ಉಸಿರಾಟದ ಏರ‍್ಪಾಟು – ಬಾಗ 2

ಉಸಿರು ಏರ‍್ಪಾಟಿನ ಹಿಂದಿನ ಬಾಗದಲ್ಲಿ ಮೇಲ್ ಗಾಳಿಜಾಡಿನ (upper respiratory tract) ಬಗ್ಗೆ ತಿಳಿಸಿಕೊಡಲಾಗಿತ್ತು. ಈ ಬಾಗದಲ್ಲಿ ಕೆಳ ಗಾಳಿಜಾಡು (lower respiratory tract), ಉಸಿರುಚೀಲಗಳು (lungs) ಹಾಗು ಉಸಿರೇರ‍್ಪಾಟಿನ ಕಂಡಗಳ (respiratory muscles) ಬಗ್ಗೆ ತಿಳಿಯೋಣ.

ಕೆಳ ಗಾಳಿಜಾಡು (lower respiratory tract): ಕೆಳ ಗಾಳಿಜಾಡಿನ (lower respiratory tract) ಏರ‍್ಪಾಟು ಉಸಿರುಗೊಳವೆ (trachea), ಕವಲುಗೊಳವೆಗಳು (bronchi), ಮತ್ತು ನವಿರುಸಿರುಗೊಳವೆಗಳನ್ನು (bronchioles) ಒಳಗೊಂಡಿರುತ್ತದೆ.

1) ಉಸಿರುಗೊಳವೆ (trachea): ಉಸಿರುಗೊಳವೆಯು ಸರಿಸುಮಾರು ಅಯ್ದು ಇಂಚು ಉದ್ದವಿರುತ್ತದೆ. ಉಸಿರುಗೊಳವೆಯ ಇಟ್ಟಳವು (structure) ಹಲವು ಪದರಗಳಿಂದ ಮಾಡಲ್ಪಟ್ಟಿದೆ; ಹೊರಗಿನ ಹೊರ ಪದರ (adventitia), ಗಾಜುಬಗೆ ಮೆಲ್ಲೆಲುಬು (hyaline cartilage), ಕೆಳಲೋಳ್ಪರೆ (submucosa) ಹಾಗು ಒಳಗಿನ ಲೋಳ್ಪರೆಗಳನ್ನು (mucosa) ಹೊಂದಿರುತ್ತದೆ.

ಉಸಿರುಗೊಳವೆಯ ಗಾಜುಬಗೆ ಮೆಲ್ಲೆಲುಬುಗಳು (hyaline cartilage) ‘C’ ಆಕಾರಕದ ಉಂಗುರದ ರಚನೆಯನ್ನು ಹೊಂದಿರುತ್ತವೆ; ಈ ಮೆಲ್ಲೆಲುಬುಗಳ ತುದಿಗಳನ್ನು ಉಸಿರುಗೊಳವೆ ಕಂಡಗಳು (trachealis muscle) ಜೋಡಿಸುತ್ತವೆ. ಕೊಳವೆಯ ಒಳಬಾಗವು ಹುಸಿ ಹಲಹದಿ (pseudo stratified) ಮುಂಚಾಚಿನ ಕಂಬದ ಮೇಲ್ಪರೆಯ (ciliated columnar epithelium) ಹೊದಿಕೆಯನ್ನು ಹೊಂದಿದೆ.

Respiration_2_1

ಉಸಿರುಗೊಳವೆಯು (trachea) ಉಲಿಪೆಟ್ಟಿಗೆಯನ್ನು (larynx) ಕವಲುಗೊಳವೆಗಳಿಗೆ (bronchii) ಜೋಡಿಸುವುದರ ಮೂಲಕ ಗಾಳಿಯು ಕೊರಳಿನ ಬಾಗದಿಂದ ಎದೆಯ ಬಾಗಕ್ಕೆ ಸಾಗಲು ನೆರವಾಗುತ್ತದೆ. ಮೆಲ್ಲೆಲುಬಿನ ಉಂಗುರಗಳು (hyaline cartilage) ಉಸಿರುಗೊಳವೆಯನ್ನು ಎಲ್ಲಾ ಹೊತ್ತಿನಲ್ಲೂ ತೆರೆದ ಸ್ತಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಉಸಿರುಗೊಳವೆಯ (trachea) ಮುಕ್ಯ ಕೆಲಸ, ಗಾಳಿಯು ಉಸಿರುಚೀಲಗಳನ್ನು (lungs) ಸರಾಗವಾಗಿ ಸೇರಲು ಹಾಗು ಅಶ್ಟೇ ಸರಾಗವಾಗಿ ಹೊರಹೋಗಲು ನೆರವಾಗುವುದು.

