ಪಾತಿಯ ಬುಟ್ಟಿಗಳಲ್ಲಿ ಕಾಫಿಗಿಡದ ಬೆಳವಣಿಗೆ

ರತೀಶ ರತ್ನಾಕರ.

ಕಾಫಿ ಬಿತ್ತನೆ ಮತ್ತು ಆರೈಕೆಯ ಬರಹದಲ್ಲಿ ಮಣ್ಣಿನ ಹಾಸಿಗೆಯನ್ನು ಬಳಸಿಕೊಂಡು ಕಾಫಿ ಬೀಜದ ಬಿತ್ತನೆ ಮಾಡಿ, ಅದನ್ನು ನೋಡಿಕೊಳ್ಳುವುದರ ಬಗ್ಗೆ ತಿಳಿದೆವು. ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಕಾಫಿ ಬೀಜವು ಸುಮಾರು 40 ರಿಂದ 50 ದಿನದಲ್ಲಿ 200 – 300 ಮಿ.ಮೀ ಬೆಳೆಯುತ್ತದೆ. ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಿ ಎರಡನೇ ಹಂತದ ಬೆಳವಣಿಗೆಯನ್ನು ನೋಡಿಕೊಳ್ಳಲಾಗುತ್ತದೆ.

ಪಾತಿ ಮಾಡುವುದು:
ಮೊಳಕೆಯೊಡೆದ ಕಾಫಿಗಿಡದ ಮುಂದಿನ ಬೆಳವಣಿಗೆಗಾಗಿ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ನೆಟ್ಟು, ಪಾತಿಯನ್ನು ಮಾಡಿ ನೋಡಿಕೊಳ್ಳಲಾಗುತ್ತದೆ. ಕಾಫಿಗಿಡಗಳಿಗೆ ಕಡಿಮೆ ಎಂದರು 8 ಇಂಚು ಎತ್ತರ ಮತ್ತು 3 ಇಂಚು ಅಡ್ಡಗಲ ಇರುವ ಪ್ಲಾಸ್ಟಿಕ್ ಬುಟ್ಟಿಗಳು ಬೇಕು. ಮಣ್ಣಿನಲ್ಲಿರುವ ಕೊಳಚೆ ಹಾಗು ಹೆಚ್ಚಿನ ನೀರು ಹರಿದು ಹೋಗುವಂತೆ ಚಿಕ್ಕ ಚಿಕ್ಕ ಕಿಂಡಿಗಳು ಪ್ಲಾಸ್ಟಿಕ್ ಬುಟ್ಟಿಯಲ್ಲಿರಬೇಕು.

ಈ ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬುವ ಮಣ್ಣಿನಲ್ಲಿ ಸಾಕಷ್ಟು ಸಾರವಿರಬೇಕು. ಸಾರವಿರುವ ಕಾಡಿನ ಮಣ್ಣಿಗೆ ಕೊಟ್ಟಿಗೆ ಗೊಬ್ಬರವನ್ನು ಕಲೆಸಿ, ಮಣ್ಣು ಅಂಟಿಕೊಳ್ಳದಂತೆ ಸಡಿಲವಾಗಿರಲು ಮರಳನ್ನು ಕೂಡ ಸೇರಿಸಿ ಮಣ್ಣನ್ನು ಅಣಿಗೊಳಿಸಲಾಗುವುದು. ಗಿಡದ ಬೆಳವಣಿಗೆಗೆ ಬೇಕಾದ ಪಾಸ್ಪೇಟ್ ಹಾಗು ನೈಟ್ರೋಜನ್ ಹೊಂದಿರುವ ಗೊಬ್ಬರವನ್ನು ಕೂಡ ಬಳಸಲಾಗುತ್ತದೆ. ಕಾಫಿ ಸಿಪ್ಪೆಯ ಗೊಬ್ಬರವನ್ನು ಕೂಡ ಈ ಮಣ್ಣಿಗೆ ಬೆರೆಸಿದರೆ ಮಣ್ಣಿನ ಸಾರ ಹೆಚ್ಚುತ್ತದೆ. ಹೀಗೆ ಗೊಬ್ಬರವನ್ನು ಹೊಂದಿರುವ, ಹುಡಿಯಾಗಿರುವ ಮಣ್ಣನ್ನು ಚೆನ್ನಾಗಿ ಕಲೆಸಿ ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬಿಸಬೇಕು. ಪ್ಲಾಸ್ಟಿಕ್ ಬುಟ್ಟಿಗಳಿಗೆ ತುಂಬಿಸುವಾಗ ಹೆಚ್ಚು ಒತ್ತಿ ತುಂಬಿಸದೆ, ಬುಟ್ಟಿಯೊಳಗಿರುವ ಮಣ್ಣಿನಲ್ಲಿ ಗಾಳಿ ಮತ್ತು ನೀರು ಯಾವ ತೊಡಕಿಲ್ಲದೆ ಓಡಾಡಲು ಆಗುವಂತೆ ಮಣ್ಣನ್ನು ತುಂಬಿಸಬೇಕು.

ಒಂದು ಪಾತಿಯ ಸಾಲು ಸುಮಾರು 3 ಅಡಿ ಅಗಲ ಮತ್ತು 20 ರಿಂದ 30 ಅಡಿಗಳಷ್ಟು ಉದ್ದವಿರುತ್ತದೆ. ಪಾತಿಯ ಸಾಲಿನ ಬದಿಗೆ ಬಿದಿರಿನ ತಟ್ಟೆಗಳನ್ನು ಹೊಡೆದು ಇಲ್ಲವೇ ಮರದ ಹಲಗೆಗಳನ್ನು ಇರಿಸಿ 30 x 3 ಅಡಿ ಉದ್ದಗಲದ ಕಟ್ಟೆಯನ್ನು ಮಾಡಲಾಗುತ್ತದೆ. ಈ ಕಟ್ಟೆಯ ಒಳಗೆ ಮಣ್ಣು ತುಂಬಿರುವ ಪ್ಲಾಸ್ಟಿಕ್ ಬುಟ್ಟಿಗಳನ್ನು ನೇರವಾಗಿ ಮತ್ತು ಸಾಲಾಗಿ ಒಂದರ ಪಕ್ಕ ಒಂದರಂತೆ ಜೋಡಿಸಿಡಲಾಗುತ್ತದೆ. (ಈ ಕೆಳಗಿನ ಚಿತ್ರವನ್ನು ನೋಡಿ) ಇದು ಬುಟ್ಟಿಗಳು ಗಟ್ಟಿಯಾಗಿ ಹಾಗು ನೇರವಾಗಿ ನಿಲ್ಲಲು ನೆರವಾಗುತ್ತದೆ.

ಮಣ್ಣಿನ ಹಾಸಿಗೆಯಲ್ಲಿ ಮೊಳಕೆಯೊಡೆದ ಗಿಡಗಳನ್ನು ಕಿತ್ತು, ಜೋಡಿಸಿಟ್ಟ ಬುಟ್ಟಿಗಳಿಗೆ ತಂದು ನೆಡಬೇಕು. ಈ ಹಂತದಲ್ಲಿ ಕೆಳಗಿನ ಮಾಹಿತಿಗಳನ್ನು ಗಮನದಲ್ಲಿಡಬೇಕು.

  1. ಮಣ್ಣಿನ ಹಾಸಿಗೆಯಿಂದ ಗಿಡಗಳನ್ನು ಕೀಳುವಾಗ ಸಾಕಷ್ಟು ಎಚ್ಚರದಿಂದ ಕೀಳಬೇಕು. ಮೊಳಕೆಯೊಡೆದ ಗಿಡಗಳಿಗೆ ಮತ್ತು ಬೇರುಗಳಿಗೆ ಗಾಯವಾಗದಂತೆ ನೋಡಿಕೊಳ್ಳಬೇಕು.
  2. ಕಿತ್ತ ಗಿಡಗಳಲ್ಲಿ ಚೆನ್ನಾಗಿ ಕುಡಿಯೊಡೆದಿರುವ ಮತ್ತು ನಲ್ಲಿಬೇರುಗಳು (tap roots) ನೇರವಾಗಿರುವ ಗಿಡಗಳನ್ನು ಮಾತ್ರ ಆರಿಸಿಕೊಳ್ಳಬೇಕು.
  3. ಗಿಡದ ಬೇರುಗಳು ಡೊಂಕಾಗಿದ್ದರೆ ಇಲ್ಲವೇ ಬೇರುಗಳಲ್ಲಿ ಕೂದಲುಗಳು (root hairs) ಕಡಿಮೆಯಿದ್ದರೆ ಅವನ್ನು ಬಳಸಬಾರದು.
  4. ಹುಳ ತಿಂದಿರುವ ಇಲ್ಲವೇ ಜಡ್ಡು ಹಿಡಿದಿರುವ ಮೊಳೆಕೆಯ ಗಿಡಗಳನ್ನು ಬಳಸಬಾರದು.
  5. ಅಗತ್ಯಕ್ಕಿಂತ ಹೆಚ್ಚು ಎಲೆಗಳನ್ನು ಹೊಂದಿರುವ ಗಿಡಗಳನ್ನು ಆರಿಸಿಕೊಳ್ಳಬಾರದು. ಏಕೆಂದರೆ, ಮುಂದೆ ಇವುಗಳ ಬೆಳವಣಿಗೆ ತೀರಾ ಕಡಿಮೆಯಾಗುತ್ತದೆ.

ಹೀಗೆ ಆರಿಸಿಕೊಂಡ ಮೊಳಕೆಯ ಗಿಡಗಳನ್ನು ಕೂಡಲೆ ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಈ ಕೆಳಗಿನ ಹಂತಗಳ ಮೂಲಕ ನೆಡಬೇಕು.

  1. ತಂಪಾದ ಹೊತ್ತಿನಲ್ಲಿ ಗಿಡನೆಡುವ ಕೆಲಸವಿಟ್ಟುಕೊಳ್ಳಬೇಕು, ಅಂದರೆ ಬೆಳಗಿನ ಜಾವ ಇಲ್ಲವೇ ಸಂಜೆಯ ಹೊತ್ತು.
  2. ಪಾತಿಯ ಬುಟ್ಟಿಗಳಿಗೆ ಚೆನ್ನಾಗಿ ನೀರುಣಿಸಬೇಕು.
    ಪಾತಿಯ ಬುಟ್ಟಿಗಳಿಗೆ ನೀರುಣಿಸಿದ ಮೇಲೆ, ಚೂಪಾದ ಕಡ್ಡಿಯಿಂದ ಸುಮಾರು 50 ಮಿ.ಮೀ ತೂತವನ್ನು ಕೊರೆಯಬೇಕು.
  3. ಮಣ್ಣಿನ ಹಾಸಿಗೆಯಿಂದ ಕಿತ್ತು ಆರಿಸಿದ ಗಿಡವನ್ನು ತಂದು ಬುಟ್ಟಿಗೆ ನೆಡಬೇಕು. ಮೊಳಕೆಯ ಗಿಡವನ್ನು ನೆಡುವಾಗ ನಲ್ಲಿಬೇರು ಬಾಗದಂತೆ ನೇರವಾಗಿ ನೆಟ್ಟು, ಬುಟ್ಟಿಯ ಮೇಲಿರುವ ಮಣ್ಣಿನಿಂದ ಮೆದುವಾಗಿ ಒತ್ತಬೇಕು.
  4. ಒಂದು ವೇಳೆ ನಲ್ಲಿಬೇರಿನ ಉದ್ದ ಹೆಚ್ಚಾಗಿದ್ದರೆ ಅದರ ಉದ್ದಕ್ಕೆ ಬೇಕಾದ ತೂತವನ್ನು ಬುಟ್ಟಿಯೊಳಗೆ ಮಾಡಿ ನೆಡಬೇಕು.
  5. ಗಿಡವನ್ನು ನೆಟ್ಟ ಮೇಲೆ ಪಾತಿಗೆ ಚೆನ್ನಾಗಿ ನೀರುಣಿಸಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ನೀರುಣಿಸಬಾರದು.
  6. ಪಾತಿಯನ್ನು ಮಳೆ ಮತ್ತು ಬಿಸಿಲಿನಿಂದ ಕಾಪಾಡಲು ಮೊದಲೇ ಚಪ್ಪರವನ್ನು ಮಾಡಿರಬೇಕು. ಹಸಿರು ಮನೆಯ ಒಳಗೂ ಪಾತಿಯನ್ನು ಮಾಡಬಹುದು. ಗಿಡಗಳ ಬೆಳವಣಿಗೆಯಲ್ಲಿ ಹಸಿರು ಮನೆಯು ಹೇಗೆ ನೆರವಾಗುತ್ತದೆ ಎಂದು ‘ಹಸಿರುಮನೆಯ ಗುಟ್ಟು’ ಬರಹದಲ್ಲಿ ತಿಳಿಯಬಹುದು.
  7. ಪಾತಿಯ ಒಳಗೆ ಸಾಕಷ್ಟು ಗಾಳಿ ಮತ್ತು ಬೆಳಕು ಬರುವಂತಿರಬೇಕು.
  8. ಕಾಫಿ ಬುಟ್ಟಿಗಳಲ್ಲಿ ಬರುವ ಕಳೆಗಿಡಗಳನ್ನು ತೆಗೆಯುತ್ತಿರಬೇಕು.
  9. ಪ್ರತಿ ಹದಿನೈದು ದಿನಗಳಿಗೊಮ್ಮೆ ಯೂರಿಯ (46:0:0) ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕಬೇಕು. ಸುಮಾರು 60 ಗ್ರಾಂ ಯೂರಿಯ ಗೊಬ್ಬರವನ್ನು 100 ಗಿಡಗಳಿಗೆ ಆಗುವಷ್ಟು ಹಾಕಬಹುದು. ಸಾವಯವ ಬೇಸಾಯ ಮಾಡುವವರು ಕೊಟ್ಟಿಗೆ ಗೊಬ್ಬರವನ್ನು ಚೆನ್ನಾಗಿ ಹುಡಿಮಾಡಿ ಹಾಕಬಹುದು. ಕಾಫಿ ಗಿಡದ ಎಲೆಗಳು ಕಂದು ಹಸಿರು ಬಣ್ಣಕ್ಕೆ ತಿರುಗುವಂತಿದ್ದರೆ ಗೊಬ್ಬರವನ್ನು ಕೊಡುವುದು ನಿಲ್ಲಿಸಬೇಕು.
  10. ಪಾತಿಯಲ್ಲಿ ಯಾವುದೇ ಹುಳ-ಹುಪ್ಪಟೆಗಳು ಆಗದಂತೆ ನೋಡಿಕೊಳ್ಳುತ್ತಿರಬೇಕು. ಯಾವುದಾದರು ಗಿಡಕ್ಕೆ ಜಡ್ಡು ಬಂದರೆ ಕೂಡಲೆ ಆ ಗಿಡದ ಬುಟ್ಟಿಯನ್ನು ಬೇರೆ ಮಾಡಿ ಸುಡಬೇಕು ಇಲ್ಲವೇ ದೂರೆ ಎಸೆಯಬೇಕು.

ಪಾತಿಯ ಬುಟ್ಟಿಯಲ್ಲಿನ ಗಿಡಗಳು ಸುಮಾರು 3 ತಿಂಗಳಿಗೆ ಒಂದರಿಂದ ಒಂದೂವರೆ ಅಡಿ ಎತ್ತರಕ್ಕೆ ಬೆಳೆಯಬಲ್ಲವು. ಈಗ ಈ ಗಿಡಗಳು ತೋಟದ ಮಣ್ಣಿನಲ್ಲಿ ನೆಡಲು ಸಿದ್ದವಾದಂತೆ. ಜನವರಿ-ಪ್ರೆಬ್ರವರಿಯಲ್ಲಿ ಮಣ್ಣಿನ ಹಾಸಿಗೆಗೆ ಹೋದ ಕಾಫಿ ಬೀಜಗಳು, ಮಾರ್ಚ್-ಏಪ್ರಿಲ್ ನಲ್ಲಿ ಮೊಳಕೆಯೊಡೆದು ಮೊದಲ ಹಂತದ ಬೆಳವಣಿಗೆಯನ್ನು ಮುಗಿಸುತ್ತವೆ. ಏಪ್ರಿಲ್ ನಿಂದ ಜೂನ್ ವರೆಗೆ ಪಾತಿಯ ಬುಟ್ಟಿಗಳಲ್ಲಿ ತಮ್ಮ ಎರಡನೇ ಹಂತದ ಬೆಳವಣಿಗೆಯನ್ನು ಮುಗಿಸಿಕೊಂಡು, ಸರಿಯಾಗಿ ಮಳೆಗಾಲದ ಹೊತ್ತಿಗೆ ಅಂದರೆ ಜೂನ್ – ಜುಲೈ ತಿಂಗಳಿನಲ್ಲಿ ತೋಟದ ಜಾಗದಲ್ಲಿ ನೆಡಲು ಸಿಗುತ್ತವೆ. ಜನವರಿಯಿಂದ ಜುಲೈವರೆಗೆ ಬೆಳೆಯುವ ಬುಟ್ಟಿಗಿಡಗಳನ್ನು ‘ಒಂದು ನೀರು’ ಗಿಡ ಎಂದು ಕರೆಯುತ್ತಾರೆ. ಒಂದು ವೇಳೆ ಈ ಜುಲೈ ಮಳೆಗಾಲಕ್ಕೆ ನೆಡದೇ ಮುಂದಿನ ವರುಶದ ಜುಲೈ ಮಳೆಗಾಲದ ವರೆಗೂ ಕಾಫಿಗಿಡಗಳು ಬುಟ್ಟಿಯಲ್ಲೇ ಬೆಳೆದರೆ ಅವನ್ನು ‘ಎರೆಡು ನೀರು’ ಗಿಡ ಎಂದು ಕರೆಯಲಾಗುತ್ತದೆ.

ಕಾಫಿಗಿಡವನ್ನು ತೋಟದ ಮಣ್ಣಿನಲ್ಲಿ ನೆಡುವುದಕ್ಕಿಂತ ಮುಂಚೆ ಹೀಗೆ ಎರೆಡು ಹಂತಗಳಲ್ಲಿ ಗಿಡದ ಆರೈಕೆಯನ್ನು ಮಾಡಬೇಕಾಗುತ್ತದೆ.

(ಚಿತ್ರ ಸೆಲೆ: dailycoffeenews.comwikimedia )

ಕಾಫಿಬೀಜದ ಬಿತ್ತನೆ ಮತ್ತು ಆರೈಕೆ

ರತೀಶ ರತ್ನಾಕರ.

ಚುಮುಚುಮು ಚಳಿಯ ಹೊತ್ತಿಗೆ ಬಿಸಿ ಬಿಸಿ ಕಾಫಿಯನ್ನು ಹೀರುವಾಗ, ಇಲ್ಲವೇ ಒತ್ತಡಗಳ ನಡುವೆ ಮನಸ್ಸಿನ ಉಲ್ಲಾಸಕ್ಕೆಂದು ಕಾಫಿ ಗುಟುಕನ್ನು ಕುಡಿಯುವಾಗ,ಕಾಫಿಯು ಕಾಫಿಯಾಗಲು ಮಾಡಬೇಕಾದ ಕೆಲಸಗಳೆಷ್ಟು ಎಂಬ ಅರಿವು ಇರುವುದಿಲ್ಲ. ಇದು ಕಾಫಿಗೆ ಮಾತ್ರವಲ್ಲ, ನಾವು ತಿನ್ನುವ ಬೇಳೆ-ಕಾಳುಗಳು, ಇತರೆ ತಿನಿಸುಗಳು ಬೆಳೆದು ಬಂದ ಬಗೆ ಹೆಚ್ಚಾಗಿ ನಮಗೆ ತಿಳಿದಿರುವುದಿಲ್ಲ. ಕಾಫಿ ಬೆಳೆಯುವ ಕುಟುಂಬದಿಂದಲೇ ಬೆಳೆದು, ಕಾಫಿ ಬೆಳೆಯುವ ಬಗೆಯನ್ನು ತೀರಾ ಹತ್ತಿರದಿಂದ ಕಂಡಿರುವುದರಿಂದ ಇದರ ಬೇಸಾಯದ ಅರಿವನ್ನು ಆದಷ್ಟು ಹಂಚಿಕೊಳ್ಳುವ ನಿಟ್ಟಿನಲ್ಲಿ ಈ ಸರಣಿ ಬರಹ ಮಾಡುತ್ತಿರುವೆ. ಹಿಂದಿನ ಬರಹಗಳಲ್ಲಿ ಕಾಫಿಯ ಹುಟ್ಟು ಮತ್ತು ಹರವು ಹಾಗು ಅರಾಬಿಕಾ ಮತ್ತು ರೊಬಸ್ಟಾ ಬೆಳೆಗಳ ನಡುವಿನ ಬೇರ‍್ಮೆಯನ್ನು ತಿಳಿದೆವು. ಈ ಬರಹದಲ್ಲಿ ಕಾಫಿಯನ್ನು ಬೆಳೆಯುವ ಮೊದಲ ಹಂತವಾದ ಕಾಫಿ ಗಿಡಮನೆ (Nursery) ಮಾಡುವುದರ ಕುರಿತು ಕೊಂಚ ಅರಿಯೋಣ.

ಬೀಜಗಳ ಆಯ್ಕೆ:
ಕಾಫಿಯ ಮುಂದಿನ ತಲೆಮಾರಿಗೆ ಬೇಕಾದ ಕಾಫಿ ಬೀಜವನ್ನು ಆಯ್ದುಕೊಳ್ಳುವುದು ಒಂದು ಅರಿದಾದ ಕೆಲಸ. ತೋಟದ ನಡುವೆ ಇರುವ ಆರೋಗ್ಯಕರವಾದ, ಒಳ್ಳೆಯ ಇಳುವರಿಯನ್ನು ಕೊಡುತ್ತಿರುವ ಕಾಫಿ ಗಿಡದಿಂದ ತುಂಬಾನೇ ಚೆನ್ನಾಗಿರುವ ಹಣ್ಣುಗಳನ್ನು ಆಯ್ದುಕೊಳ್ಳಬೇಕು. ಹಣ್ಣುಗಳು ದೊಡ್ಡದಿದ್ದಷ್ಟು ಒಳ್ಳೆಯದು. ಮೊದಲೇ ತಿಳಿದಿರುವಂತೆ ನವೆಂಬರ್ ಕೊನೆಯ ವಾರದಿಂದ ಜನವರಿ ಮೊದಲ ವಾರದವರೆಗು ಕಾಫಿ ಹಣ್ಣಿನ ಕಾಲ. ಈ ಹೊತ್ತಿನಲ್ಲಿ, ಗಿಡದಲ್ಲಿರುವ ಕಾಫಿಯು ಚೆನ್ನಾಗಿ ಹಣ್ಣಾದ ಕೂಡಲೇ ಹಣ್ಣುಗಳನ್ನು ಕಿತ್ತುಕೊಂಡಿರಬೇಕು.

ಕಿತ್ತ ಕಾಫಿ ಹಣ್ಣಿನ ಸಿಪ್ಪೆಗಳನ್ನು ಬಿಡಿಸಿ, ಕಾಫಿ ಬೀಜಗಳನ್ನು ಆರಿಸಬೇಕು. ನೆನಪಿರಲಿ, ಒಂದು ಕಾಫಿ ಹಣ್ಣಿನಲ್ಲಿ ಎರೆಡು ಕಾಫಿ ಬೀಜಗಳಿರುತ್ತವೆ. ಒಂದು ವೇಳೆ ಕಾಫಿ ಹಣ್ಣಿನಲ್ಲಿ ಒಂದೇ ಬೀಜವಿದ್ದರೆ ಇಲ್ಲವೇ ಒಂದು ಬೀಜ ದೊಡ್ಡದಾಗಿದ್ದು ಇನ್ನೊಂದು ತುಂಬಾ ಚಿಕ್ಕದಾಗಿದ್ದರೆ ಅಂತಹ ಬೀಜಗಳನ್ನು ಮೊಳಕೆ ಬರಿಸಲು ಆಯ್ದುಕೊಳ್ಳಬಾರದು. ಹೀಗೆ ಸಿಪ್ಪೆ ಬಿಡಿಸಿದ ಬೀಜಗಳ ಮೇಲ್ಮೈನಲ್ಲಿ ಲೋಳೆಯು ಇರುತ್ತದೆ, ಈ ಲೋಳೆಯಿಂದಾಗಿ ಬೀಜಗಳು ಒಂದಕ್ಕೊಂದು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು, ಅಂಟಿಕೊಂಡ ಅವನ್ನು ಬಿಡಿಸಿದಾಗ ಬೀಜಗಳಿಗೆ ಗಾಯವಾಗಿ ಹಾಳಾಗುವ ಸಾದ್ಯತೆ ಹೆಚ್ಚು. ಅದಕ್ಕಾಗಿ ಕೆಲವರು ಕಾಫಿ ಹಣ್ಣನ್ನು ಬಿಡಿಸಿದ ಕೂಡಲೇ ತೊಳೆಯುತ್ತಾರೆ ಇಲ್ಲವೇ ಬೂದಿಯನ್ನು ಬೀಜಗಳಿಗೆ ಹಾಕಿ ಕಲಿಸುತ್ತಾರೆ. ಬೂದಿಯನ್ನು ಬಳಸುವುದರಿಂದ ಇನ್ನೊಂದು ಉಪಕಾರವೆಂದರೆ, ಬೂದಿಯು ಬೀಜದ ಸುತ್ತಲೂ ಅಂಟಿಕೊಳ್ಳುವುದರಿಂದ ಇರುವೆ ಇಲ್ಲವೇ ಮತ್ತಿತರ ಕೀಟಗಳಿಂದ ಬೀಜಗಳನ್ನು ಕಾಪಾಡಿಕೊಳ್ಳಬಹುದು. ಇದೇ ಕೆಲಸ ಮಾಡುವಂತಹ ಯಾವುದಾದರು ಸಾಮಾಗ್ರಿಗಳು ಮಾರುಕಟ್ಟೆಯಲ್ಲಿ ಸಿಕ್ಕರೆ ಅವನ್ನು ಕೂಡ ಬಳಸಬಹುದು. ಬೂದಿಯನ್ನು ಬಳಸುವುದು ಕೊಂಚ ಹಳೆಯ ಪದ್ದತಿ, ಬೂದಿಯನ್ನು ಬೀಜಗಳ ಜೊತೆ ಕಲೆಸುವಾಗ ಬೀಜದ ಮೇಲಿನ ಸಿಪ್ಪೆಗೆ ಗಾಯವಾಗುವ ಸಾದ್ಯತೆಗಳೂ ಇವೆ.

