ಇವಿ ಬ್ಯಾಟರಿಗಳಲೋಕದಲ್ಲೊಂದು ಇಣುಕು

ಜಯತೀರ್ಥ ನಾಡಗೌಡ

ಇಲೆಕ್ಟ್ರಿಕ್ ಕಾರುಗಳ ಬ್ಯಾಟರಿಗಳ ಕುರಿತಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. 4-6 ವರುಶಗಳ ಹಿಂದೆ ಇಲೆಕ್ಟ್ರಿಕ್ ಬಂಡಿಗಳೆಂದರೆ ಲಿಥಿಯಂ-ಅಯಾನ್ ಬ್ಯಾಟರಿ ಒಂದೇ ಗತಿ ಎನ್ನುವಂತಿತ್ತು. ಹಿಂದೊಮ್ಮೆ ಅರಿಮೆ ಬರಹವೊಂದರಲ್ಲಿ  ತಿಳಿಸಿದಂತೆ ಬೆಳ್ಳಿಯ ಸಾಲಿಡ್ ಸ್ಟೇಟ್ ಬ್ಯಾಟರಿಗಳಲ್ಲದೇ, ವಿವಿಧ ಹೊಸ ಆಯ್ಕೆಗಳು ಬಂದಿವೆ. ಇವುಗಳು ಹೇಗೆ ಇಲೆಕ್ಟ್ರಿಕ್ ಗಾಡಿಗಳಿಗೆ ಅನುಕೂಲ ಮತ್ತು ಅನಾನುಕೂಲಗಳಾಗಲಿವೆ ಎಂಬುದನ್ನು ಈ ಬರಹದಲ್ಲಿ ತಿಳಿಸಿರುವೆ.

  1.       ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಗಳು: ಇವುಗಳು ಎಲ್‌ಎಫ್‌ಪಿ(LFP) ಬ್ಯಾಟರಿಗಳೆಂದೇ ಚಿರಪರಿಚಿತ. ಈ ಬ್ಯಾಟರಿಗಳು ಅಗ್ಗವಾಗಿರುತ್ತವೆ. ಕಾರಣ, ನಿಕ್ಕೆಲ್ ಕೋಬಾಲ್ಟ್ ನಂತ ಲೋಹಗಳನ್ನು ಈ ಬ್ಯಾಟರಿಗಳು ಬಳಸುವುದಿಲ್ಲ. ಇವುಗಳು ಹೆಚ್ಚು ಸುರಕ್ಷಿತ. ಹೆಚ್ಚು ಕಾಲದ ಬಾಳಿಕೆ ಮತ್ತು ಇಂತಹ ಬ್ಯಾಟರಿಗಳನ್ನು ನೀವು ಮೇಲಿಂದ ಮೇಲೆ ಪೂರ್ತಿಯಾಗಿ 100% ವರೆಗೆ ಹುರುಪು ತುಂಬಿದರೂ ಇವುಗಳು ಸರಿಯಾಗಿ ಕೆಲಸ ಮಾಡಲಿವೆ.

ಈ ಮಾದರಿಯ ಬ್ಯಾಟರಿಗಳ ಅನಾನುಕೂಲಗಳೆಂದರೆ, ಇವುಗಳು ಗಾಡಿಗಳಿಗೆ ಹೆಚ್ಚಿನ ಹರವು(Range) ನೀಡಲಾರವು. ಕಾರಣ ಇವುಗಳಲ್ಲಿ ಕಸುವಿನ ದಟ್ಟಣೆ(Energy Density) ಕಡಿಮೆ. ಎಲ್‌ಎಫ್‌ಪಿ ಬ್ಯಾಟರಿಗಳ ತೂಕವು ಜಾಸ್ತಿ. ಕಡಿಮೆ ಬಿಸುಪಿನ/ಚಳಿಗಾಲದ ತಂಪಿನ ವಾತಾವರಣವಿರುವ ಹಿಮಾಚಲ, ಕಾಶ್ಮೀರದಂತ ಪ್ರದೇಶಗಳಲ್ಲಿ ಇವುಗಳು ಅಷ್ಟೊಂದು ತಕ್ಕುದಲ್ಲ.

ಬಳಕೆ:

ದಿನದ ಬಳಕೆಯ ಗಾಡಿಗಳಾದ ಸ್ಕೂಟರ್,ಬೈಕ್, ಆಟೋರಿಕ್ಷಾ, 3-ಗಾಲಿಗಳ ಸರಕು ಸಾಗಣೆ ಬಂಡಿಗಳಿಗೆ ಇವು ಯೋಗ್ಯ. ನಗರ ಪ್ರದೇಶಗಳಲ್ಲಿ ಸುತ್ತಾಡುವ ಟ್ಯಾಕ್ಸಿಗಳು,ಮತ್ತು ವೈಯುಕ್ತಿಕ ಕಾರುಗಳಲ್ಲಿ ಈ ಬ್ಯಾಟರಿಗಳು ಬಳಸಲ್ಪಡುತ್ತವೆ.

  1. ನಿಕ್ಕೆಲ್ ಕೋಬಾಲ್ಟ್ ಅಲ್ಯುಮಿನಿಯಮ್ ಮತ್ತು ನಿಕ್ಕೆಲ್ ಮ್ಯಾಂಗನೀಸ್ ಕೋಬಾಲ್ಟ್ ಬ್ಯಾಟರಿಗಳು: ಇವು ಹೆಚ್ಚಿನ ಕಸುವಿನ ದಟ್ಟಣೆ ಹೊಂದಿವೆ, ಹೀಗಾಗಿ ದೂರದ ಹರವು ಪಡೆದಿವೆ. ಕಡಿಮೆ ಬಿಸುಪು ಮತ್ತು ಚಳಿಯ ವಾತಾವರಣದಲ್ಲೂ ಒಳ್ಳೆಯ ಅಳವುತನ ಹೊಂದಿವೆ. ಟೆಸ್ಲಾ, ಬಿಎಮ್‌ಡಬ್ಲ್ಯೂ, ಹ್ಯುಂಡಾಯ್ ಸೇರಿದಂತೆ ಹಲವು ಕಾರು ತಯಾರಕರು ಇವುಗಳನ್ನು ಅಳವಡಿಸಕೊಂಡಿರುವುದರಿಂದ ಇಂತಹ ಬ್ಯಾಟರಿಗಳ ಬಗ್ಗೆ ಒಳ್ಳೆಯ ಅನುಭವವಿದೆ.

ಇವುಗಳ ಪ್ರಮುಖ ಅನಾನುಕೂಲಗಳು ಹೀಗಿವೆ: ಕೋಬಾಲ್ಟ್, ನಿಕ್ಕೆಲ್ ನಂತಹ ದುಬಾರಿ ಲೋಹಗಳ ಬಳಕೆಯಿಂದ ಇವುಗಳು ದುಬಾರಿ ಬ್ಯಾಟರಿಗಳಾಗಿವೆ. ಎಲ್‌ಎಫ್‌ಪಿ ಬ್ಯಾಟರಿಗಳಿಗಿಂತ ಕಡಿಮೆ ಬಾಳಿಕೆ ಹೊಂದಿವೆ. ಈ ಬ್ಯಾಟರಿಗಳು ಕೆಟ್ಟರೆ ಇಲ್ಲವೇ ಪದೇ ಪದೇ ಪೂರ್ತಿ ಹುರುಪು ತುಂಬಿದರೆ, ಬೆಂಕಿ ಹೊತ್ತಿಕೊಳ್ಳುವ ಅಪಾಯ ಹೆಚ್ಚು.

ಬಳಕೆ:

– ದೂರ ಸಾಗಬಲ್ಲ ಕಾರು, ಬಸ್ಸುಗಳಂತಹ ಗಾಡಿಗಳಿಗೆ ಇವು ಸೂಕ್ತ.

– ಹೆಚ್ಚಿನ ಅಳವುತನ ಹೊಂದಿರುವ ಗಾಡಿಗಳು (ಸ್ಪೋರ್ಟ್ಸ್ ಯುಟಿಲಿಟಿ ಗಾಡಿಗಳು ಮುಂತಾದವು)

– ಚಳಿಯ ವಾತಾವರಣವಿರುವ ಪ್ರದೇಶಗಳಿಗೆ ಯೋಗ್ಯ.

  1. ಸಾಲಿಡ್ ಸ್ಟೇಟ್ ಬ್ಯಾಟರಿಗಳು: ಈ ಬ್ಯಾಟರಿಗಳು ಇತರೆ ಎಲ್ಲ ಬ್ಯಾಟರಿಗಳಿಗಿಂತ ಹೆಚ್ಚು ಕಸುವಿನ ದಟ್ಟಣೆ ಹೊಂದಿವೆ. ಇವುಗಳು ಬಳಕೆಯಿಂದ ಬೆಂಕಿ ಹೊತ್ತಿಕೊಳ್ಳುವ ಅಪಾಯವೂ ಕಡಿಮೆ. ಇವುಗಳಿಗೆ ಬೇಗ ಹುರುಪು ತುಂಬಬಹುದಾಗಿರುತ್ತದೆ. ವಾತಾವರಣದ ಏರುಪೇರುಗಳು ಇವುಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲವಾದ್ದರಿಂದ ಬಿಸುಪಿನ/ತಂಪಿನ ಪ್ರದೇಶಗಳಲ್ಲಿ ಸಾಲಿಡ್ ಸ್ಟೇಟ್ ಬ್ಯಾಟರಿಗಳು ಚೆನ್ನಾಗಿ ಕೆಲಸ ಮಾಡಬಲ್ಲವು. 

ಪ್ರಮುಖ ಅನಾನುಕೂಲವೆಂದರೆ ಇವುಗಳಿನ್ನೂ ಬೆಳವಣಿಗೆಯ ಹಂತದಲ್ಲಿವೆ, ಸಾಲಿಡ್ ಸ್ಟೇಟ್ ಬ್ಯಾಟರಿ ಅಳವಡಿಸಿರುವ ಗಾಡಿಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಹಾಗಾಗಿ ಇವುಗಳ ಬಳಕೆಯ ಅನುಭವ ಇಲ್ಲ. ಬೆಳ್ಳಿಯಂತಹ ದುಬಾರಿ ಲೋಹಗಳನ್ನು ಈ ಬ್ಯಾಟರಿಗಳಲ್ಲಿ ಬಳಸುವುದರಿಂದ ಇವುಗಳು ತುಂಬಾ ದುಬಾರಿ ಹಣೆಪಟ್ಟಿ ಹೊಂದಿವೆ.. ಇವುಗಳು ಹೆಚ್ಚಿನ ಕಾಲದ ತಾಳಿಕೆ(Durability) ಮತ್ತು ಮುಂದಿನ ದಿನಗಳಲ್ಲಿ ಹೇಗೆ ಸ್ಕೇಲ್‌ಅಪ್(Scale-up) ಆಗಲಿವೆ ಎಂಬುದರ ಬಗ್ಗೆ ಖಚಿತವಾಗಿ ಮಾಹಿತಿಯಿರದಿರುವುದು.

ಬಳಕೆ:

ಹೆಚ್ಚು ದೂರದ ಸಾಗಣೆಯ ಗಾಡಿಗಳಾದ ಟ್ರಕ್‌ಗಳು, ಭಾರಿ ಅಳವುತನ (Efficiency) ಬಯಸುವ ಆಟೋಟದ ಬಳಕೆಯ ಕಾರುಗಳು, ದುಬಾರಿ ಶ್ರೀಮಂತಿಕೆಯ ಗಾಡಿಗಳಿಗೆ ಇವು ತಕ್ಕುದಾಗಿವೆ.

 ಈ ಕೆಳಗೆ ನೀಡಿರುವ ಪಟ್ಟಿಯಲ್ಲಿ ಮೇಲೆ ಚರ್ಚಿಸಿದ ಬ್ಯಾಟರಿಗಳನ್ನು ಹೋಲಿಕೆ ಮಾಡಲಾಗಿದೆ.

 

Bookmark the permalink.

Comments are closed.