ತೊಗಲು – ಬಾಗ 1

ನಮ್ಮ ಮಯ್ಯಲ್ಲಿರುವ ಏರ‍್ಪಾಟುಗಳ ಬಗ್ಗೆ  ಬರಹಗಳಲ್ಲಿ ತಿಳಿಸುತ್ತಾ ಬರಲಾಗಿದೆ. ಈ ಸರಣಿ ಬರಹವನ್ನು ಮುಂದುವರೆಸುತ್ತಾ, ಮುಂದಿನ ಮೂರು ಕಂತುಗಳಲ್ಲಿ ತೊಗಲೇರ‍್ಪಾಟಿನ (Integument system) ಒಡಲರಿಮೆ (anatomy) ಹಾಗು ಉಸಿರಿಯರಿಮೆಯನ್ನು (physiology) ತಿಳಿದುಕೊಳ್ಳೋಣ.

ತೊಗಲೇರ‍್ಪಾಟಿನ ವಿಶೇಶತೆ ಎಂದರೆ, ತೊಗಲು ಕೆಲವೇ ಮಿಲಿಮೀಟರಗಳಶ್ಟು ತೆಳ್ಳಗಿದ್ದರೂ, ನಮ್ಮ ಮಯ್ಯಲ್ಲಿ ಇರುವ ಅಂಗಗಳಲ್ಲೇ ತುಂಬಾ ದೊಡ್ಡದು. ಅದು ಹೇಗೆ ಗೊತ್ತೆ? ಒಬ್ಬ ಹದುಳಾಗಿರುವ (healty) ಮನುಶ್ಯನ ತೊಗಲನ್ನು ಒಟ್ಟಾರೆ ಲೆಕ್ಕಕ್ಕೆ ತೆಗೆದುಕೊಂಡರೆ, ಅದರ ತೂಕ ಹೆಚ್ಚು ಕಡಿಮೆ  5 Kg ಹಾಗು ಅಗಲ 20 Sq ft ಇರುತ್ತದೆ.

ತೊಗಲೇರ‍್ಪಾಟಿನ ಅರಿದಾದ (important) ಬಾಗಗಳೆಂದರೆ:

1) ತೊಗಲು (skin): ತೊಗಲು ನಮ್ಮ ಹೊರ ಮಯ್ ಹೊದಿಕೆಯಾಗಿದ್ದು, ಮಯ್ಯನ್ನು ಇರ‍್ಪುಗಳು (chemicals), ಸೀರುಸುರಿಗಳು (microorganisms) ಮತ್ತು ಕಡುನೇರಳೆ ಕದಿರುಗಳಂತ (UV rays) ಕೇಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು ಕಾಯುವ ಪದರದಂತೆ ಕೆಲಸ ಮಾಡುತ್ತದೆ.

2) ಕೂದಲುಗಳು ಮತ್ತು ಉಗುರುಗಳು: ಇವು ತೊಗಲಿನ ಮುಂಚಾಚುಗಳಂತೆ ಬೆಳೆದು, ತೊಗಲಿಗೆ ಕಾಪನ್ನು ಒದಗಿಸುತ್ತವೆ.

3) ಹೊರಸುರಿಕೆಗಳು (exocrine glands): ತೊಗಲಿನ ಬಿಸುಪನ್ನು (temperature) ತಗ್ಗಿಸಲು, ತೊಗಲನ್ನು ಕಾಯಲು ಹಾಗು ತೊಗಲನ್ನು ತೇವಗೊಳಿಸಲು (moisturize), ತೊಗಲೇರ‍್ಪಾಟಿನ ಹೊರಸುರಿಕೆಗಳು ಬೆವರು, ಎಣ್ಣೆ ಹಾಗು ಮೇಣಗಳನ್ನು ಸುರಿಸುತ್ತವೆ.

togalu_1_1

ಈ ಕಂತಿನಲ್ಲಿ ತೊಗಲಿನ ಒಡಲರಿಮೆಯನ್ನು ತಿಳಿಸಿಕೊಡಲಾಗುವುದು.

