ಏನಿದು ಕ್ಲೌಡ್?

ಇತ್ತೀಚಿನ ದಿನಗಳಲ್ಲಿ, ಕಂಪ್ಯೂಟರ್ ಚಳಕದ ಕ್ಷೇತ್ರದಲ್ಲಿ ‘ಕ್ಲೌಡ್’ ಎಂಬುದರ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ‘ಕ್ಲೌಡ್’, ಕ್ಲೌಡ್ ಕಂಪ್ಯೂಟಿಂಗ್’ ಎಂಬ ಪದಗಳು ಆಗಿಂದಾಗ್ಗೆ ನಮ್ಮ ಕಿವಿ ಮೇಲೆ ಬೀಳುತ್ತಲೇ ಇರುತ್ತವೆ. ಕಂಪ್ಯೂಟರಿಗೂ, ಬಾನಲ್ಲಿ ತೇಲಿ ಹೋಗುವ ಕ್ಲೌಡ್, ಅಂದರೆ ಮೋಡಕ್ಕೂ ಏನು ಸಂಬಂಧ? ಇದೇನು ಕಂಪ್ಯೂಟರ್ ಗಳನ್ನು ಮೋಡಗಳೊಂದಿಗೆ ಹೊಂದಿಸುವ ಒಂದು ಚಳಕವೇ? ‘ಕ್ಲೌಡ್ ಸ್ಟೋರೇಜ್’ ಎಂಬ ಪದವನ್ನೂ ನೀವು ಕೇಳಿರಬಹುದು. ಕನ್ನಡಕ್ಕೆ ಇದನ್ನು ನೇರವಾಗಿ ಅನುವಾದಿಸಿದರೆ ‘ಮೋಡದಲ್ಲಿ ಕೂಡಿಸಿಡುವುದು’ ಎಂಬ ಅರ್ಥ ಬರುತ್ತದೆ. ನಮ್ಮ ಡೇಟಾ ಎಲ್ಲ ಮೋಡದಲ್ಲಿ ಕೂಡಿಸಿಡುವುದಾದರೆ, ಮಳೆ ಹುಯ್ದು ಮೋಡ ಕರಗಿದರೆ ನಾವು ಉಳಿಸಿಟ್ಟ ಡೇಟಾದ ಗತಿಯೇನು!?

toon

ಗಾಬರಿಯಾಗಬೇಡಿ! ನೀವು ‘ಮೋಡ’ದಲ್ಲಿ ಚಿತ್ರಗಳು, ವಿಡಿಯೋಗಳು ಅಥವಾ ಇನ್ನೇನಾದರೂ ಡೇಟಾ ಉಳಿಸಿದ್ದರೆ ಮಳೆ ಬಂದಾಗ ಅದು ಕರಗಿ ಹೋಗುವುದಿಲ್ಲ. ಅಥವಾ ಗಾಳಿ ಬೀಸಿ ಎಲ್ಲೋ ತೇಲಿ ಹೋಗಿ ಕಳೆದು ಹೋಗುವುದಿಲ್ಲ. ಏಕೆಂದರೆ ಬಾನಲ್ಲಿ ತೇಲುವ ಆ ಮೋಡಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವೂ ಇಲ್ಲ. ಇದು ಒಂದು ಚಳಕ(technology)ಕ್ಕೆ ನೀಡಿರುವ ಹೆಸರು, ಅಷ್ಟೆ! ಹಾಗಿದ್ದರೆ, ಈ ಚಳಕದ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ.