ಲೋಳ್ಪರೆಯಲ್ಲಿ (mucosa) ಮಾಡಲ್ಪಡುವ ಲೋಳೆಯು (mucus), ದೂಳು ಹಾಗು ಇತರ ನಂಜುಕಣಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ, ಅವು ಉಸಿರುಚೀಲಗಳನ್ನು (lungs) ತಲುಪದಂತೆ ನೋಡಿಕೊಳ್ಳುತ್ತದೆ. ಮೇಲ್ಪರೆಯ (epithelium) ಹೊರಮಯ್ ಮೇಲಿರುವ ಮುಂಚಾಚುಗಳು (ciliary epithelium) ಮೇಲ್ಮುಕವಾಗಿ ಬಡಿಯುವುದರಿಂದ, ಈ ಲೋಳೆಯು ಗಂಟಲಿಗೆ ತಲುಪುತ್ತದೆ. ಗಂಟಲನ್ನು ತಲುಪಿದ ಲೋಳೆಯನ್ನು ನುಂಗಿದಾಗ, ಅದು ಅರಗೇರ‍್ಪಾಟಿನಲ್ಲಿ ಅರಗಿಸಲ್ಪಡುತ್ತದೆ.

2) ಕವಲುಗೊಳವೆಗಳು (bronchi) ಮತ್ತು ನವಿರುಸಿರುಗೊಳವೆಗಳು (bronchioles): (ಚಿತ್ರ 2, 3 & 4) ಉಸಿರುಗೊಳವೆಯ ಕೆಳತುದಿಯಲ್ಲಿ, ಉಸಿರುಜಾಡು (respiratory airway) ಎಡ ಹಾಗು ಬಲ ಮೊದಲನೆ ಕವಲುಗೊಳವೆಗಳಾಗಿ (primary bronchi) ಇಬ್ಬಾಗವಾಗುತ್ತದೆ. ಒಂದೊಂದು ಕವಲುಗೊಳವೆಯು (primary bronchi), ಒಂದೊಂದು ಉಸಿರುಚೀಲವನ್ನು ಸೇರುತ್ತದೆ. ಮೊದಲನೆ ಕವಲುಗೊಳವೆಗಳು (primary bronchi), ಎರಡನೆ ಕವಲುಗೊಳವೆಗಳಾಗಿ (secondary bronchi) ಮಾರ‍್ಪಡುತ್ತವೆ. ಎರಡನೆ ಕವಲುಗೊಳವೆಗಳು (secondary bronchi) ಗಾಳಿಯನ್ನು ಉಸಿರುಚೀಲದ ಹಾಲೆಗಳಿಗೆ (lung lobes) ಸಾಗಿಸಲು ನೆರವಾಗುತ್ತದೆ (ಹಾಲೆಗಳ ಬಗ್ಗೆ ಮುಂದೆ ಉಸಿರುಚೀಲದ ತಲೆಬರಹದಡಿಯಲ್ಲಿ ವಿವರಿಸಲಾಗಿದೆ).

Respiration_2_2ಎಡ ಉಸಿರುಚೀಲದಲ್ಲಿ (lung) ಎರಡು ಹಾಗು ಬಲ ಉಸಿರುಚೀಲದಲ್ಲಿ (lung) ಮೂರು ಹಾಲೆಗಳಿದ್ದು (lung lobes), ಎಡ ಉಸಿರುಚೀಲದಲ್ಲಿ ಎರಡು ಹಾಗು ಬಲ ಉಸಿರುಚೀಲದಲ್ಲಿ ಮೂರು ಎರಡನೆ ಕವಲುಗೊಳವೆಗಳನ್ನು (secondary bronchi) ಕಾಣಬಹುದು. ಒಂದೊಂದು ಹಾಲೆಯೊಳಗೆ (lobe) ಎರಡನೆ ಕವಲುಗೊಳವೆಗಳು ಹಲವು ಮೂರನೆ ಕೊಳವೆಗಳಾಗಿ (tertiary bronchi) ಕವಲೊಡೆಯುತ್ತವೆ.

Respiration_2_3ಮೂರನೆ ಕವಲುಗೊಳವೆಗಳು (tertiary bronchi) ಕವಲೊಡೆದು ನವಿರುಸಿರುಗೊಳವೆಗಳಾಗಿ (bronchioles) ಮಾರ‍್ಪಡುತ್ತವೆ. ನವಿರುಸಿರುಗೊಳವೆಗಳು ಸಿಬಿರೊಡೆದು 1 ಮಿಲಿಮೀಟರ‍್ ದುಂಡಳತೆಗಿಂತ (diameter) ಸಣ್ಣದಾದ ತುದಿ ನವಿರುಗೊಳವೆಗಳಾಗುತ್ತವೆ (terminal bronchioles). ಮಿಲಿಯನ್ಗಟ್ಟಲೇ ಇರುವ ಈ ತುದಿ ನವಿರುಗೊಳವೆಗಳು, ಗಾಳಿಗೂಡಿಗೆ (alveolus) ಗಾಳಿಯನ್ನು ರವಾನಿಸುತ್ತವೆ.

ಮೊದಲನೆ ಕವಲುಗೊಳವೆಗಳಲ್ಲಿರುವ (primary bronchi) ‘C’ ಆಕಾರದ ಮೆಲ್ಲೆಲುಬುಗಳು (cartilage), ಗಾಳಿಜಾಡನ್ನು (airway) ತೆರೆದ ಸ್ತಿತಿಯಲ್ಲಿಡಲು ನೆರವಾಗುತ್ತವೆ. ಇದು ಮುಂದೆ ಎರಡನೇ ಹಾಗು ಮೂರನೆ ಕವಲುಗೊಳವೆಗಳಾಗಿ (secondary & tertiary bronchi) ಸಿಬಿರೊಡೆದಂತೆ, ಇವುಗಳ ಗೋಡೆಯಲ್ಲಿರುವ ಮೆಲ್ಲೆಲುಬುಗಳ (cartilage) ನಡುವಿನ ದೂರ ಹೆಚ್ಚುತ್ತದೆ.

ನವಿರುಸಿರುಗೊಳವೆಗಳಲ್ಲಿ (bronchioles) ಯಾವುದೇ ಬಗೆಯ ಮೆಲ್ಲೆಲುಬುಗಳು ಇರುವುದಿಲ್ಲ. ಎರಡನೆ/ಮೂರನೆ ಕವಲುಗೊಳವೆ (secondary & tertiary bronchi) ಹಾಗು ನವಿರುಸಿರುಗೊಳವೆಗಳಲ್ಲಿ (bronchioles) ಇರುವ ನುಣುಪು ಕಂಡ (smooth muscle) ಹಾಗು ಹಿಂಪುಟಿ ಮುನ್ನು (elastin protein), ಈ ಇಟ್ಟಳಗಳಿಗೆ ಬಾಗುವ ಹಾಗು ಕುಗ್ಗುವ ಗುಣವನ್ನು ಕೊಡುತ್ತವೆ.

ಕವಲುಗೊಳವೆ (bronchi) ಹಾಗು ನವಿರುಸಿರುಗೊಳವೆಗಳ (bronchioles) ಗೋಡೆಯಲ್ಲಿರುವ ನುಣುಪು ಕಂಡದ ಗೂಡುಕಟ್ಟುಗಳು (tissues) ಉಸಿರುಚೀಲಗಳಿಗೆ (lungs) ಸಾಗುವ ಗಾಳಿಯ ಮಟ್ಟವನ್ನು ಅಂಕೆಯಲ್ಲಿಡಲು ನೆರವಾಗುತ್ತವೆ. ಮಯ್ಪಳಗಿಸುವ (exercise) ವೇಳೆ, ನಮ್ಮ ಮಯ್ಯಲ್ಲಿ ನಡೆಯುವ ತರುಮಾರ‍್ಪಿಸುವಿಕೆಯನ್ನು (metabolism) ಸರಿದೂಗಲು, ಹೆಚ್ಚಿನ ಗಾಳಿ ಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ, ಕವಲುಗೊಳವೆ (bronchi) ಹಾಗು ನವಿರುಸಿರುಗೊಳವೆಗಳ (bronchioles) ಗೋಡೆಯಲ್ಲಿರುವ ನುಣುಪು ಕಂಡದ ಗೂಡುಕಟ್ಟುಗಳು ಸಡಿಲಗೊಳ್ಳುತ್ತವೆ.

ಈ ಸಡಿಲಿಕೆಯಿಂದ ಕೊಳವೆಗಳು ಹಿಗ್ಗುವ ಮೂಲಕ ಗಾಳಿಯಾಡಿಕೆಗೆ ಕಡಿಮೆ ತೊಡಕು ಒಡ್ಡುತ್ತವೆ; ಇದು ಉಸಿರುಚೀಲಗಳ (lungs) ಒಳಗೆ ಹಾಗು ಹೊರಕ್ಕೆ ಹೆಚ್ಚಿನ ಗಾಳಿಯಾಡಿಕೆಯಲ್ಲಿ ನೆರವಾಗುತ್ತದೆ. ದಣಿವಿನ ಕೆಲಸವನ್ನು ಮಾಡದಿರುವ ವೇಳೆ, ಈ ನುಣುಪು ಕಂಡಗಳು (smooth muscles) ಕುಗ್ಗುವ ಮೂಲಕ ಏರುಸಿರಾಟವನ್ನು (hyperventilation) ತಡೆಯಲು ನೆರವಾಗುತ್ತವೆ. ಉಸಿರುಗೊಳವೆಯಂತೆ (trachea), ಕವಲುಗೊಳವೆ (bronchi) ಮತ್ತು ನವಿರುಸಿರುಗೊಳವೆಗಳಲ್ಲಿ (bronchioles) ಮೇಲ್ಪರೆಯ (epithelial) ಲೋಳೆ (mucus) ಹಾಗು ಮುಂಚಾಚುಗಳ (cilia) ನೆರವಿನಿಂದ, ದೂಳು ಹಾಗು ಇತರ ನಂಜುಕಣಗಳನ್ನು ಉಸಿರುಚೀಲದಿಂದ (lungs) ದೂರವಿಡಲಾಗುತ್ತದೆ.

ಉಸಿರುಚೀಲಗಳು (lungs): (ಚಿತ್ರ 3, 4, 5, 6, & 7) ಉಸಿರುಚೀಲಗಳು (lungs), ಉಸಿರಾಟದ ಬಿಡಿಬಾಗಗಳಂತೆ ಕೆಲಸಮಾಡುತ್ತವೆ; ಇವು ಉಸಿರುಗಾಳಿಯನ್ನು (oxygen) ಮಯ್ಯೊಳಗೆ ಸೇರಿಸಲು ಹಾಗು ಕಾರ‍್ಬನ್ ಡಯಾಕ್ಸಾಯಡ್‍ನ್ನು ಮಯ್ಯಿಂದ ಹೊರಗೆ ಹಾಕಲು ಸಹಕಾರಿಯಾಗಿದೆ. ಹೀರುಗದ (sponge) ಮಂದತೆಯನ್ನು ಹೊಂದಿರುವ ಈ ಜೋಡಿ ಅಂಗವು, ಎದೆಬಾಗದಲ್ಲಿರುವ ಗುಂಡಿಗೆಯ (heart) ಮಗ್ಗುಲುಗಳಲ್ಲಿ ಹರಡಿಕೊಂಡಿರುತ್ತದೆ.

ಒಂದೊಂದು ಉಸಿರುಚೀಲವು (lung) ಅಳ್ಳೆಪರೆಯಿಂದ (pleural membrane) ಸುತ್ತಲ್ಪಟ್ಟಿರುತ್ತದೆ. ಈ ಬಗೆಯ ಹೊದಿಕೆ ಉಸಿರುಚೀಲವು ಹಿಗ್ಗಲು ಹಾಗು ಕಳೆಯೊತ್ತಡವನ್ನು (negative pressure) ಸರಿದೂಗಲು ಬೇಕಾದ ಜಾಗ ಮಾಡಿಕೊಡುತ್ತದೆ. ಉಸಿರುಚೀಲವು (lung) ಸಡಿಲಗೊಳ್ಳುತ್ತಿದ್ದಂತೆ, ಉಸಿರುಚೀಲದಲ್ಲಿರುವ ಕಡಿಮೆ ಒತ್ತಡವು ಗಾಳಿಯು ಚೀಲದಲ್ಲಿ ತುಂಬಿಕೊಳ್ಳಲು ಅಣಿಮಾಡಿಕೊಡುತ್ತದೆ.

Respiration_2_4ಗುಂಡಿಗೆಯು ಎಡಬಾಗಕ್ಕೆ ವಾಲಿಕೊಂಡಿರುವುದರಿಂದ, ಎಡ ಉಸಿರುಚೀಲವು ಸ್ವಲ್ಪ ಸಣ್ಣದಿರುತ್ತದೆ. ಒಂದೊಂದು ಉಸಿರು ಚೀಲವು ಹಾಲೆಗಳಾಗಿ (lobes) ಬಾಗವಾಗುತ್ತವೆ. ಎಡ ಉಸಿರುಚೀಲದಲ್ಲಿ ಎರಡು ಹಾಗು ಬಲ ಉಸಿರುಚೀಲದಲ್ಲಿ ಮೂರು ಹಾಲೆಗಳಿರುತ್ತವೆ (lobes).

Respiration_2_5ಉಸಿರುಚೀಲದ ಒಳಬಾಗವು ನವಿರುರಕ್ತಗೊಳವೆಗಳು (capillaries) ಮತ್ತು 30 ಮಿಲಿಯನ್ನಶ್ಟು ಗಾಳಿಗೂಡುಗಳನ್ನು (alveoli) ಒಳಗೊಂಡ ಹೀರುಗದ ಗೂಡುಕಟ್ಟಿನಿಂದ (spongy tissue) ಮಾಡಲ್ಪತ್ತಿರುತ್ತದೆ. ಬಟ್ಟಲಿನ ಆಕಾರದ ಗಾಳಿಗೂಡುಗಳು (alveoli), ತುದಿ ನವಿರುಸಿರುಗೊಳವೆಗಳ (terminal bronchioles) ಕೊನೆಯಲ್ಲಿ ಇರುತ್ತವೆ.

Respiration_2_6ಗಾಳಿಗೂಡು (alveolus) ಸರಳವಾದ ಹುರುಪೆ ಮೇಲ್ಪರೆಯ (simple squamous epithelium) ಹೊದಿಕೆಯನ್ನು ಹೊಂದಿದೆ (squamous = scales/fish scales = ಹುರುಪೆ). ಈ ಹೊದಿಕೆಯು ಗಾಳಿಗೂಡನ್ನು (alveolus) ಹೊಕ್ಕುವ ಗಾಳಿ ಮತ್ತು ಗಾಳಿಗೂಡನ್ನು (alveolus) ಸುತ್ತುವರಿದ ನವಿರುರಕ್ತಗೊಳವೆಗಳಲ್ಲಿರುವ (capillaries) ರಕ್ತದೊಡನೆ ಆವಿಗಳ (ಉಸಿರುಗಾಳಿ & ಕಾರ‍್ಬನ್-ಡಯ್ ಆಕ್ಸಯ್ದ್) ಅದಲುಬದಲಿಕೆಯಲ್ಲಿ (exchange) ನೆರವಾಗುತ್ತದೆ.

Respiration_2_7ಉಸಿರಾಟದ ಕಂಡಗಳು (muscles of respiration): ಉಸಿರಾಟದ ಕಂಡಗಳಾದ ತೊಗಲ್ಪರೆ (diaphragm) ಮತ್ತು ಪಕ್ಕೆಲುನಡು ಕಂಡಗಳು (intercostal muscles) ಉಸಿರಾಟದ ವೇಳೆ ಒಟ್ಟಾಗಿ ಒತ್ತುಕದಂತೆ (pump) ಕೆಲಸಮಾಡುವ ಮೂಲಕ ಉಸಿರನ್ನು ಉಸಿರುಚೀಲದ (lung) ಒಳಗೆ ಹಾಗು ಹೊರಗೆ ದಬ್ಬಲು ನೆರವಾಗುತ್ತವೆ.