ತೊಗಲು ಮೂರು ಪದರಗಳನ್ನು ಹೊಂದಿರುತ್ತದೆ. ಅವುಗಳೆಂದರೆ, (ಚಿತ್ರ 1 & 2)

1)    ಮೇಲ್ತೊಗಲ್ಪರೆ/ಹೊರತೊಗಲ್ಪರೆ (epidermis)
2)    ನಡುತೊಗಲ್ಪರೆ (dermis)
3)    ಕೆಳತೊಗಲ್ಪರೆ/ಒಳತೊಗಲ್ಪರೆ (hypodermis)

togalu_1_2
ಮೇಲ್ತೊಗಲ್ಪರೆ (epidermis): (ಚಿತ್ರ  3)

togalu_1_3

ತೊಗಲಿನ ಹೊರಬಾಗವಾದ ಮೇಲ್ತೊಗಲ್ಪರೆಯು ಹೆಚ್ಚುಕಡಿಮೆ ಮಯ್ ಹೊರಗಿನ ಎಲ್ಲಾ ಬಾಗಗಳನ್ನು ಮುಚ್ಚುತ್ತದೆ. 1/10 ಮಿಲಿಮೀಟರಿನಶ್ಟು ತೆಳ್ಳಗಿರುವ ಮೇಲ್ತೊಗಲ್ಪರೆಯು ಒಂದರ ಮೇಲೊಂದು ಜೋಡಿಸಿರುವ 40-50 ಸಾಲುಗಳ ಹುರುಪೆ ಮೇಲ್ಪರೆಗಳಿಂದ (squamous epithelium) ಮಾಡಿರುತ್ತದೆ. ಈ ಪದರವು ಯಾವುದೇ ಬಗೆಯ ನೆತ್ತರು ಇಲ್ಲವೆ ನೆತ್ತರುಗೊಳವೆಗಳನ್ನು ಹೊಂದಿರುವುದಿಲ್ಲ. ಈ ಪದರಕ್ಕೆ ಬೇಕಾದ ಆರಯ್ವಗಳನ್ನು (nutrients), ನಡುತೊಗಲ್ಪರೆಯಿಂದ ಪಸರಿಸುವ (diffusion) ಹರಿಕವು (fluid) ಒದಗಿಸುತ್ತದೆ.

ಮೇಲ್ತೊಗಲ್ಪರೆಯು 4 ಬಗೆಯ ಗೂಡುಗಳಿಂದ ಮಾಡಲ್ಪಟ್ಟಿದೆ: (ಚಿತ್ರ  3, 4, 5, 6, & 7)

togalu_1_4

i) ಕೊಂಪರೆಗೂಡುಗಳು (keratinocytes):   90% ರಶ್ಟು ಮೇಲ್ತೊಗಲ್ಪರೆಯು ಕೊಂಪರೆಗೂಡುಗಳಿಂದ ಮಾಡಲ್ಪಟ್ಟಿರುತ್ತದೆ. ಮೇಲ್ತೊಗಲ್ಪರೆಯ ತಾಳಿನಲ್ಲಿರುವ ಬುಡಗೂಡುಗಳಿಂದ (stem cells) ಕೊಂಪರೆಗೂಡುಗಳು ಉಂಟಾಗುತ್ತವೆ. ಕೊಂಪರೆಗೂಡುಗಳು  ಕೊಂಪರೆ (keratin) ಮುನ್ನನ್ನು (protein) ಮಾಡುವ ಹಾಗು ಕೂಡಿಟ್ಟುಕೊಳ್ಳುವ ಅಳವನ್ನು (capacity) ಹೊಂದಿರುತ್ತವೆ. ಕೊಂಪರೆ ಮುನ್ನು, ಕೊಂಪರೆಗೂಡುಗಳಿಗೆ ಒರಟುತನ (toughness), ಹುರುಪೆತನ (scalyness) ಹಾಗು ನೀರ್-ತಡೆತವನ್ನು (water resistance) ಕೊಡುತ್ತದೆ.

ii) ಕರ‍್ವಣ್ಣಗೂಡುಗಳು (melanocytes): 8% ನಶ್ಟು ಮೇಲ್ತೊಗಲ್ಪರೆಯ ಗೂಡುಗಳು, ಕರ‍್ವಣ್ಣಗೂಡುಗಳಾಗಿರುತ್ತವೆ (melanocytes). ಕರ‍್ವಣ್ಣವೆಂಬ (melanin) ಹೊಗರನ್ನು (pigment) ಮಾಡುವ ಕರ‍್ವಣ್ಣಗೂಡುಗಳು, ಕಡುನೇರಳೆ ಕದಿರುಗಳು (UV rays) ಹಾಗು ನೇಸರನ ಸುಡುವಿಕೆಯಿಂದ (sun burn) ನಮ್ಮ ತೊಗಲನ್ನು ಕಾಪಾಡುತ್ತವೆ.

togalu_1_5

iii) ಲ್ಯಾಂಗರ‍್ಹಾನ್ಸ್  ಗೂಡುಗಳು (Langherhans cells):  ಮೇಲ್ತೊಗಲ್ಪರೆಯಲ್ಲಿರುವ ಗೂಡುಗಳ ಪಯ್ಕಿ, 1%  ನಶ್ಟು ಲ್ಯಾಂಗರ‍್ಹಾನ್ಸ್ ಗೂಡುಗಳಾಗಿರುತ್ತವೆ. ತೊಗಲಿನ ಹಾದಿಯಲ್ಲಿ ನಮ್ಮ ಮಯ್ಯನ್ನು ಹೊಕ್ಕಲು ಮುನ್ನುಗ್ಗುವ ಕೆಡುಕುಕಣಗಳನ್ನು (pathogens) ಗುರುತಿಸುವ ಹಾಗು ಅವುಗಳ ಎದುರಾಗಿ ಸೆಣಸುವ ಗೆಯ್ಮೆಯನ್ನು ಲ್ಯಾಂಗರ‍್ಹಾನ್ಸ್  ಗೂಡುಗಳು ಮಾಡುತ್ತವೆ.

togalu_1_6

iv) ಮರ‍್ಕೆಲ್ ಗೂಡುಗಳು (Merkel cells) : ಮೇಲ್ತೊಗಲ್ಪರೆಯ ಒಟ್ಟುಗೂಡುಗಳಲ್ಲಿ,  1% ಗೂ ಕಡಿಮೆಯಶ್ಟು ಇರುವ ಈ ಗೂಡುಗಳು ಮುಟ್ಟುವ-ಅರಿವನ್ನು (sense of touch) ಹೊಂದಿದೆ. ಮೇಲ್ತೊಗಲ್ಪರೆಯ ಒಳಬಾಗದಲ್ಲಿ, ಮೇಲ್ತೊಗಲ್ಪರೆಯು ನರದ ತುದಿಗಳನ್ನು ಕೂಡಿಕೊಳ್ಳುವ ಬಾಗದಲ್ಲಿ ಮರ‍್ಕೆಲ್ ಗೂಡುಗಳು ಬಿಲ್ಲೆಯ ಇಟ್ಟಳಗಳನ್ನು ಹೊಂದಿದ್ದು, ಇವುಗಳನ್ನು ಮುಟ್ಟರಿವಿನ ತಟ್ಟೆಗಳು (tactile disc) ಎಂದು ಹೇಳಬಹುದಾಗಿದೆ. ಈ ಬಗೆಯ ಇಟ್ಟಳವು, ಮಟ್ಟುವ ಅರಿವನ್ನು ಅರಿಯಲು ನೆರವಾಗುತ್ತದೆ.

togalu_1_7

ಮೇಲ್ತೊಗಲ್ಪರೆಯು ಹೆಚ್ಚಿನ ಮಯ್ ಬಾಗಗಳಲ್ಲಿ 4 ಪದರಗಳಲ್ಲಿ ಜೋಡಿಸಲ್ಪಟ್ಟಿರುತ್ತದೆ. ಉಳಿದ ಮಯ್ ಬಾಗಗಳಿಗೆ ಹೋಲಿಸಿದರೆ, ಅಂಗಯ್ ಹಾಗು ಅಂಗಾಲುಗಳಲ್ಲಿ ಇದು ಸ್ವಲ್ಪ ದಪ್ಪಗಿರುತ್ತದೆ ಹಾಗು ಸಾಮಾನ್ಯವಾದ ನಾಲ್ಕು ಪದರಗಳಲ್ಲದೆ, ಅಯ್ದನೇ ಪದರವನ್ನೂ ಮೇಲ್ತೊಗಲ್ಪರೆಯಲ್ಲಿ ಕಾಣಬಹುದು. (ಚಿತ್ರ  4 & 8)

i) ತಳಪರೆ (stratum basale):  ಮೇಲ್ತೊಗಲ್ಪರೆಯ ತಳಬಾಗದಲ್ಲಿರುವ ತಳಪರೆಯು ಬುಡಗೂಡುಗಳನ್ನು (stem cells) ಹೊಂದಿರುತ್ತದೆ. ಮೇಲ್ತೊಗಲ್ಪರೆಯಲ್ಲಿ ಕಂಡುಬರುವ ಎಲ್ಲಾ ಬಗೆಯ ಗೂಡುಗಳು ಬುಡಗೂಡುಗಳಿಂದ ಹುಟ್ಟುತ್ತವೆ. ತಳಪರೆಯಲ್ಲಿ ಕೊಂಪರೆಗೂಡುಗಳು, ಕರ‍್ವಣ್ಣಗೂಡು, ಹಾಗು ಮರ‍್ಕೆಲ್ ಗೂಡುಗಳು ಇರುತ್ತವೆ.

