ಈ ಅರಿಮೆಗೆ ಅಣಕವೇ ಅಡಿಪಾಯ

ಪ್ರಶಾಂತ ಸೊರಟೂರ.

 

honey_tire_1

ಹಕ್ಕಿ ಹಾಯಾಗಿ ಹಾರುವುದರ, ಮೀನು ಸುಳುವಾಗಿ ಈಜುವುದರ, ಮಳೆ ಗಾಳಿಗೆ ಜಗ್ಗದೇ ನೂರಾರು ವರುಶ ಬಾಳುವ ಮರಗಳ ಹಿಂದಿನ ಗುಟ್ಟೇನು? ಒಂಟಿಯು ನೀರು ಕುಡಿಯದೇ ಹಲವು ತಿಂಗಳು ಹೇಗೆ ಬದುಕಬಲ್ಲದು? ಕಡಲ ಒಡಲಾಳದಲ್ಲಿರುವ ಜೀವಿಗಳಿಂದ ನಾವೇನು ಕಲಿಯಬಹುದು? ಹೀಗೆ ನಮ್ಮ ಸುತ್ತಣ ಜಗತ್ತು ಅಡಗಿಸಿಕೊಂಡಿರುವ ಬೆರಗುಗೊಳಿಸುವ ಒಗಟುಗಳನ್ನು ಬಿಡಿಸಿ, ಅವುಗಳನ್ನು ಚಳಕವಾಗಿ (technology) ಬಳಸುವ ಅರಿಮೆಯ ಕವಲು ಇತ್ತೀಚಿನ ವರುಶಗಳಲ್ಲಿ ತುಂಬಾ ಮಹತ್ವ ಪಡೆಯುತ್ತಿದೆ. ಇಂಗ್ಲೀಶಿನಲ್ಲಿ ಈ ಅರಿಮೆಯ ಕವಲನ್ನು ಬಯೋಮಿಮಿಟಿಕ್ಸ್ (biomimetics) ಎಂದು ಕರೆಯುತ್ತಾರೆ.

ನಮ್ಮ ಸುತ್ತಣದ (environment) ವಿಷಯಗಳಿಂದ  ಹೊಮ್ಮುವ ಈ ಅರಿಮೆಯನ್ನು ಕನ್ನಡದಲ್ಲಿ ಉಸಿರಿಯಣಕ, ಅಣಕರಿಮೆ, ಸುತ್ತಣಸೆಲೆ ಎಂದು ಕರೆಯಬಹುದು. ಈ ಅರಿಮೆ ಹೊಮ್ಮಿಸಿದ ಕೆಲವು ಚಳಕಗಳನ್ನು ಈ ಬರಹದಲ್ಲಿ ನೋಡೋಣ.

ಜೇನುಗೂಡು ಹೊಸ ಗಾಲಿಗೆ ಮಾದರಿ

ಗಾಳಿ ತುಂಬದೇ ಓಡಿಸಬಹುದಾದ ಗಾಲಿಯನ್ನು ಕಂಡುಹಿಡಿಯುವಲ್ಲಿ ಜೇನುಗೂಡಿನ ಕಟ್ಟಣೆ ನೆರವಾಗಿದೆ. ಜೇನುಗೂಡಿನ ಆರುಬದಿ ತುಣುಕುಗಳ ಆಕಾರದಲ್ಲಿ ಗಾಲಿ ಮಾಡಿದರೆ ಅದಕ್ಕೆ ಹೆಚ್ಚಿನ ತೂಕವನ್ನು ತಾಳಿಕೊಳ್ಳುವ ಮತ್ತು ತೂಕವನ್ನು ಸಮಾನಾಗಿ ಹಂಚುವ ಗುಣ ಪಡೆಯುವುದೆಂದು ಅರಕೆಯಿಂದ ತಿಳಿದು ಬಂದಿದೆ. ರೆಸಿಲಿಯಂಟ್ ಟೆಕ್ನಾಲಜಿ ಎಂಬ ಕೂಟ ಇದನ್ನು ಗುರುತಿಸಿದ್ದು, ಕಾವಲು ಪಡೆಯ ಗಾಡಿಗಳಲ್ಲಿ ಈಗ ಈ ಚಳಕವನ್ನು ಅಳವಡಿಸಲಾಗಿದೆ.

ಚಿಟ್ಟೆಯ ರೆಕ್ಕೆ ಹೊಸ ನೇಸರಪಟ್ಟಿಗಳಿಗೆ ಅಡಿಪಾಯ

ಚಿಟ್ಟಿಯ ರೆಕ್ಕೆಗಳಲ್ಲಿ ಹುದುಗಿರುವ ಅರಿಮೆ ಬಳಸಿಕೊಂಡು ನೇಸರಪಟ್ಟಿಗಳನ್ನು (solar panel) ಇನ್ನಷ್ಟು ಹದಗೊಳಿಸಲಾಗಿದೆ. ನೇಸರನ ಬೆಳಕನ್ನು ಕಸುವಾಗಿಸುವ ನೇಸರಪಟ್ಟಿಗಳನ್ನು, ಚಿಟ್ಟೆಯ ರೆಕ್ಕೆಯಲ್ಲಿರುವ ಪಟ್ಟಿಗಳಂತೆ ಮಾಡಿದರೆ ಹೆಚ್ಚಿನ ಕಸುವನ್ನು ಪಡೆಯಬಹುದು ಜೊತೆಗೆ ಈ ಬಗೆಯ ಪಟ್ಟಿಗಳನ್ನು ಮಾಡಲು ದುಡ್ಡು ಕೂಡಾ ಕಡಿಮೆ ಬೇಕಾಗುವುದೆಂದು ಕಂಡುಕೊಳ್ಳಲಾಗಿದೆ.

suttana_chitte_2

ಹಲಸು ಕಲಿಸಿತು ಗೋಡೆ ಕಟ್ಟುವ ಪಾಟ

ಸಿಂಗಾಪೂರದಲ್ಲಿ ಹೀಗೊಂದು ಒಳಾಂಗಣ ನೆಲೆ ಕಟ್ಟಲು ಹಲಸಿನಂತಿರುವ ಡ್ಯೂರೆನ್ (durian) ಹಣ್ಣಿನ ಹೊರಮಯ್ಯಿ ಮಾದರಿಯಾಗಿದೆ. ಈ ಹಣ್ಣಿನ ಹೊರಮಯ್ಯಿ ಆಕಾರದಲ್ಲಿ ಕಟ್ಟಡವನ್ನು ಮಾಡಿದ್ದರಿಂದ, ಸೂರ್ಯನ ಬೆಳಕು ಬೀಳುವ ಕೋನಕ್ಕೆ ತಕ್ಕಂತೆ  ಅದು ದಿನವಿಡೀ ಹೊಂದಿಕೊಳ್ಳುತ್ತಾ ಹೋಗುತ್ತದೆ. ಇದರಿಂದಾಗಿ ಹಾಯನಿಸುವ ಬೆಳಕಿನ ಮತ್ತು ನೆರಳಿನ ಬೆರೆತ ಈ ಕಟ್ಟಡದಲ್ಲಿ ಉಂಟಾಗಿದೆ.

durian-singapore_3

—————

ಶಾರ್ಕ್ ಪೊರೆ ಹೋಲುವ ಈಜುಡುಗೆ

ಈಜುವಾಗ ಎದುರಾಗುವ ನೀರಿನ ಇದಿರು ಸೆಳೆತವನ್ನು ಕಡಿಮೆ ಮಾಡುವಲ್ಲಿ ಶಾರ್ಕ್ಗಳಿಗೆ ಅವುಗಳ ಪೊರೆ ನೆರವಾಗುತ್ತದೆ. ಇದನ್ನು ಬಳಸಿಕೊಂಡು ಸ್ಪೀಡೋ ಎಂಬ ಕಂಪನಿ ಚುರುಕು-ಈಜುಡುಗೆಗಳನ್ನು ಹೊರತಂದಿದೆ. ಈ ಈಜುಡುಗೆಗಳಲ್ಲಿ ಬರೀ ಪೊರೆಯ ಆಕಾರವನ್ನು ಬಳಸದೇ ಅದರ ಹೊಂದಿಕೊಳ್ಳುವ, ಹೊರಳುವ ಗುಣಗಳನ್ನು ಅಳವಡಿಸಿಕೊಳ್ಳಲಾಗಿದೆ. ಓಲಂಪಿಕ್ ಈಜು ಪೈಪೋಟಿಯಲ್ಲಿಈ ಈಜುಡುಗೆಗಳು ಬಳಕೆಯಾಗಲಿವೆ.

swimm_suit_4

ಕಟ್ಟಡಕ್ಕೆ ಕಳ್ಳಿಗಿಡದ ಹೊಳಹು

ಮರಳುಗಾಡು, ಉರಿ ಬಿಸಿಲಿನ ನಾಡಾದ ಕತಾರನಲ್ಲಿ ಕಳ್ಳಿಗಿಡ (cactus) ಹೋಲುವ ಕಟ್ಟಡವೊಂದು ತಲೆ ಎತ್ತಿದೆ. ಈ ಕಟ್ಟಡದ ತುಂಬಾ ಕಿಟಕಿಗಳನ್ನು ಮಾಡಲಾಗಿದ್ದು, ಗಾಳಿ ಒಳಬಂದು ಕಾವು ಆಚೆ ಹೋಗುವಂತೆ ಅಣಿಗೊಳಿಸಲಾಗಿದೆ. ಈ ಬಗೆಯ ಹೊಳಹು (idea) ಹೊಳೆದದ್ದು ಕಳ್ಳಿಗಿಡ ಮರುಳುಗಾಡಿನಲ್ಲಿಯೂ ನೀರನ್ನು ಕೂಡಿಟ್ಟುಕೊಳ್ಳುವ ತಿಳುವಳಿಕೆಯಿಂದ.

cactus_office_buliding

ಮಿದುಳಿನಿಂದ ಹೊಮ್ಮಿದ ‘ಕಟ್ಟುಜಾಣ್ಮೆ’

 

ತಮ್ಮದೇ ತಿಳುವಳಿಕೆ ಹೊಂದಿರುವ, ಯೋಚನೆಗಳನ್ನು ಮಾಡಬಲ್ಲ ಸಲಕರಣೆಗಳನ್ನು ಹೊಮ್ಮಿಸುವಲ್ಲಿ ಕಟ್ಟುಜಾಣ್ಮೆ (artificial intelligence) ಇತ್ತೀಚಿನ ವರುಶಗಳಲ್ಲಿ ಹೊಸ ಹೊಸ ಮೈಲಿಗಲ್ಲು ದಾಟುತ್ತಿದೆ. ಮಾನವರ ಮತ್ತು ಇತರ ಪ್ರಾಣಿಗಳ ಮಿದುಳಿನ ರಚನೆಯನ್ನು ಅದು ಅಳವಡಿಸಿಕೊಳ್ಳುತ್ತಿದೆ.

AI_6

ಚಿಮ್ಮುಂಡಿ ಹುಳು ಕಾವಲು ಪಡೆಗೆ ತಿಳಿವು

ಅಮೇರಿಕದ ಹಡಗುಪಡೆ (navy) ಎದುರಾಳಿಗಳ ಹಡಗುಗಳನ್ನು ಕಂಡುಹಿಡಿಯಲು ಬಳಸುವ ಉಲಿಕಾವಲು  (Sound Navigation and Ranging-SONAR) ಸಲಕರಣೆಯನ್ನು ಇನ್ನಷ್ಟು ಹದಗೊಳಿಸಲು ಚಿಮ್ಮುಂಡಿ ಹುಳುವಿನ ಮೊರೆಹೋಗಿದೆ. ಚಿಮ್ಮುಂಡಿ ಹುಳು (cricket) ಮಾಡುವ ಸದ್ದು ಹಲವಾರು ಮೈಲಿವರೆಗೆ ಕೇಳಿಸಬಲ್ಲದು. ಚಿಮ್ಮುಂಡಿ ಹುಳುವಿನಂತೆ ಉಲಿಕಾವಲು ಸಲಕರಣೆ ಸದ್ದು ಹೊಮ್ಮಿಸುವಂತಾದರೆ ನೀರಿನೊಳಗೆ ಎದುರಾಳಿಗಳ ಹಡಗುಗಳಿಗೆ ಸದ್ದಿನ ಅಲೆ ತಾಕಿಸಿ, ಅವುಗಳಿಂದ ಮರಳಿ ಬರುವ ಸಂದೇಶಗಳನ್ನು ಒರೆಗೆಹಚ್ಚಿ ಹಡಗುಗಳನ್ನು ಕಂಡುಹಿಡಿಯಬಹುದು. ಅಮೇರಿಕಾದ ಪಡೆ ಈ ನಿಟ್ಟಿನಲ್ಲಿ ಚಿಮ್ಮುಂಡಿ ಹುಳುವಿನ ಗಂಟಲಿನ ಒಳರಚನೆ ಕುರಿತು ಅರಕೆ ನಡೆಸಿದೆ.

USA-CICADAS_7

ಮರಕುಟಿಗ ಹಕ್ಕಿಯ ಹೊಡೆತ ಹೀರುವ ಕಲೆ

ಮರಕುಟಿಗ ಹಕ್ಕಿಯ ಕೊಕ್ಕು ಹೊರಗಡೆ ಗಟ್ಟಿಯಾಗಿದ್ದು, ಒಳಗೆ ಮೆದುವಾಗಿರುವ ಹೊಡೆತ ಹೀರುವ ಎಲುಬುಗಳಿಂದ ಕೂಡಿದೆ. ಹೀಗಾಗಿ ಪ್ರತಿ ಸೆಕೆಂಡಿಗೆ 18-20 ಬಾರಿ ಕೊಕ್ಕುಗಳಿಂದ ಮರವನ್ನು ಕುಟುಕಿದರೂ ಅವುಗಳಿಗೆ ತೊಂದರೆಯಾಗದು. ಇದನ್ನು ಬಳಸಿ ಹೊಸದಾದ ಹೊಡೆತ ಹೀರಿಕೊಳ್ಳುವ ಸಲಕರಣೆಗಳನ್ನು ಹೊರತರಲಾಗುತ್ತಿದೆ. ಮರಕುಟಿಗ ಹಕ್ಕಿಯಿಂದ ಕಲಿತ ಕಲಿಕೆ ಪುಟಬಾಲ್ ಆಟಗಾರರನ್ನು ಹೊಡೆತದಿಂದ ಕಾಪಾಡಲು, ವಿಮಾನವು ತೊಂದರೆಗೆ ಈಡಾದಾಗಿನ ವಿಷಯಗಳನ್ನು ಕೂಡಿಡುವ ಕಪ್ಪುಪೆಟ್ಟಿಗೆಯನ್ನು (black box) ಮಾಡಲು ಕೂಡ ಬಳಕೆಯಾಗುತ್ತಿದೆ.

marakutiga_8

ಹೀಗೆ ನಮ್ಮ ಸುತ್ತಮುತ್ತಲಿನ ಜೀವಿಗಳು ವಾತಾವರಣಕ್ಕೆ ಹೊಂದಿಕೊಳ್ಳಲು ಮಾಡಿಕೊಂಡ ಮಾರ್ಪಾಡುಗಳನ್ನೇ ಅರಿತುಕೊಂಡು, ಸುತ್ತಣಕ್ಕೆ ಯಾವುದೇ ತೊಂದರೆಯನ್ನು ನೀಡದೇ, ನಮ್ಮ ಬದುಕಿನ ಹಲವಾರು ಅಡೆತಡೆಗಳನ್ನು ಮೀರುವ ಚಳಕಗಳನ್ನು ಅಣಕರಿಮೆ ನಮಗೆ ಒದಗಿಸುತ್ತಿದೆ.

