ಬಹುತೇಕ ವಿದ್ಯುತ್ತಿನ ಕಾರುಗಳಲ್ಲಿ ಬಳಸಲ್ಪಡುವ ಲಿಥಿಯಮ್ ಅಯಾನ್ ಬ್ಯಾಟರಿ ಬದಲಿಗೆ ಸೋಡಿಯಮ್ ಅಯಾನ್ ಬ್ಯಾಟರಿಗಳ ಬಗ್ಗೆ ಸಂಶೋಧನೆಗಳು ಒಂದೆಡೆ ನಡೆಯುತ್ತಿದ್ದರೆ, ಸ್ಯಾಮ್‌ಸಂಗ್ ರವರ ಹೊಸದಾದ ಸಂಶೋಧನೆ ಬ್ಯಾಟರಿಗಳ ಲೋಕದಲ್ಲಿ ಸಂಚಲನ ಮೂಡಿಸಿದೆ. ಹೆಸರುವಾಸಿ ಸ್ಯಾಮ್‌ಸಂಗ್ ಕಂಪನಿಯವರು ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಯನ್ನು ಕಂಡುಹಿಡಿದಿದ್ದು. ಬ್ಯಾಟರಿ ಉದ್ದಿಮೆಯಲ್ಲಿ ಇದು ಹೊಸತಾಗಿದೆ. ಇಂದು ಹೆಚ್ಚಾಗಿ ಬಳಸುವ ಲಿಥಿಯಂ ಅಯಾನ್ ಬ್ಯಾಟರಿಗಳಲ್ಲಿ ಬಳಸಲ್ಪಡುವ ಎಲೆಕ್ಟ್ರೋಲೈಟ್‌ಗಳು ದ್ರವ ರೂಪದಲ್ಲಿರುತ್ತವೆ(Liquid State). ಆದರೆ, ಸ್ಯಾಮ್‌ಸಂಗ್ ಮುಂದಿಟ್ಟಿರುವ ಸಿಲ್ವರ್ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲಿ ಗಟ್ಟಿಯಾದ ಬೆಳ್ಳಿಯ ಎಲೆಕ್ಟ್ರೋಲೈಟ್‌ಗಳು ಇರಲಿವೆ.
ಸಾಮಾನ್ಯ ಮಿಂಕಟ್ಟುಗಳಲ್ಲಿ ದ್ರವರೂಪದ ಎಲೆಕ್ಟ್ರೋಲೈಟ್‌ಗಳೇ ಅಯಾನ್‌ಗಳು ಕ್ಯಾಥೋಡ್ ಮತ್ತು ಅನೋಡ್ ಬದಿ ಬೇರ್ಪಡುವಂತೆ ಮಾಡುತ್ತವೆ. ಈ ದ್ರವರೂಪದ ಎಲೆಕ್ಟ್ರೋಲೈಟ್ ಬದಲು ಇದೇ ಮೊದಲ ಬಾರಿಗೆ ಘನರೂಪದ ಗಟ್ಟಿಯಾದ ಬೆಳ್ಳಿ-ಇಂಗಾಲದ(Silver-Carbon, Ag-C) ಎಲೆಕ್ಟ್ರೋಲೈಟ್ ಅಭಿವೃದ್ಧಿ ಪಡಿಸಲಾಗಿದೆ. ಗಟ್ಟಿಯಾದ ಎಲೆಕ್ಟ್ರೋಲೈಟ್ ಹೆಚ್ಚಿನ ಅಳುವು ಹೊಂದಿವೆ. ಸಾಮಾನ್ಯ ದ್ರವ ರೂಪದ ಎಲೆಕ್ಟ್ರೋಲೈಟ್ ಸುಮಾರು 270 Wh/kg ಅಳುವು ಹೊಂದಿದ್ದರೆ, ಗಟ್ಟಿಯಾದ ಎಲೆಕ್ಟ್ರೋಲೈಟ್ 500 Wh/kg ನಷ್ಟು ಹೆಚ್ಚಿನ ಅಳುವು ಹೊಂದಿದೆ. ಇದು ಅಲ್ಲದೇ, ದ್ರವರೂಪದ ಎಲೆಕ್ಟ್ರೋಲೈಟ್‌ಗಳು ಉರಿ ಹೊತ್ತಿಕೊಳ್ಳಬಲ್ಲವಂತವು, ಇದರಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಸ್ಯಾಮ್‌ಸಂಗ್ ರವರ ಗಟ್ಟಿಯಾದ ಬೆಳ್ಳಿಯ ಮಿನ್ನೊಡೆಕಗಳಲ್ಲಿ(Electrolyte) ಈ ಅಪಾಯ ಇರುವುದಿಲ್ಲ. ಹೆಚ್ಚಿನ ಅಳುವು ಹೊಂದಿರುವ ಸಾಲಿಡ್ ಸ್ಟೇಟ್ ಎಲೆಕ್ಟ್ರೋಲೈಟ್ ಮಿಂಕಟ್ಟುಗಳು ಒಮ್ಮೆ ಹುರುಪು(Charge) ತುಂಬಿದರೆ ಹೆಚ್ಚಿನ ದೂರದವರೆಗೆ ಸಾಗಬಲ್ಲವು ಅಂದರೆ ಸುಮಾರು 960 ಕಿಮೀಗಳಷ್ಟು.
ಈ ಬ್ಯಾಟರಿಗಳಿಗೆ ಕೇವಲ 9-10 ನಿಮಿಷಗಳಲ್ಲಿ ಪೂರ್ತಿಯಾಗಿ ಹುರುಪು ತುಂಬಬಹುದಾಗಿದೆ. ಹೆಚ್ಚಿನ ಅಳುವು(Efficiency), ಒಮ್ಮೆ ಹುರುಪು ತುಂಬಿಸಿದರೆ ಹೆಚ್ಚು ದೂರದವರೆಗೆ ಸಾಗಣೆ ಹಾಗೂ ಕಡಿಮೆ ಸಮಯದಲ್ಲಿ 100% ಚಾರ್ಜ್ ಆಗುವ ಈ ಬ್ಯಾಟರಿಗಳು ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ದಿಮೆಗೆ ಸಾಕಷ್ಟು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಇಂತಹ ಬೆಳ್ಳಿಯ ಮಿಂಕಟ್ಟುಗಳ ಮಾದರಿಗಳನ್ನು ತಯಾರಿಸಿ ಕೆಲವು ಕಾರುತಯಾರಕರಿಗೆ ಸ್ಯಾಮ್‌ಸಂಗ್ ಸಂಸ್ಥೆ ನೀಡಿದ್ದು, ಅವರ ಮೊದಲ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ಬಂದಿವೆಯಂತೆ.
ಬೆಳ್ಳಿ ಲೋಹ ದುಬಾರಿಯಾಗಿರುವುದು ಇಂತಹ ಬ್ಯಾಟರಿಗಳ ಬೆಳವಣಿಗೆಗೆ ಇರುವ ಮೊದಲ ತೊಡಕು. ಈ ಬೆಳವಣಿಗೆಯಿಂದ ಬೆಳ್ಳಿಗೆ ಬೇಡಿಕೆ ಏರಿಕೆಯಾಗಿ ಅದರ ಬೆಲೆ ಇನ್ನೂ ದುಬಾರಿಯಾಗಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಘನರೂಪದ ಮಿಂಕಟ್ಟುಗಳು ಹೆಚ್ಚಿನ ಮಿಂಚಿನ ಕಾರುಗಳಲ್ಲಿ ಬಳಕೆಯಾಗಲಿದ್ದು, ಚೀನಾ ಮೂಲದ ಲಿಥಿಯಮ್-ಅಯಾನ್ ಬ್ಯಾಟರಿ ಕಂಪನಿಗಳಿಗೆ ಇದು ಪಣವೊಡ್ಡಲಿದೆ ಎಂಬುದು ಆಟೋಮೊಬೈಲ್ ಉದ್ಯಮದಲ್ಲಿ ಕೇಳಿ ಬರುತ್ತಿರುವ ಸುದ್ದಿ.
ತಿಟ್ಟ ಮತ್ತು ಮಾಹಿತಿ ಸೆಲೆ: