ಉಸಿರಾಟದ ಏರ‍್ಪಾಟು – ಬಾಗ 3

ಉಸಿರೇರ‍್ಪಾಟಿನ ಸರಣಿಯನ್ನು ಮುಂದುವರೆಸುತ್ತಾ, ಈ ಕಂತಿನಲ್ಲಿ ಉಸಿರಾಟದ ಉಸಿರಿಯರಿಮೆಯ (physiology) ಬಗ್ಗೆ ತಿಳಿಸಿಕೊಡಲಾಗುವುದು.

ಉಸಿರಾಡುವ ಹಮ್ಮುಗೆಯನ್ನು ಮೂರು ಹಂತಗಳಾಗಿ ಗುಂಪಿಸಬಹುದಾಗಿದೆ.

1) ಉಸಿರುಚೀಲದ ಗಾಳಿಯಾಟ (pulmonary ventilation)

2) ಹೊರ ಉಸಿರಾಟ (external respiration)

3) ಒಳ ಉಸಿರಾಟ (internal respiration)

ಉಸಿರುಚೀಲದ ಗಾಳಿಯಾಟ (pulmonary ventilation)

Respiration_3_1ಗಾಳಿಯನ್ನು ಉಸಿರುಚೀಲದ ಒಳ-ಹೊರಗೆ ಸಾಗಿಸುವ ಹಮ್ಮುಗೆಯನ್ನು ಉಸಿರುಚೀಲದ ಗಾಳಿಯಾಟ (pulmonary ventilation) ಎಂದು ಹೇಳಬಹುದು. ಕಳೆಯೊತ್ತಡ (negative pressure) ಹಾಗು ಉಸಿರೇರ‍್ಪಾಟಿನ ಕಂಡಗಳ (respiratory muscles) ಕುಗ್ಗಿಸುವಿಕೆಯು ಜೊತೆಗೂಡಿ ಉಸಿರುಚೀಲದ ಗಾಳಿಯಾಟವನ್ನು ನೆರವೇರಿಸುತ್ತವೆ. ಉಸಿರೇರ‍್ಪಾಟಿನ ಕಳೆಯೊತ್ತಡದ ಏರ‍್ಪಾಟು (negative pressure system), ಗಾಳಿಗೂಡುಗಳು (alveoli) ಹಾಗು ಹೊರಗಿನ ವಾತಾವರಣದ ನಡುವೆ ಕಳೆಯೊತ್ತಡದ ಏರುಪೇರನ್ನು (negative pressure gradient) ಉಂಟುಮಾಡುತ್ತವೆ. ಅಂದರೆ ಗಾಳಿಯು ಒಳಗೆ ಹೋಗಲು ಅನುವಾಗುವಂತೆ ಮಯ್ಯೊಳಗೆ ಕಡಿಮೆ ಒತ್ತಡವನ್ನು ಈ ಬಾಗಗಳು ಉಂಟುಮಾಡುತ್ತವೆ. ಈ ಮೂಲಕ ಹೊರಗಿನ ವಾತಾವರಣದಲ್ಲಿ ಹೆಚ್ಚಿನ ಒತ್ತಡ ಮತ್ತು ಮಯ್ಯೊಳಗೆ ಕಡಿಮೆ ಒತ್ತಡ ಉಂಟಾಗುವುದರಿಂದ ಗಾಳಿಯು ಹೊರಗಿನಿಂದ ಮಯ್ಯೊಳಗೆ ಎಳೆಯಲ್ಪಡುತ್ತದೆ.

ಉಸಿರುಚೀಲಗಳನ್ನು (lungs) ಸುತ್ತುವರೆದಿರುವ ಅಳ್ಳೆಪರೆಯು (pleural membrane), ದಣಿವಾಗದ (resting state) ಕೆಲಸವನ್ನು ಮಾಡುವಾಗ ಉಸಿರುಚೀಲದ ಒತ್ತಡವನ್ನು ಹೊರಗಿನ ವಾತಾವರಣಕ್ಕಿಂತ ಸ್ವಲ್ಪ ಕೆಳಮಟ್ಟದಲ್ಲಿ ಇಡುತ್ತದೆ. ಇದರಿಂದ ಗಾಳಿಗೂಡಿನ (alveoli) ಕಡೆ ವಾಲುವ ಕೆಳ-ಒತ್ತಡದ ಏರುಪೇರು, ಹೊರಗಿನ ಗಾಳಿಯು ಚುರುಕಲ್ಲದ (passive) ಬಗೆಯಲ್ಲಿ ಉಸಿರುಚೀಲವನ್ನು ತುಂಬಿಕೊಳ್ಳುವಂತೆ ಮಾಡುತ್ತದೆ. ಗಾಳಿಯು ಉಸಿರುಚೀಲವನ್ನು ತುಂಬಿಕೊಳ್ಳುತ್ತಿದ್ದಂತೆ, ಒತ್ತಡವು ಹೊರಗಿನ ವಾತಾವರಣಕ್ಕೆ ಸಮನಾಗಿ ಏರುತ್ತದೆ.

ಉಸಿರುಚೀಲದ ಒತ್ತಡವು ಹೊರಗಿನ ವಾತಾವರಣವನ್ನು ತಲುಪಿದ ಮೇಲೆ, ತೊಗಲ್ಪರೆ (diaphragm) ಹಾಗು ಹೊರಗಿನ ಪಕ್ಕೆಲುನಡು ಕಂಡಗಳ (external intercostals muscles) ಕುಗ್ಗಿಸುವಿಕೆಯಿಂದ ಹಿಗ್ಗುವ ಎದೆಯೊಳಗಿನ ಗಾತ್ರವು ಮತ್ತಶ್ಟು ಗಾಳಿಯನ್ನು ಎಳೆದುಕೊಳ್ಳಲು ನೆರವಾಗುತ್ತದೆ. ಇದು ಮತ್ತೆ ಉಸಿರುಚೀಲದ ಒತ್ತಡವನ್ನು ಹೊರಗಿನ ಒತ್ತಡಕ್ಕಿಂತ ಕೆಳಮಟ್ಟಕ್ಕೆ ಮುಟ್ಟಿಸುತ್ತದೆ.

ಗಾಳಿಯನ್ನು ಉಸಿರುಚೀಲದಿಂದ ಹೊರಹಾಕಲು, ತೊಗಲ್ಪರೆ ಹಾಗು ಹೊರ ಪಕ್ಕೆಲುನಡು ಕಂಡಗಳು ಸಡಿಲಗೊಂಡರೆ, ಒಳ ಪಕ್ಕೆಲುನಡು ಕಂಡಗಳು (internal intercostal muscles) ಕುಗ್ಗುತ್ತವೆ. ಇದು ಎದೆಯ ಗಾತ್ರವನ್ನು ಕುಗ್ಗಿಸುವುದರ ಜೊತೆಗೆ ಎದೆಗೂಡಿನೊಳಗಿನ ಒತ್ತಡವನ್ನು ಹೆಚ್ಚಿಸುತ್ತದೆ.

ಈ ಬಗೆಯಾಗಿ ಕಳೆಯೊತ್ತಡದ ಏರುಪೇರು ತಿರುವು-ಮುರುವಾಗಿ (reverse), ಉಸಿರುಚೀಲದೊಳಗಿನ ಒತ್ತಡವು ಹೊರಗಿನ ಒತ್ತಡದ ಮಟ್ಟಕ್ಕೆ ಇಳಿಯುವ ತನಕ ಉಸಿರನ್ನು ಉಸಿರುಚೀಲದಿಂದ ಹೊರಹಾಕಲಾಗುತ್ತದೆ. ಈ ಹಂತದಲ್ಲಿ ಹಿಂಪುಟಿತನವನ್ನು (elastic nature) ಹೊಂದಿರುವ ಉಸಿರುಚೀಲಗಳು ತಮ್ಮ ಸಾಮಾನ್ಯ ಮಟ್ಟಕ್ಕೆ ಮರಳುತ್ತವೆ. ಇದು ಉಸಿರನ್ನು ಎಳೆದುಕೊಳ್ಳಲು ಬೇಕಾದ ಕಳೆಯೊತ್ತಡ ಏರುಪೇರಿಗೆ ಹಿಂದಿರುಗಲು ನೆರವಾಗುತ್ತದೆ.

ಉಸಿರಾಟದ ಮೇಲ್ನೋಟ:

Respiration_3_2ಹೊರ ಉಸಿರಾಟ (external respiration) (ಚಿತ್ರ 2, 3, 4)

ಗಾಳಿ ತುಂಬಿದ ಗಾಳಿಗೂಡು ಹಾಗು ಗಾಳಿಗೂಡುಗಳ ಸುತ್ತಲೂ ಇರುವ ನವಿರುರಕ್ತಗೊಳವೆಗಳ ನಡುವೆ ನಡೆಯುವ ಆವಿಗಳ ಅದಲು-ಬದಲಿಕೆಯನ್ನು ಹೊರ ಉಸಿರಾಟ (external respiration) ಎನ್ನಬಹುದು. ನವಿರುರಕ್ತಗೊಳವೆಗಳಲ್ಲಿರುವ ರಕ್ತಕ್ಕೆ ಹೋಲಿಸಿದರೆ, ಉಸಿರುಚೀಲವನ್ನು ಹೊಕ್ಕುವ ಗಾಳಿಯಲ್ಲಿ ಉಸಿರುಗಾಳಿಯ (oxygen) ಪಾಲೊತ್ತಡ (partial pressure) ಹೆಚ್ಚಿದ್ದು, ಕಾರ‍್ಬನ್ ಡಯಾಕ್ಸಾಯ್ಡ್ ನ (carbon di-oxide) ಪಾಲೊತ್ತಡ ಕೆಳಮಟ್ಟದಲ್ಲಿರುತ್ತದೆ.

