3 ಫೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಪಠ್ಯಪುಸ್ತಕದ ಹೊರತಾಗಿ ಸರಳವಾಗಿ ತಿಳಿಸುವ ಪ್ರಯತ್ನ).
1) 3 ಬೇರೆ ಬೇರೆಯಾದ ತಂತಿಗಳನ್ನು ಬಳಸಿ ಕರೆಂಟ್ ಸಾಗಿಸುವುದಕ್ಕೆ 3 ಫೇಸ್ (ಹಂತ) ಅನ್ನುತ್ತಾರೆ. ಅಂದರೆ 1 ಫೇಸ್ನಲ್ಲಿ ಕರೆಂಟ್ ಸಾಗಿಸಲು 1 ತಂತಿ ಬೇಕಾದರೆ 10 ಫೇಸ್ಗೆ 10 ತಂತಿಗಳು ಬೇಕು. ಹಾಗಾದರೆ ಫೇಸ್ ಅಂದರೇನು? ಮುಂದೆ ತಿಳಿದುಕೊಳ್ಳೋಣ.
2) ಕರೆಂಟ್ ಅಲೆಯ ರೂಪದಲ್ಲಿ ಹೊಮ್ಮುತ್ತದೆ. ಕೆರೆಯಲ್ಲಿ ಕಲ್ಲು ಎಸೆದಾಗ ಚಿಕ್ಕ ತೆರೆಯ ಅಲೆಗಳು ಹೇಗೆ ಹೊಮ್ಮುವವೋ ಹಾಗೆ ಕರೆಂಟ್ ಕೂಡಾ ಅಲೆಗಳಂತೆ ಸಾಗುತ್ತದೆ. ಕಲ್ಲು ತಾಕಿದ ಸ್ಥಳದಿಂದ ಅಲೆಗಳು ಎಲ್ಲ ಕಡೆ ಹರಡುವುದನ್ನೂ ನೀವು ಗಮನಿಸಿರಬಹುದು. ಈಗ ಅದೇ ಅಲೆಗಳು ಒಂದು ಕೊಳವೆಯಲ್ಲಿ ಸಾಗಿದರೆ ಹೇಗಿರುತ್ತೆ ಅನ್ನುವುದನ್ನು ಊಹಿಸಿಕೊಳ್ಳಿ ಹೀಗೆನೇ ಕರೆಂಟ್ ಕೂಡಾ ಅಲೆಗಳಂತೆ ಒಂದು ತಂತಿಯಲ್ಲಿ ಏರಿಳಿತದೊಂದಿಗೆ ಸಾಗುತ್ತದೆ. ಆದರೆ ನೀರಿನ ಅಲೆಗಳಿಗೆ ಹೋಲಿಸಿದಾಗ ಕರೆಂಟ್ ಅಲೆಗಳ ಏರಿಳಿತ ತುಂಬಾನೇ ಹೆಚ್ಚಾಗಿರುತ್ತದೆ. ನಮ್ಮ ಮನೆಗೆ ತಲುಪುವ ಕರೆಂಟ್ ಈ ತರಹದಲ್ಲಿ ಪ್ರತಿ ಸೆಕೆಂಡಿಗೆ 50 ಸಲದ ಏರಿಳಿತ ಹೊಂದಿರುತ್ತದೆ! ಇದಕ್ಕೆ ಸಲದೆಣಿಕೆ (frequency) ಅನ್ನುತ್ತಾರೆ. ಮೀಟರಗಳ ಮೇಲೆ 50 Hz ಅಂತಾ ಬರೆದಿರುವುದನ್ನು ನೀವು ಗಮನಿಸಿರಬಹುದು ಅದೇ ಈ ಸಲದೆಣಿಕೆ (frequency). ಮೇಲೆ ತಿಳಿಸಿದಂತೆ ಕರೆಂಟ್ ಏರು-ಇಳಿತದೊಂದಿಗೆ ಸಾಗುತ್ತದೆ. ಏರಿಕೆಯ ಕೊನೆಯಲ್ಲಿ, ಎಲ್ಲಕ್ಕಿಂತ ಹೆಚ್ಚಿನ ಕರೆಂಟ್ ಇದ್ದರೆ ಇಳಿತದ ಕೊನೆಯಲ್ಲಿ ಕರೆಂಟ್ ಎಲ್ಲಕ್ಕಿಂತ ಕಡಿಮೆಯಿರುತ್ತದೆ. ಈ ಏರು-ಇಳಿತದಲ್ಲಿ ಕರೆಂಟಿನ ಯಾವುದೇ ಹಂತವನ್ನು ‘ಫೇಸ್’ ಅಂತಾ ಕರೆಯಲಾಗುತ್ತದೆ.
3) ಇದಕ್ಕೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಚಂದ್ರ ಅಮವಾಸ್ಯೆಯಿಂದ ಹುಣ್ಣಿಮೆವರೆಗೆ ದೊಡ್ಡದಾಗುವಂತೆ ಕಾಣಿಸಿದರೆ ಹುಣ್ಣಿಮೆಯಿಂದ ಅಮವಾಸ್ಯೆಯೆಡೆಗೆ ಸಾಗಿದಾಗ ಚಿಕ್ಕದಾಗುವಂತೆ ಕಾಣಿಸುತ್ತಾನೆ. ಹುಣ್ಣಿಮೆಯ ತುಂಬು ಚಂದಿರ ಮತ್ತು ಅಮವಾಸ್ಯೆಯ ಮರೆಯಾದ ಚಂದ್ರನ ನಡುವಿನ ದಿನಗಳಲ್ಲಿ ನಮಗೆ ಚಂದ್ರನ ಹಲವು ಹಂತಗಳು ಕಾಣಿಸುತ್ತವೆ. ಒಮ್ಮೆ ಚಂದ್ರ ಅರೆ (1/2) ಚಂದ್ರನಾದರೆ ಇನ್ನೊಮ್ಮೆ ಮುಕ್ಕಾಲು (3/4) ಚಂದ್ರನಂತೆ ಕಾಣುತ್ತಾನೆ. ಇದನ್ನೇ ‘ಹಂತ’ ಇಲ್ಲವೇ ಫೇಸ್ ಅಂತಾ ಕರೆಯೋದು! ಕರೆಂಟಿನ್ ಏರು-ಇಳಿತದಲ್ಲಿರುವ ಹಂತ/ಫೇಸ್.
4) ಈಗ, ಒಂದಕ್ಕೊಂದು ಜೋಡಿಸಿರದ 2 ತಂತಿಗಳಿವೆ ಅಂದುಕೊಳ್ಳಿ. ಅವುಗಳಲ್ಲಿ ಹರಿಯುವ ಕರೆಂಟ್ ಎರಡರಲ್ಲೂ ಒಂದೇ ಹಂತದಲ್ಲಿ (ಫೇಸ್) ಇರಲು ಸಾಧ್ಯವೇ ? ಅಂದರೆ ಒಂದು ತಂತಿಯಲ್ಲಿ ಕರೆಂಟ್ ಏರಿಕೆಯ ತುದಿಯಲ್ಲಿದ್ದರೇ ಎರಡನೇಯ ತಂತಿಯಲ್ಲೂ ಕರೆಂಟ್ ಅದೇ ಹಂತದಲ್ಲಿ ಇರಲು ಸಾಧ್ಯವೇ ? ಹಾಗೊಮ್ಮೆ ಇದ್ದರೆ ಅದು ಕಾಕತಾಳಿಯವಷ್ಟೇ. ಅಂದರೆ 10 ಬೇರ್ಪಟ್ಟ ತಂತಿಗಳನ್ನು ತೆಗೆದುಕೊಂಡರೆ ಅವುಗಳಲ್ಲಿ ಹರಿಯುವ ಕರೆಂಟಿನ ಹಂತ (ಫೇಸ್) ಬೇರೆ ಬೇರೆಯಾಗಿರುತ್ತದೆ. ಒಂದರಲ್ಲಿ ಕರೆಂಟ್ ಏರಿಕೆಯಾಗುತ್ತಿದ್ದರೆ ಇನ್ನೊಂದರಲ್ಲಿ ಇಳಿಕೆಯಾಗುತ್ತಿರಬಹುದು, ಮತ್ತೊಂದರಲ್ಲಿ ಇವೆರಡರ ನಡುವಿನ ಯಾವುದೇ ಹಂತದಲ್ಲಿರಬಹುದು.