ಹೀಗೆ ಅಣಿಗೊಳಿಸಿದ ಬೀಜಗಳನ್ನು ಬಲೆಯಂತಿರುವ ತಟ್ಟೆಗಳು ಇಲ್ಲವೇ ಗೋಣಿಚೀಲದ ಮೇಲೆ ಹರಡಿ ನೆರಳಿನಲ್ಲಿಟ್ಟು ಎರೆಡರಿಂದ ಮೂರು ದಿನಗಳ ಕಾಲ ಆರಿಸಬೇಕು. ಹರಡಿರುವ ಬೀಜಗಳ ನಡುವೆ ಚೆನ್ನಾಗಿ ಗಾಳಿ ಓಡಾಡುವಂತಿರಬೇಕು. ಬೀಜದಲ್ಲಿರುವ ಪಸೆ (moisture) 10% ಗಿಂತ ಕಡಿಮೆ ಆಗದಂತೆ ಎಚ್ಚರ ವಹಿಸಬೇಕು. ಬಿಸಿಲಿನಲ್ಲಿ ಇಲ್ಲವೇ ಹೆಚ್ಚು ದಿನಗಳ ಕಾಲ ಒಣಗಿಸಿದರೆ ಪಸೆಯು 10% ಗಿಂತ ಕಡಿಮೆಯಾಗಬಹುದು. ಆರಿದ ಬೀಜಗಳಿಂದ ಗಾಯಗೊಂಡ ಇಲ್ಲವೇ ಚೆನ್ನಾಗಿಲ್ಲದ ಬೀಜಗಳನ್ನು ಆರಿಸಿ ತೆಗೆಯಬೇಕು. ಈಗ ನಿಮ್ಮ ಮುಂದಿನ ತಲೆಮಾರಿನ ಕಾಫಿಗಿಡಗಳಿಗೆ ಬೇಕಾದ ಬೀಜಗಳು ಸಿದ್ದವಾದಂತೆ. ಹೀಗೆ ಸಿದ್ದವಾದ ಬೀಜಗಳನ್ನು ಆದಷ್ಟು ಬೇಗ ಮೊಳಕೆಗಾಗಿ ನೆಡಬೇಕು ಇಲ್ಲವಾದರೆ ಮೊಳಕೆ ಬರುವ ಸಾದ್ಯತೆಗಳು ಕಡಿಮೆ. ಬೀಜಗಳನ್ನು ಆದಷ್ಟು ಕಡಿಮೆ ಬಿಸುಪು ಮತ್ತು ಹೆಚ್ಚು ಪಸೆಯಿರುವ ಜಾಗದಲ್ಲಿ ಕಾಪಿಟ್ಟುಕೊಳ್ಳಬೇಕು.

ಮೊಳಕೆಗೆ ಬೀಜ ಬಿತ್ತನೆ:

ಬೀಜಗಳನ್ನು ಮೊಳಕೆಗೆ ಹಾಕುವ ಮೊದಲು ಎಷ್ಟು ಗಿಡಗಳು ತಮಗೆ ಬೇಕಾಗಬಹುದು ಎಂಬ ಲೆಕ್ಕಾಚಾರವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಕೆ.ಜಿ. ಕಾಫಿ ಬೀಜದಲ್ಲಿ ಸುಮಾರು 3000ದಿಂದ 4000 ಬೀಜಗಳು ಸಿಗುತ್ತವೆ. ಇವುಗಳಲ್ಲಿ 75% ನಷ್ಟು ಬೀಜಗಳು ಮೊಳಕೆ ಬರಬಹುದು ಎಂಬ ಲೆಕ್ಕಾಚಾರವಿದೆ. ತಮಗೆ ಎಷ್ಟು ಕಾಫಿಗಿಡಗಳು ಬೇಕಾಗಬಹುದು ಎಂದು ಎಣಿಸಿಕೊಂಡು ಮೊಳಕೆಗೆ ಅಷ್ಟು ಬೀಜಗಳನ್ನು ಅಣಿಗೊಳಿಸಬೇಕು.

ಮೊಳಕೆಗೆ ಹಾಕಲು ಮೊದಲು ಮಣ್ಣಿನ ಹಾಸಿಗೆಯನ್ನು ಅಣಿಮಾಡಬೇಕು. ಮಣ್ಣಿನ ಹಾಸಿಗೆಯು ಸುಮಾರು 1.2 ಮೀಟರ್ ಅಗಲವಾಗಿರಬೇಕು ಮತ್ತು ಸಾಕಷ್ಟು ಉದ್ದ ಅಂದರೆ ಸುಮಾರು 6 ಮೀಟರ್ ನಷ್ಟು ಇರಬೇಕು. ಮಣ್ಣಿನ ಹಾಸಿಗೆಯ ಎತ್ತರ ನೆಲದಿಂದ ಸುಮಾರು 15 ಸೆ.ಮೀ ನಷ್ಟಿರಬೇಕು. ಹಾಸಿಗೆಯಲ್ಲಿರುವ ಮಣ್ಣನ್ನು ಚೆನ್ನಾಗಿ ಅಗೆದು ಸಡಿಲಗೊಳಿಸರಬೇಕು, ಸಾಕಷ್ಟು ಸಾರವಿರುವ ಕಾಡಿನ ಮಣ್ಣನ್ನು ತಂದು ಇದರ ಜೊತೆ ಸೇರಿಸಿದರೆ ಒಳ್ಳೆಯದು. ಬೀಜಗಳಿಗೆ ಬೇಕಾದ ಗೊಬ್ಬರಕ್ಕಾಗಿ ಸಗಣಿ ಗೊಬ್ಬರವನ್ನು ಮಣ್ಣಿನ ಜೊತೆ ಬೆರೆಸಬೇಕು. ಇದರ ಜೊತೆಗೆ ಬೀಜದ ಮೊಳಕೆಗೆ ನೆರವಾಗುವಂತಹ ಪಾಸ್ಪೇಟ್ ಗೊಬ್ಬರ (ಸಾವಯವ ಇಲ್ಲವೇ ರಾಸಾಯನಿಕ ಎಂಬುದು ಬೆಳೆಗಾರರಿಗೆ ಬಿಟ್ಟದ್ದು) ವನ್ನು ಬಳಸಬೇಕು. ಸುಮಾರು 1 ಮೀ. ಉದ್ದದ ಜಾಗಕ್ಕೆ 100 ಗ್ರಾಂ ಪಾಸ್ಪೇಟ್ ಗೊಬ್ಬರ ಬೇಕಾಗುತ್ತದೆ. ಕೇವಲ ಮಣ್ಣು ಮತ್ತು ಗೊಬ್ಬರವನ್ನು ಕಲೆಸಿದಾಗ ಮಣ್ಣೇನಾದರು ಕೊಂಚ ಗಟ್ಟಿಯಾದರೆ ಇಲ್ಲವೇ ಅಂಟು ಅಂಟಾದರೆ ಮರಳನ್ನು ಸೇರಿಸಿ ಕಲೆಸಿದರೆ ಒಳ್ಳೆಯದು ಆಗ ಮಣ್ಣು ಸಡಿಲವಾಗಿ ಮೊಳಕೆ ಬರಲು ನೆರವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಮಣ್ಣಿನ ಹಾಸಿಗೆಯನ್ನು ಮಾಡುವುದಾದರೆ ಒಂದು ಹಾಸಿಗೆಯಿಂದ ಇನ್ನೊಂದರ ನಡುವೆ ಕಡಿಮೆ ಎಂದರೂ 60 ಸೆ.ಮೀ ಜಾಗವಿರಬೇಕು.

ಹೀಗೆ ಆಣಿಗೊಳಿಸಿದ ಮಣ್ಣಿನ ಹಾಸಿಗೆಯ ಮೇಲೆ ಈಗ ಬೀಜಗಳನ್ನು ನೆಡುವ ಕೆಲಸ. ಇದನ್ನು ಈ ಕೆಳಗಿನಂತೆ ಮಾಡಬಹುದು

  1. ಮೊಳಕೆಗೆ ಬೀಜ ನೆಡುವ ಮೊದಲು ಮಣ್ಣಿನ ಹಾಸಿಗೆಗೆ ಚೆನ್ನಾಗಿ ನೀರು ಹಾಕಬೇಕು.
  2. ಒಂದು ಚೂಪಾದ ಕಡ್ದಿಯಿಂದ ಮಣ್ಣಿನ ಹಾಸಿಗೆಯ ಮೇಲೆ 12 ಮಿ.ಮೀ ಆಳದ ಸಾಲುಗುಂಡಿಗಳನ್ನು ಮಾಡಬೇಕು. ಒಂದು ಸಾಲಿನ ಎರೆಡು ಗುಂಡಿಗಳ ನಡುವೆ 25 ಮಿ.ಮೀ ಜಾಗವಿರಬೇಕು.
  3. ಮಣ್ಣಿನ ಹಾಸಿಗೆಯ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸುಮಾರು 100 ಮಿ.ಮೀ ದೂರವಿರಬೇಕು.
  4. ಆರಿಸಿದ ಬೀಜಗಳನ್ನು 12 ಮಿ.ಮೀ ಗುಂಡಿಯೊಳಗೆ ಮೆದುವಾಗಿ ಊರಬೇಕು. ನೆನಪಿರಲಿ, ಬೀಜವು ಹೆಚ್ಚು ಆಳಕ್ಕೆ ಹೋಗಬಾರದು.
  5. ಕಾಫಿ ಬೀಜದ ಆಕಾರದಲ್ಲಿ ಒಂದು ಕಡೆ ಮಟ್ಟವಾಗಿದ್ದು ಇನ್ನೊಂದು ಕಡೆ ಅರೆ ಮೊಟ್ಟೆಯಾಕಾರದಲ್ಲಿರುತ್ತದೆ. ಮಟ್ಟವಾಗಿರುವ ಕಡೆಯನ್ನು ನೆಲಕ್ಕೆ ಮುಖಮಾಡಿ ಬೀಜವನ್ನು ಬಿತ್ತಬೇಕು.
  6. ಮಣ್ಣಿನ ಹಾಸಿಗೆಯಲ್ಲಿರುವ ಪಸೆಯು ಆರದಂತೆ ಮತ್ತು ಬಿಸಿಲಿನಿಂದ ಬಿತ್ತನೆಯನ್ನು ಕಾಪಾಡಲು ಒಣಗಿದ ಹುಲ್ಲು ಇಲ್ಲವೇ ಅಡಿಕೆ ಸೋಗೆಯನ್ನು ಈ ಹಾಸಿಗೆಯ ಮೇಲೆ ತೆಳುವಾಗಿ ಹರಡಬೇಕು. ಹೆಚ್ಚಿನ ಬಿಸಿಲು ಇಲ್ಲವೇ ಮಳೆಯಿದ್ದಲ್ಲಿ ಬಿತ್ತನೆಯನ್ನು ಕಾಪಾಡಲು ಮಣ್ಣಿನ ಹಾಸಿಗೆಯ ಮೇಲೆ ಸುಮಾರು ಒಂದು ಮೀಟರ್ ಎತ್ತರದ ಚಪ್ಪರವನ್ನು ಹಾಕಿ ಪ್ಲಾಸ್ಟಿಕ್ ಇಲ್ಲವೇ ಸೊಪ್ಪಿನಿಂದ ಮುಚ್ಚಬೇಕು. ಆದರೆ ಸಾಕಷ್ಟು ಗಾಳಿ ಒಡಾಡಲು ಜಾಗವಿರಬೇಕು.
  7. ಮಣ್ಣಿನ ಹಾಸಿಗೆಗೆ ಪ್ರತಿ ದಿನ ಬೆಳಗ್ಗೆ ಹಾಗು ಸಂಜೆ ನೀರುಣಿಸಬೇಕು. ನೀರುಣಿಸುವಾಗ ಮಣ್ಣು ಸರಿದು ಬೀಜವು ಮಣ್ಣಿನಿಂದ ಹೊರಗೆ ಬಾರದಂತೆ ಎಚ್ಚರವಹಿಸಬೇಕು.
  8. ಬಿತ್ತನೆಯ ಆರೈಕೆಯ ಮೇಲೆ ನಿಗಾವಹಿಸಬೇಕು. ಬಿತ್ತನೆಗೆ ತೊಂದರೆ ಕೊಡುವಂತಹ ಕೀಟಗಳು, ರೋಗ ತರುವಂತಹ ಗಿಡಗಳು ಮತ್ತು ಕಳೆಗಿಡಗಳನ್ನು ತೆಗೆಯುತ್ತಿರಬೇಕು.

ಬಿತ್ತಿದ ಬೀಜವು ಹೇಗೆ ಮೊಳಕೆ ಒಡೆಯುತ್ತದೆ ಎಂದು ವಿವರವಾಗಿ ನಾವು ‘ಬಿತ್ತಿದ ಬೀಜ ಮೊಳಕೆಯಾದೀತು ಹೇಗೆ?‘ ಬರಹದಲ್ಲಿ ತಿಳಿಯಬಹುದು. ಬಿತ್ತಿದ ನಾಲ್ಕು ವಾರಗಳಲ್ಲಿ ಮೊದಲು ತಾಯಿಬೇರು (Radicle) ಬರುತ್ತದೆ, ಬಳಿಕ ಎರೆಡು ಮೊಳಕೆ ಎಲೆಗಳು (Cotyledon) ಮೂಡುತ್ತವೆ. ಈ ಮೊಳಕೆ ಎಲೆಗಳು ಮೊಟ್ಟೆಯಾಕಾರದಲ್ಲಿ ಇದ್ದು ಸುಮಾರು 20 ರಿಂದ 50 ಮಿ.ಮೀ ಅಡ್ಡಗಲವನ್ನು ಹೊಂದಿರುತ್ತದೆ. ಸುಮಾರು ಐದರಿಂದ ಆರನೇ ವಾರದಲ್ಲಿ ಮೊದಲ ಕುಡಿ ಎಲೆಗಳು (Primary leaves) ಮೂಡುತ್ತವೆ. ಇವು ಮೂಡಿದ ಬಳಿಕ ಮೊಳಕೆ ಎಲೆಗಳು ಉದುರಿ ಬೀಳುತ್ತವೆ. ಈ ಹಂತದಲ್ಲಿ ಕುಡಿ ಎಲೆಗಳು ‘ಬೆಳಕಿನ ಅಡುಗೆ’ (Photosynthesis) ನಡೆಸಿ ಸಾಕಷ್ಟು ಊಟವನ್ನು ಗಿಡಕ್ಕೆ ನೀಡುತ್ತಾ ಹೋಗುತ್ತದೆ. ಆಗ ಗಿಡದ ಬೇರುಗಳು ಬೆಳೆದು ಗಟ್ಟಿಯಾಗುತ್ತಾ ಹೋಗುತ್ತವೆ.

ಮಣ್ಣಿನ ಹಾಸಿಗೆಗೆ ಹರಡಿದ್ದ ಹುಲ್ಲಿನ ಮುಚ್ಚುಗೆಯನ್ನು ಬೀಜವು ಮೊಳಕೆಯೊಡದಂತೆ ಹಂತ ಹಂತವಾಗಿ ತೆಗೆಯುತ್ತಾ ಹೋಗಬೇಕಾಗುತ್ತದೆ. ಆಗ ಎಳೆಯ ಮೊಳಕೆಗೆ ಸಾಕಷ್ಟು ಗಾಳಿ ಮತ್ತು ಬೆಳಕು ಸಿಕ್ಕಿ ಬೆಳವಣಿಗೆಗೆ ನೆರವಾಗುತ್ತದೆ. ಸುಮಾರು 40 ರಿಂದ 50 ದಿನದಲ್ಲಿ ಬೀಜವು ಮೊಳಕೆಯೊಡೆದು 200 – 300 ಮಿ.ಮೀ ಬೆಳೆಯುತ್ತದೆ. ಈಗ ಈ ಮೊಳಕೆಯ ಗಿಡಗಳನ್ನು ಮಣ್ಣಿನ ಹಾಸಿಗೆಯಿಂದ ಪ್ಲಾಸ್ಟಿಕ್ ಬುಟ್ಟಿಗಳಿಗೆ ಸಾಗಿಸಲು ಅಣಿಯಾದಂತೆ. ಪ್ಲಾಸ್ಟಿಕ್ ಬುಟ್ಟಿಗಳಲ್ಲಿ ಗಿಡದ ಎರಡನೇ ಹಂತದ ಬೆಳವಣಿಯನ್ನು ನೋಡಿಕೊಳ್ಳಲಾಗುತ್ತದೆ. ಈ ಎರಡನೇ ಹಂತಹ ಬೆಳವಣಿಗೆಯನ್ನು ಮುಂದಿನ ಬರಹದಲ್ಲಿ ತಿಳಿಯೋಣ.

(ಮಾಹಿತಿ ಮತ್ತು ಚಿತ್ರ ಸೆಲೆ: fao.org)

 

ನೇಸರ ಕಸುವಿನ ಬಾನೋಡ(Solar Impulse)

ಜಯತೀರ್ಥ ನಾಡಗೌಡ.

ಇಂದಿನ ದಿನಗಳಲ್ಲಿ ನೇಸರ ಕಸುವಿನ ಹಲವಾರು ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಳಿದು ಹೋಗದ ನೇಸರನ ಕಸುವು ನಮಗೆ ಸಾಕಷ್ಟು ನೆರವಿಗೆ ಬರುತ್ತಿದೆ. ಇದೀಗ ನೇಸರ ಕಸುವಿನ ಬಾನೋಡವೂ(Aircraft/Aeroplane) ಕೂಡ ಬರಲಿದೆ! ಆಗಸದಿ ಸಾಗುವ ಬಾನೋಡಗಳಿಗೂ ನೇಸರನ ಕಸುವು ನೆರವಿಗೆ ಬರಬಲ್ಲುದು ಎಂದರೆ ಬೆರಗುಗೊಳ್ಳುವ ವಿಷಯವೇ ಸರಿ.

 ಸ್ವಿಟ್ಜರ್ಲ್ಯಾಂಡ್‌ನ ನಾಡಿನ ಕೆಲವು ಅರಕೆಗಾರರು(Scientists) ಮತ್ತು ಬಿಣಿಗೆಯರಿಗರು(Engineers) ಸೇರಿ ಸೋಲಾರ್ ಇಂಪಲ್ಸ್(Solar Impulse) ಹೆಸರಿನ ನೇಸರ ಕಸುವಿನ ಬಾನೋಡದ ಮಾದರಿವೊಂದನ್ನು ಈ ಹಿಂದೆ(2009ರಲ್ಲಿ) ಅಣಿಗೊಳಿಸಿದ್ದರು. ಆದರೆ ಅದರ ಹಾರಾಟ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತು. ನಂತರ ಸೋಲಾರ್ ಇಂಪಲ್ಸ್-2 ಹೆಸರಿನ ಬಾನೋಡ ತಯಾರಿಸಿ ಜಗತ್ತಿನ ಸುತ್ತಾಟ ಮಾಡಿದ್ದಾರೆ. ಇದು ಜಗತ್ತಿನ ಹಲವು ದೇಶಗಳಲ್ಲಿ ಸುತ್ತಾಡಿ ಹಿಂದಿರುಗಿದೆ.

2015ರ ಜನವರಿ ಮೊದಲ ವಾರ ಸೋಲಾರ್ ಇಂಪಲ್ಸ್-2 (Solar Impulse-2) ಬಾನೋಡವನ್ನು ಅಬುಧಾಬಿಯತ್ತ ಸಾಗಿಸಲಾಗಿತ್ತು. ಅದೇ ಮಾರ್ಚ್‌ನಲ್ಲಿ ಅಬುಧಾಬಿ ಯಿಂದ ತನ್ನ ಪಯಣ ಶುರು ಮಾಡಿ ಈ ಬಾನೋಡ 2015ರ ಜುಲೈವರೆಗೆ 5 ತಿಂಗಳು ಜಗತ್ತನ್ನೆಲ್ಲ ಸುತ್ತಿ ಮತ್ತೆ ಅಬುಧಾಬಿಯನ್ನು ತಲುಪಿತ್ತು. ಆ 5 ತಿಂಗಳ ಹೊತ್ತು ಸೋಲಾರ ಇಂಪಲ್ಸ್ -2 ಹಗಲು, ರಾತ್ರಿ 24 ಗಂಟೆಗಳಲ್ಲೂ ಕೇವಲ ನೇಸರನ ಬಲದಿಂದ ಜಗತ್ತಿನ ಸುತ್ತೆಲ್ಲ ಹಾರಾಡಿತ್ತು.ಬೆಳಿಗ್ಗೆ ನೇಸರನ ಕಸುವನ್ನು ಲಿಥಿಯಂ-ಅಯಾನ್ ಮಿಂಕಟ್ಟಿನಲ್ಲಿ (Battery) ಕೂಡಿಟ್ಟು ರಾತ್ರಿ ಇದೇ ಕಸುವಿನ ಹೆಚ್ಚಿನ ಬಳಕೆ ಮಾಡಿಕೊಂಡು ಬಾನೋಡ ಹಾರಲು ನೆರವಾಗುವಂತೆ ಇದನ್ನು ಸಿದ್ದಗೊಳಿಸಲಾಗಿದೆ.

 ಈ ಮೊದಲು ಇದೇ ಬಾನೋಡದ ಮಾದರಿಯೊಂದನ್ನು ಸೋಲಾರ್ ಇಂಪಲ್ಸ್-1 ಹೆಸರಲ್ಲಿ 2009 ರಲ್ಲಿ ಹಾರಾಟಗೊಳಿಸಲಾಗಿತ್ತು. ಇದು ಯುರೋಪ್ ಖಂಡದ ಹಲವೆಡೆ ಹಾರಾಡಿ,ಮೊರ‍್ಯಾಕ್ಕೊವರೆಗೂ ಸತತ 26 ಗಂಟೆ ಪಯಣ ಮಾಡುವಲ್ಲಿ ಗೆಲುವು ಕಂಡಿತ್ತು. ಇದರ ಗೆಲುವಿನ ಬೆನ್ನಲ್ಲೇ ಇದೀಗ ಸೋಲಾರ್ ಇಂಪಲ್ಸ್-2 ಹಾರಾಟ ಎಲ್ಲರ ಗಮನ ತನ್ನತ್ತ ಸೆಳೆದಿತ್ತು.

 ಸೋಲಾರ್ ಇಂಪಲ್ಸ್ ಹಮ್ಮುಗೆ(Project) ಸ್ವಿಸ್ ನಾಡಿನ ಬೆರ್ತ್ರಾಂಡ್ ಪಿಕಾರ್ಡ್ (Bertrand Piccard) ಮತ್ತು ಅಂಡ್ರೆ ಬೊರ್ಶ್‌ಬರ್ಗ್ (Andre Borschberg) ಇವರ ಕನಸಿನ ಕೂಸು. ಪಿಕಾರ್ಡ್ ಈ ಹಿಂದೆ 1999 ರಲ್ಲಿ ಪ್ಯಾರಶೂಟ್ ಬಲೂನ್ ಮೂಲಕ ಜಗತ್ತನ್ನೇ ಸುತ್ತಿ ದಾಖಲೆ ಮಾಡಿದ ಸಾಹಸಿ. ಇವರ ತಂದೆ,ಅಜ್ಜ ಕೂಡ ಇಂತ ಸಾಹಸ ಕೆಲಸದಲ್ಲಿ ತೊಡಗಿದ್ದರಂತೆ. ಅದಕ್ಕೆ ಇರಬಹುದು ಇಂತಹವೊಂದು ಬಾನೋಡದ ಕೆಲಸಕ್ಕೆ ಪಿಕಾರ್ಡ್ ಕೈ ಹಾಕಿದ್ದು.  ಇನ್ನೂ ಅಂಡ್ರೆ,  ಸ್ವಿಸ್ ಏರ್‌ಫೋರ್ಸ್‌ನಲ್ಲಿ ಬಾನಾಡಿಗರಾಗಿ(Pilot) ಕೆಲಸ ಮಾಡುತ್ತಿದ್ದರು, ಕಾದಾಟದ ಬಾನೋಡ(Fighter planes), ಹೆಲಿಕಾಪ್ಟರ್ ಓಡಿಸಿದ ಸಾಕಷ್ಟು ಅನುಭವ ಅಂಡ್ರೆ ಅವರಿಗಿದೆ. 2009 ಕ್ಕಿಂತಲೂ ಮುಂಚಿನಿಂದಲೇ ಇವರಿಬ್ಬರು ಒಟ್ಟಾಗಿ ಈ ಹಮ್ಮುಗೆಯ ಕೆಲಸ ಕೈಗೊಂಡಿದ್ದರು. 

ಗಲ್ಫ್ ಕೊಲ್ಲಿ ನಾಡುಗಳಿಂದ ತನ್ನ ಪಯಣ ಆರಂಭಿಸಿದ್ದ ನೇಸರನ ಬಾನೋಡ ಅರಬ್ಬೀ ಕಡಲದ ಮೂಲಕ ಭಾರತ, ಮಯನ್ಮಾರ್, ಚೀನಾ ದಾಟಿ ಪೆಸಿಫಿಕ್ ಸಾಗರ ಹಾದು ಅಮೇರಿಕಾದತ್ತ ಸಾಗಿ ಅಟ್ಲಾಂಟಿಕ್ ಕಡಲದಿಂದ ತೆಂಕಣ ಯುರೋಪ್, ಬಡಗಣ ಆಫ್ರಿಕಾ ಹಾದು ಮತ್ತೆ ಅಬುಧಾಬಿಗೆ ಬಂದಿಳಿದಿತ್ತು. ಕೊಲ್ಲಿ ನಾಡುಗಳಲ್ಲಿ ವಾತಾವರಣ ಹದವಾಗಿದ್ದು ಮಾರ್ಚ್‌ನಲ್ಲಿ ಬಾನೋಡ ಹಾರಾಟಕ್ಕೆ ಅಬುಧಾಬಿ ತಕ್ಕುದಾಗಿದೆಯೆಂದು ಈ ತಾಣವನ್ನು ಆಯ್ದುಕೊಳ್ಳಲಾಗಿತ್ತಂತೆ.

 ಬಾನೋಡದ ಮಾಡುಗೆ (Design) ಮತ್ತು ಅದರ ವಿಶೇಷತೆಗಳತ್ತ ಒಂದು ನೋಟ ಬೀರಿದಾಗ, ಇದನ್ನು ಪೂರ್ತಿ ಕಾರ್ಬನ್ ನೂಲಿನಿಂದ ಮಾಡಲಾಗಿದ್ದು. ಏರ್ಬಸ್-380 (AirBus-380) ರಷ್ಟು ದೊಡ್ಡದಾದ ರೆಕ್ಕೆಗಳು ಈ ನೇಸರನ ಬಾನೋಡ ಹೊಂದಿರಲಿದೆ. ಸುಮಾರು 2.3 ಟನ್ ತೂಕದ ಬಾನೋಡಕ್ಕೆ , 17.5 ಕುದುರೆಬಲದ(hp) ಎರಡು ಮಿಂಚಿನ ಓಡುಗೆಗಳನ್ನು(Electric Motors) ಅಳವಡಿಸಲಾಗಿದೆ. ಒಟ್ಟು 17, 248 ನೇಸರನ ಗೂಡುಗಳನ್ನು(Solar Cells) ಹೊಂದಿರುವ ಈ ಬಾನಹಕ್ಕಿಗೆ 234 ಪೀಟ್ (ಸುಮಾರು 72 ಮೀಟರ್) ಉದ್ದದ ರೆಕ್ಕೆಗಳನ್ನು ಜೋಡಿಸಲಾಗಿದೆ.

 ಬಾನೋಡದ ಪ್ರಮುಕ ವಿಶೇಷತೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ತೂಕ -2.3 ಟನ್

ಮಿಂಚಿನ ಓಡುಗೆ ಬಲ(Electric Motor Power)- 2*17.5 ಕುದುರೆ ಬಲ

ರೆಕ್ಕೆಯ ಉದ್ದ – 72 ಮೀಟರ್

ಒಟ್ಟು ನೇಸರನ ಗೂಡುಗಳ ಸಂಖ್ಯೆ- 17248 (ಲಿಥಿಯಂ ಅಯಾನ್)

ನೇಸರನ ಗೂಡುಗಳ ದಪ್ಪ -35 ಮೈಕ್ರಾನ್ಸ್

ಒಬ್ಬ ಬಾನಾಡಿಗ ಕೂರಲು ಜಾಗದ ಏರ್ಪಾಟು

ಜಗತ್ತು ಸುತ್ತುವ ಹಾರಾಟ -ಮಾರ್ಚ್ 2015 ರಿಂದ ಜುಲೈ  2015, ಒಟ್ಟು 35000 ಕಿ.ಮೀ.ಗಳು

ಕಾಕ್ಪಿಟ್‌ನ ಗಾತ್ರ: 3.8 ಕ್ಯೂಬಿಕ್ ಮೀಟರ್ಗಳು

ಅಬುಧಾಬಿಯಿಂದ ಹೊರಟು ಒಮಾನ್ ದೇಶದ ಮಸ್ಕಟ್ ಹಾರಿ ಅಲ್ಲಿಂದ ಭಾರತದ ಅಹ್ಮದಾಬಾದ್, ವಾರಣಾಸಿ ಮೂಲಕ ಸಾಗಿ ಮಯನ್ಮಾರ್ ಚೀನಾದ ಚೊಂಗ್‌ಕ್ವಿಂಗ್ ಜಪಾನ್‌ನ ನಗೋಯಾ ಹಾದು ಹವಾಯಿ ದ್ವೀಪಗಳನ್ನು ತಲುಪಿ, ಅಲ್ಲಿಂದ ಮುಂದೆ ಅಮೇರಿಕಾದ ವಿವಿಧ ನಗರಗಳ ಮೂಲಕ ಸಾಗಿ ಈ ಬಾನೋಡ ಸ್ಪೇನ್ ಈಜಿಪ್ಟ್ ನಂತರ ಅಬುದಾಭಿ ತಲುಪಿತ್ತು. ಈ ಬಾನೋಡ ಮುಂಚೆ ನಿರ್ಧರಿಸಿದ್ದ 35,000 ಕಿ.ಮೀ.ಗಳ ಬದಲು ಒಟ್ಟು 42,000 ಕಿ.ಮೀ.ಗಳಿಗಿಂತ ಹೆಚ್ಚಿನ ಹಾರಾಟ ನಡೆಸಿತ್ತು. ಹವಾಮಾನದ ಅಡೆತಡೆಗಳು ಇದರ ಮಾರ್ಗ ಬದಲಾವಣೆಗೆ ಕಾರಣವಾಗಿದ್ದವು.

ನೇಸರನ ಕಸುವು ಪಡೆದು ಲಿಥಿಯಂ-ಅಯಾನ್ ಬ್ಯಾಟರಿಗಳ ಮೂಲಕ ಹಾರಾಟ ಮಾಡಿದ ಮೊದಲ ಬಾನೋಡವಾಗಿ ಸೋಲಾರ್ ಇಂಪಲ್ಸ್ ದೊಡ್ಡ ದಾಖಲೆ ಮಾಡಿತ್ತು. ಇದು ಮುಂದೆ ಬ್ಯಾಟರಿ ಆಧಾರಿತ ಬಾನೋಡಗಳ ವಾಣಿಜ್ಯ ಹಾರಾಟ ಮಾಡಲಿಕ್ಕೆ ನಾಂದಿ ಹಾಡಲಿದೆ ಎನ್ನಲಾಗಿತ್ತು. 2019ರಲ್ಲಿ ಈ ಸೋಲಾರ್ ಇಂಪಲ್ಸ್ ಕಂಪನಿ, ಸ್ಕೈಡ್ವೆಲ್ಲರ್ಸ್(Sky Dwellers) ಎಂಬ ಕಂಪನಿ ಮಾರಾಟ ಮಾಡಲಾಗಿದೆ. ಇದೀಗ ಸಾಕಷ್ಟು ಸಂಶೋಧನೆ ನಡೆಸಿರುವ ಸ್ಕೈಡ್ವೆಲ್ಲರ್ಸ್ ಅರಕೆಗಾರರು, ಇದೇ ವರ್ಷದಲ್ಲಿ(2024) ವಾಣಿಜ್ಯ ಹಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ಅರಾಬಿಕಾ ಮತ್ತು ರೊಬಸ್ಟಾ ಕಾಫಿಗಳ ಬೇರ‍್ಮೆ

ರತೀಶ ರತ್ನಾಕರ.

ಹಿಂದಿನ ಬರಹದಲ್ಲಿ ಕಾಫಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಫಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಭಾಗ ರೊಬಸ್ಟಾವನ್ನು ಬೆಳೆಯುತ್ತಾರೆ. ಹಾಗಾದರೆ ಈ ಅರಾಬಿಕಾ ಹಾಗು ರೊಬಸ್ಟಾ ಕಾಫಿಯ ನಡುವಿನ ಬೇರ‍್ಮೆಗಳೇನು ಎಂಬುದನ್ನು ಈ ಬರಹದಲ್ಲಿ ತಿಳಿಯೋಣ.

ಅರಾಬಿಕಾ ಮತ್ತು ರೊಬಸ್ಟಾ ಕಾಫಿಗಳು ನೋಡುವುದಕ್ಕೆ ಹೆಚ್ಚುಕಡಿಮೆ ಒಂದೇ ರೀತಿಯಲ್ಲಿ ಕಂಡರೂ, ಬೆಳೆಯುವ ಬಗೆ ಮತ್ತು ಅವುಗಳ ಗುಣಗಳಲ್ಲಿ ಹಲವು ಬೇರ‍್ಮೆಗಳನ್ನು ಕಾಣಬಹುದು. ಆ ಗುಣಗಳು ಮತ್ತು ಅದರ ಬೇರ‍್ಮೆಗಳನ್ನು ಈ ಕೆಳಗೆ ನೀಡಲಾಗಿದೆ.

ಕಾಫಿಯ ತಳಿ:

ಅರಾಬಿಕಾ ಕಾಫಿಯೂ ‘ಕಾಫಿಯೇಯ್ ಅರಾಬಿಕಾ‘(Coffea Arabica) ಎಂಬ ತಳಿಯಾಗಿದ್ದು ಈ ತಳಿಯ ಇರುವಿಕೆಯನ್ನು 1753 ರಲ್ಲಿ ಕಂಡು ಹಿಡಿಯಲಾಯಿತು. ಮೊತ್ತ ಮೊದಲನೆಯದಾಗಿ ಬೇಸಾಯ ಮಾಡಿ ಬೆಳೆಯಲು ಆರಂಬಿಸಿದ ತಳಿ ಎಂಬ ಹೆಗ್ಗಳಿಗೆಯನ್ನು ಇದು ಹೊಂದಿದೆ. ಅತಿ ಎತ್ತರದ ಮತ್ತು ಬೆಟ್ಟದ ಸಾಲುಗಳಲ್ಲಿ ಬೆಳೆಯಲು ಸೂಕ್ತವಾಗಿರುವ ಬೆಳೆಯಾದ ಇದು ‘ಬೆಟ್ಟದ ಕಾಫಿ’ ಎಂದು ಹೆಸರುವಾಸಿಯಾಗಿದೆ. ಈ ಕಾಫಿಯಲ್ಲಿರುವ ‘ಕಾಫಿನ್’ (Caffeine) ಅಂಶವು ಕಾಫಿಯ ಉಳಿದ ಎಲ್ಲಾ ತಳಿಗಳಿಗಿಂತ ಕಡಿಮೆಯಿದೆ, ಹಾಗಾಗಿ ಉಳಿದ ಕಾಫಿಯ ತಳಿಗಳಿಗಿಂತ ರುಚಿಕರವಾದ ಕಾಫಿ ಎಂದು ಕೂಡ ಕರೆಸಿಕೊಳ್ಳುತ್ತದೆ.

ರೊಬಸ್ಟಾ ಕಾಫಿಯೂ ‘ಕಾಫಿಯೇಯ್ ಕನೆಪೋರಾ‘ (Coffea Canephora) ಎಂಬ ತಳಿಯಾಗಿದ್ದು ಇದನ್ನು 1895ರಲ್ಲಿ ಕಂಡು ಹಿಡಿಯಲಾಯಿತು. ವ್ಯಾವಹಾರಿಕ ಉದ್ದೇಶಕ್ಕಾಗಿಯೇ ಈ ಕಾಫಿಯ ತಳಿಯನ್ನು ಕಂಡು ಹಿಡಿಯಲಾಗಿದೆ. ಅರಾಬಿಕಾ ಕಾಫಿಗಿಂತ ಹೆಚ್ಚಿನ ಇಳುವರಿಯನ್ನು ರೊಬಸ್ಟಾ ಕಾಫಿಬೆಳೆಯಲ್ಲಿ ಕಾಣಬಹುದು. ಅರಾಬಿಕಾ ಕಾಫಿಯ ಬೆಳೆಗೆ ಹೋಲಿಸಿದರೆ ಇದು ಕೀಟ ಮತ್ತು ರೋಗಕ್ಕೆ ಕೂಡಲೇ ತುತ್ತಾಗುವುದಿಲ್ಲ ಮತ್ತು ಬದಲಾಗುವ ಗಾಳಿಪಾಡಿಗೆ ಹೊಂದಿಕೊಂಡು ಬೆಳೆಯುತ್ತದೆ ಹಾಗಾಗಿ ರೊಬಸ್ಟಾ ಬೆಳೆಯನ್ನು ಅರಾಬಿಕಕ್ಕಿಂತ ಕಡಿಮೆ ಆರೈಕೆ ಕೊಟ್ಟು ಸುಲಭವಾಗಿ ಬೆಳೆಯಬಹುದು.

ಕಾಫಿ ಬೆಳೆಯುವ ಗಾಳಿಪಾಡು:
ಅರಾಬಿಕಾ ಕಾಫಿ ಬೆಳೆಯಲು ವರುಶದ ಬಿಸುಪು 15-24 ಡಿಗ್ರಿ ಸೆಂಟಿಗ್ರೇಡ್ ಮತ್ತು ವರುಶಕ್ಕೆ 1200 – 2200 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ಅರಾಬಿಕಾ ಕಾಫಿ ಬೆಳೆಯುವ ಜಾಗ ಕಡಿಮೆ ಎಂದರೂ 1200 -2200 ಮೀಟರ್ ನಷ್ಟು ಎತ್ತರದಲ್ಲಿರಬೇಕು. ಆದರೆ ಹಿಮ ಬೀಳುವ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ.

ರೊಬಸ್ಟಾ ಕಾಫಿಬೆಳೆಯಲು ವರುಶದ ಬಿಸುಪು 18-35 ಡಿಗ್ರಿಯವರೆಗೆ ಮತ್ತು ವರುಶಕ್ಕೆ ಅರಾಬಿಕಾಕ್ಕಿಂತ ಹೆಚ್ಚಿನ ಮಳೆ ಅಂದರೆ 2200 ರಿಂದ 3000 ಮಿ.ಮೀ ಮಳೆ ಬೀಳುವಂತಿರಬೇಕು. ಕಡಲ ಮಟ್ಟದಿಂದ ತೀರ ಎತ್ತರವಿಲ್ಲದ ಜಾಗದಲ್ಲಿಯೂ ಕೂಡ ಇದನ್ನು ಬೆಳೆಯಬಹುದು. ಇದನ್ನು ಬೆಳೆಯಲು ಕಡಲ ಮಟ್ಟದಿಂದ ಸುಮಾರು 0-800 ಮೀಟರ್ ನಷ್ಟು ಎತ್ತರದಲ್ಲಿರುವ ಜಾಗವಿದ್ದರೂ ಸಾಕು.

ಕಾಫಿ ಬೀಜ ಮತ್ತು ಗಿಡದ ಏರ್ಪಾಟು:

ಅರಾಬಿಕಾ ಕಾಫಿಯೂ ನೆಲದಿಂದ 9-12 ಮೀಟರ್ ನವರೆಗೆ ಬೆಳೆಯುತ್ತವೆ. ಎಲೆಗಳು ಕಂದು ಹಸಿರು ಬಣ್ಣದಲ್ಲಿದ್ದು ಕೊಂಚ ಹೊಳೆಯವಂತಿರುತ್ತವೆ. ಮೊಟ್ಟೆಯಾಕಾರದ ಎಲೆಗಳು ಸುಮಾರು 6-12 ಸೆ.ಮೀ. ಉದ್ದ ಮತ್ತು 4-8 ಸೆ.ಮೀ. ಅಗಲವಿರುತ್ತವೆ. ಅರಾಬಿಕಾ ಕಾಫಿಯ ಹಣ್ಣುಗಳು 10-15 ಮಿ.ಮಿ ಅಡ್ಡಳತೆ ಹೊಂದಿದ್ದು ಎರೆಡು ಬೇಳೆಗಳನ್ನು ಒಳಗೊಂಡಿರುತ್ತದೆ. ಈ ಬೇಳೆಗಳೇ ಕಾಫಿ ಬೀಜಗಳು. ಕಾಫಿ ಬೀಜವು ಉದ್ದ-ಉರುಟಾದ (Elliptical) ಆಕಾರವನ್ನು ಹೊಂದಿರುತ್ತವೆ. ಅರಾಬಿಕಾ ಕಾಫಿಯ ಬೇರುಗಳು ರೊಬಸ್ಟಾಗೆ ಹೋಲಿಸಿದರೆ ಹೆಚ್ಚು ಆಳಕ್ಕೆ ಹರಡಿಕೊಂಡಿರುತ್ತದೆ.      

ರೊಬಸ್ಟಾ ಕಾಫಿಯೂ ಕೂಡ ನೆಲದಿಂದ 10 ಮೀಟರ್ ವರೆಗೆ ಬೆಳೆಯುತ್ತವೆ. ಆದರೆ ಇದರ ಕಾಂಡವು ಅರಾಬಿಕಾಕ್ಕಿಂತ ಹೆಚ್ಚು ದಪ್ಪನಾಗಿದ್ದು ಎಲೆಗಳು ಕೂಡ ದೊಡ್ಡದಾಗಿರುತ್ತವೆ. ಕಾಫಿಬೀಜವು ಉಂಡನೆಯ ಆಕಾರದಲ್ಲಿದ್ದು ಹೆಚ್ಚು ಕಡಿಮೆ ಮೊಟ್ಟೆಯಾಕಾರದಲ್ಲಿರುತ್ತವೆ (Oval).

ಕಾಫಿಗಿಡಗಳು ಹೊರಗಿನ ರೋಗ ಮತ್ತು ಕೀಟಗಳಿಂದ ಕಾಪಾಡಿಕೊಳ್ಳಲು ತಮ್ಮ ಕಾಫಿ ಬೀಜಗಳಲ್ಲಿ ಕೆಫಿನ್ ಮತ್ತು ಕ್ಲೋರೊಜೆನಿಕ್ ಹುಳಿ(Chlorogenic Acid) ಯನ್ನು ಹೊಂದಿರುತ್ತವೆ. ಅರಾಬಿಕಾ ಕಾಫಿ ಬೀಜವು 0.8 – 1.4% ನಷ್ಟು ಕೆಪಿನ್ ಹಾಗು 5.5-8.0% ನಷ್ಟು ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ರೊಬಸ್ಟಾವು ಅರಾಬಿಕಾಕ್ಕಿಂತ ಎರೆಡು ಪಟ್ಟು ಅಂದರೆ 1.7 – 4% ನಷ್ಟು ಕೆಪಿನ್ ಮತ್ತು 7-10% ಕ್ಲೋರೋಜೆನಿಕ್ ಹುಳಿಯನ್ನು ಹೊಂದಿದೆ. ಇದರಿಂದ ರೊಬಸ್ಟಾ ಕಾಫಿಯು ಕೀಟ ಹಾಗು ರೋಗಗಳಿಗೆ ಬೇಗನೆ ತುತ್ತಾಗುವುದಿಲ್ಲ ಮತ್ತು ಅರಾಬಿಕಾಕ್ಕಿಂತ ಗಟ್ಟಿಮುಟ್ಟಾಗಿ ಬೆಳೆಯುತ್ತದೆ.

ಅರಾಬಿಕಾ ಕಾಫಿಯೂ ರೊಬಸ್ಟಾಗಿಂತ ಸರಿಸುಮಾರು 60% ಹೆಚ್ಚು ಸೀರೆಣ್ಣೆ(Lipids) ಯನ್ನು ಮತ್ತು ರೊಬಸ್ಟಾಗಿಂತ ಎರೆಡುಪಟ್ಟು ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದೆ. ಅರಾಬಿಕಾದಲ್ಲಿ 6-9% ಸಕ್ಕರೆ ಅಂಶವಿದ್ದರೆ ರೊಬಸ್ಟಾದಲ್ಲಿ 3-7% ಇದೆ. 15-17% ಸೀರೆಣ್ಣೆ ಅರಾಬಿಕಾ ಬೀಜದಲ್ಲಿ ಇದ್ದರೆ 10-11.5% ರೊಬಸ್ಟಾದಲ್ಲಿದೆ, ಇದರಿಂದಾಗಿ ಅರಾಬಿಕ ಕಾಫಿಯ ಹುಳಿತ (Acidity) ಹೆಚ್ಚಿದೆ. ಸಕ್ಕರೆಯ ಅಂಶ ಕಡಿಮೆಯಿದ್ದು ಕೆಪಿನ್ ಅಂಶ ಹೆಚ್ಚಿರುವುದರಿಂದ ರೊಬಸ್ಟಾ ಕಾಫಿಯು ಹೆಚ್ಚು ಕಹಿಯಾಗಿದೆ.

ಇದಲ್ಲದೇ ಕಾಫಿ ಬೀಜದಲ್ಲಿ ಹಲವು ರಾಸಾಯನಿಕ ಅಂಶಗಳವೆ. ಅವುಗಳಲ್ಲಿ ಕ್ವಿನಿಕ್ (Quinic), ಕ್ಲೋರೋಜೆನಿಕ್ (Chlorogenic), ಸಿಟ್ರಿಕ್ (Citric), ಪಾಸ್ಪರಿಕ್ (Phosphoric) , ಅಸಿಟಿಕ್ (Acetic) ಹುಳಿಗಳು (Acids), ಟ್ರೈಗೊನೆಲೈನ್, ಕೆಪಿನ್, ಸೀರೆಣ್ಣೆ ಮತ್ತು ಕಾರ‍್ಬೋಹೈಡ್ರೇಟ್ಸ್.

ಇದಲ್ಲದೇ, ಈ ಕಾಫಿಯ ತಳಿಗಳ ನಡುವೆ ಮತ್ತಷ್ಟು ಬೇರ‍್ಮೆಗಳಿವೆ ಮೇಲಿನವು ಕೆಲವು ಮುಖ್ಯವಾದವು ಮಾತ್ರ. ಈ ಬೇರ‍್ಮೆಗಳ ಕಾರಣದಿಂದ ಅರಾಬಿಕಾ ಹಾಗು ರೊಬಸ್ಟಾ ಬೆಳೆಗಳ ಬೇಸಾಯದಲ್ಲಿಯೂ ಕೂಡ ಬೇರ‍್ಮೆಗಳನ್ನು ಕಾಣಬಹುದು. ಅರಾಬಿಕಾ ಕಾಫಿಕಾಫಿಯನ್ನು ಹೆಚ್ಚು ನಿಗಾವಹಿಸಿ ಕೀಟ ಹಾಗು ರೋಗಗಳಿಂದ ಕಾಪಾಡಿಕೊಂಡು ಬೆಳೆಯ ಬೇಕಾಗುತ್ತದೆ. ಅಲ್ಲದೇ ಗಾಳಿಪಾಡಿನ ಹೆಚ್ಚುಕಡಿಮೆ ಕೂಡ ಅರಾಬಿಕಾ ಗಿಡವನ್ನು ತೊಂದರೆಗೆ ಈಡು ಮಾಡುತ್ತದೆ. ಇದಕ್ಕೆ ಹೆಚ್ಚಿನ ನೆರಳಿನ ಅವಶ್ಯಕತೆ ಇದೆ. ಆದರೆ ರೊಬಸ್ಟಾ ಬೆಳೆ ಹಾಗಲ್ಲ, ಇದನ್ನು ಬೆಳೆಯುವುದು ಅರಾಬಿಕಾಕ್ಕಿಂತ ಸುಲಭ ಹಾಗು ಹೆಚ್ಚಿನ ನಿಗಾ ವಹಿಸುವ ಅವಶ್ಯಕತೆ ಇರುವುದಿಲ್ಲ.

ಬೇರ‍್ಮೆಗಳು ಏನೇ ಇದ್ದರು ಎರೆಡೂ ಬಗೆಯ ಕಾಫಿಗಳು ತಮ್ಮ ಒಂದಲ್ಲ ಒಂದು ಗುಣಗಳಿಂದ ಹೆಸರುವಾಸಿಯಾಗಿವೆ. ಇವುಗಳನ್ನು ಬೆಳೆಯುವ ಬಗೆಯನ್ನು ಮುಂದಿನ ಬರಹಗಳಲ್ಲಿ ಅರಿಯೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

ಏನಿದು ಓಟಾ ತಂತ್ರಜ್ಞಾನ?

ಜಯತೀರ್ಥ ನಾಡಗೌಡ.

ಓಟಾ(OTA) ಎಂದರೆ ಓವರ್-ದಿ-ಏರ್(Over-the-Air) ಎಂದು ಬಿಡಿಸಿ ಹೇಳಬಹುದು. ಚೂಟಿಯುಲಿ(Smartphone), ಕಂಪ್ಯೂಟರ್, ಸ್ಮಾರ್ಟ್ ಕೈಗಡಿಯಾರ ಮುಂತಾದ ಗ್ಯಾಜೆಟ್ ಬಳಸುವ ಹಲವರು ಈ ಹೆಸರು ಕೇಳಿರುತ್ತೀರಿ. ಬಹುತೇಕ ಚೂಟಿಯುಲಿ, ಕಂಪ್ಯೂಟರ್‌ಗಳ ಬಳಕೆದಾರರಿಗೆ ನವಿರಣಿಗೆ (Software) ಹೊಸದಾಗಿಸಲು ಸಂದೇಶಗಳು ಬಂದಿರುವುದು ಸಹಜ. ಹಲವಾರು ಬಾರಿ ಈ ಸಂದೇಶಗಳನ್ನು ಕ್ಲಿಕ್ಕಿಸಿ ಚೂಟಿಯುಲಿ, ಕಂಪ್ಯೂಟರ್ ನವಿರಣಿಗೆಯನ್ನು ಹೊಸದಾಗಿಸಿಕೊಂಡಿರುತ್ತೆವೆ.ಆದರೆ ಈ ಸಂದೇಶ/ಮುನ್ಸೂಚನೆಗಳು(Notification) ಹೇಗೆ ತಾನಾಗೇ ಬರುತ್ತವೆ? ಇವುಗಳನ್ನು ಯಾರು ಕಳಿಸುತ್ತಾರೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರವೇ ಓವರ್-ದಿ-ಏರ್  ತಂತ್ರಜ್ಞಾನ. 

ತಂತಿಯಿಲ್ಲದ, ವೈಫೈ ಇಲ್ಲವೇ ಸೆಲ್ಯುಲಾರ್ ಸಂಪರ್ಕಗಳ ಮೂಲಕ ಚೂಟಿಯುಲಿ, ಕಂಪ್ಯೂಟರ್,ಸೆಟ್-ಟಾಪ್ ಬಾಕ್ಸ್, ಕಾರುಗಳ ಟೆಲಿಕಮ್ಯುನಿಕೇಶನ್ ಮುಂತಾದ ಎಂಬೆಡೆಡ್(Embedded) ಉಪಕರಣಗಳಿಗೆ ಹೊಸದಿಕೆ(update) ಮಾಡುವ ಏರ್ಪಾಟನ್ನು ಓವರ್-ದಿ-ಏರ್ ಅಪ್ಡೇಟ್ ಚಳಕ ಎನ್ನುತ್ತಾರೆ. ಇದರಲ್ಲಿ ಯಾವುದೇ ತಂತ್ರಜ್ಞರ(Technician) ಅಗತ್ಯವಿರುವುದಿಲ್ಲ.  ಅಗತ್ಯ ಉಪಕರಣಗಳಿಗೆ ನೇರವಾಗಿ ಸಂದೇಶದ ಮೂಲಕ ಈ ಅಪ್ಡೇಟ್‍ಗಳನ್ನು ಕಳುಹಿಸಿಕೊಡಲಾಗುತ್ತದೆ. ಈ ತಂತ್ರಜ್ಞಾನದ ಅಳವಡಿಕೆಯ ಮೊದಲು ತಂತ್ರಜ್ಞರು ನೇರವಾಗಿ ಇಲ್ಲವೇ ನೆರವುದಾಣಗಳಿಗೆ(Service Centre) ಭೇಟಿ ನೀಡಿಯೋ , ಕಂಪ್ಯೂಟರ್, ಚೂಟಿ ಕೈಗಡಿಯಾರ(Smart Watch) ಮುಂತಾದವುಗಳ ನವಿರಣಿಗೆಯನ್ನು ಹೊಸದಾಗಿಸಿಕೊಂಡು ಬರಬೇಕಿತ್ತು. ಓಟಾ ಚಳಕದ ಮೂಲಕ ನಮ್ಮ ಉಪಕರಣಗಳಿಗೆ ನೇರವಾಗಿ ಹೊಸದಾದ ಸಾಫ್ಟ್‌ವೇರ್ ಬಂದಿರುತ್ತದೆ, ನಮಗೆ ಬೇಕೆಂದಾಗ ಹೊಸದಾಗಿಸಿಕೊಳ್ಳುವ ಸೌಲಭ್ಯವನ್ನು ಇದು ಒದಗಿಸಿಕೊಟ್ಟಿದೆ. ಈ ಓಟಾ ಚಳಕ ಕೆಲಸ ಮಾಡುವ ಬಗೆಯನ್ನು ಸುಮಾರು 7-8 ಭಾಗಗಳಾಗಿ ಬಿಡಿಸಬಹುದು. ಇದನ್ನು ವಿವರಿಸಲು ಉದಾಹರಣೆಗಾಗಿ, ಚೂಟಿಯುಲಿಯೊಂದರ ಸಾಫ್ಟ್‌ವೇರ್ ಹೊಸದಾಗಿಸುವಿಕೆ ಹೇಗೆ ನಡೆಯುತ್ತದೆ ಎಂದು ನೋಡೋಣ. 

  1. ಮೊದನೇಯದಾಗಿ, ಉಪಕರಣ ಸಂಪರ್ಕ ಸಾಧಿಸುವುದು. ಮೊಬೈಲ್‌ನ ಸೆಟ್ಟಿಂಗ್ಸ್ ಹೋಗಿ ನಾವು ಸಾಫ್ಟ್‌ವೇರ್ ಅಪ್ಡೇಟ್ ಮೇಲೆ ಬೆರಳು ಒತ್ತಿದಾಗ ಉಪಕರಣವು ಸಂಪರ್ಕ ಸಾಧಿಸಿದಂತೆ. 
  2. ಎರಡನೇ ಹಂತದಲ್ಲಿ ಸಂಪರ್ಕ ಸಾಧನೆ ಮಾಡಿದ ಮೊಬೈಲ್ ಭದ್ರತೆಯ ಧೃಡೀಕರಣಕ್ಕೆ ಒಳಪಡುತ್ತದೆ. ಅಂದರೆ ಸಂಪರ್ಕ ಸಾಧಿಸಿದ ಪೋನ್ ಸಾಫ್ಟ್‌ವೇರ್ ಪಡೆಯಲು ತಕ್ಕುದಾಗಿದೆಯೇ ಎಂಬ ಪರೀಕ್ಷೆಗೊಳಪಡುತ್ತದೆ. ಅನಧಿಕೃತ ಪೋನ್‌ಗಳು ಸಂಪರ್ಕ ಸಾಧಿಸದಂತೆ ಇದು ತಡೆಯುತ್ತದೆ.
  3. ಮೂರನೇ ಹಂತವನ್ನು ಡೇಟಾ ಸಾಗಣೆಯ ಮಿಂಕಟ್ಟಲೆಯ ಆಯ್ಕೆಯ(Selection of Data Transmission Protocol) ಹಂತವೆಂದು ಕರೆಯುತ್ತಾರೆ. ಸರ್ವರ್‌ನಿಂದ ಯಾವ ಮಿಂಕಟ್ಟಲೆ(Protocol) ಮೂಲಕ ಹೊಸದಾದ ಡೇಟಾ ಕಳುಹಿಸಬೇಕೆಂಬುದು ನಿರ್ಧಾರವಾಗುತ್ತದೆ. ಮೊಬೈಲ್ ಫೋನ್ ವೈಫೈ ಮೂಲಕವೋ, ಒಂದು ವೇಳೆ ಮೊಬೈಲ್ ವೈಫೈ ಸಂಪರ್ಕದಲ್ಲಿರದಿದ್ದರೆ ಸೆಲ್ಯುಲಾರ್ ನೆಟ್‌ವರ್ಕ್ ಮೂಲಕ ಕಳುಹಿಸಬೇಕೆಂದು ನಿರ್ಧಾರವಾಗುತ್ತದೆ. IoT ಮೂಲಕ ಬೆಸೆದುಕೊಂಡಿರುವ ಕೆಲವು ಉಪಕರಣಗಳಾದ ಟಿವಿ, ಸೆಟ್-ಟಾಪ್-ಬಾಕ್ಸ್, ವಾಶಿಂಗ್ ಮಶೀನ್‌ಗಳಿಗೆ low-power protocol ಗಳಾದ MQTT, CoAP ಮೂಲಕ ಸರ್ವರ್‌ಗಳಿಂದ ಡೇಟಾ ಸಾಗಣೆ ಮಾಡಲಾಗುತ್ತದೆ.
  4. ಈ ಹಂತದಲ್ಲಿ ಸಾಗಿಸಲ್ಪಟ್ಟ ಹೊಸದಾದ ಸಾಫ್ಟ್‌ವೇರ್ ಮೊಬೈಲ್ ಸಾಧನಕ್ಕಿಳಿಸಿಕೊಳ್ಳುವ(Download) ಕೆಲಸ ನಡೆಯುತ್ತದೆ.
  5. 5ನೇ ಹಂತದಲ್ಲಿ ಡೇಟಾ, ಪ್ಯಾಕೆಟ್‌ಗಳಲ್ಲಿ ಬಂದು ಮೊಬೈಲ್ ಸಾಧನದಲ್ಲಿರುತ್ತದೆ. ವಿವಿಧ ಪ್ಯಾಕೆಟ್ ಗಳ ರೂಪದಲ್ಲಿ ಬಂದು ಸೇರಿದ ಈ ಡೇಟಾವನ್ನು ಮೊಬೈಲ್ ಫೋನ್ ಒಟ್ಟುಗೂಡಿಸುತ್ತದೆ.
  6. 6ನೇ ಹಂತದಲ್ಲಿ ಸರಿಯಾದ, ಭದ್ರವಾದ ಡೇಟಾವನ್ನು ಮೊಬೈಲ್‌ಗೆ ಅಳವಡಿಸಲಾಗುತ್ತದೆ(Installation). 
  7. ಕೊನೆಯ ಹಂತ: ಕೊನೆಯದಾಗಿ, ಬಂದ ಡೇಟಾವನ್ನು ಸರಿಯಾಗಿ ಅಳವಡಿಸಲಾಗಿದೆಯೆಂದು ಮೊಬೈಲ್ ಸಾಧನ ಸರ್ವರ್‌ಗೆ ತಲುಪೊಪ್ಪಿಗೆಯನ್ನು(Acknowledgement) ಕಳುಹಿಸುವದರೊಂದಿಗೆ ಓಟಾದ ಕೆಲಸ ಮುಗಿಯುತ್ತದೆ.

ಪ್ರತಿಹಂತದಲ್ಲೂ ಸರ್ವರ್‌ನಿಂದ ಮೊಬೈಲ್‌ಗೆ ಸರಿಯಾದ, ಭದ್ರವಾದ ಮತ್ತು ಅಳುವುಳ್ಳ(Efficient) ಮಾಹಿತಿ ಸಾಗಣೆಯಾಗುವುದನ್ನು ಸಾಗಣೆ ನಿರ್ವಹಣಾ ಮಿಂಕಟ್ಟಲೆ(Transmission Control Protocol) ನೋಡಿಕೊಳ್ಳುತ್ತದೆ.

ಓಟಾ, ಹಲವಾರು ಬೇರೆ ಹೆಸರುಗಳಿಂದಲೂ ಕರೆಯಲ್ಪಡುತ್ತದೆ. ಅವುಗಳು ಹೀಗಿವೆ:

ಫೋಟಾ- ಫರ್ಮ್‌ವೇರ್ ಓವರ್-ದಿ-ಏರ್ Firmware-over-the-air (FOTA) 

ಸೋಟಾ- ಸಾಫ್ಟ್‌ವೇರ್ ಓವರ್-ದಿ-ಏರ್ Software over-the-air (SOTA) 

ಓಟಾಪ್- ಓವರ್-ದಿ-ಏರ್ ಪ್ರೊವಿಸಿನಿಂಗ್ Over-the-air provisioning (OTAP) 

ಓಟಾಸ್ಪ್- ಓವರ್-ದಿ-ಏರ್ ಸರ್ವೀಸ್ ಪ್ರೊವಿಸಿನಿಂಗ್ Over-the-air service provisioning (OTASP) 

ಓಟಾಪಾ- ಓವರ್-ದಿ-ಏರ್ ಪ್ಯಾರಮೀಟರ್ ಅಡ್ಮಿನಿಸ್ಟ್ರೇಶನ್- Over-the-air parameter administration (OTAPA).

 

ಓಟಾ ತಂತ್ರಜ್ಞಾನದ ಪ್ರಮುಖ ಅನುಕೂಲಗಳು ಹೀಗಿವೆ:

1.ಸರಿಯಾದ, ಭದ್ರವಾದ ಮಾಹಿತಿಯ ಸಾಗಣೆ.

2.ಯಾವುದೇ ತಂತ್ರಜ್ಞರ ನೆರವು ಬೇಕಾಗಿಲ್ಲ. ಮೊಬೈಲ್, ಕಾರು, ಟಿವಿ ಆಯಾ ಉಪಕರಣಗಳ ಮಾಲೀಕರೇ ನೇರವಾಗಿ ಡೇಟಾ ಪಡೆದು ಅಪ್ಡೇಟ್ ಮಾಡಿಕೊಳ್ಳಬಹುದು.

3.ನೆರವುದಾಣ, ರಿಪೇರಿ ಅಂಗಡಿಗಳಿಗೆ ಹೋಗಬೇಕಾಗಿಲ್ಲ. ಸಮಯ ಮತ್ತು ಹಣದ ಉಳಿತಾಯ.

4.ಬೇಕೆಂದಾಗ,ಬೇಕಾದ ಸಮಯದಲ್ಲಿ ಅಪ್ಡೇಟ್ ಮಾಡಿಕೊಳ್ಳುವ ಸವಲತ್ತು.

 

ಕಾಫಿ ಬೆಳೆ: ಹುಟ್ಟು ಮತ್ತು ಹರವು

ರತೀಶ ರತ್ನಾಕರ.

 

ಹೀಗೊಂದು ಹಳೆಯ ಕತೆ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆಫ್ರಿಕಾದ ಇತಿಯೋಪಿಯಾದ ಕಾಡುಗಳಲ್ಲಿ ಹಲವು ಬುಡಕಟ್ಟು ಜನಾಂಗಗಳು ಬದುಕು ನಡೆಸುತಿದ್ದವು. ಅವರು ಕುರಿ, ಕೋಳಿಯಂತಹ ಸಾಕುಪ್ರಾಣಿಗಳನ್ನೂ ಸಾಕಿಕೊಂಡಿದ್ದರು. ಇವರಲ್ಲಿ ಕಾಲ್ಡಿ ಎಂಬಾತನೊಬ್ಬ ಹಲವು ಕುರಿಗಳನ್ನು ಸಾಕಿದ್ದ. ಒಂದು ದಿನ ಆತನ ಕುರಿಗಳು ಕಾಡಿನ ನಡುವೆ ಸಿಕ್ಕ ಒಂದು ಬಗೆಯ ಹಣ್ಣನ್ನು ತಿಂದೊಡನೆ ಕುಣಿದು ಕುಪ್ಪಳಿಸ ತೊಡಗಿದವು. ಹಣ್ಣಿನಲ್ಲಿರುವ ಯಾವುದೋ ಒಂದು ಅಂಶ ಕುರಿಗಳಿಗೆ ನಲಿವನ್ನು ತರುತ್ತಿದೆ ಎಂದು ಅರಿತು ಕಾಲ್ಡಿಯೂ ಆ ಹಣ್ಣನ್ನು ತಿಂದು ನೋಡಿದ. ಒಂದು ಬಗೆಯ ರುಚಿಯ ಜೊತೆಗೆ ಮನಸ್ಸಿಗೆ ಉಲ್ಲಾಸ ನೀಡಿದ ಆ ಹಣ್ಣನ್ನು ತನ್ನವರಿಗೂ ಪರಿಚಯಿಸಿದ.

ಉಲ್ಲಾಸ ನೀಡುವಂತಹ ಆ ಹಣ್ಣನ್ನು ಆಫ್ರಿಕಾದ ಬುಡಕಟ್ಟಿನವರು ಮೊದಲು ಹಾಗೆಯೇ ತಿನ್ನುತ್ತ ಬಳಿಕ ತಮ್ಮ ಊಟದ ಜೊತೆ ತಿನ್ನತೊಡಗಿದರು. ಹೀಗೆ ಮನುಷ್ಯನ ಊಟದ ಪಾಲಿನಲ್ಲಿ ಸೇರಿಕೊಂಡ ಆ ಹಣ್ಣು ಮುಂದೆ ಹಲವಾರು ಬಗೆಯಲ್ಲಿ ಮಾರ್ಪಾಟುಗೊಂಡು ಬೆಳಗ್ಗೆ ಎದ್ದಾಗ ಇಲ್ಲವೇ ಸಂಜೆಯ ಹೊತ್ತಿಗೆ ಕುಡಿಯುವ ಕಾಫಿಯಾಗಿ ನಮ್ಮ ಬದುಕಿನ ಭಾಗವಾಗಿ ಹೋಗಿದೆ. ಕಾಲ್ಡಿಯು ಮೊತ್ತ ಮೊದಲ ಬಾರಿಗೆ ತನ್ನ ಕುರಿಗಳ ನೆರವಿನಿಂದ ಆ ಹಣ್ಣನ್ನು ತಿಂದ ಜಾಗದ ಹೆಸರು ‘ಕಪ’ ಎಂದು. ‘ಕಪ’ ಎಂಬ ಜಾಗದಲ್ಲಿ ದೊರೆತ ಹಣ್ಣು ಕಾಫಿಯಾಗಿ ಈಗ ನಮ್ಮ ನಡುವೆ ಹೆಸರುವಾಸಿಯಾಗಿದೆ.

ಹೌದು, ನಾವು ತಿನ್ನುವ ಹಾಗು ಕುಡಿಯುವ ವಸ್ತುಗಳ ಹಿಂದೆ ಸಾಕಷ್ಟು ಹಳಮೆ ಹಾಗು ಅರಿಮೆಯಿದೆ. ಕಾಫಿಯ ಹಳಮೆ ಮೇಲೆ ಹೇಳಿದ ಕತೆಯಿಂದ ಮೊದಲಾಗುತ್ತದೆ, ಈ ಹಳಮೆಯ ಜೊತೆ ನಾವು ಅರಿಯಬೇಕಾದ ಕಾಫಿಯ ಅರಿಮೆ ಕೂಡ ಸಾಕಷ್ಟಿದೆ. ಕಾಫಿಯ ಅರಿಮೆಯ ಮೇಲೆ ಕೊಂಚವಾದರು ಬೆಳಕು ಚೆಲ್ಲಬೇಕೆಂದು ಈ ಸರಣಿ ಬರಹ.

ಜಗತ್ತಿನ ಕಾಫಿ ಬೆಳೆಯುವ ನಾಡುಗಳಲ್ಲಿ ಇಂಡಿಯಾವು ಆರನೇ ಜಾಗದಲ್ಲಿದೆ. ಇಂಡಿಯಾದ ಕಾಫಿ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕಕ್ಕೇ ಮೊದಲ ಜಾಗ. ಇಂಡಿಯಾದಲ್ಲಿ ಬೆಳೆಯುವ ಕಾಫಿಯಲ್ಲಿ 71% ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಹಾಗು ಕೊಡಗು ಕಾಫಿ ಬೆಳೆಯುವ ಮುಖ್ಯ ಜಿಲ್ಲೆಗಳು. ಬೇರೆ ಬೇರೆ ರಾಜ್ಯಗಳಲ್ಲಿಕಾಫಿಯನ್ನು ಬೆಳೆಯುವ ಜಾಗದ ಮಾಹಿತಿಯನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ.

ಕರ್ನಾಟಕದಲ್ಲಿ ಬೆಳೆಯುವ ಕಾಫಿಯನ್ನು ನೆರಳಿನ ಜಾಗದಲ್ಲಿ ಬೆಳೆಯುವ ಜಗತ್ತಿನ ರುಚಿಕರವಾದ ಕಾಫಿ ಎಂದು ಗುರುತಿಸಲಾಗಿದೆ. ಜಗತ್ತಿನ ಬೇರೆ ಬೇರೆ ಕಡೆ ನೇಸರನ ಬಿಸಿಲಿಗೆ ನೇರವಾಗಿ ಗಿಡವನ್ನು ಬೆಳೆಸಿ ಕಾಫಿಯನ್ನು ಬೆಳೆಯಲಾಗುತ್ತದೆ. ಕರ್ನಾಟಕದ ಬೆಟ್ಟದ ಸಾಲುಗಳಲ್ಲಿ ಹಲವು ಬಗೆಯ ಮರದ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗ್ಗೆ:
ಕಾಫಿಯು ಗಿಡ ಇಲ್ಲವೇ ಚಿಕ್ಕ ಮರದ ರೂಪದಲ್ಲಿ ಬೆಳೆಯುತ್ತದೆ. ಕಾಫಿಯೇಯ್ (coffeeae) ಎಂಬ ಗಿಡಗಳ ಬುಡಕಟ್ಟು ಮತ್ತು ರುಬಿಯೇಸಿಯಯ್ (Rubiaceae) ಎಂಬ ಕುಟುಂಬಕ್ಕೆ ಈ ತಳಿಯು ಸೇರುತ್ತದೆ. ಕಾಫಿ ಗಿಡವು ಸುಮಾರು 14 ರಿಂದ 15 ಅಡಿಗಳ ವರೆಗೆ ಬೆಳೆಯುತ್ತದೆ. ದಪ್ಪನಾದ ಹಾಗು ಉದ್ದನೆಯ ಒಂದು ಕಾಂಡ ನೆಲದಿಂದ ಹೊರಬಂದು, ಬಳಿಕ ಮೂರು ಹಂತದಲ್ಲಿ ರಕ್ಕೆಗಳು ಕವಲೊಡೆದು, ಒಂದು ದೊಡ್ಡದಾದ ಪೊದೆಯ ಗಿಡದಂತೆ ಕಾಫಿ ಗಿಡವು ಕಾಣುತ್ತದೆ. ಕೊಂಚ ಹೊಳೆಯುವ, ಕೊಂಚ ಮೇಣದ ಪದರ ಮತ್ತು ಕಂದು ಹಸಿರುಬಣ್ಣವನ್ನು ಕಾಫಿಗಿಡದ ಎಲೆಯು ಹೊಂದಿರುತ್ತದೆ. ಕಾಫಿಗಿಡದ ಎಲೆಗಳು ಸುಮಾರು 7 ರಿಂದ 8 ಇಂಚಿನವರೆಗೂ ಉದ್ದವಾಗಿರುತ್ತವೆ.

ಕಾಫಿ ಗಿಡದ ಬೇರುಗಳು ಮುಖ್ಯವಾಗಿ ಮೂರು ಬಗೆಯವು. ಬದಿಯ ಬೇರು (Lateral Roots), ನಲ್ಲಿ ಬೇರು (Tap Roots) ಮತ್ತು ಮೇವಿನ ಬೇರು (Feeder roots). ಬದಿಯ ಬೇರುಗಳು ಗಿಡದಿಂದ ಸುಮಾರು 2 ಮೀಟರ್ಗಳವರೆಗೂ ಹರಡಿಕೊಳ್ಳಬಲ್ಲವು. ನಲ್ಲಿ ಬೇರುಗಳು ನೆಲದ ಅಡಿಗೆ ಸುಮಾರು 1 ರಿಂದ 1.5 ಅಡಿಗಳಷ್ಟು ಬೆಳೆಯಬಲ್ಲವು. ಮೇವಿನ ಬೇರುಗಳು ನೆಲದಿಂದ ಕೇವಲ 20 ಸೆ.ಮೀ. ನಷ್ಟು ಕೆಳಗೆ ಇರುತ್ತವೆ ಆದರೆ ಇವು ಗಿಡದ ಬುಡದಿಂದ ಸುಮಾರು 60-90 ಸೆ.ಮೀ. ದೂರದಿಂದ ಹರಡಿಕೊಂಡಿರುತ್ತವೆ. ಒಟ್ಟಿನಲ್ಲಿ ಗಿಡದ ಬುಡದಿಂದ 30 ರಿಂದ 60 ಸೆ. ಮೀ. ನಷ್ಟು ಆಳಕ್ಕೆ ಸಾಕಷ್ಟು ಕಾಫಿಗಿಡದ ಬೇರುಗಳನ್ನು ಕಾಣಬಹುದು. ಒಂದು ಕಾಫಿ ಗಿಡದ ಬೇರು ಸುಮಾರು 500 ಚದರ ಮೀಟರಿನಷ್ಟು ನೆಲದ ಜಾಗದಿಂದ ನೀರು ಮತ್ತು ಆರಯ್ಕೆಯನ್ನು ಹೀರಿಕೊಳ್ಳಬಲ್ಲವು. ಗಟ್ಟಿಯಾದ ಮತ್ತು ದಪ್ಪನಾಗಿರುವ ಕಾಫಿ ಗಿಡದ ಬೇರು ಬೆಳೆಯಲು ನೈಟ್ರೋಜನ್, ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ನ ಅವಶ್ಯಕತೆ ತೀರಾ ಇದೆ, ಅವನ್ನು ಹೀರಿಕೊಳ್ಳಲು ನೆರವಾಗುವಂತಹ ಬೇರಿನ ರೂಪು ರೇಶೆಯನ್ನು ಕಾಫಿ ಗಿಡವು ಹೊಂದಿದೆ.

ಕಾಫಿ ಬೆಳೆಯಲು ಬೇಕಾದ ಗಾಳಿಪಾಡು:
ಕಾಫಿಯ ಬೆಳವಣಿಗೆಗೆ ಸುಮಾರು 15 -28 ಡಿಗ್ರಿ ಸೆಲ್ಶಿಯಸ್ ಬಿಸುಪು ವರುಶವಿಡಿ ಇದ್ದರೆ ಒಳಿತು. ಕೊರೆಯುವ ಚಳಿಯಿದ್ದು, ಹಿಮ ಬೀಳುವಂತಹ ಜಾಗಗಳಲ್ಲಿ ಕಾಫಿಯ ಬೆಳವಣಿಗೆ ಸಾಧ್ಯವಿಲ್ಲ . ಹಾಗೆಯೇ ವರುಶಕ್ಕೆ 60-80 ಇಂಚು ಮಳೆ ಬೀಳಬೇಕು, ಜೊತೆಗೆ ಎರೆಡರಿಂದ ಮೂರು ತಿಂಗಳುಗಳ ಕಾಲ ಅತಿ ಕಡಿಮೆ ಮಳೆಯಿದ್ದು ಬಿಸಿಲು ಸಿಗುವಂತಿರಬೇಕು. ಮಳೆ ಇಲ್ಲವೇ ಚಳಿಯಿಂದ ಕಾಫಿಯ ಗಿಡಕ್ಕೆ ತಂಪು ಹೆಚ್ಚಾದರೆ ಅದರ ಬೆಳವಣಿಗೆಗೆ ಪೆಟ್ಟು ನೀಡಿದಂತೆ, ಹಾಗಾಗಿ ಮಳೆ ಬಿದ್ದೊಡನೆ ಅದರ ನೀರು ಹರಿದು ಹೋಗುವಂತೆ ಮತ್ತು ಗಾಳಿಯು ಚೆನ್ನಾಗಿ ಹರಿದಾಡುವಂತೆ ಇರುವ ಇಳಿಜಾರಿನ ಜಾಗಗಳಲ್ಲಿ ಕಾಫಿಯನ್ನು ಬೆಳಯಲಾಗುತ್ತದೆ. ನೀರು ಹರಿದುಕೊಂಡು ಹೋಗುವಂತಹ ಮತ್ತು ಗಾಳಿಗೆ ಸುಳಿದಾಡಲು ಜಾಗ ಕೊಡುವಂತಹ ಬೆಟ್ಟ-ಗುಡ್ಡದ ಜಾಗವು ಒಳ್ಳೆಯದಾಗಿರುತ್ತದೆ.

ಕಾಫಿ ಬೆಳೆಯಲು ಬೇಕಾಗಿರುವ ಮಣ್ಣಿನಲ್ಲಿ ಸಾವಯವ ಅಂಶಗಳು ಹೆಚ್ಚಿರಬೇಕು ಮತ್ತು ಕೊಂಚ ಹುಳಿಯಾಗಿರಬೇಕು, ಅಂದರೆ ಮಣ್ಣಿನ ಹುಳಿಯಳತೆ (pH) 6.0 – 6.5 ಇರಬೇಕು. ಈ ಎಲ್ಲಾ ಗಾಳಿಪಾಡುಗಳು ಸಿಗಬೇಕೆಂದರೆ ಕಡಲಿನಿಂದ 1000 – 1500 ಮೀಟರ್ ನಷ್ಟು ಎತ್ತರದಲ್ಲಿರುವ ಬೆಟ್ಟ-ಗುಡ್ಡದ ಜಾಗಗಳನ್ನು ಕಾಫಿ ಬೆಳೆಯಲು ಆಯ್ಕೆ ಮಾಡಬೇಕಾಗುತ್ತದೆ. ಕರ್ನಾಟಕದ ಚಿಕ್ಕಮಗಳೂರು, ಹಾಸನ ಮತ್ತು ಕೊಡಗಿನಲ್ಲಿರುವ ಬೆಟ್ಟಗುಡ್ಡದ ಜಾಗಗಳು ಈ ಗಾಳಿಪಾಡನ್ನು ಹೊಂದಿದ್ದು ಕಾಫಿ ಬೆಳೆಯಲು ಸೂಕ್ತವಾಗಿವೆ.

ಕರ್ನಾಟಕದಲ್ಲಿ ಕಾಫಿಯ ಜೊತೆ ಕಾಳುಮೆಣಸು, ಶುಂಟಿ, ಅಡಿಕೆ, ಚಕ್ಕೆ ಹೀಗೆ ಕೆಲವು ಬೆಳೆಗಳನ್ನು ಒಟ್ಟೊಟ್ಟಿಗೆ ಬೆಳೆಯಲಾಗುತ್ತದೆ. ಮೊದಲೇ ತಿಳಿಸಿದಂತೆ ಕಾಡುಮರಗಳ ಜೊತೆಗೆ ಸಿಲ್ವರ್ ಇಲ್ಲವೇ ಇತರೆ ಮರಮಟ್ಟುಗಳಿಗೆ ನೆರವಾಗುವ ಮರಗಳ ಜೊತೆ ನೆರಳಿನಲ್ಲಿ ಬೆಳೆಯಲಾಗುತ್ತದೆ.

ಕಾಫಿ ಗಿಡದ ಬಗೆಗಳು:
ಕುಡಿಯುವ ಕಾಫಿಯಲ್ಲಿ ನಾವು ಹಲವಾರು ಬಗೆಗಳನ್ನು ಕಾಣುತ್ತೇವೆ ಹಾಗೆಯೇ ಕಾಫಿಯ ಗಿಡಗಳಲ್ಲಿಯೂ ಹಲವಾರು ಬಗೆಗಳಿವೆ, ಅವುಗಳಲ್ಲಿ ಕೆಲವೆಂದರೆ ಲಿಬೆರಿಕಾ (Liberica), ಗ್ರಾಸ್ ಇಂಡೆಂಟೆ (Gros Indente), ಎಕ್ಸೆಲ್ಸ (Excelsa), ಕುಯ್ಲೂ (Kouilou), ಪೆಟಿಟ್ ಇಂಡೇನಿಜೆ (Petit Indénizé), ಅರಾಬಿಕಾ ಮತ್ತು ರೊಬಸ್ಟಾ. ಇವುಗಳಲ್ಲಿ ಅರಾಬಿಕಾವನ್ನು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ನೂರಕ್ಕೆ 75% ನಷ್ಟು ಬೆಳೆಯಲಾಗುತ್ತದೆ ಅದನ್ನು ಬಿಟ್ಟರೆ ರೊಬಸ್ಟಾ ಎರಡನೆಯ ಜಾಗವನ್ನು ತೆಗೆದುಕೊಳ್ಳುತ್ತದೆ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ರೊಬಸ್ಟಾವನ್ನು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಬೆಳೆಯುವ ಒಟ್ಟು ಕಾಫಿಯಲ್ಲಿ 67.3% ರೊಬಸ್ಟಾ ಮತ್ತು ಉಳಿದ 32.7% ಅರಾಬಿಕ ಬೆಳೆಯಲಾಗುತ್ತದೆ.

ಹಾಗದರೆ ಅರಾಬಿಕಾ ಮತ್ತು ರೊಬಸ್ಟಾ ನಡುವಿನ ವ್ಯತ್ಯಾಸವೇನು?ಕಾಫಿಯನ್ನು ಮೊಳಕೆ ಬರಿಸುವುದರಿಂದ ಹಿಡಿದು ಹಣ್ಣು ಕುಯ್ಯುವುದರವರೆಗೂ ಇರುವ ಹಂತಗಳಾವವು? ಕುಡಿಯುವ ಕಾಫಿಯಲ್ಲಿ ಹಲವು ಬಗೆಗಳಿವೆ, ಅವುಗಳ ನಡುವಿನ ವ್ಯತ್ಯಾಸವೇನು? ಕಾಫಿಯ ಕುರಿತು ಮತ್ತೇನಾದರು ಸೋಜಿಗದ ಸುದ್ದಿಗಳು ಇದೆಯೇ? ಹೀಗೆ ಹಲವಾರು ಪ್ರಶ್ನೆಗಳು ನಮ್ಮಲ್ಲಿ ಮೂಡುತ್ತವೆ. ಬನ್ನಿ, ಮುಂದಿನ ಬರಹಗಳಲ್ಲಿ ಈ ಮೇಲಿನ ಕೇಳ್ವಿಗಳಿಗೆ ಹೇಳ್ವಿಗಳನ್ನು ಹುಡುಕೋಣ.

(ಮಾಹಿತಿ ಸೆಲೆ: fao.orgwikipediacoffeeresearch.org)

(ಚಿತ್ರ ಸೆಲೆ: Wikimediagktodaycoffeeplanet.nl)

 

ಎಲೆಕ್ರ್ಟಾನ್ ಲೋಕಕ್ಕೆ ಅಟ್ಟೋಸೆಕೆಂಡ್ ಕೀಲಿಕೈ

– ಇ.ದೀಪಕ್ ಡಿಸಿಲ್ವ.

2023, ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಿಯರೆ ಅಗೋಸ್ಟಿನಿ(Pierre Agostini), ಫೆರೆಂಕ್ ಕ್ರೌಸ್ಜ್(Ferenc Krausz) ಮತ್ತು ಆನ್ನೆ ಎಲ್’ಹುಲ್ಲಿಯರ್ (Anne L’Huillier) ಅವರಿಗೆ ಘೋಷಿಸಲಾಗಿದೆ. ಇದು ಅತ್ಯಂತ ಅಪೇಕ್ಷಿತ ಘೋಷಣೆ. ಈ ಮೂವರ ಸಂಶೋಧನೆಯ ಫಲಶ್ರುತಿಯಾಗಿ ಇನ್ನು ಮುಂದೆ ಪರಮಾಣುಗಳಲ್ಲಿ ನ್ಯೂಕ್ಲಿಯಸ್ ಸುತ್ತ ಪರಿಭ್ರಮಿಸುತ್ತಿರುವ ಸೂಕ್ಷ್ಮಾತಿ ಸೂಕ್ಷ್ಮ  ಎಲೆಕ್ಟ್ರಾನುಗಳ ಅಮಿತ ವೇಗದ ಚಲನೆಯನ್ನು ಅನುಸರಿಸಲು ಹಾಗು ಪತ್ತೆಹಚ್ಚಲು ಸಾಧ್ಯವಾಗಿದೆ. ಎಲೆಕ್ಟ್ರಾನ್‌ಗಳ ಚಲನೆಯ ಜಾಡು ಹಿಡಿಯುವುದು ಈ ಹಿಂದೆ ಕಷ್ಟಸಾಧ್ಯವೆಂದೆ ಭಾವಿಸಲಾಗಿತ್ತು. ಆದರೆ ಇನ್ನು ಮುಂದೆ ಹಾಗಲ್ಲ. ಎಲೆಕ್ಟ್ರಾನ್ ಎಲ್ಲಿದೆ ಅನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯ – ಅದಕ್ಕಾಗಿಯೇ 2023ರ ನೊಬೆಲ್ ಪ್ರಶಸ್ತಿ ಅರಸಿ ಬಂದಿದೆ ಈ ಮೂರು ಮಂದಿಗೆ. 

ನಿಮಗೆ ತಿಳಿದಿರಬಹುದು – ಪ್ರಪಂಚದ ಎಲ್ಲಾ ವಸ್ತುಗಳು – ಘನ, ದ್ರವ, ಅನಿಲ – ಎಲ್ಲವೂ  ಪರಮಾಣುಗಳಿಂದ ಕೂಡಿವೆ. ಪರಮಾಣುಗಳು ವಸ್ತುವಿನ ಅಂತಿಮ ಘಟಕವೆಂದೇ ನಂಬಲಾಗಿತ್ತು ಇಪ್ಪತ್ತನೇ ಶತಮಾನದ ಆರಂಭದ ತನಕವೂ. ಆದರೆ ಪರಮಾಣುವಿಗೂ ಇನ್ನಷ್ಟು ಸಂಕೀರ್ಣ ರಚನೆ ಇದೆ ಅನ್ನುವುದನ್ನು ಸಂಶೋಧನೆಗಳು ಹೇಳಿದವು. ಪರಮಾಣುವಿಗೆ ನ್ಯೂಕ್ಲಿಯಸ್ ಎಂಬ ಒಂದು ಕೇಂದ್ರ ಮತ್ತು ಆ ಕೇಂದ್ರದ ಸುತ್ತ    ಎಲೆಕ್ಟ್ರಾನ್ ಎಂಬ ಕಣಗಳು ಸುತ್ತುತ್ತಿವೆ.  ಯಾವುದೇ ಮೂಲವಸ್ತುವು, ಅವುಗಳ ಪರಮಾಣುವಿನಲ್ಲಿ ಎಲೆಕ್ಟ್ರಾನ್‌ಗಳ ಸಂಖ್ಯೆ ಹಾಗು ಅವುಗಳ ಸಂರಚನೆಯ ಅಂಶದ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಹೈಡ್ರೋಜನ್ ಪರಮಾಣುವಿನಲ್ಲಿ ಒಂದು ಎಲೆಕ್ಟ್ರಾನ್,  ಹೀಲಿಯಂ ಪರಮಾಣು ಎರಡು ಎಲೆಕ್ಟ್ರಾನ್ ಮತ್ತು ಆಮ್ಲಜನಕದ ಪರಮಾಣುವಿನಲ್ಲಿ ಎಂಟು ಎಲೆಕ್ಟ್ರಾನ್ ಇವೆ. 

ಪರಮಾಣುವಿನ ಪರಿಕಲ್ಪನೆಯು ಶತಮಾನಗಳಿಂದ ಗಮನಾರ್ಹವಾಗಿ ವಿಕಸನಗೊಂಡಿದೆ, ಆರಂಭಿಕ ತಾತ್ವಿಕ ಕಲ್ಪನೆಗಳಿಂದ ಪ್ರಾಯೋಗಿಕ ಪುರಾವೆಗಳು ಮತ್ತು ಅತ್ಯಾಧುನಿಕ ಸೈದ್ಧಾಂತಿಕ ಮಾದರಿಗಳ ಆಧಾರದ ಮೇಲೆ ಅದು ನಿಂತಿದೆ.

ಪರಮಾಣು ವಸ್ತುವಿನ ಮೂಲಭೂತ ಕಣವೆಂಬ ವಿಚಾರವು ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳಿಗೆ ತಿಳಿದಿತ್ತು. ಕ್ರಿ.ಪೂ. 5 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಲ್ಯೂಸಿಪ್ಪಸ್ ಮತ್ತು ಅವನ ವಿದ್ಯಾರ್ಥಿ ಡೆಮೊಕ್ರಿಟಸ್ ಪರಮಾಣುವಿನ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಎಲ್ಲಾ ವಸ್ತುಗಳು ಪರಮಾಣುಗಳೆಂಬ ಅವಿಭಾಜ್ಯ, ಅವಿನಾಶಿ ಕಣಗಳಿಂದ ಕೂಡಿದೆ ಹಾಗು ಈ ಪರಮಾಣುಗಳು ನಿರಂತರ ಚಲನೆಯಲ್ಲಿವೆ ಮತ್ತು ವಿಭಿನ್ನ ಪದಾರ್ಥಗಳನ್ನು ರೂಪಿಸಲು ಅವುಗಳನ್ನು ಸಂಯೋಜಿಸಬಹುದು ಎಂದು ಅವರು ಪ್ರಸ್ತಾಪಿಸಿದರು.

ಡೆಮೋಕ್ರಿಟಸ್‌ನ ಸಮಕಾಲೀನನಾದ ಮತ್ತೋರ್ವ ತತ್ವಜ್ಞಾನಿ ಅರಿಸ್ಟಾಟಲ್ ಪರಮಾಣು ಮಾದರಿಯನ್ನು ತಿರಸ್ಕರಿಸಿದನು. ಪರಮಾಣು ಸಿದ್ಧಾಂತದ ಬೆಳವಣಿಗೆಯನ್ನು ಪ್ರತಿಬಂಧಿಸುವ ಅರಿಸ್ಟಾಟಲ್‌ನ ಆಲೋಚನೆಗಳು ಶತಮಾನಗಳವರೆಗೆ ಚಾಲ್ತಿಯಲ್ಲಿದ್ದವು.

18 ನೇ ಶತಮಾನದ ಆದಿಯಲ್ಲಿ  ಪರಮಾಣುವಿನ ಪರಿಕಲ್ಪನೆಯು ಪ್ರಾಮುಖ್ಯತೆಯನ್ನು ಮರಳಿ ಪಡೆಯಲಾರಂಭಿಸಿತು. ರಸಾಯನಶಾಸ್ತ್ರಜ್ಞ ಮತ್ತು ಭೌತಶಾಸ್ತ್ರಜ್ಞ ರಾಬರ್ಟ್ ಬೋಯ್ಲ್ ಅನಿಲಗಳ ವರ್ತನೆಯ ಮೇಲೆ ಪ್ರಯೋಗಗಳನ್ನು ನಡೆಸುವ ಮೂಲಕ ಆಧುನಿಕ ರಸಾಯನಶಾಸ್ತ್ರಕ್ಕೆ ಅಡಿಪಾಯವನ್ನು ಹಾಕಿದರು. ಅವರ ಕೆಲಸವು ಅನಿಲಗಳ ಪರಿಮಾಣ, ಒತ್ತಡ ಮತ್ತು ಉಷ್ಣತೆಗಳ ನಡುವಿನ ಸಂಬಂಧಗಳ ತಿಳುವಳಿಕೆಗೆ ಕೊಡುಗೆ ನೀಡಿತು, ಮತ್ತು ಪರೋಕ್ಷವಾಗಿ ವಸ್ತುವು ಪ್ರತ್ಯೇಕ ಕಣಗಳಿಂದ ಕೂಡಿದೆ ಎಂಬ ಕಲ್ಪನೆಗೆ ಸಮರ್ಥನೆಯನ್ನು ನೀಡಿತು.

ಪರಮಾಣು ಸಿದ್ಧಾಂತದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲುಗಳಲ್ಲಿ ಒಂದಾದ ಜಾನ್ ಡಾಲ್ಟನ್ ಅವರ ಪರಮಾಣು ಸಿದ್ಧಾಂತವು 19 ನೇ ಶತಮಾನದ ಆರಂಭದಲ್ಲಿ ಬಂದಿತು. 

ವಸ್ತುವು ಪರಮಾಣುಗಳಿಂದ ಕೂಡಿದೆ. ಪರಮಾಣುಗಳು ಸಂಯೋಜನೆಗೊಂಡು ವಸ್ತುವು ರೂಪಿಸಲ್ಪಡುತ್ತದೆ. ವಿಭಿನ್ನ ವಸ್ತುಗಳು ವಿಭಿನ್ನ ಪರಮಾಣುಗಳಿಂದ ರಚಿಸ್ಪಟ್ಟಿದೆ. ಪರಮಾಣುಗಳು ವಸ್ತುವಿನ ಚಿಕ್ಕ, ಅವಿಭಾಜ್ಯ ಘಟಕಗಳಾಗಿವೆ ಎನ್ನುವುದು ಡಾಲ್ಟನ್ ನ ಸಿದ್ದಾಂತ. 

ಪರಮಾಣುಗಳ ಅಸ್ತಿತ್ವಕ್ಕೆ ಸಂಬಂದಿಸಿದಂತೆ ಡಾಲ್ಟನ್‌ನ ಪರಮಾಣು ಸಿದ್ಧಾಂತವು ಒಂದು ಪ್ರಮುಖ ಮೈಲಿಗಲ್ಲಾಗಿದ್ದರೂ, ಅದು ಇನ್ನೂ ತನ್ನ ಮಿತಿಗಳನ್ನು ಹೊಂದಿತ್ತು.

20 ನೇ ಶತಮಾನದಲ್ಲಿ ಪರಮಾಣುವಿನ ಉಪಕಣಗಳ ಆವಿಷ್ಕಾರದೊಂದಿಗೆ ಪರಮಾಣು  ಸಿದ್ಧಾಂತದ ಇತಿಮಿತಿಗಳು ಬೆಳಕಿಗೆ ಬಂದವು ಉದಾಹರಣೆಗೆ ಪರಮಾಣು  ಸಿದ್ಧಾಂತದಲ್ಲಿ ಐಸೊಟೋಪ್‌ಗಳ (ಅಂದರೆ ಒಂದೇ ಮೂಲವಸ್ತುವಿನ ಪರಮಾಣುಗಳು ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‌ಗಳನ್ನು ಹೊಂದಿರುವುದು) ಅಸ್ತಿತ್ವಕ್ಕೆ ಕಾರಣವೇನೆಂಬ ಅಂಶಕ್ಕೆ ವಿವರಗಳಿರಲಿಲ್ಲ ಮತ್ತು ಪರಮಾಣು ಅವಿಭಾಜ್ಯವೆನ್ನುವ ಕಲ್ಪನೆಯು ಹುಸಿಯಾಯಿತು.

19 ನೇ ಶತಮಾನದ ಅಂತ್ಯದಲ್ಲಿ ವಿದ್ಯುತ್ ಮತ್ತು ವಿಕಿರಣದ ಪ್ರಯೋಗಗಳು ಪರಮಾಣುವಿನ ಉಪಕಣಗಳ ಅಸ್ತಿತ್ವವನ್ನು ಬಹಿರಂಗಪಡಿಸಲು ಪ್ರಾರಂಭಿಸಿದವು. ವಿಜ್ಞಾನಿ ಜೆ.ಜೆ ಥಾಮ್ಸನ್ ರ ಕ್ಯಾಥೋಡ್ ಕಿರಣಗಳೊಂದಿಗಿನ ಪ್ರಯೋಗಗಳು ಎಲೆಕ್ಟ್ರಾನ್ ಗಳ ಆವಿಷ್ಕಾರಕ್ಕೆ ಕಾರಣವಾಯಿತು. .

1909 ರಲ್ಲಿ ಅರ್ನೆಸ್ಟ್ ರುದರ್ಫೋರ್ಡ್ ಅವರ ಪ್ರಸಿದ್ಧ ಚಿನ್ನದ ಹಾಳೆಯ ಪ್ರಯೋಗವು ಪರಮಾಣುಗಳ ರಚನೆಯ ಬಗ್ಗೆ ಹೆಚ್ಚಿನ ಒಳನೋಟವನ್ನು ನೀಡಿತು. ಪರಮಾಣುಗಳ ಕೇಂದ್ರದಲ್ಲಿ ಸಣ್ಣ ಮತ್ತು ದ್ರವ್ಯರಾಶಿಯಿಂದ ಕೂಡಿದ ಸಾಂದ್ರವಾದ ರಚನೆ ಅಥವಾ ನ್ಯೂಕ್ಲಿಯಸ್ ವಿದ್ದು, ಉಳಿದಂತೆ ಬಹುತೇಕ ಖಾಲಿ ಜಾಗವಿರುತ್ತದೆ, ಮತ್ತು ಸೂರ್ಯನ ಸುತ್ತ ಗ್ರಹಗಳು ಹೇಗೆ ಸುತ್ತುತ್ತವೆಯೋ ಅದೇ ರೀತಿ ಎಲೆಕ್ಟ್ರಾನ್ಗಳು ನ್ಯೂಕ್ಲಿಯಸ್ ಸುತ್ತ  ಸುತ್ತುತ್ತಿರುತ್ತವೆಂಬುದನ್ನು ರುದರ್ಫೋರ್ಡ್ ಕಂಡುಕೊಂಡನು.

ಅಷ್ಟೇಯಲ್ಲದೆ 20 ನೇ ಶತಮಾನದ ಆರಂಭದಲ್ಲಿ ಅರ್ನೆಸ್ಟ್ ರುದರ್ಫೋರ್ಡ್ ರಿಂದ ಪ್ರೋಟಾನ್ ಮತ್ತು 1932 ರಲ್ಲಿ ಜೇಮ್ಸ್ ಚಾಡ್ವಿಕ್ ರಿಂದ ನ್ಯೂಟ್ರಾನ್ ಕಣಗಳ ಗುರುತಿಸುವಿಕೆಯಿಂದ, ಇನ್ನೆರಡು ಪರಮಾಣುವಿನ ಉಪಕಣಗಳ ಆವಿಷ್ಕಾರವಾಯಿತು. ಈ ಆವಿಷ್ಕಾರಗಳು ಪರಮಾಣುಗಳ ಸರಳವೆಂದು, ಭಾವಿಸಲಾದ ರಚನೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದವು ಮತ್ತು ಹೊಸ ಪರಮಾಣು ಮಾದರಿಯ ಅಗತ್ಯವನ್ನು ಎತ್ತಿ ತೋರಿಸಿದವು. ಹೀಗೆ ಪರಮಾಣುವಿನ ಹಾಗೂ ಅದರ ಉಪಕಣಗಳ ಸಂಶೋಧನೆಯ ಹಾದಿಯು ನಡೆದುಬಂತು.

ಪ್ರಸ್ತುತ ನೋಬೆಲ್ ಪ್ರಶಸ್ತಿಯ ವಿಷಯಕ್ಕೆ ಬಂದರೆ ವಿಜ್ಞಾನಿಗಳಾದ ಪಿಯರೆ ಅಗೋಸ್ಟಿನಿ, ಫೆರೆಂಕ್ ಕ್ರೌಸ್ಜ್ ಮತ್ತು ಆನ್ನೆ ಎಲ್’ಹುಲ್ಲಿಯರ್ ಎಲೆಕ್ಟ್ರಾನ್‌ಗಳ ಚಲನೆ ಅಥವಾ ಶಕ್ತಿಯ ಬದಲಾವಣೆಯ ಕ್ಷಿಪ್ರ ಪ್ರಕ್ರಿಯೆಗಳನ್ನು ಅಳೆಯಲು ಬಳಸಬಹುದಾದ ಬೆಳಕಿನ ಅತ್ಯಂತ ಚಿಕ್ಕ ’ಪಲ್ಸ್’  ಅಥವಾ ಸ್ಪುರಣಗಳನ್ನು ಉತ್ಪಾದಿಸುವ ವಿಧಾನವನ್ನು ಆವಿಷ್ಕರಿಸಿದ್ದಾರೆ. ಇದು ಅತ್ಯಂತ ಗಮನಾರ್ಹ ಸಂಶೋಧನೆ – ಎಂದೇ ಇದಕ್ಕೆ ನೊಬೆಲ್ ಪ್ರಶಸ್ತಿಯ ಗರಿ. 

ಸರಳವಾಗಿ ಹೇಳುವುದಾದರೆ, ಸೆಕೆಂಡನ್ನು ವಿಭಜಿಸಿದಾಗ ದೊರಕುವ ನಂಬಲಾಗದಷ್ಟು ಚಿಕ್ಕದಾದ ವಿಭಜಿತ ಸೆಕೆಂಡುಗಳಲ್ಲಿ, ಪರಮಾಣುವಿನಲ್ಲಿನ ಎಲೆಕ್ಟ್ರಾನ್‌ಗಳ ಚಲನೆಯನ್ನು ಪರಿಶೀಲಿಸುವ ಸಂಶೋಧನೆ ಇವರದ್ದು. 

ಈ ವಿಭಜಿತ ಸೆಕೆಂಡುಗಳು ಎಷ್ಟು ಚಿಕ್ಕದಾಗಿದೆ?  ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅವು ಎಷ್ಟು ಚಿಕ್ಕದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಕೆಲವು ಉದಾಹರಣೆಗಳನ್ನು ಪರಿಗಣಿಸಬಹುದು. 

ಒಂದು ಹೃದಯ ಬಡಿತವು ಸಾಧರಣವಾಗಿ ಒಂದು ಸೆಕೆಂಡಿನಲ್ಲಿ ಸಂಭವಿಸುತ್ತದೆ. ಹಮ್ಮಿಂಗ್ ಬರ್ಡ್ ಎಂಬ ಪುಟ್ಟ ಹಕ್ಕಿ  ತನ್ನ ರೆಕ್ಕೆಗಳನ್ನು ಸೆಕೆಂಡಿಗೆ 80 ಬಾರಿ ಬಡಿಯುತ್ತದೆ. ನಾವು    ಈ ಘಟನೆಗಳನ್ನು ಶಬ್ದದ ಮುಖೇನ ಮತ್ತು ಚಲನೆಗಳ ಅಸ್ಪಷ್ಟ ಗ್ರಹಿಕೆಯ ಮುಖೇನ ಮಾತ್ರ ತಿಳಿಯಲು ಸಾಧ್ಯ. ಮಾನವನ ಇಂದ್ರಿಯಗಳಿಗೆ, ಕ್ಷಿಪ್ರ ಚಲನೆಗಳು ಅಸ್ಪಷ್ಟವಾಗಿ ಗೋಚರಿಸುತ್ತವೆ ಮತ್ತು ಅತ್ಯಂತ ಚಿಕ್ಕ ಸಮಯದಲ್ಲಿ ನಡೆದ ಘಟನೆಗಳನ್ನು ಗ್ರಹಿಸಲು ಸಾಧ್ಯವಿಲ್ಲ.

ಇಂತಹ ತ್ವರಿತ ಕ್ಷಣಗಳನ್ನು ಸುಧಾರಿತ ಕ್ಯಾಮೆರಾದ ತಂತ್ರಗಳನ್ನು ಬಳಸಿಕೊಂಡು ನಿಧಾನಗೊಳಿಸಿ ಮಾತ್ರ ವೀಕ್ಷಿಸಬಹುದು. 

ಕ್ಷಿಪ್ರ ಪ್ರಕ್ರಿಯೆಗಳನ್ನು ಅಳೆಯಲು ಅಥವಾ ಚಿತ್ರಿಕರಿಸಲು ಬಳಸುವ ಎಲ್ಲಾ ವಿಧಾನಗಳಿಗೆ ಇದೇ ತತ್ವವು ಅನ್ವಯಿಸುತ್ತದೆ. ಕ್ಷಿಪ್ರ ಘಟನೆಗಳನ್ನು ಆ ಘಟನೆಗಳು ನಡೆಯುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಅಳೆಯಬೇಕಾಗುತ್ತದೆ, ಇಲ್ಲದಿದ್ದರೆ ಫಲಿತಾಂಶವು ಅಸ್ಪಷ್ಟವಾಗಿರುತ್ತದೆ. ಇಲ್ಲಿದೆ ಈ ವರ್ಷದ ನೊಬೆಲ್ ಪ್ರಶಸ್ತಿ ಭಾಜನಕ್ಕೆ ದಕ್ಕಿದ ಸಂಶೋಧನೆಯ ಮಹತ್ವ.   “ಈ ವರ್ಷದ ಪ್ರಶಸ್ತಿ ವಿಜೇತರು ಪರಮಾಣುಗಳು ಮತ್ತು ಅಣುಗಳೊಳಗಿನ ಪ್ರಕ್ರಿಯೆಗಳನ್ನು ಸೆರೆಹಿಡಿಯಲು ಸಾಕಾಗುವಷ್ಟು ಚಿಕ್ಕದಾದ ಬೆಳಕಿನ ಸ್ಪುರಣಗಳನ್ನು ಉತ್ಪಾದಿಸುವ ವಿಧಾನವನ್ನು ಪ್ರದರ್ಶಿಸಿದೆ” ಎಂದು 2023 ರ ನೊಬೆಲ್ ಸಮಿತಿಯು ಅಧಿಕೃತವಾಗಿ ತಿಳಿಸಿದೆ. ಇದು  ಸಂಶೋಧನೆಯ ಮಹತ್ವವನ್ನು ಸಾರುವ ಘೋಷಣೆ. 

ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರು ಸಾಧಿಸಿದ ಚಿಕ್ಕ ಪಲ್ಸ್ ಅಥವಾ ಸ್ಪುರಣದ ಪ್ರಮಾಣವು    ‘ಅಟ್ಟೋಸೆಕೆಂಡ್’ಆಗಿದೆ. ಅಟ್ಟೋಸೆಕೆಂಡ್ ಅಂದರೆ ಹತ್ತರ ಘಾತ ಮೈನಸ್ 18 ಸೆಕೆಂಡುಗಳು. ಅಣುವಿನಲ್ಲಿ, ಪರಮಾಣುಗಳು ಚಲಿಸಬಹುದಾದ ಸಮಯವನ್ನು ಫೆಮ್ಟೋಸೆಕೆಂಡುಗಳಲ್ಲಿ ಅಳೆಯುತ್ತಾರೆ, ಅಂದರೆ ಹತ್ತರ ಘಾತ ಮೈನಸ್ 15 ಸೆಕೆಂಡುಗಳು. ಆದರೆ ಪರಮಾಣುಗಳು ಅಥವಾ ಅಣುಗಳ ಒಳಗೆ ಎಲೆಕ್ಟ್ರಾನ್‌ಗಳ ಚಲನೆಯು, ಫೆಮ್ಟೋಸೆಕೆಂಡ್ ಮಾನಕದಲ್ಲಿ ಅಸ್ಪಷ್ಟವಾಗಿ ಗೋಚರಿಸುತ್ತದೆ.

ಅಟ್ಟೋಸೆಕೆಂಡ್ ಅನ್ನುವುದು ಒಂದು ಸೆಕೆಂಡಿನ ಶತಕೋಟಿಯ ಶತಕೋಟಿಯ ಒಂದು ಭಾಗವಾಗಿದೆ. ಎಲೆಕ್ಟ್ರಾನ್‌ಗಳ ಲೋಕದಲ್ಲಿ,  ಅದರ   ಸ್ಥಾನ ಮತ್ತು ಶಕ್ತಿಗಳು ಒಂದರಿಂದ ಕೆಲವು ನೂರು ಅಟ್ಟೋಸೆಕೆಂಡ್ ಗಳ ನಡುವಿನ ಅಂತರದ ವೇಗದಲ್ಲಿ ಬದಲಾಗುತ್ತವೆ

ಒಂದು ಅಟ್ಟೋಸೆಕೆಂಡ್ ಎಷ್ಟು ಚಿಕ್ಕದೆಂದರೆ, ಒಂದು ಸೆಕೆಂಡಿನಲ್ಲಿ ಅವುಗಳ ಸಂಖ್ಯೆಯು 13.8 ಶತಕೋಟಿ ವರ್ಷಗಳ ಹಿಂದೆ ಬ್ರಹ್ಮಾಂಡವು ಅಸ್ತಿತ್ವಕ್ಕೆ ಬಂದಾಗಿನಿಂದ ಸಂದ ಸೆಕೆಂಡುಗಳ ಸಂಖ್ಯೆಯಷ್ಟೆ ಇರುತ್ತದೆ. 

ಹೆಚ್ಚು ಸೂಕ್ತವಾದ ರೀತಿಯಲ್ಲಿ ನಾವು ಅಟ್ಟೋಸೆಕೆಂಡ್ ನ್ನು ಹೀಗೆ ಅರ್ಥೈಸಬಹುದು: ಉದಾಹರಣೆಗೆ ಕೋಣೆಯ ಒಂದು ಗೋಡೆಯ ಕಡೆಯಿಂದ ಎದುರು ಗೋಡೆಗೆ ಬೆಳಕನ್ನು ಹಾಯಿಸಿದಾಗ ತಗಲುವ ಸಮಯವು ಎಷ್ಟು? ಇದು ಸುಮಾರು    ಹತ್ತು ಬಿಲಿಯನ್ ಅಟ್ಟೋಸೆಕೆಂಡ್ ಗಳಾಗಿರುತ್ತವೆ.

ಇಲ್ಲಿಯವರೆಗೆ, ಫೆಮ್ಟೋಸೆಕೆಂಡ್‌ನ ಅವಧಿಯಲ್ಲಿ ಮಾತ್ರ ಪರಮಾಣು ಪ್ರಕ್ರಿಯೆಗಳನ್ನು ವೀಕ್ಷಿಸಲು ಸಾಧ್ಯವಾಗಿತ್ತು, ಅದಕ್ಕಿಂತ ಹೆಚ್ಚೇನೂ ಸಾಧ್ಯವಿರಲಿಲ್ಲ. ಇಲೆಕ್ಟ್ರಾನ್‌ಗಳ ಸಂಕ್ಷಿಪ್ತ ಸಮಯಮಾನದಲ್ಲಿ ಸಂಭವಿಸುವ ಪ್ರಕ್ರಿಯೆಗಳನ್ನು ಗ್ರಹಿಸುವುದು, ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ಸುಧಾರಿಸುವುದರ ಮೂಲಕ ಸಾಕಾರಗೊಳ್ಳಲ್ಲಿಲ್ಲ. ಅದಕ್ಕಾಗಿ ಸಂಪೂರ್ಣವಾದ ಹೊಸ ವಿಧಾನದ ಅಗತ್ಯವಿತ್ತು. ಅಂತಹ ಒಂದು ಹೊಸ ವಿಧಾನವನ್ನು ಈ ವರ್ಷದ ಪ್ರಶಸ್ತಿ ವಿಜೇತರು ಅಟ್ಟೋಸೆಕೆಂಡ್ ಎಂಬ ಭೌತಶಾಸ್ತ್ರದ ಹೊಸ ಸಂಶೋಧನಾ ಕ್ಷೇತ್ರವನ್ನು ತೆರೆಯುವುದರ ಮೂಲಕ ಪರಿಚಯಿಸಿದರು ಹಾಗು ಅಟ್ಟೋಸೆಕೆಂಡ್ ಅವಧಿಯನ್ನು ಗ್ರಹಿಸಬಹುದು ಮತ್ತು ಅಳೆಯಬಹುದು ಎನ್ನುವುದನ್ನು ತೋರಿಸಿಕೊಟ್ಟರು.

ಈಗ ಅಟ್ಟೋಸೆಕೆಂಡ್ ಜಗತ್ತನ್ನು ಪ್ರವೇಶಿಸಬಹುದಾಗಿದೆ, ಮತ್ತು ಎಲೆಕ್ಟ್ರಾನ್ಗಳ ಚಲನೆಯನ್ನು ಅಧ್ಯಯನ ಮಾಡಲು ಬೆಳಕಿನ ಈ ಸಣ್ಣ ಸ್ಪುರಣಗಳನ್ನು ಬಳಸಬಹುದಾಗಿದೆ. ಇದೀಗ ಕೆಲವೇ ಡಜನ್ ಅಟ್ಟೋಸೆಕೆಂಡ್ಗಳವರೆಗೆ ಬೆಳಕಿನ ಸ್ಪುರಣಗಳನ್ನು ಉತ್ಪಾದಿಸಲು ಸಾಧ್ಯವಿದೆ, ಮತ್ತು ಈ ತಂತ್ರಜ್ಞಾನವು  ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಿ ಅಭಿವೃದ್ಧಿಯನ್ನು ಹೊಂದಲಿದೆ.

1987 ರಲ್ಲಿ, ಫ್ರೆಂಚ್ ಪ್ರಯೋಗಾಲಯದಲ್ಲಿ ಅನ್ನಿ ಎಲ್’ಹುಲ್ಲಿಯರ್ ಮತ್ತು ಅವರ ತಂಡವು ಗಮನಾರ್ಹವಾದ ಪ್ರಗತಿಯನ್ನು ಸಾಧಿಸಿತು. ಅವರು ಅತಿಗೆಂಪು ಲೇಸರ್ ಕಿರಣವನ್ನು ಜಡ ಅನಿಲದ ಮೂಲಕ ರವಾನಿಸಿದಾಗ, ಅದರಲ್ಲಿ ಮೂಲ ಕಿರಣಗಳ ಆವೃತ್ತಿಯ ಇನ್ನಷ್ಟು ಅಧಿಕ ಆವೃತ್ತಿಯ ಕಿರಣವನ್ನು ಪತ್ತೆ ಮಾಡಿದರು. ಇದಕ್ಕೆ ಓವರ್ಟೋನ್  ಎನ್ನುತ್ತಾರೆ. ಅಂದರೆ ಮೂಲ ಕಿರಣದ ತರಂಗಗಳು ಪೂರ್ಣಂಕದೊಂದಿಗೆ ಗುಣಾಕಾರಗೊಂಡಗ ದೊರೆಯುವ ಹೊಸ ಬೆಳಕಿನ ತರಂಗಗಳು ಸ್ರಷ್ಟಿಗೊಂಡವು. 

ಅನಿಲದಲ್ಲಿ ಉಂಟಾಗುವ ಈ ಓವರ್ಟೋನ್ ಗಳು ನೇರಳಾತೀತ ಬೆಳಕಿನ ರೂಪದಲ್ಲಿರುತ್ತವೆ. ಹೀಗೆ ಉತ್ಪಾದನೆಗೊಂಡ ಓವರ್ಟೋನ್ ಗಳು  ಪರಸ್ಪರ ಸಂವಹನ ನಡೆಸಿದಾಗ, ಅವು ವ್ಯತಿಕರಣದ (interference) ಮೂಲಕ ತೀವ್ರಗೊಳ್ಳಬಹುದು ಅಥವಾ ಶೂನ್ಯವಾಗಬಹುದು ಎಂದು ವಿಜ್ಞಾನಿಗಳು ಗಮನಿಸಿದರು. ತಮ್ಮ ಪ್ರಯೋಗ ಮಾದರಿಯನ್ನು ಪರಿಷ್ಕರಿಸುವ ಮೂಲಕ, ಭೌತಶಾಸ್ತ್ರಜ್ಞರು ಶಕ್ತಿಯುತವಾದ ಬೆಳಕಿನ ಅಟ್ಟೋಸೆಕೆಂಡ್ ಸ್ಪುರಣಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

2001 ರಲ್ಲಿ, ಪಿಯರೆ ಅಗೋಸ್ಟಿನಿ ಮತ್ತು ಫ್ರಾನ್ಸ್ನಲ್ಲಿನ ಅವರ ಸಂಶೋಧನಾ ಗುಂಪು 250-ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳ ಸರಣಿಯನ್ನು ಯಶಸ್ವಿಯಾಗಿ ಉತ್ಪಾದಿಸಿತು. ಈ ಸ್ಪುರಣಗಳ ಬಂಡಿಯನ್ನು ಮೂಲ ಕಿರಣದೊಂದಿಗೆ ಸಂಯೋಜಿಸಿ ನಡೆಸಿದ ಪ್ರಯೋಗಗಳ ಮೂಲಕ, ಅವರು ಎಲೆಕ್ಟ್ರಾನ್ ಡೈನಾಮಿಕ್ಸ್   ಅಥವಾ ಕನ್ನಡದಲ್ಲಿ ಹೇಳುವುದಾದರೆ ಎಲೆಕ್ಟ್ರಾನುಗಳ ಚಲನೆಯ ಬಗೆಗೆ  ಅಭೂತಪೂರ್ವ ಒಳನೋಟಗಳನ್ನು ಪಡೆದರು. 

ಅದೇ ಸಮಯದಲ್ಲಿ, ಆಸ್ಟ್ರಿಯಾದಲ್ಲಿ ಫೆರೆಂಕ್ ಕ್ರೌಸ್ಜ್ ಮತ್ತು ಅವರ ತಂಡವು ಬೆಳಕಿನ ಸ್ಪುರಣಗಳ ಬಂಡಿಯಿಂದ 650-ಅಟ್ಟೋಸೆಕೆಂಡ್ ಅವಧಿಯ ಸ್ಪುರಣಗಳನ್ನು ಪ್ರತ್ಯೇಕಿಸುವ ತಂತ್ರವನ್ನು ಅಭಿವೃದ್ಧಿಪಡಿಸಿದರು. ಈ ಪ್ರಗತಿಯು ಸಂಶೋಧಕರಿಗೆ ಕ್ರಿಪ್ಟಾನ್ ಪರಮಾಣುಗಳಿಂದ ಬಿಡುಗಡೆಯಾದ ಎಲೆಕ್ಟ್ರಾನ್ಗಳ ಶಕ್ತಿಯನ್ನು ಗಮನಾರ್ಹ ನಿಖರತೆಯೊಂದಿಗೆ ಅಳೆಯಲು ಅವಕಾಶ ಮಾಡಿಕೊಟ್ಟಿತು.

ವಸ್ತುವಿನ ಆಂತರಿಕ ಪ್ರಕ್ರಿಯೆಗಳನ್ನು ಪರೀಕ್ಷಿಸಲು ಮತ್ತು ಅರ್ಥಮಾಡಿಕೊಳ್ಳಲು ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳನ್ನು ಬಳಸಬಹುದು. ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳನ್ನು ಪರಮಾಣುಗಳು ಮತ್ತು ಅಣುಗಳ ವಿವರವಾದ ಭೌತಶಾಸ್ತ್ರದ ವಿವಿಧ ಆಯಾಮಗಳನ್ನು ಅನ್ವೇಷಿಸಲು ಬಳಸಬಹುದು. 

ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಉಪಯೋಗಿಸುವ ಎಲ್ಲ ಸಾಧ್ಯತೆ ಇವೆ. ಉದಾಹರಣೆಗೆ, ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳನ್ನು ಅಣುಗಳ ತಳ್ಳುವಿಕೆಗೆ ಬಳಸಬಹುದು, ಮತ್ತು ಈ ಪ್ರಕ್ರಿಯೆಯಲ್ಲಿ ಹೊರಸೂಸಲ್ಪಟ್ಟ ಕಿರಣಗಳ ಸಂಜ್ನೆಯನ್ನು ಯಾವ ಅಣು ಸೂಸಿದೆ ಮತ್ತು ಆ ಅಣುವಿನ ರಚನೆ ಏನು ಅನ್ನುವ ವಿವರವನ್ನು ಪ್ರಯೋಗ ಮೂಲಕ ಪಡೆಯಲು ಇಂದು ಸಾಧ್ಯ.  ಇದು ಒಂದು ರೀತಿಯ ಬೆರಳಚ್ಚು ಅಥವಾ ಫಿಂಗರ್‌ಪ್ರಿಂಟ್ – ಅಂದರೆ ಅಣುವಿನ ರಚನೆ ಮತ್ತು ಅದರ ಇನ್ನಿತರ ಗುಣ ಲಕ್ಶ್ಜಣಗಳ ಕುರಿತು ಕರಾರುವಾಕ್ಕಾದ ವಿವರಣೆ.  ಈ ವಿಧಾನವನ್ನು ವೈದ್ಯಕೀಯ   ಕ್ಷೇತ್ರದಲ್ಲಿ ರೋಗನಿರ್ಣಯಕ್ಕೆ ಬಳಸಿಕೊಳ್ಳಬಹುದು.

ಅಲ್ಪಾವಧಿಯ ಪ್ರಕ್ರಿಯೆಗಳನ್ನು ಅಧ್ಯಯನ ಮಾಡುಲು ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳು ಅತ್ಯುಪಯುಕ್ತ.  ಉದಾಹರಣೆಗೆ, ಅಟ್ಟೊಸೆಕೆಂಡ್ ಸ್ಪುರಣಗಳು ವಿಜ್ಞಾನಿಗಳಿಗೆ ಅಲ್ಟ್ರಾಫಾಸ್ಟ್ ಪರಮಾಣು ಮತ್ತು ಆಣ್ವಿಕ ಪ್ರಕ್ರಿಯೆಗಳ ‘ಚಿತ್ರಗಳನ್ನು’ ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ವಸ್ತು ವಿಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ವೇಗವರ್ಧಕ (catalysis)ದಂತಹ ಕ್ಷೇತ್ರಗಳಿಗೆ ಅಟ್ಟೋಸೆಕೆಂಡ್ ವಿಜ್ಞಾನ ಉಪಕಾರಿಯಾಗಿದೆ, ಅಲ್ಲಿ ತ್ವರಿತ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕ. 

ಅಟ್ಟೊಸೆಕೆಂಡ್ ಭೌತಶಾಸ್ತ್ರವು ವೇಗವಾಗಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ ಸಾಧನಗಳ ಅಭಿವೃದ್ಧಿಗೆ ಕಾರಣವಾಗಬಹುದು, ಕಂಪ್ಯೂಟಿಂಗ್ ಮತ್ತು ದೂರಸಂಪರ್ಕ ತಂತ್ರಜ್ಞಾನ ಕ್ಷೇತ್ರಗಳಿಗೆ ಹೆಚ್ಚಿನ ಆಯಾಮಗಳನ್ನು ನೀಡಬಹುದಾದ ತಂತ್ರವಿದು, ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. 

ವರ್ಧಿತ ಇಮೇಜಿಂಗ್ ಮತ್ತು ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರಗಳಲ್ಲಿ ಅಟ್ಟೋಸೆಕೆಂಡ್ ಬೆಳಕಿನ ಸ್ಪುರಣಗಳನ್ನು ಉಪಯೋಗಿಸಬಹುದು. ಉದಾಹರಣೆಗೆ, ಕುಶಲತೆಯಿಂದ ಯೋಜಿತ ರೀತಿಯಲ್ಲಿ ಅಟ್ಟೋಸೆಕೆಂಡ್ ಸ್ಪುರಣಗಳನ್ನು ಬಳಸುವುದರಿಂದ ಹೆಚ್ಚಿನ ಸಾಮರ್ಥ್ಯದ- ಎಲ್ಲ ವಿವರಗಳನ್ನು ನೀಡುವ ಚಿತ್ರಗಳನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಆ ಮೂಲಕ ಸ್ಪೆಕ್ಟ್ರೋಸ್ಕೋಪಿ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನಿರೀಕ್ಷಿಸಬಹುದು. ಹಾಗಾಗಿಯೇ ಅಟ್ಟೊಸೆಕೆಂಡ್ ಸಂಶೋಧನೆಯ  ಹೊಸ ಸಾಧ್ಯತೆಗಳನ್ನು ಮುಂದಿನ ದಿನಗಳಲ್ಲಿ ಜೀವಶಾಸ್ತ್ರದಿಂದ ಖಗೋಳಶಾಸ್ತ್ರದವರೆಗಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾಣಬಹುದು. 

ಅಟ್ಟೋಸೆಕೆಂಡ್  ಬೆಳಕಿನ ಸ್ಪುರಣಗಳು ಭೌತಶಾಸ್ತ್ರ ಸಂಶೋಧನಾ ಕ್ಷೇತ್ರಕ್ಕೆ ನವ ನವೀನ ಅವಕಾಶಗಳನ್ನು ಅಗಾಧವಾಗಿ ತೆರೆದಿವೆ. ಈ ಅವಕಾಶಗಳು ಮಾನವಬದುಕಿನ ಸಾವಿರಾರು ಸಮಸ್ಯೆಗಳಲ್ಲಿ ಕೆಲವನ್ನದರೂ ಪರಿಹರಿಸುವ ಆವಿಷ್ಕಾರಗಳಾಗಿ ಸದ್ವಿನಿಯೋಗಕ್ಕೆ ದೊರಕಲಿವೆ  ಎಂದು ವಿಜ್ಞಾನಿಗಳ ಅಭಿಮತ. ಹಾಗೆಯೇ ಆಗಲಿ ಎಂದು ಹಾರೈಸೋಣ. 

 

ತಿಟ್ಟ ಸೆಲೆ:scientist

ಹಸಿರುಮನೆಯ ಗುಟ್ಟು

ರತೀಶ ರತ್ನಾಕರ.

ಸಣ್ಣ ಸಣ್ಣ ಗಿಡಗಳನ್ನು ಬೆಳಸಲು ಇಲ್ಲವೇ ಹೆಚ್ಚಾಗಿ ಹೂವಿನ ಗಿಡಗಳನ್ನು ಬೆಳಸಲು ಹಸಿರು ಬಣ್ಣದ ಇಲ್ಲವೇ ಬಣ್ಣವಿಲ್ಲದ ಗಾಜು ಇಲ್ಲವೇ ಪ್ಲಾಸ್ಟಿಕ್ ಹೊದ್ದಿರುವ ‘ಹಸಿರು ಮನೆಗಳನ್ನು’ ಎಲ್ಲಾದರೂ ಕಂಡಿರುತ್ತೇವೆ. ಗಿಡಗಳ ಬೆಳವಣಿಗೆಗೆ ಈ ಬಗೆಯ ಬೆಳಸುವಿಕೆ ನೆರವಾಗುತ್ತದೆ ಎಂದು ಅಲ್ಲಲ್ಲಿ ಕೇಳಿರುತ್ತೇವೆ. ಹಾಗದರೆ ಈ ಹಸಿರು ಮನೆಗಳು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತವೆ? ಇದರ ಕೆಲಸವೇನು ಎಂಬುದನ್ನು ಅರಿಯೋಣ ಬನ್ನಿ.

ಹಸಿರುಮನೆಯ ಹಿಂದಿರುವ ಅರಿಮೆ:

ನೇಸರನಿಂದ ನೆಲಕ್ಕೆ ಬೀಳುವ ಬೆಳಕಿನಿಂದಾಗಿ ನೆಲದಲ್ಲಿರುವ ಮಣ್ಣು, ನೀರು ಹಾಗು ಇತರೆ ವಸ್ತುಗಳು ಬಿಸಿಯಾಗುತ್ತವೆ. ಅಂದರೆ ನೇಸರನ ಬೆಳಕಿನ ಶಕ್ತಿಯನ್ನು ಹೀರಿಕೊಂಡು ಅದೇ ಶಕ್ತಿಯನ್ನು ಬಿಸಿಯ ರೂಪದಲ್ಲಿ ಹೊರಬಿಡುತ್ತವೆ ಹೀಗೆ ಹೊರಸೂಸುವ ಬಿಸಿಯು ತಿಳಿಗೆಂಪು ಕದಿರಾಗಿರುತ್ತದೆ (infrared rays). ನೇಸರನ ಬೆಳಕಿನ ಅಲೆಯಗಲ (wavelength) ಮತ್ತು ಮಣ್ಣು/ನೀರು ಹೊರಬಿಡುವ ತಿಳಿಗೆಂಪು ಕದಿರಿನ (infrared rays) ಅಲೆಯಗಲ ಬೇರೆ ಬೇರೆಯಾಗಿರುತ್ತದೆ. ಈ ಅಲೆಯಗಲದ ಆದಾರದ ಮೇಲೆ ಈ ಕಿರಣಗಳು ಕೆಲವು ವಸ್ತುಗಳ ಮೂಲಕ ಹಾದುಹೋಗಲಾರವು. ಉದಾಹರಣೆಗೆಗೆ , ನೇಸರನ ಬೆಳಕು ಗೋಡೆಗಳ ಮೂಲಕ ಹಾದುಹೋಗಲಾಗದು ಆದರೆ ರೇಡಿಯೋ ಅಲೆಗಳು ಗೋಡೆಗಳಮೂಲಕ ಹಾದುಹೋಗವುವು ಅದಕ್ಕೆ ಕಾರಣ ಅವುಗಳ ಅಲೆಯಗಲವೂ ಒಂದು. ಹೀಗೆ ನೇಸರನ ಬೆಳಕು ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗುವುದು ಆದರೆ ತಿಳಿಗೆಂಪು ಕದಿರು ತಮ್ಮ ಅಲೆಯಗಲದಿಂದಾಗಿ ಗಾಜು/ಪ್ಲಾಸ್ಟಿಕ್ ಮೂಲಕ ಹಾದುಹೋಗಲಾರವು.

ಒಂದು ಹಸಿರುಮನೆಯು ಕಾಲಿ ಕೋಣೆಯಂತಿದ್ದು ಅದರ ಗೋಡೆ ಹಾಗು ಮಾಡನ್ನು ಗಾಜು ಇಲ್ಲವೇ ಪ್ಲಾಸ್ಟಿಕ್ ನಿಂದ ಕಟ್ಟಿರುತ್ತಾರೆ. ಈ ಗಾಜು/ಪ್ಲಾಸ್ಟಿಕ್ ನಿಂದ ನೇಸರನ ಬೆಳಕು ಹರಿದು ಹಸಿರುಮನೆಯ ಒಳಗೆ ಬರುತ್ತದೆ. ಹೀಗೆ ಒಳಗೆ ಬಂದ ನೇಸರನ ಬೆಳಕು ಮಣ್ಣಿನ ಮೇಲ್ಬಾಗ ಇಲ್ಲವೇ ಗಿಡಗಳಲ್ಲಿರುವ ತೇವವನ್ನು (humidity) ಆರಿಸುತ್ತದೆ ಮತ್ತು ಬಿಸಿಯನ್ನು ಅಂದರೆ ತಿಳಿಗೆಂಪು ಕದಿರನ್ನು (infrared rays) ಹೊರಹಾಕತೊಡಗುತ್ತವೆ.

ಹಸಿರುಮನೆಯ ಒಳಗಿರುವ ಮಣ್ಣು ನೇಸರನ ಬೆಳಕು ಬಿದ್ದೊಡನೆ ಬಿಸಿಯಾಗಿ ಆ ಬಿಸಿಯನ್ನು ಮಣ್ಣಿನ ಮೇಲ್ಬಾಗದಲ್ಲಿರುವ ಗಾಳಿಗೆ ಸಾಗಿಸುತ್ತದೆ. ಇದರಿಂದ ಮಣ್ಣಿನ ಮೇಲ್ಭಾಗದ ಗಾಳಿ ಮೊದಲು ಬಿಸಿಯಾಗತೊಡಗುತ್ತದೆ. ಹೀಗೆ ಬಿಸಿಯಾದ ಗಾಳಿಯ ದಟ್ಟಣೆ (Density) ಕಡಿಮೆಯಿರುವುದರಿಂದ ಇದು ಹರಡಿಕೊಂಡು ನೆಲದಿಂದ ಮೇಲೇರುವುದು ಅದರ ಗುಣ ಹಾಗಾಗಿ ಬಿಸಿಗಾಳಿಯು ಹರಡಿಕೊಂಡು ಮೇಲೇರುತ್ತದೆ. ಹಸಿರುಮನೆಯ ಚಾವಣಿಯ ಹತ್ತಿರದ ತಂಪನೆಯಗಾಳಿಯು ಬಿಸಿಗಾಳಿಗಿಂತ ಹೆಚ್ಚು ದಟ್ಟಣೆ ಹೊಂದಿರುವುದರಿಂದ ಇದು ಕೆಳಭಾಗಕ್ಕೆ ಬರುತ್ತದೆ. ಈ ತಂಪುಗಾಳಿಯು ಮಣ್ಣಿನಿಂದ ಹೊರಬರುತ್ತಿರುವ ಬಿಸಿಯನ್ನು ಹೀರಿಕೊಂಡು ಬಿಸಿಗಾಳಿಯಾಗಿ ಮತ್ತೆ ಮೇಲೇರತೊಡಗುತ್ತದೆ. ಹೀಗೆ ಮಣ್ಣಿನ ಮೇಲ್ಬಾಗದ ಕಡೆಯಿಂದ ಹಸಿರುಮನೆಯ ಚಾವಣಿಯ ಕಡೆಗೆ ಗಾಳಿಯು ಬಿಸಿಯಾಗತೊಡಗುತ್ತದೆ.

ಹಸಿರುಮನೆಗೆ ಬಳಸುವ ಗಾಜು/ಪ್ಲಾಸ್ಟಿಕ್‍ನ ಗುಣವೆಂದರೆ ಅದು ನೇಸರನ ಬೆಳಕನ್ನು ತನ್ನ ಮೂಲಕ ಹರಿಯಲು ಬಿಡುತ್ತದೆ ಆದರೆ ಹೆಚ್ಚು ಅಲೆಯಗಲ ಹೊಂದಿರುವ ಕಿರಣಗಳನ್ನು ಅಂದರೆ infrared rays ನ್ನು ತನ್ನ ಮೂಲಕ ಹರಿಯಲು ಬಿಡುವುದಿಲ್ಲ ಎಂದು ಮೊದಲೇ ತಿಳಿದಿದ್ದೇವೆ. ಹೀಗಾಗಿ ಮಣ್ಣಿನಿಂದ ಹೊರಬಂದ ಬಿಸಿಯು ಹಸಿರುಮನೆಯ ಗಾಳಿಗೆ ಸೇರಿ ಗಾಜು/ಪ್ಲಾಸ್ಟಿಕ್ ಮೂಲಕ ಹೊರಹೋಗಲಾಗದೆ ಇರುತ್ತದೆ. ಇದರಿಂದ ಹಸಿರುಮನೆಯ ಒಳಗಿನ ಗಾಳಿಯು ಬಿಸಿಯಾಗಿ, ಹಸಿರುಮನೆ ಹೊರಗಿನ ಗಾಳಿಯ ಬಿಸುಪಿಗಿಂತ (temperature) ಹೆಚ್ಚಿನ ಬಿಸುಪನ್ನು ಹೊಂದಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಹಸಿರುಮನೆಯ ಒಳಗೆ ಯಾವಾಗಲೂ ಹೊರಗಿನ ಗಾಳಿಪಾಡಿಗಿಂತ ಹೆಚ್ಚಿನ ಬಿಸುಪು ಇರುತ್ತದೆ. ಈ ಹೆಚ್ಚಿನ ಬಿಸುಪು ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಮುಂದೆ ನೋಡೋಣ.

