ನೆಲದಾಳದಲ್ಲಿ ಹೊಸ ನೀರು

ಪ್ರಶಾಂತ ಸೊರಟೂರ.

ಈಗ ಕಡಲಿನಲ್ಲಿರುವ ನೀರಿಗಿಂತ ಮೂರು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿ ದೊರೆತಿದೆ !

ಎಂಬಂತ ಬಿಸಿ ಸುದ್ದಿ ಹಲವು ವರ್ಷಗಳಿಂದ ಜಗತ್ತಿನೆಲ್ಲೆಡೆ ಪಸರಿಸಿತ್ತು. ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ ದಿನಗಳಲ್ಲಿ ಹೊಸದಾಗಿ ದೊರೆತ ಹೇರಳವಾದ ನೀರಿನ ಸೆಲೆ ಎಲ್ಲರನ್ನೂ ಸೆಳೆದಿತ್ತು. ಆದರೆ ಹಾಗೆ ದೊರೆತ ಸೆಲೆಯ ಆಳಕ್ಕೆ ಹೋಗುವುದು ಮತ್ತು ಅಲ್ಲಿಂದ ನೀರೆತ್ತಿ ನೆಲದ ಮೇಲ್ಗಡೆ ತರುವುದು ಈ ಹೊತ್ತಿಗಂತೂ ಆಗದ ಮಾತು ಅನ್ನುವಂತ ವಿಷಯ ಹಲವು ಮಂದಿಯ ಗಮನಕ್ಕೆ ಬರಲಿಲ್ಲವೆನ್ನಬಹುದು.

ಹೊಸ ನೀರಿನ ಸೆಲೆ ಎಟುಕದ ಕನ್ನಡಿಯಲ್ಲಿರುವ ಗಂಟಿನಂತಾದರೂ, ಈ ಹೊಸ ಕಂಡುಹಿಡಿಯುವಿಕೆ ನೆಲದಲ್ಲಿ ಕಡಲುಗಳು ಹೇಗೆ ಉಂಟಾದವು ಅನ್ನುವಂತ ಸಿಕ್ಕಲಾದ ಪ್ರಶ್ನೆಗೆ ಸರಿಯಾದ ಉತ್ತರ ನೀಡಲಿದೆಯೆಂದು ಅರಿಮೆಗಾರರು ಅಂದುಕೊಂಡಿದ್ದಾರೆ. ನೀರಿನ ಈ ಹೊಸ ಸೆಲೆಯತ್ತ ಹೋಗುವ ಮುನ್ನ ನಮ್ಮ ನೆಲದ ಆಳಕ್ಕೆ ಮೊದಲು ಇಳಿಯೋಣ ಬನ್ನಿ.

ನೆಲದ ಮೇಲ್ಮಯಲ್ಲಿ ಕಡಲು, ಬೆಟ್ಟಗಳು ಇರುವುದು ಕಣ್ಣಿಗೆ ಕಾಣಿಸುವಂತದು. ನೆಲದಲ್ಲಿ ನೀರಿನ ಪಾಲು ಮೂರುಪಟ್ಟಿದೆ ಅನ್ನುವುದು ಅದರ ಮೇಲ್ಮಯನ್ನು ತೆಗೆದುಕೊಂಡಾಗಷ್ಟೇ ದಿಟ, ಆದರೆ ಅದರ ಒಡಲಾಳದ ರಚನೆಯನ್ನು ತಿಳಿದುಕೊಂಡಾಗ ಅದರ ಇಡಿಯಾದ ಕಟ್ಟಣೆ ನಮ್ಮ ಅರಿವಿಗೆ ಬರಬಲ್ಲದು. ನೆಲದ ಒಟ್ಟಾರೆ ತೂಕಕ್ಕೆ ಹೋಲಿಸಿದಾಗ ನೀರಿನ ತೂಕ, ಅದರ ಪ್ರಮಾಣ ತುಂಬಾನೇ ಕಡಿಮೆ. ನೆಲದಾಳವು ಮುಖ್ಯವಾಗಿ ಕಬ್ಬಿಣದಂತಹ ಜಲ್ಲಿಯ ವಸ್ತುಗಳಿಂದ ಕೂಡಿದೆ.