ಹಿನ್ನೆಲೆ

ಈಗ ಒಂದು ಮಿಂದಾಣ ಅಥವಾ ವೆಬ್‌ಸೈಟ್ ನಡೆಸುವ ಉದಾಹರಣೆಯನ್ನು ತೆಗೆದುಕೊಳ್ಳೋಣ. ನಮ್ಮ ಮಿಂದಾಣಕ್ಕೆ ಬಂದು, ನೋಡಿ ಅದನ್ನು ಬಳಸುವವರು 20 ಮಂದಿ ಇದ್ದಾರೆ ಎಂದುಕೊಳ್ಳೋಣ. ನಿಮಗೆಲ್ಲ ತಿಳಿದಂತೆ ಮಿಂದಾಣವನ್ನು ನಡೆಸಲು ಒಂದು ಸರ್ವರ್ ಬೇಕಾಗುತ್ತದೆ. ನಮ್ಮ ಅನುಕೂಲಕ್ಕೆ ಬೇಕಾದಂತೆ ಇರುವ ಪ್ರೊಸೆಸರ್ ಶಕ್ತಿ, ನೆನಪಿನ ಶಕ್ತಿ (ಮೆಮೊರಿ), ಮತ್ತು ಕೂಡಿಡುವ ಶಕ್ತಿ (storage capacity) ಇರುವ ಸರ್ವರ್ ಮಶೀನನ್ನು ಕೊಂಡು, ಅದರಲ್ಲಿ ನಮ್ಮ ಮಿಂದಾಣವನ್ನು ನಡೆಸಲು ಬೇಕಾಗುವ ಎಲ್ಲ ಸಾಫ್ಟ್‌ವೇ‌ರ್‌ಗಳನ್ನು ನೆಟ್ಟು,  ಆ ಮೂಲಕ ನಡುಬಲೆಯಲ್ಲಿ ಅಂದರೆ  ಇಂಟರ್ನೆಟ್‌ನಲ್ಲಿ ನಮ್ಮ ಮಿಂದಾಣವನ್ನು ಒದಗಿಸುತ್ತೇವೆ.

server(1)
ಒಂದು ದಿನ ನಮ್ಮ ಮಿಂದಾಣದ ಬಳಸುಗರು 40 ಮಂದಿ ಆದರು ಎಂದಿಟ್ಟುಕೊಳ್ಳೋಣ. ಹಿಂದೆ, ಕೆಲವೇ ಸೆಕೆಂಡುಗಳಲ್ಲಿ ಲೋಡ್ ಆಗುತ್ತಿದ್ದ ಮಿಂದಾಣದ ಪುಟವು ಈಗ ತುಂಬಿಕೊಳ್ಳಲು ಹಲವು ಸೆಕೆಂಡುಗಳೇ ಬೇಕಾಗಬಹುದು. ಇದಕ್ಕೆ ಕಾರಣ ಇಷ್ಟೇ: 20 ಮಂದಿಗಾಗಿ ನಾವು ಕೊಂಡ ಸರ್ವರ್ ಈಗ 40 ಮಂದಿಗೆ ಸೇವೆಗಳನ್ನು ನೀಡಲು ಹೆಣಗಾಡುತ್ತಿದೆ. 40 ಮಂದಿಗೆ ಸೇವೆ ನೀಡುವ ಶಕ್ತಿ ಅದಕ್ಕಿಲ್ಲ.

ಹಾಗಾಗಿ, ಅದರ ಪ್ರೊಸೆಸರ್ ಶಕ್ತಿ, ನೆನಪು ಮತ್ತು ಅಗತ್ಯ ಬಿದ್ದರೆ ಕೂಡಿಡುವ ಶಕ್ತಿಯನ್ನೂ ಹೆಚ್ಚಿಸಬೇಕಾಗುತ್ತದೆ. ಇಲ್ಲದಿದ್ದರೆ, ಇದೇ ರೀತಿಯ ಇನ್ನೊಂದು ಸರ್ವರ್ ಮಶೀನನ್ನು ತಂದಿಟ್ಟು ಸೇವೆ ಒದಗಿಸುವ ಹೊರೆಯನ್ನು ಸಮನಾಗಿ ಎರಡೂ ಮಶೀನುಗಳ ನಡುವೆ ಹಂಚಬೇಕಾಗುತ್ತದೆ.

ಈ ರೀತಿಯಲ್ಲಿ ಹೊರೆಯನ್ನು ನಿಬಾಯಿಸುವುದಲ್ಲದೆ ಈ ಮಶೀನುಗಳನ್ನು ಕಾಪಾಡಿಕೊಳ್ಳುವುದೂ ನಮ್ಮದೇ ಹೊಣೆಯಾಗುತ್ತದೆ. ಡಿಸ್ಕ್ ಕೆಟ್ಟು ಹೋಯಿತು, ಇಲ್ಲವೇ ಪ್ರೊಸೆಸರ್ ತೊಂದರೆಯಾಯಿತು ಎಂದರೆ, ಈ ತೊಂದರೆಗಳನ್ನು ಅರಿತು ಕೂಡಲೇ ಬಗೆಹರಿಸಬೇಕಾಗುತ್ತದೆ. ಅಲ್ಲದೆ, ಮಶೀನುಗಳನ್ನಿಡಲು ಬೇಕಾಗುವ ಸರ್ವರ್ ಕೋಣೆಗಳು, ಅಲ್ಲಿ ಸರಿಯಾದ ಕಾವಳತೆ (temperature) ಕಾಪಾಡಿಕೊಳ್ಳುವುದು, ಕಡಿತವಾಗದಂತೆ ವಿದ್ಯುತ್ತನ್ನು ಒದಗಿಸುವುದು, ನಡುಬಲೆಯೊಂದಿಗಿನ ಸಂಪರ್ಕವನ್ನು ಕಾಯ್ದುಕೊಳ್ಳುವುದು – ಹೀಗೆ ಹಲವು ಹೊಣೆಗಳನ್ನು, ಕೆಲಸಗಳನ್ನು ನೆರವೇರಿಸುತ್ತಲೇ ಇರಬೇಕಾಗುತ್ತದೆ.

ಇವು ಯಾವುವೂ ಸುಲಭದ ಕೆಲಸಗಳಲ್ಲ! ಯಾವುದೇ ಸಾಫ್ಟ್‌ವೇರ್ ಸೇವೆ ಒದಗಿಸುವಲ್ಲಿ, ಆ ಸಾಫ್ಟ್‌ವೇರ್ ಕಟ್ಟುವುದರಷ್ಟೇ ದೊಡ್ಡ ಪ್ರಮಾಣದ ಕೆಲಸ, ಅದು ಓಡುವ ಅಡಿಗಟ್ಟನ್ನು ಕಟ್ಟಿ ಕಾಪಾಡಿಕೊಳ್ಳುವುದರಲ್ಲಿ ಇರುತ್ತದೆ. ಇದು ಒಬ್ಬರಿಗೆ ಇಲ್ಲವೇ ಇಬ್ಬರಿಗೆ ಇರುವ ಸಮಸ್ಯೆ ಅಲ್ಲ. ಸಾಫ್ಟ್‌ವೇರ್ ಸೇವೆ ಕೊಡುವ ಎಲ್ಲರಿಗೂ ಇರುವ ಸಮಸ್ಯೆಯೇ. ಹಾಗಾದರೆ ಸಾಫ್ಟ್‌ವೇರ್ ಓಡಲು ಬೇಕಾಗುವ ಅಡಿಗಟ್ಟು, ಅಂದರೆ ಪ್ರೊಸೆಸರ್ ಶಕ್ತಿ, ನೆನಪು, ಮುಂತಾದ ಎಲ್ಲ ಅನುವುಗಳು (resources) ಒಂದು ಸೇವೆಯ ರೀತಿಯಲ್ಲಿ ಸಿಕ್ಕರೆ ಹೇಗೆ?

ಸೇವೆಯ ರೀತಿಯಲ್ಲಿ ಅನುವುಗಳನ್ನು ಒದಗಿಸುವುದು

ಹೌದು, ಇದು ಸಾಧ್ಯ. ಪ್ರೊಸೆಸರ್ ಶಕ್ತಿ, ನೆನಪು ಮುಂತಾದ ಅನುವುಗಳನ್ನು ಸೇವೆಯ ಮಾದರಿಯಲ್ಲಿ ಒದಗಿಸಬಹುದು. ಹೀಗೆ ಒದಗಿಸುವ ಕಂಪನಿಗಳು ತಮ್ಮದೇ ಆದ ಡೇಟಾ ಸೆಂಟರ್‌ಗಳನ್ನು ಹೊಂದಿರುತ್ತವೆ. ಇಲ್ಲಿ ದೊಡ್ಡ ಮಟ್ಟದಲ್ಲಿ ಅನುವುಗಳನ್ನು ಇರಿಸಲಾಗಿರುತ್ತದೆ. ಇದರ ಸೇವೆಯನ್ನು ಬಳಸಲು ಬಯಸುವವರು ತಮಗೆ ಯಾವ ಯಾವ ಅನುವುಗಳು ಎಷ್ಟು ಎಷ್ಟು ಪ್ರಮಾಣದಲ್ಲಿ ಬೇಕು ಎಂದು ತಿಳಿಸಿ ಸೇವೆಯನ್ನು ಕೋರಬೇಕಾಗುತ್ತದೆ. ಅವರು ಕೇಳಿದಷ್ಟು ಪಾಲಿನ ಅನುವುಗಳನ್ನು ಅವರಿಗೆ ಮೀಸಲಿಡಲಾಗುತ್ತದೆ. ಅವರು ಅಲ್ಲಿ ತಮ್ಮ ಮಿಂದಾಣ ಅಥವಾ ಬೇರೆ ಯಾವುದೇ ಸಾಫ್ಟ್‌ವೇ‌ರ್‌ ಸೇವೆಯನ್ನು ನೆಟ್ಟು ನಡೆಸಬಹುದು.

cloud

ಬಳಸುಗರು ಹೆಚ್ಚಾದರೆ ಅಥವಾ ಹೊರೆ ಹೆಚ್ಚಾದರೆ, ಹೆಚ್ಚು ಅನುವುಗಳು ಬೇಕೆಂದು ಕೋರಬಹುದು. ಕೂಡಲೇ ಅವುಗಳನ್ನು ಒದಗಿಸಲಾಗುತ್ತದೆ. ಅಲ್ಲದೆ, ಇದು ಯಾವುದನ್ನೂ ಕಾಪಾಡಿಕೊಂಡು ನಡೆಸುವ ಹೊಣೆಗಾರಿಕೆ ನಮಗೆ ಇರುವುದಿಲ್ಲ. ಆ ಹೊಣೆಗಾರಿಕೆ ಈ ಅನುವುಗಳನ್ನು ಸೇವೆಯಾಗಿ ನೀಡುವ ಕಂಪನಿಯ ಮೇಲೆ ಇರುತ್ತದೆ. ಹೀಗೆ ಕೋರಿದಂತೆ ಕಂಪ್ಯೂಟಿಂಗ್ ಅನುವುಗಳನ್ನು ಇಲ್ಲವೇ ಸೇವೆಗಳನ್ನು ಒದಗಿಸುವ ಅಡಿಗಟ್ಟಿಗೆ ‘ಕ್ಲೌಡ್’ ಎನ್ನುತ್ತಾರೆ.

ಒಂದು ಹೋಲಿಕೆ

ಇದಕ್ಕೆ ಒಂದು ಉದಾಹರಣೆಯನ್ನು ಕೊಡಬಹುದು. ನಮ್ಮ ಮನೆಗೆ ಬೇಕಾದ ಮಿಂಚನ್ನು (electricity) ಮನೆಯಲ್ಲೇ ಜನರೇಟರ್ ಇಲ್ಲವೇ ಡೈನಮೊ ಮೂಲಕ ತಯಾರಿಸಿಕೊಳ್ಳಬಹುದು. ಆದರೆ ಇದಕ್ಕೆ ಬೇಕಾದ ಜನರೇಟರನ್ನು ನೀವೇ ಕೊಂಡು, ನಿಮ್ಮ ಮನೆಯ ಮಿಂಚು ತಂತಿಗಳಿಗೆ ನೀವೇ ಸಿಲುಕಿಸಿಕೊಳ್ಳಬೇಕು. 24 ಗಂಟೆ ಜನರೇಟರ್ ನಿಲ್ಲದಂತೆ ಓಡಿಸುವ ಹೊಣೆಗಾರಿಕೆ ನಿಮ್ಮದೇ ಆಗಿರುತ್ತದೆ. ಅದಕ್ಕೆ ಬೇಕಾದ ಡೀಸೆಲ್ ಏರ್ಪಾಡನ್ನೂ ನೀವೇ ಮಾಡಬೇಕಾಗುತ್ತದೆ. ಕೆಟ್ಟು ಹೋದರೆ ಅದರ ರಿಪೇರಿಯೂ ನೀವೇ ಮಾಡಿಸಬೇಕಾಗುತ್ತದೆ. ಅದು ಸರಿಹೋಗುವ ವರೆಗೆ ಮಿಂಚು ಕಡಿತವಾಗದಂತೆ ನೋಡಿಕೊಳ್ಳಬೇಕೆಂದರೆ ಮತ್ತೊಂದು ಜನರೇಟರ್ ಕೂಡ ಬೇಕಾದೀತು. ಅಲ್ಲದೆ, ಹೀಗೆ ಸಣ್ಣ ಪ್ರಮಾಣದಲ್ಲಿ ಮಿಂಚು ತಯಾರಿಸುವುದಕ್ಕೆ ಹೆಚ್ಚಿನ ವೆಚ್ಚವೂ ಆಗುತ್ತದೆ.

ಈ ಎಲ್ಲ ಸಮಸ್ಯೆಗಳಿರುವ ಕಾರಣ ಮಿಂಚನ್ನು ನಾವು ಮನೆಯಲ್ಲೇ ತಯಾರಿಸುವ ಬದಲು ಒಂದು ಮಿಂಚು ಕಂಪನಿಯ ಮೂಲಕ ಮಿಂಚು ಒದಗಿಸುವ ಸೇವೆಯನ್ನು ಪಡೆದುಕೊಳ್ಳುತ್ತೇವೆ. ಕೋಟ್ಯಂತರ ಮಂದಿ ಈ ಸೇವೆಯನ್ನು ಪಡೆದುಕೊಳ್ಳುವುದರಿಂದ, ಮಿಂಚು ಕಂಪನಿಗಳು ಒಂದೆಡೆ ಮಿಂಚು ತಯಾರಿಸಿ, ಅದನ್ನು ಒದಗಿಸಲು ಬೇಕಾಗುವ ಅಡಿಗಟ್ಟನ್ನು ಕಟ್ಟಿ, ಕಡಿಮೆ ವೆಚ್ಚದಲ್ಲಿ ಮನೆ ಮನೆಗೆ ಒದಗಿಸಬಹುದು.

ಕ್ಲೌಡ್ ಅಥವಾ ಮೋಡ ಎಂಬುದು ಕೂಡ ಇಂತಹುದೇ ಒಂದು ಏರ್ಪಾಟು. ಮಿಂಚು ಸರಬರಾಜನ್ನು ಒಂದು ಸೇವೆಯಾಗಿ ನೀಡುವಂತೆ, ಕಂಪ್ಯೂಟಿಂಗ್ ಅನುವುಗಳನ್ನು ಕೋರಿಕೆಯ ಮೇರೆಗೆ ಒಂದು ಸೇವೆಯಾಗಿ ನೀಡಬಲ್ಲ ಒಂದು ಅಡಿಕಟ್ಟು.

ಕ್ಲೌಡ್ ಅಥವಾ ಮೋಡದ ಉಪಯೋಗಗಳು

ಮೋಡದ ಚಳಕದಿಂದ (cloud technology) ಹಲವಾರು ಅನುಕೂಲಗಳಿವೆ:

  • ಅಡಿಕಟ್ಟನ್ನು (infrastructure) ಬೇಕಾದ ಪ್ರಮಾಣದಲ್ಲಿ ಕೊಳ್ಳಬಹುದು. ಹೆಚ್ಚು ಬೇಕಾದಾಗ ಕೂಡಲೇ ಹೆಚ್ಚಿನ ಪ್ರಮಾಣವನ್ನು ಕೋರಬಹುದು. ಬೇಡದಿದ್ದಾಗ ಬಿಟ್ಟುಕೊಡಬಹುದು.
  • ಅಡಿಕಟ್ಟನ್ನು ಕಾಪಾಡಿಕೊಂಡು ಹೋಗುವ ಹೊಣೆಗಾರಿಕೆ ಇರುವುದಿಲ್ಲ.
  • ಅನುವುಗಳನ್ನು (resources) ಬೇರೆ ಬೇರೆ ಬಳಸುಗರು ಹಂಚಿಕೊಳ್ಳಬಹುದು.
  • ಹೆಚ್ಚಿನ ನಂಬತಕ್ಕತನ. ದೊಡ್ಡ ಪ್ರಮಾಣದಲ್ಲಿ ಹಲವು ಅನುವುಗಳು ಇರುವುದರಿಂದ, ಒಂದು ಅನುವು ಕುಸಿದರೆ ಇಲ್ಲವೇ ಸೋತರೆ ಇನ್ನೊಂದು ಬಿಡುವಿರುವ ಅನುವನ್ನು ಬಳಸಿಕೊಳ್ಳುವುದು ಸುಲಭ.
  • ಪ್ರಪಂಚದ ಬೇರೆ ಬೇರೆ ಕಡೆಗಳಿಂದ ಸೇವೆ ಒದಗಿಸುವಂತೆ ಕೋರಬಹುದು. ಉದಾಹರಣೆಗೆ, ನಿಮ್ಮ ಬಳಸುಗರು ಅಮೇರಿಕ ಮತ್ತು ಏಷ್ಯಾ- ಈ ಎರಡೂ ಕಡೆಗಳಲ್ಲಿ ಇದ್ದರೆ, ಅಮೆರಿಕಕ್ಕೆ ಒಂದು ಸರ್ವರ್ ಸೇವೆ, ಎಷ್ಯಾಗೆ ಒಂದು ಸರ್ವರ್ ಸೇವೆ, ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನೀಡಲು ಸಾಧ್ಯ.
  • ಮೇಲಿನ ಎಲ್ಲ ಕಾರಣಗಳಿಂದಾಗಿ ಅಡಿಕಟ್ಟಿನ ಮೇಲೆ ಮಾಡುವ ವೆಚ್ಚವೂ ಕಡಿಮೆಯಾಗುತ್ತದೆ.

 

Bookmark the permalink.

Comments are closed.

Comments are closed