ಹಗಲಿನ ಹೊತ್ತು ನೇಸರನ ಬೆಳಕಿನಿಂದ ಹಸಿರುಮನೆಯ ಒಳಗೆ ಹೆಚ್ಚಿನ ಬಿಸುಪು ಇದ್ದರೆ ಇನ್ನೂ ಇರುಳಿನ ಹೊತ್ತಿನಲ್ಲಿ ಇಲ್ಲಿ ಬೆಚ್ಚಗಿನ ಗಾಳಿ ಇರುತ್ತದೆ. ಇದಕ್ಕೆ ಕಾರಣ, ಹಗಲೆಲ್ಲಾ ನೇಸರನ ಬೆಳಕಿನಿಂದ ಬಿಸಿಯಾದ ಹಸಿರು ಮನೆಯೊಳಗಿನ ಮಣ್ಣು ತನ್ನಲ್ಲಿರುವ ಬಿಸುಪನ್ನು ರಾತ್ರಿಯ ಹೊತ್ತು ಹೊರಗಾಳಿಗೆ ಬಿಡಲಾರಂಬಿಸುತ್ತದೆ. ಹಾಗು ಈ ಬಿಸಿಯನ್ನು ಗಾಜು/ಪ್ಲಾಸ್ಟಿಕ್ಕಿನ ಗೊಡೆಯ ನೆರವಿನಿಂದ ಹಸಿರುಮನೆಯ ಒಳಗೇ ಹಿಡಿದಿಡಿಲಾಗುತ್ತದೆ. ಹಾಗಾಗಿ ಹಸಿರು ಮನೆಯ ಒಳಗಿನ ಬಿಸುಪು ಹೊರಗಿನ ಗಾಳಿಯ ಬಿಸುಪಿಗಿಂತ ಹೆಚ್ಚಿರುತ್ತದೆ ಮತ್ತು ಇದು ಗಿಡಗಳ ಸುತ್ತಲಿನ ಗಾಳಿಯನ್ನು ಕೂಡಲೇ ತಂಪಾಗುವುದನ್ನು ತಡೆಯುತ್ತದೆ.

ಗಿಡಗಳ ಬೆಳವಣಿಗೆಗೆ ಹಸಿರುಮನೆ ಹೇಗೆ ನೆರವಾಗುತ್ತದೆ?
ನೇಸರನ ಬೆಳಕನ್ನು ಹಸಿರುಮನೆಯ ಒಳಗೆ ಹಾಯಿಸಿ ಅದರಿಂದ ಬಿಸಿಯಾದ ಮಣ್ಣು/ಗಿಡ/ನೀರಿನಿಂದ ಹೊರಬರುವ ತಿಳಿಗೆಂಪು ಕದಿರನ್ನು (infrared rays) ಹಿಡಿದಿಟ್ಟುಕೊಳ್ಳುವುದರಿಂದ ಗಿಡಗಳ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.

 

1. ಹೆಚ್ಚಿನ ಬಿಸುಪು ಗಿಡದ ಬೆಳವಣಿಗೆಗೆ ಉಪಕಾರಿ:
ಪ್ರತಿಯೊಂದು ಮರಗಿಡಗಳು ಸೂಲುಗೂಡುಗಳಿಂದ (cell) ಆಗಿರುತ್ತದೆ. ಈ ಸೂಲುಗೂಡುಗಳಲ್ಲಿ ದಿನಕ್ಕೆ ನೂರಾರು ಬಗೆಯ ರಾಸಾಯನಿಕ ಚಟುವಟಿಕೆಗಳು (chemical reaction) ನಡೆಯುತ್ತಿರುತ್ತವೆ, ಇವು ಸೂಲುಗೂಡುಗಳ ಬೆಳವಣಿಗೆಗೆ ನೆರವಾಗುತ್ತವೆ. ಹೀಗೆ ನಡೆಯುವ ರಾಸಾಯನಿಕ ಚಟುವಟಿಕೆಗಳಿಗೆ ದೊಳೆಗಳು (enzymes) ನೆರವನ್ನು ನೀಡುತ್ತವೆ. ಈ ದೊಳೆಗಳು ರಾಸಾಯನಿಕ ಚಟುವಟಿಕೆಗೆ ಬಿರುಗೆ (catalyst)ಯಂತೆ ಕೆಲಸ ಮಾಡುತ್ತವೆ. ಗಿಡದ ಸೂಲುಗೂಡುಗಳ ರಾಸಾಯನಿಕ ಚಟುವಟಿಕೆಯಲ್ಲಿ ‘ಬೆಳಕಿನ ಅಡುಗೆ ‘(photosynthesis) ಕೂಡ ಒಂದು. ಹೀಗೆ ಬೆಳಕಿನ ಒಂದುಗೆಗೆ ನೆರವಾಗುವ ದೊಳೆಗಳು ಕೆಲವು ಹುಳಿಯಳತೆ (pH) ಮತ್ತು ಬಿಸುಪಿನಲ್ಲಿ ಚೆನ್ನಾಗಿ ಕೆಲಸಮಾಡುತ್ತವೆ. ಅತಿ ಕಡಿಮೆ ಹುಳಿಯಳತೆ ಮತ್ತು ಕಡಿಮೆ ಬಿಸುಪು ಇದ್ದರೆ ಈ ದೊಳೆಗಳ ಕೆಲಸ ಕುಂದುತ್ತದೆ. ಹಾಗೆಯೇ ಅತಿ ಹೆಚ್ಚು ಹುಳಿಯಳತೆ ಮತ್ತು ಬಿಸುಪು ಇದ್ದರೂ ಈ ದೊಳೆಗಳು ತಮ್ಮ ಕೆಲಸಮಾಡಲಾರವು ಮತ್ತು ಸಾಯುಲೂ ಬಹುದು. ಹಾಗಾಗಿ, ಈ ದೊಳೆಗಳು ಚೆನ್ನಾಗಿ ತಮ್ಮ ಬಿರುಗೆಯ ಕೆಲಸವನ್ನು ಚೆನ್ನಾಗಿ ಮಾಡಲು ಒಂದು ಒಳ್ಳೆಯ ಬಿಸುಪು ಇರಬೇಕಾಗುತ್ತದೆ. ದೊಳೆಗಳ ಬಗೆಯ ಆಧಾರದ ಮೇಲೆ ಅವು ಹೆಚ್ಚು ಕೆಲಸ ಮಾಡುವ ಬಿಸುಪು ಬೇರೆ ಬೇರೆಯಾಗಿರುತ್ತದೆ.

ಹಸಿರುಮನೆಯ ಒಳಗೆ ಹೊರಗಿನ ಗಾಳಿಗಿಂತ ಹೆಚ್ಚಿನ ಬಿಸುಪು ಇರುವುದರಿಂದ ಗಿಡದ ಸೂಲುಗೂಡುಗಳ ದೊಳೆಗಳು ಈ ಬಿಸುಪಿನಲ್ಲಿ ತಮ್ಮ ಕೆಲಸವನ್ನು ಚೆನ್ನಾಗಿ ನಡೆಸಿ ಬೆಳಕಿನ ಒಂದುಗೆಯನ್ನು ನಡೆಸುತ್ತಿರುತ್ತವೆ. ಗಿಡಗಳಿಗೆ ಬೇಕಾದ ಬಿಸುಪನ್ನು ಮೊದಲೇ ತಿಳಿದುಕೊಂಡು ಆ ಬಿಸುಪನ್ನು ಹಸಿರುಮನೆಯ ಒಳಗೆ ಕಾದುಕೊಳ್ಳಬೇಕಾಗುತ್ತದೆ. ಒಂದು ವೇಳೆ ನೇಸರನ ಬೆಳಕು ಹೆಚ್ಚಾಗಿ ಹಸಿರುಮನೆಯ ಒಳಗಿನ ಬಿಸುಪು ಬೇಕಾದ ಬಿಸುಪಿಗಿಂತ ಹೆಚ್ಚಾದರೆ ಗಾಳಿಕಿಂಡಿಗಳ (Ventilator) ಮೂಲಕ ಬಿಸಿಗಾಳಿಯನ್ನು ಹೊರಹಾಕಿ ಹೊರಗಿನ ತಂಪುಗಾಳಿಯನ್ನು ಹಸಿರುಮನೆಯ ಒಳಗೆ ಬರುವಂತೆ ಏರ್ಪಾಡು ಮಾಡಬೇಕಾಗುತ್ತದೆ. ಅದಕ್ಕಾಗಿ ಹಸಿರುಮನೆಯಲ್ಲಿ ಗಾಳಿಕಿಂಡಿಗಳನ್ನು ಇಟ್ಟಿರಬೇಕಾಗುತ್ತದೆ. ಹಸಿರುಮನೆಯ ಕಿಟಕಿ ಬಾಗಿಲುಗಳು ಕೂಡ ಗಾಳಿಕಿಂಡಿಗಳಾಗಿ ಕೆಲಸ ಮಾಡುತ್ತವೆ. ಹೀಗೆ ಹಗಲೆಲ್ಲಾ ಬಿಸುಪಿನಲ್ಲಿ ಹೆಚ್ಚಿನ ಏರುಪೇರಾಗದೇ, ಬೇಕಾದ ಬಿಸುಪನ್ನು ಕಾಯ್ದುಕೊಳ್ಳುವುದರಿಂದ ಗಿಡದ ದೊಳೆಗಳು ನೇಸರನ ಬೆಳಕು ಸಿಗುವವರೆಗೂ ಚೆನ್ನಾಗಿ ಕೆಲಸಮಾಡಿ ಬೆಳಕಿನ ಅಡುಗೆಯನ್ನು ನಡೆಸುತ್ತವೆ. ಇದರಿಂದ ಹಸಿರು ಮನೆಯ ಒಳಗೆ ಗಿಡಗಳು ಬೇಗನೇ ಮತ್ತು ಚೆನ್ನಾಗಿ ಬೆಳೆಯುತ್ತವೆ.

2. ಹೆಚ್ಚಿನ ತೇವ (humidity) ಗಿಡದ ಬೆಳವಣಿಗೆಗೆ ಉಪಕಾರಿ:
ನೇಸರನ ಬೆಳಕಿದ್ದಾಗ ಬೆಳಕಿನ ಒಂದುಗೆಯನ್ನು ಗಿಡಗಳು ನಡೆಸುತ್ತವೆ ಎಂದು ನಾವು ಮೊದಲೇ ತಿಳಿದಿದ್ದೇವೆ. ಈ ಬೆಳಕಿನ ಒಂದುಗೆಗೆ ನೀರನ್ನೂ ಕೂಡ ಗಿಡಗಳು ಬಳಸುತ್ತವೆ. ಹಾಗಾಗಿ ಹಸಿರುಮನೆಯ ಒಳಗೆ ಸಾಕಷ್ಟು ನೀರಿನ ಏರ್ಪಾಡು ಗಿಡಗಳಿಗೆ ಬೇಕಾಗುತ್ತದೆ. ಮಣ್ಣಿನಿಂದ ಆವಿಯಾದ ನೀರಿನ ತೇವ ಮತ್ತು ಗಿಡಗಳ ಬೆಳಕಿನ ಅಡುಗೆಯಿಂದ ಹೊರಬಂದ ತೇವ ಹಸಿರುಮನೆಯ ಒಳಗೆಯೇ ಇರುತ್ತದೆ, ಗಾಜು/ಪ್ಲಾಸ್ಟಿಕ್ ಗೋಡೆಗಳನ್ನು ದಾಟಿ ತೇವಾಂಶವು ಹೊರಹೋಗಲಾಗದು. ಇದರಿಂದ ಮಣ್ಣಿನಲ್ಲಿರುವ ನೀರು ಬೇಗನೆ ಆವಿಯಾಗುವುದನ್ನು ತಪ್ಪಿಸಬಹುದು ಮತ್ತು ಈ ನೀರನ್ನು ಗಿಡಗಳ ಬೆಳಕಿನ ಅಡುಗೆಗೆ ಒದಗಿಸುತ್ತಿರ ಬಹುದು. ಒಂದು ವೇಳೆ, ಹಸಿರು ಮನೆಯ ಒಳಗೆ ತೇವಾಂಶವು ಅಗತ್ಯಕ್ಕಿಂತ ಹೆಚ್ಚಾದರೆ ಗಿಡಗಳಿಗೆ ಬೆಳಕಿನ ಅಡುಗೆಯಿಂದ ತೇವಾಂಶವನ್ನು ಹೊರಹಾಕಲು ತೊಡಕಾಗುತ್ತದೆ. ಹಾಗಾಗಿ ತೇವಾಂಶವನ್ನು ಬೇಕಾದಷ್ಟು ಮಾತ್ರ ಕಾಯ್ದುಕೊಳ್ಳಲು ಮತ್ತೊಮ್ಮೆ ಗಾಳಿಕಿಂಡಿಗಳ ನೆರವನ್ನು ಪಡೆಯಬಹುದು. ಒಳಗಿರುವ ತೇವದ ಗಾಳಿ ಹೊರಹೋಗಿ ಹೊರಗಿನ ಗಾಳಿ ಒಳಬರುವಂತೆ ಗಾಳಿಕಿಂಡಿಗಳನ್ನು ಹಸಿರುಮನೆಗಳಲ್ಲಿ ಅಳವಡಿಸಲಾಗಿರುತ್ತದೆ.

3. ಹೊರಗಿನ ಕ್ರಿಮಿಕೀಟಗಳಿಂದ ಕಾಯುವುದು.
ಹಸಿರುಮನೆಯು ಗಾಜು/ಪ್ಲಾಸ್ಟಿಕ್ ನ ಗೋಡೆಗಳಿಂದ ಕಟ್ಟಿರುವುದರಿಂದ ಗಿಡಗಳ ಬೆಳವಣಿಗೆಗೆ ತೊಂದರೆ ಕೊಡುವ ಹೊರಗಿನ ಕ್ರಿಮಿಕೀಟಗಳಿಂದ ದೂರವಿಡಬಹುದಾಗಿದೆ.

4. ಕೆಟ್ಟ ಗಾಳಿಪಾಡಿನಿಂದ ಕಾಯುವುದು.
ಹಸಿರುಮನೆಯ ಗಿಡಗಳನ್ನು ಅತಿ ಹೆಚ್ಚಿನ ಮಳೆ, ಗಾಳಿ ಮತ್ತು ಬಿಸಿಲಿನಿಂದ ಆಗುವ ತೊಂದರೆಗಳಿಂದ ಕಾಪಾಡಬಹುದು. ಅಲ್ಲದೇ ಇರುಳಿನ ಹೆಚ್ಚು ಹೊತ್ತು ಹಸಿರುಮನೆಯ ಒಳಗೆ ಬೆಚ್ಚಗಿನ ಗಾಳಿ ಇರುವುದರಿಂದ ತಂಪುಗಾಳಿಯಿಂದ ಗಿಡಗಳಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು. ಕೆಲವು ಕಡೆ ಹಸಿರುಮನೆಗಳಿಗೆ ಹಸಿರುಬಣ್ಣದ ಗಾಜು/ಪ್ಲಾಸ್ಟಿಕ್ ಅನ್ನು ಬಳಸಿರುತ್ತಾರೆ, ಇದು ನೇಸರನ ಬಿಸಿಲು ಅಗತ್ಯಕ್ಕಿಂತ ಹೆಚ್ಚಾಗಿ ಹಸಿರುಮನೆಯ ಒಳಗೆ ಬರದಂತೆ ತಡೆಯುತ್ತದೆ.

ಹೀಗೆ, ಹಸಿರುಮನೆಯನ್ನು ಬಳಸಿ ಗಿಡಗಳನ್ನು ಬೆಳಸುವುದರಿಂದ ಗಿಡಗಳಿಗೆ ಬೇಕಾದ ಬಿಸುಪು ಮತ್ತು ತೇವಾಂಶ ದಿನದ ಹೆಚ್ಚುಕಾಲ ಸಿಗುತ್ತಿರುತ್ತದೆ. ಇದರಿಂದ ಗಿಡಗಳು ತಮ್ಮ ಬೆಳಕಿನ ಒಂದುಗೆಯನ್ನ್ಯು ನಡೆಸಿ ಆದಷ್ಟು ಬೇಗ ಮತ್ತು ಚೆನ್ನಾಗಿ ಬೆಳೆಯುತ್ತವೆ. ಹಸಿರುಮನೆಯ ಬಿಸುಪು ಹಾಗು ತೇವಾಂಶವನ್ನು ನಮಗೆ ಬೇಕಾದ ಬಗೆಯಲ್ಲಿ ಹಿಡಿದಿಟ್ಟುಕೊಳ್ಳಬಹುದಾಗಿದೆ. ಇದು ಹೆಚ್ಚು ಇಳುವರಿ ತರುವಲ್ಲಿ ನೆರವಾಗುತ್ತದೆ.

(ಮಾಹಿತಿ ಸೆಲೆ: www.ishs.org420magazine)

(ಚಿತ್ರ ಸೆಲೆ: wikipedia)

ಗಾಳಿಯಿಂದ ಕುಡಿಯುವ ನೀರನ್ನು ಪಡೆಯಲೊಂದು ಚಳಕ

ಜಯತೀರ್ಥ ನಾಡಗೌಡ.

ಊಟ ಸಿಗದಿದ್ದರೂ ಮನುಷ್ಯ ಬದುಕಬಲ್ಲ. ಆದರೆ ಉಸಿರ್ಗಾಳಿ(Oxygen) ಮತ್ತು ಕುಡಿಯುವ ನೀರು ಇಲ್ಲದೇ ಹೋದರೆ ನಮ್ಮ ಬದುಕನ್ನು ಊಹಿಸಿಕೊಳ್ಳಲಾಗದು. ಈ ಜಗತ್ತಿನ 2/3 ರಷ್ಟು ನೀರಿನಿಂದಲೇ ತುಂಬಿದೆ, ಆದರೆ ಇದರಲ್ಲಿ ಕುಡಿಯಲು ತಕ್ಕುದಾದ ನೀರು ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಂತೂ ವಾತಾವರಣದ ಏರುಪೇರುಗಳಿಂದ ಚೊಕ್ಕವಾದ ಕುಡಿಯುವ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ಕುಡಿಯುವ ನೀರು ಪಡೆಯಲು ಇಂದಿನ ದಿನಗಳಲ್ಲೂ ಮಂದಿ ಹಲವಾರು ಮೈಲಿ ಸಾಗುವ ಪರಿಸ್ಥಿತಿ ಭಾರತದಲ್ಲಿದೆ.

ಆಫ್ರಿಕಾ ಖಂಡದ ಹಿಂದುಳಿದ ನಾಡುಗಳಲ್ಲೊಂದಾದ ಇಥಿಯೋಪಿಯಾ (Ethiopia) ಕೂಡ ಇದಕ್ಕೆ ಹೊರತಾಗಿಲ್ಲ. ಇಥಿಯೋಪಿಯಾ ನಾಡಿನ ಕೆಲವೆಡೆ ಒಳ್ಳೆಯ ನೀರು ಪಡೆಯಲು ಸುಮಾರು ಆರು ಗಂಟೆ ಅಲೆದಾಡಬೇಕಂತೆ. ಈ ನಾಡಿನಲ್ಲಿ ಕುಡಿಯುವ ನೀರನ್ನು ಹುಡುಕಿ ತರಲು ಮಕ್ಕಳು-ಮಂದಿ ಸೇರಿ ವರುಶಕ್ಕೆ ಸುಮಾರು 4 ಸಾವಿರ ಕೋಟಿಯಷ್ಟು ಗಂಟೆಗಳನ್ನು ಬಳಸುತ್ತಾರಂತೆ. ಇಷ್ಟಾದರೂ ಕುಡಿಯಲು ತಕ್ಕುದಾದ ನೀರು ಸಿಗುವುದು ಕಷ್ಟದ ಕೆಲಸ. ಹತ್ತಿರದಲ್ಲಿರುವ ಕೆರೆ, ಬಾವಿ, ಹೊಂಡದ ನೀರು, ಕೊಳಚೆ ಮತ್ತು ನಂಜಿನ ವೈರಸ್ ಗಳಿಂದ ಕೂಡಿರುತ್ತವೆ. ಪ್ರತಿ ವರುಶ ನೂರಾರು ಕೋಟಿ ಮಂದಿ ಆಫ್ರಿಕಾದಲ್ಲಿ ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿದ್ದಾರೆ.

ಈ ವಿಷಯದ ಆಳವರಿತ ಹಾಲಿವುಡ್ ನ ಹೆಸರುವಾಸಿ ನಟ ಹಾಗು ವಾಟರ್ ಡಾಟ್ ಆರ‍್ಗ್ (water.org) ಕೂಟ ಹುಟ್ಟು ಹಾಕಿದ ಮ್ಯಾಟ್ ಡಮೋನ್ (Matt Damon), ಇವರೊಂದಿಗೆ ಮೈಕ್ರೊಸಾಫ್ಟ್ ಕೂಟದ ಬಿಲ್ಲ್ ಗೇಟ್ಸ್ (Bill Gates) ಒಂದಾಗಿ ಹೊಸ ಹಮ್ಮುಗೆಯೊಂದಕ್ಕೆ ಕೈ ಹಾಕಿದ್ದುಂಟು. ಕೊಳಚೆ ಹಾಗೂ ಬಳಸಿದ ನೀರನ್ನು ಮರಳಿ ಕುಡಿಯುವ ನೀರಾಗಿ ಮಾರ್ಪಡಿಸುವುದೇ ಈ ಹಮ್ಮುಗೆಯ ಕೆಲಸ. ಯಾವುದೇ ಲಾಭದ ಉದ್ದೇಶವಿರದ ಈ ಕೆಲಸಕ್ಕೆಂದೇ ಇಲ್ಲಿಯವರೆಗೆ ನೂರಾರು ಲಕ್ಷ ರೂಪಾಯಿಗಳ ವೆಚ್ಚ ಮಾಡಲಾಗುತ್ತಿದೆ. ಇಂತ ಬೆನ್ನುತಟ್ಟುವ ಕೆಲಸವೊಂದು ನಡೆಯುತ್ತಿದ್ದರೂ ಇದು ಪರಿಣಾಮಕಾರಿಯಾಗಿರಲಾರದು ಎಂಬುದು ಕೆಲವರ ವಾದ. ಈ ಚಳಕ ತೊಡಕಿನಿಂದ ಕೂಡಿದೆ, ಇಥಿಯೋಪಿಯಾದ ಹಳ್ಳಿಗರು ಇದನ್ನು ಬಳಸಿಕೊಳ್ಳುವುದು ಮತ್ತು ಇದು ಕೆಟ್ಟಾಗ, ಸರಿಪಡಿಸುವುದು ಸುಲಭವಲ್ಲವೆಂಬುದು ವಾದಿಸುವರ ಹೇಳಿಕೆ. ಈ ಹಮ್ಮುಗೆಯಲ್ಲಿ ಹಣದ ವೆಚ್ಚ ಹೆಚ್ಚಿದ್ದು ಮುಂಬೊತ್ತಿನ (future) ದಿನಗಳಲ್ಲಿ ಇದನ್ನು ಸರಿದೂಗಿಸಿಕೊಂಡು ಹೋಗುವದಕ್ಕೂ ಹೆಚ್ಚಿನ ಹಣ ತಗಲುತ್ತದೆಂದು ಇವರು ಹೇಳಿದ್ದಾರೆ.

ಕುಡಿಯುವ ನೀರನ್ನು ಚೊಕ್ಕಗೊಳಿಸಲು ಹಲವರು ಹರಸಾಹಸ ಪಡುತ್ತಿರುವ ಈ ಹೊತ್ತಿನಲ್ಲೇ ಅರ್ಟುರೋ ವಿಟ್ಟೋರಿ (Arturo Vittori) ಎಂಬ ಕೈಗಾರಿಕೆ ಈಡುಗಾರ (Industrial Designer) ಮತ್ತು ಅವರ ಜೊತೆ ಕೆಲಸಗಾರ ಆಂಡ್ರಿಯಾಸ್ ವೊಗ್ಲರ್ (Andreas Vogler) ಇಬ್ಬರೂ ಸೇರಿ ಸುಲಭ, ಸರಳ ಮತ್ತು ಅಗ್ಗದ ಮಾಡುಗೆಯೊಂದನ್ನು (product) ಮುಂದಿಟ್ಟಿದ್ದಾರೆ. ಈ ಉತ್ಪನ್ನದ ಹೆಸರು ವಾರ್ಕಾ ವಾಟರ್. ಬೀಸುವ ಗಾಳಿಯಲ್ಲಿರುವ ನೀರನ್ನು ಹಿಡಿದು ಅದನ್ನೇ ಕುಡಿಯುವ ನೀರಾಗಿ ಮಾರ್ಪಡಿಸುವ ಚಳಕ. ವಾರ್ಕಾ ವಾಟರ್ (Warka Water) ಅನ್ನು ತೊಡಕಿಲ್ಲದೆ ಸುಲಭವಾಗಿ ಜೋಡಿಸಬಹುದಾಗಿದ್ದು ಇದರ ಬೆಲೆಯು ಅಗ್ಗವಾಗಿದೆ.

