ಹಿಂದಿನ ಬರಹದಲ್ಲಿ ೩ ಬಗೆಯ ಇಲೆಕ್ಟ್ರಿಕ್ ಓಡುಗೆಗಳ ಬಗ್ಗೆ ತಿಳಿದಿದ್ದೆವು. ಇದೀಗ ಅದನ್ನು ಮುಂದುವರೆಸುತ್ತ, ಇತರೆ ಓಡುಗೆಗಳ ಬಗೆಗಳನ್ನು ತಿಳಿಯೋಣ ಬನ್ನಿ.
- ಸ್ವಿಚ್ಡ್ ರಿಲಕ್ಟನ್ಸ್ ಓಡುಗೆ (Switch Reluctance Motor):
ಇದರಲ್ಲಿ ರೋಟಾರ್‌ಗೆ ಯಾವುದೇ ಸೆಳೆಗಲ್ಲಾಗಲಿ(Magnet) ಇಲ್ಲವೇ ತಂತಿಸುರುಳಿಗಳನ್ನು(Windings) ಬಳಸುವುದಿಲ್ಲ. ಬದಲಾಗಿ ಇವು ರಿಲಕ್ಟನ್ಸ್ ನಿಂದ ಉಂಟಾಗುವ ಸೆಳೆಬಲವನ್ನೇ ಬಳಸಿಕೊಂಡು ಕೆಲಸ ಮಾಡಬಲ್ಲವು. ಇವುಗಳು ಕೆಲಸ ಮಾಡುವಾಗ ಹೆಚ್ಚಿನ ಸದ್ದುಂಟು ಮಾಡುತ್ತವೆ, ಮತ್ತು ಇವುಗಳು ಕೆಲಸ ಮಾಡುವ ಬಗೆ ತುಸು ಜಟಿಲವಾಗಿರುವುದರಿಂದ ಇವುಗಳನ್ನು ಹಿಡಿತದಲ್ಲಿಡುವುದು ಅಷ್ಟೇ ಕಷ್ಟ. ಇವುಗಳ ಕಸುವಿನ ದಟ್ಟಣೆ ಮತ್ತು ಇವುಗಳ ತಂಪಾಗಿಸುವಿಕೆ, ಇತರ ಓಡುಗೆಗಳ ಹೋಲಿಕೆಯಲ್ಲಿ ಮಧ್ಯಮ ಮಟ್ಟದಲ್ಲಿರುತ್ತದೆ. SRM ಓಡುಗೆಗಳೆಂದೇ ಕರೆಯಲ್ಪಡುವ ಈ ಓಡುಗೆಗಳ ದಕ್ಷತೆಯು 85% ಕ್ಕೂ ಹೆಚ್ಚು. ಈ ಬಗೆಯ ಮೋಟಾರ್‌ಗಳಲ್ಲಿ ಯಾವುದೇ ಸೆಳೆಗಲ್ಲು ಮತ್ತು ತಂತಿಸುರುಳಿ ಇಲ್ಲದ ಕಾರಣ ಇವುಗಳು ಬಲು ಅಗ್ಗವಾಗಿರುತ್ತವೆ. ಆದರೆ ಇವುಗಳನ್ನು ಕೆಲವೇ ಕೆಲವು ಚೀನಾ ಮೂಲದ ಇವಿ ತಯಾರಕರು ಬಳಸುತ್ತಿದ್ದಾರೆ.
- ಆಕ್ಷಿಯಲ್ ಫ್ಲಕ್ಸ್ ಮೋಟಾರ್ (Axial Flux Motor):
ಈ ಬಗೆಯ ಓಡುಗೆಗಳಲ್ಲಿ ಉಂಟಾಗುವ ಸೆಳೆಗಲ್ಲಿನ ಹರಿವು(Magnetic Flux) ಅದರ ನಡುಗೆರೆ(Axial) ಮೂಲಕ ಸಾಗುತ್ತದೆ. ದಕ್ಷತೆಯಲ್ಲಿ ಮತ್ತು ಕಸುವಿನ ದಟ್ಟಣೆಯಲ್ಲಿ ಎಲ್ಲ ಮೋಟಾರ್‌ಗಳಿಗಿಂತ ಮೇಲು. ಇದೇ ಕಾರಣಕ್ಕೆ ಇವುಗಳನ್ನು ಫೆರಾರಿಯಂತ ದುಬಾರಿ ಮತ್ತು ಸೂಪರ್ ಕಾರುಗಳಲ್ಲಿ ಬಳಸುತ್ತಾರೆ. ಈ ಮೋಟಾರ್‌ಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ತೂಕದಲ್ಲೂ ಹಗುರ. ಇವುಗಳನ್ನು ಹಿಡಿತದಲ್ಲಿಡುವುದು PMSM ಓಡುಗೆಗಳಂತೆ ಇರಲಿದೆ. ಇವುಗಳ ತಂಪಾಗಿಸುವಿಕೆಯೂ ಸಲೀಸು. ಆಕ್ಷಿಯಲ್ ಫ್ಲಕ್ಸ್ ಓಡುಗೆಗಳಲ್ಲಿ ಹೆಚ್ಚು ಗಟ್ಟಿಮುಟ್ಟಾದ ಸೆಳೆಗಲ್ಲಿನ ಬಳಕೆಯಿಂದ ದುಬಾರಿ ಎನಿಸಿಕೊಂಡಿವೆ.
- ಸಿಂಕ್ರೋನಸ್ ರಿಲಕ್ಟನ್ಸ್ ಮೋಟಾರ್ಸ್ (Synchronous Reluctance Motors):
ಇವುಗಳಲ್ಲೂ ರೋಟಾರ್‌ಗೆ ಯಾವುದೇ ಸೆಳೆಗಲ್ಲಾಗಲಿ ಇಲ್ಲವೇ ತಂತಿಸುರುಳಿಗಳನ್ನು ಬಳಸುವುದಿಲ್ಲ. ಇವುಗಳನ್ನು ಹಿಡಿತದಲ್ಲಿಡುವ ಬಗೆಯು PMSM ಬಗೆಯ ಓಡುಗೆಗಳಂತೆ ಇರಲಿವೆ. ಈ ಓಡುಗೆಗಳ ಕಸುವಿನ ದಟ್ಟಣೆ ಮತ್ತು ದಕ್ಷತೆಯೂ ಹೆಚ್ಚಾಗಿದೆ. ಬೆಲೆಯಲ್ಲಿ PMSM ಓಡುಗೆಗಳಿಗಿಂತ ಅಗ್ಗ ಮತ್ತು ಇಂಡಕ್ಷನ್ ಓಡುಗೆಗಳಿಗಿಂತ ತುಸು ಹೆಚ್ಚು. ಇವುಗಳನ್ನು ಕೈಗಾರಿಕೆಯಲ್ಲಿ ಮತ್ತು ವೋಲ್ವೋ ಟ್ರಕ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ.