ತಮ್ಮ ಸುತ್ತಮುತ್ತ ನಡೆಯುವ ಆಗುಹೋಗುಗಳನ್ನು ತುಂಬಾ ಕುತೂಹಲದಿಂದ ಕಾಣುವ ಮನುಷ್ಯರು, ತಮ್ಮ ಅರಿವಿಗೆ ನಿಲುಕಿದ್ದನ್ನು ತಿಳಿದುಕೊಳ್ಳುತ್ತಾ, ಅದನ್ನು ಒರೆಗೆಹಚ್ಚುತ್ತಾ, ತಿಳುವಳಿಕೆಯನ್ನು ಹಿಗ್ಗಿಸಿಕೊಳ್ಳುತ್ತಾ ಬಂದಿದ್ದಾರೆ. ಎರಡು ವಸ್ತುಗಳನ್ನು ಉಜ್ಜಿದಾಗ ಹೊಮ್ಮಿದ ಕಿಡಿಯನ್ನು ತಾವು ಬಳಸಬಹುದಾದ ಬೆಂಕಿಯನ್ನಾಗಿ ಬದಲಾಯಿಸುವಂತಹ ಅರಿವಿನ ಅಂಬೆಗಾಲಿಟ್ಟರೆ, ತಾವು ಮಾಡಿದ ಸಲಕರಣೆಗಳಿಂದ ಇಡೀ ಬ್ರಹ್ಮಾಂಡವನ್ನೇ ತಿಳಿದುಕೊಳ್ಳುವ ಹಂಬಲದಲ್ಲಿ ಇಂದು ಮನುಷ್ಯರು ಅರಿವಿನ ಮೆಟ್ಟಲೇರುತ್ತಿದ್ದಾರೆ. ನಿಜವೇನು ಅನ್ನುವುದನ್ನು ತಡಕಾಡುವ, ಅರಿತ ವಿಷಯವನ್ನು ಒರೆಗೆಹಚ್ಚುವ ಅರಿಮೆ, ವಿಜ್ಞಾನ, ಸಾಯನ್ಸ್ ಇಂದು ಮನುಷ್ಯರ ಬದುಕಿನ ಬಹು ಮುಖ್ಯ ಅಂಗವಾಗಿದೆ.
ವಿಷಯವೊಂದರ ಅರಿವು ಹೆಚ್ಚಿಸಿಕೊಳ್ಳುವಲ್ಲಿ ಮನುಷ್ಯರಿಗೆ ನೆರವಾಗಿದ್ದೆಂದರೆ ತಿಳಿದ ವಿಷಯವನ್ನು ಅಂದಿನ ತಲೆಮಾರಿನ ಮುಂದಿಡುತ್ತಾ, ಮುಂದಿನ ತಲೆಮಾರಿಗೆ ಸಾಗಿಸುತ್ತಾ ಬಂದ ನಡೆ. ಬರಹ, ಪ್ರಯೋಗ, ಚರ್ಚೆ ಮುಂತಾದವುಗಳು ಅರಿವನ್ನು ಹಂಚಿಕೊಳ್ಳುವ ಮಾಧ್ಯಮಗಳಾಗಿ ಹೊಮ್ಮಿದ್ದನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಹೆಚ್ಚಿನದನ್ನು ಸಾಧಿಸಲು ಜಗತ್ತಿನ ಹಲವಾರು ಸಮುದಾಯಗಳು ತಮ್ಮ ನುಡಿಯನ್ನು ಒಂದು ಸಾಧನವನ್ನಾಗಿ ಬಳಸಿಕೊಳ್ಳುತ್ತಾ ಬಂದಿವೆ. ಫ್ರೆಂಚ್, ಜರ್ಮನ್, ಇಂಗ್ಲೀಶ್, ಪಿನ್ನಿಶ್, ಜಪಾನೀಸ್, ಕೊರಿಯನ್ ಮುಂತಾದ ನುಡಿಗಳು ತಮ್ಮ ಸಮುದಾಯದಲ್ಲಿ ವಿಜ್ಞಾನದ ಅರಿವನ್ನು ಪಸರಿಸುವಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸಿವೆ.
ಕನ್ನಡದಲ್ಲಿ ಕತೆ, ಕಾದಂಬರಿ, ಹಾಡು ಮುಂತಾದ ಸಾಹಿತ್ಯದ ಕವಲುಗಳಿಗೆ ಒತ್ತುಕೊಟ್ಟಿರುವುದು ಹೆಚ್ಚಾಗಿ ಕಂಡುಬರುತ್ತಾದರೂ, ವಿಜ್ಞಾನದ ಬರಹಗಳು ಅಲ್ಲಲ್ಲಿ ಹೊರಹೊಮ್ಮಿದ್ದನ್ನು ಕಾಣಬಹುದು. ಡಾ.ಶಿವರಾಮ್ ಕಾರಂತ ಅವರು ಬರೆದ ವಿಜ್ಞಾನದ ಹೊತ್ತಗೆಗಳು ಒಂದೆಡೆಯಾದರೆ, ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಡಿ.ಎಸ್.ಶಿವಪ್ಪನವರು ತಮ್ಮ ಅನುಭವದಿಂದ ಕಟ್ಟಿಕೊಟ್ಟ ವೈದ್ಯಕೀಯ ಪದಕೋಶ ಇನ್ನೊಂದೆಡೆ ತಮ್ಮದೇ ಮಹತ್ವವನ್ನು ಹೊಂದಿವೆ. ಇವರಲ್ಲದೇ ಇನ್ನೂ ಹಲವಾರು ಮಹನೀಯರು, ಸಂಘ ಸಂಸ್ಥೆಗಳು ಕನ್ನಡದಲ್ಲಿ ಅರಿವು ಹೊಮ್ಮಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಅರಿವಿನ ಈ ಹರಿವನ್ನು ಇನ್ನೂ ಅಚ್ಚುಕಟ್ಟಾಗಿ ಮುಂದುವರೆಸುವುದು ಈ ಮಿಂದಾಣದ ಗುರಿಯಾಗಿದೆ.
ಅರಿಮೆಯ ವಿಷಯಗಳನ್ನು ತಿಳಿಸುವ ಈ ನಿಟ್ಟಿನಲ್ಲಿ ಕನ್ನಡದ ಬೇರು ಪದಗಳಿಗೆ ಒತ್ತುಕೊಡಲಾಗುತ್ತದೆ. ವಿಷಯವೊಂದನ್ನು ತಿಳಿಸಲು ಕನ್ನಡದ ಬೇರು ಪದಗಳು ಹೆಚ್ಚು ಕಸುವು ಹೊಂದಿರುವುದರಿಂದ ಹೀಗೆ ಮಾಡಲಾಗುತ್ತಿದೆ. ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದ ಪದಗಳು ಒಂದೆಡೆ ಸಿಗುವಂತೆ ಮಾಡುವುದು ಈ ಮಿಂದಾಣದ ಉದ್ದೇಶಗಳಲ್ಲೊಂದಾಗಿದೆ. ಈ ಮಿಂದಾಣದಲ್ಲಿ ಇರುವರಿಮೆ (physics), ಇರ್ಪರಿಮೆ (chemistry), ಉಸಿರರಿಮೆ (biology), ಎಣಿಕೆಯರಿಮೆ (mathematics), ಹಣಕಾಸರಿಮೆ (economics), ಚಳಕ (technology) ಮುಂತಾದ ಅರಿಮೆಯ (ವಿಜ್ಞಾನದ) ಕವಲುಗಳಿಗೆ ಸಂಬಂಧಿಸಿದ ಬರಹಗಳನ್ನು ಬರೆಯಲಾಗುತ್ತದೆ.
ಕನ್ನಡ ಬರಹದಲ್ಲಿ ಲಿಪಿ ಸುಧಾರಣೆಯು ಒಂದು ಪ್ರಮುಖ ಹೆಜ್ಜೆಯಾಗಿದ್ದು, ಈ ನಿಟ್ಟಿನಲ್ಲಿ ಬರಹಗಳನ್ನು ’ಹೊಸಬರಹ’ದಲ್ಲಿ ಬರೆಯುವವರಿಗೆ ಈ ಮಿಂದಾಣವು ತೆರೆದುಕೊಂಡಿದೆ. ಅದರಂತೆ ಬರಹಗಾರರು ತಮ್ಮ ಬರಹಗಳಲ್ಲಿ ಮುಖ್ಯವಾಗಿ ಮಹಾಪ್ರಾಣ ಅಕ್ಷರಗಳನ್ನು ಅಲ್ಪಪ್ರಾಣಗಳನ್ನಾಗಿ ಬರೆಯುವ ಆಯ್ಕೆಯನ್ನು ಹೊಂದಿರುತ್ತಾರೆ.
ಈ ಮಿಂದಾಣದಲ್ಲಿ ಬರೆಯಲು ಆಸಕ್ತಿ ಹೊಂದಿರುವವರು ಇಲ್ಲವೇ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು, ಸಲಹೆಗಳನ್ನು ನೀಡಬೇಕೆನ್ನುವವರು [email protected] ಗೆ ಬರೆಯಬಹುದು. ಬರಹಗಳನ್ನು ಹೊರತರುವ ಬಗೆಗಿನ ತೀರ್ಮಾನವು ಈ ಮಿಂದಾಣದ ಸಂಪಾದಕರದ್ದಾಗಿರುತ್ತದೆ.