ವಾರ್ಕಾ ವಾಟರ್ ಮೂವತ್ತು ಅಡಿ ಉದ್ದವಾಗಿದ್ದು ಹೂದಾನಿಯ ಆಕಾರದ ಗೋಪುರವೆನ್ನಬಹುದು. ಇಥಿಯೋಪಿಯಾದ ಪ್ರಮುಖ ಮರವೊಂದರಿಂದ ವಾರ್ಕಾ ಎನ್ನುವ ಹೆಸರು ಮೂಡಿದೆ. ವಾರ್ಕಾ ವಾಟರ್ ಗೋಪುರದ ಹೊರಮೈ ಇಲಾಸ್ಟಿಕ್ ಕೊಳವೆಯಂತ ವಸ್ತುವಿನಿಂದ ತಯಾರಿಸಲಾಗಿದೆ. ಇದರಿಂದ ತೂಕವು ಹಗುರವಾಗಿರುತ್ತದೆ. ಈ ಕೊಳವೆಗಳು ಒಂದಕ್ಕೊಂದು ಬದಿಯಲ್ಲಿ ಗಟ್ಟಿಯಾಗಿ ಹೆಣೆಯಲ್ಪಟ್ಟಿರಿವುದರಿಂದ ಜೋರಾಗಿ ಬೀಸುವ ಗಾಳಿಗೆ ಮಯ್ಯೊಡ್ಡಿದಾಗಲೂ, ಗಟ್ಟಿಯಾಗಿ ನಿಂತು ಗಾಳಿಯು ತಮ್ಮ ಮೂಲಕ ಹಾಯ್ದು ಹೋಗುವಂತೆ ನೋಡಿಕೊಳ್ಳುತ್ತವೆ. ಇದರೊಳಗೆ ನೈಲಾನ್ ಬಲೆಯೊಂದನ್ನು ತೂಗು ಹಾಕಲಾಗಿದ್ದು ಇದು ಚೀನಿಯರ ದೊಡ್ಡ ಕೈಬೆಳಕಿನಂತೆ (Lantern) ಕಾಣಿಸುತ್ತದೆ. ಜೋರು ಗಾಳಿ ಇದರಲ್ಲಿ ಹಾಯ್ದು ಹೋದಾಗ ಗಾಳಿಯಲ್ಲಿನ ನೀರಿನ ಇಬ್ಬನಿಗಳು ಕೂಡಿಡಲ್ಪಡುತ್ತವೆ. ಗಾಳಿಯು ಇಂಗುತ್ತಲೆ ಈ ಇಬ್ಬನಿಯ ಹನಿಗಳು ನೀರಾಗಿ ಕೆಳ ಭಾಗಕ್ಕೆ ಹರಿಯುತ್ತ ಬುಗುಣಿಯಲ್ಲಿ ಬಂದು ಸೇರುತ್ತವೆ. ಈ ಬುಗುಣಿಗೆ ಕೊಳವೆ ಜೋಡಿಸಿ ನಲ್ಲಿಯಂತೆ ನೀರು ಪಡೆಯಬಹುದಾಗಿರುತ್ತದೆ.

ವಿಟ್ಟೋರಿಯವರ ಈ ಅರಕೆ ಹೊಸದೇನು ಅಲ್ಲ, ಈ ಹಿಂದೆ ಪ್ರಖ್ಯಾತ ಎಮ್.ಐ.ಟಿ (MIT) ಕಲಿಕೆವೀಡಿನ ಓದುಗನೊಬ್ಬ ಇದನ್ನೇ ಹೋಲುವ ಎಣಿಕೆಯೊಂದನ್ನು(Concept)  ಬೆಳವಣಿಗೆಗೊಳಿಸಿದ್ದ. ಆದರೆ ಈ ಹಿಂದೆ ಬೆಳವಣಿಗೆ ಹೊಂದಿದ ಎಲ್ಲ ಎಣಿಕೆಗಳಿಂತ ವಿಟ್ಟೋರಿಯವರ ಮಾದರಿಯು ಅಗ್ಗದ ಬೆಲೆಯಲ್ಲಿ ಹೆಚ್ಚು ನೀರನ್ನು ನೀಡುವಂತದ್ದಾಗಿರುವುದರಿಂದ ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ.

ಇಥಿಯೋಪಿಯಾದಂತ ನಾಡುಗಳಲ್ಲಿ ಮಂದಿಗೆ ಬೇಕಾಗುವ ಸೌಕರ್ಯಗಳ ಕೊರತೆಯಿದೆ. ಕೊಳವೆ ಬಾವಿಯನ್ನು ಮಾಡಿಸಲು ಸಾವಿರಾರು ಅಡಿ ಭೂಮಿಯನ್ನು ಕೊರೆಯಬೇಕು. ನಂತರ ಭೂಮಿಯಿಂದ ನೀರನ್ನು ಮೇಲೆತ್ತಲು ಒತ್ತುಕಗಳನ್ನು(Pump) ಬಳಸಬೇಕಾಗುತ್ತದೆ. ನೆನಪಿರಲಿ ಈ ಒತ್ತುಕಗಳಿಗೆ ಮಿಂಚಿನ ಕಸುವಿನ(Electricity) ಅಗತ್ಯವಿರುತ್ತದೆ. ಇಷ್ಟೆಲ್ಲ ಮಾಡಲು ಸಾಕಷ್ಟು ದುಡ್ಡನ್ನು ಹೂಡಿಕೆ ಮಾಡಬೇಕು. ಇದಕ್ಕೆ ವಾರ್ಕಾ ವಾಟರ್ ಪರಿಹಾರವಾಗಲಿದೆ ಎಂಬುದು ವಿಟ್ಟೋರಿಯವರ ಅಂಬೋಣ.

ವಾರ್ಕಾ ಗೋಪುರಗಳ ಒರೆಗೆ ಹಚ್ಚುವ(Testing) ಕೆಲಸ ನಡೆಯುತ್ತಿದ್ದು, ಇದು ದಿನವೊಂದಕ್ಕೆ 25 ಗ್ಯಾಲನ್ ಅಂದರೆ ಸುಮಾರು 95 ಲೀಟರ್ ಗಳಶ್ಟು ನೀರನ್ನು ಒದಗಿಸಬಲ್ಲದು. ಬಿಸುಪಿನ ಏರುಪೇರು ಹೆಚ್ಚಿರುವ ಮರಳುಗಾಡಿನಲ್ಲೂ ಇವುಗಳ ಕೆಲಸ ಪರಿಣಾಮಕಾರಿಯಾಗಿರುವ ಸುದ್ದಿ ವಿಟ್ಟೋರಿಯವರ ಹುರುಪು ಹೆಚ್ಚಾಗಿಸಿದೆ. ಈ ಗೋಪುರಗಳ ಕಟ್ಟಲು ಸುಲಭವಾಗಿ ಅಳಿದುಹೋಗಬಲ್ಲ ಸಾಮಗ್ರಿ ಬಳಸಲಾಗಿದೆ ಇದರಿಂದ ವಾತಾವರಣಕ್ಕೂ ಯಾವುದೇ ತೊಂದರೆಯುಂಟಾಗುವುದಿಲ್ಲ. ಅಲ್ಲದೇ ಸ್ಥಳೀಯರಿಗೆ ಇದರ ಬಳಕೆ, ಜೋಡಿಸುವಿಕೆ ಮತ್ತು ಸರಿದೂಗಿಸುವಿಕೆಯ ಬಗ್ಗೆ ಅರಿವು ಮಾಡಿಕೊಟ್ಟರೆ ಸುಲಭವಾಗಿ ಕಾಯ್ದುಕೊಂಡು ಹೋಗಬಹುದಂತೆ. ಇದಕ್ಕೆಂದೇ ವಿಶೇಷ ಪಳಗಿದ ಕೆಲಸಗಾರರು ಬೇಕಿಲ್ಲ.

ವಾರ್ಕಾ ಗೋಪುರವೊಂದನ್ನು ಆಣಿಗೊಳಿಸಿ ಜೋಡಿಸಲು 500 ಡಾಲರ್ ಹಣ ಸಾಕಂತೆ. ಬಿಲ್ ಗೇಟ್ಸ್, ಮ್ಯಾಟ್ ಡಮೋನ್ ಹಮ್ಮುಗೆ ಬಳಸುತ್ತಿರುವ ಕೊಳಚೆ ನೀರು ಚೊಕ್ಕಗೊಳಿಸುವ ಚಳಕಕ್ಕಿಂತ ಮುಕ್ಕಾಲು ಭಾಗ ಕಡಿಮೆ (ಇದರ ಬೆಲೆ ಸುಮಾರು 2200 ಡಾಲರ್ ). ಹೆಚ್ಚಿನ ಸಂಖ್ಯೆಯಲ್ಲಿ ಅಣಿಗೊಳಿಸಿದರೆ ಬೆಲೆಯು ಇನ್ನೂ ಅಗ್ಗವಾಗಿರಲಿದೆ ಎಂದು ಹೇಳುತ್ತಾರೆ ವಿಟ್ಟೋರಿ. ಮುಂದಿನ ದಿನಗಳಲ್ಲಿ ವಾರ್ಕಾ ವಾಟರ್ ಗೋಪುರಗಳನ್ನು ಇಥಿಯೋಪಿಯಾದಲ್ಲಿ ನೆಡಲು ತಯಾರಿ ನಡೆಸಿರುವ ವಿಟ್ಟೋರಿಯವರು ಇದಕ್ಕೆ ಬಂಡವಾಳ ಹೂಡಿಕೆದಾರರ ಹುಡುಕುವ ಕೆಲಸದಲ್ಲಿದ್ದಾರೆ.

ವಿಟ್ಟೋರಿಯವರು ಹೇಳುವ ಪ್ರಕಾರ “ಚೊಕ್ಕ ಕುಡಿಯುವ ನೀರನ್ನು ಒದಗಿಸುವುದಷ್ಟೇ ಈ ಹಮ್ಮುಗೆಯ ಉದ್ದೇಶವಲ್ಲ, ಕುಡಿಯುವ ನೀರು ಹೊತ್ತು ತರಲು ಇಥಿಯೋಪಿಯಾ ಮಕ್ಕಳು ಪೋಲು ಮಾಡುತ್ತಿರುವ ಹೊತ್ತನ್ನು ಇದು ಅಳಿಸಿಹಾಕಬಲ್ಲದು. ಈ ಹೊತ್ತನ್ನು ಕಲಿಕೆಯಂತ ಇತರೆ ಕೆಲಸಗಳಲ್ಲಿ ತೊಡಗಿಸಿದರೆ ಮಕ್ಕಳ ಮುಂಬೊತ್ತು ಬೆಳಗಲಿದೆ”. ಇಂತ ಸಾಮಾಜಿಕ ಕಳಕಳಿಯ ಅರಕೆಗಳು ಜಗತ್ತಿನಲ್ಲಿ ಇಮ್ಮಡಿಗೊಳ್ಳಲಿ, ವಿಟ್ಟೋರಿಯವರ ಹಮ್ಮುಗೆಗೆ ಒಳ್ಳೆಯದಾಗಲಿ.

 

ಮರಗಿಡಗಳು ಬೆಳೆಯುವುದು ಹೇಗೆ?

ರತೀಶ ರತ್ನಾಕರ.

ಚಳಿಗಾಲದ ಮೊದಲು ತನ್ನ ಎಲೆಗಳನ್ನು ಉದುರಿಸಿ ಚಳಿಗಾಲದುದ್ದಕ್ಕೂ ಮರಗಿಡಗಳು ಯಾವುದೇ ಹೊಸ ಎಲೆಗಳನ್ನು ಚಿಗುರಿಸದೆ ಒರಗಿದ (dormant) ಸ್ಥಿತಿಯಲ್ಲಿ ಇರುತ್ತವೆ. ಮಳೆ ಬಿದ್ದೊಡನೆ ಚಿಗುರಿಕೊಂಡು ತನ್ನ ಬೆಳವಣಿಗೆಯನ್ನು ಮುಂದುವರಿಸುತ್ತವೆ. ಮರಗಳ ಈ ಬೆಳವಣಿಗೆ ಹೇಗೆ ನಡೆಯುತ್ತದೆ ಎಂದು ಒಮ್ಮೆ ಇಣುಕಿ ನೋಡಿಕೊಂಡು ಬರೋಣ.

ಮೊಳಕೆಯೊಡೆದ ಗಿಡದ ಎಲೆಯು ನೇಸರನ ಬೆಳಕು, ಮಣ್ಣಿನಿಂದ ಸಿಗುವ ನೀರು, ಆರಯ್ಕೆ (Nutrition), ಗಾಳಿಯಲ್ಲಿರುವ ಕಾರ್ಬನ್ ಡಯ್ ಆಕ್ಸಯ್ಡ್ ಮತ್ತು ಎಲೆಯಲ್ಲಿರುವ ಎಲೆಹಸಿರು (Chlorophyl) ಅನ್ನು ಬಳಸಿಕೊಂಡು ‘ಬೆಳಕಿನ ಅಡುಗೆ’ (Photo Synthesis)ಯ ಮೂಲಕ ಗಿಡಕ್ಕೆ ಬೇಕಾದ ಊಟವನ್ನು ಸಿದ್ದ ಮಾಡುತ್ತದೆ, ಜೊತೆಗೆ ಆಕ್ಸಿಜನ್ ಅನ್ನು ಹೊರಗಾಳಿಗೆ ಬಿಡುತ್ತದೆ. ಹೀಗೆ ಸಿದ್ದ ಮಾಡಿದ ಊಟವು ಗಿಡದ ಉಳಿದ ಭಾಗಗಳಿಗೆ ಹರಡಲಾಗುತ್ತದೆ ಇದು ಗಿಡದ ಬೆಳವಣಿಗೆಯಲ್ಲಿ ಮುಖ್ಯವಾದ ಪಾತ್ರ ವಹಿಸುತ್ತದೆ. ಮರಗಿಡಗಳು ಎರೆಡು ಬಗೆಯಲ್ಲಿ ಬೆಳೆಯುತ್ತವೆ, ಅವುಗಳ ಕುರಿತು ಅರಿಯೋಣ ಬನ್ನಿ.

ಮೊದಲನೆಯ ಬೆಳವಣಿಗೆಯು ಮರಗಿಡದ ಕೊಂಬೆ/ರಕ್ಕೆಗಳಲ್ಲಿ ನಡೆಯುತ್ತದೆ. ಗಿಡವು ಎತ್ತರವಾಗಿ ಬೆಳೆಯಲು ಇದು ನೆರವಾಗುತ್ತದೆ. ರಕ್ಕೆಯ ತುದಿಯಲ್ಲಿ ಕುಡಿ (Meristem) ಇರುತ್ತದೆ ಇದು ಗಿಡದ ಬೆಳವಣಿಗೆಗೆ ಬೇಕಾದ ಒಂದೇ ಬಗೆಯ ಸೂಲುಗೂಡುಗಳನ್ನು ಹೊಂದಿರುತ್ತದೆ. ಗಿಡದ ಬೇರಿನಿಂದ ನೀರು ಹಾಗು ಆರಯ್ಕೆ ದೊರೆತೊಡನೆ ಈ ಸೂಲುಗೂಡುಗಳು ಹಿಗ್ಗತೊಡಗುತ್ತವೆ ಮತ್ತು ಒಡೆದು ತನ್ನ ಎಣಿಕೆಯನ್ನು ಹೆಚ್ಚಿಸತೊಡಗುತ್ತದೆ. ಈ ಸೂಲುಗೂಡುಗಳ ಒಡೆಯುವಿಕೆಯಿಂದ ಗಿಡದ ಕೊಂಬೆಗಳಲ್ಲಿ ಕುಡಿಯು ಉದ್ದವಾಗಿ ಬೆಳೆದು ಹೊಸ ಎಲೆ/ಮೊಗ್ಗು ಚಿಗುರಲಾರಂಬಿಸುತ್ತದೆ. ಈ ಕೆಲಸ ನಡೆಯಲು ಗಿಡಕ್ಕೆ ಬೇಕಾದ ನೇಸರನ ಬೆಳಕು, ಕಾವು, ಗಾಳಿ, ನೀರು ಮತ್ತು ಮಣ್ಣಿನಿಂದ ಸಿಗುವ ಆರಯ್ಕೆಯ ಪಾತ್ರ ದೊಡ್ಡದಿದೆ. ಚಳಿಗಾಲದಲ್ಲಿ ಇರುಳಿಗಿಂತ ಹಗಲು ಚಿಕ್ಕದಾಗಿರುತ್ತದೆ, ಬಿಸುಪು ಕಡಿಮೆಯಿರುತ್ತದೆ, ಸಾಕಷ್ಟು ನೀರು ಸಿಗುವುದಿಲ್ಲ ಮತ್ತು ನೇಸರನ ಬೆಳಕಿನ ತೀವ್ರತೆ ಕೂಡ ಕಡಿಮೆಯಿರುತ್ತದೆ.

ಹಾಗಾಗಿ ಚಳಿಗಾಲದ ಗಾಳಿಪಾಡು ಒಟ್ಟಾರೆಯಾಗಿ ಮರಗಿಡಗಳ ಬೆಳವಣಿಗೆಗೆ ಅನುಕೂಲಕರವಾಗಿರುವುದಿಲ್ಲ. ಆದ್ದರಿಂದ ಇವು ಚಳಿಗಾಲದಲ್ಲಿ ಒರಗಿದ ಸ್ಥಿತಿಯಲ್ಲಿ ಇರುತ್ತವೆ. ಬೇಸಿಗೆ ಶುರುವಾಗುವ ಮುನ್ನ ಒಂದು ಮಳೆ ಬಿದ್ದೊಡನೆ ಮರಗಿಡಗಳ ಬೆಳವಣಿಗೆಗೆ ಬೇಕಾದ ಗಾಳಿಪಾಡು ಸಿಗುತ್ತದೆ ಮತ್ತು ಇವು ಚಿಗುರತೊಡಗುತ್ತವೆ. ಇದಲ್ಲದೇ, ಬೇರುಗಳ ತುದಿಯಲ್ಲಿಯೂ ಕೂಡ ಈ ಬೇರಿನ ಕುಡಿ (Root apical meristem) ಇರುತ್ತದೆ, ಇವು ಕೂಡ ತನ್ನ ಬೆಳವಣಿಗೆಗೆ ಬೇಕಾದ ಗಾಳಿಪಾಡು ಸಿಕ್ಕೊಡನೆ ತನ್ನ ಸೂಲುಗೂಡುಗಳನ್ನು ಹಿಗ್ಗಿಸಿ, ಒಡೆದು ಬೆಳೆಯುತ್ತಾ ಹೋಗುತ್ತವೆ. ಮರಗಿಡಗಳ ತಳಿಗಳಿಗೆ ತಕ್ಕಂತೆ ಬೇರಿನ ಇಲ್ಲವೇ ಕಾಂಡದ ಬೆಳವಣಿಗೆ ನಡೆಯುತ್ತದೆ.

ಎರಡನೆ ಬಗೆಯ ಬೆಳವಣಿಗೆಯಲ್ಲಿ ಬಗೆಯಲ್ಲಿ ಮರದ ಕಾಂಡವು ತನ್ನ ಅಗಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಮರದ ಕಾಂಡದಲ್ಲಿ ಒಟ್ಟು ನಾಲ್ಕು ಭಾಗಗಳಿರುತ್ತವೆ ಅವು ತೊಗಟೆ/ಸಿಪ್ಪೆ, ನೀರ‍್ಗೊಳವೆ (Xylem), ಕೂಳ್ಗೊಳವೆ(Phloem), ತಿರುಳು (Cambium) ಮತ್ತು ನಡುಮರ (heartwood). ಇವುಗಳ ಕುರಿತು ಮಾಹಿತಿಯನ್ನು ಪಡೆಯೋಣ.

ತಿರುಳು: ಕಾಂಡದಲ್ಲಿ ಬೆಳೆಯುವ ತುಂಬಾ ಮುಖ್ಯವಾದ ಭಾಗ ಇದಾಗಿದೆ. ಇದರ ಸೂಲುಗೂಡುಗಳು ಅತಿ ಹೆಚ್ಚು ಹುರುಪಿನಿಂದ ಇರುತ್ತವೆ, ಗಿಡದ ಬೆಳವಣಿಗೆಗೆ ಅನುಕೂಲಕರ ಗಾಳಿಪಾಡು ಸಿಕ್ಕಾಗ ತಿರುಳಿನಲ್ಲಿರುವ ಸೂಲುಗೂಡುಗಳು ಬೆಳೆದು ಒಡೆದು ಹೊಸ ಹೊಸ ಸೂಲುಗೂಡುಗಳಾಗು ಮಾರ್ಪಾಡಾಗುತ್ತವೆ. ಹೀಗೆ ಮೂಡಿದ ಕೆಲವು ಹೊಸ ಸೂಲುಗೂಡುಗಳು ತಿರುಳಿನ ಹೊರ ಭಾಗಕ್ಕೆ ಸಾಗಿ ಕೂಳ್ಗೊಳವೆ ಆಗುತ್ತದೆ. ಮತ್ತೆ ಕೆಲವು ಹೊಸ ಸೂಲುಗೂಡುಗಳು ತಿರುಳಿನ ಒಳಭಾಗಕ್ಕೆ ಸಾಗಿ ನೀರ‍್ಗೊಳವೆ ಆಗುತ್ತದೆ. ಹಾಗಾಗಿ ಈ ತಿರುಳು ಕೂಳ್ಗೊಳವೆ ಮತ್ತು ನೀರ‍್ಗೊಳವೆಯ ನಡುವೆ ಇರುತ್ತದೆ.

ನೀರ‍್ಗೊಳವೆ: ತಿರುಳಿನ ಒಳಭಾಗಕ್ಕೆ ಇರುವ ಈ ಕೊಳವೆಯು ತಿರುಳಿನಿಂದ ಒಳಭಾಗಕ್ಕೆ ಸರಿದ ಹೊಸ ಸೂಲುಗೂಡುಗಳಿಂದ ಆಗಿರುತ್ತದೆ. ಮರಗಿಡಗಳ ಬೇರಿನಲ್ಲಿ ಸಣ್ಣ ಸಣ್ಣ ಬೇರು ಕೂದಲುಗಳು ಇರುತ್ತವೆ, ಈ ಕೂದಲುಗಳ ನೆರವಿನಿಂದ ಮಣ್ಣಿನಲ್ಲಿರುವ ನೀರು ಮತ್ತು ಆರಯ್ಕೆಯನ್ನು ಬೇರುಗಳು ಎಳೆದುಕೊಳ್ಳುತ್ತವೆ. ಹೀಗೆ ಎಳೆದುಕೊಂಡ ನೀರು ಮತ್ತು ಆರಯ್ಕೆಯನ್ನು ನೀರ‍್ಗೊಳವೆಯ ಮೂಲಕ ಗಿಡದ ಎಲೆಗಳಿಗೆ ಸಾಗಿಸುತ್ತದೆ. ಮೊದಲೆ ತಿಳಿಸಿದಂತೆ ಗಿಡದ ಎಲೆಗಳ ಬೆಳಗಿನ ಒಂದುಗೆಗೆ ಇದು ಬೇಕಾಗುತ್ತದೆ. ಹೀಗೆ ನೀರ‍್ಗೊಳವೆಗಳು ನೆರವಾಗುತ್ತವೆ.

ನಡುಮರ: ತಿರುಳಿನಿಂದ ಹೊಸ ಹೊಸ ಸೂಲುಗೂಡುಗಳು ನೀರ‍್ಗೊಳವೆಯ ಜಾಗಕ್ಕೆ ಸರಿಯುತ್ತಿರುತ್ತವೆ ಹಾಗಾಗಿ ನೀರ‍್ಗೊಳವೆಯ ಸೂಲುಗೂಡುಗಳು ಮತ್ತಷ್ಟು ಒಳಕ್ಕೆ ಸರಿದು ಗಟ್ಟಿಯಾಗುತ್ತಾ ಹೋಗುತ್ತವೆ ಹೀಗೆ ಮರದ ಒಳಭಾಗಕ್ಕೆ ಸರಿದು ಗಟ್ಟಿಯಾದ ಸೂಲುಗೂಡುಗಳಿಂದ ನಡುಮರ ಉಂಟಾಗಿರುತ್ತದೆ. ಮರವು ಮೇಲಕ್ಕೆ ಬೆಳೆಯುತ್ತಿದ್ದಂತೆ ಬೇಕಾದ ಗಟ್ಟಿತನವನ್ನು ಇದು ಒದಗಿಸುತ್ತದೆ.

ಕೂಳ್ಗೊಳವೆ: ಬೆಳಕಿನ ಅಡುಗೆಯ (Photo Synthesis) ಮೂಲಕ ಎಲೆಗಳು ತನ್ನ ಊಟವನ್ನು ಸಿದ್ದ ಮಾಡುತ್ತವೆ ಎಂದು ಮೊದಲೇ ತಿಳಿದೆವು. ಹೀಗೆ ಸಿದ್ಧ ಮಾಡಿದ ಊಟವನ್ನು ಗಿಡದ ಉಳಿದ ಭಾಗಗಳಿಗೆ ಕೂಳ್ಗೊಳವೆಯ ಮೂಲಕ ಹರಡುತ್ತದೆ. ಕೂಳ್ಗೊಳವೆಯು ತಿರುಳಿನ ಹೊರಭಾಗಕ್ಕೆ ಇದ್ದು, ತಿರುಳಿನ ಹೊಸ ಸೂಲುಗೂಡುಗಳಿಂದ ಉಂಟಾಗಿರುತ್ತದೆ.

ತೊಗಟೆ/ಸಿಪ್ಪೆ: ತಿರುಳಿನ ಹೊಸ ಹೊಸ ಸೂಲುಗೂಡುಗಳು ಕೂಳ್ಗೊಳವೆಯ ಜಾಗಕ್ಕೆ ಸರಿಯುತ್ತಿರುತ್ತವೆ ಹಾಗಾಗಿ ಕೂಳ್ಗೊಳವೆಯ ಸೂಲುಗೂಡುಗಳು ಮತ್ತಷ್ಟು ಹೊರಕ್ಕೆ ಸರಿದು ಗಟ್ಟಿಯಾಗಿ ತೊಗಟೆ/ಸಿಪ್ಪೆ ಆಗುತ್ತದೆ. ಕಾಂಡದ ಒಳಭಾಗವನ್ನು ಗಾಳಿಪಾಡಿನಿಂದ ಕಾಪಾಡಲು ಇದು ನೆರವಾಗುತ್ತದೆ.

ಹೀಗೆ, ಕಾಂಡದ ತಿರುಳಿನಲ್ಲಿರುವ ಸೂಲುಗೂಡುಗಳು ಬೆಳೆದು ಒಡೆದು ಹೊಸ ಹೊಸ ಸೂಲುಗೂಡುಗಳಾಗಿ, ನೀರ‍್ಗೊಳವೆ, ಕೂಳ್ಗೊಳವೆ, ನಡುಮರ ಮತ್ತು ತೊಗಟೆ ಸಿಪ್ಪೆಗಳಾಗಿ ಅಗಲವಾಗಿ ಬೆಳೆಯುತ್ತಾ ಹೋಗುತ್ತದೆ. ಒಟ್ಟಾರೆಯಾಗಿ, ಮರದ ಬೆಳವಣಿಗೆಯು ಬೇಸಿಗೆ ಹಾಗು ಮಳೆಗಾಲದಲ್ಲಿ ಹೆಚ್ಚಾಗಿ ಇರುತ್ತದೆ ಮರಕ್ಕೆ ಬೇಕಾದ ಗಾಳಿಪಾಡು ಈ ಕಾಲಗಳಲ್ಲಿ ಸಿಗುವುದು ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ನಾವು ಮಾರ್ಚ್ ತಿಂಗಳಲ್ಲಿ ಬೀಳುವ ಮಳೆಗೆ ಮರಗಿಡಗಳ ತುಂಬೆಲ್ಲಾ ಚಿಗುರನ್ನು ನೋಡುತ್ತೇವೆ.

ಸೆಲೆ: www.sciencedirect.com hort.ifas.ufl.edu