ಇವಿ ಕೊಳ್ಳುವಿಕೆಯ ಸಮಸ್ಯೆ ಮತ್ತು ಪರಿಹಾರ (2ನೇ ಕಂತು)

ಜಯತೀರ್ಥ ನಾಡಗೌಡ

ಹಿಂದಿನ ಬರಹದಲ್ಲಿ ಇವಿ ಕೊಳ್ಳುವಿಕೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೆ. ಈಗ ಅವುಗಳ ಪರಿಹಾರದತ್ತ ಒಂದು ನೋಟ ಬೀರೋಣ.

  1. ಇವಿಗಳ ಆರಂಭಿಕ ಬೆಲೆ ದುಬಾರಿಯಾದರೂ, ಓಡಿಸಲು ಮತ್ತು ಇವುಗಳನ್ನು ನಿರ್ವಹಿಸುವ ಬೆಲೆ ಪೆಟ್ರೋಲ್/ಡೀಸೇಲ್ ವಾಹನಗಳಿಗಿಂತ ಕಡಿಮೆ. ಪೆಟ್ರೋಲ್ ಮುಂತಾದ ಮುಗಿದುಹೋಗಬಲ್ಲ ಉರುವಲುಗಳ ಬೆಲೆ ಪದೇ ಪದೇ ಏರಿಕೆ ಕಂಡಿದೆ. ಇದರಿಂದ ಪೆಟ್ರೋಲ್/ಡೀಸೇಲ್ ಗಾಡಿಗಳ ಉರುವಲಿನ ಬೆಲೆ ಮತ್ತು ಅವು ಕೊಡುವ ಮೈಲಿಯೋಟಗಳನ್ನು, ಇವಿ ವಾಹನವೊಂದರ ವಿದ್ಯುತ್ ಚಾರ್ಜಿಂಗ್ ಬೆಲೆಗೆ ತಾಳೆ ಹಾಕಿದರೆ, ಇವಿ ಬಂಡಿಗಳು ಅಗ್ಗವೇ ಸರಿ.

ಇನ್ನೂ ನಿರ್ವಹಣಾ ವೆಚ್ಚದತ್ತ ನೋಟ ಹರಿಸಿದರೆ, ಇವಿ ಗಾಡಿಗಳಲ್ಲಿ ಹೆಚ್ಚಿನ ಮೆಕ್ಯಾನಿಕಲ್ ಬಿಡಿಭಾಗಗಳು ಇರುವುದಿಲ್ಲ ಹೀಗಾಗಿ ಹೆಚ್ಚಾಗಿ ಕೀಲೆಣ್ಣೆ ಬಳಕೆಯೂ ಹೆಚ್ಚಾಗಿರುವುದಿಲ್ಲ. ಇದರಲ್ಲೂ, ಇವಿಗಳು ಅಗ್ಗವೆನಿಸುತ್ತವೆ.

ಇದಲ್ಲದೇ, ಹಲವು ಇವಿ ತಯಾರಕರು ಇದೀಗ ಬಾಸ್(BaaS -Battery as a Service) ಎಂಬ ಆಯ್ಕೆಯನ್ನು ಕೊಳ್ಳುಗರಿಗೆ ಪರಿಚಯಿಸಿದ್ದಾರೆ. ಈ “ಬಾಸ್” ಆಯ್ಕೆಯಲ್ಲಿ, ಬಂಡಿಯ ಬೆಲೆ ಸುಮಾರು ಅರ್ಧದಶ್ಟು ಇರುತ್ತದೆ.  ಕೊಳ್ಳುಗರು ಈ ಅರ್ಧದಷ್ಟು ಬೆಲೆ ನೀಡಿ ಬಂಡಿಯನ್ನು ತಮ್ಮದಾಗಿಸಿ ಕೊಳ್ಳಬಹುದು. ನಂತರ ಇವರು ಬಳಸಿದಶ್ಟು ಕಿ.ಮೀ.ಗೆ ಹಣತೆರುವ ಏರ್ಪಾಡಿದು. ಈ ರೀತಿ ಬಾಸ್ ಆಯ್ಕೆಯಲ್ಲಿ ಬಂಡಿ ಖರೀದಿಸಿದವರು ಬ್ಯಾಟರಿ ಪ್ಯಾಕ್ ಬಿಟ್ಟು ಬಂಡಿಯ ಎಲ್ಲವೂ ಅವರದೇ. ಮಿಂಕಟ್ಟಿನ ಗೂಡು(ಬ್ಯಾಟರಿ ಪ್ಯಾಕ್) ಮಾತ್ರ ಭೋಗ್ಯಕ್ಕೆ(Lease) ಪಡೆದಂತೆ. ಈ ಬಾಸ್ ಏರ್ಪಾಟಿನಲ್ಲಿ, ಗಾಡಿ ತಯಾರಕರು ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಪಾಲುಗಾರಿಕೆಯಲ್ಲಿ ಈ ಆಯ್ಕೆಯನ್ನು ನೀಡುತ್ತಾರೆ. ಇದರಲ್ಲಿ ಭಾಗಿಯಾದ ಹಣಕಾಸು ಸಂಸ್ಥೆಗಳು,

  • ತಿಂಗಳು ಇಂತಿಷ್ಟು (ಮೊದಲೇ ನಿಗದಿಸಿಪಡಿಸಿದ) ಹಣ ನೀಡುವ, ಇಲ್ಲವೇ
  • ಕೊಳ್ಳುಗ ಗಾಡಿಯನ್ನು ಓಡಿಸಿದಷ್ಟು ಕಿಲೋಮೀಟರ್‌ಗಳಿಗೆ ಹಣಕಟ್ಟಬೇಕಾದ ಆಯ್ಕೆಗಳನ್ನು ನೀಡುತ್ತಾರೆ.
  • ಇದು ಬೇಡವೆಂದರೆ, ಮಿಂಕಟ್ಟಿನ ಗೂಡಿನಲ್ಲಿ ಹುರುಪು ಖಾಲಿಯಾದಾಗ ಹತ್ತಿರ ಸ್ವಾಪ್ ಸ್ಟೇಶನ್ ಗೆ (ಬ್ಯಾಟರಿ ಬದಲಿಸಿಕೊಳ್ಳುವ ತಾಣ) ಹೋಗಿ ಖಾಲಿಯಾದ ಬ್ಯಾಟರಿಯನ್ನು, ಹುರುಪು ತುಂಬಿದ ಬ್ಯಾಟರಿಗೆ ಬದಲಿಸಿ ಪಡೆಯುವ ಆಯ್ಕೆಯೂ ಇದೆ. ಇದು ನಾವು ದಿನದ ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಬದಲಿಸಿದಂತೆನ್ನಬಹುದು.

ಬಾಸ್‌ನ ವಿವಿಧ ಆಯ್ಕೆಗಳನ್ನು ಕೊಳ್ಳುಗರು ಗಾಡಿಯ ಮಾರಾಟಗಾರರಲ್ಲಿ ಸಂಪರ್ಕಿಸಿ ತಮ್ಮ ಅಗತ್ಯ, ಇಷ್ಟದ ಆಯ್ಕೆಗಳನ್ನು ಪಡೆಯಬಹುದು. ಚೀನಾ ದೇಶವೇ ಈ ಬಾಸ್ ಸೇವೆಯನ್ನು ಮಾರುಕಟ್ಟೆ ಮೊದಲು ತಂದಿತ್ತು, ಇದು ತಕ್ಕ ಮಟ್ಟಿಗೆ ಗೆಲುವು ಪಡೆದಿತ್ತು. ಬಾಸ್ ಮೂಲಕ ಇವಿ ಕೊಳ್ಳುಗರಿಗೆ ಆರಂಭಿಕ ಬೆಲೆಯ ಹೊರೆ ಕಡಿಮೆಯಾಗುವುದು ದಿಟ. ಭಾರತದಲ್ಲಿ ಎಮ್‌ಜಿ ಮೋಟಾರ್ಸ್ ಆಯ್ದ ಕಾರುಗಳಲ್ಲಿ ಈ ಸೇವೆ ಪರಿಚಯಿಸಿದ್ದರೆ, ಇಗ್ಗಾಲಿ ಬಂಡಿಗಳಲ್ಲಿ ಹಿರೋ ಮೋಟೋ ಕಾರ್ಪ್ ಕೂಟದವರು ತಮ್ಮ ಹೊಸದಾದ ವಿಡಾ ಗಾಡಿಗಳಿಗೆ ಈ ಬಾಸ್ ಸೇವೆಯನ್ನು ನೀಡುತ್ತಿದ್ದಾರೆ.

  1. ಹಿಂದಿನ ಬರಹದಲ್ಲಿ ಹಲಮಹಡಿ ಕಟ್ಟಡಗಳಲ್ಲಿ ಚಾರ್ಜಿಂಗ್ ಸಮಸ್ಯೆಯ ಬಗ್ಗೆ ಹೇಳಿದ್ದೆ. ಈಗ ಹೊಸದಾಗಿ ಬರುತ್ತಿರುವ ಹಲವು ಇವಿಗಳು ಚಾರ್ಜಿಂಗ್‌ನ ಸಮಸ್ಯೆಗೆ ಹೊಸ ದಾರಿಕೊಂಡಿವೆ. ಗಾಡಿಯಿಂದ ಬಿಡಿಸಿ ಮಿಂಕಟ್ಟನ್ನು ಹೊರತೆಗೆದು ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳುವ ಏರ್ಪಾಟು, ಮನೆಯ ಯಾವುದೇ ಕೋಣೆಯ 5A ಸಾಕೆಟ್ ನಿಂದಲೇ ಚಾರ್ಜ್ ಮಾಡಬಹುದಾದ ಆಯ್ಕೆ ನೀಡುತ್ತಿವೆ. ದೊಡ್ಡ ದೊಡ್ಡ ಅಪರಾರ್ಟ್‌ಮೆಂಟ್‌ಗಳಲ್ಲಿ ಪ್ರತಿ ಬಳಕೆದಾರರಿಗೆ ಅನುವಾಗುವಂತೆ, ಅವರ ವಿದ್ಯುತ್ ಮೀಟರ್‌ಗೆ ಜೋಡಿಸಬಲ್ಲ, ಗೋಡೆಗೆ ಅಳವಡಿಸುವ ಚಾರ್ಜಿಂಗ್ ಏರ್ಪಾಟನ್ನು ಹಲವು ತಯಾರಕರು ನೀಡುತ್ತಿದ್ದಾರೆ. 

