ಅರಗೇರ‍್ಪಾಟು – ಬಾಗ 2

ನಾವು ತಿಂದ ಆಹಾರವನ್ನು ಅರಗಿಸುವ ನಮ್ಮ ಮಯ್ಯಲ್ಲಿರುವ ಏರ‍್ಪಾಟಿನ ಬಗೆಗಿನ  ಹಿಂದಿನ ಬರಹವನ್ನು ಮುಂದುವರೆಸುತ್ತ, ಈ ಏರ‍್ಪಾಟಿನ ಇನ್ನಶ್ಟು ವಿಶಯಗಳನ್ನು ತಿಳಿದುಕೊಳ್ಳೋಣ.

ಹಲ್ಲುಗಳು:

ಹಲ್ಲುಗಳು ಬಾಯಿಯಲ್ಲಿ ಕಂಡುಬರುವ ಕಡು ಗಟ್ಟಿತನವನ್ನು ಹೊಂದಿರುವ ಅಂಗಗಳ ಗುಂಪು. ತಿಂದ ಕೂಳನ್ನು ಕಚ್ಚಿ ಕತ್ತರಿಸಲು, ಜಗಿಯಲು ಮತ್ತು ಆಡಿಸಿ ಸಣ್ಣದಾಗಿಸಲು ಹಲ್ಲುಗಳು ಬಳಕೆಯಾಗುತ್ತವೆ. ಹಲ್ಲುಗಳು ನಮ್ಮ ಬಾಯಿ ಮತ್ತು ಮೊಗಕ್ಕೆ ಆಕಾರವನ್ನು ಕೊಡುವುದರ ಜೊತೆಗೆ ಮಾತನಾಡುವಿಕೆಯಲ್ಲೂ ನೆರವಾಗುತ್ತವೆ.

ಹಲ್ಲೊಂದರಲ್ಲಿ ಮುಕ್ಯವಾಗಿ ಎರಡು ಬಾಗಗಳಿರುತ್ತವೆ. ಅವುಗಳೆಂದರೆ ಮುಡಿ (crown) ಮತ್ತು ಬೇರು (root). ಹಲ್ಲಿನ ಉಬ್ಬಿದ ಬಾಗವಾದ ಮುಡಿ ಒಸಡಿನ ಗೆರೆಯ ಮೇಲ್ಬಾಗದಲ್ಲಿ ಇರುತ್ತದೆ. ಮುಡಿಯ ನೆತ್ತಿಯ ಹೊರಮಯ್ಯಲ್ಲಿ ಉಬ್ಬು-ತಗ್ಗುಗಳಿದ್ದು, ಇವು ಜಗಿಯಲು ನೆರವಾಗುತ್ತವೆ. ಒಸಡಿನ ಗೆರೆಯ ಕೆಳ ಬಾಗದಲ್ಲಿರುವ ಹಲ್ಲನ್ನು ಹಲ್ಲಿನ ಬೇರು ಎಂದು ಗುರುತಿಸಲಾಗಿದೆ. ಹಲ್ಲಿನ ಬೇರುಗಳು ಮೇಲ್ದವಡೆ/ಕೆಳದವಡೆ ಮೂಳೆಗಳಲ್ಲಿ ಇರುವ ಹಲ್ಕುಳಿಯಲ್ಲಿ (alveolus of teeth) ನೆಲೆಗೊಂಡಿರುತ್ತವೆ.

ಗಿಡಗಳ ಬೇರು ಮಣ್ಣಿನಲ್ಲಿ ಸಿಕ್ಕಿಕೊಂಡಿರುವಂತೆ, ಹಲ್ಲಿನ ಬೇರು ಹಲ್ಕುಳಿಯಲ್ಲಿ ನೆಲೆಸಿರುತ್ತವೆ. ಒಂದೊಂದು ಹಲ್ಲಿನಲ್ಲಿ ಹಲ್ಲಿನ ಬಗೆಗೆ ತಕ್ಕಂತೆ ಒಂದರಿಂದ ಮೂರು ಬೇರುಗಳು ಇರುತ್ತವೆ. ಬೇರಿನ ಹೊರ ಬಾಗವು ಎಲುಬನ್ನು ಹೋಲುವ ಕ್ಯಾಲ್ಶಿಯಂ ಮತ್ತು ಅಂಟುವುಟ್ಟುಕದ ನಾರುಗಳ (collagen fiber) ಬೆರಕೆಯಾದ ಹಲ್ಗಾರೆಯನ್ನು (cementum) ಹೊಂದಿರುತ್ತವೆ. ಹಲ್ಗಾರೆ, ಹಲ್ಲಿನ ಬೇರುಗಳನ್ನು ಹಲ್ಕುಳಿಗೆ ಅಂಟಿಸಲು ನೆರವಾಗುವ ಹಲ್ತಂತುಗಟ್ಟುಗಳಿಗೆ (periodontal ligaments) ಆನಿಕೆಯನ್ನು ಕೊಡುತ್ತದೆ.

ಹಲ್ಲುಗಳು  ಮೂರು ಪದರಗಳನ್ನು ಹೊಂದಿರುತ್ತವೆ – ತಿರುಳಲ್ಲು (pulp), ಅಡಿಹಲ್ಲು (dentin), ಮತ್ತು ಅದಿರಲ್ಲು (enamel).

1) ತಿರುಳಲ್ಲು: ಹಲ್ಲಿನ ನಡುವಿನಲ್ಲಿ ಇರುವ ತಿರುಳಲ್ಲು ಮೆದುವಾದ ಗೂಡುಕಟ್ಟು ಮತ್ತು ನೆತ್ತರುಗೊಳವೆಗಳನ್ನು ಹೊಂದಿರುತ್ತದೆ. ಬೇರಿನ ತುದಿಯಲ್ಲಿ ಇರುವ ಸಣ್ಣ ತೂತುಗಳಿಂದ ತಿರುಳಲ್ಲನ್ನು ತೂರುವ  ನವಿರಾದ ನರದ ನಾರುಗಳು ಮತ್ತು  ನೆತ್ತರುಗೊಳವೆಗಳು ತಿರುಳಲ್ಲಿನ ಮೇಲೆ ಇರುವ ಅಡಿಹಲ್ಲು ಮತ್ತು ಅಡಿಹಲ್ಲುಗಳನ್ನು ಪೊರೆಯಲು ನೆರವಾಗುತ್ತವೆ. ತಿರುಳಲ್ಲು ಮತ್ತು ಅಡಿಹಲ್ಲುಗಳ ಗಡಿಯಲ್ಲಿ ‘ಹಲ್ಬುಡಗೂಡುಗಳು’ (odontoblast) ಇರುತ್ತವೆ;  ಈ ಬುಡಗೂಡುಗಳು (stem cell) ಅಡಿಯಲ್ಲನ್ನು ಮಾಡಲು ನೆರವಾಗುತ್ತವೆ.

2) ಅಡಿಹಲ್ಲು: ತಿರುಳಲ್ಲನ್ನು ಸುತ್ತುವರೆದಿರುವ ಅಡಿಹಲ್ಲು, ಅದಿರನ್ನು ತುಂಬಿಕೊಂಡಿರುವ ಗೂಡುಕಟ್ಟು (tissue). ತಿರುಳಲ್ಲಿಗಿಂತ ಗಟ್ಟಿಯಾಗಿರುವ ಅಡಿಹಲ್ಲು ಅಂಟುವುಟ್ಟುಕದ ನಾರುಗಳು ಮತ್ತು  ಹಯ್ಡ್ರಾಕ್ಸಿಲ್-ಅಪಟಯ್ಟ್ (ಕ್ಯಾಸಿಯಮ್ ಪಾಸ್ಪೇಟ್ ಅದಿರಿನ ಬಗೆ) ಗಳನ್ನು ಹೊಂದಿರುತ್ತದೆ.

ಅಡಿಹಲ್ಲು ಕಿರುತೂತುಗಳ ರಚನೆಯನ್ನು ಹೊಂದಿರುತ್ತದೆ; ಈ ಕಿರುತೂತುಗಳು, ತಿರುಳಲ್ಲಿನಲ್ಲಿ ಮಾಡಲ್ಪಡುವ ಆರಯ್ವ (nutrients) ಮತ್ತು ಅಡಕಗಳು (materials) ಹಲ್ಲಿನ ಎಲ್ಲಾ ಪದರಗಳಿಗೂ ಹರಡಲು ನೆರವಾಗುತ್ತವೆ.

3) ಅದಿರಲ್ಲು: ಇದು ಬೆಳ್ಳಗೆ ಕಾಣುವ ಮುಡಿಯ ಹೊರಗಿನ ಪದರ. ಅಡಿಯಲ್ಲಿನ ಮೇಲೆ ಇರುವ ಅದಿರಲ್ಲು ತುಂಬಾ ಗಟ್ಟಿಯಾಗಿರುತ್ತದೆ. ಎಲುಬುಗಳನ್ನು ಒಳಗೊಂಡಂತೆ, ಮಯ್ಯಲ್ಲಿ ಕಂಡುಬರುವ ಯಾವುದೇ  ಅಂಗ ಇಲ್ಲವೇ  ಅಂಗದ ಬಾಗವು ಅದಿರಲ್ಲಿನಶ್ಟು ಗಡುಸು ಇರಲಾರದು. ಇದಕ್ಕೆ ಕಾರಣ, ಇಡೀ ಅದಿರಲ್ಲು, ಪರಿಸರದಲ್ಲಿ ಕಂಡು ಬರುವ  ತುಂಬಾ ಗಟ್ಟಿಯಾದ ವಸ್ತುಗಳಲ್ಲಿ ಒಂದಾದ ಹಯ್ಡ್ರಾಕ್ಸಿಲ್-ಅಪಟಯ್ಟ್ (ಕ್ಯಾಸಿಯಮ್ ಪಾಸ್ಪೇಟ್ ಅದಿರಿನ ಬಗೆ) ಎನ್ನುವ ಅಂದಿರಿನಿಂದ ಮಾಡಲ್ಪಟ್ಟಿರುತ್ತದೆ.

digestive_sys_2_1

ಹಲ್ಲುಗಳನ್ನು ನಾಲ್ಕು ಬಗೆಗಳಾಗಿ ಗುಂಪಿಸಬಹುದಾಗಿದೆ: ಕಚ್ಚಲ್ಲು (incisor), ಚೂಪಲ್ಲು (canine), ಮುಂದವಡೆ ಹಲ್ಲು (premolar)  ಮತ್ತು ದವಡೆ ಹಲ್ಲು (molar)

1)  ಕಚ್ಚಲ್ಲು/ಮುಂಬಲ್ಲು : ಬಾಯಿಯ ಮುಂಬಾಗದಲ್ಲಿ  ಕಂಡು ಬರುವ ಈ ಹಲ್ಲುಗಳ ನೆತ್ತಿಯ ಮೇಲಿನ ಹೊರಮಯ್ ಚಪ್ಪಟ್ಟೆಯಾಗಿರುತ್ತದೆ. ಕಚ್ಚಲ್ಲುಗಳು ಆಹಾರವನ್ನು ತುಂಡರಿಸಲು ನೆರವಾಗುತ್ತವೆ.

2) ಚೂಪಲ್ಲು/ಕೋರೆ ಹಲ್ಲು: ಈ ಹಲ್ಲುಗಳ ನೆತ್ತಿಯು ಮೊನಚಾಗಿರುತ್ತದೆ. ಇವು ಗಟ್ಟಿಯಾದ ಆಹಾರವನ್ನು (ಉದಾ: ಮಾಂಸ) ಸೀಳಲು ಮತ್ತು ಎಳೆಯಲು ನೆರವಾಗುತ್ತವೆ.

3 ಮತ್ತು 4) ಮುಂದವಡೆ ಹಲ್ಲು ಮತ್ತು ದವಡೆ ಹಲ್ಲುಗಳು: ಈ ಹಲ್ಲುಗಳ ನೆತ್ತಿಯು ಅಗಲವಾಗಿರುತ್ತದೆ ಮತ್ತು ಉಬ್ಬು ತಗ್ಗುಗಳನ್ನು ಹೊಂದಿರುತ್ತದೆ. ಮುಂದವಡೆಯಲ್ಲು ಮತ್ತು ದವಡೆ ಹಲ್ಲುಗಳು ಆಹಾರವನ್ನು ಜಗಿಯಲು ಮತ್ತು ಆಡಿಸಲು ನೆರವಾಗುತ್ತವೆ.

digestive_sys_2_2

ಮನುಶ್ಯರ ಬಾಳ್ಮೆ ಸುತ್ತಿನಲ್ಲಿ (life span) ಎರಡು ಜೊತೆ ಹಲ್ಲುಗಳು ಕಾಣಿಸಿಕೊಳ್ಳುತ್ತವೆ (ಚಿತ್ರ 9, 10 & 11).

1) ಹಾಲು-ಹಲ್ಲುಗಳು (deciduous/milk teeth)

2) ಬಾಳಿಕೆಯ ಹಲ್ಲುಗಳು (permanent teeth)

digestive_sys_2_3

ಕೂಸು ಹುಟ್ಟುವಾಗ, ಅವುಗಳ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ. ಆದರೆ ಹುಟ್ಟಿದ ಆರು ತಿಂಗಳಿನಲ್ಲಿ ಮೊದಲುಗೊಂಡು, ಮೂರು ವರುಶಗಳು ತುಂಬುವ ಹೊತ್ತಿಗೆ, ಮಕ್ಕಳಲ್ಲಿ ಹಾಲಲ್ಲುಗಳು ಬೆಳೆಯುತ್ತವೆ. ಹಾಲಲ್ಲುಗಳಲ್ಲಿ 8 ಕಚ್ಚಲ್ಲುಗಳು, 4 ಚೂಪಲ್ಲುಗಳು ಮತ್ತು 8 ದವಡೆ ಹಲ್ಲುಗಳು ಇರುತ್ತವೆ. ಮಕ್ಕಳಿಗೆ ಆರು ವರುಶಗಳು ತುಂಬುತ್ತಿದ್ದಂತೆ ಹಾಲಲ್ಲುಗಳು ಉದುರಲು ಶುರುವಾಗುತ್ತವೆ. ಉದುರಿದ ಹಾಲಲ್ಲುಗಳ ಜಾಗದಲ್ಲಿ, ಬಾಳಿಕೆಯ ಹಲ್ಲುಗಳು ಬೆಳೆಯುತ್ತವೆ.

digestive_sys_2_4

ಹಾಲಲ್ಲುಗಳು ಹೊಮ್ಮುವ ಹೊತ್ತಿನಲ್ಲೇ, ಮೇಲ್ದವಡೆ ಮತ್ತು ಕೆಳದವಡೆಗಳ ಒಳಗೆ ಬಾಳಿಕೆಯ ಹಲ್ಲುಗಳು ಬೆಳೆಯುತ್ತಿರುತ್ತವೆ. ಬಾಳಿಕೆಯ ಹಲ್ಲುಗಳು ಮೂಡುತ್ತಿದ್ದಂತೆ, ಹಾಲಲ್ಲುಗಳ ಬೇರುಗಳು ಬಡಕಲಾಗುತ್ತವೆ. ಇದರಿಂದಾಗಿ, ಹಾಲಲ್ಲುಗಳು ಸಡಿಲಗೊಂಡು ಕೆಲವೇ ದಿನಗಳಲ್ಲಿ ಉದುರುತ್ತವೆ. ಬಾಳಿಕೆಯ ಹಲ್ಲುಗಳು ಒಸಡನ್ನು ತೂರಿಕೊಂಡು ಹಾಲಲ್ಲುಗಳ ತಾಣದಲ್ಲಿ ನೆಲೆಸುತ್ತವೆ.

ಹರೆಯದ ಮನುಶ್ಯರಲ್ಲಿ ಸಾಮಾನ್ಯವಾಗಿ ಮೂವತ್ತೆರಡು ಹಲ್ಲುಗಳಿರುತ್ತವೆ. ಕಮಾನಿನಂತೆ ಇರುವ ಮೇಲ್ದವಡೆ ಮತ್ತು ಕೆಳದವಡೆಗಳಲ್ಲಿ ಈ ಹಲ್ಲುಗಳು ಎರಡು ಸಾಲುಗಳಲ್ಲಿ ಜೊಡಿಸಲ್ಪಟ್ಟಿರುತ್ತವೆ. ಬಾಯಿಯಿಂದ ಗಂಟಲಿನ ಕಡೆಗೆ ನೇರವಾದ ಗೆರೆಯನ್ನು ಎಳೆದರೆ, ಮೇಲ್ದವಡೆ ಮತ್ತು ಕೆಳದವಡೆಗಳನ್ನು ಒಟ್ಟಾರೆ ನಾಲ್ಕು ಹೋಳುಗಳಾಗಿ ಗುರುತಿಸಬಹುದಾಗಿದೆ. ಒಂದೊಂದು ಹೋಳಿನಲ್ಲೂ ಎರಡು ಕಚ್ಚಲ್ಲು, ಒಂದು ಚೂಪು ಹಲ್ಲು, ಎರಡು ಮುಂದವಡೆ ಹಲ್ಲು ಮತ್ತು ಮೂರು ದವಡೆ ಹಲ್ಲುಗಳಿರುತ್ತವೆ.

ಮೊದಲ ಇಪ್ಪತ್ತೆಂಟು ಹಲ್ಲುಗಳು ಹನ್ನೊಂದು-ಹದಿಮೂರರ ವಯಸ್ಸಿನ ಹೊತ್ತಿಗೆ ಮೂಡಿರುತ್ತವೆ. ದವಡೆಯ ಹಿಂಬದಿಯಲ್ಲಿ ಕಾಣಿಸಿಕೊಳ್ಳುವ ಮೂರನೆಯ ದವಡೆ ಹಲ್ಲುಗಳು (wisdom teeth), ಹರೆಯಕ್ಕೆ ಕಾಲಿಟ್ಟ ಮೇಲೆ ಮೂಡುತ್ತವೆ. ಮೂರನೆಯ ದವಡೆ ಹಲ್ಲುಗಳನ್ನು ‘ಹರೆಯದ ಹಲ್ಲು’ ಎಂದೂ  ಕರೆಯುವುದುಂಟು. ಹೆಚ್ಚಿನವರಲ್ಲಿ ಹರೆಯದ ಹಲ್ಲುಗಳು ಒಸಡಿನ ಹೊರಕ್ಕೆ ಮೂಡದೇ, ದವಡೆಯಲ್ಲಿಯೇ ಸಿಕ್ಕಿಕೊಂಡಿರುತ್ತವೆ. ಕೆಲವರ ದವಡೆಯಲ್ಲಿ, ಹರೆಯದ ಹಲ್ಲು ಮೂಡುವಶ್ಟು ಜಾಗ ಇರುವುದಿಲ್ಲ. ಈ ಎರಡೂ ಬಗೆಯ ಮಂದಿಯಲ್ಲಿ, ಹರೆಯದ ಹಲ್ಲನ್ನು ಕೊಯ್ಯಾರಯ್ಕೆಯ (surgery) ಮೂಲಕ ಕೀಳಲಾಗುತ್ತದೆ.

digestive_sys_2_5

ಕೆಳದವಡೆಯ ಹಲ್ಲಿನ ಉಬ್ಬುಗಳು ಮೇಲ್ದವಡೆಯ ಹಲ್ಲುಗಳ ತಗ್ಗುಗಳಿಗೆ ಹೊಂದಿಕೊಡಿದ್ದರೆ, ಮೇಲ್ದವಡೆಯ ಹಲ್ಲಿನ ಉಬ್ಬುಗಳು ಕೆಳದವಡೆಯ ಹಲ್ಲುಗಳ ತಗ್ಗಿಗೆ ಒಗ್ಗುವಂತಿರುತ್ತವೆ. ಹಲ್ಲುಗಳ ಈ ಬಗೆಯ ಅಣಿಗಾರಿಕೆಯು, ತಿಂದ ಆಹಾರವನ್ನು ಕತ್ತರಿಸಲು ಮತ್ತು ಆಡಿಸಲು (grind) ನೆರವಾಗುತ್ತದೆ.

ಒಸಡು (Gingiva/Gums): ಮೆತ್ತನೆಯ ಗೂಡುಕಟ್ಟಿನಿಂದ ಮಾಡಲ್ಪಟ್ಟಿರುವ ಒಸಡು, ಹಲ್ಲುಗಳ ಬೇರುಗಳನ್ನು ಮುಚ್ಚುವ ಮತ್ತು ಕಾಪಾಡುವಲ್ಲಿ ನೆರವಾಗುತ್ತದೆ.ಆದರೂ, ಒಸಡು ಹಲ್ಲುಗಳಿಗೆ ಅಂಟಿಕೊಂಡಿರುವುದಿಲ್ಲ.

(ಮುಂದುವರೆಯುತ್ತದೆ…)

(ಚಿತ್ರ ಮತ್ತು ಮಾಹಿತಿ ಸೆಲೆಗಳು: histonano.cominnerbody.comareteethbones.combritannica.commedical-dictionary.thefreedictionary.com)

Bookmark the permalink.

One Comment

  1. Pingback: meritking

Comments are closed