ಮಾಹಿತಿ ಸೆಲೆ: http://webecoist.momtastic.comwww.popsci.comwww.wikipedia.com

ಮಿದುಳ್ ಬಂಡಿ

ಜಯತೀರ್ಥ ನಾಡಗೌಡ.

ಹೆದ್ದಾರಿಯೊಂದರಲ್ಲಿ ಬಂಡಿಯಲ್ಲಿ ಸಾಗುತ್ತಿದ್ದೀರಿ, ಸಾಲು ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಸಾಲು ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಗಾಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ ಗಾಡಿ ತಿರುವಿಕೊಂಡು ಮುನ್ನುಗ್ಗಿರುತ್ತದೆ. ಇದೇನಿದು ಎಂದುಕೊಳ್ಳುತ್ತಿದ್ದೀರಾ? ಹೌದು, ಇದೇ ಬ್ರೈನ್ ಟು ವೆಹಿಕಲ್(Brain to Vehicle) ಅನ್ನುವ ಹೊಸ ಚಳಕ(Technology).

ಜಗತ್ತಿನ ಮುಂಚೂಣಿಯ ಬಂಡಿ ತಯಾರಕ ಕೂಟ ನಿಸ್ಸಾನ್(Nissan) ಇಂತದೊಂದು ಹೊಸ ಚಳಕ ಎಲ್ಲರ ಮುಂದಿಟ್ಟಿದೆ. ಈ ಮಿದುಳ್ ಬಂಡಿಯನ್ನು (ಮಿದುಳಿನ ಅಲೆ ಗುರುತಿಸಿ ಕೆಲಸ ಮಾಡುವ ಬಂಡಿ), 2018ರ ಅಮೇರಿಕಾದಲ್ಲಿ ನಡೆದ ವರ್ಡ್ ಎಕಾನಾಮಿಕ್ ಫೋರಮ್‌ನಲ್ಲಿ(World Economic Forum) ನಿಸ್ಸಾನ್ ಕೂಟ ಈ ಚಳಕದ ಪರಿಚಯ ಮಾಡಿಸಿತ್ತು. ಫೋರಮ್ ನಲ್ಲಿ ಸೇರಿದ್ದ ಮಂದಿಗೆ, ಹೆದ್ದಾರಿಯಲ್ಲಿ ಇಂತ ಗಾಡಿ ಓಡಿಸುವ ಅವಕಾಶ ನೀಡಲಾಗಿತ್ತು. ಈ ಚಳಕ ಅಳವಡಿಸಿಕೊಂಡ ಗಾಡಿ, ದಿಟಹೊತ್ತಿನಲ್ಲಿ(Real Time) ತಂತಾನೇ ಹೊಂದಾಣಿಕೆ ಮಾಡಿಕೊಂಡು ಸಾಗುವ ಹೊಸ ಅನುಭವವೊಂದನ್ನು ಓಡಿಸುಗರಿಗೆ ನೀಡಿತ್ತು. ಮಿದುಳಿನ ಅಲೆಗಳ ಮೂಲಕ ಓಡಿಸುಗನ ಕೆಲಸ ಮಾಡುವುದು ಮತ್ತು ಓಡಿಸುಗರ ಅನಾನುಕೂಲಗಳನ್ನು ತಿಳಿಯುವುದು – ಈ ಏರ್ಪಾಟಿನ ಪ್ರಮುಖ ಕೆಲಸ.

ಈ ಚಳಕವನ್ನು ಎರಡು ಭಾಗಗಳಲ್ಲಿ ಬೇರ್ಪಡಿಸಬಹುದು, ಮೊದಲನೇಯದಾಗಿ ಮುನ್ಹೊಳಹುವಿಕೆ(Prediction): 

ಗಾಡಿಯನ್ನು ಓಡಿಸುಗನೇ ಓಡಿಸುತ್ತಿರುವಾಗ(Normal mode), ಓಡಿಸುಗನ ಮಿದುಳಿನ ಚಟುವಟಿಕೆಯನ್ನು ಈ ಚಳಕ ಮೊದಲೇ ಅರಿತು, ಆತ ಬಂಡಿಯನ್ನು ತಿರುಗಿಸಿಕೊಳ್ಳುವ ಇಲ್ಲವೇ ಬಂಡಿಯ ವೇಗ(Speed) ಹೆಚ್ಚಿಸಲು ತುಳಿಗೆಯನ್ನು(Accelerator Pedal) ಹೆಚ್ಚಿಗೆ ಒತ್ತುವ ಕ್ಷಣಗಳ ಮೊದಲೇ ಈ ಕೆಲಸ ನಡೆದು ಹೋಗಿರುತ್ತದೆ. ಅಂದರೆ ಇಲ್ಲಿ ಮಾರ್ಪೆಸಕದ ಹೊತ್ತು(Reaction Time) ಕಡಿತಗೊಂಡು, ಗಾಡಿ ಓಡಿಸುವಿಕೆಯ ನಲಿವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಇಕ್ಕಟ್ಟಿನ ಬೆಟ್ಟ-ಗುಡ್ಡದ ದಾರಿಯಲ್ಲಿ ಓಡಿಸುಗರು ಸಲೀಸಾಗಿ ಗಾಡಿ ಓಡಿಸಿಕೊಂಡು ಹೋಗಬಹುದು. ಇಂತಲ್ಲಿ, ನುರಿತ ಓಡಿಸುಗರು, ಈ ಚಳಕದ ಮೂಲಕ ತಮ್ಮ ಅಳವುತನವನ್ನು(Efficiency) ಇನ್ನೂ ಹೆಚ್ಚಿಸಿಕೊಳ್ಳಬಹುದು.

ಚಳಕದ ಎರಡನೇ ಬಾಗಕಂಡುಹಿಡಿಯುವಿಕೆ(Detection): 

ಈ ಹಂತದಲ್ಲಿ ಗಾಡಿ ತಂತಾನೇ ಸಾಗುವ ಬಗೆಯಲ್ಲಿದೆ(Autonomous Mode) ಎಂದುಕೊಳ್ಳಿ, ಈಗಲೂ ಓಡಿಸುಗನ ಮಿದುಳಿನಲ್ಲಿ ಬರುವ ಯೋಚನೆಗಳನ್ನು ಅದು ತಿಳಿದುಕೊಳ್ಳುತ್ತಿರುತ್ತದೆ. ಕಟ್ಟುಜಾಣ್ಮೆಯ(Artificial Intelligence) ಮೂಲಕ ಓಡಿಸುಗನ ಕಿರಿಕಿರಿ, ಅನಾನುಕೂಲಗಳನ್ನು ಅರಿಯುವ ಈ ಚಳಕ, ಬಂಡಿ ಓಡಿಸುವ ಬಗೆಯನ್ನು ಬದಲಿಸುವ ಕೆಲಸ ಮಾಡುತ್ತದೆ. ಉದಾಹರಣೆಗೆ, ಹೆದ್ದಾರಿಯಲ್ಲಿ ಹೋಗುವಾಗ, ಗಾಡಿ ತಂತಾನೇ ಒಂದು ವೇಗದಲ್ಲಿ ಸಾಗುತ್ತಿರುತ್ತದೆ, ಆಗ ಓಡಿಸುಗ ತನ್ನ ಬಂಡಿ ಹೆಚ್ಚಿನ ವೇಗದ ಸಾಲು(Fast Speed Lane) ಯಲ್ಲಿ ಸಾಗಬೇಕೆಂದುಕೊಂಡರೆ, ಕೆಲವು ಸೆಕೆಂಡುಗಳ ನಂತರ ಬಂಡಿ ಅದನ್ನರಿತು, ಓಡಿಸುಗ ಅಂದುಕೊಂಡಂತೆ ಅವನಿಷ್ಟದ ಓಣಿಯಲ್ಲಿ ಸಾಗುತ್ತದೆ.

ನಿಸ್ಸಾನ್‌ರವರ ಮಿದುಳ್ ಬಂಡಿ ಚಳಕ, ಗಾಡಿಗೆ ಸಂಬಂಧಿಸಿದಂತೆ, ದಿಟಹೊತ್ತಿನಲ್ಲಿ ಮಿದುಳಿನ ಅಲೆಗಳನ್ನು, ಚಟುವಟಿಕೆಗಳನ್ನು ಅರಿಯುವ ಮೊಟ್ಟ ಮೊದಲ ಚಳಕವಾಗಿದೆ. ಮಿದುಳಿನ ಅಲೆ ಅರಿಯಲು ಈ ಚಳಕದಲ್ಲಿ ಓಡಿಸುಗ ಒಂದು ಟೋಪಿ ತಲೆಗೆ ಧರಿಸಬೇಕು. ಈ ಟೋಪಿ ಸಾಮಾನ್ಯ ಟೋಪಿಯಾಗಿರದೇ, ಎಲೆಕ್ಟ್ರೊಎನ್ಸಿಫಾಲೋಗ್ರಫಿ(Electroencephalography) ಬಳಸಿ ಓಡಿಸುಗನ ಮಿದುಳಿನ ಅಲೆಗಳ ಅರಿವುಕಗಳ(Brain Wave Sensors) ಮೂಲಕ ಓಡಿಸುಗನ ಯೋಚನೆಗಳನ್ನು ದಿಟಹೊತ್ತಿನಲ್ಲಿ ಅರಿತು ಗಾಡಿಯ ಗಣಕಕ್ಕೆ(Computer) ಸಾಗಿಸುವಂತದ್ದು. ಇನ್ನೇನು ಗಾಡಿ ಓಡಿಸುಗ ತುಳಿಗೆಯನ್ನು ಬಲವಾಗಿ ತುಳಿಯಬೇಕು, ಬಂಡಿಯನ್ನು ತಿರುಗಿಸಬೇಕು ಎಂದುಕೊಳ್ಳುತ್ತಿರುವ 0.2 ರಿಂದ 0.5 ಸೆಕೆಂಡುಗಳ ಮೊದಲೇ ಆ ಕೆಲಸವನ್ನು ಬಂಡಿ ಮಾಡಿರುತ್ತದೆ.