ಇದಲ್ಲದೇ ಹೆಚ್ಚುತ್ತಿರುವ ಎಲೆಕ್ಟ್ರಿಕ್ ಗಾಡಿಗಳಿಗೆ ಅನುವಾಗಲೆಂದು, ಸರಕಾರ-ಖಾಸಗಿ ಕೂಟಗಳ ನೆರವಿನೊಂದಿಗೆ ನಗರ, ಪಟ್ಟಣ, ಹೆದ್ದಾರಿಗಳಲ್ಲಿ ಚಾರ್ಜಿಂಗ್ ಏರ್ಪಾಟು ಒದಗಿಸುವುದರೊಂದಿಗೆ ಅವುಗಳ ಸಮಯಕ್ಕೆ ತಕ್ಕ ನಿರ್ವಹಣೆಯನ್ನು ಮಾಡುವ ಕೆಲಸ ಮಾಡುತ್ತಿರುವುದು ಇವಿ ಕೊಳ್ಳಬೇಕೆಂದಿರುವವರಿಗೆ ಸಿಹಿ ಸುದ್ದಿ. ಇನ್ನೂ ನಗರ, ಪಟ್ಟಣ, ಹೆದ್ದಾರಿಗಳಲ್ಲಿರುವ ಚಾರ್ಜಿಂಗ್ ತಾಣಗಳ ಮಾಹಿತಿ ನೀಡುವ ಆಪ್‌ಗಳು , ಆಯಾ ತಾಣಗಳು ಪೂರ್ಣವಾಗಿ ಕೆಲಸ ಮಾಡುತ್ತಿವೆಯೇ ಇಲ್ಲವೇ ಮುಚ್ಛಿವೆಯೇ ಎಂಬ “Real Time” ಮಾಹಿತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹರವಿನ ದುಗುಡಕ್ಕೆ (Range Anxiety) ಇದು ಪರಿಹಾರ ನೀಡಲಿದೆ.

  1. ಮರುಮಾರಾಟದ ಬೆಲೆ: ಬಹುತೇಕ ಇವಿಗಳು ಸುಮಾರು 8-10 ವರುಶಗಳಲ್ಲಿ ಹೆಚ್ಚೆಂದರೆ 8-15% ಮಾತ್ರ ತಾಳಿಕೆಯಲ್ಲಿ ಕಡಿಮೆಯಾಗುತ್ತೆಂದು ಹಲವು ಇವಿ ಪರಿಣಿತರು, ಬ್ಯಾಟರಿ ಅರಕೆಗಾರರು ತೋರಿಸಿಕೊಡುತ್ತಿದ್ದಾರೆ. ಈ ಮಾಹಿತಿ ಸಾಮಾನ್ಯ ಜನತೆ, ಇವಿ ಕೊಳ್ಳುಗರು-ಮಾರಾಳಿಗರಿಗೂ ಹೆಚ್ಚು ಮನವರಿಕೆಯಾದರೆ, ಮರುಮಾರಾಟಗಳು ಸುಲಭವಾಗುವ ಸಾಧ್ಯತೆಯಿದೆ.
  2. ಕೊನೆಯದಾಗಿ, ಮಾರಾಟದ ನಂತರದ ನೆರವು ಮತ್ತು ಬೆಂಬಲದ ಬಗ್ಗೆ, ಇವಿ ತಯಾರಕರು ಹೆಚ್ಚು ಕೆಲಸ ಮಾಡಬೇಕಿದೆ. ಗಾಡಿಗಳ ರಿಪೇರಿ, ಸರ್ವೀಸ್ ಮಾಡಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಮೇಲಿಂದ ಮೇಲೆ ತರಬೇತಿಗಳ ಮೂಲಕ ಅವರನ್ನು ಪಳಗಿಸಬೇಕಿದೆ.

ತಿಟ್ಟ ಸೆಲೆ: diyguru.org