1) ತೊಗಲ್ಪರೆ (diaphragm): ಎದೆಗೂಡಿನ ಕೆಳ ಎಲ್ಲೆಯನ್ನು (floor) ಮಾಡುವ ತೊಗಲ್ಪರೆಯು (diaphragm), ಕಟ್ಟಿನ ಕಂಡದಿಂದ (skeletal muscle) ಮಾಡಲ್ಪಟ್ಟ ತೆಳ್ಳನೆಯ ಹಾಳೆ (sheet). ತೊಗಲ್ಪರೆಯು ಕುಗ್ಗಿದಾಗ, ಹೊಟ್ಟೆಯ ಕಡೆಗೆ ವಾಲುವುದರ ಮೂಲಕ ಎದೆಗೂಡಿನ ಅಳತೆಯನ್ನು ದೊಡ್ಡದಾಗಿಸುತ್ತದೆ. ಇದರಿಂದ ಉಂಟಾಗುವ ಕಳೆಯೊತ್ತಡದಿಂದ (negative pressure) ಗಾಳಿಯು ಉಸಿರುಚೀಲವನ್ನು (lungs) ತುಂಬಿಕೊಳ್ಳುತ್ತದೆ. ಇದೇ ತೊಗಲ್ಪರೆಯು (diaphragm) ಉಸಿರನ್ನು ಹೊರಹಾಕುವಾಗ, ಸಡಿಲವಾಗುತ್ತದೆ ಹಾಗು ಗಾಳಿಯು ಉಸಿರುಚೀಲದಿಂದ ಹೊರಹೋಗುತ್ತದೆ.

Respiration_2_82) ಪಕ್ಕೆಲುನಡು ಕಂಡಗಳು (intercostals muscles): ಉಸಿರುಚೀಲಗಳನ್ನು ಹಿಗ್ಗಿಸುವ ಇಲ್ಲವೇ ಕುಗ್ಗಿಸುವ ತೊಗಲ್ಪರೆಯ (diaphragm) ಕೆಲಸಕ್ಕೆ, ಪಕ್ಕೆಲುಬುಗಳ (ribs) ನಡುವೆ ಇರುವ ಪಕ್ಕೆಲುನಡು ಕಂಡಗಳು (intercostals muscles) ನೆರವಾಗುತ್ತವೆ. ಪಕ್ಕೆಲುನಡು ಕಂಡಗಳಲ್ಲಿ ಎರಡು ಬಗೆ,

1) ಒಳ ಪಕ್ಕೆಲುನಡು ಕಂಡಗಳು (internal intercostal muscles)

2) ಹೊರ ಪಕ್ಕೆಲುನಡುಕಂಡಗಳು (external intercostal muscles)

Respiration_2_9ಒಳ ಪಕ್ಕೆಲುನಡು ಕಂಡಗಳು (internal intercostal muscles), ಪಕ್ಕೆಲುಬುಗಳನ್ನು (ribs) ತಗ್ಗಿಸುತ್ತವೆ; ಪಕ್ಕೆಲುಬುಗಳ (ribs) ತಗ್ಗಿಸುವಿಕೆ, ಎದೆಗೂಡಿನ ಅಳತೆಯನ್ನು ಕುಗ್ಗಿಸಿ, ಗಾಳಿಯನ್ನು ಉಸಿರುಚೀಲದಿಂದ (lung) ಹೊರಹಾಕಲು ನೆರವಾಗುತ್ತವೆ.

ಹೊರ ಪಕ್ಕೆಲುನಡು ಕಂಡಗಳು (external intercostal muscles), ಒಳ ಪಕ್ಕೆಲುನಡು ಕಂಡಗಳ (internal intercostal muscles) ಮೇಲ್ಬಾಗದಲ್ಲಿ ಇರುತ್ತವೆ. ಇವು ಪಕ್ಕೆಲುಬುಗಳನ್ನು ಏರಿಸುವುದರ ಮೂಲಕ, ಎದೆಗೂಡಿನ ಅಳತೆಯನ್ನು ಹಿಗ್ಗಿಸಿ, ಉಸಿರುಚೀಲದೊಳಕ್ಕೆ (lung) ಗಾಳಿಯನ್ನು ಎಳೆದುಕೊಳ್ಳಲು ಸಹಕರಿಸುತ್ತವೆ.

ಇಲ್ಲಿಯವರೆಗೆ ಉಸಿರೇರ‍್ಪಾಟಿನ ಒಡಲರಿಮೆಯ (anatomy) ಬಗ್ಗೆ ತಿಳಿಸಿಕೊಡಲಾಗಿದೆ. ಮುಂದಿನ ಕಂತಿನಲ್ಲಿ ಉಸಿರಾಟ ನಡೆಯುವ ಬಗೆ, ಅದರ ಹಂತಗಳ ಬಗ್ಗೆ ತಿಳಿಯೋಣ.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು: antranik.org, biology-forums.com, en.wikipedia.orginnovativeperformanceandpedagogy,  turbosquid.com, aokainc.com)

Bookmark the permalink.

Comments are closed.

Comments are closed