ಮಿದುಳ್ ಬಂಡಿ ಓಡಿಸುಗರು ಧರಿಸಬೇಕಾದ ಟೋಪಿ

ಈ ಚಳಕವನ್ನು ಓಡಿಸುಗರ, ಪಯಣಿಗರ ಮತ್ತು ಬಂಡಿಯ ಕಾಪಿನ(Safety) ಬಗ್ಗೆ ಯಾವುದೇ ರಾಜಿಮಾಡಿಕೊಳ್ಳದಂತೆ ತಯಾರು ಮಾಡಲಾಗುತ್ತಿದೆ. ಈ ಹೊಸ ಚಳಕದ ಮೇಲೆ ಬಲು ನಂಬುಗೆ ಇಟ್ಟುಕೊಂಡಿರುವ ನಿಸ್ಸಾನ್ ಕೂಟದ ಮಾರಾಟ ವಿಭಾಗದ ಹಿರಿಯಾಳು ಡ್ಯಾನಿಯಲ್ ಶಿಲ್ಲಾಚಿ(Daniele Schillaci), ಮುಂಬರುವ ವರುಶಗಳಲ್ಲಿ ತಂತಾನೇ ಓಡುವ ಗಾಡಿಗಳ ಸಂಖ್ಯೆ ಏರಿಕೆಯಾಗಲಿದ್ದು, ಅಲ್ಲಿ ತಮ್ಮ ಮಿದುಳ್ ಬಂಡಿ ಚಳಕ ಸಾಕಷ್ಟು ಕ್ರಾಂತಿ ಉಂಟುಮಾಡಲಿದೆಯೆಂದು ಹೇಳಿಕೊಂಡಿದ್ದಾರೆ. ಈ ಚಳಕ ಬಲು ಭದ್ರವಾಗಿದ್ದು(Safe), ಓಡಿಸುಗರಿಗೆ ಹೊಸ ಹುರುಪು ಮತ್ತು ನಲಿವು ತರಲಿದೆ ಎನ್ನುತ್ತಾರೆ-ಶಿಲ್ಲಾಚಿ.

ಈ ಚಳಕದ ಅನಾನುಕೂಲವೆಂದರೆ ಇಲ್ಲಿ ಓಡಿಸುಗನ ಮಿದುಳಿನಲ್ಲಿ ನಡೆಯುವ ಚಟುವಟಿಕೆಗಳನ್ನು ಅರಿಯುವುದರ ಮೂಲಕ ಅವರ ಗುಟ್ಟಿನ(Privacy) ವಿಷಯ ಇತರರಿಗೆ ತಿಳಿಯುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸಾಕಶ್ಟು ಚರ್ಚೆಗಳು ನಡೆಯುತ್ತಿವೆ. ಓಡಿಸುಗನ ತಲೆಯಲ್ಲಿ ಬರುವ ವಿಚಾರಗಳು ಗಾಡಿಯ ಗಣಕದ ಮೂಲಕ ತಿಳಿದು ಆಯಾ ವ್ಯಕ್ತಿಗಳ ಪ್ರೈವೆಸಿಗೆ ಅಡ್ಡಿಯುಂಟಾಗುವುದು ಖಚಿತ. ಇನ್ನೂ ಗಾಡಿಯ ಗಣಕದ ಮೂಲಕ ಈ ವಿಚಾರಗಳು ಇತರರಿಗೆ ಸೋರಿಕೆಯಾದರೆ ಹೆಚ್ಚಿನ ತೊಂದರೆ ತಪ್ಪಿದಲ್ಲ. ಈ ಅನಾನುಕೂಲ ಮೆಟ್ಟಿ, ಹೊಸ ಚಳಕದಲ್ಲಿ ಹೇಗೆ ನಿಸ್ಸಾನ್ ಕೂಟದವರು ಗೆಲುವು ಕಾಣಲಿದ್ದಾರೆ ಎಂದು ಜಗತ್ತೇ ಎದುರುನೋಡುತ್ತಿದೆ. ಕಳೆದ 2-3 ವರ್ಷಗಳಲ್ಲಿ ನಿಸ್ಸಾನ್ ತಮ್ಮ ಮಿದುಳ್-ಬಂಡಿಯ ಬೆಳವಣಿಗೆ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರರ್ಥ ತಂತ್ರಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಅರಕೆ ನಡೆಯುತ್ತಿರಬಹುದೆಂದು ಆಟೋಮೊಬೈಲ್ ವಲಯದಲ್ಲಿ ಕೇಳಿಬಂದ ಸುದ್ದಿ. ಬ್ರೈನ್-ಟು-ವೆಹಿಕಲ್ ಬೀದಿಗಿಳಿಯಲು ಇನ್ನೂ ಕಾಯಲೇಬೇಕು.

ಮಾಹಿತಿ ಮತ್ತು ತಿಟ್ಟ ಸೆಲೆ:  nissan