ಹಿಂದಿನ ಬರಹವೊಂದರಲ್ಲಿ ನೆಲದ ದುಂಡಗಲವು ಸುಮಾರು 12,756 ಕಿ.ಮೀ. ಮತ್ತು ಅದರ ರಾಶಿಯು (mass) ಸುಮಾರು 5.98 x1024 kg ಇರುವುದನ್ನು ತಿಳಿದುಕೊಂಡಿದ್ದೆವು. ನೆಲದ ಮೇಲ್ಮಯಿಂದ ನೆಲದ ನಡುವು (center) ಸುಮಾರು 12,756/ = 6378 ಕಿ.ಮೀ. ಆಳದಲ್ಲಿದೆ.

ಅದರ ಒಟ್ಟು ರಾಶಿಯಲ್ಲಿ ಕಬ್ಬಿಣವು ಸುಮಾರು 32.1%, ಆಕ್ಸಿಜನ್ 30.1%, ಸಿಲಿಕಾನ್ 15.1%, ಮ್ಯಾಗ್ನೇಸಿಯಂ 13.9%, ಗಂದಕ 2.9%, ನಿಕೆಲ್ 1.8%, ಕ್ಯಾಲ್ಸಿಯಂ 1.5% ಮತ್ತು ಅಲ್ಯುಮಿನಿಯಂ 1.4% ರಷ್ಟಿದೆ. ಕೆಳಗಿನ ತಿಟ್ಟದಲ್ಲಿ ನೆಲದ ಒಟ್ಟಾರೆ ಸೀಳುನೋಟವನ್ನು ತೋರಿಸಲಾಗಿದೆ.

ನೆಲದ ಇಟ್ಟಳವನ್ನು (structure) ತೊಗಟೆ (0-35 km), ಮೇಲ್ ಹೊದಿಕೆ (35-60 km), ಹೊದಿಕೆ (35-2890 km), ಹೊರತಿರುಳು (2890-5150) ಮತ್ತು ಒಳತಿರುಳು (5150-6378 km) ಅಂತಾ ಗುರುತಿಸಲಾಗಿದೆ. ನೆಲದ ಒಳತಿರುಳು ಮತ್ತು ಹೊರತಿರುಳಿನ ಭಾಗ ತುಂಬಾ ದಟ್ಟಣೆ ಹೊಂದಿದ್ದು ಮುಖ್ಯವಾಗಿ ಕರಗಿದ ಕಬ್ಬಿಣದಿಂದ ಕೂಡಿದೆ. ಹೊದಿಕೆಯ ಭಾಗವು ಸಿಲಿಕೇಟ್ ಕಲ್ಲುಗಳಿಂದ ಕೂಡಿದ್ದು ಕಬ್ಬಿಣ ಮತ್ತು ಮ್ಯಾಗ್ನೇಸಿಯಂ ಜಲ್ಲಿಗಳನ್ನು ಒಳಗೊಂಡಿದೆ. ತೊಗಟೆಯ ಭಾಗವು ಕಡಲಾಳ, ಕಲ್ಲುಗಳು, ಜಲ್ಲಿಗಳಿಂದ ಕೂಡಿದೆ.

ನೆಲದ ಆಳದಲ್ಲಿ ತುಂಬಾನೇ ಒತ್ತಡ ಮತ್ತು ಬಿಸುಪಿರುವುದರಿಂದ ಅದರ ಆಳಕ್ಕೆ ಕೆಲವು ಕಿ.ಮೀ. ಗಳಷ್ಟೇ ಮನುಷ್ಯರು ಮಾಡಿದ ಸಲಕರಣೆಗಗಳು ಇಳಿಯಬಲ್ಲವು. ಹಾಗೆ ನೋಡಿದರೆ ಇಲ್ಲಿಯವರೆಗೆ ನೆಲದ ಮೇಲ್ಮಯಿಂದ ಮನುಷ್ಯರಿಗೆ ಕೊರೆಯಲು ಆದ ತೂತಿನ ಆಳ ಬರೀ 12.3 ಕಿ.ಮೀ. (ರಷ್ಯಾ ಕೈಗೊಂಡ ತೂತು ಕೊರೆಯುವ ಹಮ್ಮುಗೆ, 1989). ನೆಲದಾಳದಲ್ಲಿ ಸಲಕರಣೆಗಳನ್ನು ಇಳಿಸಲು ಆಗದಿದ್ದರೂ, ನೆಲದ ಇಟ್ಟಳವನ್ನು ಅರಿಮೆಯ ಇತರ ಚಳಕಗಳನ್ನು ಬಳಸಿ ಅರಿತುಕೊಳ್ಳಲಾಗುತ್ತದೆ. ಅಂತಹ ಅರಿಮೆಯ ಚಳಕದಲ್ಲಿ ಮುಕ್ಯವಾದದ್ದು ನಡುಕದರಿಮೆ (Seismology).

ಮುಖ್ಯವಾಗಿ ನೆಲದ ತೊಗಟೆಯ ಭಾಗದಲ್ಲಿ ಬಿಡುಗಡೆಯಾಗುವ ಹೇರಳವಾದ ಕಸುವಿನಿಂದಾಗಿ ‘ನೆಲನಡುಕಗಳು’ (earthquakes) ಉಂಟಾಗುತ್ತವೆ. ಹೀಗೆ ಉಂಟಾದ ನೆಲನಡುಕಗಳು ಹೊಮ್ಮಿಸುವ ನಡುಕದ ಅಲೆಗಳು (seismic waves), ನೆಲದ ಮೇಲ್ಮಯಿಂದ ಹಿಡಿದು ಅದರ ತಿರುಳಿನ ಭಾಗದವರೆಗೆ ತೂರಬಲ್ಲವು. ನಡುಕದ ಅಲೆಗಳ ಹರಡುವ ಬಗೆ, ಅವುಗಳ ವೇಗ, ನೆಲದ ಇಟ್ಟಳವನ್ನು ಮೇಲೆ ತಿಳಿಸಿರುವಂತೆ ಗುರುತಿಸಲು ನೆರವಾಗಿವೆ. ನಡುಕದ ಅಲೆಗಳು ಬೇರೆ ಬೇರೆ ವಸ್ತುಗಳಲ್ಲಿ ಬೇರೆಯಾದ ವೇಗದಿಂದ ಹರಡುತ್ತವೆ. ಒಣಕಲ್ಲಿನಂತಹ ರಚನೆಯಲ್ಲಿ ಅವುಗಳ ವೇಗ ಬೇರೆಯಾಗಿದ್ದರೆ ನೀರಿನಿಂದ ಕೂಡಿದ ಹಸಿಕಲ್ಲಿನಲ್ಲಿ ವೇಗವು ಬೇರೆಯಾಗಿರುತ್ತದೆ.

ಮುಮ್ಮಲೆಗಳು (Primary/P Waves) ಎಂದು ಗುರುತಿಸಲಾಗುವ ನಡುಕದಲೆಗಳ ಒಂದು ಬಗೆ, ಗಟ್ಟಿಯಾದ ಮತ್ತು ನೀರಿನ ರೂಪದಲ್ಲಿರುವ ವಸ್ತಗಳೆರಡಲ್ಲೂ ಸಾಗಬಲ್ಲವು. ಅದೇ ಇಮ್ಮಲೆಗಳು (Secondary/S Waves) ಎಂಬ ನಡುಕದಲೆಗಳು ಗಟ್ಟಿಯಾದ ವಸ್ತುಗಳಲ್ಲಷ್ಟೇ ಸಾಗಬಲ್ಲವು.

Picture1

ಹಾಗೆನೇ ನೀರಿನ ರೂಪ ಇಲ್ಲವೇ ಅದರ ಅಂಶವನ್ನು ಹೊಂದಿದ ವಸ್ತುಗಳಲ್ಲಿ ಸಾಗುವಾಗ ಮುಮ್ಮಲೆಗಳ ವೇಗ ಬದಲಾಗುವುದು ಅರಕೆಯಿಂದ ತಿಳಿದುಬಂದಿದೆ. ಈ ಅರಿವನ್ನು ಬಳಸಿಕೊಂಡೇ ಇತ್ತೀಚಿಗೆ ನೆಲದಾಳದಲ್ಲಿ ’ನೀರಿದೆ’ ಎಂಬುದನ್ನು ಅಂದಾಜಿಸಲಾಗಿದೆ. ಈಗ ನಮ್ಮ ಈ ಬರಹದ ಮುಖ್ಯ  ವಿಷಯ’ನೆಲದಾಳ’ದಲ್ಲಿ ನೀರಿನತ್ತ ಬಂದಂತಾಯಿತು.

ಅಮೇರಿಕಾದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ನೆಲದಿರುವರಿಗ (geophysicist) ಸ್ಟೀವ್ ಜಾಕಬ್ಸನ್ (Steve Jacobsen) ಮತ್ತು ನ್ಯೂ ಮೆಕ್ಸಿಕೋ ಯೂನಿವರ್ಸಿಟಿಯ ನಡುಕದಲೆಯರಿಗ (seismologist) ಬ್ರಾಂಡನ್ (Brandon Schmandt) ಅವರು ನಡುಕದರಿಮೆ ಬಳಸಿ, ನೆಲದ ಮೇಲ್ಮೈಯಿಂದ ಸುಮಾರು 660 ಕಿ.ಮೀ. ಆಳದಲ್ಲಿ ನೀರಿನ ಬಿಡಿಕಣಗಳಿದ್ದು, ಅವುಗಳು ರಿಂಗ್‍ವುಡಯ್ಟ್ (Ringwoodite) ಎಂಬ ಹರಳು ರೂಪದಲ್ಲಿರುವ ವಸ್ತುವಿಗೆ ಅಂಟಿಕೊಂಡಿರುವುದಾಗಿ ತಿಳಿಸಿದ್ದಾರೆ.

ರಿಂಗ್‍ವುಡಯ್ಟ್ (ಅದನ್ನು ಕಂಡುಹಿಡಿದ ಅರಿಮೆಗಾರರ ಹೆಸರಿನಿಂದ ಕರೆಯಲಾಗುತ್ತಿದೆ), ನೆಲದಾಳದ ಹೊದಿಕೆಯ ಭಾಗದಲ್ಲಿ ಹೇರಳವಾಗಿ ಇರುವ ವಸ್ತುವೆಂದು ನಡುಕದಲೆಗಳ ಮೂಲಕ ಈ ಮುಂಚೆ ಅರಿಯಲಾಗಿತ್ತು. ರಿಂಗ್‍ವುಡಯ್ಟ್ ಮುಖ್ಯವಾಗಿ  ಕಬ್ಬಿಣ ಮತ್ತು ಮ್ಯಾಗ್ನೇಸಿಯ್ಂ ನಿಂದ ಕೂಡಿದ್ದು, ತನ್ನ ತೂಕದ 2.1% ರಷ್ಟು ನೀರನ್ನು ಹಿಡಿದುಕೊಳ್ಳಬಲ್ಲದು ಅಂತಾನೂ ತಿಳಿಯಲಾಗಿತ್ತು. ಆದರೆ ಇಲ್ಲಿಯವರೆಗೆ ನೆಲದಾಳದ ರಿಂಗ್‍ವುಡಯ್ಟ್ ಹರಳಿನಲ್ಲಿ ನಿಜವಾಗಲೂ ನೀರಿದೆಯೇ ಎಂದು ಗೊತ್ತಾಗಿರಲಿಲ್ಲ.

BlueRingwoodite

(ನೆಲದ ಒಡಲಾಳದ ಹೊದಿಕೆಯ ಭಾಗದಲ್ಲಿ ಕಂಡುಬರುವ ರಿಂಗ್‍ವುಡಯ್ಟ್ ಹರಳು)

ಇಲ್ಲಿಯವರೆಗೆ ಉಂಟಾದ ಸುಮಾರು 500 ನೆಲನಡುಕಗಳ (earthquakes) ಮಾಹಿತಿಗಳನ್ನು ಸ್ಟೀವ್ ಜಾಕಬ್ಸನ್ ಅವರು ಒರೆಗೆಹಚ್ಚಿ ನೋಡಿದಾಗ, ನಡುಕದಲೆಗಳ (seismic waves) ವೇಗ ಸುಮಾರು 660 ಕಿ.ಮೀ. ನೆಲದಾಳಕ್ಕೆ ತಲುಪಿದಾಗಲೆಲ್ಲಾ ಬೇರೆಯಾಗಿರುವುದು ಮತ್ತು ಆ ವೇಗ ಹಸಿ ರೂಪದಲ್ಲಿರುವ ರಿಂಗ್‍ವುಡಯ್ಟ್ ಹರಳುಗಳಿಗೆ ತಾಗಿದಾಗ ಪಡೆಯುವ ವೇಗಕ್ಕೆ ಸಾಟಿಯಾಗಿದೆ ಎಂದು ತೋರಿಸಿದ್ದಾರೆ. ಇದಕ್ಕಾಗಿ ಅವರು ಮತ್ತು ಬ್ರಾಂಡನ್ ತಮ್ಮ ಅರಕೆಮನೆಯಲ್ಲಿ ಹಸಿ ಮತ್ತು ಒಣ ರಿಂಗ್‍ವುಡಯ್ಟ್ ಹರಳುಗಳಿಗೆ ನಡುಕದಲೆಗಳನ್ನು ತಾಗಿಸಿದಾಗ ದೊರೆತ ವೇಗ ಮತ್ತು ನೆಲನಡುಕಗಳು ನೀಡಿದ ಮಾಹಿತಿಯನ್ನು ತಾಳೆಹಾಕಿ ಈ ನಿಲುವಿಗೆ ಬಂದಿದ್ದಾರೆ.

ಹೀಗೆ ನೆಲದಾಳದಲ್ಲಿ ಇಳಿಯದೇ ಅರಿಮೆಯ ಚಳಕಗಳನ್ನು ಬಳಸಿ ನೆಲದ ಒಡಲಾಳದಲ್ಲಿ ನೀರಿರುವುದನ್ನು ಅರಿಮೆಗಾರರು ತೋರಿಸಿದಂತಾಗಿದೆ. ನಮಗೆ ಕಂಡಿರುವ ಈ ಹೊಸ ನೀರು ಬಳಕೆಗೆ ಎಟುಕದಂತಿದ್ದರೂ, ನಮ್ಮ ನೆಲದ ಮೇಲ್ಮೈಯಲ್ಲಿ ಉಂಟಾಗಿರುವ ಕಡಲುಗಳ ಹುಟ್ಟಿನ ಕತೆ ಮತ್ತು ಒಟ್ಟಾರೆಯಾಗಿ ನೆಲದ ರಚನೆಯ ಬಗ್ಗೆ ನಮಗೆ ಸಾಕಷ್ಟು ತಿಳುವಳಿಕೆಯನ್ನು ಮುಂದಿನ ದಿನಗಳಲ್ಲಿ ನೀಡಲಿದೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: www.usatoday.com, scitechdaily.comwikipedia.org)

ನೆಲದಾಳದ ಕೊರೆತ

ವೋಯೇಜರ್-1 ಎಂಬ ಬಾನಬಂಡಿ (spacecraft) ನಮ್ಮ ನೆಲದಿಂದ ಸರಿಸುಮಾರು 141 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 2.11 x 1010 km ದೂರದಲ್ಲಿ ಸಾಗುತ್ತಿದೆ. ಇಷ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ ಅದನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಮನುಷ್ಯರ ಅರಿವಿನ ಎಲ್ಲೆ ಚಾಚಿಕೊಂಡಿದೆ. ಆದರೆ ಈ ಬರಹದಲ್ಲಿ  ಹೇಳಹೊರಟಿರುವುದು ವೋಯೇಜರ್ ಬಗ್ಗೆ ಅಲ್ಲ. ಬಾನಾಳದಲ್ಲಿ ಇಷ್ಟು ದೂರ ಸಾಗಬಲ್ಲೆವಾದರೂ ನಾವು ನೆಲೆ ನಿಂತಿರುವ ನೆಲದಲ್ಲಿ ಎಷ್ಟು ಆಳವನ್ನು ತಲುಪಲು ಇಲ್ಲಿಯವರೆಗೆ ಆಗಿದೆ ಅನ್ನುವುದರ ಕುರಿತು.

ನಿಮಗೆ ಬೆರಗಾಗಬಹುದು, ಮೇಲ್ಮೈಯಿಂದ ಅದರ ನಡುವಿನವರೆಗೆ ಸುಮಾರು 6378 ಕಿ.ಮೀ. ಆಳವಿರುವ ನೆಲದಲ್ಲಿ ಇಲ್ಲಿಯವರೆಗೆ ಮನುಷ್ಯರಿಗೆ ತಮ್ಮ ಸಲಕರಣೆಗಳನ್ನು ತೂರಲು ಆಗಿರುವುದು 12.26 ಕಿ.ಮೀ. ಅಷ್ಟೇ! ಅಂದರೆ ನೆಲದಾಳದ ಬರೀ 0.2%! ನೆಲದಾಳದಲ್ಲಿರುವ ಕಾವಳತೆ (temperature), ಒತ್ತಡ ಮನುಷ್ಯರು ಮಾಡಿದ ಸಲಕರಣೆಗಳು ತೂರಲಾಗದ ಮಟ್ಟದಲ್ಲಿದ್ದು, ಬಾನಾಳವನ್ನು ಗೆಲ್ಲುವಷ್ಟು ಸುಲಭವಲ್ಲ. ಆದರೆ ಎಂದಿನಂತೆ ಮನುಷ್ಯರು ಈ ನಿಟ್ಟಿನಲ್ಲಿ ಸಾಹಸವನ್ನಂತೂ ಮಾಡುತ್ತಲೇ ಬಂದಿದ್ದಾರೆ.

ನೆಲದ ಆಳಕ್ಕೆ ತೂರುವ ಕೋಲಾ ಕಡು ಆಳದ ಕೊರೆತ (Kola Super-deep Borehole) ಎನ್ನುವ ಯೋಜನೆಯನ್ನು ರಷ್ಯಾ 24.05.1970 ರಲ್ಲಿ ಆರಂಭಿಸಿತು. ಈ ಯೋಜನೆಯನ್ನು ಶುರು ಮಾಡುವಾಗ ಸುಮಾರು 15 ಕಿ.ಮೀ. ಆಳಕ್ಕೆ ತೂತು ಕೊರೆಯುವ ಗುರಿಯನ್ನು ಇಟ್ಟುಕೊಂಡಿದ್ದ ರಷ್ಯಾ, 19 ವರುಶಗಳ ಬಳಿಕ 1989 ರಲ್ಲಿ 12.26 ಕಿ.ಮೀ. ಆಳ ತಲುಪಿ ಅಲ್ಲಿಂದ ಇನ್ನೂ ಆಳಕ್ಕೆ ಇಳಿಯಲು ತನ್ನ ಸಲಕರಣೆಗಳಿಂದ ಆಗದು ಎನ್ನುವ ತೀರ್ಮಾನವನ್ನು ಕೈಗೊಂಡು ಯೋಜನೆಯನ್ನು ಕೊನೆಗೊಳಿಸಿತು.

1                          (ರಷ್ಯಾದ ತೂತು ಕೊರೆಯುವ ಯೋಜನೆಯ ತಾಣ)

ಅಮೇರಿಕಾ ಅದಕ್ಕೂ ಮುಂಚೆ ಇಂತಹ ಆಳದ ತೂತು ಕೊರೆಯುವ ಕೆಲಸಕ್ಕೆ ಕೈಹಾಕಿ 9.583 ಕೀ.ಮೀ. ಆಳಕ್ಕೆ ಇಳಿಯಿತಾದರೂ, ರಷ್ಯಾ ತಲುಪಿದ ಆಳವನ್ನು ತಲುಪಲು ಅದಕ್ಕೆ ಆಗಲಿಲ್ಲ. ರಷ್ಯಾ ಕೊರೆದ ತೂತು ಮನುಷ್ಯರು ಮಾಡಿದ ಎಲ್ಲಕ್ಕಿಂತ ನೆಲದಾಳದ ತೂತು ಎಂಬ ತನ್ನ ಹಿರಿಮೆಯನ್ನು ಇಂದು ಕೂಡ ಕಾಯ್ದುಕೊಂಡಿದೆ.

ರಷ್ಯಾ ಕೈಗೊಂಡಿದ್ದ ಯೋಜನೆಯಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ತೊಡಕುಗಳು ಅದಕ್ಕೆ ಎದುರಾದವು. 1984 ರಲ್ಲಿ ಸುಮಾರು 12000 ಮೀ (12 ಕಿ.ಮೀ.) ಆಳ ತಲುಪಿದಾಗ ಕೊರೆತದ ಸಲಕರಣೆಯ ಸುಮಾರು 5000 ಮೀ ಉದ್ದದ ಎಳೆ ನೆಲದೊಳಗೆ ಮುರಿದುಹೋಯಿತು. ಆಗ ಆ ಆಳವನ್ನು ಬಿಟ್ಟು ಸುಮಾರು 7000 ಮೀ ಆಳದಿಂದ ಬೇರೆ ದಾರಿಯಲ್ಲಿ ತೂತು ಕೊರೆಯುವ ಕೆಲಸವನ್ನು ಮುಂದುವರೆಸಬೇಕಾಯಿತು. ಮುಂದೆ 1989 ರಲ್ಲಿ 12262 ಮೀ. ತಲುಪಿದ ಕೊರೆತ ಅದೇ ವರುಶ 13500 ಮೀ ಮತ್ತು 1990 ರಲ್ಲಿ 15000 ಮೀ ತಲುಪಲಿದೆಯೆಂದು ರಷ್ಯಾ ಅಂದುಕೊಂಡಿತ್ತು.