5) ಆಯಿತು! ಈಗ ಈ ಹಂತ/ಫೇಸ್ ನಮಗೆ ಹೇಗೆ ನೆರವಾಗುತ್ತದೆ ಎಂದು ತಿಳಿಯಬೇಕಲ್ಲ! ಕರೆಂಟ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂತಾ ಒಮ್ಮೆ ನೆನಪಿಸಿಕೊಳ್ಳೋಣ. ಅದೊಂದು ಶಕ್ತಿಯ ಪೆಟ್ಟು/ಹೊಡೆತ ಇದ್ದಂಗೆ. ಗಾಡಿಯನ್ನು ಶುರುಮಾಡಲು ‘ಕಿಕ್’ ಹೊಡೆಯುತ್ತಿವಲ್ಲ ಹಾಗಿರುವ ಪೆಟ್ಟು/ಹೊಡೆತ ಅದು. ಮೇಲೆ ನೋಡಿದಂತೆ ಕರೆಂಟಿನದು ಪ್ರತಿ ಸೆಕೆಂಡಿಗೆ 50 ಹೊಡೆತ/ಪೆಟ್ಟುಗಳು. 1 ಫೇಸ್ ಬಳಸಿ ಈ ಬಗೆಯ ಕರೆಂಟ್ ಪೆಟ್ಟುಗಳಿಂದ ಚಿಕ್ಕದಾದ ಮೋಟಾರ್ ನಡೆಸಬಹುದು ಆದರೆ ಅದೇ ಗದ್ದೆಯಲ್ಲಿ ಬೇಕಾದ 10 HP ಯಷ್ಟು ದೊಡ್ಡದಾದ ಪಂಪ್ ನಡೆಸಲು ಹೆಚ್ಚಿನ ಕಸುವು ಬೇಕು. ಇಂತಲ್ಲಿ 1 ತಂತಿಯಿಂದ ಹೊರಡುವ ಕರೆಂಟಿನ ಪೆಟ್ಟುಗಳನ್ನು ಕೊಡುವುದಕ್ಕಿಂತ 2-3 ತಂತಿಗಳಲ್ಲಿ ಕರೆಂಟ್ ಹರಿಸಿ ಪೆಟ್ಟುಗಳನ್ನು ಕೊಟ್ಟರೆ ಪಂಪನ್ನು ಸುಲಬವಾಗಿ ಓಡಿಸಬಹುದು. ಒಂದು ಗಾಲಿಯನ್ನು ಒಬ್ಬರೇ ತಿರುಗಿಸುವುದಕ್ಕಿಂತ ಹಲವು ಜನರು ಒಂದಾಗಿ ಸುಲಭವಾಗಿ ತಿರುಗಿಸಿದಂತೆಯೇ ಇದು.
6) ಹಾಗಾಗಿ, ದೊಡ್ಡ ಸಲಕರಣೆಗಳನ್ನು ನಡೆಸಲು 1 ಫೇಸ್ ಕರೆಂಟಗಿಂತ 3 ಫೇಸ್ ಕರೆಂಟ್ ಒಳ್ಳೆಯದು. ಹಾಗಿದ್ದರೆ 4 ಇಲ್ಲವೇ 5 ಫೇಸಗಳನ್ನು ಏಕೆ ಬಳಸಬಾರದು ಅನ್ನುವ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದಕ್ಕೆ ಉತ್ತರ ಸರಳವಾಗಿದೆ 3 ಫೇಸಗಳಲ್ಲಿ ಕಡಿಮೆ ದುಡ್ಡಿನಿಂದ ಮಾಡಬಹುದಾದುಕ್ಕೆ 4-5 ಫೇಸ್ಗಳನ್ನು ಯಾಕೇ ಬಳಸಬೇಕು, ಅಲ್ಲವೇ ?! ಆದ್ದರಿಂದ ಅಗತ್ಯವಿರುವ ಎಲ್ಲೆಡೆ ಕಡಿಮೆ ವೆಚ್ಚದ 3 ಫೇಸ ಕರೆಂಟನ್ನೇ ಬಳಸಲಾಗುತ್ತದೆ.
