ಏನಿದು 4X4?

ಜಯತೀರ್ಥ ನಾಡಗೌಡ

ಸಾಮಾನ್ಯವಾಗಿ ಎಸ್‌ಯುವಿ, ಪಿಕ್‌ಅಪ್ ಟ್ರಕ್ ಇಲ್ಲವೇ ಸಿರಿತನದ ಕಾರುಗಳಲ್ಲಿ 4X4 ಬರೆದಿರುವುದನ್ನು ನೋಡಿರುತ್ತೀರಿ. ಹೀಗೆಂದರೇನು? ಯಾವ ಕಾರಣಕ್ಕೆ ಗಾಡಿಗಳ ಮೇಲೆ ಹೀಗೆ ಬರೆಯುತ್ತಾರೆಂದು ಹಲವರಿಗೆ ಕುತೂಹಲ ಮೂಡುವುದು ಸಹಜ. ಒಮ್ಮೆ ಈ ರೀತಿ 4×4 ಮಂದೆ ಯಾರೋ ಇದರ ಉತ್ತರ 16 ಎಂದು ಬರೆದು ತಮಾಷೆ ಮಾಡಿದ್ದುಂಟು. 4×4 ಎಂದರೇನು? ಇದು ಗಾಡಿಗಳ ವಿಶೇಷತೆಯೇ? ಯಾಕೆ ಹೀಗೆ ಗುರುತಿಸುತ್ತಾರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಮುಂದೆ ಓದಿ.

4×4 ಎಂದರೆ, ಗಾಡಿಯ ಎಲ್ಲ ನಾಲ್ಕು ಗಾಲಿಗಳಿಗೆ ಒಂದೇ ಸಮಯದಲ್ಲಿ ಕಸುವನ್ನು ಗಾಡಿ ಕಳಿಸುವುದು. ಎಲ್ಲ ಬಂಡಿಗಳು ಡ್ರೈವ್‌ಟ್ರೈನ್ ಹೊಂದಿರುತ್ತವೆ, ಒಂದು 4×2 ಇಲ್ಲವೇ 4X4 ಡ್ರೈವ್‌ಟ್ರೈನ್. ಡ್ರೈವ್‌ಟ್ರೈನ್ ಇದು ಗಾಡಿಯ ಬಿಣಿಗೆ(Engine) ಕಸುವನ್ನು ಗಾಲಿಗಳಿಗೆ ಸಾಗಿಸುವ ಏರ್ಪಾಟು. ಬಿಣಿಗೆಯಲ್ಲಿ ಉರುವಲು ಉರಿದು ನೀಡುವ ಕಸುವು, ಸಾಗಣಿಯ ಮೂಲಕ ಆಯಾ ಗಾಲಿಗಳಿಗೆ ಸಾಗಿದಾಗ ಅವುಗಳು ಗಾಡಿಯನ್ನು ಮುಂದಕ್ಕೆಳೆಯುತ್ತವೆ. 4×4 ಡ್ರೈವ್‌ಟ್ರೈನ್  ಇರುವ ಗಾಡಿಗಳಲ್ಲಿ, ಇಂಜೀನ್ ಎಲ್ಲ ಗಾಲಿಗಳಿಗೆ ಒಟ್ಟಿಗೆ ಕಸುವನ್ನು ನೀಡಿ ಸೆಳೆಬಲದ(Torque) ಮೂಲಕ ಗಾಡಿ ಸುಲಭವಾಗಿ ಮುಂದೆ ಸಾಗಬಹುದು. ಎಲ್ಲ ಗಾಲಿಗಳಿಗೆ ಒಟ್ಟಿಗೆ ಸೆಳೆಬಲ ಸಿಗುವುದರಿಂದ ಗಾಡಿಯೂ ಗುಡ್ಡಗಾಡುಗಳ ರಸ್ತೆಗಳಲ್ಲಿ, ತಗ್ಗುದಿನ್ನೆಯಿಂದಾದ ದಾರಿಗಳಲ್ಲಿ, ಕೆಸರು, ಮಂಜುಗಡ್ಡೆ ಬಿದ್ದಿರುವ ಬೀದಿಗಳಲ್ಲೂ ಸುಲಭವಾಗಿ ಮುನ್ನುಗ್ಗುತ್ತದೆ. ಹೆಚ್ಚಿನ ಕಸುವು ಮತ್ತು ಸೆಳೆಬಲ ನೀಡುವ ಇಂತಹ ಡ್ರೈವ್‍ಟ್ರೈನ್ ಗಾಡಿಗಳು ವಿವಿಧ ರೇಸ್, ಸಾಹಸ ಮನೋರಂಜನೆಗಾಗಿ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಇವುಗಳನ್ನು ಕಣಿವೆ, ಪರ್ವತ ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದು. ಮುಳ್ಳಯ್ಯನಗಿರಿಯ ಬೆಟ್ಟದ ಸಾಲಿನಲ್ಲಿ, ಕೊಡಗಿನ ಕಿರಿದಾದ ಕಾಡಿನ ರಸ್ತೆಗಳಲ್ಲಿ, ಲಡಾಖಿನ ಮಂಜಿನ ಗುಡ್ಡಗಳಲ್ಲಿ ಇಂತಹ 4×4 ಎಸ್‌ಯುವಿಗಳಿದ್ದರೆ ಜುಮ್ಮನೆ ಓಡಾಡಿಕೊಂಡಿರಬಹುದು. ಎಲ್ಲ ಗಾಡಿಗಳು 4×4  ಆಗಿರುತ್ತವೆಯೇ ಎಂಬ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ. ದೈನಂದಿನ ಬಳಕೆಗೆ ಪಟ್ಟಣ, ನಗರ ಪ್ರದೇಶಗಳಲ್ಲಿ ಓಡಾಡಲು, ಹೆದ್ದಾರಿಗಳಲ್ಲಿ ಸಾಗಲು 4×4 ಬೇಕಾಗಿಲ್ಲ. ಇಂತಹ ಬಳಕೆಗ 4×2 ಡ್ರೈವ್‍ಟ್ರೈನ್ ಹೊಂದಿರುವ ಗಾಡಿಗಳು ತಕ್ಕುದಾಗಿವೆ.

4×2 ಗಾಡಿಗಳಲ್ಲಿ ಮೊದಲು ಕಸುವು ಮುಂದಿನ ಇಲ್ಲವೇ ಹಿಂದಿನ ಎರಡು ಗಾಲಿಗಳಿಗೆ ಮೊದಲು ತಲುಪಿ, ನಂತರ ಅವುಗಳು ಇತರೆ 2 ಗಾಲಿಗಳನ್ನು ಎಳೆದು ಗಾಡಿ ಸಾಗುವಂತೆ ನೋಡಿಕೊಳ್ಳುತ್ತವೆ. ಮೊದಲು ಕಸುವನ್ನು ತಲುಪುವ ಎರಡು ಗಾಲಿಗಳು ಹಿಂಬದಿಯವು ಇಲ್ಲವೇ ಮುಂಬದಿಯವು ಆಗಿರಬಹುದು. ಇದೇ ಕಾರಣಕ್ಕೆ ಇವುಗಳನ್ನು ಫ್ರಂಟ್ ವೀಲ್ ಡ್ರೈವ್ ಮತ್ತು ರೇರ್ ವೀಲ್ ಡ್ರೈವ್ ಎಂಬ ಎರಡು ಬಗೆಗಳಲ್ಲಿ ನೋಡಬಹುದು. 4×2 ಗಳ ರೇರ್ ವೀಲ್ ಡ್ರೈವ್ ಇದ್ದರೆ, ಮೊದಲು ಕಸುವು ಪಡೆಯುವ ಹಿಂಬದಿಯ ಗಾಲಿಗಳು ಗಾಡಿಯನ್ನು ಬ್ಯಾಲನ್ಸ್ ಮಾಡಲು/ ತೂಕವನ್ನು ಸರಿದೂಗಿಸಲು  ನೆರವಾದರೆ, ಮುಂದಿನ ಗಾಲಿಗಳು ಗಾಡಿಯನ್ನು ಬೇಗನೆ ತಿರುಗಿಸಲು(Steering) ನೆರವಾಗುತ್ತವೆ. ಇದೇ ಕಾರಣಕ್ಕೆ ಕೆಲವು ಆಟೋಟದ ಗಾಡಿಗಳು, ಪಿಕ್-ಅಪ್ ಟ್ರಕ್, ರೇಸ್ ಗಾಡಿಗಳಲ್ಲಿ ರೇರ್ ವೀಲ್ ಡ್ರೈವ್ ಬಳಸುತ್ತಾರೆ. ಹಿಂಬದಿಯ ಗಾಲಿಗಳಿಗೆ ಕಸುವು ಸಾಗಿಸಲು ಹಿಂಬದಿ ತಿರುಗೋಲಿಗೆ(Axle) ಡಿಫರನ್ಶಿಯಲ್(Differential) ಕೇಸ್ ಎಂಬ ಭಾಗವನ್ನು ಅಳವಡಿಸಿರುತ್ತಾರೆ. ರೇರ್ ವೀಲ್ ಡ್ರೈವ್ ಗಾಡಿಗಳು ಜಾರುವ, ಮಂಜಿನಿಂದ ಕೂಡಿದ ರಸ್ತೆಗಳಲ್ಲಿ ಹಿಂಬದಿಯ ಗಾಲಿಗಳು ಎಳೆಯುವಿಕೆಯನ್ನು ಕಳೆದುಕೊಂಡು ಪರದಾಡುವುದುಂಟು. ಫ್ರಂಟ್ ವೀಲ್ ಡ್ರೈವ್ ಗಾಡಿಗಳಲ್ಲಿ ಇಂಜೀನ್-ಸಾಗಣಿ ಜೊತೆಗೆ ಮುಂಭಾಗದಲ್ಲೇ ಡಿಫರನ್ಶಿಯಲ್ ಕೇಸ್ ಅಳವಡಿಸಿರುತ್ತಾರೆ ಇದಕ್ಕೆ ಟ್ರಾನ್ಸ್ಆಕ್ಸಲ್ ಎಂದು ಕರೆಯುತ್ತಾರೆ. ಆಟೋಟದ ಗಾಡಿಗಳಂತೆ ಸರ್ರನೆ ತಿರುಗಿಸಿ ತಗ್ಗುದಿಣ್ಣೆ,  ಗುಡ್ಡಗಾಡಿನಲ್ಲಿ ಫ್ರಂಟ್ ವೀಲ್ ಡ್ರೈವ್ ಕಾರುಗಳು ಮಾಡಲಾರವು. ಪಟ್ಟಣ, ನಗರ, ದಿನದ ಓಡಾಟ ಮತ್ತು ಹೆದ್ದಾರಿಗಳಲ್ಲಿ ಸಾಗಲು ಇವುಗಳು ಸೂಕ್ತ.

