ಪೆನಿಸಿಲಿನ್

ಪೆನಿಸಿಲಿನ್ (Penicillin) ಎಂಬುದು ಜಗತ್ತಿನ ಮೊದಲ ಮತ್ತು ಈಗಲೂ ಹೆಚ್ಚು ಬಳಕೆಯಲ್ಲಿರುವ ಎದುರುಜೀವಕ (Antibiotic). ಪೆನಿಸಿಲಿನ್ ದೊರಕಿದ್ದು ಪೆನಿಸಿಲಿಯಮ್ ಎಂಬ ಬೂಸ್ಟಿನಿಂದ (Mold). 1928 ರಲ್ಲಿ ಸ್ಕಾಟ್ಲೆಂಡಿನ ವೈದ್ಯ ಮತ್ತು ಅರಕೆಗಾರ ಅಲೆಕ್ಸಾಂಡರ್ ಪ್ಲೆಮಿಂಗ್  ಬ್ಯಾಕ್ಟೀರಿಯಾದ ಅರಕೆ ಮಾಡುವಾಗ ಸ್ಟೆಪಯ್ಲೊಕಾಕಸ್ ಆರಿಯಸ್ (Staphylococcus aureus) ಎಂಬ ಬ್ಯಾಕ್ಟೀರಿಯಾ ಕೆಲವು ಕಡೆ ಬೆಳೆಯದಿರುವುದನ್ನು ಗಮನಿಸಿದರು.

aleander fleming(ಅಲೆಕ್ಸಾಂಡರ್ ಪ್ಲೆಮಿಂಗ್)

ಹೀಗೇಕೆ ಎಂದು ಹೆಚ್ಚು ಗಮನಿಸಿ ನೋಡಿದಾಗ ಆ ಬಾಗವೆಲ್ಲವೂ ಆಕಸ್ಮಿಕವಾಗಿ ಪೆನಿಸಿಲಿಯಮ್ ನೊಟೆಟಮ್ (Penicillium Notatum) ಎಂಬ ಬೂಸ್ಟಿನಿಂದ ಸೊಂಕಿತವಾಗಿದೆ ಎಂದು ತಿಳಿದು ಬಂತು. ಆಮೇಲೆ ಆ ಬೂಸ್ಟನ್ನು ಬೇರ್ಪಡಿಸಿ ನೀರಿನ ಮಾದ್ಯಮದಲ್ಲಿ ಬೆಳೆಸಿದಾಗ ಅದು ಮಂದಿಯನ್ನು ಕಾಡುವ ಅನೇಕ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಒಂದು ಬಗೆಯ ಸತ್ವವನ್ನು ಬಿಡುಗಡೆಗೊಳಿಸುತ್ತದೆಂದು ಗೊತ್ತಾಯಿತು.

Penicillin(ಪೆನಿಸಿಲಿಯಮ್ ನೊಟೆಟಮ್)

ಮುಂದೆ 1930ರ ದಶಕದ ಕೊನೆಯಲ್ಲಿ ಆಸ್ಟ್ರೇಲಿಯಾದ ಬೇನೆಯರಿಗ ಹೊವಾರ್ಡ್ ಫ್ಲೋರೆ ಮತ್ತು ಬ್ರಿಟನ್ನ ಬಯೋಕೆಮಿಸ್ಟ್ ಅರ್ನಸ್ಟ್ ಬೋರಿಸ್ ಚೈನ್ ಎಂಬುವವರು ಆ ಸತ್ವವನ್ನು ಬೇರ್ಪಡಿಸಿ ಹಸನುಗೊಳಿಸಿದರು. ಬ್ಯಾಕ್ಟೀರಿಯಾದಿಂದ ಉಂಟಾಗುವ ಹಲವಾರು ರೋಗಗಳಿಗೆ ಮುಂದಿನ ವರುಶಗಳಲ್ಲಿ ಪೆನ್ಸಿಲಿನ್ ಬಳಕೆ ಸಾಮಾನ್ಯವಾಯಿತು. ಬರಬರುತ್ತಾ ಬ್ಯಾಕ್ಟೀರಿಯಾಗಳು ಪೆನ್ಸಿಲನ್‍ಗೆ ಎದುರು ಶಕ್ತಿಯನ್ನು ಬೆಳೆಸಿಕೊಂಡವಾದರೂ ಇಂದಿಗೂ ಪೆನ್ಸಿಲನ್ ತಕ್ಕಮಟ್ಟಿಗೆ ಬ್ಯಾಕ್ಟೀರಿಯಾಗಳನ್ನು ಹತೋಟಿಯಲ್ಲಿಡಲು ನೆರವಾಗುತ್ತಲೇ ಇದೆ.

1941 ರಲ್ಲಿ ಪೆನಿಸಿಲಿನ್ ಚುಚ್ಚುಮದ್ದು ರೂಪದಲ್ಲಿ ಬಳಕೆಗೆ ಬಂತು. ಪೆನಿಸಿಲಿನ್ ಮೇಲೆ ಮಾಡಿದ ಅರಕೆಗಾಗಿ 1945 ರಲ್ಲಿ ಅಲೆಕ್ಸಾಂಡರ್ ಪ್ಲೆಮಿಂಗ್, ಹೊವಾರ್ಡ್ ಫ್ಲೋರೆ  ಮತ್ತು  ಅರ್ನಸ್ಟ್ ಬೋರಿಸ್ ಚೈನ್ ಈ ಮೂವರಿಗೂ ನೊಬೆಲ್ ಪ್ರಶಸ್ತಿಯನ್ನು ಕೊಡಲಾಯಿತು.

Penicillin chemical structure   (ಪೆನ್ಸಿಲಿನ್ ರಾಸಾಯನಿಕ ಏರ್ಪಾಟು)

(ಸೆಲೆ: www.britannica.com, www.nobelprize.org, ಚಿತ್ರಸೆಲೆ: edukalife.blogspot.com, wikipedia)

Bookmark the permalink.

Comments are closed.

Comments are closed