ಬ್ಯಾಟರಿಲೋಕದ ಹೊಸ ಚಳಕ

ಜಯತೀರ್ಥ ನಾಡಗೌಡ.

ಬ್ಯಾಟರಿ ಇಲ್ಲವೇ ಮಿಂಕಟ್ಟು ಈ ಪದದ ಹೆಸರು ಕೇಳದವರು ಅತಿ ಕಡಿಮೆ. ರೇಡಿಯೋ, ರಿಮೋಟ್, ಮಕ್ಕಳ ಆಟಿಕೆಯಿಂದ ಹಿಡಿದು ಮೊಬೈಲ್, ಕಾರು, ಬಸ್‌ಗಳಲ್ಲಿ ಬಳಕೆಯಾಗಲ್ಪಡುವ ವಸ್ತುವಾಗಿ ಬೆಳೆದಿದೆ. ಬಂಡಿಯ ಇಲೆಕ್ಟ್ರಿಕ್ ಏರ್ಪಾಟು ನಡೆಸಲಷ್ಟೇ ಸೀಮಿತವಾಗಿದ್ದ ಬ್ಯಾಟರಿ, ಇಂದು ಮಿಂಚಿನ ಬಂಡಿಗಳ(Electric Vehicle) ಪ್ರಮುಖ ಭಾಗವಾಗಿದೆ. ಮಿಂಚಿನ ಬಂಡಿಗಳ ಬಳಕೆ ಹೆಚ್ಚುತ್ತಿರುವಂತೆ ಅವುಗಳಲ್ಲಿ ಬಳಸಲ್ಪಡುವ ಬ್ಯಾಟರಿ ತಾಳಿಕೆ-ಬಾಳಿಕೆ ಬಗ್ಗೆಯೂ ಹೆಚ್ಚಿನ ಅರಕೆಗಳು ನಡೆಯುತ್ತಿವೆ. ಇಂದು ಬಹುಪಾಲು ಮೊಬೈಲ್, ಮಿಂಚಿನ ಬಂಡಿಗಳಲ್ಲಿ ಕಂಡುಬರುವ ಮಿಂಕಟ್ಟು ಲಿಥಿಯಮ್-ಅಯಾನ್ ರಾಸಾಯನಿಕಗಳಿಂದ ಮಾಡಲ್ಪಟ್ಟಿವೆ. ಹೆಚ್ಚಿನ ಬಾಳಿಕೆಗೆ ಹೆಸರಾಗಿರುವ ಲಿಥಿಯಮ್-ಅಯಾನ್ ಬ್ಯಾಟರಿ ಬಳಕೆ ಎಲ್ಲೆಡೆ ಹೆಚ್ಚುತ್ತಿದೆ. ಹೆಚ್ಚು ಲಿಥಿಯಮ್ ನಿಕ್ಷೇಪ ಹೊಂದಿರುವ ಚೀನಾ ದೇಶ, ಲಿಥಿಯಮ್-ಅಯಾನ್ ಮಿಂಕಟ್ಟು ಬಳಕೆ ಹೆಚ್ಚಿಸಿ ಜಗತ್ತಿನ ಮೇಲೆ ತನ್ನ ಹಿಡಿತ ಪಡೆಯುವತ್ತ ಮುನ್ನುಗ್ಗಿದೆ. ಅದರಲ್ಲೂ ಮಿಂಚಿನ ಕಾರುಗಳಲ್ಲಿ ಬಳಸಲ್ಪಡುವ ಬಹುತೇಕ ಲಿಥಿಯಮ್-ಅಯಾನ್ ಮಿಂಕಟ್ಟುಗಳು ಚೀನಾ ದೇಶದಿಂದ ಬರುತ್ತಿವೆ. ಇದರಿಂದ ಜಾಗತಿಕ ಸರಬರಾಜು ಸರಪಳಿ ಮೇಲೂ ಸಾಕಷ್ಟು ಒತ್ತಡ ಬಂದಿದೆ. ಇದನ್ನು ಮೆಟ್ಟಿನಿಲ್ಲಲು ಹೊಸದೊಂದು ರಾಸಾಯನಿಕ,  ಸೋಡಿಯಮ್-ಅಯಾನ್ ಬ್ಯಾಟರಿ ಈಗ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಅರಕೆ ಮಾಡಿದ ವಿಜ್ಞಾನಿಗಳು ಸೋಡಿಯಮ್ , ಲಿಥಿಯಮ್ ಗಿಂತ ಹೆಚ್ಚಿನ ಅನುಕೂಲ ಹೊಂದಿದೆ ಎಂದು ತೋರಿಸಿ ಕೊಟ್ಟಿದ್ದಾರೆ. ಸೋಡಿಯಮ್ ಕಡಲ ನೀರಿನಲ್ಲಿ ಹೇರಳವಾಗಿ ಸಿಗುವ ರಾಸಾಯನಿಕವಾದ್ದರಿಂದ, ಕಡಲ ನೀರನ್ನು ಭಟ್ಟಿಕರೀಸಿ ಸೋಡಿಯಮ್ ಪಡೆಯಬಹುದು. ಸೋಡಿಯಮ್-ಅಯಾನ್ ಬ್ಯಾಟರಿಗಳು ಬೆಲೆಯಲ್ಲೂ ಅಗ್ಗವಾಗಿರಲಿವೆ. ಸೋಡಿಯಮ್-ಅಯಾನ್ ಬ್ಯಾಟರಿ ಹೇಗೆ ಲಿಥಿಯಮ್-ಅಯಾನ್ ಮಿಂಕಟ್ಟುಗಳಿಗಿಂತ ಹೆಚ್ಚು ಅನುಕೂಲವಾಗಿರಲಿದೆ ನೋಡೋಣ ಬನ್ನಿ.

ಸೋಡಿಯಮ್-ಅಯಾನ್ ಮಿಂಕಟ್ಟನ್ನು ತೋರಿಸುವ ತಿಟ್ಟ

ಸಿಗುವಿಕೆ ಕುರಿತು ನೋಡಿದಾಗ ಸೋಡಿಯಮ್ ಸುಲಭವಾಗಿ ಸಿಗುವಂತ ರಾಸಾಯನಿಕ, ಕಡಲ ನೀರಿನಿಂದಲೂ ಸೋಡಿಯಮ್ ಸುಲಭ ಮತ್ತು ಅಗ್ಗವಾಗಿ ಪಡೆಯಬಹುದು. ಲಿಥಿಯಮ್ ಚೀನಾ, ಅರ್ಜಂಟೀನಾ ಹೀಗೆ ಕೆಲವೇ ದೇಶಗಳಲ್ಲಿ ಸಿಗುತ್ತಿದೆ. ಸೋಡಿಯಮ್, ಸಾಗಣೆ ಮತ್ತು ಕೂಡಿಡಲು ಯಾವುದೇ ಅಪಾಯ ತಂದೊಡ್ಡುವುದಿಲ್ಲ. ಲಿಥಿಯಮ್ ಅನ್ನು ಸಾಗಿಸುವುದು ಮತ್ತು ಕೂಡಿಡುವುದು ಕಷ್ಟದ ಕೆಲಸ, ಸಾಗಿಸುವಾಗ  ಸಾಮಾನ್ಯವಾಗಿ 30% ಹುರುಪು(Charge) ಬ್ಯಾಟರಿಗಳಲ್ಲಿ ಇರಲೇಬೇಕು. ಲಿಥಿಯಮ್-ಅಯಾನ್ ಬ್ಯಾಟರಿಗಳಲ್ಲಿ ಕಾರ್ಬನ್ ಮೂಲದ ಆನೋಡ್(Anode) ಮತ್ತು ತಾಮ್ರದ ಕರೆಂಟ್ ಕಲೆಕ್ಟರ್‌ಗಳ(Copper Current Collector) ಬಳಕೆ ಮಾಡಿರುವುದರಿಂದ, ಇದು ಶಾರ್ಟ್ ಸರ್ಕ್ಯೂಟ್ ಮೂಲಕ ಬೆಂಕಿ ಅವಘಡದಂತ ಇರ್ಕು(Risk) ತಂದೊಡ್ಡಬಲ್ಲುದು. ಸೋಡಿಯಮ್-ಅಯಾನ್ ಮಿಂಕಟ್ಟನ್ನು ಹುರುಪಿಲ್ಲದೇ(Zero Charge) ಸುಲಭವಾಗಿ ಸಾಗಿಸಬಹುದು, ಇದರಲ್ಲಿ ಕಾರ್ಬನ್ ಮೂಲದ ಆನೋಡ್ ಮತ್ತು ಅಲ್ಯುಮಿನಿಯಮ್ ಕರೆಂಟ್ ಕಲೆಕ್ಟರ್‌ಗಳು ಇರುವುದರಿಂದ ಯಾವುದೇ ಅಪಾಯವಿಲ್ಲ. ಹಾಗೆಯೇ ಲಿಥಿಯಮ್-ಅಯಾನ್ ಬ್ಯಾಟರಿಗಳಲ್ಲಿ ತಾಮ್ರದ ಕಲೆಕ್ಟರ್‌ಗಿಂತ  ಸೋಡಿಯಮ್-ಅಯಾನ್ ಬ್ಯಾಟರಿಗಳ ಅಲ್ಯುಮಿನಿಯಮ್ ಕಲೆಕ್ಟರ್‌ಗಳು ಅಗ್ಗವಾಗಿವೆ. ಸೋಡಿಯಮ್‌ನ ಮಿಂಕಟ್ಟುಗಳು ಹೆಚ್ಚಿನ ಬಿಸುಪನ್ನು ತಡೆಕೊಳ್ಳುವ ಶಕ್ತಿಹೊಂದಿವೆ, ಅಂದರೆ ಹೆಚ್ಚು ಬಿಸುಪಿನ ವಾತಾವರಣದಲ್ಲಿ ಹೆಚ್ಚಿನ ಬಾಳಿಕೆ ಬರುತ್ತವೆ. ಆದರೆ ಲಿಥಿಯಮ್ ಮಿಂಕಟ್ಟುಗಳು ಸೋಡಿಯಮ್ ಮೂಲದ ಮಿಂಕಟ್ಟುಗಳಷ್ಟು ಬಿಸುಪನ್ನು ತಡೆಯಲಾರವು. ಸೋಡಿಯಮ್-ಅಯಾನ್ ಬ್ಯಾಟರಿಗಳು ಬೇಗನೆ ಹುರುಪು(Charge) ಪಡೆಕೊಳ್ಳಬಲ್ಲವು ಮತ್ತು ಇದರಿಂದ ಇವುಗಳ ಲಿಥಿಯಮ್ ಅಯಾನ್ ಬ್ಯಾಟರಿಗಳಿಗಿಂತ 3ಪಟ್ಟು ಹೆಚ್ಚಿನ ಕಾಲ ಬಾಳಿಕೆ ಹೊಂದಿವೆ.

ಸೋಡಿಯಮ್-ಅಯಾನ್ ಮಿಂಕಟ್ಟುಗಳು ಕೆಲವು ಅನಾನುಕೂಲಗಳನ್ನು ಹೊಂದಿವೆ. ಅವು ಹೀಗಿವೆ:

  1. ಸೋಡಿಯಮ್ ಬ್ಯಾಟರಿಗಳ ಸರಬರಾಜು-ಸರಪಳಿ ಏರ್ಪಾಟು(Supply Chain System) ಇನ್ನೂ ತಕ್ಕಮಟ್ಟಿಗೆ ಬೆಳೆದಿಲ್ಲ. ಸಾಕಷ್ಟು ಕೊರತೆಗಳಿವೆ.
  2. ಈ ಚಳಕ(Technology) ಇನ್ನೂ ಎಳವೆಯಲ್ಲಿದೆ ಎನ್ನಬಹುದು, ಕೇವಲ ಬೆರಳೆಣಿಕೆ ಕಂಪನಿಗಳು ಮಾತ್ರ ಇದರಲ್ಲಿ ತೊಡಗಿಕೊಂಡಿರುವುದರಿಂದ ಸೋಡಿಯಮ್-ಅಯಾನ್ ಮಿಂಕಟ್ಟುಗಳು ದುಬಾರಿ ಎನಿಸಿವೆ.
  3.  ಚಳಕ ಎಳವೆಯಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳು ಕೂಡ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಆದಕಾರಣ ಈ ಹೊಸ ಬ್ಯಾಟರಿಗಳನ್ನು ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ.
  4. ಇನ್ನೊಂದು ಪ್ರಮುಖ ಅನಾನುಕೂಲವೆಂದರೆ, ಸೋಡಿಯಮ್-ಅಯಾನ್ ಮಿಂಕಟ್ಟುಗಳನ್ನು ನಮಗಿಷ್ಟದ ಆಕಾರದಂತೆ ಅಂದರೆ ಸಿಲಿಂಡರ್, ಒಡಕಗಳಂತೆ(Prism) ಮಾರ್ಪಡಿಸಲಾಗದು.
  5. ಸೋಡಿಯಮ್-ಅಯಾನ್ ಬ್ಯಾಟರಿಯ ದಟ್ಟಣೆಯೂ(Density) ಕಡಿಮೆ ಇರುವುದರಿಂದ ಇವುಗಳು ಕೂಡಿಡುವ ಅಳವು(Storage Capacity) ಕಡಿಮೆ.

ಕೆಲವೊಂದು ಅನಾನುಕೂಲಗಳು ಇದ್ದರೂ ಸೋಡಿಯಮ್-ಅಯಾನ್ ಬ್ಯಾಟರಿಗಳ ಬಗ್ಗೆ ಇನ್ನೂ ಹೆಚ್ಚಿನ ಬೆಳವಣಿಗೆ ಮಾಡಿದರೆ ಅಗ್ಗದ ಬೆಲೆಯಲ್ಲಿ ಹೆಚ್ಚಿನ ಅಳವು(Efficiency) ನೀಡುವಲ್ಲಿ ಇವುಗಳು ಲಿಥಿಯಮ್-ಅಯಾನ್ ಬ್ಯಾಟರಿಗಳಿಗೆ ತಕ್ಕ ಪೈಪೋಟಿಯಾಗುವುದು ಖಚಿತ.

ಮಾಹಿತಿ ಸೆಲೆ:

https://www.gep.com/blog/strategy/lithium-ion-vs-sodium-ion-battery

https://faradion.co.uk/technology-benefits/strong-performance/

 

ಕುಡಿಯುವ ನೀರಿನ ಬವಣೆ ನೀಗಿಸಲಿರುವ ‘ವಾಟರ್‌ಸೀರ್’

ಜಯತೀರ್ಥ ನಾಡಗೌಡ.

ವಿಶ್ವಸಂಸ್ಥೆಯ ಅಂಕಿ-ಸಂಖ್ಯೆಗಳು ಹೇಳುವಂತೆ ದಿನಕ್ಕೆ ಸುಮಾರು 9 ಸಾವಿರ ಮಂದಿ ಚೊಕ್ಕಟವಾದ ಕುಡಿಯುವ ನೀರಿನ ಕೊರತೆಯಿಂದ ಸಾಯುತ್ತಿದ್ದಾರಂತೆ. ಜಗತ್ತಿನ ಬಹುತೇಕ ಭಾಗ ನೀರಿನಿಂದ ಆವರಿಸಿದ್ದರೂ, ಅದರಲ್ಲಿ ಕುಡಿಯಲು ತಕ್ಕುದಾಗಿರುವುದು ತೀರಾ ಕಡಿಮೆ. ಕುಡಿಯುವ ನೀರಿನ ಕೊರತೆ ಮತ್ತು ಅದರಿಂದ ಆಗುತ್ತಿರುವ ಸಾವು-ನೋವುಗಳ ಕಂಡು ಈಗಾಗಲೇ ಸಾಕಷ್ಟು ಸಂಘ ಸಂಸ್ಥೆಗಳು ಇದನ್ನು ಹೋಗಲಾಡಿಸಲು ಕೆಲಸ ಮಾಡುತ್ತಿವೆ. ಕುಡಿಯುವ ನೀರನ್ನು  ಹಸನಾಗಿಸಲು ಇಂತ ಸಂಸ್ಥೆಗಳು ಹೊಸ ಹೊಸ ಚಳಕಗಳನ್ನು ಕಂಡು ಹಿಡಿಯುತ್ತಿವೆ.

ವಾರ್ಕಾ ವಾಟರ್ ಎಂಬ ಹೊಸ ಚಳಕವೊಂದರ ಬಗ್ಗೆ ಹಿಂದೊಮ್ಮೆ ಓದಿದ್ದೀರಿ. ಅದನ್ನೇ ಹೋಲುವ ಇನ್ನೊಂದು ನೀರು ಹಸನಾಗಿಸುವ ಎಣಿಯೊಂದು(Device) ಹೊರಬಂದಿದೆ. ಅದೇ ವಾಟರ್ ಸೀರ್(WaterSeer). ಮಿಂಚಿನ ಕಸುವು ಬಳಸದೇ ಕಡಿಮೆ ವೆಚ್ಚದಲ್ಲಿ ನೀರು ಹಸನಾಗಿಸುವ ಎಣಿಯೇ ವಾಟರ್ ಸೀರ್. ವಿಸಿ ಲ್ಯಾಬ್ಸ್ (VICI Labs) ಹೆಸರಿನ ಅಮೇರಿಕಾದ ಕೂಟ, ಕ್ಯಾಲಿಫೋರ್ನಿಯಾದ ಬರ್ಕಲಿ ವಿಶ್ವವಿದ್ಯಾಲಯ (UC Berkeley) ಮತ್ತು ನ್ಯಾಶನಲ್ ಪೀಸ್ ಕಾರ್ಪ್ಸ್ ಅಸೋಸಿಯೇಶನ್ (National Peace Corps Association)ಎಂಬ ಸಂಘಟನೆಗಳು ಒಟ್ಟಾಗಿ ಈ ಕೆಲಸಕ್ಕೆ ಕೈ ಹಾಕಿವೆ.

ವಾಟರ್ ಸೀರ್ ಎಣಿಯು ಒಂದು ಗಾಳಿದೂಡುಕ(Turbine), ಒಂದು ಬೀಸಣಿಗೆ(Fan) ಮತ್ತು ಆವಿ ಇಂಗಿಸುವ ಗೂಡುಗಳನ್ನು(Condensation Chamber) ಹೊಂದಿದೆ. ವಾಟರ್ ಸೀರ್ ಎಣಿಯನ್ನು ಗಾಳಿಯಾಡುವ ಬಯಲು ಜಾಗದಲ್ಲಿ 6 ರಿಂದ 8 ಅಡಿಗಳವರೆಗೆ ನೆಡಬೇಕಾಗುತ್ತದೆ. ಎಣಿಯ ಮೇಲ್ಭಾಗದಲ್ಲಿ ಜೋಡಿಸಲಾಗಿರುವ ಸುರುಳಿಯಾಕಾರದ ಗಾಳಿದೂಡುಕ, ಸುತ್ತಮುತ್ತಲೂ ಬೀಸುವ ಗಾಳಿಯನ್ನು ಒಳದೂಡುತ್ತಿರುತ್ತದೆ. ಇದರಿಂದ ಒಳಭಾಗದ ಬೀಸಣಿಗೆ ತಿರುಗುತ್ತ, ಬೆಚ್ಚನೆಯ ಗಾಳಿಯನ್ನು ನೆಲದಡಿ ನೆಡಲಾಗಿರುವ ಆವಿ ಇಂಗಿಸುವ ಗೂಡಿಗೆ ಸಾಗಿಸುತ್ತದೆ. ಆವಿ ಇಂಗಿಸುವ ಗೂಡಿನಲ್ಲಿ ಕೂಡಿಕೊಂಡ ಬೆಚ್ಚನೆಯ ಗಾಳಿ, ಸುತ್ತಲಿನ ನೆಲದಡಿಯ ತಂಪಿನ ವಾತಾವರಣದಿಂದ ಇಂಗಿಸಲ್ಪಟ್ಟು ನೀರಿನ ಹನಿಗಳಾಗಿ ಮಾರ್ಪಡುತ್ತವೆ. ಗೂಡಿನಲ್ಲಿ ಇದೇ ರೀತಿ ನೀರು ಕೂಡಿಡಲ್ಪಟ್ಟು, ಬೇಕೆಂದಾಗ ಈ ನೀರನ್ನು ಕೊಳವೆ (Hose) ಮತ್ತು ಎತ್ತುಕದ(Pump) ಮೂಲಕ ಕೊಡ, ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಕುಡಿಯಲು ಬಳಕೆ ಮಾಡಬಹುದು. ಈ ಏರ್ಪಾಟಿನಲ್ಲಿ ಮಿಂಚಿನ ಕಸುವು(Electricity) ಬೇಕಿಲ್ಲ, ಇದನ್ನು ನೆಟ್ಟಜಾಗದಲ್ಲಿ ಯಾವಾಗಲೂ ಗಾಳಿ ಬೀಸುತ್ತಿರಬೇಕೆಂಬ ಅಗತ್ಯವೂ ಇಲ್ಲ. ಇರುಳಿನಲ್ಲೂ ಇದು ಕೆಲಸ ಮಾಡಬಲ್ಲುದು. ಈಗಾಗಲೇ ಇದರ ಮಾದರಿಯನ್ನು ತಯಾರಿಸಿ, ಮೊದಲ ಹಂತದ ಒರೆಹಚ್ಚುವ ಕೆಲಸಗಳು ಪೂರ್ಣಗೊಂಡಿವೆ. 9 ಅಡಿ ಆಳಕ್ಕೆ ನೆಡಲಾಗಿದ್ದ ಈ ಚಿಕ್ಕ ಎಣಿಯ ಮಾದರಿಯೊಂದು 11 ಗ್ಯಾಲನ್ ಅಂದರೆ ಸುಮಾರು 37 ಲೀಟರ್‌ಗಳಶ್ಟು ಹಸನಾದ ಕುಡಿಯುವ ನೀರನ್ನು ಒದಗಿಸಿದ್ದು, ವಿಜ್ಞಾನಿಗಳ ಕೆಲಸಕ್ಕೆ ಹುರುಪು ಹೆಚ್ಚಿಸಿದೆ.

ಯಾವುದೇ ರಾಸಾಯನಿಕ ವಸ್ತುಗಳು, ಕಲಬೆರಕೆ ಇಲ್ಲದ ನೀರನ್ನು ವಾಟರ್ ಸೀರ್ ಮೂಲಕ ಪಡೆದುಕೊಳ್ಳಬಹುದು. ವಾತಾವರಣ ಬೆಚ್ಚನೆಯ ಗಾಳಿ ಮತ್ತು ನೆಲದಡಿಯ ತಂಪು ವಾತಾವರಣಗಳ ನಡುವಿರುವ ಬಿಸುಪುಗಳ ಅಂತರವೇ ಈ ಕುಡಿಯಲು ತಕ್ಕುದಾದ ನೀರಿನ ಹನಿಗಳನ್ನು ಉಂಟುಮಾಡಲಿದೆ. ಇಂಗಿಸುವ ಗೂಡಿಗೆ ಸೋಸುಕ ಜೋಡಿಸಿರುವುದರಿಂದ ಯಾವುದೇ ತೆರನಾದ ಕಸ, ಧೂಳು, ನಂಜುಳುಗಳು ನೀರಿನಲ್ಲಿ ಸೇರಿಕೊಳ್ಳುವ ಸಾಧ್ಯತೆಯೇ ಇಲ್ಲವಂತೆ. ನೀರಿನ ಭಟ್ಟಿ ಇಳಿಸುವಿಕೆಯ ಮೂಲಕ ಚೊಕ್ಕಟಗೊಳಿಸಿ ಪಡೆದ ನೀರಿನಷ್ಟೇ, ವಾಟರ್ ಸೀರ್‌ನಿಂದ ಹೊರಬರುವ ನೀರು ಚೊಕ್ಕಟವಾಗಿರಲಿದೆಯಂತೆ.

ಈ ಮೊದಲು ಬಂದ ನೀರು ಹಸನಾಗಿಸುವ ಏರ್ಪಾಟುಗಳು ಹೆಚ್ಚಿನ ಮಿಂಚು ಪಡೆದೋ, ಇಲ್ಲವೇ ಇತರೆ ಕಸುವಿನ ಸೆಲೆ ಬಳಸಿ ನೀರನ್ನು ಹಸನಾಗಿಸುತ್ತಿದ್ದವು. ಆದರೆ ವಾಟರ್ ಸೀರ್ ಇಂತ ಯಾವುದೇ ಕಸುವಿನ ಸೆಲೆಗಳನ್ನು ಬಳಸದೇ, ಇತರೆ ಏರ್ಪಾಟುಗಳಿಗಿಂತ ಹೆಚ್ಚು ಅಳವುತನ(Efficiency) ಹೊಂದಿರಲಿದೆಯಂತೆ. ಬಿಸಿಲಿರುವ ಜಾಗ ಇಲ್ಲವೇ ವಾತಾವರಣಗಳಲ್ಲಿ ಅಡೆತಡೆಯಿಲ್ಲದೇ ಕೆಲಸ ಮಾಡುವ ವಾಟರ್ ಸೀರ್, ತಂಪು ಹೆಚ್ಚಿರುವ ಜಾಗಗಳಲ್ಲೂ ಅಡೆತಡೆಯಿಲ್ಲದೇ ಕೆಲಸ ಮಾಡುವಂತೆ ಅದಕ್ಕೆ ತಕ್ಕ ಮಾರ್ಪಾಟು ಮಾಡಲಾಗಿದೆ.

ಒಂದೇ ಜಾಗದಲ್ಲಿ ಹಲವು ವಾಟರ್ ಸೀರ್ ಎಣಿಗಳನ್ನು ನೆಟ್ಟು ಅವುಗಳ ಮೂಲಕ ಹೊರಬರುವ ನೀರನ್ನು ಒಟ್ಟಿಗೆ ಕೊಳವೊಂದರಲ್ಲಿ ಸೇರಿಸಿ ಚಿಕ್ಕ ಹಳ್ಳಿಗಳ ಮಂದಿಯ ನೀರಿನ ಬವಣೆ ನೀಗಿಸಬಹುದು. 134 ಅಮೇರಿಕನ್ ಡಾಲರ್‌ಗಳಷ್ಟು ಅಗ್ಗದ ಬೆಲೆಯ (ಸುಮಾರು 9200 ರೂಪಾಯಿಗಳು) ಈ ಎಣಿಯನ್ನು ನಡೆಸಿಕೊಂಡು ಹೋಗುವ ವೆಚ್ಚವೂ ಕಡಿಮೆ ಎಂದು ವಾಟರ್ ಸೀರ್ ಕೂಟ ಹೇಳಿಕೊಂಡಿದೆ. ಅಂದಹಾಗೆ ಈ ಹಮ್ಮುಗೆ ಮಂದಿ ದೇಣಿಗೆ (Crowd Funding) ಪಡೆದುಕೊಂಡು ತಯಾರಾಗುತ್ತಿದೆ. ಹಸನಾದ ಕುಡಿಯುವ ನೀರಿನ ಕೆಲಸಕ್ಕೆ ಫೇಸ್‌ಬುಕ್ ಮುಂತಾದ ಸಾಮಾಜಿಕ ಕೂಡತಾಣಗಳ ಮೂಲಕ ಪ್ರಚಾರ ನೀಡಿ ಮಂದಿ ದೇಣಿಗೆ ಪಡೆಯಲಾಗುತ್ತಿದೆ. ಆದಷ್ಟು ಬೇಗ ಇಂತಹ ಒಳ್ಳೆಯ ಕೆಲಸಗಳು ಕುಡಿಯುವ ನೀರು ಪಡೆಯಲು ಕಶ್ಟಪಡುತ್ತಿರುವ ಮಂದಿಯ ಬದುಕಿಗೆ ದಾರಿ ಮಾಡಿಕೊಡಲಿ.

 

ನೇಸರ ಕಸುವಿನ ಬಾನೋಡ(Solar Impulse)

ಜಯತೀರ್ಥ ನಾಡಗೌಡ.

ಇಂದಿನ ದಿನಗಳಲ್ಲಿ ನೇಸರ ಕಸುವಿನ ಹಲವಾರು ವಸ್ತುಗಳನ್ನು ನಾವು ಬಳಸುತ್ತಿದ್ದೇವೆ. ಅಳಿದು ಹೋಗದ ನೇಸರನ ಕಸುವು ನಮಗೆ ಸಾಕಷ್ಟು ನೆರವಿಗೆ ಬರುತ್ತಿದೆ. ಇದೀಗ ನೇಸರ ಕಸುವಿನ ಬಾನೋಡವೂ(Aircraft/Aeroplane) ಕೂಡ ಬರಲಿದೆ! ಆಗಸದಿ ಸಾಗುವ ಬಾನೋಡಗಳಿಗೂ ನೇಸರನ ಕಸುವು ನೆರವಿಗೆ ಬರಬಲ್ಲುದು ಎಂದರೆ ಬೆರಗುಗೊಳ್ಳುವ ವಿಷಯವೇ ಸರಿ.

 ಸ್ವಿಟ್ಜರ್ಲ್ಯಾಂಡ್‌ನ ನಾಡಿನ ಕೆಲವು ಅರಕೆಗಾರರು(Scientists) ಮತ್ತು ಬಿಣಿಗೆಯರಿಗರು(Engineers) ಸೇರಿ ಸೋಲಾರ್ ಇಂಪಲ್ಸ್(Solar Impulse) ಹೆಸರಿನ ನೇಸರ ಕಸುವಿನ ಬಾನೋಡದ ಮಾದರಿವೊಂದನ್ನು ಈ ಹಿಂದೆ(2009ರಲ್ಲಿ) ಅಣಿಗೊಳಿಸಿದ್ದರು. ಆದರೆ ಅದರ ಹಾರಾಟ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತು. ನಂತರ ಸೋಲಾರ್ ಇಂಪಲ್ಸ್-2 ಹೆಸರಿನ ಬಾನೋಡ ತಯಾರಿಸಿ ಜಗತ್ತಿನ ಸುತ್ತಾಟ ಮಾಡಿದ್ದಾರೆ. ಇದು ಜಗತ್ತಿನ ಹಲವು ದೇಶಗಳಲ್ಲಿ ಸುತ್ತಾಡಿ ಹಿಂದಿರುಗಿದೆ.

2015ರ ಜನವರಿ ಮೊದಲ ವಾರ ಸೋಲಾರ್ ಇಂಪಲ್ಸ್-2 (Solar Impulse-2) ಬಾನೋಡವನ್ನು ಅಬುಧಾಬಿಯತ್ತ ಸಾಗಿಸಲಾಗಿತ್ತು. ಅದೇ ಮಾರ್ಚ್‌ನಲ್ಲಿ ಅಬುಧಾಬಿ ಯಿಂದ ತನ್ನ ಪಯಣ ಶುರು ಮಾಡಿ ಈ ಬಾನೋಡ 2015ರ ಜುಲೈವರೆಗೆ 5 ತಿಂಗಳು ಜಗತ್ತನ್ನೆಲ್ಲ ಸುತ್ತಿ ಮತ್ತೆ ಅಬುಧಾಬಿಯನ್ನು ತಲುಪಿತ್ತು. ಆ 5 ತಿಂಗಳ ಹೊತ್ತು ಸೋಲಾರ ಇಂಪಲ್ಸ್ -2 ಹಗಲು, ರಾತ್ರಿ 24 ಗಂಟೆಗಳಲ್ಲೂ ಕೇವಲ ನೇಸರನ ಬಲದಿಂದ ಜಗತ್ತಿನ ಸುತ್ತೆಲ್ಲ ಹಾರಾಡಿತ್ತು.ಬೆಳಿಗ್ಗೆ ನೇಸರನ ಕಸುವನ್ನು ಲಿಥಿಯಂ-ಅಯಾನ್ ಮಿಂಕಟ್ಟಿನಲ್ಲಿ (Battery) ಕೂಡಿಟ್ಟು ರಾತ್ರಿ ಇದೇ ಕಸುವಿನ ಹೆಚ್ಚಿನ ಬಳಕೆ ಮಾಡಿಕೊಂಡು ಬಾನೋಡ ಹಾರಲು ನೆರವಾಗುವಂತೆ ಇದನ್ನು ಸಿದ್ದಗೊಳಿಸಲಾಗಿದೆ.

 ಈ ಮೊದಲು ಇದೇ ಬಾನೋಡದ ಮಾದರಿಯೊಂದನ್ನು ಸೋಲಾರ್ ಇಂಪಲ್ಸ್-1 ಹೆಸರಲ್ಲಿ 2009 ರಲ್ಲಿ ಹಾರಾಟಗೊಳಿಸಲಾಗಿತ್ತು. ಇದು ಯುರೋಪ್ ಖಂಡದ ಹಲವೆಡೆ ಹಾರಾಡಿ,ಮೊರ‍್ಯಾಕ್ಕೊವರೆಗೂ ಸತತ 26 ಗಂಟೆ ಪಯಣ ಮಾಡುವಲ್ಲಿ ಗೆಲುವು ಕಂಡಿತ್ತು. ಇದರ ಗೆಲುವಿನ ಬೆನ್ನಲ್ಲೇ ಇದೀಗ ಸೋಲಾರ್ ಇಂಪಲ್ಸ್-2 ಹಾರಾಟ ಎಲ್ಲರ ಗಮನ ತನ್ನತ್ತ ಸೆಳೆದಿತ್ತು.

 ಸೋಲಾರ್ ಇಂಪಲ್ಸ್ ಹಮ್ಮುಗೆ(Project) ಸ್ವಿಸ್ ನಾಡಿನ ಬೆರ್ತ್ರಾಂಡ್ ಪಿಕಾರ್ಡ್ (Bertrand Piccard) ಮತ್ತು ಅಂಡ್ರೆ ಬೊರ್ಶ್‌ಬರ್ಗ್ (Andre Borschberg) ಇವರ ಕನಸಿನ ಕೂಸು. ಪಿಕಾರ್ಡ್ ಈ ಹಿಂದೆ 1999 ರಲ್ಲಿ ಪ್ಯಾರಶೂಟ್ ಬಲೂನ್ ಮೂಲಕ ಜಗತ್ತನ್ನೇ ಸುತ್ತಿ ದಾಖಲೆ ಮಾಡಿದ ಸಾಹಸಿ. ಇವರ ತಂದೆ,ಅಜ್ಜ ಕೂಡ ಇಂತ ಸಾಹಸ ಕೆಲಸದಲ್ಲಿ ತೊಡಗಿದ್ದರಂತೆ. ಅದಕ್ಕೆ ಇರಬಹುದು ಇಂತಹವೊಂದು ಬಾನೋಡದ ಕೆಲಸಕ್ಕೆ ಪಿಕಾರ್ಡ್ ಕೈ ಹಾಕಿದ್ದು.  ಇನ್ನೂ ಅಂಡ್ರೆ,  ಸ್ವಿಸ್ ಏರ್‌ಫೋರ್ಸ್‌ನಲ್ಲಿ ಬಾನಾಡಿಗರಾಗಿ(Pilot) ಕೆಲಸ ಮಾಡುತ್ತಿದ್ದರು, ಕಾದಾಟದ ಬಾನೋಡ(Fighter planes), ಹೆಲಿಕಾಪ್ಟರ್ ಓಡಿಸಿದ ಸಾಕಷ್ಟು ಅನುಭವ ಅಂಡ್ರೆ ಅವರಿಗಿದೆ. 2009 ಕ್ಕಿಂತಲೂ ಮುಂಚಿನಿಂದಲೇ ಇವರಿಬ್ಬರು ಒಟ್ಟಾಗಿ ಈ ಹಮ್ಮುಗೆಯ ಕೆಲಸ ಕೈಗೊಂಡಿದ್ದರು. 

ಗಲ್ಫ್ ಕೊಲ್ಲಿ ನಾಡುಗಳಿಂದ ತನ್ನ ಪಯಣ ಆರಂಭಿಸಿದ್ದ ನೇಸರನ ಬಾನೋಡ ಅರಬ್ಬೀ ಕಡಲದ ಮೂಲಕ ಭಾರತ, ಮಯನ್ಮಾರ್, ಚೀನಾ ದಾಟಿ ಪೆಸಿಫಿಕ್ ಸಾಗರ ಹಾದು ಅಮೇರಿಕಾದತ್ತ ಸಾಗಿ ಅಟ್ಲಾಂಟಿಕ್ ಕಡಲದಿಂದ ತೆಂಕಣ ಯುರೋಪ್, ಬಡಗಣ ಆಫ್ರಿಕಾ ಹಾದು ಮತ್ತೆ ಅಬುಧಾಬಿಗೆ ಬಂದಿಳಿದಿತ್ತು. ಕೊಲ್ಲಿ ನಾಡುಗಳಲ್ಲಿ ವಾತಾವರಣ ಹದವಾಗಿದ್ದು ಮಾರ್ಚ್‌ನಲ್ಲಿ ಬಾನೋಡ ಹಾರಾಟಕ್ಕೆ ಅಬುಧಾಬಿ ತಕ್ಕುದಾಗಿದೆಯೆಂದು ಈ ತಾಣವನ್ನು ಆಯ್ದುಕೊಳ್ಳಲಾಗಿತ್ತಂತೆ.

 ಬಾನೋಡದ ಮಾಡುಗೆ (Design) ಮತ್ತು ಅದರ ವಿಶೇಷತೆಗಳತ್ತ ಒಂದು ನೋಟ ಬೀರಿದಾಗ, ಇದನ್ನು ಪೂರ್ತಿ ಕಾರ್ಬನ್ ನೂಲಿನಿಂದ ಮಾಡಲಾಗಿದ್ದು. ಏರ್ಬಸ್-380 (AirBus-380) ರಷ್ಟು ದೊಡ್ಡದಾದ ರೆಕ್ಕೆಗಳು ಈ ನೇಸರನ ಬಾನೋಡ ಹೊಂದಿರಲಿದೆ. ಸುಮಾರು 2.3 ಟನ್ ತೂಕದ ಬಾನೋಡಕ್ಕೆ , 17.5 ಕುದುರೆಬಲದ(hp) ಎರಡು ಮಿಂಚಿನ ಓಡುಗೆಗಳನ್ನು(Electric Motors) ಅಳವಡಿಸಲಾಗಿದೆ. ಒಟ್ಟು 17, 248 ನೇಸರನ ಗೂಡುಗಳನ್ನು(Solar Cells) ಹೊಂದಿರುವ ಈ ಬಾನಹಕ್ಕಿಗೆ 234 ಪೀಟ್ (ಸುಮಾರು 72 ಮೀಟರ್) ಉದ್ದದ ರೆಕ್ಕೆಗಳನ್ನು ಜೋಡಿಸಲಾಗಿದೆ.

 ಬಾನೋಡದ ಪ್ರಮುಕ ವಿಶೇಷತೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ತೂಕ -2.3 ಟನ್

ಮಿಂಚಿನ ಓಡುಗೆ ಬಲ(Electric Motor Power)- 2*17.5 ಕುದುರೆ ಬಲ

ರೆಕ್ಕೆಯ ಉದ್ದ – 72 ಮೀಟರ್

ಒಟ್ಟು ನೇಸರನ ಗೂಡುಗಳ ಸಂಖ್ಯೆ- 17248 (ಲಿಥಿಯಂ ಅಯಾನ್)

ನೇಸರನ ಗೂಡುಗಳ ದಪ್ಪ -35 ಮೈಕ್ರಾನ್ಸ್

ಒಬ್ಬ ಬಾನಾಡಿಗ ಕೂರಲು ಜಾಗದ ಏರ್ಪಾಟು

ಜಗತ್ತು ಸುತ್ತುವ ಹಾರಾಟ -ಮಾರ್ಚ್ 2015 ರಿಂದ ಜುಲೈ  2015, ಒಟ್ಟು 35000 ಕಿ.ಮೀ.ಗಳು

ಕಾಕ್ಪಿಟ್‌ನ ಗಾತ್ರ: 3.8 ಕ್ಯೂಬಿಕ್ ಮೀಟರ್ಗಳು

ಅಬುಧಾಬಿಯಿಂದ ಹೊರಟು ಒಮಾನ್ ದೇಶದ ಮಸ್ಕಟ್ ಹಾರಿ ಅಲ್ಲಿಂದ ಭಾರತದ ಅಹ್ಮದಾಬಾದ್, ವಾರಣಾಸಿ ಮೂಲಕ ಸಾಗಿ ಮಯನ್ಮಾರ್ ಚೀನಾದ ಚೊಂಗ್‌ಕ್ವಿಂಗ್ ಜಪಾನ್‌ನ ನಗೋಯಾ ಹಾದು ಹವಾಯಿ ದ್ವೀಪಗಳನ್ನು ತಲುಪಿ, ಅಲ್ಲಿಂದ ಮುಂದೆ ಅಮೇರಿಕಾದ ವಿವಿಧ ನಗರಗಳ ಮೂಲಕ ಸಾಗಿ ಈ ಬಾನೋಡ ಸ್ಪೇನ್ ಈಜಿಪ್ಟ್ ನಂತರ ಅಬುದಾಭಿ ತಲುಪಿತ್ತು. ಈ ಬಾನೋಡ ಮುಂಚೆ ನಿರ್ಧರಿಸಿದ್ದ 35,000 ಕಿ.ಮೀ.ಗಳ ಬದಲು ಒಟ್ಟು 42,000 ಕಿ.ಮೀ.ಗಳಿಗಿಂತ ಹೆಚ್ಚಿನ ಹಾರಾಟ ನಡೆಸಿತ್ತು. ಹವಾಮಾನದ ಅಡೆತಡೆಗಳು ಇದರ ಮಾರ್ಗ ಬದಲಾವಣೆಗೆ ಕಾರಣವಾಗಿದ್ದವು.

ನೇಸರನ ಕಸುವು ಪಡೆದು ಲಿಥಿಯಂ-ಅಯಾನ್ ಬ್ಯಾಟರಿಗಳ ಮೂಲಕ ಹಾರಾಟ ಮಾಡಿದ ಮೊದಲ ಬಾನೋಡವಾಗಿ ಸೋಲಾರ್ ಇಂಪಲ್ಸ್ ದೊಡ್ಡ ದಾಖಲೆ ಮಾಡಿತ್ತು. ಇದು ಮುಂದೆ ಬ್ಯಾಟರಿ ಆಧಾರಿತ ಬಾನೋಡಗಳ ವಾಣಿಜ್ಯ ಹಾರಾಟ ಮಾಡಲಿಕ್ಕೆ ನಾಂದಿ ಹಾಡಲಿದೆ ಎನ್ನಲಾಗಿತ್ತು. 2019ರಲ್ಲಿ ಈ ಸೋಲಾರ್ ಇಂಪಲ್ಸ್ ಕಂಪನಿ, ಸ್ಕೈಡ್ವೆಲ್ಲರ್ಸ್(Sky Dwellers) ಎಂಬ ಕಂಪನಿ ಮಾರಾಟ ಮಾಡಲಾಗಿದೆ. ಇದೀಗ ಸಾಕಷ್ಟು ಸಂಶೋಧನೆ ನಡೆಸಿರುವ ಸ್ಕೈಡ್ವೆಲ್ಲರ್ಸ್ ಅರಕೆಗಾರರು, ಇದೇ ವರ್ಷದಲ್ಲಿ(2024) ವಾಣಿಜ್ಯ ಹಾರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ಪ್ರಯೋಗ: ಆಲೂಗಡ್ಡೆ ಬಳಸಿ ಬೆಳಕು!

ಜಯತೀರ್ಥ ನಾಡಗೌಡ.

ಮಕ್ಕಳಿಗೆ ಅರಿಮೆ ಬಗ್ಗೆ ಆಸಕ್ತಿ ಹುಟ್ಟಿಸಲು ಚಿಕ್ಕ ಪುಟ್ಟ ಪ್ರಯೋಗ(experiment) ಮಾಡಿ ತೋರಿಸಿ, ಅವರ ತಿಳುವಳಿಕೆ ಹೆಚ್ಚಿಸಬಹುದು. ದಿನ ನಿತ್ಯ ಊಟ-ತಿಂಡಿಗಳಲ್ಲಿ ಬಳಸುವ ಆಲೂಗಡ್ಡೆ ಮೂಲಕ ಬಲ್ಬ್ ಉರಿಸಿ ಪುಟಾಣಿಗಳಿಗೆ ಮುದ ನೀಡುವುದಲ್ಲದೇ ಕಲಿಕೆಯನ್ನು ಹಗುರವಾಗಿಸಬಹುದು. ಆಲೂಗಡ್ಡೆ ಬಳಸಿ ಬೆಳಕು ಉಂಟುಮಾಡುವ ಪ್ರಯೋಗದ ಬಗ್ಗೆ ತಿಳಿಯೋಣ ಬನ್ನಿ.

ಎರಡು ಬೇರೆ ತರಹದ ಲೋಹಗಳು (dissimilar metals) ಮತ್ತು ಆಲೂಗಡ್ಡೆಯ ತಿಳಿರಸದ ನಡುವಿನ ರಾಸಾಯನಿಕ ಕ್ರಿಯೆಯ ಮೂಲಕ ಚಿಕ್ಕದಾದ ವೋಲ್ಟೇಜ್ ಉಂಟು ಮಾಡಬಹುದು. ಇದಕ್ಕೆ ಬೇಕಾಗುವ ವಸ್ತುಗಳು ಇಂತಿವೆ,

1. ಒಂದು ದೊಡ್ಡ ಆಲೂಗಡ್ಡೆ
2. ಎರಡು ನಾಣ್ಯಗಳು
3. ಸತುವು ಬಳಿದ ಎರಡು ಮೊಳೆಗಳು (zinc-plated nails)
4. ಮೂರು ತಾಮ್ರದ ತಂತಿಗಳು
5. ಒಂದು ಚಿಕ್ಕ ಪುಟಾಣಿ ಬಲ್ಬ್

ಬೆಳಕು ಮೂಡಿಸುವ ಬಗೆ:
ಆಲೂಗಡ್ಡೆಯನ್ನು ಎರಡು ಹೋಳಾಗಿಸಿಕೊಳ್ಳಬೇಕು. ಈ ಎರಡು ಹೋಳುಗಳಲ್ಲಿ ನಾಣ್ಯಗಳು ತೋರಿಕೊಂಡು ಹೋಗುವಂತಿರಬೇಕು. ತಾಮ್ರದ ಎರಡು ತಂತಿಗಳನ್ನು ತೆಗೆದುಕೊಂಡು ಈ ನಾಣ್ಯಗಳತ್ತ ಚೆನ್ನಾಗಿ ಸುತ್ತಬೇಕು. ಈ ನಾಣ್ಯಗಳನ್ನು ಈಗ ಆಲೂಗಡ್ಡೆಯ ಎರಡು ಹೋಳುಗಳಲ್ಲಿ ಬೇರೆ ಬೇರೆಯಾಗಿ ಸಿಕ್ಕಿಸಿ. ಮೂರನೇಯ ತಾಮ್ರದ ತಂತಿಯನ್ನು ಸತುವು ಬಳಿದ ಮೊಳೆಯೊಂದರ ಸುತ್ತಲೂ ಸುತ್ತಿ. ಈ ತೆರನಾಗಿ ಸುತ್ತಿದ ಮೊಳೆಯನ್ನು ಯಾವುದಾದರೂ ಆಲೂಗಡ್ಡೆಯ ಹೋಳುಗಳಲ್ಲಿ ಸಿಕ್ಕಿಸಿ.

ಮೊದಲನೇಯ ಆಲೂಗಡ್ಡೆ ಹೋಳಿನಲ್ಲಿರುವ ನಾಣ್ಯಕ್ಕೆ ಸುತ್ತಿರುವ ತಂತಿಯನ್ನು ಸ್ವಲ್ಪ ಎಳೆದು ಇನ್ನೊಂದು ಮೊಳೆಗೂ ಸುತ್ತಿ, ಅದನ್ನು ಅಲ್ಲಿಯೇ ಉಳಿದ ಅರ್ಧ ಆಲೂಗಡ್ಡೆ ಹೋಳಿಗೆ ಸಿಕ್ಕಿಸಬೇಕು. ಈ ರೀತಿ ಎರಡು ಮೊಳೆಗಳ ಸುತ್ತಿ ಉಳಿದಿರುವ ತಂತಿಯ ಬದಿಯ ನಡುವೆ ಚಿಕ್ಕ ಬಲ್ಬೊಂದನ್ನು ಜೋಡಿಸಿದರೆ ಬಲ್ಬ್ ಹೊತ್ತಿಕೊಂಡು ಉರಿಯುತ್ತದೆ. ಇದರಿಂದ ಉಂಟಾಗುವ ಮಿಂಚು (current) ಚಿಕ್ಕ ಪ್ರಮಾಣದ್ದು ಮಾತ್ರ.

ಈ ಪ್ರಯೋಗದ ಹಿಂದಿರುವ ಅರಿಮೆ:
ಇಲ್ಲಿ ಮಿನ್ನೊಡೆಯುವಿಕೆ (electrolysis) ಮೂಲಕವೇ ಮಿಂಚು ಹರಿದು ಬಲ್ಬ್ ಉರಿಯುವಂತೆ ಮಾಡುತ್ತದೆ. ಸತುವಿನ ಮೊಳೆಗಳು ಆನೋಡ್ ನಂತೆ(anode) ಕೆಲಸಮಾಡಿ ಕಳೆವಣಿಗಳಾಗಿ (electrons) ಬೇರ್ಪಟ್ಟರೆ, ನಾಣ್ಯಕ್ಕೆ ಸುತ್ತಿದ ತಾಮ್ರದ ತಂತಿಗಳು ಕ್ಯಾಥೋಡ್ ನಂತೆ(cathode) ಕೆಲಸಮಾಡಿ ಮಿಂಚು ಹರಿಯಲು ನೆರವಾಗುತ್ತವೆ. ಆಲೂಗಡ್ಡೆಯಲ್ಲಿರುವ ಫಾಸ್ಪರಿಕ್ ಹುಳಿ (phosphoric acid) ಇಲ್ಲಿ ಮಿಂಚೋಡುಕನಾಗಿ (electrolyte) ರಾಸಾಯನಿಕ ಕ್ರಿಯೆಯನ್ನು ಪೂರ್ತಿಗೊಳಿಸುತ್ತದೆ.

ನೆನಪಿರಲಿ: ತಾಮ್ರದ ತಂತಿಗಳನ್ನು ಮಕ್ಕಳು ಮುಟ್ಟದಂತೆ ಎಚ್ಚರವಹಿಸಿ,ಇದರಲ್ಲಿ ಕಡಿಮೆ ಪ್ರಮಾಣದ ಮಿಂಚು ಹರಿದರೂ ಚಿಕ್ಕದಾದ ಶಾಕ್ ನೀಡಬಲ್ಲುದು. ಈ ಪ್ರಯೋಗದ ಮೂಲಕ ಹೈಡ್ರೋಜನ್ ಗಾಳಿಯು ಬಿಡುಗಡೆಗೊಳ್ಳುತ್ತದೆ, ಆದ್ದರಿಂದ, ತುಂಬಾ ಬಿಸಿಯಾದ ಹಾಗೂ ಬೆಂಕಿಯಿಂದ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳನ್ನು ಸುತ್ತ-ಮುತ್ತಲೂ ಬಳಸದೇ ಇದ್ದರೆ ಲೇಸು.

ವಿಜ್ಞಾನದಲ್ಲಿ ಒಲವು ಮೂಡಿಸುವುದು ಹೇಗೆ? – ಒಂದು ಅನುಭವ

– ಪ್ರಶಾಂತ ಸೊರಟೂರ.

ವಿಜ್ಞಾನದ ಉಪಯೋಗಗಳನ್ನು ನಾವು ಪ್ರತಿದಿನ ಪಡೆಯುತ್ತಿದ್ದರೂ, ವಿಜ್ಞಾನ ಹೊಮ್ಮಿಸಿದ ತಂತ್ರಜ್ಞಾನಗಳ ಬಳಕೆಯಿಲ್ಲದೇ ಇಂದು ಬದುಕು ಕಷ್ಟ ಅಂತಾ ಅನುಭವಕ್ಕೆ ಬಂದರೂ, ಅದರ ಕಲಿಕೆಯಲ್ಲಿ ನಾವು ಇನ್ನೂ ಹಿಂದೇಟು ಹಾಕುತ್ತೇವೆ. ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವೆಂದರೆ ಕಬ್ಬಿಣದ ಕಡಲೆಯೇ ಸರಿ! “ಅದ್ಯಾಕೇ ಈ ವಿಷಯಗಳು ಇವೆ?” ಅಂತಾ ಹಲವು ಮಕ್ಕಳಿಗೆ ಅನ್ನಿಸುತ್ತಿರುವುದನ್ನು ಕಾಣಬಹುದು. ಪದವಿಯ ಹಂತಕ್ಕೆ ಹೋಗುವ ವಿದ್ಯಾರ್ಥಿಗಳೂ ಕೂಡ ಕಾಟಾಚಾರಕ್ಕೆ ಇಲ್ಲವೇ ತಂತ್ರಜ್ಞಾನ ಕಲಿಕೆಯಿಲ್ಲದೆ ಉದ್ಯೋಗ ಸಿಗುವುದಿಲ್ಲ ಅನ್ನುವ ಕಾರಣಕ್ಕಾಗಿಯೇ ಕಲಿಯುತ್ತಾರೆ ಹೊರತು ನಿಜವಾಗಿ ಅದರಲ್ಲಿ ಆಸಕ್ತಿ ಇಟ್ಟುಕೊಂಡು ಕಲಿಯುವುದು ತುಂಬಾ ಕಡಿಮೆ.

“ವಿಜ್ಞಾನದಲ್ಲಿ ಯಾಕೆ ಮಕ್ಕಳಿಗೆ ಅಷ್ಟು ಆಸಕ್ತಿ ಹುಟ್ಟುವುದಿಲ್ಲ” ಅನ್ನುವುದಕ್ಕೆ ಹಲವು ಕಾರಣಗಳಿರಬಹುದು. ಈ ನಿಟ್ಟಿನಲ್ಲಿ ಹಲವಾರು ಶಾಲೆಯ ಮಕ್ಕಳೊಂದಿಗೆ ಒಡನಾಡಿದಾಗ ನನಗಾದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ, ಕನ್ನಡಿಗರ ಏಳಿಗೆಗೆ ಸಂಬಂಧಿಸಿದ ಪುಸ್ತಕಗಳಿಗೆ ಮೀಸಲಾದ ಮಳಿಗೆಯಾಗಿದ್ದು, ಅದರ ಜತೆಗೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಭೇಟಿಕೊಟ್ಟು ದಾನಿಗಳ ನೆರವಿನಿಂದ ಮಕ್ಕಳಿಗೆ ವಿಜ್ಞಾನದ ಪುಸ್ತಕಗಳನ್ನು ಹಂಚುವ ಕೆಲಸವನ್ನು ಮಾಡುತ್ತಿದೆ. ಕನ್ನಡದಲ್ಲಿ ವಿಜ್ಞಾನದ ಬರಹಗಳನ್ನು ಮೂಡಿಸುತ್ತಿರುವ ನಮ್ಮ ಅರಿಮೆ ತಂಡ, ಮುನ್ನೋಟ ತಂಡದೊಂದಿಗೆ ಸೇರಿ ಹಲವು ಶಾಲೆಗಳಿಗೆ ಭೇಟಿಕೊಟ್ಟಾಗ ಆಗಿರುವ ಅನುಭವದ, ಚರ್ಚೆಯ ಸಾರಾಂಶವನ್ನು ಇಲ್ಲಿ ಬರೆದಿರುವೆ.

FB_IMG_1530981351900

ಶಾಲೆಯ ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಮಾತನಾಡಲು ಶುರು ಮಾಡಿದಾಗ “ಯಾರಿಗೆ ವಿಜ್ಞಾನ ಇಷ್ಟ?” ಅನ್ನುವ ಪ್ರಶ್ನೆ ಕೇಳಿದಾಗ ಹೆಚ್ಚು ಕಡಿಮೆ ಎಲ್ಲ ಮಕ್ಕಳೂ “ನನಗಿಷ್ಟ” ಅನ್ನುತ್ತಾರೆ. “ಇಷ್ಟ ಇಲ್ಲ” ಅಂದರೆ ಶಿಕ್ಷಕರು ಬಯ್ಯಬಹುದು ಇಲ್ಲವೇ ಗುಂಪಿನಲ್ಲಿ ಎಲ್ಲರೂ “ಇಷ್ಟ” ಅನ್ನುತ್ತಿದ್ದಾರೆ ನಾನು ಹೇಗೆ “ಇಲ್ಲ” ಅನ್ನಲಿ ಅನ್ನುವ ಅಳುಕು ಮಕ್ಕಳಲ್ಲಿ ಇರುವುದು ಗಮನಕ್ಕೆ ಬಂದಿತು. ಮುಂದಿನ ಪ್ರಶ್ನೆಯಾಗಿ “ವಿಜ್ಞಾನ ಯಾಕೆ ಇಷ್ಟ?” ಅಂತಾ ಕೇಳಿದಾಗ, ಹೆಚ್ಚಿನ ಮಕ್ಕಳು “ಅದರಲ್ಲಿ ಪ್ರಯೋಗಗಳಿರುತ್ತವೆ ಅದಕ್ಕೆ ಇಷ್ಟ” ಎಂದು ಹೇಳುತ್ತಾರೆ.

ಮುಂದುವರೆಯುತ್ತಾ, “ಹಾಗಾದರೆ ವಿಜ್ಞಾನ ಅಂದರೇನು? ಯಾಕೆ ಅದನ್ನು ಕಲಿಯಬೇಕು?” ಅಂತಾ ಕೇಳಿದಾಗ ಹೆಚ್ಚಿನ ಮಕ್ಕಳು ನಿಜವಾಗಿ ಅವಕ್ಕಾಗಿ ಉತ್ತರಕ್ಕೆ ತಡಕಾಡುತ್ತಿರುವುದನ್ನು ಕಂಡೆ. ಕೆಲವು ಮಕ್ಕಳು ಈ ಪ್ರಶ್ನೆಗೆ ಉತ್ತರವಾಗಿ ಜೀವಕೋಶಗಳು, ಪರಿಸರ ಮುಂತಾದ ಪಠ್ಯಪುಸ್ತಗಳಲ್ಲಿರುವ ಪಾಠದ ಹೆಸರಗಳನ್ನು ಹೇಳಿದರು. ಕೆಲವೇ ಕೆಲವು ಮಕ್ಕಳು “ವಿಜ್ಞಾನ ಕಲಿತರೆ ನಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು” ಅನ್ನುವಂತಹ ಉತ್ತರಗಳನ್ನು ನೀಡಿದರು.

ಈ ಮೇಲಿನ ಪ್ರಶ್ನೋತ್ತರಗಳಿಂದ ಕಂಡುಬಂದಿದ್ದೇನೆಂದರೆ,

  • ಹೆಚ್ಚಿನ ಮಕ್ಕಳಿಗೆ “ವಿಜ್ಞಾನ” ಎಂಬುದು ಒಂದು “ಪಠ್ಯಪುಸ್ತಕದ ವಿಷಯ” ಅಷ್ಟೆ.
  • ಪ್ರಯೋಗಗಳ (ಅಂದರೆ ಮಾಡಿನೋಡುವುದರ) ಮೂಲಕ ಹೇಳಿದರೆ ವಿಜ್ಞಾನ ಕಲಿಯುವುದು ಮಕ್ಕಳಿಗೆ ಇಷ್ಟ.

ಮಾತುಕತೆಯ ಮುಂದಿನ ಅಂಗವಾಗಿ ಅವರಿಗೆ ವಿಜ್ಞಾನಿಗಳ ಬದುಕನ್ನು ಚಿಕ್ಕ ಕತೆಗಳ ರೂಪದಲ್ಲಿ ಹೇಳಿದೆ.

  • ಗೆಲಿಲಿಯೋ ಮೊದಲ ಬಾರಿಗೆ ಭೂಮಿಯ ಸುತ್ತ ಗ್ರಹಗಳು ಮತ್ತು ಸೂರ್ಯ ಸುತ್ತುವುದಿಲ್ಲ ಬದಲಾಗಿ ಸೂರ್ಯ ನಡುವಿನಲ್ಲಿದ್ದು ಭೂಮಿ ಸೇರಿದಂತೆ ಉಳಿದ ಗ್ರಹಗಳು ಆತನ ಸುತ್ತ ಸುತ್ತುತ್ತವೆ ಅಂತಾ ಹೇಳಿದ್ದು ಮತ್ತು ಅದಕ್ಕೆ ಸಮಾಜ ಅವರನ್ನು ಹೀಯಾಳಿಸಿದ್ದರ ಬಗ್ಗೆ ಮತ್ತು ಹೀಯಾಳಿಕೆಗೆ ಎದೆಗುಂದದೆ ಗೆಲಿಲಿಯೋ ಮುನ್ನಡೆದುದರ ಕುರಿತಾಗಿಯೂ ಹೇಳಿದೆ.
  • ಅಲೆಕ್ಸಾಂಡರ್ ಗ್ರಾಹಂ ಬೆಲ್ ಅವರು ತಮ್ಮ ತಾಯಿಯ ಕಿವುಡುತನದಿಂದ ನೊಂದು ಸುಮ್ಮನಾಗಿರದೇ ಶಬ್ದ ಮತ್ತು ಅದರ ಸಾಗಾವಿಕೆಯ ಬಗ್ಗೆ ಅಧ್ಯಯನ ನಡೆಸಿದರು. ಇದೇ ಮುಂದೆ ಅವರು ಟೆಲಿಫೋನ್ ಕಂಡುಹಿಡಿಯಲು ಅಡಿಪಾಯವಾಗಿದ್ದರ ಕುರಿತು ತಿಳಿಸಿದೆ.
  • ಶ್ರೀನಿವಾಸ ರಾಮಾನುಜನ್ ತುಂಬಾ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡರೂ, ಅವರು ಗಣಿತದಲ್ಲಿ ಮಾಡಿದ ಮೇರುಮಟ್ಟದ ಕೆಲಸದ ಬಗ್ಗೆ ಹೇಳಿದೆ.
  • ವಿಶ್ವೇಶ್ವರಯ್ಯನವರು ಜೋಗದಿಂದ ದುಮ್ಮಿಕ್ಕುವ ನೀರು ಕಂಡು ಬೇರೆಯವರಂತೆ ಬರೀ ಮುದಗೊಳ್ಳದೇ ಅದರಲ್ಲಿ ಅಡಗಿರುವ ಶಕ್ತಿಯ ಬಳಕೆಯ ಬಗ್ಗೆ ಮುಂದಾಗಿದ್ದರ ಕುರಿತು ಹೇಳಿದೆ.

ಕತೆಯ ಜತೆಗೆ ಆಯಾ ವಿಜ್ಞಾನಿಗಳ ಚಿತ್ರ ಗುರುತಿಸಲು ಇಲ್ಲವೇ ಅವರು ಮಾಡಿದ ಕೆಲಸದ ಬಗ್ಗೆ ಪ್ರಶ್ನೆ ಕೇಳಿ ಅದಕ್ಕೆ ಸರಿಯಾಗಿ ಉತ್ತರಿಸಿದ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಿದೆ. ಕತೆ ಮತ್ತು ಬಹುಮಾನ ಮಕ್ಕಳಿಗೆ ಇಷ್ಟವಾದವು ಅನ್ನಿಸಿತು. ವಿಜ್ಞಾನಿಗಳು ತಮ್ಮ ಜೀವನದುದ್ದಕ್ಕೂ ಹಲವು ಕಷ್ಟಗಳನ್ನು ಎದುರಿಸಿದರೂ ಹೇಗೆ ಸಾಧನೆ ಮಾಡಿದರು ಅನ್ನುವುದನ್ನು ಮನವರಿಕೆ ಮಾಡುವ ಉದ್ದೇಶದಿಂದ ಮಾತುಕತೆಯಲ್ಲಿ ಈ ಮೇಲಿನ ಬಗೆ ಅಳವಡಿಸಿಕೊಂಡೆ.

ಮುಂದುವರೆಯುತ್ತಾ, ಕಣ್ಕಟ್ಟಿನ ಮಾದರಿಗಳಲ್ಲಿ ಒಂದಾದ “ತಿರುಗುವ ಹಾವುಗಳು” (Rotating Snakes) ಚಿತ್ರವನ್ನು ಮಕ್ಕಳಿಗೆ ತೋರಿಸಿದಾಗ, ಚಿತ್ರಗಳು ತಿರುಗುತ್ತಿರುವಂತೆ ಕಾಣುವುದು ಆದರೆ ನಿಜವಾಗಿ ಅವು ತಿರುಗದೇ ನಮ್ಮ ಮಿದುಳಿಗೆ ಉಂಟಾಗುವ “ಅನಿಸಿಕೆ” ಎಂದು ತಿಳಿಸಿದೆ. ಹಾಗೆನೇ ವಿಜ್ಞಾನ ಕೂಡ ಬರೀ ಕಣ್ಣಿಗೆ ಕಾಣುವುದನ್ನು ನಿಜವೆಂದು ಬಗೆಯದೇ ವಿಷಯದ ಆಳಕ್ಕೆ ಇಳಿಯಲು ನೆರವಾಗುತ್ತದೆ ಎಂದು ಕೊಂಡಿ ಬೆಸೆಯಲು ಪ್ರಯತ್ನಿಸಿದೆ.

Rotating Sankes

ಲಕ್ಷಗಟ್ಟಲೇ ವರುಷಗಳಿಂದ ಮನುಷ್ಯ ಹಂತ ಹಂತವಾಗಿ ಹೇಗೆ ತನ್ನ ಅರಿವನ್ನು ಹಿಗ್ಗಿಸಿಕೊಳ್ಳುತ್ತಾ ಬಂದಿದ್ದಾನೆ ಎನ್ನುವುದನ್ನು ಕೆಳಗಿನ ಚಿತ್ರದ ಮೂಲಕ ಚರ್ಚಿಸಿದೆ. ಸುತ್ತಣವನ್ನು ಅರಿಯದೇ ಹಾಗೆಯೇ ಇದ್ದು ಬಿಟ್ಟಿದ್ದರೆ ಮನುಷ್ಯ ಕೂಡ ಇತರೆ ಪ್ರಾಣಿಗಳಂತೆ ಆಗಿ ಬಿಡುತ್ತಿದ್ದ. ಚಿಕ್ಕ-ಚಿಕ್ಕದಾಗಿ ಎಡೆಬಿಡದೇ ಇಟ್ಟ ಕಲಿಕೆಯ ಹೆಜ್ಜೆಗಳು ಇಂದು ನಮ್ಮ ನೆರವಿಗೆ ಬಂದಿವೆ. ಹಾಗಾಗಿ ವಿಜ್ಞಾನದಲ್ಲಿ ಪ್ರತಿಯೊಬ್ಬರ ಯೋಚನೆ, ತೊಡಗುವಿಕೆ ಮನುಕುಲಕ್ಕೆ ಬೇಕಾಗಿದೆಯೆಂದೆ. (ಮಕ್ಕಳೆಡೆಗೆ ಕೈ ತೋರಿಸುತ್ತಾ)

Evolution_Science

ಮಕ್ಕಳನ್ನು ಮಾತುಕತೆಯಲ್ಲಿ ಇನ್ನಷ್ಟು ತೊಡಗಿಸಲು ಮತ್ತು ನಿಜವಾಗಿ ವಿಜ್ಞಾನ ಎಂದರೇನು ಅಂತಾ ಮನವರಿಕೆ ಮಾಡಲು ಏನು? ಏಕೆ? ಹೇಗೆ?” ಅನ್ನುವ ಚಟುವಟಿಕೆಯೊಂದನ್ನು ರೂಪಿಸಿದೆ. ಮಕ್ಕಳಿಗೆ ಇಷ್ಟವಾಗುವಂತೆ ಮಲ್ಲಿಗೆ, ಸಂಪಿಗೆ, ಗುಲಾಬಿ, ತಾವರೆ ಎಂಬ ಹೆಸರು ಆಯ್ದುಕೊಂಡು ಮೂರು-ನಾಲ್ಕು ತಂಡಗಳನ್ನು ಮಾಡಿದೆ.

FB_IMG_1530981332618

ಈ ಚಟುವಟಿಕೆಯಲ್ಲಿ ಪ್ರತಿಯೊಂದು ತಂಡ ಮೂರು ಪ್ರಶ್ನೆಗಳನ್ನು ಕೇಳಬೇಕು. ಆ ಪ್ರಶ್ನೆಗಳು ಹೇಗಿರಬೇಕೆಂದರೆ,

– ಸುತ್ತಮುತ್ತ ಕಾಣುವ ಏನೇ ಕುತೂಹಲ, ಅಚ್ಚರಿಗಳನ್ನು ಹುಟ್ಟಿಸಿದ ಪ್ರಶ್ನೆಗಳಾಗಿರಬೇಕು.

– ಕೇಳುವ ಪ್ರಶ್ನೆಗಳು ಅವರ ಅನುಭವಗಳಾಗಿರಬೇಕು ಹೊರತು ಪಠ್ಯಪುಸ್ತಕಗಳಿಂದ ಎತ್ತುಕೊಂಡಿದ್ದು ಆಗಿರಬಾರದು.

– ಕೇಳುವ ಪ್ರಶ್ನೆಗಳಿಗೆ ಉತ್ತರ ಗೊತ್ತಿರಬೇಕಂತಿಲ್ಲ, ಬರೀ ಚಂದದ ಪ್ರಶ್ನೆಗಳನ್ನು ಕೇಳಿದರೆ ಸಾಕು.

ಪ್ರಶ್ನೆಗಳನ್ನು ಕಲೆಹಾಕಲು 10 ನಿಮಿಷಗಳ ಸಮಯ ಗೊತ್ತುಪಡಿಸಿದೆ.

ಚಟುವಟಿಕೆ ಶುರು ಮಾಡುತ್ತಿರುವಂತೆ ಕೆಲವು ಮಕ್ಕಳು ಗುನುಗುಟ್ಟುತ್ತಾ ಕುಳಿತರು ಇನ್ನು ಕೆಲವು ಮಕ್ಕಳು ಬೇರೆಯ ಮಕ್ಕಳೊಂದಿಗೆ ಬೆರೆಯದೇ ಒಬ್ಬಂಟಿಯಾಗಿ ಕುಳಿತುಕೊಂಡಿದ್ದರು. ಚಟುವಟಿಕೆಯ ಬಗ್ಗೆ ಇನ್ನಷ್ಟು ತಿಳಿಸಲು,

“ನೋಡಿ ಮಕ್ಕಳೇ ಪ್ರತಿದಿನ ಬೆಳಿಗ್ಗೆ ಎದ್ದಾಗಿನಿಂದ ತಿಂಡಿ ತಿಂದು, ಶಾಲೆಗೆ ಬಂದು ಪಾಠ ಓದಿ, ಊಟ ಮಾಡಿ, ಆಟವಾಡಿ, ಸಂಜೆ ಮನೆಗೆಲಸ ಮಾಡಿ, ರಾತ್ರಿ ಊಟ ಮಾಡಿ ಮಲಗುವವರೆಗೂ ಹಲವಾರು ವಿಷಯಗಳು ನಿಮಗೆ ಕಂಡಿರುತ್ತವೆ. ಕೆಲವು ವಿಷಯಗಳನ್ನು ನಿಮ್ಮನ್ನು ಕುತೂಹಲಕ್ಕೆ ಈಡು ಮಾಡಿರಬಹುದು. ಉದಾ: ನಾವೇಕೆ ನಿದ್ದೆ ಮಾಡುತ್ತೇವೆ? ಎಲೆಗಳು ಹಸಿರಾಗೇಕೆ ಇರುತ್ತವೆ? ಮಣ್ಣು ಹೇಗೆ ಉಂಟಾಯಿತು? ನೀರಡಿಕೆ ಏಕೆ ಆಗುತ್ತದೆ? ಮುಂತಾದ ಕುತೂಹಲದ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿರಬಹುದು. ಅಂತಹ ಪ್ರಶ್ನೆಗಳನ್ನು ಕೇಳುವುದೇ ಇಂದಿನ ಆಟ. ಹಾಗಾಗಿ ಪಠ್ಯಪುಸ್ತಕಗಳನ್ನು ಪಕ್ಕಕ್ಕಿಟ್ಟು ನಿಮ್ಮ ಸುತ್ತಮುತ್ತಲಿನಲ್ಲಿ ಕಂಡುಬಂದ ಅಚ್ಚರಿಯ ವಿಷಯಗಳ ಬಗ್ಗೆ ಗಮನಿಸಿ”

ಅಂದಾಗ, ಮಕ್ಕಳು ಒಗ್ಗೂಡಿ ಪ್ರಶ್ನೆಗಳನ್ನು ಕಲೆಹಾಕಲು ಮುಂದಾದರು. “ಪಠ್ಯಪುಸ್ತಕದಾಚೆಗೆ, ಎಷ್ಟೇ ಚಿಕ್ಕದಾದ, ಸುಲಭವೆನಿಸುವ ಪ್ರಶ್ನೆಗಳನ್ನು ಕೇಳಬಹುದು” ಅಂದಾಗ ಅವರಲ್ಲಿ ಹುರುಪು ಹೆಚ್ಚಿದ್ದನ್ನು ಗಮನಿಸಿದೆ. ಪ್ರತಿಯೊಂದು ತಂಡದ ಪರವಾಗಿ ಯಾರಾದರೂ ಒಬ್ಬರು ಪ್ರಶ್ನೆ ಕಲೆಹಾಕಿ, ಕೇಳಲು ಹೇಳಿದೆ.

ಪ್ರಶ್ನೆ ಕಲೆಹಾಕುವಾಗ ಹೆಚ್ಚಿನ ಮಕ್ಕಳು ಆ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕಂಡಿತು. ಗೊತ್ತುಪಡಿಸಿದ ಹೊತ್ತು ಮುಗಿಯುತ್ತಿದ್ದಂತೆ ಹಲವು ಮಕ್ಕಳು ಕೈ ಎತ್ತಿ, “ನಾನು ಕೇಳುತ್ತೇನೆ…ನಾನು ಕೇಳುತ್ತೇನೆ” ಅಂತಾ ಮುಂದಾದರು.

IMG-20180804-WA0002

ಮಕ್ಕಳು ಕೇಳಿದ ಮೊದಲ ಕೆಲವು ಪ್ರಶ್ನೆಗಳು ಮತ್ತೇ ಪಠ್ಯಪುಸ್ತಕಗಳಿಂದ ಆಯ್ದುಕೊಂಡಿದ್ದು ಆಗಿದ್ದವು. (ಉದಾ: ಜೀವಕೋಶದಲ್ಲಿ ಮೈಟೋಕಾಂಡ್ರಿಯಾದ ಕೆಲಸವೇನು?) ಆದರೆ ಚಟುವಟಿಕೆ ಮುಂದುವರೆದಂತೆ ಅವರಿಗೆ ಇನ್ನಷ್ಟು ಒಳ್ಳೊಳ್ಳೆ ಪ್ರಶ್ನೆಗಳು ಬರಲು ತೊಡಗಿದವು. ಮಕ್ಕಳು ಕೇಳಿದ ಕೆಲವು ಪ್ರಶ್ನೆಗಳನ್ನು ಕೆಳಗೆ ಕೊಟ್ಟಿರುವೆ,

  • ನಾವು ಆಕಳಿಸಿದಾಗ ಕಣ್ಣೀರು ಏಕೆ ಬರುತ್ತದೆ?!
  • ಮನುಷ್ಯ ಸತ್ತ ಕೆಲವು ಗಂಟೆಗಳಲ್ಲಿ ವಾಸನೆ ಏಕೆ ಬರುತ್ತದೆ?! [ಈ ಪ್ರಶ್ನೆ ಕೇಳಿದ ಮಗು ಕೆಲವು ದಿನಗಳ ಮುಂಚೆ ತನ್ನ ಮನೆಯ ಪಕ್ಕ ಯಾರೋ ತೀರಿಹೋದದ್ದನ್ನು ಗಮನಿಸಿತ್ತು]
  • ನಾವು ವರುಷಗಳು ಕಳೆದಂತೆ ಏಕೆ, ಹೇಗೆ ಬೆಳೆಯುತ್ತೇವೆ?!
  • ಈರುಳ್ಳಿ ಹೆಚ್ಚುವಾಗ ಕಣ್ಣೀರು ಏಕೆ ಬರುತ್ತದೆ!? [ಈ ಪ್ರಶ್ನೆ ಕೇಳಿದ ಮಗು ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತದೆ. ಆಗ ಈ ಪ್ರಶ್ನೆ ಬಂದಿತಂತೆ]
  • ನಮ್ಮ ಮೈಯಲ್ಲಿ ರಕ್ತ ಹೇಗೆ ಉಂಟಾಗುತ್ತದೆ?!

ಹೌದು, ಹೌದು ಅನ್ನಿಸುವ ಮೇಲಿನಂತಹ ಪ್ರಶ್ನೆಗಳಲ್ಲದೇ ಮೇಲ್ನೋಟಕ್ಕೆ ಸ್ವಲ್ಪ ತಮಾಶೆ ಅನ್ನಿಸಿದರೂ, ಮಕ್ಕಳ ಎಲ್ಲೆಯಿಲ್ಲದ ಕುತೂಹಲವನ್ನು ತೋರ್ಪಡಿಸುವ ಕೆಳಗಿನ ಪ್ರಶ್ನೆಗಳನ್ನೂ ಕೇಳಿದರು,

  • ಮನುಷ್ಯರು ಮಾತಾಡುತ್ತಾರೆ ಆದರೆ ನಮ್ಮ ಮನೆಯ ಹಸು ಏಕೆ ಮಾತಾಡುವುದಿಲ್ಲ?! [ಈ ಮಗುವಿಗೆ ತಮ್ಮ ಹಸುವಿನ ಕೊಟ್ಟಿಗೆಯಲ್ಲಿ ಈ ಪ್ರಶ್ನೆ ಮೂಡಿತ್ತಂತೆ]
  • ಚುಕ್ಕೆ ಬಾಳೆಹಣ್ಣಿನ ಮೇಲೆ ಚುಕ್ಕೆಗಳಿರುತ್ತವೆ ಆದರೆ ಏಲಕ್ಕಿ ಬಾಳೆಹಣ್ಣಿನಲ್ಲಿ ಏಲಕ್ಕಿ ಏಕಿರುವುದಿಲ್ಲ!?
  • ಬಸ್ಸು, ರೈಲು ಗಾಡಿಗಳಿದ್ದರೂ ವಿಮಾನ ಏಕೆ ಕಂಡುಹಿಡಿದರು?

ಚಟುವಟಿಕೆಯಲ್ಲಿ ಒಳ್ಳೆಯ ಪ್ರಶ್ನೆ ಕೇಳಿ ಗೆದ್ದ ತಂಡದಿಂದ ಶಾಲೆಗೆ ಉಡುಗೊರೆಯಾಗಿ ವಿಜ್ಞಾನದ ಪುಸ್ತಕವೊಂದನ್ನು ಕೊಡಲಾಯಿತು. ಚಟುವಟಿಕೆಯ ಬಳಿಕ ಮನೆಯಲ್ಲಿಯೇ ಮಾಡಬಹುದಾದ ವಿಜ್ಞಾನ ಪ್ರಯೋಗಗಳ ಪುಸ್ತಕಗಳನ್ನು ಎಲ್ಲ ಮಕ್ಕಳಿಗೆ ಕೊಡಲಾಯಿತು.

IMG-20180825-WA0005

ಒಟ್ಟಾರೆಯಾಗಿ ಈ ಚಟುವಟಿಕೆ ಮಕ್ಕಳನ್ನು ತುಂಬಾ ಹುರುಪುಗೊಳಿಸಿದ್ದು ಕಂಡು ಬಂದಿತು. “ಮಕ್ಕಳು ಇಷ್ಟು ಹುರುಪಿನಿಂದ ನಮ್ಮೊಡನೆ ಒಡನಾಡುವುದಿಲ್ಲ. ಪ್ರಶ್ನೆ ಕೇಳುವುದಕ್ಕೆ ಮುಂದೆ ಬರುವುದಿಲ್ಲ” ಅನ್ನುವಂತಹ ಅನುಭವಗಳನ್ನು ಶಾಲೆಯ ಶಿಕ್ಷಕರು ಹಂಚಿಕೊಂಡರು.

ವಿಜ್ಞಾನವೆಂದರೆ ನಮ್ಮ ಸುತ್ತಮುತ್ತಲಿನ ವಿಷಯಗಳ ಸುತ್ತ ಕುತೂಹಲ ಬೆಳೆಸಿಕೊಳ್ಳುವುದು, ಅವುಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವುದೇ ವಿಜ್ಞಾನದ ಗುರಿಯಾಗಿದೆ. ಸರಿ ಯಾವುದೆಂದು ಮೇಲ್ನೋಟಕ್ಕೆ ನೋಡದೇ ಆಳವಾಗಿ ಒರೆಗೆಹಚ್ಚುವುದು ವಿಜ್ಞಾನದ ತಳಹದಿ. ಪಠ್ಯಪುಸ್ತಕಗಳಲ್ಲಿರುವ ಪಾಠಗಳನ್ನು ಓದಿ, ಪರೀಕ್ಷೆ ಬರೆಯುವುದಷ್ಟೇ ವಿಜ್ಞಾನವಲ್ಲ ಅನ್ನುವುದನ್ನು ನಾವು ತಿಳಿದುಕೊಳ್ಳಬೇಕೆಂದು ತಿಳಿಸಿದಾಗ ಮಕ್ಕಳು ಚಟುವಟಿಕೆಗಳಲ್ಲಿ ಪಾಲ್ಗೊಂಡ ನಲಿವಿನೊಂದಿಗೆ ಹೌದೆನ್ನುವಂತೆ ತಲೆತೂಗಿದರು.

ಮೇಲಿನ ಶಾಲೆಯ ಮಕ್ಕಳೊಂದಿಗಿನ ಒಡನಾಟದಿಂದ ನನಗಾದ ಕಲಿಕೆಯೆಂದರೆ,

1. ವಿಜ್ಞಾನ ಕಲಿಸುವುದರಲ್ಲಿ ನಾವು ಮುಖ್ಯವಾಗಿ ಎಡವುತ್ತಿರುವುದೆಲ್ಲಿ ಎಂದರೆ, ವಿಜ್ಞಾನ ನಮ್ಮ ಬದುಕಿನ ಸುತ್ತನೇ ಇರುವ, ನಮ್ಮ ಸುತ್ತಣದ ತಿಳುವಳಿಕೆ ಅನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡುವಲ್ಲಿ ಸೋಲುತ್ತಿರುವುದು. ವಿಜ್ಞಾನ ಹೇಗೆ ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ ಅನ್ನುವುದನ್ನು ಮೊದಲು ತಿಳಿಸಬೇಕು ಅದಾದ ಬಳಿಕವೇ ಪಠ್ಯಪುಸ್ತಕದಲ್ಲಿರುವ ಪಠ್ಯಕ್ರಮದಂತೆ ಕಲಿಸಲು ಮುಂದಾಗಬಹುದು. ಈ ಬಗೆಯನ್ನು ಪ್ರತಿಯೊಂದು ಪಾಠಕ್ಕೂ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ’ಅಣು’ ಪಾಠವನ್ನು ಕಲಿಸುವ ಮುನ್ನ, ನಮ್ಮ ಸುತ್ತಮುತ್ತ ಕಾಣುವ ವಸ್ತುಗಳ ಜತೆಗೆ ನಮ್ಮ ಮೈ ಕೂಡ ಮೂಲದಲ್ಲಿ ಅಣುಗಳಿಂದ ಆಗಿರುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ’ಅಣು’ಗಳ ಬಗ್ಗೆ ಅಧ್ಯಯನ ನಡೆಸಿದುದರಿಂದ ಉದಾಹರಣೆಗೆ ನೀರಿನ ಗುಣಗಳನ್ನು ಚನ್ನಾಗಿ ತಿಳಿಯಲು ಆಯಿತು, ಹೆಚ್ಚು ಗಟ್ಟಿಯಾದ, ಹಗುರವಾದ ವಸ್ತುಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು, ವಸ್ತುವೊಂದು ಇನ್ನೊಂದು ವಸ್ತುವಿನೊಡನೆ ಹೇಗೆ ಬೆರೆಯುತ್ತದೆ ಅನ್ನುವುದನ್ನು ಅರಿಯಲು ನೆರವಾಯಿತು ಹೀಗೆ ಮುಂದುವರೆಯಬಹುದು.

2. ಕಲಿಕೆಯಲ್ಲಿ ಮಕ್ಕಳ “ಪಾಲ್ಗೊಳ್ಳುವಿಕೆ” ತುಂಬಾ ಮುಖ್ಯ. ಹಾಗಾಗಿ ಶಾಲೆಯ ಕೋಣೆಯಲ್ಲಿ ಕಲಿಕೆ ಬರೀ ಶಿಕ್ಷಕರಿಂದ ಮಕ್ಕಳೆಡೆಗೆ ಹರಿಯದೇ, ಎರಡೂ ಬದಿಯಿಂದ ಚರ್ಚೆಯ, ಪ್ರಶ್ನೋತ್ತರಗಳ ರೂಪದಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಮಕ್ಕಳು ಹೆಚ್ಚು ತೊಡಗಿದಷ್ಟು ಕಲಿಕೆ ಸುಲಭ.

3. ವಿಜ್ಞಾನ ಕಲಿಕೆಯಲ್ಲಿ “ಓದಿ” ಕಲಿಯುವುದರ ಜತೆಗೆ “ಮಾಡಿ” ಕಲಿಯುವುದಕ್ಕೆ ಒತ್ತುಕೊಡಬೇಕು. ಈ ನಿಟ್ಟಿನಲ್ಲಿ ಕಿರಿದಾದರೂ ಪರವಾಗಿಲ್ಲ ಪ್ರತಿಯೊಂದು ಶಾಲೆ ವಿಜ್ಞಾನದ ಪ್ರಯೋಗಮನೆಯನ್ನು ಹೊಂದಿರಬೇಕು. ಶಾಲೆಯ ಕೋಣೆಯಲ್ಲಿ ಕಲಿಸುವಾಗಲೂ ಕೂಡಾ ಶಿಕ್ಷಕರು ಪಾಠಕ್ಕೆ ಸಂಬಂಧಿಸಿದ ಕಿರು ಪ್ರಯೋಗಗಳನ್ನು ಮಾಡಿ ತೋರಿಸಬಹುದು.

4. ಮಕ್ಕಳ ಯೋಚನೆಯ ಹರಿವನ್ನು ಕಟ್ಟಿಹಾಕುವುದಾಗಲಿ ಇಲ್ಲವೇ “ಇದೇ ದಾರಿ ಸರಿಯಾದುದು”, “ಹೀಗೆನೇ ಯೋಚನೆ ಮಾಡಬೇಕು” ಅನ್ನುವುದನ್ನು ಕಲಿಸುಗರು ಮಾಡಬಾರದು. ಮಕ್ಕಳಿಗೆ ರೆಕ್ಕೆ ಬಡಿಯಲು ಬಿಟ್ಟಷ್ಟು ಅವರು ಹೊಸ ದಿಕ್ಕುಗಳನ್ನು ಅರಸಲು ಸಾಧ್ಯವಾಗುತ್ತದೆ. ಕಲಿಸುಗರು ಮಕ್ಕಳೊಂದಿಗೆ ಗೆಳೆಯ/ಗೆಳತಿಯಂತೆ ಬೆರೆತಷ್ಟೂ ಕಲಿಕೆ, ಕಲಿಸುವಿಕೆ ಸುಲಭವಾಗುತ್ತದೆ. [ಹಾಗಂತ ಬರೀ ತರ್ಲೆ ಮಾಡಲು ಬಿಡುವುದು ಅಂತಲ್ಲಾ:-) ]

5. ಪಠ್ಯಪುಸ್ತಕಗಳು ಕನ್ನಡದ ನುಡಿ ಸೊಗಡಿಗೆ ಒಗ್ಗುವಂತೆ ಮಾಡಬೇಕು. ಈಗಿರುವ ಪಠ್ಯಪುಸ್ತಕಗಳಲ್ಲಿ ತುಂಬಾ ಕಷ್ಟಕರವಾದ ಪದಗಳು, ವಾಕ್ಯಗಳ ಬಳಕೆ ಮಾಡಲಾಗಿದೆ. ವಿಜ್ಞಾನ ಅವರಿಗೆ ಬರೀ ಪಠ್ಯಕ್ರಮದ ವಿಷಯ, ಅದಕ್ಕೂ ಅವರ ಪರಿಸರಕ್ಕೂ ನಂಟಿಲ್ಲ ಅನ್ನಿಸುವುದಕ್ಕೆ ಇದು ಕೂಡ ಕಾರಣ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಸರಕಾರ ಕೂಡಲೇ ಗಮನಹರಿಸಿ, ಸರಿಪಡಿಸಬೇಕು. ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆಯ ಪ್ರಯೋಜನ ಮಕ್ಕಳು ಪಡೆಯುವಂತಾಗಲು ಇದು ಆಗಬೇಕು. ಇಲ್ಲವಾದರೆ ಪಠ್ಯಪುಸ್ತಕಗಳ ಚೌಕಟ್ಟಿನಲ್ಲಿ ನೋಡಿದಾಗ ಇಂಗ್ಲೀಶ್ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯತ್ಯಾಸವೇನೂ ಉಳಿಯುವುದಿಲ್ಲ. ಎರಡೂ ಪಠ್ಯಪುಸ್ತಕಗಳೂ ಮಕ್ಕಳಿಗೆ ದೂರವಾದ ಪದಗಳಿಂದ ಪರಕೀಯವಾಗಿ ಬಿಡುತ್ತವೆ.

[ಪದಗಳ ಬಳಕೆಯ ಬಗ್ಗೆ ನಡೆಸಿದ ಅಧ್ಯಯನ ವರದಿಯನ್ನು ಓದಲು ಇಲ್ಲಿಗೆ ಹೋಗಿ ]

ಶಾಲೆಯ ಮಕ್ಕಳೊಂದಿಗೆ ಒಡನಾಡುವ ನಮ್ಮ ತಂಡದ ಕೆಲಸ ಮುಂದುವರೆಯಲಿರುವುದರಿಂದ, ಈ ನಿಟ್ಟಿನಲ್ಲಿ ಇನ್ನಷ್ಟು ಕಲಿಕೆಯಾಗುವುದಂತೂ ನಿಜ. ಹಾಗಾಗಿ ಈ ಬರಹ ಮುಂದೊಮ್ಮೆ ಮತ್ತಷ್ಟು ಹಿಗ್ಗಬಹುದು.

ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪದಗಳ ಬಳಕೆ – ಒಂದು ಒಳನೋಟ

ಪ್ರಶಾಂತ ಸೊರಟೂರ.

ಕಲಿಕೆಯ ಮಾಧ್ಯಮವು ಯಾವುದಿರಬೇಕು ಎಂಬುದರ ಕುರಿತು ಹಲವು ವರುಷಗಳಿಂದ ಬಿರುಸಿನ ಚರ್ಚೆ ನಡೆಯುತ್ತಿದೆ. ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಕಲಿಕೆ ಪಡೆಯುವುದು ತುಂಬಾ ಮುಖ್ಯ. ಇದು ಕಲಿಕೆಯ ಒಟ್ಟಾರೆ ಗುಣಮಟ್ಟವನ್ನು ತೀರ್ಮಾನಿಸುತ್ತದೆ ಎಂದು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ (UNESCO) ಹೇಳಿದೆ. ಆದರೂ ಈ ನಿಟ್ಟಿನಲ್ಲಿ ಚರ್ಚೆಯಾಗುತ್ತಿರುವುದಕ್ಕೆ, ತಾಯ್ನುಡಿಯೇತರ ಅದರಲ್ಲೂ ಇಂಗ್ಲೀಶ್‍ನೆಡೆಗೆ ಪಾಲಕರು ವಾಲುತ್ತಿರುವುದಕ್ಕೆ ತನ್ನದೇ ಆದ ಕಾರಣಗಳಿವೆ. ಉನ್ನತ ಕಲಿಕೆ ಇಂಗ್ಲೀಶ್‍ನಲ್ಲಿದೆ, ಅದಕ್ಕೆ ದುಡಿಮೆ, ಗಳಿಕೆಗಳೂ ಅಂಟಿಕೊಂಡಿವೆ ಎಂಬುದು ಮೇಲ್ನೋಟದ ಕಾರಣಗಳಾದರೆ ತಾಯ್ನುಡಿ ಮಾಧ್ಯಮದಲ್ಲಿ ಕಲಿತರೆ ಆಗುವ ಒಳಿತುಗಳನ್ನು ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸದಿರುವುದು, ಶಾಲೆ, ಪಠ್ಯಪುಸ್ತಕಗಳು, ಕಲಿಕೆಯ ಸಲಕರಣೆಗಳು ಹೀಗೆ ಕಲಿಕೆಯ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸದಿರುವುದು, ಕನ್ನಡವನ್ನು ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕವಲುಗಳಿಗೆ ಸಜ್ಜುಗೊಳಿಸದಿರುವುದು, ತಾಯ್ನುಡಿ ಕಲಿಕಾ ಮಾಧ್ಯಮವು ಹಿಂದೆ ಬೀಳುತ್ತಿರುವುದಕ್ಕೆ ಮುಖ್ಯ ಕಾರಣಗಳಾಗಿವೆ.

ಕಲಿಕೆಯ ಮಾಧ್ಯಮದ ಚರ್ಚೆಗಳು ಮುಂದುವರೆದಿದ್ದರೂ, ಇಂದಿಗೂ ಕೂಡ ಕರ್ನಾಟಕದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಿದೆ. 1 ರಿಂದ 10 ನೇ ತರಗತಿವರೆಗಿನ ಒಟ್ಟು ಮಕ್ಕಳಲ್ಲಿ ಸುಮಾರು 71% ಮಕ್ಕಳು (ಸುಮಾರು 72 ಲಕ್ಷ ಮಕ್ಕಳು) ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಹಾಗಾಗಿ ಕನ್ನಡ ನಾಡಿನ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಬೇಕೆಂದರೆ, ಕನ್ನಡ ಮಾಧ್ಯಮದ ಕಲಿಕೆಯ ಗುಣಮಟ್ಟವನ್ನು ಒರೆಗೆಹಚ್ಚಿ, ಕೊರತೆ ಇರುವಲ್ಲಿ ಸರಿಪಡಿಸಬೇಕಿದೆ. ಪಠ್ಯಪುಸ್ತಕಗಳ ಗುಣಮಟ್ಟವನ್ನು ಒರೆಗೆಹಚ್ಚುವುದು ಈ ನಿಟ್ಟಿನಲ್ಲಿ ಆಗಬೇಕಾದ ಮುಖ್ಯವಾದ ಕೆಲಸಗಳಲ್ಲೊಂದು.

ಪಠ್ಯಪುಸ್ತಕಗಳಲ್ಲಿ ಅದರಲ್ಲೂ ವಿಜ್ಞಾನದಂತಹ ವಿಷಯವನ್ನು ಕಲಿಸುವಾಗ ಪದಗಳ ಬಳಕೆ ಮುಖ್ಯವಾಗುತ್ತದೆ. ವಿಷಯವೊಂದನ್ನು ತಿಳಿಸಲು ಪದಗಳು ಅಡಿಪಾಯದ ಕೆಲಸವನ್ನು ಮಾಡುತ್ತವೆ. ಪಠ್ಯಪುಸ್ತಕಗಳಲ್ಲಿ ಬಳಸಲಾದ ಪದಗಳು, ಆದಷ್ಟೂ ಮಕ್ಕಳ ಪರಿಸರಕ್ಕೆ ಹತ್ತಿರವಾಗಿದ್ದರೆ, ವಿಷಯವೊಂದನ್ನು ಅರಿತುಕೊಳ್ಳುವುದು ಮಕ್ಕಳಿಗೆ ಸುಲಭವಾಗುತ್ತದೆ. ಅದೇ, ಅವರ ಪರಿಸರಕ್ಕೆ ದೂರವಾದ ಪದಗಳು ಹೆಚ್ಚಾದಷ್ಟು, ವಿಷಯದ ಅರಿವು ಅವರಿಂದ ದೂರವಾಗುತ್ತದೆ. ಉದಾಹರಣೆಗೆ, ’ಬೆಳಕು’ ಅನ್ನುವ ಪದ ಮಕ್ಕಳ ಪರಿಸರಕ್ಕೆ ಹತ್ತಿರವಾದುದು. ಈ ಪದವನ್ನು ಬಳಸಿ ಅದರ ಗುಣಗಳು, ಮೂಲಗಳು, ಬಳಕೆ ಮುಂತಾದ ವಿಷಯಗಳನ್ನು ತಿಳಿಸುವುದು ಸುಲಭ. ಅದೇ, ’ ಬೆಳಕು’ ಪದದ ಬದಲಾಗಿ ’ದ್ಯುತಿ’ ಇಲ್ಲವೇ ’ಫೋಟೋ’ (photo) ಪದಗಳನ್ನು ಬಳಸಿದರೆ ಏನಾಗುತ್ತದೆ? ಮಕ್ಕಳು ಅವುಗಳನ್ನು ಮೊದಲು ಕಂಠಪಾಠ ಮಾಡುತ್ತಾರೆ, ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ಹಲವಾರು ಮಕ್ಕಳು ಗೊಂದಲಕ್ಕೀಡಾಗಿ ಅರಿಯಬೇಕಾದ ವಿಷಯವನ್ನೇ ಮರೆತುಹೋಗುತ್ತಾರೆ. ಈ ತರನಾದ ಸಮಸ್ಯೆ ನಮ್ಮ ನಾಡಿನ ಪಠ್ಯಪುಸ್ತಕಗಳಲ್ಲಿ ಇದೆಯೇ? ಇದ್ದರೆ, ಅದಕ್ಕೆ ಪರಿಹಾರವೇನು? ಎಂಬಂತಹ ಮುಖ್ಯವಾದ ಪ್ರಶ್ನೆಗಳೊಡನೇ ನಮ್ಮ ತಂಡ ಇಂದಿನ ವಿಜ್ಞಾನ ಪಠ್ಯಪುಸ್ತಕಗಳನ್ನು ಒರೆಹಚ್ಚುವ ಕೆಲಸಕ್ಕೆ ಮುಂದಾಯಿತು.

ಈ ಕೆಲಸದಲ್ಲಿ ದೊರೆತ ಫಲಿತಾಂಶಗಳು ಅಚ್ಚರಿ ಮೂಡಿಸುವಂತಿದ್ದವು. ಅಪರ್ಕ್ಯುಲಮ್, ನೀರ್ಲವಣೀಕರಣ, ಉತ್ಸರ್ಜನೆ, ಯುಸ್ಟೇಶಿಯಸ್, ಎಂಡೋಲಿಂಫ್, ನಿಶೇಚನದಂತಹ ಹಲವಾರು ತೊಡಕಾದ ಪದಗಳು ಮೊದಲ ನೋಟದಲ್ಲೇ ಕಂಡವು. ಈ ನಿಟ್ಟಿನಲ್ಲಿ ಆಳವಾದ ಅಧ್ಯಯನ ನಡೆಸುವ ಅಗತ್ಯತೆ ಇರುವುದು ನಮಗಾಗ ಇನ್ನಷ್ಟು ಮನದಟ್ಟಾಯಿತು. ತೊಡಕಾದ ಪದಗಳನ್ನು ಪಟ್ಟಿ ಮಾಡುವುದಲ್ಲದೇ ಅವುಗಳಿಗೆ ಸಾಟಿಯಾಗಿ ಸುಲಭವಾದ ಪದಗಳನ್ನು ಮುಂದಿಡುವುದೂ ನಮ್ಮ ಗುರಿಯಾಯಿತು. ಈ ಕುರಿತು ಶಿಕ್ಷಣ ವಲಯದಲ್ಲಿರುವವರೊಂದಿಗೆ ಚರ್ಚೆಯನ್ನೂ ಕೈಗೊಳ್ಳಲಾಯಿತು.

ಈ ಅಧ್ಯಯನದಲ್ಲಿ ಕಂಡುಬಂದ ಒಟ್ಟಾರೆ ಅಂಶಗಳು, ಪದಪಟ್ಟಿ, ಈಗಿರುವ ತೊಡಕುಗಳು, ಮುಂದಿನ ಹೆಜ್ಜೆಗಳು ಮುಂತಾದ ವಿಷಯಗಳನ್ನು ಒಳಗೊಂಡ ವರದಿಯನ್ನು ಈ ಮೂಲಕ ಹೊರತರಲಾಗುತ್ತಿದೆ.

horaputa(ವರದಿಯನ್ನು ಇಳಿಸಿಕೊಳ್ಳಲು ಚಿತ್ರದ ಮೇಲೆ ಒತ್ತಿ)

ಗಮನಕ್ಕೆ:
ಈ ತಿಳಿಹಾಳೆಯನ್ನು (white paper) ಇಲ್ಲವೇ ಇದರ ಕೆಲವು ಭಾಗಗಳನ್ನು ಬೇರೆ ಯಾವುದೇ ಕಡೆಗಳಲ್ಲಿ ಮರು-ಅಚ್ಚು ಇಲ್ಲವೇ ಮರು-ಮೂಡಿಸಬೇಕಾದರೆ, ಈ ಕೆಳಗಿನ ವಾಕ್ಯವನ್ನು ಯಾವುದೇ ಬದಲಾವಣೆಯಿಲ್ಲದಂತೆ ಕೊಂಡಿಯ ಸಮೇತ ಮೊದಲಿಗೆ ಇಲ್ಲವೇ ಕೊನೆಯಲ್ಲಿ ಹಾಕತಕ್ಕದ್ದು.

ಕನ್ನಡ ಮಾಧ್ಯಮದ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಪದಗಳ ಬಳಕೆ – ಒಂದು ಒಳನೋಟ” ಮೊದಲಿಗೆ  https://arime.org/ ಮಿಂದಾಣದಲ್ಲಿ ಮೂಡಿಬಂದಿತ್ತು: <ನಮ್ಮ ಬರಹಕ್ಕೆ ಕೊಂಡಿ>