ಗಾಳಿಯಿಂದ ಕುಡಿಯುವ ನೀರನ್ನು ಪಡೆಯಲೊಂದು ಚಳಕ

ಜಯತೀರ್ಥ ನಾಡಗೌಡ.

ಊಟ ಸಿಗದಿದ್ದರೂ ಮನುಷ್ಯ ಬದುಕಬಲ್ಲ. ಆದರೆ ಉಸಿರ್ಗಾಳಿ(Oxygen) ಮತ್ತು ಕುಡಿಯುವ ನೀರು ಇಲ್ಲದೇ ಹೋದರೆ ನಮ್ಮ ಬದುಕನ್ನು ಊಹಿಸಿಕೊಳ್ಳಲಾಗದು. ಈ ಜಗತ್ತಿನ 2/3 ರಷ್ಟು ನೀರಿನಿಂದಲೇ ತುಂಬಿದೆ, ಆದರೆ ಇದರಲ್ಲಿ ಕುಡಿಯಲು ತಕ್ಕುದಾದ ನೀರು ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಂತೂ ವಾತಾವರಣದ ಏರುಪೇರುಗಳಿಂದ ಚೊಕ್ಕವಾದ ಕುಡಿಯುವ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ಕುಡಿಯುವ ನೀರು ಪಡೆಯಲು ಇಂದಿನ ದಿನಗಳಲ್ಲೂ ಮಂದಿ ಹಲವಾರು ಮೈಲಿ ಸಾಗುವ ಪರಿಸ್ಥಿತಿ ಭಾರತದಲ್ಲಿದೆ.

ಆಫ್ರಿಕಾ ಖಂಡದ ಹಿಂದುಳಿದ ನಾಡುಗಳಲ್ಲೊಂದಾದ ಇಥಿಯೋಪಿಯಾ (Ethiopia) ಕೂಡ ಇದಕ್ಕೆ ಹೊರತಾಗಿಲ್ಲ. ಇಥಿಯೋಪಿಯಾ ನಾಡಿನ ಕೆಲವೆಡೆ ಒಳ್ಳೆಯ ನೀರು ಪಡೆಯಲು ಸುಮಾರು ಆರು ಗಂಟೆ ಅಲೆದಾಡಬೇಕಂತೆ. ಈ ನಾಡಿನಲ್ಲಿ ಕುಡಿಯುವ ನೀರನ್ನು ಹುಡುಕಿ ತರಲು ಮಕ್ಕಳು-ಮಂದಿ ಸೇರಿ ವರುಶಕ್ಕೆ ಸುಮಾರು 4 ಸಾವಿರ ಕೋಟಿಯಷ್ಟು ಗಂಟೆಗಳನ್ನು ಬಳಸುತ್ತಾರಂತೆ. ಇಷ್ಟಾದರೂ ಕುಡಿಯಲು ತಕ್ಕುದಾದ ನೀರು ಸಿಗುವುದು ಕಷ್ಟದ ಕೆಲಸ. ಹತ್ತಿರದಲ್ಲಿರುವ ಕೆರೆ, ಬಾವಿ, ಹೊಂಡದ ನೀರು, ಕೊಳಚೆ ಮತ್ತು ನಂಜಿನ ವೈರಸ್ ಗಳಿಂದ ಕೂಡಿರುತ್ತವೆ. ಪ್ರತಿ ವರುಶ ನೂರಾರು ಕೋಟಿ ಮಂದಿ ಆಫ್ರಿಕಾದಲ್ಲಿ ಕುಡಿಯುವ ನೀರಿನ ಕೊರತೆ ಅನುಭವಿಸುತ್ತಿದ್ದಾರೆ.