ಪಾಲೊತ್ತಡ ಏರುಪೇರಿನ (partial pressure gradient) ಕಟ್ಟಲೆಯಂತೆ,

ಆವಿಯು ಮೇಲ್ ಮಟ್ಟದ ಒತ್ತಡದ ಕಡೆಯಿಂದ ಕೆಳಮಟ್ಟದ ಒತ್ತಡದೆಡೆಗೆ ಹರಡುತ್ತದೆ.

ಈ ಬಗೆಯ ಪಾಲೊತ್ತಡದ ವ್ಯತ್ಯಾಸದಿಂದಾಗಿ, ಗಾಳಿಗೂಡಿನಲ್ಲಿ ಹೆಚ್ಚಿರುವ ಉಸಿರುಗಾಳಿಯು (oxygen) ನವಿರುರಕ್ತಗೊಳವೆಯಲ್ಲಿರುವ ರಕ್ತದೆಡೆಗೆ ಸಾಗಿದರೆ, ನವಿರುರಕ್ತಗೊಳವೆಯ ರಕ್ತದಲ್ಲಿ ಹೆಚ್ಚಿರುವ ಕಾರ‍್ಬನ್ ಡಯಾಕ್ಸಾಯ್ಡ್ ಗಾಳಿಗೂಡಿನೆಡೆಗೆ ಹರಡುತ್ತದೆ.

Respiration_3_3ಆವಿಗಳ ಅದಲುಬದಲಿಕೆ ಗಾಳಿಗೂಡಿನಲ್ಲಿರುವ ಹುರುಪೆ ಮೇಲ್ಪರೆ (squamous epithelium) ಹಾಗು ನವಿರುರಕ್ತಗೊಳವೆಯಲ್ಲಿರುವ ಒಳಪರೆಗಳ (endothelium) ಮೂಲಕ ನಡೆಯುತ್ತದೆ. ಒಟ್ಟಾರೆ, ಹೊರ ಉಸಿರಾಟದ ಹಮ್ಮುಗೆಯಿಂದಾಗಿ ಗಾಳಿಗೂಡಿನ ಗಾಳಿಯಲ್ಲಿರುವ ಉಸಿರುಗಾಳಿಯು ರಕ್ತವನ್ನೂ, ಹಾಗು ರಕ್ತದಲ್ಲಿರುವ ಕಾರ‍್ಬನ್ ಡಯಾಕ್ಸಾಯ್ಡ್ ಗಾಳಿಗೂಡಿನಲ್ಲಿರುವ ಗಾಳಿಯನ್ನು ಸೇರುತ್ತದೆ. ಮುಂದೆ, ರಕ್ತವನ್ನು ಸೇರಿದ ಉಸಿರುಗಾಳಿಯನ್ನು ಮಯ್ಯಲ್ಲಿರುವ ಗೂಡುಕಟ್ಟುಗಳ ಕಡೆ ಸಾಗಿಸಲಾಗುತ್ತದೆ. ಗಾಳಿಗೂಡನ್ನು ಸೇರುವ ಕಾರ‍್ಬನ್ ಡಯಾಕ್ಸಾಯ್ಡ್ ಉಸಿರುಚೀಲದ ಗಾಳಿಯಾಟದ (pulmonary ventilation) ಮೂಲಕ ಮಯ್ಯಿಂದ ಹೊರದಬ್ಬಲ್ಪಡುತ್ತದೆ.

Respiration_3_4ಒಳ ಉಸಿರಾಟ (internal respiration) (ಚಿತ್ರ 2, 5)

ಗೂಡುಕಟ್ಟುಗಳನ್ನು (tissues) ಮತ್ತು ಅವುಗಳನ್ನು ಸುತ್ತುವರೆದ ನವಿರುರಕ್ತಗೊಳವೆಗಳ ನಡುವೆ ನಡೆಯುವ ಆವಿಗಳ ಅದಲುಬದಲಿಕೆಯನ್ನು (gaseous exchange) ಒಳ ಉಸಿರಾಟ (internal respiration) ಎಂದು ಹೇಳಬಹುದು. ಗೂಡುಕಟ್ಟುಗಳ ಮಟ್ಟದಲ್ಲಿ, ನವಿರುರಕ್ತಗೊಳವೆಗಳ ರಕ್ತದಲ್ಲಿ ಉಸಿರುಗಾಳಿಯ (oxygen) ಪಾಲೊತ್ತಡ (partial pressure) ಮೇಲ್ಮಟ್ಟದಲ್ಲಿದ್ದರೆ, ಕಾರ‍್ಬನ್ ಡಯಾಕ್ಸಾಯ್ಡ್ ನ (carbon di-oxide) ಪಾಲೊತ್ತಡ ಕೆಳಮಟ್ಟದಲ್ಲಿರುತ್ತದೆ.

ಆದರೆ ಗೂಡುಕಟ್ಟುಗಳಲ್ಲಿ ಉಸಿರುಗಾಳಿಯ ಪಾಲೊತ್ತಡ ಕೆಳಮಟ್ಟದಲ್ಲಿ ಹಾಗು ಕಾರ‍್ಬನ್ ಡಯಾಕ್ಸಾಯ್ಡ್ ನ ಪಾಲೊತ್ತಡ ಮೇಲ್ಮಟ್ಟದಲ್ಲಿರುತ್ತದೆ. ಈ ವ್ಯತ್ಯಾಸದಿಂದಾಗಿ ಉಸಿರುಗಾಳಿಯು ಗೂಡುಕಟ್ಟುಗಳೆಡೆಗೆ ಸಾಗುತ್ತದೆ ಹಾಗು ಕಾರ‍್ಬನ್ ಡಯಾಕ್ಸಾಯ್ಡ್ ನವಿರುರಕ್ತಗೊಳವೆಯೊಳಕ್ಕೆ ನುಗ್ಗುತ್ತದೆ. ಆವಿಗಳ ಈ ಅದಲುಬದಲಿಕೆಯು ನವಿರುರಕ್ತಗೊಳವೆಯ ಒಳಪರೆಯ (endothelium) ಮೂಲಕ ನಡೆಯುತ್ತದೆ.

Respiration_3_5ಆವಿಗಳ ಸಾಗಣೆ (transportation of gases) (ಚಿತ್ರ 2, 3, 4, 5)

ಉಸಿರಾಟದ ಮುಕ್ಯ ಆವಿಗಳಾದ ಉಸಿರುಗಾಳಿ ಮತ್ತು ಕಾರ‍್ಬನ್ ಡಯಾಕ್ಸಾಯ್ಡ್ ಗಳನ್ನು ನಮ್ಮ ಮಯ್ಯೊಳಗೆ ಸಾಗಿಸುವ ಕೆಲಸವನ್ನು ರಕ್ತಗೊಳವೆಗಳಲ್ಲಿ ಓಡಾಡುವ ರಕ್ತವು ನೆರವೇರಿಸುತ್ತದೆ. ರಕ್ತವು ಹಲವು ಬಗೆಯ ರಕ್ತಕಣಗಳು (blood cells) ಹಾಗು ರಕ್ತರಸವನ್ನು (blood plasma) ಹೊಂದಿರುತ್ತದೆ. ರಕ್ತರಸವು (blood plasma) ಕರಗಿದ ರೂಪದಲ್ಲಿರುವ ಉಸಿರುಗಾಳಿಯನ್ನು ಕೊಂಡೊಯ್ಯುತ್ತದೆ.

ರಕ್ತಕಣಗಳಲ್ಲೊಂದಾದ ಕೆಂಪುರಕ್ತಕಣವು ರಕ್ತಬಣ್ಣಕ (hemoglobin) ಎಂಬ ಅಂಶವನ್ನು ಹೊಂದಿರುತ್ತದೆ. ಈ ರಕ್ತಬಣ್ಣಕವು ಹೆಚ್ಚು-ಕಡಿಮೆ 99% ರಶ್ಟು ಉಸಿರುಗಾಳಿಯನ್ನು ಸಾಗಿಸಲು ನೆರವಾಗುತ್ತದೆ. ರಕ್ತಬಣ್ಣಕವು ಸಣ್ಣ ಮೊತ್ತದ ಕಾರ‍್ಬನ್ ಡಯಾಕ್ಸಾಯ್ಡ್ ನ್ನೂ ಸಾಗಿಸುವ ಶಕ್ತಿಯನ್ನು ಹೊಂದಿದೆ. ಆದರೆ ಕಾರ‍್ಬನ್ ಡಯಾಕ್ಸಾಯ್ಡ್ ನ ಹೆಚ್ಚಿನ ಬಾಗವನ್ನು ಬಯ್-ಕಾರ‍್ಬ್ ನೇಟ್ (bicarbonate) ರೂಪದಲ್ಲಿ ರಕ್ತರಸವು ಒಯ್ಯುತ್ತದೆ.

ಗೂಡುಕಟ್ಟುಗಳಲ್ಲಿ ಕಾರ‍್ಬನ್ ಡಯಾಕ್ಸಾಯ್ಡ್ ನ ಪಾಲೊತ್ತಡ ಹೆಚ್ಚಿದಾಗ, ಕಾರ‍್ಬೋನಿಕ್ ಅನ್-ಹಯ್ಡ್ರೆಸ್ (carbonic anhydrase) ದೊಳೆಯು (enzyme) ನೀರು ಮತ್ತು ಕಾರ‍್ಬನ್ ಡಯಾಕ್ಸಾಯ್ಡ್ ಗಳ ನಡುವೆ ಪ್ರತಿಕ್ರಿಯೆಯನ್ನು ಬಿರುಸುಗೊಳಿಸುತ್ತದೆ. ಇದರಿಂದ ಉಂಟಾಗುವ ಕಾರ‍್ಬೋನಿಕ್ ಆಸಿಡ್, ಹಯ್ಡ್ರೋಜನ್ ಹಾಗು ಬಯ್-ಕಾರ‍್ಬ್ ನೇಟ್ ಮಿನ್ತುಣುಕುಗಳಾಗಿ (ions) ಬೇರ‍್ಪಡುತ್ತವೆ. ಉಸಿರುಚೀಲದಲ್ಲಿ ಕಾರ‍್ಬನ್ ಡಯಾಕ್ಸಾಯ್ಡ್ ನ ಪಾಲೊತ್ತಡ ಕೆಳಮಟ್ಟದಲ್ಲಿದಾಗ, ಈ ಪ್ರತಿಕ್ರಿಯಯು ತಿರುವು-ಮುರುವಾಗುತ್ತದೆ (reverse). ಇದರಿಂದ, ಕಾರ‍್ಬನ್ ಡಯಾಕ್ಸಾಯ್ಡ್ ಉಸಿರುಚೀಲದೊಳಕ್ಕೆ ಬಿಡುಗಡೆಯಾಗುತ್ತದೆ. ಉಸಿರನ್ನು ಹೊರಗೆ ಹಾಕಿದಾಗ ಕಾರ‍್ಬನ್ ಡಯಾಕ್ಸಾಯ್ಡ್ ಮಯ್ಯಿಂದ ಹೊರಹಾಕಲ್ಪಡುತ್ತದೆ.

ಉಸಿರಾಟದ ಒನ್ನೆಲೆತ (respiratory homeostasis)

ದಣಿವಲ್ಲದ ಸ್ತಿತಿಯಲ್ಲಿ, ನಮ್ಮ ಮಯ್ಯಿ ಸದ್ದಿಲ್ಲದ ಉಸಿರಾಟದ ಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಈ ಬಗೆಯ ಉಸಿರಾಟವನ್ನು ‘ಹದುಳದುಸಿರಾಟ’ (eupnea) ಎಂದು ಹೇಳಬಹುದು. ತನ್ನಂಕೆಯ ಇರ‍್ಪಡೆಕಗಳು (autonomic chemoreceptor) ರಕ್ತದಲ್ಲಿರುವ ಉಸಿರುಗಾಳಿ ಹಾಗು ಕಾರ‍್ಬನ್ ಡಯಾಕ್ಸಾಯ್ಡ್ ಗಳ ಮಟ್ಟವನ್ನು ಗುರುತಿಸುತ್ತವೆ. ಗುರುತಿಸಿದ ಮಟ್ಟವನ್ನು ಮಿದುಳುಬಳ್ಳಿಯಲ್ಲಿರುವ (medulla oblongata) ಉಸಿರಾಟದ ನಡುವಣಕ್ಕೆ (respiratory center) ರವಾನಿಸುತ್ತದೆ. ತನ್ನಂಕೆಯ ಇರ‍್ಪಡೆಕಗಳ ಹಿನ್ನುಣಿಕೆಯ (feedback) ಆದಾರದ ಮೇಲೆ, ಉಸಿರಾಟದ ನಡುವಣವು ಉಸಿರಾಟದ ಆಳ ಹಾಗು ಮಟ್ಟಗಳನ್ನು ಹೊಂದಿಸುವ ಕೆಲಸವನ್ನು ಮಾಡುತ್ತದೆ.

ಕಳೆದ ಮೂರು ಕಂತುಗಳಲ್ಲಿ ಉಸಿರಾಟದ ಏರ‍್ಪಾಟಿನ ಒಡಲರಿಮೆ (anatomy) ಹಾಗು ಉಸಿರಿಯರಿಮೆಗಳ (physiology) ಬಗ್ಗೆ ಮೇಲ್ನೋಟವನ್ನು ನಿಮ್ಮ ಮುಂದಿಡಲಾಗಿದೆ.  ಈ ಸರಣಿಯ ಮುಂದಿನ ಬಾಗದಲ್ಲಿ ನಮ್ಮ ಮಯ್ಯಿಯ ಮತ್ತೊಂದು ಏರ‍್ಪಾಟಿನ ಬಗ್ಗೆ ತಿಳಿಸಿಕೊಡಲಾಗುವುದು.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು: 1. encyclopedia.lubopitko-bg.com, 2. home.comcast.net  3. www.innerbody.com)

(ಈ ಬರಹವು ಹೊಸಬರಹದಲ್ಲಿದೆ)

ಉಸಿರಾಟದ ಏರ‍್ಪಾಟು – ಬಾಗ 2

ಉಸಿರು ಏರ‍್ಪಾಟಿನ ಹಿಂದಿನ ಬಾಗದಲ್ಲಿ ಮೇಲ್ ಗಾಳಿಜಾಡಿನ (upper respiratory tract) ಬಗ್ಗೆ ತಿಳಿಸಿಕೊಡಲಾಗಿತ್ತು. ಈ ಬಾಗದಲ್ಲಿ ಕೆಳ ಗಾಳಿಜಾಡು (lower respiratory tract), ಉಸಿರುಚೀಲಗಳು (lungs) ಹಾಗು ಉಸಿರೇರ‍್ಪಾಟಿನ ಕಂಡಗಳ (respiratory muscles) ಬಗ್ಗೆ ತಿಳಿಯೋಣ.

ಕೆಳ ಗಾಳಿಜಾಡು (lower respiratory tract): ಕೆಳ ಗಾಳಿಜಾಡಿನ (lower respiratory tract) ಏರ‍್ಪಾಟು ಉಸಿರುಗೊಳವೆ (trachea), ಕವಲುಗೊಳವೆಗಳು (bronchi), ಮತ್ತು ನವಿರುಸಿರುಗೊಳವೆಗಳನ್ನು (bronchioles) ಒಳಗೊಂಡಿರುತ್ತದೆ.

1) ಉಸಿರುಗೊಳವೆ (trachea): ಉಸಿರುಗೊಳವೆಯು ಸರಿಸುಮಾರು ಅಯ್ದು ಇಂಚು ಉದ್ದವಿರುತ್ತದೆ. ಉಸಿರುಗೊಳವೆಯ ಇಟ್ಟಳವು (structure) ಹಲವು ಪದರಗಳಿಂದ ಮಾಡಲ್ಪಟ್ಟಿದೆ; ಹೊರಗಿನ ಹೊರ ಪದರ (adventitia), ಗಾಜುಬಗೆ ಮೆಲ್ಲೆಲುಬು (hyaline cartilage), ಕೆಳಲೋಳ್ಪರೆ (submucosa) ಹಾಗು ಒಳಗಿನ ಲೋಳ್ಪರೆಗಳನ್ನು (mucosa) ಹೊಂದಿರುತ್ತದೆ.

ಉಸಿರುಗೊಳವೆಯ ಗಾಜುಬಗೆ ಮೆಲ್ಲೆಲುಬುಗಳು (hyaline cartilage) ‘C’ ಆಕಾರಕದ ಉಂಗುರದ ರಚನೆಯನ್ನು ಹೊಂದಿರುತ್ತವೆ; ಈ ಮೆಲ್ಲೆಲುಬುಗಳ ತುದಿಗಳನ್ನು ಉಸಿರುಗೊಳವೆ ಕಂಡಗಳು (trachealis muscle) ಜೋಡಿಸುತ್ತವೆ. ಕೊಳವೆಯ ಒಳಬಾಗವು ಹುಸಿ ಹಲಹದಿ (pseudo stratified) ಮುಂಚಾಚಿನ ಕಂಬದ ಮೇಲ್ಪರೆಯ (ciliated columnar epithelium) ಹೊದಿಕೆಯನ್ನು ಹೊಂದಿದೆ.

Respiration_2_1

ಉಸಿರುಗೊಳವೆಯು (trachea) ಉಲಿಪೆಟ್ಟಿಗೆಯನ್ನು (larynx) ಕವಲುಗೊಳವೆಗಳಿಗೆ (bronchii) ಜೋಡಿಸುವುದರ ಮೂಲಕ ಗಾಳಿಯು ಕೊರಳಿನ ಬಾಗದಿಂದ ಎದೆಯ ಬಾಗಕ್ಕೆ ಸಾಗಲು ನೆರವಾಗುತ್ತದೆ. ಮೆಲ್ಲೆಲುಬಿನ ಉಂಗುರಗಳು (hyaline cartilage) ಉಸಿರುಗೊಳವೆಯನ್ನು ಎಲ್ಲಾ ಹೊತ್ತಿನಲ್ಲೂ ತೆರೆದ ಸ್ತಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತವೆ. ಉಸಿರುಗೊಳವೆಯ (trachea) ಮುಕ್ಯ ಕೆಲಸ, ಗಾಳಿಯು ಉಸಿರುಚೀಲಗಳನ್ನು (lungs) ಸರಾಗವಾಗಿ ಸೇರಲು ಹಾಗು ಅಶ್ಟೇ ಸರಾಗವಾಗಿ ಹೊರಹೋಗಲು ನೆರವಾಗುವುದು.

ಲೋಳ್ಪರೆಯಲ್ಲಿ (mucosa) ಮಾಡಲ್ಪಡುವ ಲೋಳೆಯು (mucus), ದೂಳು ಹಾಗು ಇತರ ನಂಜುಕಣಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ, ಅವು ಉಸಿರುಚೀಲಗಳನ್ನು (lungs) ತಲುಪದಂತೆ ನೋಡಿಕೊಳ್ಳುತ್ತದೆ. ಮೇಲ್ಪರೆಯ (epithelium) ಹೊರಮಯ್ ಮೇಲಿರುವ ಮುಂಚಾಚುಗಳು (ciliary epithelium) ಮೇಲ್ಮುಕವಾಗಿ ಬಡಿಯುವುದರಿಂದ, ಈ ಲೋಳೆಯು ಗಂಟಲಿಗೆ ತಲುಪುತ್ತದೆ. ಗಂಟಲನ್ನು ತಲುಪಿದ ಲೋಳೆಯನ್ನು ನುಂಗಿದಾಗ, ಅದು ಅರಗೇರ‍್ಪಾಟಿನಲ್ಲಿ ಅರಗಿಸಲ್ಪಡುತ್ತದೆ.

2) ಕವಲುಗೊಳವೆಗಳು (bronchi) ಮತ್ತು ನವಿರುಸಿರುಗೊಳವೆಗಳು (bronchioles): (ಚಿತ್ರ 2, 3 & 4) ಉಸಿರುಗೊಳವೆಯ ಕೆಳತುದಿಯಲ್ಲಿ, ಉಸಿರುಜಾಡು (respiratory airway) ಎಡ ಹಾಗು ಬಲ ಮೊದಲನೆ ಕವಲುಗೊಳವೆಗಳಾಗಿ (primary bronchi) ಇಬ್ಬಾಗವಾಗುತ್ತದೆ. ಒಂದೊಂದು ಕವಲುಗೊಳವೆಯು (primary bronchi), ಒಂದೊಂದು ಉಸಿರುಚೀಲವನ್ನು ಸೇರುತ್ತದೆ. ಮೊದಲನೆ ಕವಲುಗೊಳವೆಗಳು (primary bronchi), ಎರಡನೆ ಕವಲುಗೊಳವೆಗಳಾಗಿ (secondary bronchi) ಮಾರ‍್ಪಡುತ್ತವೆ. ಎರಡನೆ ಕವಲುಗೊಳವೆಗಳು (secondary bronchi) ಗಾಳಿಯನ್ನು ಉಸಿರುಚೀಲದ ಹಾಲೆಗಳಿಗೆ (lung lobes) ಸಾಗಿಸಲು ನೆರವಾಗುತ್ತದೆ (ಹಾಲೆಗಳ ಬಗ್ಗೆ ಮುಂದೆ ಉಸಿರುಚೀಲದ ತಲೆಬರಹದಡಿಯಲ್ಲಿ ವಿವರಿಸಲಾಗಿದೆ).

Respiration_2_2ಎಡ ಉಸಿರುಚೀಲದಲ್ಲಿ (lung) ಎರಡು ಹಾಗು ಬಲ ಉಸಿರುಚೀಲದಲ್ಲಿ (lung) ಮೂರು ಹಾಲೆಗಳಿದ್ದು (lung lobes), ಎಡ ಉಸಿರುಚೀಲದಲ್ಲಿ ಎರಡು ಹಾಗು ಬಲ ಉಸಿರುಚೀಲದಲ್ಲಿ ಮೂರು ಎರಡನೆ ಕವಲುಗೊಳವೆಗಳನ್ನು (secondary bronchi) ಕಾಣಬಹುದು. ಒಂದೊಂದು ಹಾಲೆಯೊಳಗೆ (lobe) ಎರಡನೆ ಕವಲುಗೊಳವೆಗಳು ಹಲವು ಮೂರನೆ ಕೊಳವೆಗಳಾಗಿ (tertiary bronchi) ಕವಲೊಡೆಯುತ್ತವೆ.

Respiration_2_3ಮೂರನೆ ಕವಲುಗೊಳವೆಗಳು (tertiary bronchi) ಕವಲೊಡೆದು ನವಿರುಸಿರುಗೊಳವೆಗಳಾಗಿ (bronchioles) ಮಾರ‍್ಪಡುತ್ತವೆ. ನವಿರುಸಿರುಗೊಳವೆಗಳು ಸಿಬಿರೊಡೆದು 1 ಮಿಲಿಮೀಟರ‍್ ದುಂಡಳತೆಗಿಂತ (diameter) ಸಣ್ಣದಾದ ತುದಿ ನವಿರುಗೊಳವೆಗಳಾಗುತ್ತವೆ (terminal bronchioles). ಮಿಲಿಯನ್ಗಟ್ಟಲೇ ಇರುವ ಈ ತುದಿ ನವಿರುಗೊಳವೆಗಳು, ಗಾಳಿಗೂಡಿಗೆ (alveolus) ಗಾಳಿಯನ್ನು ರವಾನಿಸುತ್ತವೆ.

ಮೊದಲನೆ ಕವಲುಗೊಳವೆಗಳಲ್ಲಿರುವ (primary bronchi) ‘C’ ಆಕಾರದ ಮೆಲ್ಲೆಲುಬುಗಳು (cartilage), ಗಾಳಿಜಾಡನ್ನು (airway) ತೆರೆದ ಸ್ತಿತಿಯಲ್ಲಿಡಲು ನೆರವಾಗುತ್ತವೆ. ಇದು ಮುಂದೆ ಎರಡನೇ ಹಾಗು ಮೂರನೆ ಕವಲುಗೊಳವೆಗಳಾಗಿ (secondary & tertiary bronchi) ಸಿಬಿರೊಡೆದಂತೆ, ಇವುಗಳ ಗೋಡೆಯಲ್ಲಿರುವ ಮೆಲ್ಲೆಲುಬುಗಳ (cartilage) ನಡುವಿನ ದೂರ ಹೆಚ್ಚುತ್ತದೆ.

ನವಿರುಸಿರುಗೊಳವೆಗಳಲ್ಲಿ (bronchioles) ಯಾವುದೇ ಬಗೆಯ ಮೆಲ್ಲೆಲುಬುಗಳು ಇರುವುದಿಲ್ಲ. ಎರಡನೆ/ಮೂರನೆ ಕವಲುಗೊಳವೆ (secondary & tertiary bronchi) ಹಾಗು ನವಿರುಸಿರುಗೊಳವೆಗಳಲ್ಲಿ (bronchioles) ಇರುವ ನುಣುಪು ಕಂಡ (smooth muscle) ಹಾಗು ಹಿಂಪುಟಿ ಮುನ್ನು (elastin protein), ಈ ಇಟ್ಟಳಗಳಿಗೆ ಬಾಗುವ ಹಾಗು ಕುಗ್ಗುವ ಗುಣವನ್ನು ಕೊಡುತ್ತವೆ.

ಕವಲುಗೊಳವೆ (bronchi) ಹಾಗು ನವಿರುಸಿರುಗೊಳವೆಗಳ (bronchioles) ಗೋಡೆಯಲ್ಲಿರುವ ನುಣುಪು ಕಂಡದ ಗೂಡುಕಟ್ಟುಗಳು (tissues) ಉಸಿರುಚೀಲಗಳಿಗೆ (lungs) ಸಾಗುವ ಗಾಳಿಯ ಮಟ್ಟವನ್ನು ಅಂಕೆಯಲ್ಲಿಡಲು ನೆರವಾಗುತ್ತವೆ. ಮಯ್ಪಳಗಿಸುವ (exercise) ವೇಳೆ, ನಮ್ಮ ಮಯ್ಯಲ್ಲಿ ನಡೆಯುವ ತರುಮಾರ‍್ಪಿಸುವಿಕೆಯನ್ನು (metabolism) ಸರಿದೂಗಲು, ಹೆಚ್ಚಿನ ಗಾಳಿ ಬೇಕಾಗುತ್ತದೆ. ಇಂತಹ ಹೊತ್ತಿನಲ್ಲಿ, ಕವಲುಗೊಳವೆ (bronchi) ಹಾಗು ನವಿರುಸಿರುಗೊಳವೆಗಳ (bronchioles) ಗೋಡೆಯಲ್ಲಿರುವ ನುಣುಪು ಕಂಡದ ಗೂಡುಕಟ್ಟುಗಳು ಸಡಿಲಗೊಳ್ಳುತ್ತವೆ.

ಈ ಸಡಿಲಿಕೆಯಿಂದ ಕೊಳವೆಗಳು ಹಿಗ್ಗುವ ಮೂಲಕ ಗಾಳಿಯಾಡಿಕೆಗೆ ಕಡಿಮೆ ತೊಡಕು ಒಡ್ಡುತ್ತವೆ; ಇದು ಉಸಿರುಚೀಲಗಳ (lungs) ಒಳಗೆ ಹಾಗು ಹೊರಕ್ಕೆ ಹೆಚ್ಚಿನ ಗಾಳಿಯಾಡಿಕೆಯಲ್ಲಿ ನೆರವಾಗುತ್ತದೆ. ದಣಿವಿನ ಕೆಲಸವನ್ನು ಮಾಡದಿರುವ ವೇಳೆ, ಈ ನುಣುಪು ಕಂಡಗಳು (smooth muscles) ಕುಗ್ಗುವ ಮೂಲಕ ಏರುಸಿರಾಟವನ್ನು (hyperventilation) ತಡೆಯಲು ನೆರವಾಗುತ್ತವೆ. ಉಸಿರುಗೊಳವೆಯಂತೆ (trachea), ಕವಲುಗೊಳವೆ (bronchi) ಮತ್ತು ನವಿರುಸಿರುಗೊಳವೆಗಳಲ್ಲಿ (bronchioles) ಮೇಲ್ಪರೆಯ (epithelial) ಲೋಳೆ (mucus) ಹಾಗು ಮುಂಚಾಚುಗಳ (cilia) ನೆರವಿನಿಂದ, ದೂಳು ಹಾಗು ಇತರ ನಂಜುಕಣಗಳನ್ನು ಉಸಿರುಚೀಲದಿಂದ (lungs) ದೂರವಿಡಲಾಗುತ್ತದೆ.

ಉಸಿರುಚೀಲಗಳು (lungs): (ಚಿತ್ರ 3, 4, 5, 6, & 7) ಉಸಿರುಚೀಲಗಳು (lungs), ಉಸಿರಾಟದ ಬಿಡಿಬಾಗಗಳಂತೆ ಕೆಲಸಮಾಡುತ್ತವೆ; ಇವು ಉಸಿರುಗಾಳಿಯನ್ನು (oxygen) ಮಯ್ಯೊಳಗೆ ಸೇರಿಸಲು ಹಾಗು ಕಾರ‍್ಬನ್ ಡಯಾಕ್ಸಾಯಡ್‍ನ್ನು ಮಯ್ಯಿಂದ ಹೊರಗೆ ಹಾಕಲು ಸಹಕಾರಿಯಾಗಿದೆ. ಹೀರುಗದ (sponge) ಮಂದತೆಯನ್ನು ಹೊಂದಿರುವ ಈ ಜೋಡಿ ಅಂಗವು, ಎದೆಬಾಗದಲ್ಲಿರುವ ಗುಂಡಿಗೆಯ (heart) ಮಗ್ಗುಲುಗಳಲ್ಲಿ ಹರಡಿಕೊಂಡಿರುತ್ತದೆ.

ಒಂದೊಂದು ಉಸಿರುಚೀಲವು (lung) ಅಳ್ಳೆಪರೆಯಿಂದ (pleural membrane) ಸುತ್ತಲ್ಪಟ್ಟಿರುತ್ತದೆ. ಈ ಬಗೆಯ ಹೊದಿಕೆ ಉಸಿರುಚೀಲವು ಹಿಗ್ಗಲು ಹಾಗು ಕಳೆಯೊತ್ತಡವನ್ನು (negative pressure) ಸರಿದೂಗಲು ಬೇಕಾದ ಜಾಗ ಮಾಡಿಕೊಡುತ್ತದೆ. ಉಸಿರುಚೀಲವು (lung) ಸಡಿಲಗೊಳ್ಳುತ್ತಿದ್ದಂತೆ, ಉಸಿರುಚೀಲದಲ್ಲಿರುವ ಕಡಿಮೆ ಒತ್ತಡವು ಗಾಳಿಯು ಚೀಲದಲ್ಲಿ ತುಂಬಿಕೊಳ್ಳಲು ಅಣಿಮಾಡಿಕೊಡುತ್ತದೆ.

Respiration_2_4ಗುಂಡಿಗೆಯು ಎಡಬಾಗಕ್ಕೆ ವಾಲಿಕೊಂಡಿರುವುದರಿಂದ, ಎಡ ಉಸಿರುಚೀಲವು ಸ್ವಲ್ಪ ಸಣ್ಣದಿರುತ್ತದೆ. ಒಂದೊಂದು ಉಸಿರು ಚೀಲವು ಹಾಲೆಗಳಾಗಿ (lobes) ಬಾಗವಾಗುತ್ತವೆ. ಎಡ ಉಸಿರುಚೀಲದಲ್ಲಿ ಎರಡು ಹಾಗು ಬಲ ಉಸಿರುಚೀಲದಲ್ಲಿ ಮೂರು ಹಾಲೆಗಳಿರುತ್ತವೆ (lobes).

Respiration_2_5ಉಸಿರುಚೀಲದ ಒಳಬಾಗವು ನವಿರುರಕ್ತಗೊಳವೆಗಳು (capillaries) ಮತ್ತು 30 ಮಿಲಿಯನ್ನಶ್ಟು ಗಾಳಿಗೂಡುಗಳನ್ನು (alveoli) ಒಳಗೊಂಡ ಹೀರುಗದ ಗೂಡುಕಟ್ಟಿನಿಂದ (spongy tissue) ಮಾಡಲ್ಪತ್ತಿರುತ್ತದೆ. ಬಟ್ಟಲಿನ ಆಕಾರದ ಗಾಳಿಗೂಡುಗಳು (alveoli), ತುದಿ ನವಿರುಸಿರುಗೊಳವೆಗಳ (terminal bronchioles) ಕೊನೆಯಲ್ಲಿ ಇರುತ್ತವೆ.

Respiration_2_6ಗಾಳಿಗೂಡು (alveolus) ಸರಳವಾದ ಹುರುಪೆ ಮೇಲ್ಪರೆಯ (simple squamous epithelium) ಹೊದಿಕೆಯನ್ನು ಹೊಂದಿದೆ (squamous = scales/fish scales = ಹುರುಪೆ). ಈ ಹೊದಿಕೆಯು ಗಾಳಿಗೂಡನ್ನು (alveolus) ಹೊಕ್ಕುವ ಗಾಳಿ ಮತ್ತು ಗಾಳಿಗೂಡನ್ನು (alveolus) ಸುತ್ತುವರಿದ ನವಿರುರಕ್ತಗೊಳವೆಗಳಲ್ಲಿರುವ (capillaries) ರಕ್ತದೊಡನೆ ಆವಿಗಳ (ಉಸಿರುಗಾಳಿ & ಕಾರ‍್ಬನ್-ಡಯ್ ಆಕ್ಸಯ್ದ್) ಅದಲುಬದಲಿಕೆಯಲ್ಲಿ (exchange) ನೆರವಾಗುತ್ತದೆ.

Respiration_2_7ಉಸಿರಾಟದ ಕಂಡಗಳು (muscles of respiration): ಉಸಿರಾಟದ ಕಂಡಗಳಾದ ತೊಗಲ್ಪರೆ (diaphragm) ಮತ್ತು ಪಕ್ಕೆಲುನಡು ಕಂಡಗಳು (intercostal muscles) ಉಸಿರಾಟದ ವೇಳೆ ಒಟ್ಟಾಗಿ ಒತ್ತುಕದಂತೆ (pump) ಕೆಲಸಮಾಡುವ ಮೂಲಕ ಉಸಿರನ್ನು ಉಸಿರುಚೀಲದ (lung) ಒಳಗೆ ಹಾಗು ಹೊರಗೆ ದಬ್ಬಲು ನೆರವಾಗುತ್ತವೆ.

1) ತೊಗಲ್ಪರೆ (diaphragm): ಎದೆಗೂಡಿನ ಕೆಳ ಎಲ್ಲೆಯನ್ನು (floor) ಮಾಡುವ ತೊಗಲ್ಪರೆಯು (diaphragm), ಕಟ್ಟಿನ ಕಂಡದಿಂದ (skeletal muscle) ಮಾಡಲ್ಪಟ್ಟ ತೆಳ್ಳನೆಯ ಹಾಳೆ (sheet). ತೊಗಲ್ಪರೆಯು ಕುಗ್ಗಿದಾಗ, ಹೊಟ್ಟೆಯ ಕಡೆಗೆ ವಾಲುವುದರ ಮೂಲಕ ಎದೆಗೂಡಿನ ಅಳತೆಯನ್ನು ದೊಡ್ಡದಾಗಿಸುತ್ತದೆ. ಇದರಿಂದ ಉಂಟಾಗುವ ಕಳೆಯೊತ್ತಡದಿಂದ (negative pressure) ಗಾಳಿಯು ಉಸಿರುಚೀಲವನ್ನು (lungs) ತುಂಬಿಕೊಳ್ಳುತ್ತದೆ. ಇದೇ ತೊಗಲ್ಪರೆಯು (diaphragm) ಉಸಿರನ್ನು ಹೊರಹಾಕುವಾಗ, ಸಡಿಲವಾಗುತ್ತದೆ ಹಾಗು ಗಾಳಿಯು ಉಸಿರುಚೀಲದಿಂದ ಹೊರಹೋಗುತ್ತದೆ.

Respiration_2_82) ಪಕ್ಕೆಲುನಡು ಕಂಡಗಳು (intercostals muscles): ಉಸಿರುಚೀಲಗಳನ್ನು ಹಿಗ್ಗಿಸುವ ಇಲ್ಲವೇ ಕುಗ್ಗಿಸುವ ತೊಗಲ್ಪರೆಯ (diaphragm) ಕೆಲಸಕ್ಕೆ, ಪಕ್ಕೆಲುಬುಗಳ (ribs) ನಡುವೆ ಇರುವ ಪಕ್ಕೆಲುನಡು ಕಂಡಗಳು (intercostals muscles) ನೆರವಾಗುತ್ತವೆ. ಪಕ್ಕೆಲುನಡು ಕಂಡಗಳಲ್ಲಿ ಎರಡು ಬಗೆ,

1) ಒಳ ಪಕ್ಕೆಲುನಡು ಕಂಡಗಳು (internal intercostal muscles)

2) ಹೊರ ಪಕ್ಕೆಲುನಡುಕಂಡಗಳು (external intercostal muscles)

Respiration_2_9ಒಳ ಪಕ್ಕೆಲುನಡು ಕಂಡಗಳು (internal intercostal muscles), ಪಕ್ಕೆಲುಬುಗಳನ್ನು (ribs) ತಗ್ಗಿಸುತ್ತವೆ; ಪಕ್ಕೆಲುಬುಗಳ (ribs) ತಗ್ಗಿಸುವಿಕೆ, ಎದೆಗೂಡಿನ ಅಳತೆಯನ್ನು ಕುಗ್ಗಿಸಿ, ಗಾಳಿಯನ್ನು ಉಸಿರುಚೀಲದಿಂದ (lung) ಹೊರಹಾಕಲು ನೆರವಾಗುತ್ತವೆ.

ಹೊರ ಪಕ್ಕೆಲುನಡು ಕಂಡಗಳು (external intercostal muscles), ಒಳ ಪಕ್ಕೆಲುನಡು ಕಂಡಗಳ (internal intercostal muscles) ಮೇಲ್ಬಾಗದಲ್ಲಿ ಇರುತ್ತವೆ. ಇವು ಪಕ್ಕೆಲುಬುಗಳನ್ನು ಏರಿಸುವುದರ ಮೂಲಕ, ಎದೆಗೂಡಿನ ಅಳತೆಯನ್ನು ಹಿಗ್ಗಿಸಿ, ಉಸಿರುಚೀಲದೊಳಕ್ಕೆ (lung) ಗಾಳಿಯನ್ನು ಎಳೆದುಕೊಳ್ಳಲು ಸಹಕರಿಸುತ್ತವೆ.

ಇಲ್ಲಿಯವರೆಗೆ ಉಸಿರೇರ‍್ಪಾಟಿನ ಒಡಲರಿಮೆಯ (anatomy) ಬಗ್ಗೆ ತಿಳಿಸಿಕೊಡಲಾಗಿದೆ. ಮುಂದಿನ ಕಂತಿನಲ್ಲಿ ಉಸಿರಾಟ ನಡೆಯುವ ಬಗೆ, ಅದರ ಹಂತಗಳ ಬಗ್ಗೆ ತಿಳಿಯೋಣ.

(ಮಾಹಿತಿ ಮತ್ತು ಚಿತ್ರಗಳ ಸೆಲೆಗಳು: antranik.org, biology-forums.com, en.wikipedia.orginnovativeperformanceandpedagogy,  turbosquid.com, aokainc.com)

ಉಸಿರಾಟದ ಏರ‍್ಪಾಟು – ಬಾಗ 1

ಉಸಿರಾಟ (respiration) ಎಂದರೇನು?
ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು ಮತ್ತು ಹೊರ ಹಾಕುವುದು. ಈ ಮೂಲಕ ಉಸಿರ‍್ಗಾಳಿಯನ್ನು (oxygen) ಹೊರಗಿನ ಗಾಳಿಯಿಂದ ಮಯ್ಯಿಗೆ ಒದಗಿಸುವುದು ಮತ್ತು ಮಯ್ಯೊಳಗೆ ಉಂಟಾಗುವ ಬೇಡದ ಕಾರ‍್ಬನ್ ಡಯಾಕ್ಸಾಯಡ್ ನ್ನು (carbon dioxide) ಹೊರಹಾಕುವುದು.

ನಾವು ಏಕೆ ಉಸಿರಾಡಬೇಕು?
ನಮ್ಮ ಮಯ್ಯೊಳಗಿನ ಪ್ರತಿಯೊಂದು ಗೂಡು (cell) ಚನ್ನಾಗಿ ಕೆಲಸ ಮಾಡಲು ಶಕ್ತಿ ಬೇಕು. ಈ ಶಕ್ತಿ ನಾವು ತಿನ್ನುವ ಆಹಾರದಿಂದ ದೊರೆಯುತ್ತದೆ. ನಾವು ತಿನ್ನುವ ಆಹಾರದ ಅಂಶಗಳನ್ನು ಶಕ್ತಿಯನ್ನಾಗಿಸುವ ಕೆಲಸವನ್ನು ತರುಮಾರ‍್ಪಿಸುವಿಕೆ (metabolism) ಎಂದು ಕರೆಯುತ್ತಾರೆ. ತರುಮಾರ‍್ಪಿಸುವಿಕೆ ನಡೆಯಬೇಕೆಂದರೆ ಉಸಿರುಗಾಳಿ ಬೇಕು. ಈ ಉಸಿರುಗಾಳಿಯನ್ನು (oxygen) ಒದಗಿಸಲು ಉಸಿರಾಟವು ಬೇಕು.

ಕಾರ‍್ಬನ್ ಡಯಾಕ್ಸಾಯಡ್ (carbon di-oxide) ತರುಮಾರ‍್ಪಿಸುವಿಕೆಯ (ಆಹಾರವನ್ನು ಶಕ್ತಿಯನ್ನಾಗಿಸಿದ) ಬಳಿಕ ಉಳಿಯುವ ಕಸಗಳಲ್ಲೊಂದು. ಕಾರ‍್ಬನ್ ಡಯಾಕ್ಸಾಯಡ್, ಮಯ್ಯೊಳಗೇ ಉಳಿದುಕೊಂಡರೆ ಮಯ್ಯಿಗೆ ಕೆಡುಕುಂಟು ಮಾಡುತ್ತದೆ. ಗೂಡುಗಳಿಂದ ಕಾರ‍್ಬನ್ ಡಯಾಕ್ಸಾಯಡ್ ಹೊರಹಾಕಲು ಉಸಿರೇರ‍್ಪಾಟು ಬೇಕೇಬೇಕು.

ನಾವು ಉಸಿರಾಡುವ ಹಮ್ಮುಗೆಯನ್ನು ಅರಿಯುವ ಮೊದಲು, ಈ ಉಸಿರಾಟದಲ್ಲಿ ಪಾಲ್ಗೊಳ್ಳುವ ಇಟ್ಟಳಗಳ (structures) ಬಗ್ಗೆ ತಿಳಿದುಕೊಳ್ಳುವುದು ಒಳಿತು.

ಉಸಿರೇರ‍್ಪಾಟಿನ ಒಡಲರಿಮೆಯಲ್ಲಿ (anatomy) ಮೂರು ಮುಕ್ಯ ಬಾಗಗಳಿವೆ:
1) ಗಾಳಿಜಾಡು (respiratory tract)
2) ಉಸಿರುಚೀಲಗಳು (lungs)
3) ಉಸಿರಾಟದ ಕಂಡಗಳು (respiratory muscles)

ಗಾಳಿಯಜಾಡು (respiratory tract): ಗಾಳಿಜಾಡನ್ನು, ಮೇಲ್ಗಾಳಿಜಾಡು (upper respiratory tract) ಹಾಗು ಕೆಳಗಾಳಿಜಾಡು (lower respiratory tract) ಎಂದು ಬೇರ‍್ಪಡಿಸಬಹುದಾಗಿದೆ. ಉಸಿರುಚೀಲ ಹಾಗು ಹೊರಗಿನ ವಾತಾವರಣಗಳ ನಡುವೆ, ಉಸಿರನ್ನು ಸಾಗಿಸಲು ಗಾಳಿಯಜಾಡು ನೆರವಾಗುತ್ತದೆ.
ಮೇಲ್ಗಾಳಿಜಾಡು (upper respiratory tract) ಮೂಗು, ಬಾಯಿ, ಗಂಟಲ್ಕುಳಿ (pharynx) ಮತ್ತು ಉಲಿಪೆಟ್ಟಿಗೆಗಳನ್ನು (larynx/voice box) ಒಳಗೊಂಡಿದೆ.

Respiration_1_1ಮೇಲ್ಗಾಳಿಜಾಡಿನ ಈ ಬಾಗಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

1) ಮೂಗು ಮತ್ತು ಮೂಗಿನ ಕುಳಿ (nose & nasal cavity): (ಚಿತ್ರ 1 & 2) ಮೂಗು ಉಸಿರೇರ‍್ಪಾಟಿನ ಹೊರಗಿನ ಹೊಳ್ಳೆಯ ಬಾಗ. ಇವು ಗಾಳಿಜಾಡಿನ  ಮೊದಲನೆಯ ಹಂತವೂ ಹವ್ದು.

ಮೂಗು ಮೆಲ್ಲೆಲುಬು (cartilage), ಎಲುಬು (bone), ಕಂಡ (muscle) ಹಾಗು ತೊಗಲಿನಿಂದ (skin) ಮಾಡಲ್ಪಟ್ಟಿದೆ. ಇದು ಮೂಗಿನ ಕುಳಿಯ (nasal cavity) ಮುಂಬಾಗಕ್ಕೆ ಆನಿಕೆ (support) ಹಾಗು ಕಾಪನ್ನು (protection) ಒದಗಿಸುತ್ತದೆ.

ತಲೆಬುರುಡೆ ಹಾಗು ಮೂಗಿನೊಳಗೆ ಕಂಡು ಬರುವ ಟೊಳ್ಳಿನ ತಾಣವೇ ಮೂಗಿನ ಕುಳಿ (nasal cavity). ಈ ಕುಳಿಯ ಗೋಡೆಗಳ ಮೇಲೆ ಕೂದಲು ಹಾಗು ಲೋಳೆ ಪದರದ (mucus membrane) ಹೊದಿಕೆಯಿರುತ್ತದೆ.

Respiration_1_2ಮೂಗಿನ ಕುಳಿಯ ಮತ್ತೊಂದು ಮುಕ್ಯ ರಚನೆಯೆಂದರೆ ಮೂಗಿನ ಕೊಳಲ-ಎಲುಬುಗಳು (nasal turbinate bones). ಇವು ಕಿರಿದಾದ ಗುಂಗುರಿನ ಆಕಾರದ ಹೀರುಗದೆಲುಬುಗಳು. ಕೊಳಲ-ಎಲುಬುಗಳು (nasal turbinate) ಮೂಗಿನ ಕುಳಿಯನ್ನು ನಾಲ್ಕು ಕೊರಕಲಿನಂತಹ (groove-like) ಗಾಳಿದಾರಿಗಳನ್ನಾಗಿ ಬೇರ‍್ಪಡಿಸುತ್ತವೆ. ಹೀಗೆ ಮಾಡಲ್ಪಟ್ಟ ಗಾಳಿದಾರಿಯು ಉಸಿರಾಡುವಾಗ ಎಳೆದುಕೊಂಡ ಗಾಳಿಯು ಹದವಾಗಿ ಸಾಗಲು ನೆರವಾಗುತ್ತದೆ.

ಮೂಗಿನ ಕುಳಿಯ (nasal cavity) ಮುಕ್ಯ ಕೆಲಸಗಳೆಂದರೆ,

  1. ಒಳಗೆ ಎಳೆದುಕೊಳ್ಳುವ ಗಾಳಿಯನ್ನು ಮಯ್ ಬಿಸುಪಿನ (temperature) ಮಟ್ಟಕ್ಕೆ ಕಾಯಿಸುವುದು
  2. ಒಣಗಾಳಿಯ ನೀರಿನ ಅಂಶವನ್ನು ಹೆಚ್ಚಿಸುವುದು
  3. ಎಳೆದುಕೊಂಡ ಗಾಳಿಯು ಉಸಿರುಚೀಲವನ್ನು ತಲಪುವ ಮೊದಲು, ಗಾಳಿಯಲ್ಲಿ ಇರಬಹುದಾದ ನಂಜುಕಣಗಳು (toxic particles), ಆವಿ(gases), ದೂಳು, ಬೂಸ್ಟು(fungus), ದಂಡಾಣು(bacteria) ಹಾಗು ನಂಜುಳಗಳನ್ನು(virus) ಸಾದ್ಯವಾದಶ್ಟು ಮಟ್ಟಿಗೆ ಸೋಸುವುದು. ಗಾಳಿಯು ಉಸಿರುಚೀಲಗಳಿಂದ(lungs) ಹೊರಹೋಗುವಾಗ, ಆವಿ ಹಾಗು ಬಿಸುಪನ್ನು ಮೂಗಿನ ಕುಳಿ (nasal cavity) ಹೀರಿಕೊಳ್ಳುತ್ತದೆ.

2) ಬಾಯಿ / ಬಾಯ್ಕುಳಿ (oral cavity): ಬಾಯ್ಕುಳಿ ಉಸಿರಾಟದ ಎರಡನೇ ಹಂತದ ಕಂಡಿ. ಸಾಮಾನ್ಯವಾಗಿ ಉಸಿರಾಟವು ಮೂಗಿನ ಮೂಲಕ ನಡೆಯುತ್ತದೆ. ಹೆಚ್ಚಿನ ಮಟ್ಟದಲ್ಲಿ ನಮ್ಮ ಮಯ್ಗೆ ಉಸಿರಾಟವು ಬೇಕಾದಾಗ, ಬಾಯ್ಕುಳಿಯ ಮೂಲಕವೂ ಉಸಿರನ್ನು ಎಳೆದುಕೊಳ್ಳಬಹುದು. ಮೂಗಿನ ಕುಳಿಗೆ (nasal cavity) ಹೋಲಿಸಿದರೆ ಬಾಯ್ಕುಳಿಯ ಉಸಿರುಜಾಡು ಚಿಕ್ಕದಿರುತ್ತದೆ. ಈ ಕಾರಣದಿಂದಾಗಿ, ಬಾಯಿಯಲ್ಲಿ ಎಳೆದುಕೊಳ್ಳುವ ಗಾಳಿಗೆ ಬಿಸುಪು ಹಾಗು ಆವಿಯನ್ನು ಸೇರಿಸಲಾಗುವುದಿಲ್ಲ.

ಬಾಯ್ಕುಳಿಯಲ್ಲಿ  ಕೂದಲುಗಳು ಹಾಗು ಮಂದವಾದ ಅಂಟು ಲೋಳೆಯು ಇರದ ಕಾರಣ, ಬಾಯಿಯ ಮೂಲಕ ಒಳಗೆಳೆದುಕೊಳ್ಳುವ ಗಾಳಿಯು ಸೋಸುವಿಕೆಗೆ ಒಳಪಡುವುದಿಲ್ಲ. ಆದರೆ ಬಾಯ್ಕುಳಿಯ ಉಸಿರಾಟದಲ್ಲಿ ಒಂದು ಒಳಿತು ಇದೆ. ಅದೆಂದರೆ, ಬಾಯ್ಕುಳಿಯ ದುಂಡಳತೆ (diameter), ಮೂಗಿನ ಕುಳಿಗೆ ಹೋಲಿಸಿದರೆ, ತುಂಬಾ ದೊಡ್ಡದಿರುವುದರಿಂದ, ಬಾಯಿಯಲ್ಲಿ ಉಸಿರಾಡಿದಾಗ ಹೆಚ್ಚಿನ ಗಾಳಿಯನ್ನು ಕಡಿಮೆ ವೇಳೆಯಲ್ಲಿ ಎಳೆದುಕೊಳ್ಳಲು ಸಾದ್ಯ.

3) ಗಂಟಲ್ಕುಳಿ (pharynx): (ಚಿತ್ರ 1 & 3) ಇದು ಕಂಡದ (muscular) ನಳಿಕೆಯಂತಿದ್ದು, ಮೂಗಿನ ಕುಳಿಯ ಹಿಂತುದಿಯಿಂದ ಉಲಿಪೆಟ್ಟಿಗೆ (larynx/voice box) ಹಾಗು ಅನ್ನನಾಳದ (esophagus) ಮುಂತುದಿಯವರೆಗೂ ಚಾಚಿಕೊಂಡಿರುತ್ತದೆ.

ಗಂಟಲ್ಕುಳಿಯಲ್ಲಿ (pharynx) ಮೂರು ಬಾಗಗಳಿವೆ: ಮೂಗ್ಗಂಟಲು (nasopharynx), ಬಾಯ್ಗಂಟಲು (oropharynx) ಹಾಗು ಉಲಿಪೆಟ್ಟಿಗೆಗಂಟಲು (laryngopharynx).

Respiration_1_3ಮೂಗ್ಗಂಟಲು (nasopharynx) ಮೂಗಿನ ಕುಳಿಯ (nasal cavity) ಹಿಂಬದಿಯಲಿರುತ್ತದೆ. ಮೂಗಿನ ಕುಳಿಯ ಮೂಲಕ ಒಳಬರುವ ಗಾಳಿ, ಮೂಗ್ಗಂಟಲಿನಲ್ಲಿ (nasopharynx) ಹಾಯ್ದು, ಬಾಯ್ಕುಳಿಯ (oral cavity) ಹಿಂಬದಿಯಲ್ಲಿರುವ ಬಾಯ್ಗಂಟಲಿಗೆ (oropharynx) ಇಳಿಯುತ್ತದೆ. ಬಾಯ್ಕುಳಿಯಿಂದ ಒಳಬರುವ ಗಾಳಿಯು, ನೇರವಾಗಿ ಬಾಯ್ಗಂಟಲಿಗೆ (oropharynx) ಇಳಿಯುತ್ತದೆ. ಬಾಯ್ಗಂಟಲಿನಿಂದ ಗಾಳಿಯು ಉಲಿಪೆಟ್ಟಿಗೆಗಂಟಲೆಡೆಗೆ (laryngopharynx) ಸಾಗುತ್ತದೆ.

ಉಲಿಪೆಟ್ಟಿಗೆಗಂಟಲು ಸೇರಿದ ಗಾಳಿಯನ್ನು, ಕಿರುನಾಲಿಗೆಯು (epiglottis) ಉಲಿಪೆಟ್ಟಿಗೆಯ ಕಂಡಿಯೆಡೆಗೆ ತಿರುಗಿಸುತ್ತದೆ. ಕಿರುನಾಲಿಗೆ (epiglottis), ಹಿಂಪುಟಿವ ಮೆಲ್ಲೆಲುಬಿನಿಂದ (elastic cartilage) ಮಾಡಲ್ಪಟ್ಟಿರುವ ಮುಚ್ಚಳ; ಇದು ಅನ್ನನಾಳ (esophagus) ಹಾಗು ಉಸಿರುಗೊಳವೆಯ (trachea) ನಡುವಿನ ಗುಂಡಿಯಂತೆ (switch) ಕೆಲಸವನ್ನು ಮಾಡುತ್ತದೆ. ಗಂಟಲ್ಕುಳಿ (pharynx) ಉಸಿರನ್ನು ಸಾಗಿಸುವುದರ ಜೊತೆಗೆ, ಕೂಳನ್ನೂ ನುಂಗಲು ನೆರವಾಗುತ್ತದೆ.

ಉಸಿರಾಡುವಾಗ, ಕಿರುನಾಲಿಗೆ (epiglottis), ಅನ್ನನಾಳದ (esophagus) ಮೇಲ್ತುದಿಯ ಕಂಡಿಯನ್ನು ಮುಚ್ಚುವುದರ ಮೂಲಕ, ಗಾಳಿಯನ್ನು ಉಸಿರುಗೊಳವೆಯೆಡೆಗೆ ತಿರುಗಿಸುತ್ತದೆ. ಕೂಳನ್ನು ನುಂಗುವ ಹಮ್ಮುಗೆಯಲ್ಲಿ, ಇದೆ ಕಿರುನಾಲಿಗೆ (epiglottis), ಉಸಿರುಗೊಳವೆಯನ್ನು ಮುಚ್ಚುತ್ತದೆ; ಈ ಬಗೆಯಾಗಿ ಕೂಳು ಅನ್ನನಾಳದೊಳಕ್ಕೆ ಸಾಗಲು ನೆರವಾಗುತ್ತದೆ. ಇದರಿಂದ ಕೂಳು ಉಸಿರುಗೊಳವೆಯನ್ನು ಹೊಕ್ಕುವುದರಿಂದ, ಆಗಬಹುದಾದ ತೊಂದರೆಯನ್ನು ತಪ್ಪಿಸುತ್ತದೆ.

4) ಗಂಟಲಗೂಡು/ಉಲಿಪೆಟ್ಟಿಗೆ (larynx/voice box): (ಚಿತ್ರ 1, 4, 5, & 6 ) ಇದು ಉಲಿಪೆಟ್ಟಿಗೆಗಂಟಲು (laryngopharynx) ಹಾಗು ಉಸಿರುಗೊಳವೆಯನ್ನು (trachea) ಜೋಡಿಸುವ ಉಸಿರುಜಾಡಿನ (airway) ಬಾಗವಾಗಿದೆ.

ಮೇಲ್ಕೊರಳಿನ ಬಾಗದಲ್ಲಿ, ನಾಲಗೆ-ಎಲುವಿನ (hyoid bone) ತುಸು ಕೆಳಗೆ ಹಾಗು ಉಸಿರುಕೊಳವೆಯ (trachea) ಮೇಲೆ ಉಲಿಪೆಟ್ಟಿಗೆಯನ್ನು (larynx) ಕಾಣಬಹುದು. ಉಲಿಪೆಟ್ಟಿಗೆಯು ಹಲವು ಮೆಲ್ಲೆಲುಬಿನ (cartilage) ರಚನೆಗಳಿಂದ ಮಾಡಲ್ಪಟ್ಟಿದೆ.

Respiration_1_4ಕಿರುನಾಲಿಗೆ (epiglottis) ಕೂಡ ಉಲಿಪೆಟ್ಟಿಗೆಯನ್ನು ಮಾಡುವ ಮೆಲ್ಲೆಲುಬುಗಳ ತುಂಡುಗಳಲ್ಲೊಂದು. ಕಿರುನಾಲಿಗೆಯ (epiglottis) ಕೆಳಬಾಗದಲ್ಲಿ, ಗುರಾಣಿಕ ಮೆಲ್ಲೆಲುಬು (thyroid cartilage) ಇರುತ್ತದೆ; ಇದನ್ನು ಆದಮನ ಸೇಬು (adam’s apple) ಎಂದೂ ಕರೆಯುವುದುಂಟು. ಈ ಇಟ್ಟಳವು ಗಂಡಸರಲ್ಲಿ ದೊಡ್ಡದಿರುತ್ತದೆ; ಆದ್ದರಿಂದ ಕೊರಳಿನ ಮುಂಬಾಗದಲ್ಲಿ, ಇದು ಮುಂಚಾಚಿದ ಇಟ್ಟಳದಂತೆ ಕಾಣಿಸುತ್ತದೆ.

ಗುರಾಣಿಕ ಮೆಲ್ಲೆಲುಬು (thyroid cartilage), ಉಲಿಪೆಟ್ಟಿಗೆಯ (larynx) ಮುಂತುದಿಯನ್ನು ತೆರೆದಿಡುವುದರ ಜೊತೆಗೆ, ಉಲಿನೆರಕೆಗಳನ್ನು (vocal folds) ಕಾಯುವ ಕೆಲಸವನ್ನೂ ಮಾಡುತ್ತದೆ. ಗುರಾಣಿಕ ಮೆಲ್ಲೆಲುಬಿನ ಕೆಳಗೆ ಉಂಗುರದ ಆಕಾರವಿರುವ ಉಂಗುರಬಗೆ ಮೆಲ್ಲೆಲುಬು (cricoid cartilage) ಇರುತ್ತದೆ. ಉಂಗುರಬಗೆ ಮೆಲ್ಲುಬು (cricoid cartilage), ಉಲಿಪೆಟ್ಟಿಗೆಯ (larynx) ಹಿಂಬಾಗವನ್ನು ತೆರೆದ ನಿಲುವಿನಲ್ಲಿ (position) ಇಡಲು ನೆರವಾಗುತ್ತದೆ.

Respiration_1_5ಮೆಲ್ಲೆಲುಬುಗಳಲ್ಲದೆ, ಉಲಿಪೆಟ್ಟಿಗೆಯಲ್ಲಿ ‘ಉಲಿನೆರಕೆ’ಗಳೆಂಬ (vocal folds) ವಿಶೇಶ ರಚನೆಯೊಂದಿದೆ. ಉಲಿನೆರಕೆಗಳು ಮಾತು ಮತ್ತು ಹಾಡಿನ ಸಪ್ಪಳಗಳನ್ನು ಹುಟ್ಟಿಸುತ್ತವೆ. ಉಲಿನೆರಕೆ (vocal folds), ಉಲಿ ಸಪ್ಪಳಗಳನ್ನು (vocal sounds) ಉಂಟುಮಾಡಲು ಮಿಡಿಯುವ (vibrate) ಲೋಳ್ಪದರದ (mucus membrane) ನೆರಗೆಗಳಾಗಿವೆ. ಉಲಿನೆರಕೆಗಳ ಬಿಗಿತ (tension) ಹಾಗು ಮಿಡಿತದ (vibration) ವೇಗವನ್ನು ಬದಲಾಯಿಸುವುದರ ಮೂಲಕ ಮಾತಿನ ಏರಿಳಿತವನ್ನು (pitch) ಬದಲಾಯಿಸಬಹುದು.

Respiration_1_6ಉಸಿರೇರ‍್ಪಾಟಿನ ಮುಂದಿನ ಕಂತಿನಲ್ಲಿ ಕೆಳಗಾಳಿಜಾಡು (lower respiratory tract), ಉಸಿರುಚೀಲಗಳು (lungs) ಹಾಗು ಉಸಿರೇರ‍್ಪಾಟಿನ ಕಂಡಗಳ ಒಡಲರಿಮೆಯನ್ನು (anatomy) ತಿಳಿಸಿಕೊಡಲಾಗುವುದು

(ಮಾಹಿತಿ ಮತ್ತು ಚಿತ್ರ ಸೆಲೆಗಳು: innerbody, buzzle.comanswers.com, riversideonline.com, intechopen.com)

(ಈ ಬರಹವು ಹೊಸಬರಹದಲ್ಲಿದೆ)