ಬಳಸಿದ ಬಂಡಿಕೊಳ್ಳುಗರಿಗೊಂದು ಕಿರುಕೈಪಿಡಿ

ಜಯತೀರ್ಥ ನಾಡಗೌಡ

ಬಳಸಿದ ಬಂಡಿ(Used or Pre-owned car) ಕೊಳ್ಳುವುದು ಇದೀಗ ಎಲ್ಲೆಡೆ ಹೆಚ್ಚಿದೆ. ಏರುತ್ತಿರುವ ಜನಸಂಖ್ಯೆಯೊಂದಿಗೆ ಕಾರುಗಳ ಬಳಕೆಯೂ ಏರುಮುಖ ಕಂಡಿದೆ. ಇದರಿಂದಾಗಿ ಬಳಸಿದ ಬಂಡಿಗಳ ಮಾರುಕಟ್ಟೆ ಹೆಮ್ಮರವಾಗಿ ಬೆಳೆದಿದೆ. ಬಹಳಶ್ಟು ದುಡ್ಡು ಕೊಟ್ಟು ಹೊಸ ಬಂಡಿ ಕೊಳ್ಳಲಾಗದವರು, ಬಂಡಿ ಓಡಿಸುವುದನ್ನು ರೂಢಿಸಿಕೊಂಡು ನುರಿತರಾಗಬೇಕೆನ್ನುವವರಿಗೆ ಬಳಸಿದ ಕಾರುಗಳು ಒಳ್ಳೆಯ ಆಯ್ಕೆಯಾಗಿ ಮಾರ್ಪಟ್ಟಿವೆ. ಅದಕ್ಕೆಂದೇ ಹಲವಾರು ಪ್ರಮುಖ ಕಾರು ತಯಾರಕ ಕೂಟದವರು ತಮ್ಮದೇ ಆದ ಬಳಸಿದ ಕಾರು ಮಳಿಗೆಗಳನ್ನು ಹೊರತಂದು ತಮ್ಮ ವ್ಯಾಪಾರವನ್ನು ಹಿಗ್ಗಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ಮಳಿಗೆಗಳಲ್ಲಿ ನಿಮಗೆ ವಿವಿಧ ಬಗೆಯ, ಬೇರೆ ಕೂಟದವರು ತಯಾರಿಸಿದ ಬಳಸಿದ ಕಾರುಗಳು ಸಿಗುತ್ತವೆ. ಇಂತ ಮಳಿಗೆಗಳು ಹಳೆಯ ಬಂಡಿ ಮಾರುವವರಿಗೆ ಮತ್ತು ಬಳಸಿದ ಕಾರು ಕೊಳ್ಳುವವರಿಗೆ ಒಳ್ಳೆಯ ವೇದಿಕೆ ಒದಗಿಸಿವೆ.

ಇದರಲ್ಲಿ ಈ-ಕಾಮರ್ಸ್ (E-commerce) ತಾಣಗಳು ಹಿಂದೆ ಬಿದ್ದಿಲ್ಲ. ಮಳಿಗೆಗಳಲ್ಲಿ ಮಾರಲು, ಕೊಳ್ಳಲು ಸಮಯವಿಲ್ಲ ಎನ್ನುವವರು ಈ ತಾಣಗಳನ್ನು ಬಳಸಬಹುದು. ಈ ತಾಣಗಳಲ್ಲಿ ಮಂದಿಗೆ, ತಮ್ಮ ಗಾಡಿಯ ತಿಟ್ಟಗಳನ್ನು ಮೇಲೇರಿಸಿ, ತಮ್ಮ ವಿವರಗಳನ್ನು ಸೇರಿಸಿ ಪುಕ್ಕಟೆಯಾಗಿ ಬಯಲರಿಕೆ(Advertisement) ನೀಡುವ ಸವಲತ್ತು ಇರುತ್ತದೆ. ಆಸಕ್ತರು ನೇರವಾಗಿ ಕೊಳ್ಳುಗ ಇಲ್ಲವೇ ಮಾರುಗರೊಂದಿಗೆ ಮಾತುಕತೆ ನಡೆಸಿ ವ್ಯವಹರಿಸಿಕೊಂಡು ದಲ್ಲಾಳಿತನ, ಮದ್ಯವರ್ತಿಗಳ ಕಾಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ನೀವು ಬಳಸಿದ ಗಾಡಿಗಳನ್ನು ಮಳಿಗೆ ಇಲ್ಲವೇ ಈ-ಕಾಮರ್ಸ್ ತಾಣ ಎಲ್ಲಿಯಾದರೂ ಕೊಂಡು ಕೊಳ್ಳಿ ಆದರೆ ಕೊಳ್ಳುವಾಗ ಕೆಲವು ಎಚ್ಚರಿಕೆ ವಹಿಸಲೇಬೇಕು. ಬಳಸಿದ ಕಾರು ಕೊಳ್ಳುವ ಆಸಕ್ತರು ಈ ಕೆಳಗೆ ಪಟ್ಟಿ ಮಾಡಿದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿದರೆ ನಿರಾಳವಾಗಿರಬಹುದು.

  1. ಹಗಲಿನ ಹೊತ್ತಲ್ಲೇ ಗಾಡಿ ನೋಡಿಕೊಳ್ಳಿ:
    ಹಗಲು ಹೊತ್ತಿನಲ್ಲಿ ಬಂಡಿಯನ್ನು ಚೆನ್ನಾಗಿ ನೋಡುವುದು ಯಾವಾಗಲೂ ಒಳಿತು. ಕಾರಿನ ಒಳಮಯ್-ಹೊರಮಯ್‌ಗಳಲ್ಲಿ ಯಾವುದಾದರೂ ಕುಂದು ಕೊರತೆಗಳು ಇಲ್ಲವೇ ಬಣ್ಣ ಮಾಸಿರುವಿಕೆ, ಗೀರುಗಳು ಹಗಲಿನಲ್ಲಿ ಎದ್ದು ಕಾಣುತ್ತವೆ. ಅದಕ್ಕಾಗಿ, ಸಂಜೆ-ಇರುಳು ಹೊತ್ತಿಗಿಂತ ಹಗಲು ಹೊತ್ತಿನಲ್ಲಿ ಬಂಡಿಯ ಮೇಲೆ ಕಣ್ಣಾಡಿಸಿ.
  2. ನುರಿತ ಮೆಕ್ಯಾನಿಕ್ (Mechanic) ಜೊತೆಗಿರಲಿ:
    ಬಳಸಿದ ಗಾಡಿ ಕೊಳ್ಳುವ ಮುನ್ನ ಅದನ್ನು ಒರೆ ಹಚ್ಚಿ ನೋಡಲು ಹೋಗುತ್ತೇವೆ. ಬಂಡಿಗಳ ಬಗ್ಗೆ ನಾವು ಎಷ್ಟೇ ಅನುಭವಸ್ಥರಾಗಿದ್ದರೂ ಒಬ್ಬ ಒಳ್ಳೆಯ ಮೆಕ್ಯಾನಿಕ್‌ನನ್ನು ಸಂಗಡ ಕರೆದುಕೊಂಡು ಹೋಗುವುದು ಜಾಣತನವೆನಿಸುತ್ತದೆ. ಬಂಡಿಗಳಲ್ಲಿ ಉಂಟಾಗುವ ಸಮಸ್ಯೆಗಳು, ಕುಂದು ಕೊರತೆಗಳ ಬಗ್ಗೆ ಇವರಿಗೆ ಸಾಕಶ್ಟು ಅನು ಭವವಿರುತ್ತದೆ. ಅಲ್ಲದೇ ಇವರು ಚಿಕ್ಕ, ದೊಡ್ಡ ಬಗೆಬಗೆಯ ಕಾರುಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿರುತ್ತಾರೆ. ನಾವು ಕೊಳ್ಳ ಬಯಸುವ ಬಂಡಿಯ ಆಯಸ್ಸು ಇನ್ನೆಷ್ಟು ದಿನ ಬಂಡಿಯ ತಾಳಿಕೆ-ಬಾಳಿಕೆ ಹೇಗೆ ಎಂಬೆಲ್ಲ ವಿವರಗಳನ್ನು ಸುಳುವಾಗಿ ಪತ್ತೆ ಹಚ್ಚಿ ನಮಗೆ ಆಯ್ಕೆ ಮಾಡಲು ನೆರವಾಗುತ್ತಾರೆ. ಒಂದೊಳ್ಳೆಯ ಬಳಸಿದ ಗಾಡಿಯ ಒಡೆಯರಾಗಲು ನಂಬಿಗಸ್ತ ಮೆಕ್ಯಾನಿಕ್ ‌ ಒಬ್ಬರನ್ನು ಜೊತೆಗೆ ಕೊಂಡೊಯ್ಯಿರಿ.
  3. ಹೆಚ್ಚಿನ ನಂಬುತನ (Extended Warranty) ಸಿಗುತ್ತಿದ್ದರೆ ಬಳಸಿಕೊಳ್ಳಿ:
    ಹೆಚ್ಚಿನ ನಂಬುತನವುಳ್ಳ (Extended Warranty) ಗಾಡಿಗಳು ಸಿಕ್ಕರೆ ಒಳ್ಳೆಯದು. ಕೆಲವೊಮ್ಮೆ ಅಗ್ಗದ ಬೆಲೆಗೆ ಬಂಡಿಗೆ ಹೆಚ್ಚಿನ ನಂಬುತನ(Warranty) ನೀಡುವ ಸೌಲಭ್ಯ ಸಿಗುತ್ತವೆ. ಹೊಸ ಗಾಡಿಕೊಂಡಾಗ ಕೆಲವರು ಕೊಂಚ ಬೆಲೆತೆತ್ತು ಹೆಚ್ಚಿನ ನಂಬುತನ ಪಡೆಯುತ್ತಾರೆ. ಅದೇ ಬಂಡಿಯನ್ನು ಮರು-ಮಾರಬೇಕಾದಾಗ ಈ ನಂಬುತನ ಕೊಳ್ಳುಗರಿಗೆ ಸುಲಭವಾಗಿ ಸಿಗುತ್ತದೆ.
  4. ಓಡಿಸಿ ಒರೆಗೆ ಹಚ್ಚಲು (Test Drive) ಮರೆಯದಿರಿ:
    ಗಾಡಿಯ ಒಡೆಯ ನಿಮಗೆ ಎಷ್ಟೇ ಪರಿಚಿತನಾಗಿರಲಿ ಇಲ್ಲವೇ ಪ್ರಾಮಾಣಿಕನೆನಿಸಲಿ, ಕೊಳ್ಳುವ ಗಾಡಿಯನ್ನು ಓಡಿಸಿ ಒರೆಗೆ ಹಚ್ಚಿದ ನಂತರವೇ ಅದರ ಮಯ್ಯೊಳಿತಿನ ಬಗ್ಗೆ ನೀವು ಖಾತರಿ ಪಡಿಸಿಕೊಳ್ಳಿ. ಓಡಿಸಿ ಒರೆಗೆ ಹಚ್ಚುವಾಗ ಯಾರೊಂದಿಗೂ ಮಾತನಾಡದೇ, ಗಾಡಿಯಲ್ಲಿ ಹಾಡು ಕೇಳದೇ ಓಡಿಸಿಕೊಂಡು ಸುತ್ತಾಡಿ. ಯಾವುದೇ ಬೇಡದ ಸದ್ದು ಬಂಡಿಯಿಂದ ಹೊರಬರುತ್ತಿದೆಯೇ ಇಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಕಾರಿನಿಂದ ಹೊರಬರುವ ಬೇಡದ ಕರ್ಕಶ ಸದ್ದು ನಿಮಗೆ ಕೇಳದಿರಲೆಂದೇ ಕೆಲವರು ನಿಮಗೆ ಮಾತನಾಡಿಸುತ್ತ, ಹಾಡು ಕೇಳಿಸುತ್ತ ಮೋಸ ಮಾಡಬಹುದು. ಹೀಗಾಗದಂತೆ ಎಚ್ಚರವಹಿಸಿ. ಒರೆಗೆ ಹಚ್ಚಿ ಓಡಿಸುವಾಗ ಕಾರಿನಲ್ಲಿ ನಿಮ್ಮ ಕಯ್, ಕಾಲು ಚಾಚಲು ಸಾಕಶ್ಟು ಜಾಗವಿದೆಯೋ ಇಲ್ಲವೋ ಎಂಬುದನ್ನೂ ತಿಳಿದುಕೊಳ್ಳಿ.

5.ಓಟಳಕವನ್ನು (Odometer) ನಂಬಬೇಡಿ:
ಕಾರು ಎಷ್ಟು ಕಿಲೋಮೀಟರ್ ಓಡಿದೆ ಅಂದರೆ ಎಶ್ಟು ಹಳೆಯದಾಗಿದೆ, ಎಂಬುದನ್ನು ಅರಿಯಲು ಓಟಳಕ(Odometer) ದಾಖಲಿಸಿಕೊಂಡಿರುವ ಕಿಲೋಮೀಟರ್‌ಗಳನ್ನು ನೋಡುವುದು ವಾಡಿಕೆ. ಕಾರು ಎಷ್ಟು ಕಿಲೋಮೀಟರ್ ಸಾಗಿದೆ ಎನ್ನುವ ಮಾಹಿತಿಯನ್ನು ಇದು ನೀಡಿದರೂ ಈ ಓಟಳಕವನ್ನು ಸುಳುವಾಗಿ ತಿದ್ದಬಹುದಾಗಿದೆ. ಹೀಗಾಗಿ ಓಟಳಕ ತಿದ್ದಿ ಕಡಿಮೆ ಕಿಲೋಮೀಟರ್ ಓಡಿದೆ ಎಂದು ಮಾಹಿತಿ ತಿರುಚಿ ತೋರಿಸಿ ಮೋಸ ಮಾಡುವವರು ಉಂಟು. ಗಾಡಿಯ ಆರೋಗ್ಯದ ಬಗ್ಗೆ ತಿಳಿಯಲು ಓಟಳಕವೊಂದನ್ನೇ ನಂಬಬೇಡಿ. ಬಂಡಿಗೆ ಸಂಬಂಧಿಸಿದ ಕಡತ, ಹಾಳೆಗಳನ್ನು ಸರಿಯಾಗಿ ನೋಡಿ, ನೆರವುದಾಣಗಳಿಗೆ (Service Centre) ಬಂಡಿಯನ್ನು ಕೊಂಡೊಯ್ದ ವಿವರಗಳನ್ನು ತಿಳಿದು ಬಂಡಿಯ ಮಯ್ಯೊಳಿತನ ಲೆಕ್ಕ ಹಾಕಬಹುದು. ಅನುಮಾನಗಳು ಕಂಡುಬಂದರೆ ಮೆಕ್ಯಾನಿಕ್‌ನ ನೆರವು ಪಡೆಯಬೇಕು.

  1. ತುಕ್ಕು ತೇಪೆಗಳ ಬಗ್ಗೆ ಎಚ್ಚರ:
    ಬಳಸಿದ ಬಂಡಿ ಮಾರುಗರ‍್ಯಾರು ತಮ್ಮ ಬಂಡಿಗೆ ಬಡಿದಿರುವ ತುಕ್ಕು, ತೇಪೆಗಳ ಬಗ್ಗೆ ಹೇಳಿಕೊಳ್ಳಲು ಬಯಸುವುದಿಲ್ಲ. ಗಾಡಿಗೆ ಹಿಡಿದಿರುವ ತುಕ್ಕನ್ನು, ಬಣ್ಣ ಮಾಸಿರುವೆಡೆ ಕಳಪೆ ಮಟ್ಟದ ಬಣ್ಣ ಬಳಿದು ತೇಪೆ ಹಾಕಿದ ಜಾಗಗಳನ್ನು ಮರೆ ಮಾಚುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಬಂಡಿಯ ಮೇಲೆ ವಿವರವಾಗಿ ಕಣ್ಣಾಡಿಸುವುದರಲ್ಲೇ ಕೊಳ್ಳುಗನ ಜಾಣತನ ಅಡಗಿದೆ.
  2. ಹೊಸ ಬಿಡಿಭಾಗಗಳು:
    ಕಾರೇನೋ ಹಳತಾಗಿದೆ. ಆದರೆ ಅದರಲ್ಲಿ ಕೆಲವು ಹೊಸ ಭಾಗಗಳನ್ನು ಜೋಡಿಸಿರುತ್ತಾರೆ. ಗಾಡಿಯ ಒಡೆಯ/ಮಾರುಗನನ್ನು ಹೊಸ ಭಾಗಗಳೇನಾದರೂ ಜೋಡಿಸಲಾಗಿದೆಯೇ ಎಂದು ಕೇಳಿ, ಜೋಡಿಸಿದ್ದರೆ ಯಾಕೆ ಜೋಡಿಸಲಾಗಿದೆ? ಗಾಡಿಯ ಒಡೆಯ/ಮಾರುಗ ಗುದ್ದಾಟದಂತ ಅವಘಡಗಳನ್ನು ಮಾಡಿಕೊಂಡಿದ್ದರೆ? ಹೊಸ ಬಿಡಿಭಾಗಗಳು ಹಳೆಯದಾದ ಬಂಡಿಯೊಂದಿಗೆ ಸರಿಯಾಗಿ ಬೆರೆತು ತಕ್ಕ ಕೆಲಸ ಮಾಡುತ್ತಿವೆಯೇ ಎಂಬುದರ ಬಗ್ಗೆಯೂ ವಿಚಾರಿಸಿ. ಇವುಗಳೂ ಸರಿಯಾಗಿ ಬೆರೆತು ಕೊಂಡಿಲ್ಲದಿದ್ದರೆ ಮುಂದೆ ಕೆಟ್ಟು ನಿಲ್ಲಬಹುದು ಮತ್ತು ಇದನ್ನು ಸರಿಪಡಿಸುವ ಖರ್ಚು-ವೆಚ್ಚ ಕೊಳ್ಳುಗನ ಜೇಬಿಗೆ ಕತ್ತರಿ.
  3. ಮಿಂಚಿನ ಬಿಡಿಭಾಗಗಳು ಕೆಲಸ ಮಾಡುತ್ತಿವೆಯೇ?
    ಕಿಡಿಬೆಣೆ (Spark plug), ಮಿಂಚಿನ ಸರಿಗೆಗಳು (Electrical wiring) ಎಲ್ಲವೂ ಸರಿಯಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಲ್ಲದೇ ಬಂಡಿಯ ಅರಿವುಕಗಳು(Sensors), ಒರೆಸುಕಗಳ(Wipers) ಕೆಲಸದ ಬಗ್ಗೆ ಒಂದು ಒರೆ ನೋಟ ಬೀರಿ.
  4. ಗಾಡಿ ಸಾಲ:
    ಹೊಸ ಗಾಡಿಕೊಳ್ಳಲು ಕಾರು ಸಾಲ ಸಿಗುವುದು ನಮಲ್ಲಿ ಹಲವರಿಗೆ ಗೊತ್ತು. ಆದರೆ ಬಳಸಿದ ಗಾಡಿಗಳಿಗೂ ಸಾಲ ಸಿಗುತ್ತದೆ ಎನ್ನುವುದು ಕೆಲವರಿಗೆ ತಿಳಿದಿಲ್ಲ. ಹೌದು, ಬಳಸಿದ ಬಂಡಿಗಳಿಗೂ ಸಾಲದ ನೆರವು ಸಿಗುತ್ತದೆ. ಇದರ ಬಗ್ಗೆ ಬ್ಯಾಂಕು, ಹಣಕಾಸು ಸಂಘ ಸಂಸ್ಠೆಗಳಲ್ಲಿ ವಿಚಾರಿಸಬಹುದು. ಅಗತ್ಯವಿದ್ದರೆ ಇದರ ನೆರವು ಪಡೆದುಕೊಳ್ಳಬಹುದು.
  5. ಹೆಸರು ಬದಲಾವಣೆ (Transferable):
    ಗಾಡಿಗೆ ಸಂಬಂದಪಟ್ಟ ಮುಂಗಾಪು(Insurance), ಇತರೆ ಕಡತಗಳು(Files) ಸುಲಭವಾಗಿ ಕೊಳ್ಳುಗರ ಹೆಸರಿಗೆ ಬದಲಾವಣೆಯಾಗುವಂತಿರಲಿ(Transferable). ಗಾಡಿಗೆ ಈ ಹಿಂದೆ ಒಂದಕ್ಕಿಂತ ಹೆಚ್ಚಿನ ಯಜಮಾನರಿದ್ದಲ್ಲಿ ಎಲ್ಲವೂ ಸರಿಯಾಗಿ ಒಬ್ಬರಿಂದರೊಬ್ಬರಿಗೆ ಬದಲಾವಣೆಯಾಗಿದ್ದರೆ ಅದಕ್ಕೆ ಸಂಬಂದಿಸಿದ ಕಡತಗಳನ್ನು ಸರಿಯಾಗಿ ಓದಿಕೊಳ್ಳುವುದು ಒಳಿತು. ಬಂಡಿ ನೀವು ಕೊಳ್ಳುತ್ತಿದ್ದಂತೆ ಆದಷ್ಟು ಬೇಗ ನಿಮ್ಮ ಹೆಸರಿಗೆ ಅದನ್ನು ನೊಂದಾಯಿಸುವುದು ಅಗತ್ಯ.
  6. ರಿಯಾಯಿತಿ, ಅಗ್ಗದ ಬೆಲೆಯ ಆಮಿಷಗಳು:
    ಕೆಲವು ಗಾಡಿ ಮಾರುಗರು ತಮ್ಮ ಬಂಡಿಗೆ ಹೆಚ್ಚಿನ ರಿಯಾಯಿತಿ, ಅಗ್ಗದ ಬೆಲೆಯಲ್ಲಿ ಮಾರಲು ಕೆಲವು ಆಮಿಷಗಳನ್ನು ತೋರುವುದುಂಟು ಇವುಗಳಿಗೆ ಮಾರುಹೋಗಬೇಡಿ. ಹೆಚ್ಚು ಮಾರಾಟಗೊಳ್ಳದೇ ಸೋಲು ಕಂಡ ಕೆಲವು ಕಾರು ಮಾದರಿಗಳನ್ನು ಕೆಲವರು ಕೊಂಡಿರುತ್ತಾರೆ. ನಂತರ ಇವುಗಳನ್ನು ಮಾರಲು ಪರದಾಡುತ್ತ, ಇಂತ ಆಮಿಷಗಳನ್ನು ಒಡ್ಡುತ್ತಾರೆ. ಇಂತ ಮಾದರಿ ಕಾರುಗಳ ಬಿಡಿಭಾಗಗಳು ಮತ್ತು ಬಿಡಿಭಾಗ ಸರಿಪಡಿಸುವ ನುರಿತ ಮೆಕ್ಯಾನಿಕ್ ಸಿಗುವುದು ಬಲು ಕಷ್ಟ. ಇಂತ ಬಂಡಿಗಳಿಂದ, ಆಮಿಶಗಳಿಂದ ಆದಶ್ಟು ದೂರವಿರಿ.

ಕೊನೆಯದಾಗಿ ಹೇಳಬೇಕೆಂದರೆ, ಇತ್ತಿಚೀಗೆ ಸಾಕಷ್ಟು ಮಿಂದಾಣಗಳು ಬಳಸಿದ ಬಂಡಿಯನ್ನು ಆನ್ಲೈನ್(online) ಮೂಲಕವೇ ಮಾರತೊಡಗಿವೆ. ಈ ಮಿಂದಾಣಗಳು ಹಲವಾರು ಮಾಹಿತಿಗಳನ್ನು ಪುಕ್ಕಟೆಯಾಗಿ ಒದಗಿಸುತ್ತವೆ. ಈ ಮಾಹಿತಿಗಳನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಕಲೆಹಾಕಿ “ಬಳಸಿದ ಕಾರ”ನ್ನು ಕೊಳ್ಳಲು ಸಿದ್ಧವಾಗಿಟ್ಟುಕೊಳ್ಳಬಹುದು.

ಮಾಹಿತಿ ಮತ್ತು ತಿಟ್ಟ ಸೆಲೆ: Cartoq.com   , istockphoto.com

 

Bookmark the permalink.

Comments are closed.