ಈ ವಿಷಯದ ಆಳವರಿತ ಹಾಲಿವುಡ್ ನ ಹೆಸರುವಾಸಿ ನಟ ಹಾಗು ವಾಟರ್ ಡಾಟ್ ಆರ‍್ಗ್ (water.org) ಕೂಟ ಹುಟ್ಟು ಹಾಕಿದ ಮ್ಯಾಟ್ ಡಮೋನ್ (Matt Damon), ಇವರೊಂದಿಗೆ ಮೈಕ್ರೊಸಾಫ್ಟ್ ಕೂಟದ ಬಿಲ್ಲ್ ಗೇಟ್ಸ್ (Bill Gates) ಒಂದಾಗಿ ಹೊಸ ಹಮ್ಮುಗೆಯೊಂದಕ್ಕೆ ಕೈ ಹಾಕಿದ್ದುಂಟು. ಕೊಳಚೆ ಹಾಗೂ ಬಳಸಿದ ನೀರನ್ನು ಮರಳಿ ಕುಡಿಯುವ ನೀರಾಗಿ ಮಾರ್ಪಡಿಸುವುದೇ ಈ ಹಮ್ಮುಗೆಯ ಕೆಲಸ. ಯಾವುದೇ ಲಾಭದ ಉದ್ದೇಶವಿರದ ಈ ಕೆಲಸಕ್ಕೆಂದೇ ಇಲ್ಲಿಯವರೆಗೆ ನೂರಾರು ಲಕ್ಷ ರೂಪಾಯಿಗಳ ವೆಚ್ಚ ಮಾಡಲಾಗುತ್ತಿದೆ. ಇಂತ ಬೆನ್ನುತಟ್ಟುವ ಕೆಲಸವೊಂದು ನಡೆಯುತ್ತಿದ್ದರೂ ಇದು ಪರಿಣಾಮಕಾರಿಯಾಗಿರಲಾರದು ಎಂಬುದು ಕೆಲವರ ವಾದ. ಈ ಚಳಕ ತೊಡಕಿನಿಂದ ಕೂಡಿದೆ, ಇಥಿಯೋಪಿಯಾದ ಹಳ್ಳಿಗರು ಇದನ್ನು ಬಳಸಿಕೊಳ್ಳುವುದು ಮತ್ತು ಇದು ಕೆಟ್ಟಾಗ, ಸರಿಪಡಿಸುವುದು ಸುಲಭವಲ್ಲವೆಂಬುದು ವಾದಿಸುವರ ಹೇಳಿಕೆ. ಈ ಹಮ್ಮುಗೆಯಲ್ಲಿ ಹಣದ ವೆಚ್ಚ ಹೆಚ್ಚಿದ್ದು ಮುಂಬೊತ್ತಿನ (future) ದಿನಗಳಲ್ಲಿ ಇದನ್ನು ಸರಿದೂಗಿಸಿಕೊಂಡು ಹೋಗುವದಕ್ಕೂ ಹೆಚ್ಚಿನ ಹಣ ತಗಲುತ್ತದೆಂದು ಇವರು ಹೇಳಿದ್ದಾರೆ.

ಕುಡಿಯುವ ನೀರನ್ನು ಚೊಕ್ಕಗೊಳಿಸಲು ಹಲವರು ಹರಸಾಹಸ ಪಡುತ್ತಿರುವ ಈ ಹೊತ್ತಿನಲ್ಲೇ ಅರ್ಟುರೋ ವಿಟ್ಟೋರಿ (Arturo Vittori) ಎಂಬ ಕೈಗಾರಿಕೆ ಈಡುಗಾರ (Industrial Designer) ಮತ್ತು ಅವರ ಜೊತೆ ಕೆಲಸಗಾರ ಆಂಡ್ರಿಯಾಸ್ ವೊಗ್ಲರ್ (Andreas Vogler) ಇಬ್ಬರೂ ಸೇರಿ ಸುಲಭ, ಸರಳ ಮತ್ತು ಅಗ್ಗದ ಮಾಡುಗೆಯೊಂದನ್ನು (product) ಮುಂದಿಟ್ಟಿದ್ದಾರೆ. ಈ ಉತ್ಪನ್ನದ ಹೆಸರು ವಾರ್ಕಾ ವಾಟರ್. ಬೀಸುವ ಗಾಳಿಯಲ್ಲಿರುವ ನೀರನ್ನು ಹಿಡಿದು ಅದನ್ನೇ ಕುಡಿಯುವ ನೀರಾಗಿ ಮಾರ್ಪಡಿಸುವ ಚಳಕ. ವಾರ್ಕಾ ವಾಟರ್ (Warka Water) ಅನ್ನು ತೊಡಕಿಲ್ಲದೆ ಸುಲಭವಾಗಿ ಜೋಡಿಸಬಹುದಾಗಿದ್ದು ಇದರ ಬೆಲೆಯು ಅಗ್ಗವಾಗಿದೆ.

ವಾರ್ಕಾ ವಾಟರ್ ಮೂವತ್ತು ಅಡಿ ಉದ್ದವಾಗಿದ್ದು ಹೂದಾನಿಯ ಆಕಾರದ ಗೋಪುರವೆನ್ನಬಹುದು. ಇಥಿಯೋಪಿಯಾದ ಪ್ರಮುಖ ಮರವೊಂದರಿಂದ ವಾರ್ಕಾ ಎನ್ನುವ ಹೆಸರು ಮೂಡಿದೆ. ವಾರ್ಕಾ ವಾಟರ್ ಗೋಪುರದ ಹೊರಮೈ ಇಲಾಸ್ಟಿಕ್ ಕೊಳವೆಯಂತ ವಸ್ತುವಿನಿಂದ ತಯಾರಿಸಲಾಗಿದೆ. ಇದರಿಂದ ತೂಕವು ಹಗುರವಾಗಿರುತ್ತದೆ. ಈ ಕೊಳವೆಗಳು ಒಂದಕ್ಕೊಂದು ಬದಿಯಲ್ಲಿ ಗಟ್ಟಿಯಾಗಿ ಹೆಣೆಯಲ್ಪಟ್ಟಿರಿವುದರಿಂದ ಜೋರಾಗಿ ಬೀಸುವ ಗಾಳಿಗೆ ಮಯ್ಯೊಡ್ಡಿದಾಗಲೂ, ಗಟ್ಟಿಯಾಗಿ ನಿಂತು ಗಾಳಿಯು ತಮ್ಮ ಮೂಲಕ ಹಾಯ್ದು ಹೋಗುವಂತೆ ನೋಡಿಕೊಳ್ಳುತ್ತವೆ. ಇದರೊಳಗೆ ನೈಲಾನ್ ಬಲೆಯೊಂದನ್ನು ತೂಗು ಹಾಕಲಾಗಿದ್ದು ಇದು ಚೀನಿಯರ ದೊಡ್ಡ ಕೈಬೆಳಕಿನಂತೆ (Lantern) ಕಾಣಿಸುತ್ತದೆ. ಜೋರು ಗಾಳಿ ಇದರಲ್ಲಿ ಹಾಯ್ದು ಹೋದಾಗ ಗಾಳಿಯಲ್ಲಿನ ನೀರಿನ ಇಬ್ಬನಿಗಳು ಕೂಡಿಡಲ್ಪಡುತ್ತವೆ. ಗಾಳಿಯು ಇಂಗುತ್ತಲೆ ಈ ಇಬ್ಬನಿಯ ಹನಿಗಳು ನೀರಾಗಿ ಕೆಳ ಭಾಗಕ್ಕೆ ಹರಿಯುತ್ತ ಬುಗುಣಿಯಲ್ಲಿ ಬಂದು ಸೇರುತ್ತವೆ. ಈ ಬುಗುಣಿಗೆ ಕೊಳವೆ ಜೋಡಿಸಿ ನಲ್ಲಿಯಂತೆ ನೀರು ಪಡೆಯಬಹುದಾಗಿರುತ್ತದೆ.

ವಿಟ್ಟೋರಿಯವರ ಈ ಅರಕೆ ಹೊಸದೇನು ಅಲ್ಲ, ಈ ಹಿಂದೆ ಪ್ರಖ್ಯಾತ ಎಮ್.ಐ.ಟಿ (MIT) ಕಲಿಕೆವೀಡಿನ ಓದುಗನೊಬ್ಬ ಇದನ್ನೇ ಹೋಲುವ ಎಣಿಕೆಯೊಂದನ್ನು(Concept)  ಬೆಳವಣಿಗೆಗೊಳಿಸಿದ್ದ. ಆದರೆ ಈ ಹಿಂದೆ ಬೆಳವಣಿಗೆ ಹೊಂದಿದ ಎಲ್ಲ ಎಣಿಕೆಗಳಿಂತ ವಿಟ್ಟೋರಿಯವರ ಮಾದರಿಯು ಅಗ್ಗದ ಬೆಲೆಯಲ್ಲಿ ಹೆಚ್ಚು ನೀರನ್ನು ನೀಡುವಂತದ್ದಾಗಿರುವುದರಿಂದ ಜಗತ್ತಿನೆಲ್ಲೆಡೆ ಸುದ್ದಿ ಮಾಡುತ್ತಿದೆ.

ಇಥಿಯೋಪಿಯಾದಂತ ನಾಡುಗಳಲ್ಲಿ ಮಂದಿಗೆ ಬೇಕಾಗುವ ಸೌಕರ್ಯಗಳ ಕೊರತೆಯಿದೆ. ಕೊಳವೆ ಬಾವಿಯನ್ನು ಮಾಡಿಸಲು ಸಾವಿರಾರು ಅಡಿ ಭೂಮಿಯನ್ನು ಕೊರೆಯಬೇಕು. ನಂತರ ಭೂಮಿಯಿಂದ ನೀರನ್ನು ಮೇಲೆತ್ತಲು ಒತ್ತುಕಗಳನ್ನು(Pump) ಬಳಸಬೇಕಾಗುತ್ತದೆ. ನೆನಪಿರಲಿ ಈ ಒತ್ತುಕಗಳಿಗೆ ಮಿಂಚಿನ ಕಸುವಿನ(Electricity) ಅಗತ್ಯವಿರುತ್ತದೆ. ಇಷ್ಟೆಲ್ಲ ಮಾಡಲು ಸಾಕಷ್ಟು ದುಡ್ಡನ್ನು ಹೂಡಿಕೆ ಮಾಡಬೇಕು. ಇದಕ್ಕೆ ವಾರ್ಕಾ ವಾಟರ್ ಪರಿಹಾರವಾಗಲಿದೆ ಎಂಬುದು ವಿಟ್ಟೋರಿಯವರ ಅಂಬೋಣ.

ವಾರ್ಕಾ ಗೋಪುರಗಳ ಒರೆಗೆ ಹಚ್ಚುವ(Testing) ಕೆಲಸ ನಡೆಯುತ್ತಿದ್ದು, ಇದು ದಿನವೊಂದಕ್ಕೆ 25 ಗ್ಯಾಲನ್ ಅಂದರೆ ಸುಮಾರು 95 ಲೀಟರ್ ಗಳಶ್ಟು ನೀರನ್ನು ಒದಗಿಸಬಲ್ಲದು. ಬಿಸುಪಿನ ಏರುಪೇರು ಹೆಚ್ಚಿರುವ ಮರಳುಗಾಡಿನಲ್ಲೂ ಇವುಗಳ ಕೆಲಸ ಪರಿಣಾಮಕಾರಿಯಾಗಿರುವ ಸುದ್ದಿ ವಿಟ್ಟೋರಿಯವರ ಹುರುಪು ಹೆಚ್ಚಾಗಿಸಿದೆ. ಈ ಗೋಪುರಗಳ ಕಟ್ಟಲು ಸುಲಭವಾಗಿ ಅಳಿದುಹೋಗಬಲ್ಲ ಸಾಮಗ್ರಿ ಬಳಸಲಾಗಿದೆ ಇದರಿಂದ ವಾತಾವರಣಕ್ಕೂ ಯಾವುದೇ ತೊಂದರೆಯುಂಟಾಗುವುದಿಲ್ಲ. ಅಲ್ಲದೇ ಸ್ಥಳೀಯರಿಗೆ ಇದರ ಬಳಕೆ, ಜೋಡಿಸುವಿಕೆ ಮತ್ತು ಸರಿದೂಗಿಸುವಿಕೆಯ ಬಗ್ಗೆ ಅರಿವು ಮಾಡಿಕೊಟ್ಟರೆ ಸುಲಭವಾಗಿ ಕಾಯ್ದುಕೊಂಡು ಹೋಗಬಹುದಂತೆ. ಇದಕ್ಕೆಂದೇ ವಿಶೇಷ ಪಳಗಿದ ಕೆಲಸಗಾರರು ಬೇಕಿಲ್ಲ.

ವಾರ್ಕಾ ಗೋಪುರವೊಂದನ್ನು ಆಣಿಗೊಳಿಸಿ ಜೋಡಿಸಲು 500 ಡಾಲರ್ ಹಣ ಸಾಕಂತೆ. ಬಿಲ್ ಗೇಟ್ಸ್, ಮ್ಯಾಟ್ ಡಮೋನ್ ಹಮ್ಮುಗೆ ಬಳಸುತ್ತಿರುವ ಕೊಳಚೆ ನೀರು ಚೊಕ್ಕಗೊಳಿಸುವ ಚಳಕಕ್ಕಿಂತ ಮುಕ್ಕಾಲು ಭಾಗ ಕಡಿಮೆ (ಇದರ ಬೆಲೆ ಸುಮಾರು 2200 ಡಾಲರ್ ). ಹೆಚ್ಚಿನ ಸಂಖ್ಯೆಯಲ್ಲಿ ಅಣಿಗೊಳಿಸಿದರೆ ಬೆಲೆಯು ಇನ್ನೂ ಅಗ್ಗವಾಗಿರಲಿದೆ ಎಂದು ಹೇಳುತ್ತಾರೆ ವಿಟ್ಟೋರಿ. ಮುಂದಿನ ದಿನಗಳಲ್ಲಿ ವಾರ್ಕಾ ವಾಟರ್ ಗೋಪುರಗಳನ್ನು ಇಥಿಯೋಪಿಯಾದಲ್ಲಿ ನೆಡಲು ತಯಾರಿ ನಡೆಸಿರುವ ವಿಟ್ಟೋರಿಯವರು ಇದಕ್ಕೆ ಬಂಡವಾಳ ಹೂಡಿಕೆದಾರರ ಹುಡುಕುವ ಕೆಲಸದಲ್ಲಿದ್ದಾರೆ.

ವಿಟ್ಟೋರಿಯವರು ಹೇಳುವ ಪ್ರಕಾರ “ಚೊಕ್ಕ ಕುಡಿಯುವ ನೀರನ್ನು ಒದಗಿಸುವುದಷ್ಟೇ ಈ ಹಮ್ಮುಗೆಯ ಉದ್ದೇಶವಲ್ಲ, ಕುಡಿಯುವ ನೀರು ಹೊತ್ತು ತರಲು ಇಥಿಯೋಪಿಯಾ ಮಕ್ಕಳು ಪೋಲು ಮಾಡುತ್ತಿರುವ ಹೊತ್ತನ್ನು ಇದು ಅಳಿಸಿಹಾಕಬಲ್ಲದು. ಈ ಹೊತ್ತನ್ನು ಕಲಿಕೆಯಂತ ಇತರೆ ಕೆಲಸಗಳಲ್ಲಿ ತೊಡಗಿಸಿದರೆ ಮಕ್ಕಳ ಮುಂಬೊತ್ತು ಬೆಳಗಲಿದೆ”. ಇಂತ ಸಾಮಾಜಿಕ ಕಳಕಳಿಯ ಅರಕೆಗಳು ಜಗತ್ತಿನಲ್ಲಿ ಇಮ್ಮಡಿಗೊಳ್ಳಲಿ, ವಿಟ್ಟೋರಿಯವರ ಹಮ್ಮುಗೆಗೆ ಒಳ್ಳೆಯದಾಗಲಿ.

 

Bookmark the permalink.

Comments are closed.