ರಂಗಾಕು – ಜಪಾನಲ್ಲೊಂದು ಅರಿಮೆಯ ಚಳುವಳಿ

ಪ್ರಶಾಂತ ಸೊರಟೂರ.

 

ಜಪಾನ್

ಹೆಸರು ಕೇಳಿದೊಡನೆ ನಮ್ಮೆದುರಿಗೆ ನಿಲ್ಲುವುದು ಅದರ ರೊಬೋಟ್‍ಗಳು, ತಾನೋಡಗಳ (automobiles) ಕೈಗಾರಿಕೆಗಳು, ಮುಂಚೂಣಿಯಲ್ಲಿ ನಿಲ್ಲುವ ಅದರ ಅರಕೆಗಳು, ಎಂತದೇ ಅವಘಡಗಳನ್ನು ಎಂಟೆದೆಯಿಂದ ಒಗ್ಗಟ್ಟಾಗಿ, ಜಾಣ್ಮೆಯಿಂದ ಎದುರಿಸುವ ಅದರ ನಾಡಿಗರು.

ಸಂಪನ್ಮೂಲಗಳ ಕೊರತೆಯನ್ನು ಎದುರಿಸಿದರೂ ನಾಡೊಂದು ಹೇಗೆ ಇಷ್ಟೊಂದು ಮುಂದುವರೆಯಿತು? ಹೇಗೆ ಸಾಯನ್ಸ್ ಮತ್ತು ಟೆಕ್ನಾಲಜಿಯಲ್ಲಿ ಅದಿಂದು ಮುನ್ನೆಲೆಗೆ ಬಂತು? ಅನ್ನುವ ಕೇಳ್ವಿಯ ಜಾಡು ಹಿಡಿದು ನಡೆದಾಗ ಹಲವು ಮುಂದುವರೆದ ನಾಡುಗಳಲ್ಲಿ ನಡೆದಂತೆ ಜಪಾನಲ್ಲೂ ಕೂಡ ಅದರ ನುಡಿಯ ಸುತ್ತ ಚಳುವಳಿ ನಡೆದಿರುವುದು, ಅರಿಮೆಯನ್ನು ತನ್ನದಾಗಿಸುವ ಕೆಲಸ ಎಡೆಬಿಡದೇ ಸಾಗಿದ್ದು ಕಾಣುತ್ತದೆ. ಜಪಾನಿನಲ್ಲಿ ನಡೆದ ಅರಿಮೆಯನ್ನು ತನ್ನಾದಾಗಿಸುವ ಅಂತಹ ಕಾಲಘಟ್ಟವೊಂದರ ಬಗ್ಗೆ ಈಗ ತಿಳಿಯೋಣ ಬನ್ನಿ.

ಬೇಲಿಯ ನಾಡು:
ಕ್ರಿ.ಶ. 1633 ರಿಂದ 1853 ರ ಹೊತ್ತಿನಲ್ಲಿ ಜಪಾನ್ ನಾಡಿಗರನ್ನು ಹೊರನಾಡುಗಳ ಒಡನಾಟದಿಂದ ದೂರ ಉಳಿಸಲಾಗಿತ್ತು. ಜಪಾನ್‍ನಿಂದ ಹೊರಹೋಗುವವರನ್ನು ಮತ್ತು ಜಪಾನಿಗೆ ಬೇರೆ ನಾಡಿಂದ ಬರುವವರನ್ನು ನೇಣಿಗೇರಿಸುವಂತಹ ಕಟ್ಟಲೆಗಳು ಆಗ ಜಾರಿಯಲ್ಲಿದ್ದವು. ಹೊರನಾಡುಗಳು ಅದರಲ್ಲೂ ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳ ಆಳ್ವಿಕೆಯ ಮತ್ತು ಧಾರ್ಮಿಕ ದಾಳಿಯನ್ನು ತಡೆಗಟ್ಟಲು ಜಪಾನ್ ದೊರೆಗಳು ಇಂತಹ ದಾರಿಯನ್ನು ಆಯ್ಕೆಮಾಡಿಕೊಂಡಿದ್ದರು. ಬೇರೆ ನಾಡುಗಳಿಂದ ನೇರವಾದ ಒಡನಾಟ ಕಳಚಲ್ಪಟ್ಟ ಆ ಹೊತ್ತಿನ ಜಪಾನ್‍ನ್ನು ಸಾಕೊಕು (Sakoku) ಅಂದರೆ ಸರಪಳಿಯ ಇಲ್ಲವೇ ಬೇಲಿಯ ನಾಡು ಎಂದು ಕರೆಯಲಾಗುತ್ತದೆ.

ಹೊರನಾಡುಗಳಿಂದ ಜಪಾನಿಗರು ನೇರವಾದ ಒಡನಾಟದಿಂದ ದೂರವಿದ್ದರೂ, ಈ ಹೊತ್ತಿನಲ್ಲಿ ಕೆಲವು ರೇವುಪಟ್ಟಣಗಳಿಂದ ಹೊರದೇಶಗಳೊಡನೆ ವ್ಯಾಪಾರ, ಕೊಡುಕೊಳ್ಳುವಿಕೆಗೆ ಕೆಲವು ಕಟ್ಟುಪಾಡುಗಳೊಂದಿಗೆ ಅವಕಾಶವನ್ನು ನೀಡಲಾಗಿತ್ತು. ನಾಗಾಸಾಕಿ ಊರಿನ ಬಳಿ ಡೆಜಿಮಾ (Dejima) ಎಂಬ ತಾಣವನ್ನು ಇದಕ್ಕಾಗಿ ಅಣಿಗೊಳಿಸಲಾಗಿತ್ತು. ಡೆಜಿಮಾ ಮೂಲಕ ಮುಖ್ಯವಾಗಿ ಡಚ್ಚರು ಜಪಾನಿನೊಡನೆ ಒಳ್ಳೆಯ ನಂಟನ್ನು ಬೆಳಸಿಕೊಂಡರು. ಆಗ ಶುರುವಾದದ್ದೇ ಡಚ್ಚರಿಂದ ಪಡುವಣ ನಾಡುಗಳ ಅರಿಮೆಯ ಸಾರವನ್ನು ಹೀರುವ ಜಪಾನಿಗರ ಚಳುವಳಿ.

rangaku_Dutch_trader_watching_an_incoming_VOC_ship_at_Dejima_by_Kawahara_Keiga

(ಡಚ್ಚರ ಹಡಗನ್ನು ಜಪಾನಿಗೆ ಬರಮಾಡಿಕೊಳ್ಳುತ್ತಿರುವ ತಿಟ್ಟ)

ರಂಗಾಕು – ಚಳುವಳಿ:

ಬೇರೆ ನಾಡುಗಳಿಂದ ಒಡನಾಟ ಕಡಿಯಲ್ಪಟ್ಟಿದ್ದರೂ ಡಚ್ಚರು ಜಪಾನಿಗೆ ಪಡುವಣ ದೇಶದಲ್ಲಿ ನಡೆಯುತ್ತಿರುವ ಅರಿಮೆಯ ಮಾಹಿತಿಯನ್ನು, ಅಲ್ಲಿ ಹುಟ್ಟುತ್ತಿದ್ದ ಸಲಕರಣೆಗಳನ್ನು, ಕೈಗಾರಿಕೆಗಳ ತಿಳುವಳಿಕೆಯನ್ನು ತಮ್ಮ ವ್ಯಾಪಾರದೊಂದಿಗೆ ಹೊತ್ತು ತರುತ್ತಿದ್ದರು. ಹೀಗಾಗಿಯೇ ಜಪಾನ್ ಡಚ್ಚರ ಮೇಲೆ ತನ್ನ ನಂಬಿಕೆಯನ್ನು ಇರಿಸತೊಡಗಿತು, ಅವರಿಂದ ವ್ಯಾಪಾರಾದಾಚೆಗೆ ಪಡುವಣದ ಅರಿವನ್ನು ತನ್ನದಾಗಿಸಿಕೊಳ್ಳುವಲ್ಲಿ ಗೊತ್ತುಗುರಿಯನ್ನು ಇಟ್ಟುಕೊಂಡು ಕೆಲಸ ಮಾಡತೊಡಗಿತು. ಅರಿಮೆಯ ಈ ಕಲಿಯುವಿಕೆಯನ್ನು ಜಪಾನಿನಲ್ಲಿ ರಂಗಾಕು (Rangaku) ಅಂದರೆ ಡಚ್ಚರಿಂದ ಕಲಿಯುವಿಕೆ ಇಲ್ಲವೇ ಪಡುವಣದಿಂದ ಕಲಿಯುವಿಕೆ (Western learning) ಎಂದು ಕರೆಯಲಾಗುತ್ತದೆ.

ಚಳುವಳಿಯ ಮೊದಲ ಹಂತ:

ಪಡುವಣದಿಂದ ಕಲಿಯುವ ಅರಿಮೆಯ ಚಳುವಳಿಯಾದ ರಂಗಾಕುವಿನ ಮೊದಲ ಹಂತವನ್ನು 1640–1720 ಎಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ಕಲಿಯುವಿಕೆ ತುಂಬಾ ಹಿಡಿತದಲ್ಲಿತ್ತು ಅನ್ನಬಹುದು. ಕಡಲ ಮತ್ತು ಮದ್ದರಿಮೆಯ ವಿಷಯಗಳನ್ನು ಬಿಟ್ಟು ಬೇರೆಲ್ಲ ಬಗೆಯ ಪಡುವಣದ ಹೊತ್ತಗೆಗಳನ್ನು ತಡೆಹಿಡಿಯಲಾಗಿತ್ತು. ಮೊದಲ ಹಂತವಾಗಿ ಜಪಾನ್ ಮತ್ತು ಡಚ್ ನುಡಿ ಬಲ್ಲವರನ್ನು ಹೊತ್ತಗೆಗಳ ಅನುವಾದಕ್ಕೆ ಅಣಿಗೊಳಿಸಲಾಗಿತ್ತು. ಇವರ ಕೆಲಸವೆಂದರೆ ಡಚ್ಚರು ಒದಗಿಸುವ ತಿಳುವಳಿಕೆಯನ್ನು ಜಪಾನಿ ನುಡಿಗೆ ಅನುವಾದಿಸುವುದು. ಪ್ರತಿ ವರುಶ ಜಪಾನಿಗೆ ಬರುವಾಗ ಡಚ್ಚರು ಪಡುವಣ ದೇಶಗಳಲ್ಲಿ ಏನು ನಡೆದಿದೆ, ಯಾವ ಬಗೆಯ ಕೈಗಾರಿಕೆಗಳು, ಅರಿಮೆಯ ಏಳಿಗೆಗಳು ನಡೆದಿವೆ ಅನ್ನುವುದನ್ನು ಜಪಾನಿಗರಿಗೆ ತಿಳಿಸಲು ಕೋರಲಾಯಿತು. ಇದರ ಬದಲಾಗಿ ಡಚ್ಚರಿಗೆ ತಮ್ಮ ಸರಕುಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ಒದಗಿಸಲಾಯಿತು.

ಮೊದಲಿಗೆ ಡಚ್ಚರಿಂದ ಪಡೆದ ಹೊತ್ತಗೆಗಳು ಜಪಾನಿ ನುಡಿಗೆ ಅನುವಾದಿಸಲ್ಪಟ್ಟರೆ, ಬರಬರುತ್ತಾ ಡಚ್ಚರು ಹೊತ್ತು ತರುತ್ತಿದ್ದ ದೂರತೋರುಕಗಳು (telescopes), ಗಡಿಯಾರಗಳು, ಸೀರುತೋರ‍್ಪುಗಳು (microscopes), ನಾಡತಿಟ್ಟಗಳು (maps/globes), ಕನ್ನಡಕಗಳು ಮುಂತಾದ ಸಲಕರಣೆಗಳ ಮಾರಾಟ ಹೆಚ್ಚತೊಡಗಿತು. ಅವುಗಳ ಬಳಕೆಯ ಬಗ್ಗೆ ಜಪಾನಿಗರು ತುಂಬಾ ನಲ್ಮೆಯಿಂದ ಡಚ್ಚರಿಂದ ಕಲಿತರು.

rangaku_microscope

(ಮೈಕ್ರೋಸ್ಕೋಪ್ ಬಗ್ಗೆ ತಿಳಿಸುತ್ತಿರುವ ಜಪಾನಿ ಹೊತ್ತಗೆ)

ಚಳುವಳಿಯ ಎರಡನೆ ಹಂತ:

1720-1839 ರ ಹಂತವನ್ನು ಕಲಿಕೆಯ ಎರಡನೆಯ ಹಂತವೆಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ಪಡುವಣದ ಹಲವಾರು ಅರಿಮೆಯ ಹೊತ್ತಗೆಗಳು ತುಂಬಾ ಬಿರುಸಿನಿಂದ ಜಪಾನಿ ನುಡಿಗೆ ಅನುವಾದಿಸಲ್ಪಟ್ಟವು. ಇದರಲ್ಲಿ ತುಂಬಾ ಮುಖ್ಯವಾದ ಹೊತ್ತಗೆ ಎಂದರೆ ಮೊರಿಶಿಮಾ ಎಂಬುವವರು ಜಪಾನಿ ನುಡಿಗೆ ಅನುವಾದಿಸಿದ ’ಡಚ್ಚರ ಹೇಳಿಕೆಗಳು’ (Sayings of the Dutch). ಈ ಹೊತ್ತಗೆಯಲ್ಲಿ ಮೈಕ್ರೋಸ್ಕೋಪ್ ಕೆಲಸ ಮಾಡುವ ಬಗೆ, ಬಿಸಿ ಗಾಳಿಚಂಡಿನ ಅರಿಮೆಯ ಹಿನ್ನೆಲೆ, ಪಡುವಣದಲ್ಲಿರುವ ಬೇನೆಗಳ ಮತ್ತು ಅವುಗಳನ್ನು ಗುಣಪಡಿಸುವ ಮದ್ದರಿಮೆಯ ತಿಳುವಳಿಕೆ, ಹಡಗುಗಳ ಕಟ್ಟಣೆ, ಮಿಂಚರಿಮೆಯ ಅರಿವು ಮುಂತಾದ ಹತ್ತು ಹಲವಾರು ತಿಳುವಳಿಕೆಯನ್ನು ಜಪಾನಿ ನುಡಿಯಲ್ಲಿ ತಿಳಿಸಲಾಯಿತು.

rangaku_First_Japanese_treatise_on_Western_anatomy

(ಮದ್ದರಿಮೆಯ ಬಗ್ಗೆ ಬರೆಯಲಾದ ಮೊದಲ ಜಪಾನಿ ಹೊತ್ತಗೆ)

rangaku_RangakuElectricityManual

(ಇಲೆಕ್ಟ್ರಿಸಿಟಿ ಬಗ್ಗೆ ಬರೆಯಲಾದ ಮೊದಲ ಜಪಾನಿ ಹೊತ್ತಗೆ)

1804 ರಿಂದ 1829 ರ ಹೊತ್ತಿನಲ್ಲಿ ಜಪಾನಿನಲ್ಲಿ ಹಲವಾರು ಶಾಲೆಗಳು ತೆರೆಯಲ್ಪಟ್ಟವು. ಈ ಮೂಲಕ ಮೊದಲ ಹಂತಕ್ಕಿಂತ ಬಿರುಸಾಗಿ ಎರಡನೇ ಹಂತದಲ್ಲಿ ಜಪಾನಿಗರು ತಮ್ಮ ನುಡಿಯಲ್ಲಿ ದೊರೆತ ಪಡುವಣದ ಅರಿಮೆಯ ಸಾರವನ್ನು ಹೀರತೊಡಗಿರದರು.

ಚಳುವಳಿಯ ಮೂರನೆಯ ಹಂತ:

1829 ರ ಈಚೆಗಿನ ಹಂತವನ್ನು ಪಡುವಣದಿಂದ ಕಲಿಯುವಿಕೆಯ ಮೂರನೆಯ ಹಂತವೆಂದು ಗುರುತಿಸಲಾಗುತ್ತದೆ. ಈ ಹಂತದಲ್ಲಿ ರಂಗಾಕು ಚಳುವಳಿ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಒಳಗಾಯಿತು. ಪಡುವಣದೊಂದಿಗೆ ಒಡನಾಟ ಜಪಾನಿಗರಿಗೆ ಒಳ್ಳೆಯದೇ ಹೊರತು ಕೆಡುಕಿನದಲ್ಲ ಅನ್ನುವಂತ ಮಾತುಗಳು ಹೆಚ್ಚಾಗಿ ಕೇಳತೊಡಗಿದವು. ಬೇಲಿಯ ನಾಡಾಗಿದ್ದ ಜಪಾನನ್ನು ಪಡುವಣದ ಮತ್ತು ಇತರ ಹೊರಜಗತ್ತಿನ ಕಲಿಕೆಗೆ ತೆರವುಗೊಳಿಸಬೇಕು ಅನ್ನುವ ಕೂಗುಗಳು ಕೇಳಿಸಿದವು.

ಮುಂದಿನ ಕೆಲವು ವರುಶಗಳಲ್ಲಿ ಜಪಾನ್ ಇಡಿ ಜಗತ್ತಿಗೆ ತೆರೆದುಕೊಳ್ಳುವುದಕ್ಕೆ ಮುಂಚಿತವಾಗಿಯೇ ರಂಗಾಕು ಚಳುವಳಿ ಜಪಾನಿಗರ ಅರಿಮೆಗೆ ಒಳ್ಳೆಯ ಅಡಿಪಾಯವನ್ನು ಹಾಕಿಕೊಟ್ಟಿತ್ತು.

ಚಳುವಳಿಯಲ್ಲಿ ಪದಕಟ್ಟಣೆ:

ಪಡುವಣದಿಂದ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಹಾತೊರೆದ ಜಪಾನಿಗರು ಮೊದಲು ಅವುಗಳನ್ನು ತಮ್ಮ ನುಡಿಗೆ ತರುವಂತಾಗಲು ಪದಕಟ್ಟಣೆಯಲ್ಲಿ ತುಂಬಾ ಬಿರುಸಿನಿಂದ ತೊಡಗಿದರು. ಮದ್ದರಿಮೆ (medical science) , ಇರುವರಿಮೆ (physical science), ಮಿಂಚರಿಮೆ (electrical science), ಇರ‍್ಪರಿಮೆ (chemistry), ಬೆಳಕರಿಮೆ (optics), ಉಸಿರಿಯರಿಮೆ (biology), ಬಾನರಿಮೆ (astronomy), ಚಳಕದರಿಮೆ (mechanical engineering) ಮುಂತಾದ ಹತ್ತು ಹಲವಾರು ಅರಿಮೆಯ ಕವಲುಗಳಲ್ಲಿ ದೊರೆತ ಪಡುವಣದ ಅರಿವನ್ನು ತಿಳಿಸಲು ಜಪಾನಿಗರು ಸಾವಿರಾರು ಜಪಾನಿ ಪದಗಳನ್ನು ಹುಟ್ಟುಹಾಕಿದರು.

ಶಿಜುಕಿ (Shizuki) ಎಂಬುವವರು ಫಿಸಿಕ್ಸ್ ವಿಷಯದ ಪದಗಳಿಗೆ ಜಪಾನಿ ಪದಗಳನ್ನು ಕಟ್ಟಿದರೆ, ಉಡಗವಾ ಯೊನ್ (Udagawa Yōan) ಎಂಬುವವರು ಕೆಮಿಸ್ಟ್ರಿಯಲ್ಲಿ ಪದಗಳನ್ನು, ಹಶಿಮೋಟೋ ಮುನಿಯೋಶಿ (Hashimoto Muneyoshi) ಮಿಂಚರಿಮೆಯ ಪದಗಳನ್ನು ಜಪಾನಿ ನುಡಿಯಲ್ಲಿ ಟಂಕಿಸಿದರು. ಒಟ್ಟಾರೆಯಾಗಿ ಈ ಚಳುವಳಿಯಲ್ಲಿ ಅರಿಮೆಯ ಪದಗಳ ಹಾಲ್ಗಡಲೇ ಹರಿಯೆತೆಂದರೆ ತಪ್ಪಾಗಲಾರದು. ಹೀಗೆ ಕಟ್ಟಲ್ಪಟ್ಟ ಜಪಾನಿ ಪದಗಳನ್ನು ಬಳಸಿಕೊಂಡು ಜಪಾನಿಗರು ಹಲವಾರು ಹೊತ್ತಗೆಗಳನ್ನು ಬರೆದರು. ಈ ಮೂಲಕ ಅರಿಮೆಯನ್ನು ತಮ್ಮ ನುಡಿಯಲ್ಲೇ ಎಲ್ಲರಿಗೂ ಎಟುಕುವಂತೆ ಮಾಡಿದರು.

ಕನ್ನಡಿಗರಿಗೆ ರಂಗಾಕು ಕಲಿಸುವ ಪಾಠ:

ಜಪಾನಿಗರ ರಂಗಾಕು ಚಳುವಳಿಯಿಂದ ಕನ್ನಡಿಗರು ಕಲಿಯಬೇಕಾದ ಮುಖ್ಯ ಪಾಠವೆಂದರೆ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ತಿಳುವಳಿಕೆಯನ್ನಾಗಲಿ ತಮ್ಮ ನುಡಿ ಸಮಾಜಕ್ಕೆ ತಲುಪಿಸಬೇಕೆಂದರೆ, ಆ ತಿಳುವಳಿಕೆಯನ್ನು ತಮ್ಮ ನುಡಿಗೆ ತರುವಂತಹ ಕೆಲಸ ಆಗಬೇಕು.

ಆದರೆ ಕನ್ನಡಿಗರು ಇಂದು ಇದರ ಎದುರಾದ ನಿಲುವನ್ನು ಹೊಂದಿರುವಂತಿದೆ. ಇಂಗ್ಲಿಶಲ್ಲಿ ಇಲ್ಲವೇ ಇನ್ನೊಂದು ನುಡಿಯಲ್ಲಿರುವ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳಲು ಇಡಿ ಕನ್ನಡ ನುಡಿ ಸಮಾಜ ಇಂಗ್ಲಿಶ್ ಕಲಿಯಬೇಕು ಅನ್ನುವಂತ ತಪ್ಪು ತಿಳುವಳಿಕೆಯನ್ನು ಹೊಂದಿದೆ. ಇದರ ಬದಲಾಗಿ ಹೊರಜಗತ್ತಿನ ಅರಿವನ್ನು ಕನ್ನಡಕ್ಕೆ ತರುವ ಕೆಲಸ ತುಂಬಾ ಮುಖ್ಯ ಅನ್ನುವುದನ್ನು ಇಂದು ಮನಗಾಣಬೇಕಿದೆ ಮತ್ತು ಈ ನಿಟ್ಟಿನಲ್ಲಿ ಕನ್ನಡಿಗರು ಎಡೆಬಿಡದೇ ತೊಡಗಬೇಕಿದೆ.

(ಮಾಹಿತಿ ಮತ್ತು ತಿಟ್ಟಗಳ ಸೆಲೆ: http://en.wikipedia.org/wiki/Rangaku , japan-experience.com)

ಮೈಯೊಂದು ಕನ್ನಡಿ

ಪ್ರಶಾಂತ ಸೊರಟೂರ.

  • ಸಿಟ್ಟಿನಿಂದ ಆತನ ಮೋರೆ ಕೆಂಡದಂತಾಗಿತ್ತು.
  • ನಲ್ಲನ ಮಾತಿಗೆ ನಲ್ಲೆಯ ಕಣ್ಣುಗಳು ನಾಚಿ ನೀರಾದವು.
  • ಏನಾದಿತೋ ಎಂಬ ಅಂಜಿಕೆಯಿಂದ ಆತನ ಕೈ-ಕಾಲುಗಳು ನಡುಗುತ್ತಿದ್ದವು.
  • ಆ ಮಾತನ್ನು ಕೇಳಿ ಅಲ್ಲಿ ನೆರೆದವರೆಲ್ಲಾ ಬೆರಗಿನಿಂದ ಹುಬ್ಬೇರಿಸಿದರು.
  • ಅವರಲ್ಲಿ ಯಾವುದೋ ಕೊರಗಿದೆಯಂತಾ ಅವರ ಬಾಡಿದ ಮುಖವೇ ಹೇಳುತ್ತಿದೆ.
  • ಹೆಮ್ಮೆಯಿಂದ ಎದೆಯುಬ್ಬಿಸಿ ತನ್ನವರ ಕುರಿತು ಆತ ತಿಳಿಸಿಕೊಡುತ್ತಿದ್ದ.

ಇಂತಹ ಹಲವಾರು ಸಾಲುಗಳನ್ನು ಬದುಕಿನಲ್ಲಿ ಕಂಡ ಇಲ್ಲವೇ ಕತೆ-ಕಾದಂಬರಿಗಳಲ್ಲಿ ಓದಿದ ಅನುಭವ ನಿಮಗಾಗಿರಬಹುದು. ಬೇರೆ ಬೇರೆ ಭಾವನೆಗಳಿಗೆ ನಮ್ಮ ಮೈಯಲ್ಲಿ ಬದಲಾಣೆಗಳಾಗುತ್ತವೆ ಅಂತಾ ಗೊತ್ತಿದ್ದರೂ ಅವುಗಳಿಗೆ ಕರಾರುವಕ್ಕಾದ ನಂಟನ್ನು ತೋರಿಸಬಹುದೇ? ಭಾವನೆ ಮತ್ತು ಮೈಯಿಯ ನಂಟು ನಡೆ-ನುಡಿಗಳಿಗೆ, ನಾಡಿಗೆ ತಕ್ಕಂತೆ ಬೇರೆಯಾಗಿರುತ್ತದೆಯೇ? ಅನ್ನುವಂತ ಕೇಳ್ವಿಗಳು ಅರಿಗರನ್ನು ಹಿಂದಿನಿಂದಲೂ ಕಾಡಿದಂತವು.

ಈ ನಿಟ್ಟಿನಲ್ಲಿ ನಡೆದ ಅರಕೆಯೊಂದು ಬೆಳಕುಚೆಲ್ಲಿದ್ದು, ಮೊಟ್ಟಮೊದಲ ಬಾರಿಗೆ ಭಾವನೆಗೆ ತಕ್ಕಂತೆ ನಮ್ಮ ಮೈಯಿಯ ಯಾವ-ಯಾವ ಭಾಗಗಳು ಹೆಚ್ಚು ಹುರುಪುಗೊಳ್ಳುತ್ತವೆ ಎಂದು ತೋರಿಸಿಕೊಟ್ಟಿದೆ. ಇದರ ಜತೆಗೆ ಭಾವನೆಗಳಿಗೆ ಮೈ  ನಡೆದುಕೊಳ್ಳುವ ರೀತಿಯಲ್ಲಿ ನಾಡುಗಳ ಎಲ್ಲೆಗಳಾಚೆ ಹಲವಾರು ವಿಷಯಗಳಲ್ಲಿ ಒಂತನವಿರುವುದು ಈ ಅರಕೆಯಲ್ಲಿ ಕಂಡುಬಂದಿದೆ. ಈ ಅರಕೆಯ ದೊರೆತಗಳನ್ನು (results) ಅಮೇರಿಕಾದ ನ್ಯಾಶನಲ್ ಆಕಾಡಮಿ ಆಪ್ ಸಯನ್ಸ್ ಹೊಮ್ಮಿಸಿದೆ.

ಪಿನ್‍ಲ್ಯಾಂಡ್, ಸ್ವೀಡನ್ ಮತ್ತು ತೈವಾನ್ ನಾಡುಗಳ ಸುಮಾರು 700 ಮಂದಿ ಪಾಲ್ಗೊಂಡಿದ್ದ ಪ್ರಯೋಗದಲ್ಲಿ ಬೇರೆ ಬೇರೆ ಭಾವನೆಗಳನ್ನು ಹೊಮ್ಮಿಸುವ ಪದಗಳು, ವಿಡಿಯೋಗಳು, ಕತೆಗಳನ್ನು ಪಾಲ್ಗೊಂಡವರ ಮುಂದಿಡಲಾಯಿತು.

ಭಾವನೆಗೆ ತಕ್ಕಂತೆ ತಮ್ಮ ಮೈಯಲ್ಲಿ ಎಂತ ಬದಲಾವಣೆಗಳಾದವು, ಯಾವ-ಯಾವ ಭಾಗಗಳು ಹೆಚ್ಚು ಹುರುಪುಗೊಂಡಿರುವಂತೆ ತೋರಿದವು ಅಂತಾ ಪಾಲ್ಗೊಂಡವರಿಂದಲೇ ಅರಕೆಗಾರರು ಪಡೆದುಕೊಂಡರು. ಆಮೇಲೆ ಅವರ ನಾಡುಗಳ ನಡೆ-ನುಡಿಗಳಿಂದಾಗಿಯೇ ಬಂದಿರಬಹುದಾದ ಕೆಲವು ಹೊರತುಗಳನ್ನು (exceptions) ಅರಕೆಗಾರರು ಕೈಬಿಟ್ಟರು. ಹೀಗೆ ಭಾವನೆಗೆ ತಕ್ಕಂತೆ ಮಾರ್ಪಡುವ  ಮೈಗನ್ನಡಿಯ ಒಟ್ಟು ನೋಟವನ್ನು ಅಣಿಗೊಳಿಸಲಾಯಿತು.

Body_Emotions

(ಭಾವನೆ ಮತ್ತು ಮೈ  ಭಾಗಗಳ ನಂಟು ತೋರಿಸುತ್ತಿರುವ ತಿಟ್ಟ. ಎಲ್ಲಕ್ಕಿಂತ ಹೆಚ್ಚು ಹುರುಪುಗೊಂಡಿರುವ ಭಾಗಗಳು ಹಳದಿ ಬಣ್ಣದಲ್ಲಿ ಮತ್ತು ಕಡಿಮೆ ಹುರುಪುಗೊಂಡಿರುವ ಭಾಗಗಳನ್ನು ನೀಲಿ ಬಣ್ಣದಲ್ಲಿ ತೋರಿಸಲಾಗಿದೆ)

ಬೇರೆ ಬೇರೆ ಭಾವನೆಗಳಿಗೆ, ಮೈಯಿಯ ಬೇರೆ ಭಾಗಗಳು ಹುರುಪುಗೊಂಡಿರುವುದು ಕಂಡಿತಾದರೂ ಕೆಲವು ಭಾವನೆಗಳಿಗೆ ಮೈಯಿಯ  ಅದೇ ಭಾಗಗಳು ಹೆಚ್ಚು ಹುರುಪುಗೊಂಡಿರುವುದು ಕಂಡಿತು. ಎತ್ತುಗೆಗೆ: ಸಿಟ್ಟು ಮತ್ತು ಅಂಜಿಕೆಗೆ ಎದೆಯ ಮೇಲ್ಭಾಗ ಹೆಚ್ಚು ಹುರುಪುಗೊಳ್ಳುವಂತಹ ವಿಷಯ. ಹೀಗಾಗಲು ಸಿಟ್ಟು ಇಲ್ಲವೇ ಅಂಜಿಕೆಯಾದಾಗ ಉಸಿರಾಟ ಮತ್ತು ನಾಡಿ ಮಿಡಿತ ಹೆಚ್ಚಾಗುವುದು ಮುಖ್ಯ ಕಾರಣವಿರಬಹುದೆಂದು ಅರಕೆಗಾರರು ತಿಳಿಸಿದ್ದಾರೆ.

ಈ ಅರಕೆಯಲ್ಲಿ ಇನ್ನೊಂದು ಕರಾರುವಕ್ಕಾಗಿ ಕಂಡುಬಂದಿದ್ದೆಂದರೆ, ’ನಲಿವು’ ಆದಾಗ ಅಷ್ಟೇ ಇಡೀ ಮಯ್ಯಿ ಹೆಚ್ಚು ಹುರುಪುಗೊಳ್ಳುತ್ತದೆ. ಗೊತ್ತಾಯಿತಲ್ಲ, ನಲಿವಿನ ’ಹುರುಪು’ ಎಂತದು ಅಂತಾ 🙂.

ತಿಳಿವಿನ ಮತ್ತು ತಿಟ್ಟಸೆಲೆ: discovermagazine)

ನೆಲದಾಳದಲ್ಲಿ ಹೊಸ ನೀರು

ಪ್ರಶಾಂತ ಸೊರಟೂರ.

ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ !

ಎಂಬಂತ ಬಿಸಿ ಸುದ್ದಿ ಹಲವು ವರ್ಷಗಳಿಂದ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ ದಿನಗಳಲ್ಲಿ ಹೊಸದಾಗಿ ದೊರೆತ ಹೇರಳವಾದ ನೀರಿನ ಸೆಲೆ ಎಲ್ಲರನ್ನೂ ಸೆಳೆದಿತ್ತು. ಆದರೆ ಹಾಗೆ ದೊರೆತ ಸೆಲೆಯ ಆಳಕ್ಕೆ ಹೋಗುವುದು ಮತ್ತು ಅಲ್ಲಿಂದ ನೀರೆತ್ತಿ ನೆಲದ ಮೇಲ್ಗಡೆ ತರುವುದು ಈ ಹೊತ್ತಿಗಂತೂ ಆಗದ ಮಾತು ಅನ್ನುವಂತ ವಿಷಯ ಹಲವು ಮಂದಿಯ ಗಮನಕ್ಕೆ ಬರಲಿಲ್ಲವೆನ್ನಬಹುದು.

ಹೊಸ ನೀರಿನ ಸೆಲೆ ಎಟುಕದ ಕನ್ನಡಿಯಲ್ಲಿರುವ ಗಂಟಿನಂತಾದರೂ, ಈ ಹೊಸ ಕಂಡುಹಿಡಿಯುವಿಕೆ ನೆಲದಲ್ಲಿ ಕಡಲುಗಳು ಹೇಗೆ ಉಂಟಾದವು ಅನ್ನುವಂತ ಸಿಕ್ಕಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿದೆಯೆಂದು ಅರಿಮೆಗಾರರು ಅಂದುಕೊಂಡಿದ್ದಾರೆ. ನೀರಿನ ಈ ಹೊಸ ಸೆಲೆಯತ್ತ ಹೋಗುವ ಮುನ್ನ ನಮ್ಮ ನೆಲದ ಆಳಕ್ಕೆ ಮೊದಲು ಇಳಿಯೋಣ ಬನ್ನಿ.

ನೆಲದ ಮೇಲ್ಮಯಲ್ಲಿ ಕಡಲು, ಬೆಟ್ಟಗಳು ಇರುವುದು ಕಣ್ಣಿಗೆ ಕಾಣಿಸುವಂತದು. ನೆಲದಲ್ಲಿ ನೀರಿನ ಪಾಲು ಮೂರುಪಟ್ಟಿದೆ ಅನ್ನುವುದು ಅದರ ಮೇಲ್ಮಯನ್ನು ತೆಗೆದುಕೊಂಡಾಗಷ್ಟೇ ದಿಟ, ಆದರೆ ಅದರ ಒಡಲಾಳದ ರಚನೆಯನ್ನು ತಿಳಿದುಕೊಂಡಾಗ ಅದರ ಇಡಿಯಾದ ಕಟ್ಟಣೆ ನಮ್ಮ ಅರಿವಿಗೆ ಬರಬಲ್ಲದು. ನೆಲದ ಒಟ್ಟಾರೆ ತೂಕಕ್ಕೆ ಹೋಲಿಸಿದಾಗ ನೀರಿನ ತೂಕ, ಅದರ ಪ್ರಮಾಣ ತುಂಬಾನೇ ಕಡಿಮೆ. ನೆಲದಾಳವು ಮುಖ್ಯವಾಗಿ ಕಬ್ಬಿಣದಂತಹ ಜಲ್ಲಿಯ ವಸ್ತುಗಳಿಂದ ಕೂಡಿದೆ.

ಹಿಂದಿನ ಬರಹವೊಂದರಲ್ಲಿ ನೆಲದ ದುಂಡಗಲವು ಸುಮಾರು 12,756 ಕಿ.ಮೀ. ಮತ್ತು ಅದರ ರಾಶಿಯು (mass) ಸುಮಾರು 5.98 x1024 kg ಇರುವುದನ್ನು ತಿಳಿದುಕೊಂಡಿದ್ದೆವು. ನೆಲದ ಮೇಲ್ಮಯಿಂದ ನೆಲದ ನಡುವು (center) ಸುಮಾರು 12,756/ = 6378 ಕಿ.ಮೀ. ಆಳದಲ್ಲಿದೆ.

ಅದರ ಒಟ್ಟು ರಾಶಿಯಲ್ಲಿ ಕಬ್ಬಿಣವು ಸುಮಾರು 32.1%, ಆಕ್ಸಿಜನ್ 30.1%, ಸಿಲಿಕಾನ್ 15.1%, ಮ್ಯಾಗ್ನೇಸಿಯಂ 13.9%, ಗಂದಕ 2.9%, ನಿಕೆಲ್ 1.8%, ಕ್ಯಾಲ್ಸಿಯಂ 1.5% ಮತ್ತು ಅಲ್ಯುಮಿನಿಯಂ 1.4% ರಷ್ಟಿದೆ. ಕೆಳಗಿನ ತಿಟ್ಟದಲ್ಲಿ ನೆಲದ ಒಟ್ಟಾರೆ ಸೀಳುನೋಟವನ್ನು ತೋರಿಸಲಾಗಿದೆ.

ನೆಲದ ಇಟ್ಟಳವನ್ನು (structure) ತೊಗಟೆ (0-35 km), ಮೇಲ್ ಹೊದಿಕೆ (35-60 km), ಹೊದಿಕೆ (35-2890 km), ಹೊರತಿರುಳು (2890-5150) ಮತ್ತು ಒಳತಿರುಳು (5150-6378 km) ಅಂತಾ ಗುರುತಿಸಲಾಗಿದೆ. ನೆಲದ ಒಳತಿರುಳು ಮತ್ತು ಹೊರತಿರುಳಿನ ಭಾಗ ತುಂಬಾ ದಟ್ಟಣೆ ಹೊಂದಿದ್ದು ಮುಖ್ಯವಾಗಿ ಕರಗಿದ ಕಬ್ಬಿಣದಿಂದ ಕೂಡಿದೆ. ಹೊದಿಕೆಯ ಭಾಗವು ಸಿಲಿಕೇಟ್ ಕಲ್ಲುಗಳಿಂದ ಕೂಡಿದ್ದು ಕಬ್ಬಿಣ ಮತ್ತು ಮ್ಯಾಗ್ನೇಸಿಯಂ ಜಲ್ಲಿಗಳನ್ನು ಒಳಗೊಂಡಿದೆ. ತೊಗಟೆಯ ಭಾಗವು ಕಡಲಾಳ, ಕಲ್ಲುಗಳು, ಜಲ್ಲಿಗಳಿಂದ ಕೂಡಿದೆ.

ನೆಲದ ಆಳದಲ್ಲಿ ತುಂಬಾನೇ ಒತ್ತಡ ಮತ್ತು ಬಿಸುಪಿರುವುದರಿಂದ ಅದರ ಆಳಕ್ಕೆ ಕೆಲವು ಕಿ.ಮೀ. ಗಳಷ್ಟೇ ಮನುಷ್ಯರು ಮಾಡಿದ ಸಲಕರಣೆಗಗಳು ಇಳಿಯಬಲ್ಲವು. ಹಾಗೆ ನೋಡಿದರೆ ಇಲ್ಲಿಯವರೆಗೆ ನೆಲದ ಮೇಲ್ಮಯಿಂದ ಮನುಷ್ಯರಿಗೆ ಕೊರೆಯಲು ಆದ ತೂತಿನ ಆಳ ಬರೀ 12.3 ಕಿ.ಮೀ. (ರಷ್ಯಾ ಕೈಗೊಂಡ ತೂತು ಕೊರೆಯುವ ಹಮ್ಮುಗೆ, 1989). ನೆಲದಾಳದಲ್ಲಿ ಸಲಕರಣೆಗಳನ್ನು ಇಳಿಸಲು ಆಗದಿದ್ದರೂ, ನೆಲದ ಇಟ್ಟಳವನ್ನು ಅರಿಮೆಯ ಇತರ ಚಳಕಗಳನ್ನು ಬಳಸಿ ಅರಿತುಕೊಳ್ಳಲಾಗುತ್ತದೆ. ಅಂತಹ ಅರಿಮೆಯ ಚಳಕದಲ್ಲಿ ಮುಕ್ಯವಾದದ್ದು ನಡುಕದರಿಮೆ (Seismology).

ಮುಖ್ಯವಾಗಿ ನೆಲದ ತೊಗಟೆಯ ಭಾಗದಲ್ಲಿ ಬಿಡುಗಡೆಯಾಗುವ ಹೇರಳವಾದ ಕಸುವಿನಿಂದಾಗಿ ‘ನೆಲನಡುಕಗಳು’ (earthquakes) ಉಂಟಾಗುತ್ತವೆ. ಹೀಗೆ ಉಂಟಾದ ನೆಲನಡುಕಗಳು ಹೊಮ್ಮಿಸುವ ನಡುಕದ ಅಲೆಗಳು (seismic waves), ನೆಲದ ಮೇಲ್ಮಯಿಂದ ಹಿಡಿದು ಅದರ ತಿರುಳಿನ ಭಾಗದವರೆಗೆ ತೂರಬಲ್ಲವು. ನಡುಕದ ಅಲೆಗಳ ಹರಡುವ ಬಗೆ, ಅವುಗಳ ವೇಗ, ನೆಲದ ಇಟ್ಟಳವನ್ನು ಮೇಲೆ ತಿಳಿಸಿರುವಂತೆ ಗುರುತಿಸಲು ನೆರವಾಗಿವೆ. ನಡುಕದ ಅಲೆಗಳು ಬೇರೆ ಬೇರೆ ವಸ್ತುಗಳಲ್ಲಿ ಬೇರೆಯಾದ ವೇಗದಿಂದ ಹರಡುತ್ತವೆ. ಒಣಕಲ್ಲಿನಂತಹ ರಚನೆಯಲ್ಲಿ ಅವುಗಳ ವೇಗ ಬೇರೆಯಾಗಿದ್ದರೆ ನೀರಿನಿಂದ ಕೂಡಿದ ಹಸಿಕಲ್ಲಿನಲ್ಲಿ ವೇಗವು ಬೇರೆಯಾಗಿರುತ್ತದೆ.

ಮುಮ್ಮಲೆಗಳು (Primary/P Waves) ಎಂದು ಗುರುತಿಸಲಾಗುವ ನಡುಕದಲೆಗಳ ಒಂದು ಬಗೆ, ಗಟ್ಟಿಯಾದ ಮತ್ತು ನೀರಿನ ರೂಪದಲ್ಲಿರುವ ವಸ್ತಗಳೆರಡಲ್ಲೂ ಸಾಗಬಲ್ಲವು. ಅದೇ ಇಮ್ಮಲೆಗಳು (Secondary/S Waves) ಎಂಬ ನಡುಕದಲೆಗಳು ಗಟ್ಟಿಯಾದ ವಸ್ತುಗಳಲ್ಲಷ್ಟೇ ಸಾಗಬಲ್ಲವು.

Picture1

ಹಾಗೆನೇ ನೀರಿನ ರೂಪ ಇಲ್ಲವೇ ಅದರ ಅಂಶವನ್ನು ಹೊಂದಿದ ವಸ್ತುಗಳಲ್ಲಿ ಸಾಗುವಾಗ ಮುಮ್ಮಲೆಗಳ ವೇಗ ಬದಲಾಗುವುದು ಅರಕೆಯಿಂದ ತಿಳಿದುಬಂದಿದೆ. ಈ ಅರಿವನ್ನು ಬಳಸಿಕೊಂಡೇ ಇತ್ತೀಚಿಗೆ ನೆಲದಾಳದಲ್ಲಿ ’ನೀರಿದೆ’ ಎಂಬುದನ್ನು ಅಂದಾಜಿಸಲಾಗಿದೆ. ಈಗ ನಮ್ಮ ಈ ಬರಹದ ಮುಖ್ಯ  ವಿಷಯ’ನೆಲದಾಳ’ದಲ್ಲಿ ನೀರಿನತ್ತ ಬಂದಂತಾಯಿತು.

ಅಮೇರಿಕಾದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ನೆಲದಿರುವರಿಗ (geophysicist) ಸ್ಟೀವ್ ಜಾಕಬ್ಸನ್ (Steve Jacobsen) ಮತ್ತು ನ್ಯೂ ಮೆಕ್ಸಿಕೋ ಯೂನಿವರ್ಸಿಟಿಯ ನಡುಕದಲೆಯರಿಗ (seismologist) ಬ್ರಾಂಡನ್ (Brandon Schmandt) ಅವರು ನಡುಕದರಿಮೆ ಬಳಸಿ, ನೆಲದ ಮೇಲ್ಮೈಯಿಂದ ಸುಮಾರು 660 ಕಿ.ಮೀ. ಆಳದಲ್ಲಿ ನೀರಿನ ಬಿಡಿಕಣಗಳಿದ್ದು, ಅವುಗಳು ರಿಂಗ್‍ವುಡಯ್ಟ್ (Ringwoodite) ಎಂಬ ಹರಳು ರೂಪದಲ್ಲಿರುವ ವಸ್ತುವಿಗೆ ಅಂಟಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಿಂಗ್‍ವುಡಯ್ಟ್ (ಅದನ್ನು ಕಂಡುಹಿಡಿದ ಅರಿಮೆಗಾರರ ಹೆಸರಿನಿಂದ ಕರೆಯಲಾಗುತ್ತಿದೆ), ನೆಲದಾಳದ ಹೊದಿಕೆಯ ಭಾಗದಲ್ಲಿ ಹೇರಳವಾಗಿ ಇರುವ ವಸ್ತುವೆಂದು ನಡುಕದಲೆಗಳ ಮೂಲಕ ಈ ಮುಂಚೆ ಅರಿಯಲಾಗಿತ್ತು. ರಿಂಗ್‍ವುಡಯ್ಟ್ ಮುಖ್ಯವಾಗಿ  ಕಬ್ಬಿಣ ಮತ್ತು ಮ್ಯಾಗ್ನೇಸಿಯ್ಂ ನಿಂದ ಕೂಡಿದ್ದು, ತನ್ನ ತೂಕದ 2.1% ರಷ್ಟು ನೀರನ್ನು ಹಿಡಿದುಕೊಳ್ಳಬಲ್ಲದು ಅಂತಾನೂ ತಿಳಿಯಲಾಗಿತ್ತು. ಆದರೆ ಇಲ್ಲಿಯವರೆಗೆ ನೆಲದಾಳದ ರಿಂಗ್‍ವುಡಯ್ಟ್ ಹರಳಿನಲ್ಲಿ ನಿಜವಾಗಲೂ ನೀರಿದೆಯೇ ಎಂದು ಗೊತ್ತಾಗಿರಲಿಲ್ಲ.

BlueRingwoodite

(ನೆಲದ ಒಡಲಾಳದ ಹೊದಿಕೆಯ ಭಾಗದಲ್ಲಿ ಕಂಡುಬರುವ ರಿಂಗ್‍ವುಡಯ್ಟ್ ಹರಳು)

ಇಲ್ಲಿಯವರೆಗೆ ಉಂಟಾದ ಸುಮಾರು 500 ನೆಲನಡುಕಗಳ (earthquakes) ಮಾಹಿತಿಗಳನ್ನು ಸ್ಟೀವ್ ಜಾಕಬ್ಸನ್ ಅವರು ಒರೆಗೆಹಚ್ಚಿ ನೋಡಿದಾಗ, ನಡುಕದಲೆಗಳ (seismic waves) ವೇಗ ಸುಮಾರು 660 ಕಿ.ಮೀ. ನೆಲದಾಳಕ್ಕೆ ತಲುಪಿದಾಗಲೆಲ್ಲಾ ಬೇರೆಯಾಗಿರುವುದು ಮತ್ತು ಆ ವೇಗ ಹಸಿ ರೂಪದಲ್ಲಿರುವ ರಿಂಗ್‍ವುಡಯ್ಟ್ ಹರಳುಗಳಿಗೆ ತಾಗಿದಾಗ ಪಡೆಯುವ ವೇಗಕ್ಕೆ ಸಾಟಿಯಾಗಿದೆ ಎಂದು ತೋರಿಸಿದ್ದಾರೆ. ಇದಕ್ಕಾಗಿ ಅವರು ಮತ್ತು ಬ್ರಾಂಡನ್ ತಮ್ಮ ಅರಕೆಮನೆಯಲ್ಲಿ ಹಸಿ ಮತ್ತು ಒಣ ರಿಂಗ್‍ವುಡಯ್ಟ್ ಹರಳುಗಳಿಗೆ ನಡುಕದಲೆಗಳನ್ನು ತಾಗಿಸಿದಾಗ ದೊರೆತ ವೇಗ ಮತ್ತು ನೆಲನಡುಕಗಳು ನೀಡಿದ ಮಾಹಿತಿಯನ್ನು ತಾಳೆಹಾಕಿ ಈ ನಿಲುವಿಗೆ ಬಂದಿದ್ದಾರೆ.

ಹೀಗೆ ನೆಲದಾಳದಲ್ಲಿ ಇಳಿಯದೇ ಅರಿಮೆಯ ಚಳಕಗಳನ್ನು ಬಳಸಿ ನೆಲದ ಒಡಲಾಳದಲ್ಲಿ ನೀರಿರುವುದನ್ನು ಅರಿಮೆಗಾರರು ತೋರಿಸಿದಂತಾಗಿದೆ. ನಮಗೆ ಕಂಡಿರುವ ಈ ಹೊಸ ನೀರು ಬಳಕೆಗೆ ಎಟುಕದಂತಿದ್ದರೂ, ನಮ್ಮ ನೆಲದ ಮೇಲ್ಮೈಯಲ್ಲಿ ಉಂಟಾಗಿರುವ ಕಡಲುಗಳ ಹುಟ್ಟಿನ ಕತೆ ಮತ್ತು ಒಟ್ಟಾರೆಯಾಗಿ ನೆಲದ ರಚನೆಯ ಬಗ್ಗೆ ನಮಗೆ ಸಾಕಷ್ಟು ತಿಳುವಳಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.usatoday.com, scitechdaily.comwikipedia.org)

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

ಹರ್ಷಿತ್ ಮಂಜುನಾಥ್.

electric shock

ನೀವೊಂದು ಗಾದೆ ಕೇಳಿರಬಹುದು.

ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ!

ಈ ಗಾದೆಗೂ ಮಾನವನಿಗೂ ಮಿಂಚುಹೊಡೆತಕ್ಕೂ (Electric shock) ತುಂಬಾ ಹೊಂದಾಣಿಕೆಯಿದೆ. ಅಂದರೆ ಮನುಷ್ಯನ ಮಯ್ಯಿಗೆ ಮಿಂಚು ತಗಲಿದರೂ, ಮಿಂಚಿಗೆ ಮಯ್ಯಿ ತಗುಲಿದರೂ ಮಿಂಚುಹೊಡೆತಗಳು ಅನುಭವವಾಗುವುದು ಮನುಷ್ಯನಿಗೆ.  ಮಯ್ ತೊಗಲು, ಹುರಿಕಟ್ಟು(Muscle), ಕೂದಲು ಸೇರಿದಂತೆ ಮನುಷ್ಯನ ಅಂಗಗಳು ಮಿಂಚಿನ ಹರಿವಿಗೆ ತಗಲುವುದರಿಂದ ಮಿಂಚುಹೊಡೆತಗಳು ಏರ್ಪಡುತ್ತವೆ.

ಸಾಮಾನ್ಯವಾಗಿ ಮನುಷ್ಯನ ಗಮನಕ್ಕೆ ಬರಬಲ್ಲ ಮಿಂಚು, ಮಿಂಚಿನ ನೇರ ಹರಿವು(Direct current) ಅತವಾ ಬದಲಿ ಹರಿವು (Alternate current) ಮತ್ತು ಸಲದೆಣಿಕೆ(Frequency)ಯನ್ನು ನೆಚ್ಚಿಕೊಂಡಿರುತ್ತದೆ. ಆದರೆ ಕೆಲವೊಮ್ಮೆ ಸಣ್ಣ ಪ್ರಮಾಣದ ಮಿಂಚು ಮನುಷ್ಯನ ಗಮನಕ್ಕೆ ಬಾರದೆಯೂ ಇರಬಹುದು. ಅಷ್ಟಕ್ಕೂ ಮಯ್ಯಿಗೆ ಮಿಂಚು ತಗುಲಿದೊಡನೆ ಮಯ್ಯಿ ಮಿಂಚನ್ನು ಏಕೆ ಸೆಳೆದುಕೊಳ್ಳುತ್ತದೆ? ಮಿಂಚು ಮನುಷ್ಯನ ಮಯ್ಯ ಮೇಲೆ ಹರಿದಾಡಲು ನೆರವಾಗಬಲ್ಲ ಅಂಶಗಳೇನು? ಮತ್ತು ಮಿಂಚೊಡೆತಗಳು ಮನುಷ್ಯನ ಬದುಕಿಗೆ ಹೇಗೆ ಕುತ್ತು ತರುತ್ತವೆ? ಎಂಬುದನ್ನು ಮುಂದೆ ತಿಳಿಯೋಣ.

ಮನುಷ್ಯನ ಮಯ್ಯಿಗೆ ಮಿಂಚು ತಗಲಿದೊಡನೆ ಮಯ್ಯಿ ಮಿಂಚನ್ನು ಸೆಳೆದುಕೊಳ್ಳಲು ಮುಕ್ಯ ಕಾರಣ ರಾಸಾಯನಿಕ ಕಸುವು (Chemical energy). ಇದು ಮಯ್ಯಿಯ ಒಳಗಡೆ ಏರ್ಪಡುವ ಸೀರಕೂಟಗಳು (Atoms)  ಮತ್ತು ಅಣುಕೂಟಗಳ (Molecules) ಪ್ರತಿಕ್ರಿಯೆಯಿಂದ (Reactions) ಏರ್ಪಡುತ್ತದೆ.

  • ನಾವು ಸೇವಿಸುವ ಕೆಲವು ಆಹಾರ ಹೊಟ್ಟೆಯೊಳಗೆ ಕರಗುವ ಹೊತ್ತಿನಲ್ಲಿ ಆಹಾರಗಳಲ್ಲಿರುವ ಅಣುಕೂಟಗಳು ಚಿಕ್ಕ ಚಿಕ್ಕ ಅಣುಕೂಟಗಳಾಗಿ ಬೇರ್ಪಡುತ್ತವೆ. ಈ ಅಣುಕೂಟಗಳು ಮನುಷ್ಯನ  ಮಯ್ಯೊಳಗೆ ಉಸಿರುಗಾಳಿ(O2-Oxygen), ಸೋಡಿಯಂ (Na-Sodium), ಪೊಟ್ಯಾಶಿಯಂ  (K-Potassium), ಮತ್ತು ಬೇರುಸುಣ್ಣ(Ca-Calcium) ನಂತಹ ಬೇರಡಕಗಳನ್ನು (Elements) ಕಟ್ಟಿಕೊಡುತ್ತದೆ.
  • ಅಲ್ಲದೇ ಇವೆಲ್ಲಕ್ಕೂ ಅದರದ್ದೇ ಆದ ಮಿಂಚಿನ ಹುರುಪು (Electrical charge) ಇರುತ್ತದೆ. ಅಂದರೆ ಇವುಗಳಲ್ಲಿ ಗೊತ್ತುಮಾಡಿದ ಎಣಿಕೆಯ ಕೊಡುವಣಿಗಳು (Protons), ನೆಲೆವಣಿಗಳು (Neutrons) ಮತ್ತು ಕಳೆವಣಿಗಳು (Electrons) ಇರುತ್ತವೆ. ಇಂತಹ ಮಿಂಚಿನ ಹುರುಪುಗಳು ಕೂಡು-ಹುರುಪು (Positive charge) ಆಗಿರಲೂಬಹುದು ಅತವಾ ಕಳೆ-ಹುರುಪು(Negative charge) ಆಗಿರಲೂಬಹುದು, ಒಟ್ಟಿನಲ್ಲಿ ಇವು ಅಣುಕೂಟಗಳೊಂದಿಗೆ ಪ್ರತಿಕ್ರಿಯಿಸುತ್ತದೆ.
  • ಇಂತಹ ಕ್ರಿಯೆಯನ್ನು ಅಣು ಕೂಡಿಕೆ (Nuclear fusion) ಎನ್ನುವರು, ಮತ್ತು ಈ ಪ್ರಕ್ರಿಯೆಗಳು ಮಿಂಚು ಹರಿಯಲು ಬೇಕಾದ ಕಸುವನ್ನು ಹುಟ್ಟುಹಾಕುತ್ತದೆ.

ಹೀಗೆ ಮಿಂಚು ಮಯ್ಯ ಒಳಗಡೆಗೆ ಹರಿಯಲು ಬೇಕಾದ ಅಂಶಗಳು ಮಯ್ಯಲ್ಲಿರುವುದರಿಂದ ಮಿಂಚು ಮಯ್ಯೊಳಗೆ ಹರಿದು ಮಿಂಚೊಡೆತದ ಅರಿವು ನಮಗಾಗುತ್ತದೆ. ಇಂತಹ ಮಿಂಚುಹೊಡೆತಗಳು ಸಾವು ತರಲೂಬಹುದು. ಹೀಗೆ ಮಿಂಚಿನಿಂದಾಗುವ ಸಾವನ್ನು ಮಿಂಮಡಿತ (Electrocution) ಎನ್ನುವರು. ಆದರೆ ನಿಮಗೆ ತಿಳಿದಿರಲಿ, ಹೆಚ್ಚಿನ ಮಿಂಚೊಡೆತದ ಸಾವುಗಳು ಮಿಂಚಿನ ಬದಲಿ ಹರಿವಿನಿಂದ ಆಗುತ್ತದೆ. ಮತ್ತು ಹೆಚ್ಚಾಗಿ 500 ವೋಲ್ಟ್ ಗಿಂತಲೂ ಕಡಿಮೆ ಹರಿವಿನಿಂದ ಆಗುತ್ತದೆ. ಅಂದ ಮಾತ್ರಕ್ಕೆ ಹೆಚ್ಚು ವೋಲ್ಟ್ ಇರುವ ಮಿಂಚೊಡೆತ ಅಪಾಯಕಾರಿಯಲ್ಲ ಎಂದಲ್ಲ. ಇಲ್ಲಿ ಮನುಷ್ಯನ ಮಯ್ಯಲ್ಲಿರುವ ತಡೆತ(Resistance) ಹೆಚ್ಚಿನ ಪಾತ್ರವಹಿಸುತ್ತದೆ.

ಅಂದರೆ ಮಯ್ಯ ಒಣಬಾಗಕ್ಕೆ ಮಿಂಚು ತಗುಲಿದರೆ ಮಯ್ಯೊಳಗೆ ಹರಿಯಬಲ್ಲ ಮಿಂಚಿನ ಸಾಧ್ಯತೆಗಿಂತ, ತಂಪಿನ ಭಾಗಕ್ಕೆ ಮಿಂಚು ತಗುಲಿದರೆ ಮಿಂಚೊಡೆತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕಾರಣ ಒಣಭಾಗಕ್ಕೆ ಹೆಚ್ಚಿನ ತಡೆತವಿರುತ್ತದೆ. ಹಾಗಾಗಿ ಇದು ಅಷ್ಟು  ಬೇಗನೆ ಮಿಂಚನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದರೆ ತಂಪಿರುವ ಭಾಗಕ್ಕೆ ತಡೆತ ಕಡಿಮೆ ಇರುವುದರಿಂದ ಬೇಗನೆ ಮಿಂಚು ಮಯ್ಯೊಳಗೆ ಹರಿಯುತ್ತದೆ. ಮಿಂಚು ಮನುಷ್ಯನ ಮಯ್ಯ ಯಾವುದೇ ಬಾಗಕ್ಕೆ ತಾಕಿದರೂ ಆ ಭಾಗವನ್ನು ಹಾನಿಗೊಳಿಸುತ್ತದೆ. ಹಾಗಾಗಿ ಮಿಂಚೊಡೆತದಿಂದ ಗಾಯಗಳಾಗುವುದು ಸಹಜ.