ಆದರೆ 12262 ಮೀ. ಆಳ ತಲುಪುತ್ತಿದ್ದಂತೆ ನೆಲದಾಳದ ಕಾವು ಸುಮಾರು 180 ಡಿಗ್ರಿ ಸೆಲ್ಸಿಯಸ್ ಇರುವುದು ಗೊತ್ತಾಯಿತು. ಈ ಮಟ್ಟದ ಕಾವು (temperature) ಮುಂದುವರೆದರೆ 15000 ಮೀ ಆಳದಲ್ಲಿ ಕಾವು ಸುಮಾರು 300 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಅಷ್ಟು ಬಿಸುಪನ್ನು ತಡೆದುಕೊಳ್ಳಲು ಕೊರೆತದ ಸಲಕರಣೆಗೆ ಆಗದೆನ್ನುವ ತೀರ್ಮಾನಕ್ಕೆ ರಷ್ಯಾ ಬಂದಿತು. ಹಾಗಾಗಿ 12262 ಮೀ. ಆಳವೇ ಆ ಯೋಜನೆಯ ಕೊನೆಯಾಯಿತು.

2(ತೂತು ಕೊರೆಯುವ ಯೋಜನೆಯ ಚಿತ್ರ)

3 (ತೂತು ಕೊರೆಯಲು ಬಳಸಿದ ಸಲಕರಣೆ)

            ತಾನು ಅಂದುಕೊಂಡಿದ್ದ ಆಳವನ್ನು ತಲುಪಲು ಆಗದಿದ್ದರೂ, ರಷ್ಯಾ ಕೈಗೊಂಡ ಈ ಯೋಜನೆಯಲ್ಲಿ ಹಲವಾರು ಹೊಸದಾದ ವಿಷಯಗಳು ತಿಳಿದುಬಂದವು. ನೆಲದ ತೊಗಟೆಯ ಕಟ್ಟಣೆಯ ಬಗ್ಗೆ ಹಲವು ವಿಷಯಗಳು ಗೊತ್ತಾದವು. ಈ ಯೋಜನೆಯಲ್ಲಿ  ಕಂಡುಕೊಂಡ ಬೆರಗುಗೊಳಿಸಿದ ವಿಷಯಗಳೆಂದರೆ,

  1. ಸುಮಾರು 7 ಕಿ.ಮೀ. ಆಳದಲ್ಲಿ ಪೆಡಸುಕಲ್ಲುಗಳ(granite) ಮೇರೆ ಕೊನೆಯಾಗಿ ಕಪ್ಪುಗಲ್ಲುಗಳ (basalt) ಹರವು ಶುರುವಾಗದಿರುವುದು. ಈ ಆಳದ ಬಳಿಕ ಪೆಡಸುಕಲ್ಲುಗಳ ಮಾರ್ಪಟ್ಟ ರೂಪದ ಕಲ್ಲುಗಳೇ ಮುಂದುವರೆದಿರುವುದು ಈ ಯೋಜನೆಯಲ್ಲಿ ಕಂಡುಬಂದಿತು. ಅಷ್ಟೇ ಅಲ್ಲದೆ ಮಾರ್ಪಟ್ಟ ಈ ಪೆಡಸುಕಲ್ಲುಗಳಲ್ಲಿ ಬಿರುಕುಗಳಿದ್ದು, ಅಲ್ಲಿ ನೀರು ತುಂಬಿಕೊಂಡಿರುವುದು ಅರಿಮೆಗಾರರನ್ನು ಬೆರಗುಗೊಳಿಸಿತು. ಈ ನೀರು ನೆಲದ ಮೇಲ್ಮೈಯಿಂದ ಬರದೇ ನೆಲದ ಆಳದಿಂದ ಬಂದಿದ್ದೆಂದು ಅರಿಗರು ಎಣಿಸಿದ್ದಾರೆ.
  1. ನೆಲದಾಳದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಹೈಡ್ರೋಜನ್ ಆವಿ ಕಂಡುಬಂದಿದ್ದು. ಯೋಜನೆಯಲ್ಲಿ ಪಾಲ್ಗೊಂಡಿದ್ದ ಅರಿಗರು ಹೇಳುವಂತೆ ಆಳದ ಕೊಳವೆಯಿಂದ ಹೊಮ್ಮುತ್ತಿದ್ದ ಮಣ್ಣು ಹೈಡ್ರೋಜನ್ ಆವಿಯಿಂದ ಕುದಿಯುತ್ತಿರುವಂತೆ ಕಂಡುಬಂದಿತಂತೆ.