ಆಲ್ ವೀಲ್ ಡ್ರೈವ್ ಗಾಡಿಗಳು ಗಾಡಿ ಒಲವಿಗರಲ್ಲಿ ಇದೀಗ ಹೆಚ್ಚು ಹೆಸರು ಮಾಡಿವೆ. ಇವುಗಳು ಒಂದು ರೀತಿಯಲ್ಲಿ 4X4 ಮತ್ತು 4X2 ಇವುಗಳ ಅನುಕೂಲಗಳನ್ನು ಒಟ್ಟಾಗಿ ನೀಡಿ ಎಲ್ಲ ವಿಧದ ರಸ್ತೆಗೆ ತಕ್ಕಂತೆ ಸಾಗಬಲ್ಲವು. ಇದರಲ್ಲಿ ಡಿಫರನ್ಶಿಯಲ್ ಕೇಸ್ ಬದಲು ಸೆಂಟರ್ ಡಿಫರನ್ಶಿಯಲ್ ಇರುತ್ತದೆ. ಈ ಬಂಡಿಗಳಲ್ಲಿ ಎಲ್ಲ ಗಾಲಿಗೆ ವೇಗ ತಿಳಿಯುವ ಅರಿವಿಕ(Sensor) ಅಳವಡಿಸಿರುತ್ತಾರೆ, ಒಂದು ವೇಳೆ ಮುಂಬದಿಯ ಗಾಲಿಯೊಂದು ಕೆಸರಲ್ಲಿ ಸಿಲುಕಿ ಮುನ್ನುಗ್ಗಲು ಪರದಾಡುವಾಗ, ಅರಿವಿಕವು ಆ ಗಾಲಿಯ ವೇಗವನ್ನು ಅರಿತು ಆಲ್ ವೀಲ್ ಡ್ರೈವ್ ಏರ್ಪಾಟಿನ ಗಣಕಕ್ಕೆ(ECU) ಮಾಹಿತಿ ನೀಡುತ್ತದೆ. ಆಗ ಸೆಂಟರ್ ಡಿಫರನ್ಶಿಯಲ್ ಮೂಲಕ ಬಿಣಿಗೆಯು ಕಸುವನ್ನು ಹಿಂಬದಿ ಗಾಲಿಗೆ ನೀಡಿ ಗಾಡಿಯನ್ನು ಮುಂದಕ್ಕೆಳೆದುಕೊಂಡು ಹೋಗುತ್ತವೆ.

ಎಲ್ಲ ನಾಲ್ಕು ಬಗೆಯ ಡ್ರೈವ್‌ಟ್ರೈನ್‌ಗಳ ವ್ಯತ್ಯಾಸ, ಅನುಕೂಲ, ಅನಾನುಕೂಲಗಳ ಬಗ್ಗೆ ಈ ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ.

 

 

ತಿಟ್ಟ ಸೆಲೆ: pirelli.com

ಅಡಾಸ್ ಹೇಗೆ ಕೆಲಸ ಮಾಡುತ್ತದೆ?

ಜಯತೀರ್ಥ ನಾಡಗೌಡ

ಅಡಾಸ್ ಏರ್ಪಾಟಿನ ಬಗ್ಗೆ,  ಈ ಹಿಂದೆ, ಬರಹವೊಂದರಲ್ಲಿ ತಿಳಿಸಿದ್ದೆ. ಅಡಾಸ್ ಎಂದರೇನು, ಅದರಲ್ಲಿ ಎಷ್ಟು ಹಂತಗಳು, ಅದರ ಲಾಭ/ನಷ್ಟಗಳ ಬಗ್ಗೆ ಚರ್ಚೆ ಮಾಡಿದ್ದೆ. ಈ ಬರಹದಲ್ಲಿ ಅಡಾಸ್‌ನ ವಿಶೇಷತೆಯೊಂದನ್ನು ಬಳಸಿಕೊಂಡು ಅದು ಹೇಗೆ ಕೆಲಸ ಮಾಡಲಿದೆ ಎಂಬುದರ ಬಗ್ಗೆ ತಿಳಿಯೋಣ ಬನ್ನಿ.