ಆದರೆ ಇಲ್ಲಿ ನಾವು ಕೆಲವು ವಿಷಯಗಳನ್ನು ಗಮನಿಸಬೇಕು.

  • ಮಿಂಚೊಡೆತ ನಡೆದಾಗ ಎಷ್ಟು ಆಂಪ್ (Amp) ಮಿಂಚು ಒಳಹರಿವಾಗಿದೆ.
  • ಮಯ್ಯಲ್ಲಿ ಮಿಂಚು ಹರಿದಾಡುವ ದಾರಿ
  • ಮಯ್ಯಿ ಮಿಂಚಿಗೆ ಸೋಕಿರುವ ಒಟ್ಟು ಹೊತ್ತು.

ಮಿಂಚೊಡೆತದಿಂದ ಮಯ್ಯಲ್ಲಿ ಆಗಬಹುದಾದ ಅರಿದಾದ (important) ತೊಂದರೆಗಳೆಂದರೆ,
i. ಮಯ್ ಸುಡುವಿಕೆ (burns): ಮಿಂಚಿನ ಹರಿವಿಗೆ  ಮಯ್ ಒಡ್ಡುವ ತಡೆತದಿಂದಾಗಿ (resistance) ಹೊಮ್ಮುವ ಬಿಸುಪು (heat) ಗೂಡುಕಟ್ಟುಗಳನ್ನು (tissues) ಸುಡುತ್ತದೆ.
ii. ಗುಂಡಿಗೆಯ ತೊರೆಗೋಣೆಗಳಏರ್ಪಡಿತವನ್ನು ಉಂಟುಮಾಡುತ್ತದೆ (ventricular fibrillation).
iii. ಮಿಂಚು ತನ್ನ ಹರಿವಿನ ಹಾದಿಯಲ್ಲಿ ಬರುವು ನರಗಳಿಗೂ ಹಾನಿಯನ್ನುಂಟು ಮಾಡುವ ಅಳವನ್ನು ಹೊಂದಿದೆ.

ಮಿಂಚೊಡೆತದಿಂದ ಮಯ್ಯಲ್ಲಿ ಉಂಟಾಗುವ ಏರು-ಪೇರುಗಳು ಮನುಷ್ಯರನ್ನು ಸಾವಿನ ದವಡಿಗೂ ನೂಕಬಹುದು. ಹೀಗೆ ಮಿಂಚೊಡೆತದಿಂದ  ಆಗುವು ಸಾವನ್ನು ‘ಎಲೆಕ್ಟ್ರಿಕ್ಯೂಶನ್’ ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಇದನ್ನು ‘ಮಿಂಮಡಿತ’ ಎಂದು ಹೇಳಬಹುದು. ‘ಎಲೆಕ್ಟ್ರಿಕ್ಯೂಶನ್’ ಪದವನ್ನು 1890 ರಲ್ಲಿ ಮೊದಲಸಲ ಬಳಸಲಾಯಿತು. ಆ ಹೊತ್ತಿನಲ್ಲಿ ಮಿಂಚನ್ನು ಬಳಸಿ ಕೈದಿಗಳನ್ನು ಕೊಲ್ಲುತ್ತಿದ್ದ ಬಗೆಯನ್ನಷ್ಟೇ ‘ಎಲೆಕ್ಟ್ರಿಕ್ಯೂಶನ್’ ಎಂದು ಕರೆಯುತ್ತಿದ್ದರು. ಮುಂದೆ ಮಿಂಚಿನ ಕೆಟ್ಟಾಗುಹಗಳಿಂದ (accident) ಉಂಟಾಗುವ ಸಾವುಗಳಿಗೂ ‘ಎಲೆಕ್ಟ್ರಿಕ್ಯೂಶನ್’ ಪದವನ್ನು ಬಳಸಲಾರಂಬಿಸಿದರು.

(ತಿಟ್ಟಸೆಲೆ: dawsonpower.com)

3-Phase ಕರೆಂಟ್ ಅಂದರೇನು?

ಪ್ರಶಾಂತ ಸೊರಟೂರ.

3 Phase

3 ಫೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಪಠ್ಯಪುಸ್ತಕದ ಹೊರತಾಗಿ ಸರಳವಾಗಿ ತಿಳಿಸುವ ಪ್ರಯತ್ನ).

1) 3 ಬೇರೆ ಬೇರೆಯಾದ ತಂತಿಗಳನ್ನು ಬಳಸಿ ಕರೆಂಟ್ ಸಾಗಿಸುವುದಕ್ಕೆ 3 ಫೇಸ್ (ಹಂತ) ಅನ್ನುತ್ತಾರೆ. ಅಂದರೆ 1 ಫೇಸ್ನಲ್ಲಿ ಕರೆಂಟ್ ಸಾಗಿಸಲು 1 ತಂತಿ  ಬೇಕಾದರೆ 10 ಫೇಸ್ಗೆ 10 ತಂತಿಗಳು ಬೇಕು. ಹಾಗಾದರೆ ಫೇಸ್ ಅಂದರೇನು? ಮುಂದೆ ತಿಳಿದುಕೊಳ್ಳೋಣ.

2) ಕರೆಂಟ್ ಅಲೆಯ ರೂಪದಲ್ಲಿ ಹೊಮ್ಮುತ್ತದೆ. ಕೆರೆಯಲ್ಲಿ ಕಲ್ಲು ಎಸೆದಾಗ ಚಿಕ್ಕ ತೆರೆಯ ಅಲೆಗಳು ಹೇಗೆ ಹೊಮ್ಮುವವೋ ಹಾಗೆ ಕರೆಂಟ್ ಕೂಡಾ ಅಲೆಗಳಂತೆ ಸಾಗುತ್ತದೆ. ಕಲ್ಲು ತಾಕಿದ ಸ್ಥಳದಿಂದ ಅಲೆಗಳು ಎಲ್ಲ ಕಡೆ  ಹರಡುವುದನ್ನೂ ನೀವು ಗಮನಿಸಿರಬಹುದು. ಈಗ ಅದೇ ಅಲೆಗಳು ಒಂದು ಕೊಳವೆಯಲ್ಲಿ ಸಾಗಿದರೆ ಹೇಗಿರುತ್ತೆ ಅನ್ನುವುದನ್ನು ಊಹಿಸಿಕೊಳ್ಳಿ ಹೀಗೆನೇ ಕರೆಂಟ್ ಕೂಡಾ ಅಲೆಗಳಂತೆ ಒಂದು ತಂತಿಯಲ್ಲಿ ಏರಿಳಿತದೊಂದಿಗೆ ಸಾಗುತ್ತದೆ. ಆದರೆ ನೀರಿನ ಅಲೆಗಳಿಗೆ ಹೋಲಿಸಿದಾಗ ಕರೆಂಟ್ ಅಲೆಗಳ ಏರಿಳಿತ ತುಂಬಾನೇ ಹೆಚ್ಚಾಗಿರುತ್ತದೆ. ನಮ್ಮ ಮನೆಗೆ ತಲುಪುವ ಕರೆಂಟ್ ಈ ತರಹದಲ್ಲಿ ಪ್ರತಿ ಸೆಕೆಂಡಿಗೆ 50 ಸಲದ ಏರಿಳಿತ ಹೊಂದಿರುತ್ತದೆ! ಇದಕ್ಕೆ ಸಲದೆಣಿಕೆ (frequency) ಅನ್ನುತ್ತಾರೆ. ಮೀಟರಗಳ ಮೇಲೆ 50 Hz ಅಂತಾ ಬರೆದಿರುವುದನ್ನು ನೀವು ಗಮನಿಸಿರಬಹುದು ಅದೇ ಈ  ಸಲದೆಣಿಕೆ (frequency). ಮೇಲೆ ತಿಳಿಸಿದಂತೆ ಕರೆಂಟ್ ಏರು-ಇಳಿತದೊಂದಿಗೆ ಸಾಗುತ್ತದೆ. ಏರಿಕೆಯ ಕೊನೆಯಲ್ಲಿ, ಎಲ್ಲಕ್ಕಿಂತ ಹೆಚ್ಚಿನ ಕರೆಂಟ್ ಇದ್ದರೆ ಇಳಿತದ ಕೊನೆಯಲ್ಲಿ ಕರೆಂಟ್ ಎಲ್ಲಕ್ಕಿಂತ ಕಡಿಮೆಯಿರುತ್ತದೆ. ಈ ಏರು-ಇಳಿತದಲ್ಲಿ ಕರೆಂಟಿನ ಯಾವುದೇ ಹಂತವನ್ನು ‘ಫೇಸ್’ ಅಂತಾ ಕರೆಯಲಾಗುತ್ತದೆ.

3) ಇದಕ್ಕೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಚಂದ್ರ ಅಮವಾಸ್ಯೆಯಿಂದ ಹುಣ್ಣಿಮೆವರೆಗೆ ದೊಡ್ಡದಾಗುವಂತೆ ಕಾಣಿಸಿದರೆ ಹುಣ್ಣಿಮೆಯಿಂದ ಅಮವಾಸ್ಯೆಯೆಡೆಗೆ ಸಾಗಿದಾಗ ಚಿಕ್ಕದಾಗುವಂತೆ ಕಾಣಿಸುತ್ತಾನೆ. ಹುಣ್ಣಿಮೆಯ ತುಂಬು ಚಂದಿರ ಮತ್ತು ಅಮವಾಸ್ಯೆಯ ಮರೆಯಾದ ಚಂದ್ರನ ನಡುವಿನ ದಿನಗಳಲ್ಲಿ ನಮಗೆ ಚಂದ್ರನ ಹಲವು ಹಂತಗಳು ಕಾಣಿಸುತ್ತವೆ. ಒಮ್ಮೆ ಚಂದ್ರ ಅರೆ (1/2) ಚಂದ್ರನಾದರೆ ಇನ್ನೊಮ್ಮೆ ಮುಕ್ಕಾಲು (3/4) ಚಂದ್ರನಂತೆ ಕಾಣುತ್ತಾನೆ. ಇದನ್ನೇ ‘ಹಂತ’ ಇಲ್ಲವೇ ಫೇಸ್ ಅಂತಾ ಕರೆಯೋದು! ಕರೆಂಟಿನ್ ಏರು-ಇಳಿತದಲ್ಲಿರುವ ಹಂತ/ಫೇಸ್.

4) ಈಗ, ಒಂದಕ್ಕೊಂದು ಜೋಡಿಸಿರದ 2 ತಂತಿಗಳಿವೆ ಅಂದುಕೊಳ್ಳಿ. ಅವುಗಳಲ್ಲಿ ಹರಿಯುವ ಕರೆಂಟ್ ಎರಡರಲ್ಲೂ ಒಂದೇ ಹಂತದಲ್ಲಿ (ಫೇಸ್) ಇರಲು ಸಾಧ್ಯವೇ ? ಅಂದರೆ ಒಂದು ತಂತಿಯಲ್ಲಿ ಕರೆಂಟ್ ಏರಿಕೆಯ ತುದಿಯಲ್ಲಿದ್ದರೇ ಎರಡನೇಯ ತಂತಿಯಲ್ಲೂ ಕರೆಂಟ್ ಅದೇ ಹಂತದಲ್ಲಿ ಇರಲು ಸಾಧ್ಯವೇ ? ಹಾಗೊಮ್ಮೆ ಇದ್ದರೆ ಅದು ಕಾಕತಾಳಿಯವಷ್ಟೇ. ಅಂದರೆ 10 ಬೇರ್ಪಟ್ಟ ತಂತಿಗಳನ್ನು ತೆಗೆದುಕೊಂಡರೆ ಅವುಗಳಲ್ಲಿ ಹರಿಯುವ ಕರೆಂಟಿನ ಹಂತ (ಫೇಸ್) ಬೇರೆ ಬೇರೆಯಾಗಿರುತ್ತದೆ. ಒಂದರಲ್ಲಿ ಕರೆಂಟ್ ಏರಿಕೆಯಾಗುತ್ತಿದ್ದರೆ ಇನ್ನೊಂದರಲ್ಲಿ ಇಳಿಕೆಯಾಗುತ್ತಿರಬಹುದು, ಮತ್ತೊಂದರಲ್ಲಿ ಇವೆರಡರ ನಡುವಿನ ಯಾವುದೇ ಹಂತದಲ್ಲಿರಬಹುದು.

5) ಆಯಿತು! ಈಗ ಈ ಹಂತ/ಫೇಸ್ ನಮಗೆ ಹೇಗೆ ನೆರವಾಗುತ್ತದೆ ಎಂದು ತಿಳಿಯಬೇಕಲ್ಲ! ಕರೆಂಟ್ ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಅಂತಾ ಒಮ್ಮೆ ನೆನಪಿಸಿಕೊಳ್ಳೋಣ. ಅದೊಂದು ಶಕ್ತಿಯ ಪೆಟ್ಟು/ಹೊಡೆತ ಇದ್ದಂಗೆ. ಗಾಡಿಯನ್ನು ಶುರುಮಾಡಲು ‘ಕಿಕ್’ ಹೊಡೆಯುತ್ತಿವಲ್ಲ ಹಾಗಿರುವ ಪೆಟ್ಟು/ಹೊಡೆತ ಅದು. ಮೇಲೆ ನೋಡಿದಂತೆ ಕರೆಂಟಿನದು ಪ್ರತಿ ಸೆಕೆಂಡಿಗೆ 50 ಹೊಡೆತ/ಪೆಟ್ಟುಗಳು. 1 ಫೇಸ್ ಬಳಸಿ ಈ ಬಗೆಯ ಕರೆಂಟ್ ಪೆಟ್ಟುಗಳಿಂದ ಚಿಕ್ಕದಾದ ಮೋಟಾರ್‍ ನಡೆಸಬಹುದು ಆದರೆ ಅದೇ ಗದ್ದೆಯಲ್ಲಿ ಬೇಕಾದ 10 HP ಯಷ್ಟು ದೊಡ್ಡದಾದ ಪಂಪ್ ನಡೆಸಲು ಹೆಚ್ಚಿನ ಕಸುವು ಬೇಕು. ಇಂತಲ್ಲಿ 1 ತಂತಿಯಿಂದ ಹೊರಡುವ ಕರೆಂಟಿನ ಪೆಟ್ಟುಗಳನ್ನು ಕೊಡುವುದಕ್ಕಿಂತ 2-3 ತಂತಿಗಳಲ್ಲಿ ಕರೆಂಟ್ ಹರಿಸಿ ಪೆಟ್ಟುಗಳನ್ನು ಕೊಟ್ಟರೆ ಪಂಪನ್ನು ಸುಲಬವಾಗಿ ಓಡಿಸಬಹುದು. ಒಂದು ಗಾಲಿಯನ್ನು ಒಬ್ಬರೇ ತಿರುಗಿಸುವುದಕ್ಕಿಂತ ಹಲವು ಜನರು ಒಂದಾಗಿ ಸುಲಭವಾಗಿ ತಿರುಗಿಸಿದಂತೆಯೇ ಇದು.

6) ಹಾಗಾಗಿ, ದೊಡ್ಡ ಸಲಕರಣೆಗಳನ್ನು ನಡೆಸಲು 1 ಫೇಸ್ ಕರೆಂಟಗಿಂತ 3 ಫೇಸ್ ಕರೆಂಟ್ ಒಳ್ಳೆಯದು. ಹಾಗಿದ್ದರೆ 4 ಇಲ್ಲವೇ 5 ಫೇಸಗಳನ್ನು ಏಕೆ ಬಳಸಬಾರದು ಅನ್ನುವ ಪ್ರಶ್ನೆ ಹಲವರಲ್ಲಿ ಮೂಡಬಹುದು. ಇದಕ್ಕೆ ಉತ್ತರ ಸರಳವಾಗಿದೆ 3 ಫೇಸಗಳಲ್ಲಿ ಕಡಿಮೆ ದುಡ್ಡಿನಿಂದ ಮಾಡಬಹುದಾದುಕ್ಕೆ 4-5 ಫೇಸ್ಗಳನ್ನು ಯಾಕೇ ಬಳಸಬೇಕು, ಅಲ್ಲವೇ ?! ಆದ್ದರಿಂದ ಅಗತ್ಯವಿರುವ ಎಲ್ಲೆಡೆ  ಕಡಿಮೆ ವೆಚ್ಚದ 3 ಫೇಸ ಕರೆಂಟನ್ನೇ ಬಳಸಲಾಗುತ್ತದೆ.

7) ಗಮನಿಸಿ ನೋಡಿ ನಿಮ್ಮ ಅಕ್ಕಪಕ್ಕದಲ್ಲಿರುವ ಟ್ರಾನ್ಸ್ಪಾರ್ಮರ್ ಇಂದ ಕರೆಂಟ್ 3 ತಂತಿಯಲ್ಲಿ ಹೊರಬರುತ್ತದೆ. ಅಂದರೆ ಅದು 3 ಫೇಸ್ ಆಗಿರುತ್ತದೆ. ಅಲ್ಲಿಂದ ಕರೆಂಟನ್ನು ಕಂಬವೊಂದಕ್ಕೆ ಸಾಗಿಸಿ, ಮುಂದೆ ಎಲ್ಲರ ಮನೆಗೆ ನೀಡಲಾಗುತ್ತದೆ. ಕರೆಂಟ್ ಕಂಬದಿಂದ ಹೊರಡುವ ತಂತಿಗಳ ಮೇಲೆ ಇಲ್ಲವೇ ಬದಿಯಲ್ಲಿ ಇನ್ನೊಂದು ಹೆಚ್ಚಿನ ತಂತಿ ಇರಬಹುದು ಇದಕ್ಕೆ ನ್ಯೂಟ್ರಲ್ ಇಲ್ಲವೇ ಗ್ರೌಂಡ್ (ನೆಲ) ತಂತಿ ಅನ್ನುತ್ತಾರೆ. ಇದು ಕರೆಂಟಿನಲ್ಲಿ ಏರಿಳಿತವಾದಾಗ ಹೆಚ್ಚಿನ ಕರೆಂಟನ್ನು ನೆಲಕ್ಕೆ ಸಾಗಿಸಿ ತೊಂದರೆಯಿಂದ ಕಾಪಾಡುತ್ತದೆ.

8) ಹೀಗೆ, ದೊಡ್ಡ ಸಲಕರಣೆಗಳಿಗೆ ಹೆಚ್ಚಿನ ಕರೆಂಟ್ ಬೇಕಾದಾಗ ಎಲ್ಲ 3 ತಂತಿಗಳಿಂದ ಕರೆಂಟನ್ನು ಪಡೆಯಲಾಗುತ್ತದೆ. ಅದೇ ನಿಮ್ಮ ಮನೆಯಲ್ಲಿ ಚಿಕ್ಕ ಸಲಕರಣೆಗಳಿದ್ದು ಅವುಗಳಿಗೆ ಕರೆಂಟ್ ಕಡಿಮೆ ಬೇಕಾಗಿದ್ದರೆ 3 ತಂತಿಗಳಲ್ಲಿ ಬರೀ 1 ತಂತಿಯಿಂದ ಕರೆಂಟ್ ಪಡೆದರೂ ಸಾಕು. ಅದರಿಂದಲೇ ಟ್ಯೂಬಲಯ್ಟ್, ಫ್ಯಾನ್, ಮಿಕ್ಸರ್‍ ಮುಂತಾದ ಸಲಕರಣೆಗಳನ್ನು ನಡೆಸಬಹುದು.

ನಿಮ್ಮಲ್ಲಿ ಒಂಚೂರು ಹೆಚ್ಚಿಗೆನೇ ಕರೆಂಟಿನಿಂದ ನಡೆಯುವ ಉಪಕರಣಗಳಿದ್ದರೆ ಆಗ 2 ತಂತಿಗಳಿಂದ ನಿಮ್ಮ ಮನೆಗೆ ಕರೆಂಟನ್ನು ಒದಗಿಸಲಾಗುತ್ತದೆ. ಟ್ಯೂಬಲಯ್ಟನಂತಹ ಬೆಳಕಿನ ಸಲಕರಣೆಗಳಿಗೆ ಒಂದು ತಂತಿಯಾದರೆ, ಕರೆಂಟ್ ಒಲೆಯಂತಹ ಬಿಸಿ ಮಾಡುವ ಸಲಕರಣೆಗಳನ್ನು ನಡೆಸಲು ಎರಡನೆಯದು.

ಸರಿ ಹಾಗಾದ್ರೆ, ಮುಂದಿನ ಸರತಿ ಕರೆಂಟ್ ಕಂಬದಲ್ಲಿ 3 ತಂತಿಗಳು ಏಕಿವೆ ಅನ್ನುವ ಪ್ರಶ್ನೆಯನ್ನು ಯಾರಾದರೂ ನಿಮಗೆ ಕೇಳಿದರೆ ನೀವೇ ಅದಕ್ಕೆ ಉತ್ತರಿಸಬಲ್ಲಿರಿ, ಅಲ್ಲವೇ !

ಇಂಗ್ಲಿಷ್ ಮೂಲ: ‘ಬೆಸ್ಕಾಂ ಮಣಿವಣ್ಣನ್’.

ಕನ್ನಡಕ್ಕೆ: ಪ್ರಶಾಂತ ಸೊರಟೂರ

ವೋಲ್ಟೆಜ್ ಎಂಬ ಒತ್ತಡ, ಕರೆಂಟ್ ಎಂಬ ಹರಿವು

ಪ್ರಶಾಂತ ಸೊರಟೂರ.

ಕಳೆದ ಕೆಲವು ಬರಹಗಳಲ್ಲಿ (1,2,3) ಮೊದಲ ಹಂತದಿಂದ ಕರೆಂಟ್ ಕುರಿತು ತಿಳಿದುಕೊಂಡೆವು. ಈ ಬರಹದಲ್ಲಿ ನಮ್ಮ ಸುತ್ತಮುತ್ತ ಕಾಣುವ ವಿಷಯಗಳ ಜೊತೆ ಹೋಲಿಸಿ ಕರೆಂಟ್ ಮತ್ತು ಅದಕ್ಕೆ ನಂಟಿರುವ ಮತ್ತಷ್ಟು ವಿಷಯಗಳ ಕುರಿತು ತಿಳಿದುಕೊಳ್ಳೋಣ.

minchu_holike_neerina_totti_2

ಚಿತ್ರ 1 ರಲ್ಲಿ ತೋರಿಸಿದಂತೆ ನೀರಿನ ಎರಡು ತೊಟ್ಟಿಗಳಿದ್ದು, ಒಂದರಲ್ಲಿ ನೀರಿನ ಮಟ್ಟ ಹೆಚ್ಚಿಗೆ ಮತ್ತು ಇನ್ನೊಂದರಲ್ಲಿ ಮಟ್ಟ ಕಡಿಮೆ ಇದೆ ಎಂದುಕೊಳ್ಳೋಣ. ಈಗ ಇವೆರಡು ತೊಟ್ಟಿಗಳನ್ನು ಕೊಳವೆಯೊಂದರಿಂದ ಸೇರಿಸಿದಾಗ ಏನಾಗುತ್ತದೆ? ಮಟ್ಟ ಹೆಚ್ಚಿಗೆ ಇರುವ ತೊಟ್ಟಿಯಿಂದ ಕಡಿಮೆ ಮಟ್ಟ ಇರುವ ತೊಟ್ಟಿಗೆ ನೀರು ಹರಿಯತೊಡಗುತ್ತದೆ. ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ನೀರು ಹರಿಯಲು ಕಾರಣ ನೀರಿನ ಮಟ್ಟದಲ್ಲಿದ್ದ ಏರುಪೇರು ಇದನ್ನು ’ಒತ್ತಡದ ಬೇರ್ಮೆ’ (pressure/potential difference) ಅನ್ನುತ್ತಾರೆ.

ಹೆಚ್ಚಿಗೆಯಿಂದ ಕಡಿಮೆಯೆಡೆಗೆ ನಡೆಯುವ ಈ ಬಗೆಯ ಸಾಗಾಟ ನೀರಿಗಷ್ಟೇ ಅಲ್ಲದೇ ಬೇರೆ ಹಲವು ವಿಷಯಗಳಲ್ಲಿ ನಡೆಯುವುದನ್ನು ನಾವು ಗಮನಿಸಬಹುದು. ಹೆಚ್ಚಿನ ಬಿಸುಪಿನಿಂದ (temperature) ಕಡಿಮೆ ಬಿಸುಪಿನಡೆಗೆ ಕಾವು ಸಾಗುವುದು ಇದಕ್ಕೆ ಇನ್ನೊಂದು ಎತ್ತುಗೆ.

ಈಗ ನೀರಿನ ತೊಟ್ಟಿಗಳನ್ನು ಸೇರಿಸಿದ ಕೊಳವೆಯಲ್ಲಿ ಒಂದು ತೆರುಪು (valve) ಅಳವಡಿಸೋಣ. ಈ ತೆರುಪು ತಿರುಗಿಸಿ ನೀರು ಹರಿಯಲು ಇದ್ದ ಜಾಗವನ್ನು ಕಿರಿದಾಗಿಸಿದರೆ ಏನಾಗುತ್ತದೆ? ಆಗ ಒಂದು ತೊಟ್ಟಿಯಿಂದ ಇನ್ನೊಂದು ತೊಟ್ಟಿಯೆಡೆಗೆ ಇದ್ದ ನೀರಿನ ’ಹರಿವು’ ಕಡಿಮೆಯಾಗುತ್ತದೆ ಅಲ್ಲವೇ? ತಿರುಪು ತಿರುಗಿಸುತ್ತಾ ಹೋದಂತೆ ಕೊನೆಗೆ ನೀರಿನ ಹರಿವು ನಿಂತು ಹೋಗುತ್ತದೆ.

ಈಗ ಮೇಲಿನ ಉದಾಹರಣೆಯನ್ನು ಕರೆಂಟಿನ ವಿಷಯಕ್ಕೆ ಹೋಲಿಸೋಣ (ಚಿತ್ರ 2 ನೋಡಿ). ಕರೆಂಟ್ ದೊರೆಯಬೇಕೆಂದರೆ ವಸ್ತುಗಳಲ್ಲಿರುವ  ಕಳೆವಣಿಗಳನ್ನು (electrons) ಹರಿಯುವಂತೆ ಮಾಡಬೇಕು. ಕಳೆವಣಿಗಳು ಹರಿಯಬೇಕೆಂದರೆ ಅವುಗಳನ್ನು ಕಸುವೊಂದು ಒತ್ತಡದಿಂದ ತಳ್ಳಬೇಕು. ಕಳೆವಣಿಗಳನ್ನು ಒತ್ತಿ ಕರೆಂಟ್ ಹರಿಯುವಂತೆ ಮಾಡುವ ಕಸುವಿಗೆ ’ಒತ್ತಾಟ’ ಅಂದರೆ ’ವೋಲ್ಟೆಜ್’ (voltage) ಎಂದು ಕರೆಯುತ್ತಾರೆ.

ನೀರಿನ ಮಟ್ಟದಲ್ಲಿದ್ದ ’ಒತ್ತಡದ ಬೇರ್ಮೆ’ ನೀರು ಹರಿಯುವಂತೆ ಮಾಡಿದರೆ ತಂತಿಯ ತುದಿಯೆರಡರ ನಡುವೆ ಇದ್ದ ಒತ್ತಡದ ಬೇರ‍್ಮೆ ಕರೆಂಟ್ ಹರಿಯುವಂತೆ ಮಾಡುತ್ತದೆ. ಹೆಚ್ಚಿನ ಒತ್ತಾಟ ಇರುವ ತುದಿಯನ್ನು’+’ ಗುರುತಿನಿಂದ ಗುರುತಿಸದರೆ ಕಡಿಮೆ ಒತ್ತಾಟವಿರುವ ತುದಿಗೆ ’–’ ಗುರುತನ್ನು ತಳುಕಿಸಲಾಗುತ್ತದೆ.

ಹೀಗೆ ಒತ್ತಾಟಕ್ಕೆ ಒಳಪಟ್ಟ ಕಳೆವಣಿಗಳು (electrons) ಹರಿಯ ತೊಡಗಿದರೂ ಅವುಗಳ ಹರಿಯುವಿಕೆಗೆ ವಸ್ತುಗಳಲ್ಲಿನ ಇಕ್ಕಟ್ಟಾದ, ಒಂದಕ್ಕೊಂದು ಅಂಟಿಕೊಂಡ ಅಣುಗಳಿಂದಾಗಿ ಅಡೆತಡೆ ಎದುರಾಗುತ್ತದೆ. ಹರಿಯುವಿಕೆಗೆ ಎದುರಾಗುವ ಈ ತೊಡಕನ್ನು ’ತಡೆತನ’ ಇಲ್ಲವೇ ’ಅಡ್ಡಿತನ’ (resistance) ಅನ್ನುತ್ತಾರೆ. ನೀರಿನ ತೊಟ್ಟಿಗಳ ಎತ್ತುಗೆಯಲ್ಲಿ ನೀರಿನ ಹರಿವಿಗೆ ’ತಡೆಯೊಡ್ಡಿ’ದ ತೆರುಪು (valve) ಮಾಡಿದ್ದು ಇದೆ ಬಗೆಯ ತಡೆ.

ಈ ಮೇಲಿನ ಉದಾಹರಣೆಗಳಿಂದ ಕೆಳಗಿನ ಹೋಲಿಕೆಗಳನ್ನು ಗಮನಿಸಬಹುದು

(ನೀರಿನ) ಹರಿವು = (ಮಿಂಚಿನ) ಹರಿವು = (Electric) Current

(ನೀರಿನ) ಒತ್ತಡ  = (ಮಿಂಚಿನ) ಒತ್ತಾಟ = (Electric) Voltage

(ನೀರಿಗೆ) ತಡೆ = (ಮಿಂಚಿಗೆ) ತಡೆತನ = (Electric) Resistance

ಈ ಮೂರು ಗುಣಗಳ ನಡುವಿರುವ ನಂಟು ಈ ಕೆಳಗಿನಂತಿದೆ,

ಒತ್ತಾಟ (Voltage)  = ಹರಿವು (Current) x  ತಡೆತನ (Resistance)

ಅಂದರೆ,  V  = I x R

ಮೇಲಿನ ನಂಟನ್ನು ಮತ್ತೊಮ್ಮೆ ನೀರಿನ ಹರಿವಿಗೆ ಹೋಲಿಸಿ ನೋಡೋಣ. (ಮೇಲಿರುವ ಗಣಿತದ ನಂಟಿನ ಬಲಗಡೆ ಮತ್ತು ಎಡಗಡೆಯ ತಿರುಳನ್ನು ಗಮನಿಸಿ)

1)      ಒತ್ತಡ ಹೆಚ್ಚಾದಂತೆ ನೀರಿನ ಹರಿವು ಹೇಗೆ ಹೆಚ್ಚಾಗುತ್ತದೆಯೋ ಹಾಗೆನೇ ಒತ್ತಾಟ ಹೆಚ್ಚಾದರೆ ಕರೆಂಟಿನ ಹರಿವು ಹೆಚ್ಚಾಗುತ್ತದೆ (V ಹೆಚ್ಚಾದಂತೆ I ಹೆಚ್ಚುತ್ತದೆ)

2)      ತಡೆ ಹೆಚ್ಚಾದಂತೆ ನೀರಿನ ಹರಿವು ಹೇಗೆ ಕಡಿಮೆಯಾಗುತ್ತದೆಯೋ ಹಾಗೆನೇ ತಡೆತನ ಹೆಚ್ಚಾದಂತೆ ಕರೆಂಟಿನ ಹರಿವು ಕಡಿಮೆಯಾಗುತ್ತದೆ (R ಹೆಚ್ಚಿದಂತೆ I ಕಡಿಮೆಯಾಗುತ್ತದೆ)

ಈ ನಂಟನ್ನು ತುಂಬಾ ತಿಳಿಯಾಗಿ ತಿಳಿಸಿಕೊಡುತ್ತಿರುವ ಈ ಕೆಳಗಿನ ತಿಟ್ಟವನ್ನು ನೋಡಿ

minchu_cartoon

ಚುಟುಕಾಗಿ ಹೇಳುವುದಾದರೆ ಒತ್ತಾಟ (ವೋಲ್ಟೆಜ್) ಕರೆಂಟಿನ ಹರಿವಿಗೆ ಕಾರಣವಾದರೆ ಆ ಹರಿವಿಗೆ ತಡೆಯೊಡ್ಡುವುದೇ ತಡೆತನದ (resistance) ಕೆಲಸ.

(ತಿಟ್ಟಸೆಲೆ: https://swipefile.com)

ಕರೆಂಟ್ ಹುಟ್ಟುವ ಬಗೆ

ಪ್ರಶಾಂತ ಸೊರಟೂರ.

ಕಳೆದ ಬರಹದಲ್ಲಿ ಕರೆಂಟ್ ಎಂದರೆ ಮುಖ್ಯವಾಗಿ ವಸ್ತುಗಳಲ್ಲಿರುವ ಕಳೆವಣಿಗಳ (electrons) ಹರಿವು ಮತ್ತು ಮಿನ್ಸೆಳೆತನ (electromagnetism) ಎಂದು ಕರೆಯಲಾಗುವ ಮಿಂಚು-ಸೆಳೆಗಲ್ಲುಗಳ (magnets) ನಂಟಿನ ಕುರಿತು ತಿಳಿದುಕೊಂಡೆವು. ಮಿನ್ಸೆಳೆತನವನ್ನು ಬಳಸಿಕೊಂಡು ಕರೆಂಟ್ ಉಂಟುಮಾಡುವ ಬಗೆಯನ್ನು ಈಗ ನೋಡೋಣ.

ಕರೆಂಟ್ ಉಂಟುಮಾಡಲು ಅಂದರೆ ವಸ್ತುಗಳಲ್ಲಿರುವ ಕಳೆವಣಿಗಳನ್ನು (electrons) ಹರಿಸಲು ಬೇಕಾದ ಕಸುವು ಪಡೆಯಲು ಮುಖ್ಯವಾಗಿ ಈ ಕೆಳಗಿನವುಗಳು ಬೇಕಾಗುತ್ತವೆ,

1)      ಸೆಳೆಗಲ್ಲ ಬಯಲು (magnetic field)

2)      ತಾಮ್ರದಂತಹ ಬಿಡುವೆ (conductor)

3)      ಬಿಡುವೆಯನ್ನು ತಿರುಗಿಸುವ ಕಸುವು

4)      ಉಂಟಾದ ಕರೆಂಟನ್ನು ಸಾಗಿಸುವ ಮಿನ್ಸುತ್ತು (electric circuit)

minchuttuka_electric generator

(ಕರೆಂಟ್ ಹುಟ್ಟುವ ಭಾಗಗಳನ್ನು ತೋರಿಸುತ್ತಿರುವ ಚಿತ್ರ)

ಎರಡು ಸೆಳೆಗಲ್ಲುಗಳ (magnets) ಎದುರು ತುದಿಗಳನ್ನು ಅಂದರೆ ಬಡಗಣ (north) ಮತ್ತು ತೆಂಕಣ (south) ತುದಿಗಳನ್ನು ಒಂದರ ಮುಂದೊಂದು ತಂದಾಗ ಅವೆರಡಗಳ ನಡುವೆ ಸೆಳೆತ ಉಂಟಾಗುತ್ತದೆ. ಹೀಗೆ ಉಂಟಾದ ‘ಸೆಳೆತದ’ ಬಯಲಿನಲ್ಲಿ ತಾಮ್ರದ ತಂತಿಯ ಕಟ್ಟನ್ನು ಹೊತ್ತ ತಿರುಗುಣಿಯನ್ನು (rotor/turbine) ತಿರುಗಿಸಿದರೆ, ತಾಮ್ರದ ತಂತಿಯಲ್ಲಿ ಕಳೆವಣಿಗಳು (electrons) ಅಂದರೆ ಕರೆಂಟ್ ಹರಿಯತೊಡಗುತ್ತದೆ.

ಈ ಬಗೆಯಲ್ಲಿ ತಿರುಗುವ ಕಸುವಿನಿಂದ ಮಿಂಚಿನ (ಕರೆಂಟ್) ಕಸುವು ಉಂಟುಮಾಡುವ ಸಲಕರಣೆಯನ್ನು ‘ಮಿಂಚುಟ್ಟುಕ’ (electric generator) ಅಂತಾ ಕರೆಯುತ್ತಾರೆ.ಇಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಎಂದರೆ,

ತಾಮ್ರದಂತಹ ಬಿಡುವೆ (conductor) ಅಳವಡಿಸಿದ ತಿರುಗುಣಿಯನ್ನು ತಿರುಗಿಸಲು ‘ಕಸುವು’ ದೊರೆತರೆ ಕರೆಂಟನ್ನು ಸುಲಭವಾಗಿ ಉಂಟುಮಾಡಬಹುದು.

ಈ ತಿರುಗಿಸುವ ಕಸುವನ್ನು ಹಲವಾರು ಬಗೆಗಳಲ್ಲಿ ಪಡೆಯಬಹುದು. ಅವುಗಳಲ್ಲಿ ಮುಖ್ಯ ಬಗೆಗಳು ಹೀಗಿವೆ,

  • ನೀರಿನ ಬಳಕೆ: ಮೇಲಿನಿಂದ ದುಮ್ಮಿಕ್ಕುವ ನೀರನ್ನು ಕೆಳಗಿರುವ ತಿರುಗಣಿಯ ಮೇಲೆ ಹಾಯಿಸಿ ಅದು ತಿರುಗುವಂತೆ ಮಾಡಲಾಗುತ್ತದೆ. ಹೀಗೆ ನೀರಿನ ಬೀಳುವಿಕೆಯಿಂದ ಮಿಂಚು (ಕರೆಂಟ್) ಪಡೆಯುವ ತಾಣಕ್ಕೆ ‘ನೀರ‍್ಮಿಂಚು ನೆಲೆಗಳು’ (hydro-electric power station) ಅನ್ನುತ್ತಾರೆ. ಜೋಗ, ಶಿವನಸಮುದ್ರ ಮುಂತಾದ ಕಡೆ ಈ ಬಗೆಯಲ್ಲಿ ಕರೆಂಟ್ ಉಂಟುಮಾಡಲಾಗುತ್ತದೆ.
  • ಕಾವು ಬಳಸಿ ಕರೆಂಟ್: ಈ ಬಗೆಯಲ್ಲಿ ಕಲ್ಲಿದ್ದಲಿನಂತಹ ಉರುವಲನ್ನು ಬಳಸಿ ನೀರನ್ನು ಕಾಯಿಸಲಾಗುತ್ತದೆ. ಕಾದ ನೀರು ಆವಿಯ ರೂಪ ಪಡೆದಾಗ ಅದನ್ನು ತಿರುಗುಣಿಯನ್ನು ತಿರುಗಿಸಲು ಬಳಸಲಾಗುತ್ತದೆ. ಹೀಗೆ ಕರೆಂಟ್ ಉಂಟುಮಾಡುವ ತಾಣಗಳಿಗೆ ‘ಕಾವ್ಮಿಂಚು ನೆಲೆಗಳು’ (thermal power station) ಅನ್ನುತ್ತಾರೆ. ರಾಯಚೂರಿನಲ್ಲಿರುವ ಮಿಂಚಿನ-ನೆಲೆಯಲ್ಲಿ ಹೀಗೆಯೇ ಕರೆಂಟ್ ಉಂಟುಮಾಡಲಾಗುತ್ತದೆ.
  • ಅಣುಗಳ ಒಡೆತ:  ಇದೂ ಕಾವಿನಿಂದ ಕರೆಂಟ್ ಪಡೆಯುವ ಬಗೆಗಳಲ್ಲಿ ಒಂದು ಆದರೆ ಇಲ್ಲಿ ಕಲ್ಲಿದ್ದಲಿನ ಬದಲಾಗಿ ಅಣುಗಳ ಒಡೆತದಿಂದ ಉಂಟಾಗುವ ಕಾವನ್ನು ನೀರು ಕಾಯಿಸಲು ಬಳಸಲಾಗುತ್ತದೆ. ಯುರೇನಿಯಂ ನಂತಹ ಅಣುಗಳ ನಡುವಣಕ್ಕೆ (nucleus) ನೆಲೆವಣಿಗಳನ್ನು (neutrons) ಗುದ್ದಿಸಿ, ನಡುವಣ ಒಡೆಯುವಂತಾದರೆ ಅದರಿಂದ ತುಂಬಾ ಕಸುವು ಬಿಡುಗಡೆಯಾಗುತ್ತದೆ. ಈ ಕಸುವು ಬಳಸಿ ನೀರಾವಿಯನ್ನು ಉಂಟಮಾಡಿ, ಎಂದಿನ ಬಗೆಯಂತೆ ತಿರುಗುಣಿಯನ್ನು ತಿರುಗಿಸಿ ಕರೆಂಟ್ ಪಡೆಯಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ‘ಕೈಗಾ’ ದಲ್ಲಿ ಇಂತ ’ನಡುವಣ-ಮಿಂಚಿನ’ (nuclear power) ನೆಲೆಯಿದೆ.
  • ಗಾಳಿಯ ಬಳಕೆ: ಬೆಟ್ಟ-ಗುಡ್ಡಗಳ ಮೇಲೆ ಬೀಸುವ ಗಾಳಿಯನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಗದುಗಿನ ಕಪ್ಪತ್ತಗುಡ್ಡ, ಚಿತ್ರದುರ್ಗದ ಬೆಟ್ಟಗಳಲ್ಲಿ ಇಂತಹ ಗಾಳಿ ಮಿಂಚಿನ ನೆಲೆಗಳನ್ನು ಕಾಣಬಹುದು.
  • ಕಡಲ ಅಲೆಗಳ ಬಳಕೆ: ಕಡಲ ದಂಡೆಯಲ್ಲಿ ಹೊಯ್ದಾಡುವ ತೆರೆಗಳನ್ನು ಬಳಸಿ ತಿರುಗುಣಿಯನ್ನು ತಿರುಗಿಸುವ ಕಸುವು ಪಡೆಯಲಾಗುತ್ತದೆ. ಈ ಬಗೆ ಇತ್ತೀಚಿಗೆ ಕಂಡುಹಿಡಿಯಲಾಗಿದ್ದು ಇನ್ನೂ ಹೆಚ್ಚಾಗಿ ಬಳಕೆಗೆ ಬರಬೇಕಾಗಿದೆ.

