eduiflscience.com)

ಏನಿದು ಮೋಡ ಬಿತ್ತನೆ?

ಪ್ರಶಾಂತ ಸೊರಟೂರ.

‘ಮೋಡ ಬಿತ್ತನೆ’, ಕೆಲವು ವರ್ಷಗಳ ಹಿಂದೆ ಹೀಗೊಂದು ಪದ ಒಮ್ಮೆಲೇ ಬೆಳಕಿಗೆ ಬಂತು, ಬರಗಾಲದಿಂದ ತತ್ತರಿಸಿದ್ದ ಕರ್ನಾಟಕಕ್ಕೆ ಮಳೆ ಬರಿಸಲು ಮೋಡದಲ್ಲಿಯೇ ವಿಮಾನದಿಂದ ಬಿತ್ತನೆಯ ಕೆಲಸವಂತೆ, ಅದು ಮಳೆ ತರುತ್ತದಂತೆ ಅನ್ನುವ ಮಾತುಗಳು ಎಲ್ಲೆಡೆ ಹರಡ ತೊಡಗಿದ್ದವು. ನೆಲದಲ್ಲಿ ಬಿತ್ತನೆ ಮಾಡಿದ, ನೋಡಿದ ಕನ್ನಡಿಗರಿಗೆ ಬಾನಿನಲ್ಲಿ ಮಾಡುವ ಇದ್ಯಾವ ಬಗೆಯ ಬಿತ್ತನೆ ಅನ್ನಿಸಿತ್ತು. ಕೆಲ ಊರುಗಳ ಮೇಲೆ ವಿಮಾನಗಳು ಹಾರಾಡಿ ’ಮೋಡ ಬಿತ್ತನೆ’ಯಿಂದ ಮಳೆ ಸುರಿಸಿದ್ದೂ ಸುದ್ದಿಯಾಯಿತು. ಇಡೀ ದೇಶದಲ್ಲಿಯೇ ಈ ತರಹ ಮಳೆ ಸುರಿಸಲು ಮೋಡ ಬಿತ್ತನೆಗೆ ಕೈಹಾಕಿದ ಮೊದಲ ನಾಡು ಕರ್ನಾಟಕ ಅನ್ನುವ ಸುದ್ದಿಯಾಯಿತು.

ಮೋಡ ಬಿತ್ತನೆಯ ಬಗ್ಗೆ ತಿಳಿದುಕೊಳ್ಳುವ ಮುನ್ನ, ಮೋಡ ಮತ್ತು ಮಳೆಯ ಬಗ್ಗೆ ಒಂಚೂರು ತಿಳಿದುಕೊಳ್ಳೋಣ. ಕಡಲು, ಹೊಳೆ ಮತ್ತು ನೆಲದ ಹಲವೆಡೆ ಇರುವ ನೀರು ಬಿಸಿಲಿಗೆ ಕಾಯ್ದು ಆವಿಯಾಗುತ್ತದೆ. ಹೀಗೆ ಉಂಟಾದ ನೀರಾವಿಯು ಗಾಳಿಯೊಡನೆ ಬೆರೆತು ಬಾನಿನೆಡೆಗೆ ಸಾಗ ತೊಡಗುತ್ತದೆ. ಗಾಳಿಯು ಬಿಸಿಯಾದಷ್ಟು ಅದು ತನ್ನಲ್ಲಿ ಹೆಚ್ಚೆಚ್ಚು ನೀರಾವಿಯನ್ನು ಅಡಗಿಸಿಟ್ಟುಕೊಳ್ಳಬಲ್ಲದು, ಆದರೆ ನೆಲದಿಂದ ಮೇಲೆ-ಮೇಲೆ ಹೋದಂತೆಲ್ಲಾ ಅಲ್ಲಿರುವ ಬಿಸುಪು (temperature) ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಬಿಸುಪು ತುಂಬಾ ಕಡಿಮೆಯಾಗಿ ಗಾಳಿಗೆ ತನ್ನಲ್ಲಿ ಇನ್ನಷ್ಟು ನೀರಾವಿಯನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಈ ಹಂತದ ಗಾಳಿಯನ್ನು ‘ತಣಿದ ಗಾಳಿ’ (saturated air) ಅಂತಾ ಕರೆಯುತ್ತಾರೆ. ಈ ತಣಿದ ಗಾಳಿಯು ತೂಕವಾದ ನೀರಾವಿಯನ್ನು ಹೊತ್ತುಕೊಂಡು ಬಾನಿನಲ್ಲಿ ಒಂದೆಡೆ ನೆಲೆ ನಿಲ್ಲುತ್ತದೆ, ಇವೇ ಮೋಡಗಳು.

ಹೀಗೆ ನೆಲೆಗೊಂಡ ಮೋಡದಲ್ಲಿ ನೀರ ಹನಿಗಳು ತುಂಬಾ ತಂಪಾಗಿದ್ದು ಅವುಗಳ ಬಿಸುಪು (temperature) ಕೆಲವೊಮ್ಮೆ – 40° ಸೆಲ್ಸಿಯಸ್ ಆಗಿರುತ್ತದೆ. ಇಲ್ಲಿ ಇನ್ನೊಂದು ತಿಳಿದುಕೊಳ್ಳಬೇಕಾದ ವಿಶಯವೆಂದರೆ ಇಷ್ಟು ತಂಪಾಗಿದ್ದರೂ ಎಲ್ಲ ಹನಿಗಳು ಗಟ್ಟಿ ಮಂಜಿನ ರೂಪದಲ್ಲಿರದೇ ಕೆಲವು ಹನಿಗಳು ನೀರಿನ ರೂಪದಲ್ಲೇ ಉಳಿದಿರುತ್ತವೆ. ಇದಕ್ಕೆ ಕಾರಣವೆಂದರೆ ಸಾಮಾನ್ಯ ಒತ್ತಡದಲ್ಲಿ 0° ಸೆ. ಹೆಪ್ಪುಗಟ್ಟುವ ನೀರು ಬಾನಿನಲ್ಲಿ, ಮೇಲೆ ಹೋದಂತೆ ಒತ್ತಡ ಕಡಿಮೆ ಇರುವುದರಿಂದ ಅದರ ಹೆಪ್ಪುಗಟ್ಟುವಿಕೆ ಬಿಸುಪು (freezing temperature) ಕಡಿಮೆಯಾಗುತ್ತಾ ಹೋಗುತ್ತದೆ

ಮೋಡಗಳಲ್ಲಿರುವ ಚಿಕ್ಕ ನೀರಿನ ಹನಿಗಳು ಮತ್ತು ಮಂಜಿನ (ಗಟ್ಟಿ ನೀರು) ಹನಿಗಳು ಒಂದಕ್ಕೊಂದು ಬೆಸೆದು ಇಲ್ಲವೇ ಮೋಡದಲ್ಲಿರುವ ಇತರೆ ಪುಟಾಣಿ ಕಣಗಳನ್ನು ಸುತ್ತುವರೆದು ದೊಡ್ಡದಾಗುತ್ತಾ ಹೋಗುತ್ತವೆ. ಹೀಗೆ ದೊಡ್ಡದಾದ ನೀರಿನ, ಮಂಜಿನ ಹನಿ ಹೊತ್ತುಕೊಂಡಿರುವ ಮೋಡಕ್ಕೆ ಅವುಗಳ ತೂಕ ತಾಳಿಕೊಳ್ಳಲು ಆಗದಂತ ಪರಿಸ್ಥಿತಿ ಬಂದುಬಿಡುತ್ತದೆ. ಆಗಲೇ ಅವು ನೆಲಕ್ಕೆ ಮಳೆಯಾಗಿ ಸುರಿಯ ತೊಡಗುತ್ತವೆ.

ಮೋಡಗಳ ಕುರಿತಾದ ಮೇಲಿನ ವಿಷಯದಲ್ಲಿ ಗಮನಿಸಬೇಕಾದುದೆಂದರೆ, ಮೋಡಗಳು ಮಳೆಯಾಗಬೇಕಾದರೆ ಅವುಗಳಲ್ಲಿರುವ ನೀರಿನ ಹನಿಗಳು ಒಂದೋ ಹೆಚ್ಚಾಗಬೇಕು ಇಲ್ಲವೇ ಆ ನೀರ ಹನಿಗಳು ಒಂದಾಗಿ ದೊಡ್ಡದಾಗಬೇಕು. ಇದರಲ್ಲಿ ಎರಡನೇ ಬಗೆಯನ್ನು ಬಳಸಿ ಮಳೆ ತರಿಸುವುದೇ ‘ಮೋಡ ಬಿತ್ತನೆ’ಯ ಹಿಂದಿರುವ ಚಳಕ. ಮೋಡ ಬಿತ್ತನೆಯಲ್ಲಿ, ಬೆಳ್ಳಿಯ ಆಯೋಡಾಯಡ್ ಇಲ್ಲವೇ ಒಣ ಮಂಜು ಎಂದು ಕರೆಯಲ್ಪಡುವ ಗಟ್ಟಿ ಕಾರ್ಬನ್ ತುಣುಕುಗಳನ್ನು ವಿಮಾನಗಳ ಮೂಲಕ ಮೋಡಗಳ ಮೇಲೆ ಚಿಮುಕಿಸಲಾಗುತ್ತದೆ. ಹೀಗೆ ಚಿಮುಕಿಸಿದ ತುಣುಕುಗಳು ಮೋಡದಲ್ಲಿರುವ ನೀರಿನ, ಮಂಜಿನ ಹನಿಗಳನ್ನು ತನ್ನೆಡೆಗೆ ಸೆಳೆದು ದೊಡ್ಡದಾಗಿಸುತ್ತವೆ. ಹೀಗೆ ಒಂದುಗೂಡಿ ದೊಡ್ಡದಾದ ನೀರ ಹನಿಗಳ ಬಾರ ತಾಳಲಾಗದೇ ಮೋಡಗಳು, ಮಳೆಯಾಗಿ ಸುರಿಯ ತೊಡಗುತ್ತವೆ.

‘ಮೋಡ ಬಿತ್ತನೆ’ಯ ಕೆಲಸ ಯಾವಾಗಲೂ ಗೆಲುವು ಕಾಣುತ್ತದೆ ಅನ್ನಲಾಗದು, ಮೋಡದಲ್ಲಿರುವ ನೀರ ಹನಿಗಳ ಗಾತ್ರ, ಅವುಗಳ ಸುತ್ತಿರುವ ವಾತಾವರಣ ಇದರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜಗತ್ತಿನ ಹಲವೆಡೆ ಮೋಡ ಬಿತ್ತನೆಯ ಕೆಲಸವನ್ನು ಕೈಗೊಂಡರೂ ಎಲ್ಲಾ ಕಡೆ ಇದಕ್ಕೆ ಒಪ್ಪಿಗೆ ಪಡೆಯಲು ಇನ್ನೂ ಆಗಿಲ್ಲ. ಆದರೆ ಚೀನಾ ದೇಶ ಯಾವುದೇ ಅನುಮಾನಗಳನ್ನು ಇಟ್ಟುಕೊಳ್ಳದೇ ’ಮೋಡ ಬಿತ್ತನೆ’ಯಲ್ಲಿ ಪ್ರತಿ ವರ್ಷ ಹೆಚ್ಚಿನ ದುಡ್ಡು ತೊಡಗಿಸುತ್ತಾ ಹೊರಟಿದೆ. ಬೀಜಿಂಗ್ ಒಲಂಪಿಕ್ಸಿನಲ್ಲಿ ಮಳೆಯಿಂದ ಆಟ ಹಾಳಾಗಬಾರದೆಂದು, ಮೋಡ ಬಿತ್ತನೆ ಮಾಡಿ ಆಟಕ್ಕಿಂತ ಹಲವು ದಿನಗಳ ಮೊದಲೇ ಮೋಡಗಳನ್ನು ಮಳೆಯಾಗಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಕರ್ನಾಟಕದಲ್ಲಿ 2003 ರಿಂದ ಮೋಡಬಿತ್ತನೆಯನ್ನು ಕೈಗೊಳ್ಳಲಾಗಿದೆ .

ಮಾಹಿತಿ ಸೆಲೆ: