‘ಕೊರಿಯೋಲಿಸ್’ ಎಂಬ ಬಲ

ಕೊರಿಯೋಲಿಸ್ (Coriolis) ಎಂಬ ವಿಜ್ಞಾನದ ಆಗುಹವನ್ನು ಹೀಗೆ ಬಣ್ಣಿಸಬಹುದು.

ಒಂದು ತಿರುಗುತ್ತಿರುವ ನೆಲೆಗಟ್ಟಿಗೆ ನಂಟಾಗಿ ಸಾಗುತ್ತಿರುವ ವಸ್ತುವೊಂದರ ಮೇಲೆ ಉಂಟಾಗುವ
ನಿಲ್ಮೆಯ ಬಲವಿದು (inertial force).

ನೆಲೆಗಟ್ಟು(Reference frame) ಬಲಸುತ್ತು ತಿರುಗುತ್ತಿದ್ದರೆ, ಸಾಗುತ್ತಿರುವ ವಸ್ತುವಿನ ಎಡಕ್ಕೆ ಬಲ ಉಂಟಾಗುತ್ತದೆ. ನೆಲೆಗಟ್ಟು ಎಡಸುತ್ತು ತಿರುಗುತ್ತಿದ್ದರೆ ಸಾಗುತ್ತಿರುವ ವಸ್ತುವಿನ ಬಲಕ್ಕೆ ಬಲ
ಉಂಟಾಗುತ್ತದೆ.

ಕೆಳಗಿನ ಚಿತ್ರದಲ್ಲಿ ಕಪ್ಪುಚುಕ್ಕೆಯಲ್ಲಿ ತೋರಿಸಲಾಗಿರುವ ವಸ್ತು ನೇರವಾದ ಗೆರೆಯಲ್ಲಿ ಸಾಗಿದರೂ, ಅದನ್ನು ನೋಡುವವನಿಗೆ (ಕೇಸರಿ ಚುಕ್ಕೆಯಲ್ಲಿ ತೋರಿಸಲಾಗಿದೆ) ಆ ವಸ್ತು ಓರೆಗೆರೆಯಲ್ಲಿ ಸಾಗುತ್ತಿರುವಂತೆ ಕಾಣಿಸುತ್ತದೆ. ನೋಡುಗನು ನಿಂತ ನೆಲೆಗಟ್ಟು ತಿರುಗುತ್ತಿರುವುದೇ ಇದಕ್ಕೆ ಕಾರಣ. ಹೀಗೆ ತಿರುಗುತ್ತಿರುವ ನೆಲೆಗಟ್ಟು ಉಂಟುಮಾಡುವ ಪರಿಣಾಮವೇ ಕೊರಿಯೋಲಿಸ್.

Corioliskraftanimation

ಕೊರಿಯೋಲಿಸ್ ಆಗುಹವುನ್ನು ಗಸ್ಪಾರ್ಡ್-ಗುಸ್ತಾವ್ ದು ಕೊರಿಯೋಲಿಸ್ ( Gaspard-Gustave de Coriolis) ಎಂಬ ಎಣಿಕೆಯರಿಗನು ಅರಿತು ಬಿಡಿಸಿ ಹೇಳಿದ್ದರಿಂದ ಅವನ ಹೆಸರನಲ್ಲಿ ಕರೆಯಲಾಗಿದೆ.

ನೆಲವು ಒಂದು ತಿರುಗುವ ನೆಲೆಗಟ್ಟಾಗಿದ್ದು ಅದಕ್ಕೆ ನಂಟಾಗಿ ಗಾಳಿಯು ಬೀಸಿದಾಗಲೂ ಕೊರಿಯೋಲಿಸ್ ಆಗುಹ ಉಂಟಾಗುತ್ತದೆ.

ಬೀಸುಗಾಳಿಯು ಹೆಚ್ಚು ಒತ್ತಡದ ನೆಲೆಯಿಂದ ಕಡಿಮೆ ಒತ್ತಡದ ನೆಲೆಯೆಡಿಗೆ ಬೀಸುತ್ತದೆ. ಆದರೆ ಬೀಸುಗಾಳಿಯು ನೇರಗೆರೆಯಲ್ಲಿ ಸಾಗಿದಂತೆ ಕಾಣುವುದಿಲ್ಲ. ಕೊರಿಯೋಲಿಸ್ ಆಗುಹದಿಂದ ಬೀಸುಗಾಳಿಯು ಒಂದು ದಿಕ್ಕಿನೆಡೆಗೆ ನೇರವಾಗಿ ಸಾಗದೆ ಬಾಗಿದಂತಾಗುತ್ತದೆ.

ನೆಲದ ನಡುಗೆರೆಯು (Equator) ಹೆಚ್ಚು ಅಗಲವಾಗಿರುವುದರಿಂದ ನೆಲವು ಅಲ್ಲಿ, ತುದಿಗಳಿಗಿಂತ ಹೆಚ್ಚು ಬಿರುಸಾಗಿ ತಿರುಗುತ್ತದೆ. ನೆಲನಡುಗೆರೆಯ ಮೇಲಿನ ಒಂದು ಚುಕ್ಕೆಯು ನೆಲೆದ ಬೇರೆಡೆ ಇರುವ ಇನ್ನಾವುದೇ ಚುಕ್ಕೆಗಿಂತ ಒಂದು ದಿನದಲ್ಲಿ ಹೆಚ್ಚು ದೂರವನ್ನು ಸಾಗಿರುತ್ತದೆ. ಚುಕ್ಕೆಯುನ್ನು ನೆಲನಡುಗೆರೆಯಿಂದ ತುದಿಗಳೆಡೆಗೆ ಜರುಗಿಸಿದಂತೆಲ್ಲ ಚುಕ್ಕೆಯ ತಿರುಗುವಿಕೆಯ ಬಿರುಸು ಕಡಿಮೆಯಾಗುತ್ತಾ ಹೋಗುತ್ತದೆ. ಬಡಗಣ ತುದಿಯೊ ಇಲ್ಲ ತೆಂಕಣ ತುದಿಯ ಮೇಲಿನ ಚುಕ್ಕೆಯನ್ನು ನೆಲನಡುಗೆರೆಯ ಕಡೆಗೆ ಜರುಗಿಸಿದಂತೆಲ್ಲ ಅಲ್ಲಿ ಅದರ ತಿರುಗುವಿಕೆಯ ಬಿರುಸು ಹೆಚ್ಚುತ್ತಾ ಹೋಗುತ್ತದೆ.

ತೋರಿಕೆಗೆ ಹೀಗೆಂದುಕೊಳ್ಳೋಣ, ನೀವು ಈಗ ನೆಲದ ಬಡಗಣ ತುದಿಯಮೇಲೆ ನಿಂತಿದ್ದೀರಿ. ನೀವು ಒಂದು ಚೆಂಡನ್ನು ತೆಂಕಣದ ಕಡೆಗೆ ಬಲು ದೂರದಲ್ಲಿ ನಿಂತ ಗೆಳೆಯನೆಡೆಗೆ ಎಸೆದರೆ ಅದು ಅವನಿರುವಿಕೆಯಿಂದ ಬಲಕ್ಕೆ ಹೋದಂತೆ ಕಾಣಿಸುತ್ತದೆ. ಏಕೆಂದರೆ ನಿಮ್ಮ ಗೆಳೆಯ ನೆಲನಡುಗೆರೆಗೆ ನಿಮಗಿಂತ ಹತ್ತಿರದಲ್ಲಿದ್ದಾನೆ ಮತ್ತು ನಿಮಗಿಂತ ಹೆಚ್ಚು ಬಿರುಸಾಗಿ ಪಡುವಲಿನಿಂದ ಮೂಡಲ ಕಡೆಗೆ ನೆಲಕ್ಕಂಟಿಕೊಂಡೇ ಸಾಗಿರುತ್ತಾನೆ. ಏಕೆಂದರೆ ನೆಲವು ಪಡುವಲಿನಿಂದ ಮೂಡಲ ಕಡೆಗೆ ತಿರುಗುತ್ತಿರುತ್ತದೆ. ಆದ್ದರಿಂದಲೇ ನೀವೆಸೆದ ಚೆಂಡು ನೇರವಾಗಿ ಸಾಗಿ ನಿಮ್ಮ ಗೆಳೆಯ ನಿಂತಲ್ಲಿಗೆ ಹೋದರೂ ನಿಮ್ಮ ಗೆಳೆಯ ಮೂಡಣದ ಕಡೆಗೆ ಹೆಚ್ಚು ಬಿರುಸಾಗಿ ಸಾಗಿದ್ದರಿಂದ, ಚೆಂಡು ಬಲಕ್ಕೆ ಬಾಗಿದಂತೆ ಕಾಣುತ್ತದೆ.

ಇನ್ನು ಸುಳುವಾಗಿ ತಿಳಿಯಬೇಕೆಂದರೆ ಈ ಕೆಳಗಿನ ಚಿತ್ರವನ್ನು ನೋಡಿ. ಇದು ಕುದುರೆ ಗೊಂಬೆಗಳ ಮೇಲೆ ಕುಳಿತು ತಿರುಗುವ ಆಟ. ತಿರುಗುವ ತಟ್ಟೆಯಮೇಲೆ ಅರಿಶಿಣ ಅಂಗಿಯ ತೊಟ್ಟ ಮಗುವು ತನ್ನೆದುರಿಗಿನ ತಿಳಿನೀಲಿ ಬಣ್ಣದಂಗಿಯ ಪೋರನಿಗೆ ಚೆಂಡು ನೇರವಾಗಿ ಎಸೆದಾಗ ಅದು ಎಡಕ್ಕೆ ಹೋದಂತೆ ಕಾಣಿಸುತ್ತದೆ ಅಲ್ಲವೆ. ಇಲ್ಲಿ ತಿರುಗುವ ತಟ್ಟೆಯು ಬಲಸುತ್ತು ತಿರುಗುತ್ತಿದೆ.

imageಮೇಲ್ನೋಟಕ್ಕೆ ಹೀಗೆ ಬಾಗಿದಂತೆ ಕಾಣುವ ಆಗುಹವನ್ನು ಕೊರಿಯೋಲಿಸ್ ಆಗುಹ ಎಂದು ಕರೆಯುತ್ತೇವೆ. ಗಾಳಿಯು ಒಂದು ಚೆಂಡಿನಂತೆ. ಅದು ಬೀಸುವಾಗ ನೆಲದ ಬಡಗು ಅರೆಗೋಳದಲ್ಲಿ(north hemisphere) ಬಲಕ್ಕೆ ಮತ್ತು ತೆಂಕು ಅರೆಗೋಳದಲ್ಲಿ(south hemisphere) ಎಡಕ್ಕೆ ಬಾಗಿದಂತೆ ಕಾಣುತ್ತದೆ. ಅಂದರೆ ಬಡಗು ಅರೆಗೋಳದಲ್ಲಿ ಬೀಸುಗಾಳಿಯು ಹೆಚ್ಚು ಒತ್ತಡ ನೆಲೆಗಳಿಂದ ಕಡಿಮೆ ಒತ್ತಡದ ನೆಲೆಗಳೆಡೆಗೆ ಬಲಕ್ಕೆ ಸಾಗುತ್ತದೆ. ಆದ್ದರಿಂದಲೇ ಬಡಗು ಅರೆಗೋಳದಲ್ಲಿ ಉಂಟಾಗುವ ಸುಂಟರಗಾಳಿಗಳು ಬಲಸುತ್ತಿನವು ಮತ್ತು ತೆಂಕು ಅರೆಗೋಳದವು ಎಡಸುತ್ತಿನವು ಆಗಿರುತ್ತವೆ.
image (1)ಬಿರುಸಾಗಿ ಓಡುವ ವಿಮಾನ, ಏರುಗಣಿಗಳಂತವು (Rocket) ಕೊರಿಯೋಲಿಸ್ ಆಗುಹಕ್ಕೆ ಒಳಗಾಗುತ್ತವೆ. ಓಡಿಸುಗರು ಹಾರಾಟದ ಹಂಚಿಕೆಯನ್ನು ಹೆಣೆಯುವಾಗ ನೆಲದ ತಿರುಗುವಿಕೆಯನ್ನು ಎಣಿಕೆಗೆ ತೆಗೆದುಕೊಳ್ಳಬೇಕಾಗುತ್ತದೆ. ಉದಾಹರಣೆಗೆ ನೀವು ಚೆನ್ನೈನ ಬಾನಿನಲ್ಲಿ ನಿಂತು ಕೆಳಗೆ ವಿಮಾನದ ಹಾರುವಿಕೆಯನ್ನು ನೋಡುತ್ತಿರುವಿರಿ. ಚೆನ್ನೈಯಿಂದ (ಉದ್ದದೂರ 80°16′ಮೂಡಣಕ್ಕೆ-80°16′E Longitude) ಲಕನೌ (ಉದ್ದದೂರ 80°55′ಮೂಡಣಕ್ಕೆ-80°55′E Longitude) ಕಡೆಗೆ ತೆರಳುತ್ತಿರುವ ವಿಮಾನ ಹಾರುವುದನ್ನು ನೋಡುತ್ತಿದ್ದೀರಿ. ಒಂದುವೇಳೆ ನೆಲವು ತಿರುಗದೇ ಇದ್ದಿದ್ದರೆ, ಕೊರಿಯೋಲಿಸ್ ಆಗುಹವಿರುತ್ತಿರಲಿಲ್ಲ.

ಆಗ ಓಡಿಸುಗನು ನೇರಗೆರೆಯಂತೆ ಬಡಗಿನ ಕಡೆಗೆ ಹಾರಿಸಿದರೆ ಸಾಕಾಗುತ್ತಿತ್ತು ಮತ್ತು ಬಾನಿನಲ್ಲಿ ನೋಡುತ್ತಿರುವ ನಿಮಗೆ ವಿಮಾನ ಸಾಗಿದ ಹಾದಿ ನೇರಗೆರೆಯಂತೆ ಕಾಣುತಿತ್ತು. ಆದರೆ ನೆಲದ ತಿರುಗುವಿಕೆಯಿಂದ ಕೊರಿಯೋಲಿಸ್ ಉಂಟಾಗಿ ಲಕನೌ ಮೂಡಲಕ್ಕೆ ಸಾಗಿರುತ್ತದೆ ಮತ್ತು ಇದನ್ನು ಎಣಿಕೆಗೆ ತೆಗೆದುಕೊಳ್ಳದೆ ನೇರ ಸಾಗಿ ಬಂದರೆ, ವಿಮಾನ ಲಕನೌ ಬಿಟ್ಟು ಬೇರಾವುದೋ ಊರನ್ನು ಮುಟ್ಟಿರುತ್ತದೆ. ಅದಕ್ಕಾಗಿ ಓಡಿಸುಗನು ಹಾರಾಟದ ನಡುವಲ್ಲಿ ಆಗಾಗ ನೆಲದ ತಿರುಗುವಿಕೆಯನ್ನು ಎಣಿಕೆಗೆ ತಗೊಂಡು ಸಾಗುವ ಹಾದಿಯನ್ನು ಸರಿಮಾಡಿಕೊಳ್ಳುತ್ತಾ ಓಡಿಸಬೇಕಾಗುತ್ತದೆ. ಕೊರಿಯೋಲಿಸ್ ಆಗುಹವನ್ನು ಎಣಿಕೆಗೆ ತಗೊಂಡು ಲಕನೌ ಕಡೆಗೆ ಸಾಗಿದ ಹಾದಿಯು ಬಾನಿನಲ್ಲಿ ಗಮನಿಸುತ್ತಿರುವ ನಿಮಗೆ, ಬಲಕ್ಕೆ ಬಾಗುತ್ತಾ ಹೋದಂತೆ ಕಾಣಿಸುತ್ತದೆ.

ಕೊರಿಯೋಲಿಸ್ ಆಗುಹವನ್ನು ಅರಿಯುವುದರಿಂದ ನೆಲದ ಮೇಲಿನ ಬೀಸುಗಾಳಿಗಳು, ಹೆಗ್ಗಡಲ ಒಳ ಹರಿವುಗಳು ಮತ್ತು ಅವುಗಳಿಂದ ನೆಲದಮೇಲೆ ಉಂಟಾಗುವ ಏರುಪೇರುಗಳನ್ನು ತಿಳಿಯಲು ಅನುವಾಗುತ್ತದೆ. ಮುಂದಿನ ಬಾಗದಲ್ಲಿ ಈ ಕುರಿತು ಹೆಚ್ಚು ತಿಳಿಯೋಣ.

Bookmark the permalink.

Comments are closed.

Comments are closed