minchumane

(ನಡುವಣ (nucleus) ಒಡೆತದಿಂದ ಉಂಟಾದ ಕಸುವು ಬಳಸಿ ಕರೆಂಟ್ ಉಂಟುಮಾಡುತ್ತಿರುವ ಬಗೆಯನ್ನು ತೋರಿಸುವ ಚಿತ್ರ)

ಹೀಗೆ ಯಾವುದಾದರೊಂದು ಕಸುವಿನ ಸೆಲೆಯಿಂದ ತಿರುಗುಣಿ ತಿರುಗಿಸಿ ಮಿಂಚುಟ್ಟುಕದ (generator) ನೆರವಿನಿಂದ  ಕರೆಂಟ್ ಉಂಟುಮಾಡಲಾಗುತ್ತದೆ.

ಚಿತ್ರ : ವಿಕಿಪೀಡಿಯಾ , ಸೆಲೆ: iaea ,rite.or.jp

ಮೆಣಸಿನಕಾಯಿ ‘ಅದೆಷ್ಟು’ ಖಾರ?

Free A close-up shot of numerous fresh red chili peppers creating a vivid and spicy visual texture. Stock Photo
ಮೆಣಸಿನಕಾಯಿ ತಿಂದೊಡನೆ ಕಣ್ಣಲ್ಲಿ ನೀರು, ಖಾರದ  ಉರಿಗೆ ಇಡೀ ಮಯ್ಯಿ ತತ್ತರಿಸಿದಾಗ ಮೆಣಸಿನಕಾಯಿ ಖಾರ-ಬೆಂಕಿ, ‘ಇಷ್ಟು’ ಖಾರ ಯಾರಾದರೂ ತಿನ್ನುತ್ತಾರಾ ಅನ್ನುವ ಮಾತುಗಳು ಹೊರಬರುತ್ತವೆ.’ತುಂಬಾ’ ಖಾರ, ‘ಕಡಿಮೆ’ ಖಾರ ಅನ್ನುವ ಅನಿಸಿಕೆ ಒಬ್ಬರಿಂದ ಇನ್ನೊಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಅನಿಸಿಕೆಯ ಈ ಬೇರೆತನವನ್ನು ಹೋಗಲಾಡಿಸಲು ಒಂದೇ ತರನಾಗಿರುವ ‘ಅಳತೆಗೋಲು’ ಬೇಕಲ್ಲವೇ ? ಆ ಅಳತೆಗೋಲಿನ ಬಗ್ಗೆ ಈಗ ತಿಳಿದುಕೊಳ್ಳೋಣ.

ಸ್ಕಾವಿಲ್ (Scoville) ಎಂಬ ಅಳತೆಗೋಲು ಬಳಸಿ, ಮಸಾಲೆಯೊಂದು ‘ಎಷ್ಟು’ ಖಾರವಾಗಿದೆ ಅನ್ನುವುದನ್ನು ಅಳೆಯಲಾಗುತ್ತದೆ.

ಈ ಅಳತೆಗೋಲು ಕಂಡುಹಿಡಿದ ವಿಲ್ಬರ್ ಸ್ಕಾವಿಲ್ (Wilbur Scoville) ಅವರ ಹೆಸರಿನಿಂದಲೇ ಇದನ್ನು ಗುರುತಿಸಲಾಗುತ್ತದೆ. ಮೆಣಸಿನಕಾಯಿ, ಮೆಣಸು ಮುಂತಾದ ಮಸಾಲೆಗಳ ಖಾರದ ಚುರುಕಿನ ಮಟ್ಟ ಆ ವಸ್ತುಗಳಲ್ಲಿ ಕಾಪಾಸಿಸಿಯನ್ (capsaicin) ಎಂಬ ವಸ್ತು ಎಷ್ಟಿದೆ ಅನ್ನುವುದರ ಮೇಲೆ ತೀರ್ಮಾನವಾಗುತ್ತದೆ.

ಕಾಪಾಸಿಸಿಯನ್ (capsaicin) ತೊಗಲಿನಲ್ಲಿರುವ ನರಗಳಿಗೆ ಖಾರದ ಚುರುಕು ತಾಕಿಸುವಂತ ಅಡಕವಾಗಿರುವ ವಸ್ತು (chemical compound), ಇದರಿಂದಾಗಿಯೇ ನಮಗೆ ಖಾರದ ಅನುಭವವಾಗುತ್ತದೆ.

‘ವಿಲ್’  ಅಳತೆಯಂತೆ ಬೇರೆ-ಬೇರೆ ಮಸಾಲೆಗಳ ‘ಖಾರದ ಮಟ್ಟ’  ಹೀಗಿದೆ:

scovelli_unit

ಬ್ಯಾಡಗಿ ಮೆಣಸಿನಕಾಯಿ ‘ಎಷ್ಟು’ ಖಾರ ಅಂತಾ ಈಗ ಗೊತ್ತಾಯಿತಲ್ಲ! ಇನ್ನು ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಖಾರವಾದ ‘ ಟ್ರೆನಿಡಾಡ್ ಮೊರುಗಾ ಸ್ಕಾರ್ಪಿಯನ್’ ಮೆಣಸಿನ ತಂಟೆಗೆ ಹೋಗದಿರುವುದೇ ವಾಸಿ ಅನಿಸುತ್ತದೆ!

(ತಿಳಿವಿನ ಸೆಲೆvox,downtoearth,pixels.com)

ಕಾಫಿ ಒಣಗಿಸಲೊಂದು ಚುರುಕಿನ ಚಳಕ

ರತೀಶ ರತ್ನಾಕರ.

ಕರ್ನಾಟಕದ ಹಲವು ಮುಖ್ಯ ಬೆಳೆಗಳಲ್ಲಿ ಕಾಫಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆಧಾರದ ಮೇಲೆ ಕೆಲವು ಕಡೆ ನವೆಂಬರ್ ಕೊನೆಯ ವಾರಕ್ಕೆ ಕುಯ್ಲಿಗೆ ಬಂದರೆ ಇನ್ನು ಕೆಲವು ಕಡೆ ಡಿಸೆಂಬರ್ ಕೊನೆಯ ವಾರಕ್ಕೆ ಕಾಫಿ ಹಣ್ಣು ಕುಯ್ಲಿಗೆ ಬರುತ್ತದೆ. ಹಾಗಾಗಿ ನವೆಂಬರ್ ಕೊನೆಯ ವಾರದಿಂದ ಜನವರಿಯ ಸುಗ್ಗಿ ಹಬ್ಬದವರೆಗೂ ಕಾಫಿ ಕುಯ್ಲಿನ ಕಾಲ ಎಂದು ಹೇಳಬಹುದು. ಹೀಗೆ ಕುಯ್ದ ಕಾಫಿಯನ್ನು ಮಾರುಕಟ್ಟೆಗೆ ಸಾಗಿಸುವ ಮೊದಲು ಅದನ್ನು ಒಣಗಿಸಲಾಗುತ್ತದೆ.

ಸದ್ಯಕ್ಕೆ ಕಾಫಿ ಬೆಳೆಗಾರರ ಮನೆಗಳ ಅಂಗಳದಲ್ಲಿ ನೇಸರನ ಬಿಸಿಲಿಗೆ ಹರಡಿ ಕಾಫಿಯನ್ನು ಹಲವು ದಿನಗಳ ಕಾಲ ಒಣಗಿಸಲಾಗುತ್ತದೆ. ಹೀಗೆ ಒಣಗಿಸುವುದಕ್ಕೆ, ಸಾಕಷ್ಟು ಜಾಗ ಹಾಗು ಮಯ್ಗೆಲಸದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಚಳಕಗಳನ್ನು ಬಳಸಿ ಕಾಫಿಯನ್ನು ಅತಿ ಕಡಿಮೆ ಜಾಗದಲ್ಲಿ, ಕಡಿಮೆ ಮೈಗೆಲಸದಲ್ಲಿ, ಆದಷ್ಟು ಬೇಗ ಒಣಗಿಸುವ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಂತಹ ಒಂದು ವಿಧಾನವನ್ನು ಇಲ್ಲಿ ನೋಡೋಣ ಬನ್ನಿ.

ಕಾಫಿ ಕುಯ್ಲು ಮುಗಿದ ಮೇಲೆ ಕೆಲವರು ಇಡೀ ಕಾಫಿಯನ್ನು ಸಿಪ್ಪೆಯ ಜೊತೆಗೆ ಒಣಗಿಸಿ ಮಾರುಕಟ್ಟೆಗೆ ಸಾಗಿಸಿದರೆ ಇನ್ನು ಕೆಲವರು ಹಸಿಯಾಗಿರುವ ಕಾಫಿ ಹಣ್ಣಿನ ಸಿಪ್ಪೆಯನ್ನು ಒಂದು ಬಿಣಿಗೆಯ ನೆರವಿನಿಂದ ಸಿಪ್ಪೆಯನ್ನು ತೆಗೆದು ಬಳಿಕ ಒಳಗಿನ ಕಾಳುಗಳನ್ನು ಒಣಗಿಸಿ ಮಾರುತ್ತಾರೆ. ಎರಡಕ್ಕೂ ಅವುಗಳದ್ದೇ ಆದ ಬೆಲೆಗಳಿವೆ. ಹೀಗೆ ಇಡಿಯಾಗಿ ಒಣಗಿಸಿದ ಕಾಫಿಯನ್ನು ಚೆರ‍್ರಿ ಎಂದು ಸಿಪ್ಪೆ ತೆಗೆದ ಕಾಫಿಯನ್ನು ಪಾರ‍್ಚ್ ಮೆಂಟ್ ಎಂದು ಕರೆಯುತ್ತಾರೆ.

Coffee cherry and parchment

ಹಸಿಯಾಗಿರುವ ಕಾಫಿಯಲ್ಲಿ ಸುಮಾರು 50% ನಿಂದ 70% ನಷ್ಟು ನೀರಿನ ಪಸೆ (moisture) ಇರುತ್ತದೆ. ಕಾಫಿಯು ಚೆನ್ನಾಗಿ ಒಣಗಿ ಮಾರುಕಟ್ಟೆಗೆ ಸಾಗಿಸಲು ಯೋಗ್ಯ ಎಂದು ಕರೆಸಿಕೊಳ್ಳಲು ಅದರ ಪಸೆ ಸುಮಾರು 10% ನಿಂದ 12% ಮಾತ್ರ ಇರಬೇಕು. ಕಾಫಿಯನ್ನು ಒಣಗಿಸುವುದರಲ್ಲಿ ಅದರ ಪಸೆಯನ್ನು 70% ನಿಂದ 10% ಗೆ ಇಳಿಸುವುದಾಗಿರುತ್ತದೆ.

ಒಂದು ಕಾಫಿಬೀಜದ ಪಸೆಯ ಆರುವಿಕೆ ಎರಡು ಹಂತದಲ್ಲಿ ನಡೆಯುತ್ತದೆ. ಮೊದಲು ಸಿಪ್ಪೆಯ ಒಳಗಿನ ಭಾಗದ ಪಸೆಯು ಆರಿ ಹೊರಭಾಗಕ್ಕೆ ಬರುತ್ತದೆ, ಬಳಿಕ ಹೊರಭಾಗದ ಪದರದಲ್ಲಿರುವ ಪಸೆಯು ಆರಿ ಸುತ್ತಲಿನ ಗಾಳಿಗೆ ಸೇರಿಕೊಳ್ಳುತ್ತದೆ. ಹೀಗೆ ಎರೆಡು ಹಂತಗಳಲ್ಲಿ ಕಾಫಿಯು ಒಣಗಬೇಕಾದರೆ ಅದಕ್ಕೆ ಬಿಸಿಗಾಳಿಯನ್ನು ಹರಿಸುವುದರ ಮೂಲಕ ಪಸೆಯನ್ನು ಆರಿಸಿ ಒಣಗಿಸಬಹುದು ಎಂದು ಕಂಡುಕೊಂಡಿದ್ದಾರೆ.

ಯಾವುದೇ ಕಾಳುಗಳನ್ನು ಚೆನ್ನಾಗಿ ಒಣಗಿಸಲು ಗಾಳಿಯು ಈ ಮೂರು ಗುಣಗಳನ್ನು ಹೊಂದಿರಬೇಕು. ಅವು ಗಾಳಿಯು ಒಣಗಿರಬೇಕು (ಯಾವುದೇ ಪಸೆ ಗಾಳಿಯಲ್ಲಿ ಇರಬಾರದು), ಬಿಸಿಯಾಗಿರಬೇಕು ಮತ್ತು ಹರಿಯುತ್ತಿರಬೇಕು (ಒಂದೇ ಕಡೆ ನಿಂತಿರುವ ಗಾಳಿ ಕಾಳುಗಳ ಪಸೆಯನ್ನು ಹೊರಗಿನ ತಣ್ಣನೆಯ ಗಾಳಿಗೆ ಸಾಗಿಸಲಾಗದು). ಈ ಎಲ್ಲಾ ವಿವರಗಳನ್ನು ಕಲೆ ಹಾಕಿದಾಗ, ಕಾಫಿಯ ಪಸೆಯನ್ನು 10% ರಿಂದ 12% ಗೆ ಇಳಿಸಬೇಕಾದರೆ ಗಾಳಿಯನ್ನು 40 ಡಿಗ್ರಿ ಯಿಂದ 60 ಡಿಗ್ರಿಯಷ್ಟು ಬಿಸಿಯಾಗಿ ಹಾಯಿಸಿದಾಗ ಅದು ಆದಷ್ಟು ಬೇಗ ಮತ್ತು ಚೆನ್ನಾಗಿ ಒಣಗುತ್ತದೆ. (ಎಷ್ಟು ಹೊತ್ತು ಈ ಬಿಸಿಗಾಳಿಯನ್ನು ಹಾಯಿಸಬೇಕು ಎಂಬುದನ್ನು ಮುಂದೆ ತಿಳಿಯೋಣ)

ಈಗ, ಕಾಳಿನ ಒಣಗುವಿಕೆಯ ಹಂತಗಳು ಮತ್ತು ಗಾಳಿಗೆ ಇರಬೇಕಾದ ಬಿಸುಪಿನ ಬಗ್ಗೆ ತಿಳಿದೆವು. ಇನ್ನು ನೇಸರನ ಬೆಳಕು ಇಲ್ಲವೇ ಇತರ ಉರುವಲಿನ ನೆರವನಿಂದ ಬಿಸಿಗಾಳಿಯನ್ನು ಕಾಫಿಯ ಮೇಲೆ ಹಾಯಿಸಿ ಅದನ್ನು ಒಣಗಿಸುವ ಬಗೆಯನ್ನು ಅರಿಯೋಣ.

ಹೊಸಬಗೆಯ ಒಣಗಿಸುವಿಕೆಯಲ್ಲಿ ಎರೆಡು ಬಗೆಗಳಲ್ಲಿ ಬಿಸಿಗಾಳಿಯನ್ನು ಹಾಯಿಸಬಹುದು, ಒಂದು ನೇಸರನ ಬೆಳಕಿನಿಂದ ಮತ್ತೊಂದು ಉರುವಲುಗಳಿಂದ (ಬಯೋಮಾಸ್, ಸವ್ದೆ ಮತ್ತಿತರೆ ಉರುವಲು). ಚಿತ್ರ 1 ರಲ್ಲಿ ಇದರ ಮಾದರಿಯನ್ನು ನೀಡಲಾಗಿದೆ. ಅದರ ಒಂದೊಂದು ಭಾಗಗಳು ಮತ್ತು ಒಣಗಿಸುವುದರಲ್ಲಿ ಅವುಗಳ ಕೆಲಸವನ್ನು ತಿಳಿಯೋಣ.

Coffee Drying 1

(ಕಾಫಿಯನ್ನು ಒಣಗಿಸುವ ಮಾದರಿ)

ಒಣಗಿಸುವ ಕೋಣೆ: ಒಣಗಿಸುವ ಕೋಣಯು ಬೇಕಾದಷ್ಟು (ಎತ್ತುಗೆಗಾಗಿ 20×30 (ಉದ್ದ x ಅಗಲ)ರಷ್ಟು) ಜಾಗದಲ್ಲಿ ಕಟ್ಟಿರಬೇಕು. ಕೋಣೆಯ ಒಳಗಿನ ಗೋಡೆಗಳಿಗೆ ಮರದ ಹಲಗೆ (ಪ್ಲಯ್ ವುಡ್) ಹೊಡೆದಿರಬೇಕು, ಇದು ಬಿಸಿಗಾಳಿಯನ್ನು ಹೊರಗೆ ಹೋಗದಂತೆ ತಡೆಯುತ್ತದೆ. ಕೋಣೆಯ ಮಾಡು (ಸೂರು) ಮೂಡಣ ಮತ್ತು ಪಡುವಣ ದಿಕ್ಕುಗಳಿಗೆ ಮುಖ ಮಾಡಿರಬೇಕು, ಇದರಿಂದ ಹೆಚ್ಚು ಹೊತ್ತು ನೇಸರನ ಬೆಳಕು ಮಾಡಿನ ಮೇಲೆ ಬೀಳುವಂತಾಗುತ್ತದೆ. (ಚಿತ್ರ 2 ನ್ನು ನೋಡಿ)

Coffee Drying 2

(ನೇಸರ ಪಟ್ಟಿ, ಬಿಸಿಗಾಳಿ ಕೊಳವೆಯ ಸೀಳುನೋಟ)

ನೇಸರ ಪಟ್ಟಿ: ಕೋಣೆಯ ಮಾಡಿನ ಮೇಲೆ ಮರದ ಹಲಗೆಗಳನ್ನು (ಪ್ಲಯ್ ವುಡ್) ಹೊಡೆದು ಅದರ ಮೇಲೆ ಮರದ ಪಟ್ಟಿಯನ್ನು ಮಾಡಿನ ಇಳಿಜಾರಿಗೆ ಅಡ್ಡಲಾಗಿ ಹೊಡೆದಿರಬೇಕು (ಎತ್ತುಗೆಗೆ ಸುಮಾರು 3 ಇಂಚುಗಳಷ್ಟು ದಪ್ಪದ ಮರದ ಪಟ್ಟಿ). ಈ ಮರದ ಪಟ್ಟಿಗಳ ಮೇಲೆ ನೇಸರ ಪಟ್ಟಿಗಳನ್ನು ಹೊಡೆಯಬೇಕು (ಸಾಮಾನ್ಯವಾಗಿ ಕಪ್ಪು ಬಣ್ಣದ ತಗಡಿನ ಪಟ್ಟಿಗಳನ್ನು ಬಳಸಲಾಗುವುದು). ಈಗ ನೇಸರ ಪಟ್ಟಿ ಮತ್ತು ಮಾಡಿನ ಹಲಗೆಯ ನಡುವೆ ಸಣ್ಣ ಜಾಗ ಇರುತ್ತದೆ. ಈ ಜಾಗದಲ್ಲಿ ಗಾಳಿಯು ಸುಳಿದಾಡುತ್ತದೆ. ಗಾಳಿಯು ತೆಂಕಣ/ಬಡಗಣ ದಿಕ್ಕಿನಿಂದ ಬಡಗಣ ಇಲ್ಲವೇ ತೆಂಕಣ ದಿಕ್ಕಿನ ಮೂಲಗ ಈ ಜಾಗದ ಒಳಗೆ ಬರುತ್ತಿರುತ್ತದೆ. (ಚಿತ್ರ 2 ನ್ನು ನೋಡಿ)

ಬಿಸಿಗಾಳಿ ಕೊಳವೆ: ನೇಸರ ಪಟ್ಟಿ ಮತ್ತು ಮಾಡಿನ ನಡುವೆ ಉಂಟಾಗುವ ಬಿಸಿಗಾಳಿಯನ್ನು ಕೋಣೆಯ ಒಳಗೆ ಸಾಗಿಸಲು ದೊಡ್ಡದ್ದಾದ ಒಂದು ಕೊಳವೆಯನ್ನು ಚಿತ್ರದಲ್ಲಿ ತೋರಿಸಿದಂತೆ ಮಾಡಿಗೆ ಸೇರಿಸಬೇಕು. ಈ ಕೊಳವೆಯು ಬಿಸಿಯನ್ನು ಹೊರಹಾಕದಿರುವ ವಸ್ತುವಿನಿಂದ ಮಾಡಿರಬೇಕು.

ಬಲೆ/ಬುಟ್ಟಿ: ಇದರಲ್ಲಿ ಕಾಫಿ ಬೀಜಗಳನ್ನು ಒಣಗಿಸಲು ಹಾಕಲಾಗುವುದು. ಬಿಸಿಯನ್ನು ತಡೆದುಕೊಳ್ಳುವ ವಸ್ತುವಿನಿಂದ ಇದನ್ನು ಮಾಡಿರಬೇಕು. ಇದರ ಬುಡದಲ್ಲಿ ಸಣ್ಣ ಕಿಂಡಿಗಳಿದ್ದು, ಗಾಳಿಯ ಒಳಬರುವಂತಿರಬೇಕು (ಬಲೆಯ ಹಾಗೆ ಸಣ್ಣ ಸಣ್ಣ ಕಿಂಡಿಗಳಿರಬೇಕು)

ಬೀಸಣಿಕೆ: ಕೊಳವೆಯಿಂದ ಬಂದ ಬಿಸಿಗಾಳಿಯನ್ನು ಒಣಗಲು ಹಾಕಿರುವ ಕಾಫಿ ಬೀಜದ ಬುಟ್ಟಿಯ ಕಡೆ ಜೋರಾಗಿ ಹಾಯಿಸಲು ಮತ್ತು ಗಾಳಿಯ ಬಿಸುಪನ್ನು ಆದಷ್ಟು ಹೆಚ್ಚಿನ ಬಿಸುಪಿನಲ್ಲಿ ಕಾದಿಡಲು ಇದು ನೆರವಾಗುತ್ತದೆ.

ಬಯೋಮಾಸ್/ಉರುವಲಿನ ಒಲೆ: ಬಯೋಮಾಸ್/ಉರುವಲಿನ ಒಲೆಯಿಂದ ಹೊರಗಿನ ಗಾಳಿಯನ್ನು ಬಿಸಿಮಾಡಿ ಹಾಯಿಸ ಬಹುದಾಗಿದೆ. ಬಗೆಬಗೆಯ ಉರುವಲಿನ/ಬಯೋಮಾಸ್ ಒಲೆಗಳು ಮಾರುಕಟ್ಟೆಯಲ್ಲಿ ಸಿಗಲಿದ್ದು, ಗಾಳಿಯನ್ನು 40 ಡಿಗ್ರಿಯಿಂದ 60 ಡಿಗ್ರಿಯವರೆಗೆ ಕಾಯಿಸುವ ಸಾಮರ್‍ತ್ಯವುಳ್ಳ ಒಲೆಗಳನ್ನು ಬಳಸಬೇಕಾಗುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ:

ಮೊದಲು ನೇಸರನಿಂದ ಬಿಸಿಗಾಳಿಯನ್ನು ಪಡೆದು ಒಣಗಿಸುವ ಬಗೆಯನ್ನು ನೋಡೋಣ. ನೇಸರನ ಬೆಳಕು ಪಟ್ಟಿಯ ಮೇಲೆ ಬಿದ್ದೊಡನೆ ಪಟ್ಟಿಯ ಮೇಲ್ಬಾಗ ಮತ್ತು ಕೆಳಭಾಗದಲ್ಲಿರುವ ಗಾಳಿಯು ಬಿಸಿಯಾಗುತ್ತದೆ. ನೇಸರನ ಪಟ್ಟಿಯ ಸುತ್ತ ಗಾಳಿಯ ಬಿಸುಪು ಹೆಚ್ಚಿದಂತೆ ಗಾಳಿಯು ಕಡಿಮೆ ಬಿಸುಪಿನ ಕಡೆಗೆ ನಡೆಯುತ್ತದೆ. ಬಿಸಿಗಾಳಿಯ ಕೊಳವೆಯಲ್ಲಿ ಪಟ್ಟಿಯ ಬಳಿಗಿಂತ ಕಡಿಮೆ ಬಿಸುಪು ಇರುತ್ತದೆ, ಅಲ್ಲದೇ ಬೀಸಣಿಕೆಯು ಗಾಳಿಯನ್ನು ಕೊಳವೆಯಿಂದ ಸೆಳೆದು ಕಾಫಿ ಬುಟ್ಟಿಯ ತಳಕ್ಕೆ ಸಾಗಿಸುತ್ತಿರುತ್ತದೆ.

ಇದರಿಂದ ಬೀಸಣಿಕೆಯಿರುವ ಕೊಳವೆಯ ಭಾಗದ ಗಾಳಿಯ ಒತ್ತಡವು ನೇಸರನ ಪಟ್ಟಿಯ ಕೆಳಗಿನ ಗಾಳಿಯ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹಾಗಾಗಿ ನೇಸರನ ಪಟ್ಟಿಯ ಸುತ್ತಲಿರುವ ಬಿಸಿಗಾಳಿಯು ಕೊಳವೆಯಲ್ಲಿ ಸಾಗಿ ಬೀಸಣಿಕೆಯ ಬಳಿ ಬರುತ್ತದೆ. ಈ ಬೀಸಣಿಕೆಯು ದೊಡ್ಡ ಕೊಳವೆಯಿಂದ ಬಂದ ಬಿಸಿಗಾಳಿಯನ್ನು ತನ್ನ ಮುಂದಿನ ಸಣ್ಣಕೊಳವೆಗೆ ಜೋರಾಗಿ ಸಾಗಿಸುತ್ತದೆ. ಈ ಗಾಳಿಯು ಬುಟ್ಟಿಯಲ್ಲಿರುವ ಕಾಫಿ ಬೀಜಗಳ ನಡುವೆ ಸಾಗಿ ಅದರ ಪಸೆಯನ್ನು ಆರಿಸತೊಡಗುತ್ತದೆ. ಮೇಲೆ ಬಂದ ಪಸೆ(Moisture)ಯು ಕೋಣೆಯ ಗಾಳಿಗೆ ಸೇರಿಹೋಗುತ್ತದೆ.

ಕಾಫಿ ಒಣಗಿಸುವ ಹಂತಗಳು:
ಕಾಫಿಯನ್ನು ಎರಡು ಹಂತಗಳಲ್ಲಿ ಒಣಗಿಸಲಾಗುತ್ತದೆ.
1. ಮೊದಲು ಹಸಿಯಾದ ಕಾಫಿಯಲ್ಲಿರುವ ನೀರಿನ ಅಂಶವನ್ನು ತೆಗೆಯಬೇಕಾಗುತ್ತದೆ ಅದಕ್ಕಾಗಿ ಕಾಫಿಯನ್ನು ಒಂದು ಬುಟ್ಟಿಗೆ ಹಾಕಿ ಬುಟ್ಟಿಯ ಮೇಲಿನಿಂದ ಸಾಮಾನ್ಯಗಾಳಿ ಇಲ್ಲವೇ ಕೊಂಚ ಬಿಸಿ ಇರುವ ಗಾಳಿ(40 ಡಿಗ್ರಿಗಿಂತ ಕಡಿಮೆ)ಯನ್ನು ಹಾಯಿಸಲಾಗುತ್ತದೆ. ನೀರಿನಿಂದ ಕೂಡಿರುವ ಕಾಫಿಯ ಮೇಲೆ 40 ಡಿಗ್ರಿಗಿಂತ ಬಿಸಿ ಇರುವ ಗಾಳಿಯನ್ನು ಹಾಯಿಸಿದರೆ ಅದು ಕಾಫಿಯ ಬಣ್ಣ ಮತ್ತು ಪರಿಮಳದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆಗಳಿವೆ. ಹೀಗೆ ಕಾಫಿಯ ಬುಟ್ಟಿಯ ಮೇಲಿನಿಂದ ಗಾಳಿಯನ್ನು ಹಾಯಿಸಿದಾಗ ಅದರ ಮೇಲಿರುವ ನೀರಿನಂಶವು ಬುಟ್ಟಿಯ ಕೆಳಗಿಳಿದು ಬುಟ್ಟಿಯ ತೂತುಗಳಲ್ಲಿ ಹರಿದು ಹೊರಹೋಗುತ್ತದೆ.

ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಹೀಗೆ ಗಾಳಿಯನ್ನು ಹಾಯಿಸಿ ನೀರನ್ನು ಹೊರತೆಗೆಯಬೇಕಾಗುತ್ತದೆ. ಈ ಬಗೆಯನ್ನು ಮುನ್ನಾರಿಕೆ(ಪ್ರೀ-ಡ್ರಯಿಂಗ್) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 6×6 ಅಡಿಗಳಷ್ಟು ದೊಡ್ಡದಿರುವ ಕಾಫಿ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಕಾಫಿಯನ್ನು ಹರಡಿ ನೀರನ್ನು ತೆಗೆಯಲು 1.5 ಹಾರ‍್ಸ್ ಪವರ್ ಸಾಮರ್ಥ್ಯ ಹೊಂದಿರುವ ಮತ್ತು 18 ಇಂಚು ದುಂಡಳತೆ ಇರುವ ಬೀಸಣಿಕೆಯನ್ನು ಬಳಸಲಾಗುತ್ತದೆ.

2. ಎರಡನೆಯ ಹಂತದಲ್ಲಿ ನೀರನ್ನು ಆರಿಸಿದ ಕಾಫಿಯನ್ನು ಬಿಸಿಗಾಳಿ ಬರುವ ಬುಟ್ಟಿಗೆ ಹಾಕಿ ಒಣಗಿಸಲಾಗುತ್ತದೆ. ಈ ಬುಟ್ಟಿಯೂ ಕೂಡ ಮುನ್ನಾರಿಕೆಯಲ್ಲಿ ಬಳಸಿದಷ್ಟು ದೊಡ್ಡದಾಗಿಯೇ ಇದ್ದು, 40-60 ಡಿಗ್ರಿ ಬಿಸುಪಿರುವ ಗಾಳಿಯನ್ನು ಮಾತ್ರ ಬುಟ್ಟಿಯ ತಳಭಾಗದಿಂದ ಹಾಯಿಸಲಾಗುತ್ತದೆ. ಇದರಲ್ಲೂ ಕೂಡ ಬೀಸಣಿಕೆಯ ಸಾಮರ್ಥ್ಯವು 1.5 ಹಾರ‍್ಸ್ ಪವರ್ ಇದ್ದು 18 ಇಂಚು ದುಂಡಳತೆ ಹೊಂದಿರುತ್ತದೆ.

Coffee Drying 3

(ಕಾಫಿ ಒಣಗುವ ಪಟ್ಟಿಗಳು)

ಕಾಫಿ ಒಣಗುವುದು ಒಣಗಿಸುವ ಬುಟ್ಟಿ ಇಲ್ಲವೇ ಬಲೆಯ ಆದರಾದ ಮೇಲೆ ಬೇರೆ ಬೇರೆ ಪಟ್ಟಿಗಳಲ್ಲಿ ಒಣಗುತ್ತಾ ಬರುತ್ತದೆ. ಚಿತ್ರ 3ಅ ನಲ್ಲಿ ತೋರಿಸುರುವಂತೆ ಬುಟ್ಟಿಯಲ್ಲಿ ಕಾಫಿಯನ್ನು ದಪ್ಪನಾಗಿ ಹಾಕಿದ್ದಾಗ, ಬಿಸಿಗಾಳಿಯು ಕೆಳಗಿನಿಂದ ಮೇಲಕ್ಕೆ ಹರಿಯುತ್ತಿರುತ್ತದೆ. ಬಿಸಿಗಾಳಿಯು ಮೊದಲು ಬುಡದಲ್ಲಿರುವ ಕಾಫಿಯ ಪಸೆ (moisture)ಯನ್ನು ಹೀರುಕೊಳ್ಳುತ್ತಾ ಬರುತ್ತದೆ, ಹೀಗೆ ಹೀರಿಕೊಳ್ಳುವ ಗಾಳಿಯು ಬುಟ್ಟಿಯಲ್ಲಿ, ಕಾಳುಗಳ ನಡುವೆ ಮೇಲೆ ಸರಿದಂತೆ ತನ್ನ ಬಿಸುಪನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಹಾಗಾಗಿ, ಮೇಲಿನ ಭಾಗದಲ್ಲಿರುವ ಕಾಫಿಯೂ ಕೆಳಗಿನ ಭಾಗದ ಕಾಫಿಗಿಂತ ಬೇಗ ಒಣಗುವುದಿಲ್ಲ.

ಹೀಗೆ ಬುಟ್ಟಿಯಲ್ಲಿ ದಪ್ಪನಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಮೊದಲಿಗೆ ಮೂರು ಪಟ್ಟಿಗಳು ಮೂಡುತ್ತವೆ ಅವು ಒಣಗಿದ ಪಟ್ಟಿ, ಒಣಗುತ್ತಿರುವ ಪಟ್ಟಿ ಮತ್ತು ಒಣಗಿರದ ಪಟ್ಟಿಗಳು. ಈ ಪಟ್ಟಿಗಳ ಅಗಲವು ಕಾಫಿಯಲ್ಲಿರುವ ಪಸೆ, ಹರಿಯುತ್ತಿರುವ ಗಾಳಿಯ ಬಿಸುಪು ಮತ್ತು ಗಾಳಿಯ ವೇಗಕ್ಕೆ ತಕ್ಕಂತೆ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ ಕಾಫಿಯ ಸರಿಯಾದ ಒಣಗುವಿಕೆಗೆ ಬುಟ್ಟಿಯಲ್ಲಿರುವ ಕಾಳುಗಳನ್ನು ಕೆಲವು ಗಂಟೆಗಳ ಅಂತರದಲ್ಲಿ ಮಗುಚುತ್ತಿರಬೇಕು. ಆಗ ಒಣಗಿದ ಕಾಫಿ ಮೇಲೆ ಬಂದು ಒಣಗಿರದ ಕಾಫಿ ತಳಕ್ಕೆ ಹೋಗಿ ಒಣಗಲಾರಂಬಿಸುತ್ತದೆ.

ಇನ್ನು ತೆಳುವಾಗಿ ಹಾಸಿ ಒಣಗಿಸುವ ಬಗೆಯಲ್ಲಿ ಚಿತ್ರ 3ಇ ನಲ್ಲಿ ತೋರಿಸುರುವಂತೆ ಕೇವಲ ಒಂದೇ ಪಟ್ಟಿ ಇದ್ದು ಅದು ಒಣಗುತ್ತಿರುವ ಪಟ್ಟಿಯಾಗಿರುತ್ತದೆ. ಗಾಳಿಗೆ ಕಾಳುಗಳ ನಡುವೆ ಸಾಗಲು ಸಾಕಷ್ಟು ಜಾಗ ಇರುವುದರಿಂದ ಇದು ಬಲೆ/ಬುಟ್ಟಿಯಲ್ಲಿ ಹರಡಿರುವ ಎಲ್ಲಾ ಕಾಳುಗಳನ್ನು ಒಂದೇ ಬಗೆಯಲ್ಲಿ ಒಣಗಿಸುತ್ತದೆ.

ಕಾಫಿಯನ್ನು ಒಣಗಿಸುವ ಬುಟ್ಟಿಯ ಅಳತೆ, ಬೀಸಣಿಕೆಯ ಸಾಮರ‍್ತ್ಯ ಎಲ್ಲವೂ ಮತ್ತು ಒಣಗಿಸಲು ಬೇಕಾದ ಜಾಗವು ಬೆಳೆಗಾರರು ವರುಶಕ್ಕೆ ಎಷ್ಟು ಬೆಳೆ ಬೆಳೆಯುತ್ತಾರೆ ಎಂಬುದರ ಮೇಲೆ ತೀರ‍್ಮಾನಿಸಬೇಕಾಗುತ್ತದೆ. ಹಲವು ಅರಕೆಗಳ ಮೂಲಕ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.

  1. ವರುಶಕ್ಕೆ ಒಬ್ಬ ಬೆಳೆಗಾರ 200 ಮೂಟೆ (10000 ಕಿಲೋ) ಕಾಫಿ ಬೆಳೆಯುತ್ತಿದ್ದರೆ, ಆತ 10×10 ಆಡಿಗಳಷ್ಟು ದೊಡ್ಡ ಬುಟ್ಟಿಗಳಲ್ಲಿ ಒಣಗಿಸಬೇಕಾಗುತ್ತದೆ (ಇದರಲ್ಲಿ ಸುಮಾರು 250 ಕಿಲೋ ಕಾಫಿ ಹಿಡಿಯುತ್ತದೆ).
  2. ಬೀಸಣಿಕೆಯ ಸಾಮರ‍್ತ್ಯವು 100 ಸಿ. ಎಪ್. ಎಮ್ (ಕ್ಯುಬಿಕ್ ಪೀಟ್ ಪರ್‍ ಮಿನಿಟ್) ಪರ್ ಸ್ಕ್ವಯರ್ ಪರ್ ಡ್ರಯಿಂಗ್ ಏರಿಯಾ. ಅಂದರೆ 10×10 ಅಡಿಗಳಷ್ಟು ದೊಡ್ಡದಾದ ಬುಟ್ಟಿಯಲ್ಲಿ ಒಂದು ಅಡಿಗಳಷ್ಟು ದಪ್ಪನಾಗಿ ಹರಡಿರುವ ಕಾಫಿಗೆ ಒಂದು ಇಂಚಿನಷ್ಟು ಒತ್ತಡದಲ್ಲಿ ಗಾಳಿಯನ್ನು ಹಾಯಿಸಲು 1000 ಸಿ.ಎಪ್.ಎಮ್ ಸಾಮರ್ಥ್ಯ ಹೊಂದಿರುವ ಬೀಸಣಿಕೆ ಬಳಸಬೇಕಾಗುತ್ತದೆ.
  3. ಗಾಳಿಯನ್ನು 10 ರಿಂದ 60 ಡಿಗ್ರೀ ಬಿಸುಪಿನಲ್ಲಿ ತಡೆಯಿಲ್ಲದೇ ಹರಿಸಿದರೆ, 10×10 ಬುಟ್ಟಿಯಲ್ಲಿ ಒಂದು ಅಡಿ 24 ಗಂಟೆಗಳಲ್ಲಿ ಕಾಫಿಯ ಪಸೆಯು 10% ರಿಂದ 12%ಗೆ ಇಳಿದು, ಕಾಫಿಯು ಒಣಗಿ ಸಿದ್ದವಾಗುತ್ತದೆ. ಇಶ್ಟೇ ಕಾಫಿಯನ್ನು ಅಂಗಳದಲ್ಲಿ ನೇರವಾದ ನೇಸರನ ಬಿಸಿಲಿನಲ್ಲಿ ಒಣಗಿಸಲು ಸುಮಾರು 4 ರಿಂದ 5 ದಿನಗಳು ತಗಲುತ್ತವೆ. ಮತ್ತು ಅದಕ್ಕೆ ಹೆಚ್ಚಿನ ಮಯ್ಗೆಲಸದ ಅವಶ್ಯಕತೆ ಇದೆ. ಅಲ್ಲದೇ ಪಡುವಣ ಬೆಟ್ಟದ ಸಾಲಿನಲ್ಲಿ ಡಿಸೆಂಬರ್‍ ಹಾಗು ಜನವರಿ ಮೊದಲವಾರ ಕೆಲವೊಮ್ಮೆ ಮಳೆಯಾಗುವ ಸಾದ್ಯತೆಗಳು ಇರುವುದರಿಂದ ಕಾಫಿ ಯನ್ನು ಒಣಗಿಸಲು ಹರಸಾಹಸ ಪಡಬೇಕಾಗುತ್ತದೆ.

ಕಾಫಿ ಬೆಳೆಯುವ ಜಾಗದಲ್ಲಿ ಎಲ್ಲಾ ದಿನಗಳೂ ಒಂದೇ ಬಗೆಯ ಬಿಸಿಲು ಇರುವುದಿಲ್ಲ, ಹಾಗಾಗಿ 40 ರಿಂದ 60 ಡಿಗ್ರಿ ಬಿಸುಪಿನಲ್ಲಿ ಯಾವಗಲೂ ಗಾಳಿಯನ್ನು ಹಾಯಿಸಲು ಆಗುವುದಿಲ್ಲ ಇದಕ್ಕಾಗಿ ಬಯೋಮಾಸ್/ಉರುವಲಿನ ಒಲೆಯ ನೆರವನ್ನು ಪಡೆಯಬಹುದು. ಇರುಳಿನಲ್ಲಿ ನೇಸರ ಬಿಸಿಲು ಸಿಗದೇ ಇರುವುದರಿಂದ ಈ ಒಲೆಗಳ ನೆರವಿನಿಂದ ಬಿಸಿಗಾಳಿಯನ್ನು ಹಾಯಿಸಿ ಒಣಗಿಸಬಹುದು. ಹೀಗೆ ಬಿಟ್ಟಿಯಾಗಿ ಸಿಗುವ ನೇಸರನ ಬಿಸಿಲು ಮತ್ತು ಕಡಿಮೆ ಬೆಲೆಯಲ್ಲಿ ಸಿಗುವ ಉರುವಲುಗಳನ್ನು ಬಳಸಿ ಬಿಸಿಗಾಳಿಯನ್ನು ಒದಗಿಸಿ ಕಾಫಿಯನ್ನು ಕಡಿಮೆ ಮಯ್ಗೆಲಸ ಮತ್ತು ಹೆಚ್ಚಿನ ಗುಣಮಟ್ಟದಲ್ಲಿ ಒಣಗಿಸಬಹುದು.

ಬೆಳೆಗಾರರು ವರುಶಕ್ಕೆ ಬೆಳೆಯುವ ಕಾಫಿಯ ಅಳತೆ, ಆ ಜಾಗದಲ್ಲಿನ ಬಿಸುಪು ಮತ್ತು ಹಣಕಾಸಿನ ವಿವರಗಳನ್ನು ಕಲೆಹಾಕಿ ಪರಿಣಾಮಕಾರಿಯಾದ ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು. ಹಾಗೆಯೇ ಈ ಬಗೆಯಿಂದ ಕಾಫಿ ಒಂದೇ ಅಲ್ಲ ಬೇರೆ ಬೇರೆ ಕಾಳುಗಾಳನ್ನು ಒಣಗಿಸುವ ಬಗೆಗಳನ್ನು ಕಟ್ಟಿಕೊಳ್ಳಬಹುದು.

 

(ಮಾಹಿತಿಸೆಲೆ: academic.uprm.eduaee-intec.at)

ಜಿ-ಕ್ಯಾನ್ಸ್: ನೆರೆಗೊಂದು ಬಗೆಹರಿಕೆ

ರತೀಶ ರತ್ನಾಕರ.

G-Cans-9003

ನೆಲನಡುಗುವಿಕೆ ಮತ್ತು ನೆರೆಯಂತಹ ಪ್ರಕೃತಿ ವಿಕೋಪಗಳು ಜಪಾನ್ ನಾಡಿಗೆ ಹೊಸದೇನಲ್ಲ. ಇಂತಹ ಹಲವಾರು ಆಪತ್ತುಗಳನ್ನು ಎದುರಿಸಲು ಅಲ್ಲಿನ ಮಂದಿ ಎಂದಿಗೂ ಅಣಿಯಾಗಿರುತ್ತಾರೆ. ಇಂತಹ ಆಪತ್ತುಗಳಿಂದ ಕಾಪಾಡಿಕೊಳ್ಳಲು ಹೆಚ್ಚಾಗಿ ಅವರು ಅರಿಮೆಯ ಮೊರೆಹೋಗಿ, ಅದರ ಆಧಾರದ  ಮೇಲೆ ತಮ್ಮ ಮನೆ ಹಾಗು ಊರುಗಳನ್ನು ಕಟ್ಟಿಕೊಂಡಿದ್ದಾರೆ. ಇಂತಹದ್ದೇ ಒಂದು ಹಮ್ಮುಗೆಗಳಲ್ಲಿ ಜಿ-ಕ್ಯಾನ್ಸ್ ಹಮ್ಮುಗೆಯೂ ಒಂದು. ಜಪಾನಿನ ರಾಜಧಾನಿ ಟೋಕಿಯೋ ನಗರವನ್ನು ನೆರೆಯಿಂದ ಕಾಪಾಡಿಕೊಳ್ಳಲು ಹಾಕಿಕೊಂಡ ಹಮ್ಮುಗೆಯೇ ಜಿ-ಕ್ಯಾನ್ಸ್ (G-Cans). ಇದು ನೆರೆಯಿಂದ ಕಾಪಾಡಿಕೊಳ್ಳಲು ಇರುವ ಹಮ್ಮುಗೆಗಳಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಹಮ್ಮುಗೆಯಾಗಿದೆ.

ಟೋಕಿಯೋ ನಗರವು ಹಲವಾರು ನದಿಗಳಿಂದ ಕೂಡಿದೆ, ಮಳೆಯು ಹೆಚ್ಚಾದಂತೆ ಈ ನದಿಗಳಲ್ಲಿ ನೆರೆ ಬಂದು ಟೋಕಿಯೋ ನಗರಕ್ಕೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲೆಂದೇ ಜಿ-ಕ್ಯಾನ್ಸ್ ಹಮ್ಮುಗೆಯನ್ನು ಕಯ್ಗೆತ್ತಿಕೊಳ್ಳಲಾಯಿತು. ಇದನ್ನು ಮೆಟ್ರೋಪಾಲಿಟನ್ ಏರಿಯಾ ಅವ್ಟರ್ ಅಂಡರ್ ಗ್ರವ್‍ಂಡ್ ಡಿಸ್‍ಚಾರ್‍ಜ್ ಚಾನೆಲ್ (Metropolitan Area Outer Underground Discharge Channel) ಎಂದು ಕೂಡ ಕರೆಯುತ್ತಾರೆ. ಈ ಹಮ್ಮುಗೆಯಲ್ಲಿ ನದಿಯಿಂದ ಬರುವ ಹೆಚ್ಚಿನ ನೀರನ್ನು ಉರುಳೆ ಆಕಾರವಿರುವ ಅಯ್ದು ಬೇರೆ ಬೇರೆ ಹೆಗ್ಗಂಬ(silos)ಗಳು ಮತ್ತು ಸುರಂಗದ ನೆರವಿನಿಂದ ಟೋಕಿಯೋ ನಗರದ ಹೊರಕ್ಕೆ ಕಳುಹಿಸಲಾಗುವುದು. ನೀರನ್ನು ಟೋಕಿಯೋ ನಗರದಿಂದ 30 ಕಿ. ಮೀ ದೂರವಿರುವ ಕಸುಕಾಬೆ ನಗರದ ಬಳಿ ಇರುವ ಎಡೊಗೊವಾ ನದಿಗೆ ಹರಿಸಲಾಗುವುದು. ಬನ್ನಿ ಇದನ್ನು ಹೇಗೆ ಮಾಡಲಾಗಿದೆ ಎಂಬುದನ್ನು ತಿಳಿಯೋಣ.

l_tecb130312

ಟೋಕಿಯೋದಲ್ಲಿ ಬರುವ ನೆರೆಯ ನೀರನ್ನು ಸುರಂಗಕ್ಕೆ ತಲುಪಿಸಲು ನಗರದ ಅಯ್ದು ಕಡೆಗಳಲ್ಲಿ ಉರುಳೆ ಆಕಾರಾದ ಹೆಗ್ಗಂಬಗಳನ್ನು ಕಟ್ಟಲಾಗಿದೆ. ಒಂದೊಂದು ಹೆಗ್ಗಂಬ 65 ಮೀ. ಎತ್ತರ ಮತ್ತು 32 ಮೀ. ಅಡ್ಡಗಲವಿದೆ. ಈ ಹೆಗ್ಗಂಬದ ತುದಿಗಳು ನೆಲದಿಂದ ಕೆಲವೇ ಮೀಟರುಗಳಷ್ಟು ಎತ್ತರವಿದ್ದು ಉಳಿದ ಭಾಗವೆಲ್ಲ ನೆಲದ ಅಡಿಗೆ ಹೋಗಿರುತ್ತದೆ. ಮೇಲಿನ ಚಿತ್ರದಲ್ಲಿ ತೋರಿಸಿದಂತೆ ಹೆಗ್ಗಂಬಗಳ ನಡುವೆ ಸುರಂಗವಿದೆ. ಈ ಸುರಂಗದ ಅಡ್ಡಳತೆ 10.6 ಮೀ ಆಗಿದೆ, ಮತ್ತು ಈ ಸುರಂಗವು ನೆಲದಿಂದ ಮೇಲಿಂದ 50 ಮೀಟರ್ ನಷ್ಟು ಆಳಕ್ಕೆ ಇದೆ. ಹೀಗೆ ಬೇರೆ ಬೇರೆ ಕಡೆಗಳಲ್ಲಿರುವ ಅಯ್ದು ಹೆಗ್ಗಂಬಗಳು ಸುರಂಗದಿಂದ ಕೂಡಿಕೊಂಡು ಒಟ್ಟು 6 ಕಿಲೋ ಮೀಟರ್ ನಷ್ಟು ಉದ್ದಕ್ಕೆ ಹರಡಿಕೊಂಡಿದೆ.

gcans4_1024x683

ಈ ಸುರಂಗ ಹಾಗು ಹೆಗ್ಗಂಬದ ಕೊನೆಗೆ ದೊಡ್ಡದೊಂದು ನೀರಿನ ತೊಟ್ಟಿಯನ್ನು ನೆಲದೊಳಗೆ ಕಟ್ಟಲಾಗಿದೆ. ಇದನ್ನು ದಿ ಟೆಂಪಲ್ (The Temple) ಎಂದು ಕರೆಯುತ್ತಾರೆ. ಇದು ಕೇವಲ 25.4 ಮೀ ಎತ್ತರವಿದೆ ಆದರೆ ಇದರ ಉದ್ದ ಸುಮಾರು 177 ಮೀ. ಮತ್ತು ಅಗಲ 78 ಮೀ. ಇದೆ. ಇಷ್ಟು ದೊಡ್ಡ ನೀರಿನ ತೊಟ್ಟಿಯ ನಡುವೆ ಆನಿಕೆಗಾಗಿ (support) ಸುಮಾರು 59 ಕಂಬಗಳನ್ನು (20 ಮೀ. ಉದ್ದ) ಕಟ್ಟಲಾಗಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಟೋಕಿಯೋ ನಗರದ ಸುತ್ತಮುತ್ತ ಮಳೆ ಹೆಚ್ಚಾಗಿ ನದಿಗಳಲ್ಲಿ ನೆರೆ ಬಂದಾಗ, ನದಿಯು ತುಂಬಿ ಹೆಚ್ಚಾದ ನೀರನ್ನು ಹೆಗ್ಗಂಬಗಳ ಮೇಲ್ತುದಿಯ ಕಡೆಗೆ ಸಾಗಿ

ಸುವ ಏರ್ಪಾಡನ್ನು ಮಾಡಲಾಗಿದೆ. ಈ ಹೆಗ್ಗಂಬಗಳ ತಳದಲ್ಲಿ ನದಿಯ ನೀರು ತುಂಬಿಕೊಳ್ಳುತ್ತಾ ಹೋಗುತ್ತದೆ, ತುಂಬಿಕೊಂಡ ನೀರು ಸುರಂಗದ ಮೂಲಕ ಮತ್ತೊಂದು ಹೆಗ್ಗಂಬವನ್ನು ಸೇರುತ್ತದೆ. ಹೀಗೆ ಮುಂದುವರಿದು ಹೆಚ್ಚಿನ ನೀರು ಸುರಂಗದ ಮೂಲಕ ಕೊನೆಯ ಹೆಗ್ಗಂಬದಲ್ಲಿ ತುಂಬಿಕೊಳ್ಳುತ್ತದೆ. ಕೊನೆಯ ಹೆಗ್ಗಂಬದಿಂದ ನೀರು ಮುಂದುವರಿದು ದೊಡ್ಡ ನೀರಿನ ತೊಟ್ಟಿಯಲ್ಲಿ ತುಂಬಿಕೊಳ್ಳುತ್ತದೆ.

ಈ ದೊಡ್ಡ ನೀರಿನ ತೊಟ್ಟಿಗೆ 10 ಮೆಗಾ ವ್ಯಾಟ್ ಹುರುಪಿರುವ 78 ನೀರೆತ್ತುಕ (water pump)ಗಳನ್ನು ಮತ್ತು 14000 ಎಚ್ ಪಿ ಹುರುಪುಳ್ಳ ಟರ್ಬೈನ್ ಗಳನ್ನು ಅಳವಡಿಸಲಾಗಿದೆ. ಇದರ ನೆರವಿನಿಂದ 200 ಟನ್ ನೀರನ್ನು ಒಂದು ಸೆಕೆಂಡಿಗೆ ನೀರಿನ ತೊಟ್ಟಿಯಿಂದ ಎತ್ತಿ ಹೊರ ಹಾಕಬಹುದಾಗಿದೆ. ಹೀಗೆ ಹೊರಗೆತ್ತುವ ನೀರನ್ನು ಎಡೊಗೊವಾ ನದಿಗೆ ಬಿಡಲಾಗುವುದು. ಟೋಕಿಯೋ ನಗರವು ಎಡಗೋವಾ ನದಿಗಿಂತ ಎತ್ತರದ ಬಾಗದಲ್ಲಿದೆ, ಮತ್ತು ಎಡೊಗೊವಾ ನದಿಯು ಕಡಲಿಗೆ ಹತ್ತಿರವಾಗಿದೆ. ಹಾಗಾಗಿ ಎಡಗೋವಾ ನದಿಗೆ ಹರಿಸುವ ಹೆಚ್ಚಿನ ನೀರಿನಿಂದ ಟೋಕಿಯೋ ನಗರಕ್ಕಾಗಲಿ ಇಲ್ಲವೇ ಆ ನದಿಯ ದಡದಲ್ಲಿರುವ ಬೇರೆ ನಗರಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಅಲ್ಲದೇ ನೀರಿನ ಹರಿವನ್ನು ಗಮನಿಸಲು ಮತ್ತು ಹತೋಟಿಯಲ್ಲಿಡಲು ಒಂದು ಹತೋಟಿ ಕೋಣೆ (control room) ಕೂಡ ಕೆಲಸ ಮಾಡುತ್ತಿರುತ್ತದೆ.

tokyo-underground-temple-6

ಈ ಹಮ್ಮುಗೆಗೆ ಬೇಕಾದ ನೆಲದಡಿಯ ಕಾಲುವೆಯನ್ನು ‘ಕಾಪಿಡುವ ಸುರಂಗ ಕಟ್ಟುವ ಚಳಕ‘ (Shield Tunneling Technology)ವನ್ನು ಬಳಸಿ ಕಟ್ಟಲಾಗಿದೆ. ಈ ಚಳಕದಲ್ಲಿ, ಮೊದಲು ಗಟ್ಟಿಯಾದ, ಬಲಪಡಿಸುವಂತಹ ಪಟ್ಟಿಗಳನ್ನು ನೆಲಕ್ಕೆ ತಳ್ಳಿ ಒಂದು ಚೌಕಟ್ಟನ್ನು ಮಾಡಿಕೊಳ್ಳಲಾಗುವುದು. ಈ ಚೌಕಟ್ಟಿನಲ್ಲಿ ನಡುವಿನ ಮಣ್ಣನ್ನು ತೆಗೆದು ಸುರಂಗ ಇಲ್ಲವೆ ಹೆಗ್ಗಂಬ ಕಟ್ಟುವ ಕೆಲಸ ಮಾಡಲಾಗುವುದು. ಸುತ್ತಲಿನ ಮಣ್ಣು ಜಾರದಂತೆ ಈ ಚೌಕಟ್ಟು ನೆರವಾಗುತ್ತದೆ. ಹೀಗೆ ಚೌಕಟ್ಟನ್ನು ಕಟ್ಟಿಕೊಂಡು ನೆಲವನ್ನು ಅಗೆಯುತ್ತಾ ಕೆಲಸವನ್ನು ಮುಂದುವರಿಸಲಾಗುವುದು.

ಹೀಗೆ, ನೆರೆಯಿಂದ ಬಳಲುತ್ತಿದ್ದ ಟೋಕಿಯೋ ನಗರವನ್ನು ಕಾಪಾಡಲು ನೆರೆಯ ನೀರನ್ನು ಕೂಡಿಹಾಕಿ, ನೆಲದಡಿಗೆ ಕಳುಹಿಸಿ, ಸುರಂಗದ ಮೂಲಕ ಟೋಕಿಯೋ ನಗರವನ್ನು ದಾಟಿಸಿ, ದೂರದ, ತೊಂದರೆಗೊಳಗಾಗದ ಜಾಗವಾದ ಎಡೊಗೊವಾ ನದಿಗೆ ತಲುಪಿಸಿದ್ದಾರೆ. ಈ ಹಮ್ಮುಗೆಯನ್ನು 1992 ರಿಂದ 2009 ರವರೆ ಅಂದರೆ ಸುಮಾರು 17 ವರುಶಗಳ ಕಾಲ ತೆಗೆದುಕೊಂಡು ಮುಗಿಸಿದ್ದಾರೆ. ಇನ್ನು ಮಳೆಗಾಲವಲ್ಲದ ಹೊತ್ತಿನಲ್ಲಿ ಈ ಹಮ್ಮುಗೆಯು ಪ್ರವಾಸಿ ತಾಣವಾಗಿ ಮಾರ್‍ಪಡುತ್ತದೆ. ಹೆಗ್ಗಂಬಗಳಲ್ಲಿರುವ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಸುರಂಗ ಮತ್ತು ದೊಡ್ಡ ನೀರಿನ ತೊಟ್ಟಿಯನ್ನೆಲ್ಲಾ ನೋಡಿಕೊಂಡು ಬರಬಹುದು.

(ಮಾಹಿತಿ ಮತ್ತು ಚಿತ್ರ ಮೂಲinterestingengineering.com g-cans)