ಗೀಳು-ತುಡಿತದ ಬೇನೆ

ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಒಂದಲ್ಲ ಒಂದು ಸಲ ತಲ್ಲಣಕ್ಕೆ ಒಳಗಾಗುತ್ತೇವೆ. ಅದರ ಅನುಬವ ನಮ್ಮೆಲ್ಲರಿಗೂ ಆಗಿಯೇ ಇರುತ್ತದೆ. ಆದರೆ ಆ ತಲ್ಲಣದ ಯೋಚನೆಗಳು ಎಲ್ಲೆ ಮೀರಿ ನಮ್ಮಲ್ಲಿ ಗೂಡುಕಟ್ಟಿಕೊಂಡಿದ್ದರೆ, ಆ ಯೋಚನೆಗಳು ಸ್ವಲ್ಪ ಹೊತ್ತು ಮನಸ್ಸಿನಲ್ಲಿ ಇದ್ದು ಮೆಲ್ಲಗೆ ಕರಗಿ ಹೋಗದೆ ಹೆಚ್ಚು ಹೊತ್ತು ಮನುಶ್ಯ ಅದೇ ಗುಂಗಿನಲ್ಲಿ ಇದ್ದರೆ ಆ ತಲ್ಲಣ ಸಾದಾರಣವಾದುದಲ್ಲ ಎಂದು ಒಪ್ಪಲೇಬೇಕಾಗುತ್ತದೆ. ಅಂತಹ ಮನಸ್ಸಿನ ಪಾಡನ್ನು ಒಂದು ಬೇನೆ ಎಂದೇ ತೀರ್ಮಾನಿಸಬೇಕಾಗುತ್ತದೆ. ಈ ಬೇನೆ ಹಲವು ಬಗೆಗಳಲ್ಲಿ ಕಂಡುಬರುತ್ತವೆ. ಹಾಗಾಗಿ ಇವೆಲ್ಲ ಬೇನೆಗಳನ್ನು ತಲ್ಲಣದ ನಂಟಿನ ಬೇನೆಗಳು (Anxiety disorders) ಎಂಬ ಗುರುತಿನಡಿಯಲ್ಲಿ ಗುಂಪಿಸಬಹುದು.

anxiety_disorder

ಈ ತಲ್ಲಣ ಅನ್ನುವಂತಹದ್ದು ನಮಗೆಲ್ಲರಿಗೂ ಆಗುವಂತಹದ್ದು. ಹಾಗಿದ್ದಲ್ಲಿ ಈ ತಲ್ಲಣ ಎಶ್ಟರಮಟ್ಟಿಗೆ ಹೆಚ್ಚಿದ್ದಲ್ಲಿ ಅದನ್ನು ಬೇನೆ ಎಂದು ಗುರುತಿಸಬಹುದು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಸಾಮಾನ್ಯವಾದ ತಲ್ಲಣ ಇಲ್ಲವೇ ಬೇನೆಯ ಕುರುಹುಗಳಿರುವ ತಲ್ಲಣ ಎಂದು ನಿಕ್ಕಿಯಾಗಿ ಬೇರ್ಪಡಿಸುವುದು ಹೇಗೆ ? ಇದು ಸ್ವಲ್ಪ ಕಶ್ಟವೇ.

ಸಾಮಾನ್ಯ ನಡವಳಿಕೆ ಮತ್ತು ಬೇನೆಯ ನಡುವೆ ತೆಳುವಾದ ಗೆರೆಯಿದೆ ಎನ್ನಬಹುದು. ಇಶ್ಟಕ್ಕೂ ಸಾಮಾನ್ಯ ನಡವಳಿಕೆ ಎನ್ನುವುದನ್ನು ಇಂತಹದ್ದೇ ಎಂದು ಗೊತ್ತುಪಡಿಸುವುದು ಸುಲಬವಲ್ಲ. ಇದಕ್ಕೆ ಒಂದು ಉದಾಹರಣೆ ಕೊಡಬಹುದು…

ಒಬ್ಬ ಹುಡುಗಿ ಮನೆ ಮುಂದೆ ರಂಗೋಲಿ ಹಾಕುತ್ತಿದ್ದಾಳೆ ಎಂದುಕೊಳ್ಳೋಣ. ರಂಗೋಲಿಯಲ್ಲಿ ಏನೋ ಸಣ್ಣ ತಪ್ಪಾಗಿರುವುದನ್ನು ಆಕೆ ಅದನ್ನು ಬಿಡಿಸಿದ ಮೇಲೆ ಗಮನಿಸುತ್ತಾಳೆ. ಆದರೆ ಆ ತಪ್ಪನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಮುಂದಿನ ಸಲ ಚೆನ್ನಾಗಿ ಬಿಡಿಸೋಣ ಬಿಡು ಎಂದು ಆ ಹುಡುಗಿ ಅಂದುಕೊಳ್ಳಬಹುದು. ಇನ್ನೊಬ್ಬ ಹುಡುಗಿಗೆ ಅಂತಹ ತಪ್ಪು ಎಸಗಿದೆನಲ್ಲಾ ಎಂದು ಮನಸ್ಸಿನಲ್ಲಿ ಕೊಂಚ ಹೊತ್ತು ಕಿರಿಕಿರಿಯಾಗಬಹುದು. ಮೂರನೆಯ ಹುಡುಗಿಗೆ ಆಗಿರುವ ತಪ್ಪನ್ನು ಸರಿಪಡಿಸಲೇಬೇಕು ಎಂದೆನ್ನಿಸಿ ನೀರಿನಿಂದ ರಂಗೋಲಿಯನ್ನು ತೊಳೆದು, ಮತ್ತೆ ಬಿಡಿಸಲು ಮುಂದಾಗಬಹುದು. ಮತ್ತೊಬ್ಬ ಹುಡುಗಿಗೆ ಮನಸ್ಸಿನಲ್ಲಿ ಕಸಿವಿಸಿ ಹೆಚ್ಚಾಗಿ ರಂಗೋಲಿಯಲ್ಲಿನ ತಪ್ಪುಗಳನ್ನು ಮತ್ತೆ ಮತ್ತೆ ಸರಿಪಡಿಸಲು ಪ್ರಯತ್ನಿಸಿ ಆ ಕೆಲಸದಲ್ಲೇ ಹೆಚ್ಚು ಹೊತ್ತು ತೊಡಗಿಸಿಕೊಳ್ಳುವಂತಾಗಬಹುದು. ಈಗ ಈ ಹುಡುಗಿಯರಲ್ಲಿ ಸರಿಯಾದ ನಡವಳಿಕೆ ಮತ್ತು ತಪ್ಪಾದ ನಡವಳಿಕೆ ಎಂದು ಬೊಟ್ಟು ಮಾಡುವುದು ಹೇಗೆ ?

ನಮ್ಮ ಅನಿಸಿಕೆಗಳು ಮತ್ತು ನಡವಳಿಕೆಗಳನ್ನು ತಪ್ಪು-ಸರಿ ಎಂದು ಗುಂಪಿಸುವುದಕ್ಕಿಂತ ಅವುಗಳಿಂದಾಗುವ ತೊಡಕಿನ ಅಂಶದ ಮೇಲೆ ಮಾನಸಿಕ ಬೇನೆಯರಿಮೆ ಒತ್ತು ನೀಡುತ್ತದೆ. ಮೇಲೆ ಕೊಟ್ಟ ಉದಾಹರಣೆಯ ಹಾಗೆ ನಮ್ಮ ಮನಸ್ಸಿನಲ್ಲಿ ತಲ್ಲಣ, ಕಸಿವಿಸಿ ಇವು ಹೆಚ್ಚಾಗಿ, ದಿನನಿತ್ಯದ ಕೆಲಸಗಳನ್ನು ಮಾಡಲು ತೊಂದರೆಯೆನಿಸುತ್ತಿದ್ದರೆ, ದಿನದಲ್ಲಿ ಕೆಲ ನಿಮಿಶ ಇಲ್ಲವೇ ಗಂಟೆಗಳ ಹೊತ್ತು ಅದೇ ವಿಶಯ ಮನಸ್ಸಿನಲ್ಲಿ ಸುಳಿದಾಡುತ್ತ ಒದ್ದಾಡುವಂತಾದರೆ ಅದನ್ನು ಬೇನೆ ಎಂದು ಗುರುತಿಸಬಹುದು.

ಗೀಳು – ತುಡಿತದ ಬೇನೆ

ನಮ್ಮ ಮಯ್ಯಿ ಹಾಗೂ ಮನಸ್ಸುಗಳನ್ನು ಕಾಡುವ ಬೇನೆಗಳು ಹಲವಾರಿವೆ. ಮಯ್ಯ ಮೇಲಾಗುವ ಬೇನೆಗಳು ಕಣ್ಣಿಗೆ ಕಾಣುತ್ತವೆ, ಆದರೆ ನಮ್ಮ ಮನಸ್ಸು, ನಮ್ಮ ಬಗೆತಗಳಲ್ಲಿ ಆಗುವ ಒತ್ತಡ, ಹೊಯ್ದಾಟ ಮತ್ತು ಅದರಿಂದುಂಟಾಗುವ ಬೇನೆಗಳು ಸುಲಬಕ್ಕೆ ನಮಗೆ ಕಾಣಸಿಗವು. ನಮ್ಮ ಮನಸ್ಸನ್ನು ಕಾಡುವ ಬೇನೆಗಳಲ್ಲಿ ತಲ್ಲಣದ ನಂಟಿನ ಬೇನೆಗಳಲ್ಲೊಂದಾದ  ಗೀಳು-ತುಡಿತದ ಬೇನೆ (Obsessive-Compulsive Disorder) ಒಂದು ಮುಕ್ಯವಾದ ಬೇನೆಯಾಗಿರುತ್ತದೆ.

ಏನಿದು ಗೀಳು-ತುಡಿತದ ಬೇನೆ ? 

ಈ ಬೇನೆಯ ಹೆಸರಿನಲ್ಲೇ ಇದರ ವಿಶೇಶತೆ ಎದ್ದು ಕಾಣಿಸುತ್ತದೆ. ಈ ಬೇನೆ ಇರುವವರನ್ನು ಎರಡು ಬಗೆಯ ತೊಂದರೆಗಳು ಗೋಳಾಡಿಸುತ್ತವೆ. ಮೊದಲನೆಯದಾಗಿ ಗೀಳು – ಅಂದರೆ ಮತ್ತೆ ಮತ್ತೆ ಎಡೆಬಿಡದೆ ಮರುಕಳಿಸುವ ಯೋಚನೆಗಳು, ಮನಸ್ಸಿನಲ್ಲೇ ಮೂಡಿಸಿಕೊಳ್ಳುವ ನೋಟಗಳು ಮತ್ತು ಇದರಿಂದ ಉಂಟಾಗುವ ಕಳವಳ.

ಈ ಗೀಳಿನ ಬಾವನೆಗಳು ಹಲವು ಬಗೆಯವಾಗಿರುತ್ತವೆ. ಉದಾಹರಣೆಗೆ, 1) ರೋಗಿಗೆ ಸುಮ್ಮನೆ ತಂತಾನೇ ಮಯ್ಯಿ ಕೊಳಕಾಗುತ್ತದೆ, ಸೋಂಕು ತಗಲುತ್ತದೆ ಅನ್ನುವ ದಿಗಿಲು ಉಂಟಾಗುವುದು. 2) ಹೆಣ್ಣು-ಗಂಡಿನ ಕೂಡುವಿಕೆ, ದರ್ಮ ಮುಂತಾದ ವಿಶಯಗಳಲ್ಲಿ ಬೇಕಿಲ್ಲದ ಮಡಿವಂತಿಕೆ ಅತವಾ ಇದರ ಕುರಿತಾಗಿ ತನ್ನ ಮನಸ್ಸಿನಲ್ಲಿ ತಾನೇ ಹಾಕಿಕೊಳ್ಳುವ ಕಟ್ಟುಪಾಡುಗಳು 3) ತನ್ನ ಇಲ್ಲವೇ ಬೇರೆಯವರ ಬಗ್ಗೆ ಸಿಟ್ಟಿನಿಂದ ಕೂಡಿದ ಆಲೋಚನೆಗಳು.

ಎರಡನೆಯದಾಗಿ ತುಡಿತ– ಅಂದರೆ ಮನಸ್ಸಿನಲ್ಲಿ ಬರುತ್ತಿರುವ ಗೀಳಿನ ಯೋಚನೆಗಳ ಕಾರಣದಿಂದ ಉಂಟಾಗುವ, ಏನನ್ನೋ ಮಾಡಲೇಬೇಕು ಎನ್ನುವ ತುಡಿತ. ಈ ತುಡಿತಗಳ ಬೇರು ಇರುವದು ಗೀಳಿನ ಆಲೋಚನೆಗಳಲ್ಲಿ ಎಂದಾಯಿತು. ಈ ತುಡಿತಗಳೂ ಹಲ ಬಗೆಯವು.

ಉದಾಹರಣೆಗೆ, 1) ಮತ್ತೆ ಮತ್ತೆ ಏನನ್ನಾದರೂ ಚೊಕ್ಕಗೊಳಿಸುವುದು, ಇಲ್ಲವೇ ಮತ್ತೆ ಮತ್ತೆ ಕಯ್ತೊಳೆದುಕೊಳ್ಳುವುದು. 2) ವಸ್ತುಗಳನ್ನು ಒಂದು ತನಗೆ ಹಿಡಿಸಿದ ರೀತಿಯಲ್ಲಿಯೇ ಓರಣವಾಗಿಕೊಳ್ಳುವ ಹಂಬಲ ಮತ್ತು ಆ ಪ್ರಕಾರದಲ್ಲಿಯೇ ಜೋಡಿಸಿಟ್ಟುಕೊಳ್ಳುವುದು. 3) ಒಮ್ಮೆ ಮಾಡಿದ ಕೆಲಸ ಸರಿಯಾಗಿ ನಡೆದಿದೆಯೋ ಇಲ್ಲವೋ ಎಂದು ಮತ್ತೆ ಮತ್ತೆ ಗಮನಿಸುವುದು, ಒರೆಹಚ್ಚುವುದು – ಉದಾಹರಣೆಗೆ, ಬಾಗಿಲ ಚಿಲಕ ಹಾಕಿದ್ದೇನೋ ಇಲ್ಲವೋ ಎಂದು ತಿರುಗಿ ತಿರುಗಿ ಕಾತರಿಪಡಿಸಿಕೊಳ್ಳುವುದು.

ಈ ಎಲ್ಲಾ ಯೋಚನೆಗಳು ನಮ್ಮೆಲ್ಲರಲ್ಲಿಯೂ ಇರುತ್ತವಾದರೂ, ಗೀಳು-ತುಡಿತದ ಬೇನೆ ಇರುವವರಲ್ಲಿ ಇದು ಎಲ್ಲೆ ಮೀರಿರುತ್ತದೆ. ತಮ್ಮಲ್ಲಿ ಉಂಟಾಗುವ ಈ ಗೀಳು ಬಾವನೆಗಳನ್ನು, ಹಾಗೂ ಆ ಗೀಳಿನಿಂದ ಮೂಡುವ ನಡವಳಿಕೆಗಳನ್ನು ರೋಗಿಗಳು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲಾರರು. ಈ ಗೀಳು ಅವರಲ್ಲಿ ತನ್ನಶ್ಟಕ್ಕೆ ತಾನೇ ಹೊರಹೊಮ್ಮುತ್ತಿರುತ್ತದೆ. ದಿನಕ್ಕೆ ಒಂದಶ್ಟು ಹೊತ್ತು ಅವರು ಈ ಬೇನೆಯಿಂದ ತೊಂದರೆಪಡಬೇಕಾಗುತ್ತದೆ.

ಕಾರಣಗಳು

ಸುಮಾರು 300 ವರ್ಶಗಳಿಂದ ಗೀಳು-ತುಡಿತದ ಬೇನೆಯ ಲಕ್ಶಣಗಳು ನಮಗೆ ತಿಳಿದಿವೆ. ಈ ಬೇನೆಯ ಒಂದು ಕುರುಹಾದ ದೇವರನ್ನು ಹೀಗಳೆಯುವ ಯೋಚನೆಗಳನ್ನು 17ನೆಯ ಶತಮಾನದ ಯೂರೋಪಿನಲ್ಲಿ ಸೈತಾನನ ಕಾಟ ಎಂದು ನಂಬಿದ್ದರು. ಈ ಬೇನೆಯ ಮುಕ್ಯ ಲಕ್ಶಣಗಳಾದ ಅನುಮಾನ ಮತ್ತು ತೀರ್ಮಾನ ತೆಗೆದುಕೊಳ್ಳುವ ವಿಶಯದಲ್ಲಿನ ಹಿಂಜರಿತವನ್ನು ಪ್ರೆಂಚ್ ಅರಿಗರು ಗುರುತಿಸಿದ್ದರು. ಅನುಮಾನದ ಹುಚ್ಚುತನ ಅಂತಲೇ ಅವರು ಇದನ್ನು ಕರೆದಿದ್ದರು.

ಆಸ್ಟ್ರಿಯನ್ ಅರಿಗ ಸಿಗ್ಮಂಡ್ ಪ್ರಾಯ್ಡ್ ನ ಮನಸ್ಸಿನ ಬಗೆಯರಿಕೆ ಚಳಕಗಳು (Psychoanalysis techniques) 20ನೆಯ ಶತಮಾನದಲ್ಲಿ ಹೆಚ್ಚು ಮಂದಿಮೆಚ್ಚುಗೆ ಗಳಿಸಿದ್ದವು. ಪ್ರಾಯ್ಡ್ ನ ಮನಸ್ಸಿನ ಬಗೆಯರಿಕೆ ಸಿದ್ದಾಂತಗಳ ಪ್ರಕಾರ, ನಮ್ಮ ಬೆಳವಣಿಗೆಯ ಹಂತದಲ್ಲಿನ ಬಗೆಹರಿಯದ ಮಾನಸಿಕ ತೊಳಲಾಟಗಳಿಗೆ ಪ್ರತಿಕ್ರಿಯೆಯಾಗಿ ಈ ಗೀಳು ಮತ್ತು ತುಡಿತಗಳು ಹೊರಹೊಮ್ಮುತ್ತವೆ. ಈ ಸಿದ್ದಾಂತ ರೋಗಿಯ ಗೀಳಿನ ಬಗ್ಗೆ ಅರಿವು ಮೂಡಿಸುತ್ತದೆಯಾದರೂ, ಈ ಬೇನೆಯ ತಳಮಟ್ಟದ ಕಾರಣಗಳ ಬಗ್ಗೆ ಬೆಳಕು ಚೆಲ್ಲುವುದಿಲ್ಲ. ಮನಸ್ಸಿನ ಬಗೆಯರಿಕೆ ಸಿದ್ಧಾಂತಗಳು ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ತೂಕ ಕಳೆದುಕೊಂಡವು.

ಸೆರೋಟೋನಿನ್ ನಮ್ಮ ಮಿದುಳಿನಲ್ಲಿ ಒಂದು ನರಸೂಲುಗೂಡಿನಿಂದ ಮತ್ತೊಂದಕ್ಕೆ ಸನ್ನೆಗಳನ್ನು ಸಾಗಿಸುವ ನರಸನ್ನೆಒಯ್ಯುಕ (Neurotransmitter). ನಮ್ಮ ಮಯ್ಯಲ್ಲಿ ನಿದ್ದೆ, ಹಸಿವು, ಮುಂತಾದವು ಸರಿಯಾಗಿ ನಡೆಯುವಲ್ಲಿ ಸೆರೋಟೋನಿನ್ ಪಾತ್ರ ಮುಕ್ಯವಾದುದು. ಮಿದುಳಿನಲ್ಲಿ ಸೆರೋಟೋನಿನ್ ಮಟ್ಟ ಏರುಪೇರಾಗುವುದಕ್ಕೂ ಗೀಳು-ತುಡಿತದ ಬೇನೆಗೂ ನಂಟಿರುವುದನ್ನು ಅರಿಗರು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅರಕೆಗಳು ನಡೆಯಬೇಕಿವೆ, ನಡೆಯುತ್ತಲಿವೆ. ಈ ಬೇನೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಪೀಳಿಗಳ ಮೂಲಕ ಹರಡುವ ಸಾದ್ಯತೆಗಳಿವೆ. hSERT ಎನ್ನುವ ಪೀಳಿಯ (Gene) ಮಾರ್ಪಾಟು ಈ ಬೇನೆಗೆ ಕಾರಣವಾಗಬಲ್ಲುದಾಗಿದ್ದು, ಹುಟ್ಟುವ ಮಕ್ಕಳಿಗೆ ಈ ಪೀಳಿ ಸಾಗಿಸಲ್ಪಡುತ್ತದೆ.

ನಮ್ಮ ಸುತ್ತಲಿನ ಪರಿಸರ, ನಮ್ಮ ಸುತ್ತಲಿನ ಆಗುಹೋಗುಗಳು ಮತ್ತು ಅನುಬವಗಳಿಂದ ನಾವು ನಮ್ಮಲ್ಲಿ ಅನಿಸಿಕೆಗಳು ಹಾಗೂ ತಿಳುವಳಿಕೆಗಳನ್ನು ರೂಪಿಸಿಕೊಳ್ಳುವ ಬಗೆ(Cognition) , ಪೀಳಿಯ ನಂಟಿನ ಕಾರಣಗಳು, ಇವೆಲ್ಲವೂ ಗೀಳು-ತುಡಿತದ ಬೇನೆಯ ಹುಟ್ಟು ಮತ್ತು ಬೆಳವಣಿಗೆಗೆ ಕಾರಣವಾಗಬಲ್ಲವು.

ಚಿಕಿತ್ಸೆ 

ಮಾನಸಿಕ ವೈದ್ಯರು (Psychiatrist) ನೀಡುವ ಮದ್ದಿನ ಜೊತೆಗೆ, ನುರಿತ ಮಾನಸಿಕ ತಜ್ನರು (Psychologist) ನೀಡುವ ಚಿಕಿತ್ಸೆಗಳೂ ಈ ಬೇನೆಯನ್ನು ಇಡಿಯಾಗಿ ಹೋಗಲಾಡಿಸದಿದ್ದರೂ ಒಂದು ಮಟ್ಟಿಗೆ ಹತೋಟಿಯಲ್ಲಿಡಲು ನೆರವಾಗುತ್ತವೆ.

ಅರಿವಣಿಗೊಳ್ಳಿಕೆ-ನಡೆವಳಿಕೆಯ ಚಿಕಿತ್ಸೆ (Cognitive behavioral therapy)  ಮತ್ತು ಮಯ್ಯೊಡ್ಡಿಕೆ/ಪ್ರತಿಕ್ರಿಯೆ ತಡೆಗಟ್ಟುವಿಕೆ (Exposure/ Response prevention) ಚಿಕಿತ್ಸೆಯ ವಿದಾನಗಳನ್ನು ಮಾನಸಿಕ ತಜ್ನರು ಈ ನಿಟ್ಟಿನಲ್ಲಿ ಬಳಸುತ್ತಾರೆ. ಈ ಎರಡೂ ಚಿಕಿತ್ಸೆಯ ವಿದಾನಗಳು ಬೇನೆಯನ್ನು ಹತೋಟಿಯಲ್ಲಿಡುವಲ್ಲಿ ತಜ್ನರ ನಂಬಿಕೆಯನ್ನು ಗಳಿಸಿವೆ. ಇವುಗಳ ಬಗ್ಗೆ ಮುಂದಿನ ಬರಹಗಳಲ್ಲಿ ಹೆಚ್ಚಾಗಿ ತಿಳಿದುಕೊಳ್ಳೋಣ.

(ಚಿತ್ರ ಸೆಲೆ: https://www.quora.com)

 (ಈ ಬರಹವನ್ನು ಹೊಸಬರಹದಲ್ಲಿ ಬರೆಯಲಾಗಿದೆ)

Bookmark the permalink.

One Comment

  1. Pingback: meritking

Comments are closed