ಅಡಾಸ್ ಏರ್ಪಾಟಿನಲ್ಲಿ ಸುಮಾರು 20+ ಹೆಚ್ಚು ವಿಶೇಷತೆಗಳಿದ್ದು, ಅವುಗಳನ್ನು ವಿವಿಧ ಹಂತದ ಅಡಾಸ್‌ಗೆ ತಕ್ಕಂತೆ ಬಂಡಿ ತಯಾರಕರು ತಮ್ಮ ಮಾರುಕಟ್ಟೆಗೆ ತಕ್ಕಂತೆ ಅಳವಡಿಸಿರುತ್ತಾರೆ. ಬೀದಿಗಳಲ್ಲಿ ಸಾಗುವಾಗ ಜನ/ಜಾನುವಾರುಗಳ ಗುರುತಿಸುವಿಕೆ, ಹೆದ್ದಾರಿಗಳಲ್ಲಿ ಸಾಗುವಾಗ ಲೇನ್ ಬದಲಾವಣೆ ಗುರುತಿಸುವಿಕೆ ಮತ್ತು ಎಚ್ಚರಿಸುವಿಕೆ, ಸಂಚಾರ ದಟ್ಟಣೆಯ ಸಿಗ್ನಲ್ ಗುರುತಿಸುವಿಕೆ, ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆ, ದಿಡೀರನೆ ಎದುರಾಗಬಲ್ಲ ತಿರುವುಗಳ ಗುರುತಿಸುವಿಕೆ ಹೀಗೆ ಹಲವು ವಿಶೇಷತೆಗಳಿವೆ.

ಇಲ್ಲಿ ಉದಾಹರಣೆಗೆ ಆಟೋಮ್ಯಾಟಿಕ್ ಎಮೆರ್ಜನ್ಸಿ ಬ್ರೇಕಿಂಗ್(Automatic Emergency Braking) ಅಂದರೆ ತುರ್ತು ಸಮಯಗಳಲ್ಲಿ ಗಾಡಿ ತಡೆಯುವಿಕೆಯ ವಿಶೇಷತೆ ಹೇಗೆ ಕೆಲಸ ಮಾಡಲಿದೆ ನೋಡೋಣ.

  •  ಮೊದಲು ಈ ವಿಶೇಷತೆ ಹೊಂದಿರುವ ಕಾರು, ತನ್ನ ಮುಂದಿರುವ ಕಾರು/ಗಾಡಿಗಳನ್ನು ಗುರುತಿಸುತ್ತದೆ. ಮುಂದಿರುವ ಗಾಡಿ ಕೆಲವೇ ಅಡಿಗಳಷ್ಟು ದೂರವಿದ್ದು, ಗಾಡಿಯ ವೇಗ ಸುಮಾರು 30 ಕಿಮೀ/ಘಂಟೆಗೆ** ಹಾಗೂ ಅದಕ್ಕಿಂತ ಕಡಿಮೆ ಇದೆಯೇ ಎಂಬುದನ್ನು ಅರಿಯುತ್ತದೆ. ಆಗ ಅಡಾಸ್‌ನ ಈ ವಿಶೇಷತೆ, ತುರ್ತು ಬ್ರೇಕಿಂಗ್‌ಗೆ ಸಿದ್ಧಗೊಳ್ಳುತ್ತದೆ.

(**ಇಲ್ಲಿ ತಿಳಿಸಿರುವ ವೇಗದ ಮಿತಿಯು ಕೇವಲ ಉದಾಹರಣೆಗೆ. ವಿವಿಧ ಬಂಡಿ ತಯಾರಕರ ಗಾಡಿಯಲ್ಲಿ ಈ ಮಿತಿಯಲ್ಲಿ ವ್ಯತ್ಯಾಸ ಕಂಡುಬರಬಹುದು.  ಇದು ಗಾಡಿ ತಯಾರಕರ ನಿರ್ಧಾರ)

  •  ಈ ಸಮಯದಲ್ಲಿ ಗಾಡಿ ಓಡಿಸುಗ ಬ್ರೇಕ್ ತುಳಿಗೆಯನ್ನು(Pedal) ತುಳಿಯದೇ ಇದ್ದರೆ, ಓಡಿಸುಗನಿಗೆ ಎಚ್ಚರಿಸಲು ಒಂದೇ ಸಮನೆ ಎಚ್ಚರಿಕೆ ಗಂಟೆ ಕೇಳಿಬರಲಾರಂಭಿಸುತ್ತದೆ ಇಲ್ಲವೇ ಬಂಡಿಯ ತೋರುಮಣೆಯಲ್ಲಿ ಓಡಿಸುಗನಿಗೆ ಕಾಣುವಂತೆ ತುರ್ತು ಸಮಯದ ಸೂಚನೆ ನೀಡುತ್ತದೆ ಇಲ್ಲವೇ ಸಣ್ಣಗೆ ಬ್ರೇಕ್ ಹಾಕಿ ಸುಳಿವು ನೀಡುತ್ತದೆ.
  • ನಂತರ ಗಾಡಿಯ ವೇಗ ಕಡಿತಗೊಳಿಸಿ, ಓಡಿಸುಗ ತುರ್ತು ಪರಿಸ್ತಿತಿಗೆ ಸ್ಪಂದಿಸಲು ತುಸು ಸಮಯ ನೀಡುತ್ತದೆ. ಓಡಿಸುಗ ಕೂಡಲೇ ಬ್ರೇಕ್ ಒತ್ತಿದರೆ, ಬ್ರೇಕ್ ಏರ್ಪಾಟು ಸ್ಪಂದಿಸಲು ಸಹಕಾರ ನೀಡುತ್ತದೆ.
  • ಈ ಪರಿಸ್ತಿತಿಯಲ್ಲಿ ಪ್ರತಿ ಕ್ಷಣದಲ್ಲೂ ಮುಂದಿರುವ ಗಾಡಿಯೊಂದಿಗೆ ಗುದ್ದುವಿಕೆ ತಡೆಯಲು, ಮುಂದಿರುವ ಗಾಡಿಯಿಂದ ಈ ಗಾಡಿ ಎಷ್ಟು ದೂರವಿದೆ ಎಂಬುದರ ಲೆಕ್ಕಾಚಾರ ನಡೆಯುತ್ತಿರುತ್ತದೆ. 
  •  ಆಗಲೂ ಓಡಿಸುಗ ಬ್ರೇಕ್‌ನ ಸಂಪೂರ್ಣವಾಗ ಹಾಕಿ ಗಾಡಿ ತಡೆದು ನಿಲ್ಲಿಸದೇ ಇದ್ದರೆ, ಈ ವಿಶೇಷತೆ ತಾನಾಗಿಯೇ ಬಂಡಿ ತಡೆದು ನಿಲ್ಲಿಸಿ ಆಗಬಲ್ಲ ಅನಾಹುತವನ್ನು ತಡೆಗಟ್ಟುತ್ತದೆ.

ಇದೆಲ್ಲವೂ ಕೆಲವೇ ಕ್ಷಣಗಳಲ್ಲಿ ನಡೆಯುತ್ತದೆ. ಪ್ರತಿ ಮಿಲಿಸೆಕೆಂಡ್‌ಗಳ ಮಾಹಿತಿ ರವಾನೆ ಮತ್ತು ಅದಕ್ಕೆ ಸ್ಪಂದನೆಗಳನ್ನು ಮಾಡಲು ಅಡಾಸ್‌ನ ವಿಶೇಷತೆಯ ಗಣಕಗಳು ಮಾಡುತವೆ. ಇದಕ್ಕೆ ಎಲ್‌ಆರ್‌ಆರ್(LRR) ಅಂದರೆ ಲಾಂಗ್‌ ರೇಂಜ್ ರೇಡಾರ್ ಮತ್ತು ಮುಂಬದಿಯ ಕ್ಯಾಮೆರಾಗಳು ಬಳಸಲ್ಪಡುತ್ತವೆ. ಅಡಾಸ್ ಏರ್ಪಾಟಿನಲ್ಲಿರುವ ರೇಡಾರ್ ಮುಂದಿರುವ ಗಾಡಿ/ಜನರು/ಜಾನುವಾರುಗಳ ದೂರ ಅಳೆಯಲು ನೆರವಾದರೆ, ಕ್ಯಾಮೆರಾಗಳು ಮುಂದಿರುವ ಪರಿಸ್ತಿತಿಯ ನೇರ ನೋಟವನ್ನು ಗಣಕಗಳಿಗೆ ಕಳುಹಿಸುತ್ತ ರೇಡಾರ್ ಜೊತೆ ಒಟ್ಟಾಗಿ ಕೆಲಸ ಮಾಡುತ್ತವೆ.  ಈ ತುರ್ತು ಸಮಯದ ಬ್ರೇಕಿಂಗ್ ವಿಶೇಷತೆಯನ್ನು ಒಂದು ಬ್ಲಾಕ್ ಡೈಗ್ರಾಮ್(Block Diagram) ಮೂಲಕ ತಿಳಿಸಬೇಕೆಂದರೆ ಕೆಳಗಿನಂತಿರುತ್ತದೆ.

ಬಹುತೇಕ ಅಡಾಸ್ ಏರ್ಪಾಟಿನ ವಿಶೇಷತೆಗಳು ಇದೇ ತೆರನಾಗಿ ಕೆಲಸಮಾಡುತ್ತವೆ. ಮೊದಲು ಸುತ್ತಲಿನ ವಾತಾವರಣವನ್ನು ರೇಡಾರ್ ಮುಂತಾದ ಅರಿವಿಕಗಳ ಮೂಲಕ ಅರಿತು, ಅದನ್ನು ಪ್ರಕ್ರಿಯೆಗೊಳಿಸಿ ಓಡಿಸುಗನಿಗೆ ಎಚ್ಚರಿಸಿ, ಕೊನೆಯಲ್ಲಿ ತಕ್ಕ ಕೆಲಸ ಮಾಡುತ್ತವೆ. 

ಇವಿ ಕೊಳ್ಳುವಿಕೆಯ ಸಮಸ್ಯೆ ಮತ್ತು ಪರಿಹಾರ (2ನೇ ಕಂತು)

ಜಯತೀರ್ಥ ನಾಡಗೌಡ

ಹಿಂದಿನ ಬರಹದಲ್ಲಿ ಇವಿ ಕೊಳ್ಳುವಿಕೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೆ. ಈಗ ಅವುಗಳ ಪರಿಹಾರದತ್ತ ಒಂದು ನೋಟ ಬೀರೋಣ.

  1. ಇವಿಗಳ ಆರಂಭಿಕ ಬೆಲೆ ದುಬಾರಿಯಾದರೂ, ಓಡಿಸಲು ಮತ್ತು ಇವುಗಳನ್ನು ನಿರ್ವಹಿಸುವ ಬೆಲೆ ಪೆಟ್ರೋಲ್/ಡೀಸೇಲ್ ವಾಹನಗಳಿಗಿಂತ ಕಡಿಮೆ. ಪೆಟ್ರೋಲ್ ಮುಂತಾದ ಮುಗಿದುಹೋಗಬಲ್ಲ ಉರುವಲುಗಳ ಬೆಲೆ ಪದೇ ಪದೇ ಏರಿಕೆ ಕಂಡಿದೆ. ಇದರಿಂದ ಪೆಟ್ರೋಲ್/ಡೀಸೇಲ್ ಗಾಡಿಗಳ ಉರುವಲಿನ ಬೆಲೆ ಮತ್ತು ಅವು ಕೊಡುವ ಮೈಲಿಯೋಟಗಳನ್ನು, ಇವಿ ವಾಹನವೊಂದರ ವಿದ್ಯುತ್ ಚಾರ್ಜಿಂಗ್ ಬೆಲೆಗೆ ತಾಳೆ ಹಾಕಿದರೆ, ಇವಿ ಬಂಡಿಗಳು ಅಗ್ಗವೇ ಸರಿ.

ಇನ್ನೂ ನಿರ್ವಹಣಾ ವೆಚ್ಚದತ್ತ ನೋಟ ಹರಿಸಿದರೆ, ಇವಿ ಗಾಡಿಗಳಲ್ಲಿ ಹೆಚ್ಚಿನ ಮೆಕ್ಯಾನಿಕಲ್ ಬಿಡಿಭಾಗಗಳು ಇರುವುದಿಲ್ಲ ಹೀಗಾಗಿ ಹೆಚ್ಚಾಗಿ ಕೀಲೆಣ್ಣೆ ಬಳಕೆಯೂ ಹೆಚ್ಚಾಗಿರುವುದಿಲ್ಲ. ಇದರಲ್ಲೂ, ಇವಿಗಳು ಅಗ್ಗವೆನಿಸುತ್ತವೆ.

ಇದಲ್ಲದೇ, ಹಲವು ಇವಿ ತಯಾರಕರು ಇದೀಗ ಬಾಸ್(BaaS -Battery as a Service) ಎಂಬ ಆಯ್ಕೆಯನ್ನು ಕೊಳ್ಳುಗರಿಗೆ ಪರಿಚಯಿಸಿದ್ದಾರೆ. ಈ “ಬಾಸ್” ಆಯ್ಕೆಯಲ್ಲಿ, ಬಂಡಿಯ ಬೆಲೆ ಸುಮಾರು ಅರ್ಧದಶ್ಟು ಇರುತ್ತದೆ.  ಕೊಳ್ಳುಗರು ಈ ಅರ್ಧದಷ್ಟು ಬೆಲೆ ನೀಡಿ ಬಂಡಿಯನ್ನು ತಮ್ಮದಾಗಿಸಿ ಕೊಳ್ಳಬಹುದು. ನಂತರ ಇವರು ಬಳಸಿದಶ್ಟು ಕಿ.ಮೀ.ಗೆ ಹಣತೆರುವ ಏರ್ಪಾಡಿದು. ಈ ರೀತಿ ಬಾಸ್ ಆಯ್ಕೆಯಲ್ಲಿ ಬಂಡಿ ಖರೀದಿಸಿದವರು ಬ್ಯಾಟರಿ ಪ್ಯಾಕ್ ಬಿಟ್ಟು ಬಂಡಿಯ ಎಲ್ಲವೂ ಅವರದೇ. ಮಿಂಕಟ್ಟಿನ ಗೂಡು(ಬ್ಯಾಟರಿ ಪ್ಯಾಕ್) ಮಾತ್ರ ಭೋಗ್ಯಕ್ಕೆ(Lease) ಪಡೆದಂತೆ. ಈ ಬಾಸ್ ಏರ್ಪಾಟಿನಲ್ಲಿ, ಗಾಡಿ ತಯಾರಕರು ವಿವಿಧ ಹಣಕಾಸು ಸಂಸ್ಥೆಗಳೊಂದಿಗೆ ಪಾಲುಗಾರಿಕೆಯಲ್ಲಿ ಈ ಆಯ್ಕೆಯನ್ನು ನೀಡುತ್ತಾರೆ. ಇದರಲ್ಲಿ ಭಾಗಿಯಾದ ಹಣಕಾಸು ಸಂಸ್ಥೆಗಳು,

  • ತಿಂಗಳು ಇಂತಿಷ್ಟು (ಮೊದಲೇ ನಿಗದಿಸಿಪಡಿಸಿದ) ಹಣ ನೀಡುವ, ಇಲ್ಲವೇ
  • ಕೊಳ್ಳುಗ ಗಾಡಿಯನ್ನು ಓಡಿಸಿದಷ್ಟು ಕಿಲೋಮೀಟರ್‌ಗಳಿಗೆ ಹಣಕಟ್ಟಬೇಕಾದ ಆಯ್ಕೆಗಳನ್ನು ನೀಡುತ್ತಾರೆ.
  • ಇದು ಬೇಡವೆಂದರೆ, ಮಿಂಕಟ್ಟಿನ ಗೂಡಿನಲ್ಲಿ ಹುರುಪು ಖಾಲಿಯಾದಾಗ ಹತ್ತಿರ ಸ್ವಾಪ್ ಸ್ಟೇಶನ್ ಗೆ (ಬ್ಯಾಟರಿ ಬದಲಿಸಿಕೊಳ್ಳುವ ತಾಣ) ಹೋಗಿ ಖಾಲಿಯಾದ ಬ್ಯಾಟರಿಯನ್ನು, ಹುರುಪು ತುಂಬಿದ ಬ್ಯಾಟರಿಗೆ ಬದಲಿಸಿ ಪಡೆಯುವ ಆಯ್ಕೆಯೂ ಇದೆ. ಇದು ನಾವು ದಿನದ ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಬದಲಿಸಿದಂತೆನ್ನಬಹುದು.

ಬಾಸ್‌ನ ವಿವಿಧ ಆಯ್ಕೆಗಳನ್ನು ಕೊಳ್ಳುಗರು ಗಾಡಿಯ ಮಾರಾಟಗಾರರಲ್ಲಿ ಸಂಪರ್ಕಿಸಿ ತಮ್ಮ ಅಗತ್ಯ, ಇಷ್ಟದ ಆಯ್ಕೆಗಳನ್ನು ಪಡೆಯಬಹುದು. ಚೀನಾ ದೇಶವೇ ಈ ಬಾಸ್ ಸೇವೆಯನ್ನು ಮಾರುಕಟ್ಟೆ ಮೊದಲು ತಂದಿತ್ತು, ಇದು ತಕ್ಕ ಮಟ್ಟಿಗೆ ಗೆಲುವು ಪಡೆದಿತ್ತು. ಬಾಸ್ ಮೂಲಕ ಇವಿ ಕೊಳ್ಳುಗರಿಗೆ ಆರಂಭಿಕ ಬೆಲೆಯ ಹೊರೆ ಕಡಿಮೆಯಾಗುವುದು ದಿಟ. ಭಾರತದಲ್ಲಿ ಎಮ್‌ಜಿ ಮೋಟಾರ್ಸ್ ಆಯ್ದ ಕಾರುಗಳಲ್ಲಿ ಈ ಸೇವೆ ಪರಿಚಯಿಸಿದ್ದರೆ, ಇಗ್ಗಾಲಿ ಬಂಡಿಗಳಲ್ಲಿ ಹಿರೋ ಮೋಟೋ ಕಾರ್ಪ್ ಕೂಟದವರು ತಮ್ಮ ಹೊಸದಾದ ವಿಡಾ ಗಾಡಿಗಳಿಗೆ ಈ ಬಾಸ್ ಸೇವೆಯನ್ನು ನೀಡುತ್ತಿದ್ದಾರೆ.

  1. ಹಿಂದಿನ ಬರಹದಲ್ಲಿ ಹಲಮಹಡಿ ಕಟ್ಟಡಗಳಲ್ಲಿ ಚಾರ್ಜಿಂಗ್ ಸಮಸ್ಯೆಯ ಬಗ್ಗೆ ಹೇಳಿದ್ದೆ. ಈಗ ಹೊಸದಾಗಿ ಬರುತ್ತಿರುವ ಹಲವು ಇವಿಗಳು ಚಾರ್ಜಿಂಗ್‌ನ ಸಮಸ್ಯೆಗೆ ಹೊಸ ದಾರಿಕೊಂಡಿವೆ. ಗಾಡಿಯಿಂದ ಬಿಡಿಸಿ ಮಿಂಕಟ್ಟನ್ನು ಹೊರತೆಗೆದು ಮನೆಯಲ್ಲಿಯೇ ಚಾರ್ಜಿಂಗ್ ಮಾಡಿಕೊಳ್ಳುವ ಏರ್ಪಾಟು, ಮನೆಯ ಯಾವುದೇ ಕೋಣೆಯ 5A ಸಾಕೆಟ್ ನಿಂದಲೇ ಚಾರ್ಜ್ ಮಾಡಬಹುದಾದ ಆಯ್ಕೆ ನೀಡುತ್ತಿವೆ. ದೊಡ್ಡ ದೊಡ್ಡ ಅಪರಾರ್ಟ್‌ಮೆಂಟ್‌ಗಳಲ್ಲಿ ಪ್ರತಿ ಬಳಕೆದಾರರಿಗೆ ಅನುವಾಗುವಂತೆ, ಅವರ ವಿದ್ಯುತ್ ಮೀಟರ್‌ಗೆ ಜೋಡಿಸಬಲ್ಲ, ಗೋಡೆಗೆ ಅಳವಡಿಸುವ ಚಾರ್ಜಿಂಗ್ ಏರ್ಪಾಟನ್ನು ಹಲವು ತಯಾರಕರು ನೀಡುತ್ತಿದ್ದಾರೆ. 

ಇದಲ್ಲದೇ ಹೆಚ್ಚುತ್ತಿರುವ ಎಲೆಕ್ಟ್ರಿಕ್ ಗಾಡಿಗಳಿಗೆ ಅನುವಾಗಲೆಂದು, ಸರಕಾರ-ಖಾಸಗಿ ಕೂಟಗಳ ನೆರವಿನೊಂದಿಗೆ ನಗರ, ಪಟ್ಟಣ, ಹೆದ್ದಾರಿಗಳಲ್ಲಿ ಚಾರ್ಜಿಂಗ್ ಏರ್ಪಾಟು ಒದಗಿಸುವುದರೊಂದಿಗೆ ಅವುಗಳ ಸಮಯಕ್ಕೆ ತಕ್ಕ ನಿರ್ವಹಣೆಯನ್ನು ಮಾಡುವ ಕೆಲಸ ಮಾಡುತ್ತಿರುವುದು ಇವಿ ಕೊಳ್ಳಬೇಕೆಂದಿರುವವರಿಗೆ ಸಿಹಿ ಸುದ್ದಿ. ಇನ್ನೂ ನಗರ, ಪಟ್ಟಣ, ಹೆದ್ದಾರಿಗಳಲ್ಲಿರುವ ಚಾರ್ಜಿಂಗ್ ತಾಣಗಳ ಮಾಹಿತಿ ನೀಡುವ ಆಪ್‌ಗಳು , ಆಯಾ ತಾಣಗಳು ಪೂರ್ಣವಾಗಿ ಕೆಲಸ ಮಾಡುತ್ತಿವೆಯೇ ಇಲ್ಲವೇ ಮುಚ್ಛಿವೆಯೇ ಎಂಬ “Real Time” ಮಾಹಿತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಹರವಿನ ದುಗುಡಕ್ಕೆ (Range Anxiety) ಇದು ಪರಿಹಾರ ನೀಡಲಿದೆ.

  1. ಮರುಮಾರಾಟದ ಬೆಲೆ: ಬಹುತೇಕ ಇವಿಗಳು ಸುಮಾರು 8-10 ವರುಶಗಳಲ್ಲಿ ಹೆಚ್ಚೆಂದರೆ 8-15% ಮಾತ್ರ ತಾಳಿಕೆಯಲ್ಲಿ ಕಡಿಮೆಯಾಗುತ್ತೆಂದು ಹಲವು ಇವಿ ಪರಿಣಿತರು, ಬ್ಯಾಟರಿ ಅರಕೆಗಾರರು ತೋರಿಸಿಕೊಡುತ್ತಿದ್ದಾರೆ. ಈ ಮಾಹಿತಿ ಸಾಮಾನ್ಯ ಜನತೆ, ಇವಿ ಕೊಳ್ಳುಗರು-ಮಾರಾಳಿಗರಿಗೂ ಹೆಚ್ಚು ಮನವರಿಕೆಯಾದರೆ, ಮರುಮಾರಾಟಗಳು ಸುಲಭವಾಗುವ ಸಾಧ್ಯತೆಯಿದೆ.
  2. ಕೊನೆಯದಾಗಿ, ಮಾರಾಟದ ನಂತರದ ನೆರವು ಮತ್ತು ಬೆಂಬಲದ ಬಗ್ಗೆ, ಇವಿ ತಯಾರಕರು ಹೆಚ್ಚು ಕೆಲಸ ಮಾಡಬೇಕಿದೆ. ಗಾಡಿಗಳ ರಿಪೇರಿ, ಸರ್ವೀಸ್ ಮಾಡಲು ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ಮೇಲಿಂದ ಮೇಲೆ ತರಬೇತಿಗಳ ಮೂಲಕ ಅವರನ್ನು ಪಳಗಿಸಬೇಕಿದೆ.

ತಿಟ್ಟ ಸೆಲೆ: diyguru.org