ನೇಸರನ ಕುಟುಂಬದಲ್ಲೇ ವಿಶೇಷವಾದ ಸುತ್ತಣವನ್ನು ಹೊಂದಿರುವ ನಮ್ಮ ನೆಲದ ಒಳರಚನೆಯನ್ನು ತಿಳಿದುಕೊಳ್ಳುವ, ಅದರ ರಚನೆಯ ಏರ್ಪಾಟನ್ನು ಅರಿತುಕೊಳ್ಳುವ ಇಂತಹ ಕುತೂಹಲ ಮನುಷ್ಯರಿಗೆ ಹಿಂದಿನಿಂದಲೂ ಇರುವಂತದು. ನೆಲದ ಮೇಲ್ಮೈಯಲ್ಲಿ ಕಡಲುಗಳು ಹೇಗೆ ಉಂಟಾದವು? ಅದರ ಆಳದಲ್ಲೂ ನೀರಿದೆಯೆ? ಅದರ ಆಳದಲ್ಲಿ ಅದಿರುಗಳು, ಜಲ್ಲಿಗಳು ಯಾವ ರೂಪದಲ್ಲಿವೆ? ನೆಲದ ಒಳಪದರುಗಳ ಹಂಚಿಕೆ ಹೇಗಿದೆ? ಹೀಗೆ ಹತ್ತಾರು ಪ್ರಶ್ನೆಗಳು ಮಂದಿಯ ತಲೆಯನ್ನು ಕೊರೆಯುತ್ತ ಬಂದಿವೆ. ಆದರೆ ನೆಲದಾಳಕ್ಕೆ ತೂರಿ ಇವುಗಳನ್ನು ತಿಳಿದುಕೊಳ್ಳುವಂತಹ ಅಳವು ದಕ್ಕಿಸಿಕೊಳ್ಳಲು ಮಾತ್ರ ಇಲ್ಲಿಯವರೆಗೆ ಮನುಷ್ಯರಿಗೆ ಆಗಿಲ್ಲ.

ನೇರವಾಗಿ ಆಳಕ್ಕೆ ತೂರಿ ತಿಳಿದುಕೊಳ್ಳಲು ಆಗದಿದ್ದರೂ, ಎಂದಿನಂತೆ ಅರಿಮೆಯ ಚಳಕವನ್ನು ಬಳಸಿ ನೇರವಲ್ಲದ ದಾರಿಯಲ್ಲೇ ನೆಲದ ರಚನೆಯನ್ನು ತಕ್ಕಮಟ್ಟಿಗೆ ಕಂಡುಕೊಳ್ಳುವಲ್ಲಿ  ಮುಂದಡಿಯಿಡಬೇಕಾಯಿತು. ಅದರಂತೆ ನೆಲನಡುಕದ ಅಲೆಗಳು (seismic waves) ಸಾಗುವ ಬಗೆಯನ್ನು ಅರಿತುಕೊಂಡು ನೆಲದ ರಚನೆಯನ್ನು ಕೆಳಗಿನಂತೆ ಗುರುತಿಸಲಾಗಿದೆ.

4

ಹೀಗೆ ಗುರುತಿಸಿದ ಇಟ್ಟಳವು (structure) ತಕ್ಕಮಟ್ಟಿಗೆ ಸರಿಯಿದೆಯೆಂದು ಅರಿಮೆಗಾರರು ಒಪ್ಪಿದ್ದರೂ ಆಗಾಗ ಇದರಲ್ಲಿ ಹೊಸ ಕಂಡುಕೊಳ್ಳುವಿಕೆಗಳು ಹೊರಹೊಮ್ಮುತ್ತಲಿವೆ. ಮೇಲ್ಮೈಯಲ್ಲಿರುವ ಕಡಲ ನೀರಿಗಿಂತ ಹಲವು ಪಟ್ಟು ಹೆಚ್ಚಿನ ನೀರು ನೆಲದಾಳದಲ್ಲಿದೆ ಎಂಬಂತಹ ಸುದ್ದಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಏನೇ ಆಗಲಿ, ಮನುಷ್ಯರ ಮೈ ಶಕ್ತಿಗಿಂತ ಅವರ ಅರಿವಿನ ಹಿರಿಮೆ ಹೆಚ್ಚಿನದು. ನಮ್ಮ ನೆಲದಾಳಕ್ಕೆ ಇನ್ನೂ ಆಳದ ’ಅರಿವಿನ ತೂತು’ ಕೊರೆದು, ಒಡಲಾಳದ ತಿಳುವಳಿಕೆಯನ್ನು ತನ್ನದಾಗಿಸಿಕೊಳ್ಳುವಲ್ಲಿ  ಮುಂದಿನ ದಿನಗಳಲ್ಲಿ ಇನ್ನಷ್ಟು ಗೆಲುವು ಸಿಗಬಹುದು.

 (ಮಾಹಿತಿಯ ಮೂಲ: https://en.wikipedia.org/wiki/Kola_Superdeep_Borehole, http://www.autoorb.com)