7) ಗಮನಿಸಿ ನೋಡಿ ನಿಮ್ಮ ಅಕ್ಕಪಕ್ಕದಲ್ಲಿರುವ ಟ್ರಾನ್ಸ್ಪಾರ್ಮರ್ ಇಂದ ಕರೆಂಟ್ 3 ತಂತಿಯಲ್ಲಿ ಹೊರಬರುತ್ತದೆ. ಅಂದರೆ ಅದು 3 ಫೇಸ್ ಆಗಿರುತ್ತದೆ. ಅಲ್ಲಿಂದ ಕರೆಂಟನ್ನು ಕಂಬವೊಂದಕ್ಕೆ ಸಾಗಿಸಿ, ಮುಂದೆ ಎಲ್ಲರ ಮನೆಗೆ ನೀಡಲಾಗುತ್ತದೆ. ಕರೆಂಟ್ ಕಂಬದಿಂದ ಹೊರಡುವ ತಂತಿಗಳ ಮೇಲೆ ಇಲ್ಲವೇ ಬದಿಯಲ್ಲಿ ಇನ್ನೊಂದು ಹೆಚ್ಚಿನ ತಂತಿ ಇರಬಹುದು ಇದಕ್ಕೆ ನ್ಯೂಟ್ರಲ್ ಇಲ್ಲವೇ ಗ್ರೌಂಡ್ (ನೆಲ) ತಂತಿ ಅನ್ನುತ್ತಾರೆ. ಇದು ಕರೆಂಟಿನಲ್ಲಿ ಏರಿಳಿತವಾದಾಗ ಹೆಚ್ಚಿನ ಕರೆಂಟನ್ನು ನೆಲಕ್ಕೆ ಸಾಗಿಸಿ ತೊಂದರೆಯಿಂದ ಕಾಪಾಡುತ್ತದೆ.
8) ಹೀಗೆ, ದೊಡ್ಡ ಸಲಕರಣೆಗಳಿಗೆ ಹೆಚ್ಚಿನ ಕರೆಂಟ್ ಬೇಕಾದಾಗ ಎಲ್ಲ 3 ತಂತಿಗಳಿಂದ ಕರೆಂಟನ್ನು ಪಡೆಯಲಾಗುತ್ತದೆ. ಅದೇ ನಿಮ್ಮ ಮನೆಯಲ್ಲಿ ಚಿಕ್ಕ ಸಲಕರಣೆಗಳಿದ್ದು ಅವುಗಳಿಗೆ ಕರೆಂಟ್ ಕಡಿಮೆ ಬೇಕಾಗಿದ್ದರೆ 3 ತಂತಿಗಳಲ್ಲಿ ಬರೀ 1 ತಂತಿಯಿಂದ ಕರೆಂಟ್ ಪಡೆದರೂ ಸಾಕು. ಅದರಿಂದಲೇ ಟ್ಯೂಬಲಯ್ಟ್, ಫ್ಯಾನ್, ಮಿಕ್ಸರ್ ಮುಂತಾದ ಸಲಕರಣೆಗಳನ್ನು ನಡೆಸಬಹುದು.
ನಿಮ್ಮಲ್ಲಿ ಒಂಚೂರು ಹೆಚ್ಚಿಗೆನೇ ಕರೆಂಟಿನಿಂದ ನಡೆಯುವ ಉಪಕರಣಗಳಿದ್ದರೆ ಆಗ 2 ತಂತಿಗಳಿಂದ ನಿಮ್ಮ ಮನೆಗೆ ಕರೆಂಟನ್ನು ಒದಗಿಸಲಾಗುತ್ತದೆ. ಟ್ಯೂಬಲಯ್ಟನಂತಹ ಬೆಳಕಿನ ಸಲಕರಣೆಗಳಿಗೆ ಒಂದು ತಂತಿಯಾದರೆ, ಕರೆಂಟ್ ಒಲೆಯಂತಹ ಬಿಸಿ ಮಾಡುವ ಸಲಕರಣೆಗಳನ್ನು ನಡೆಸಲು ಎರಡನೆಯದು.
ಸರಿ ಹಾಗಾದ್ರೆ, ಮುಂದಿನ ಸರತಿ ಕರೆಂಟ್ ಕಂಬದಲ್ಲಿ 3 ತಂತಿಗಳು ಏಕಿವೆ ಅನ್ನುವ ಪ್ರಶ್ನೆಯನ್ನು ಯಾರಾದರೂ ನಿಮಗೆ ಕೇಳಿದರೆ ನೀವೇ ಅದಕ್ಕೆ ಉತ್ತರಿಸಬಲ್ಲಿರಿ, ಅಲ್ಲವೇ !
ಕನ್ನಡಕ್ಕೆ: ಪ್ರಶಾಂತ ಸೊರಟೂರ