ii) ಮುಳ್ಪರೆ (stratum spinosum):  ತಳಪರೆಯ ಮೇಲಿರುವ ಮುಳ್ಪರೆಯು, ಲ್ಯಾಂಗರ್ಹಾನ್ಸ್ ಗೂಡುಗಳು ಹಾಗು ಮುಳ್ಕೊಂಪರೆಗೂಡುಗಳನ್ನು (spiny keratinocytes) ಹೊಂದಿರುತ್ತವೆ. ಮುಳ್ಕೊಂಪರೆಗೂಡುಗಳ ಮೇಲಿರುವ ಮುಳ್ಳುಗಳು ಕೊಂಪರೆಗೂಡುಗಳ ಮುಂಚಾಚುಗಳು (projections). ಈ ಮುಳ್ಳುಗಳ ನೆರವಿನಿಂದ, ಮುಳ್ಕೊಂಪರೆಗೂಡುಗಳು ಒಂದಕ್ಕೊಂದು ಕೂಡಿಕೊಳ್ಳಲು ನೆರವಾಗುತ್ತವೆ. ಹೀಗೆ ಕೂಡಿಕೊಂಡ ಮುಳ್ಕೊಂಪರೆಗೂಡುಗಳ ಗುಂಪು, ತೊಗಲಿನಲ್ಲಿ ಉಂಟಾಗುವ ತಿಕ್ಕಾಟಕ್ಕೆ ತಡೆಯೊಡ್ಡುತ್ತವೆ.

iii) ಹರಳ್ಪರೆ (stratum granulosum): ಮುಳ್ಪರೆಯ ಮೇಲೆ ಹರಳ್ಪರೆ ಇರುತ್ತದೆ. ಹರಳ್ಪರೆಯಲ್ಲಿ ಇರುವ ಕೊಂಪರೆಗೂಡುಗಳು ಮೇಣವನ್ನು ಮಾಡುತ್ತವೆ. ಈ  ಮೇಣವು, ತೊಗಲಿಗೆ ನೀರ್-ತಡೆತನವನ್ನು (water resistance) ಒದಗಿಸುತ್ತದೆ. ನಡುತೊಗಲ್ಪರೆಯಿಂದ ಹರಡುವ ಹರಿಕವು ಹರಳ್ಪರೆಯನ್ನು ಮುಟ್ಟದ ಕಾರಣ, ಈ ಪದರಕ್ಕೆ ಆರಯ್ವಗಳು ತಲುಪುವುದಿಲ್ಲ. ಹಾಗಾಗಿ, ಈ ಪದರದಲ್ಲಿ ಹೆಚ್ಚಿನ ಮಟ್ಟದ ಸತ್ತ ಗೂಡುಗಳು ಇರುತ್ತವೆ.

iv) ಹೊಳ್ಪರೆ (stratum lucidum): ಮಂದವಾದ ತೊಗಲನ್ನು ಹೊಂದಿರುವ ಅಂಗಯ್ ಮತ್ತು ಅಂಗಾಲುಗಳಲ್ಲಿ,  ಹರಳ್ಪರೆಯ ಮೇಲೆ ಹೊಳ್ಪರೆ ಯನ್ನು (stratum lucidum) ಕಾಣಬಹುದು. ಹೊಳ್ಪರೆಯು, ಹಲವು ಪದರಗಳ ಸತ್ತ ಕೊಂಪರೆಗೂಡುಗಳನ್ನು ಹೊಂದಿರುತ್ತದೆ.

v) ಕೋಡ್ಪರೆ (stratum corneum):  ಮೇಲ್ತೊಗಲ್ಪರೆಯ ಹೊರಗಿನ ಪದರವನ್ನು ಕೋಡ್ಪರೆ (stratum corneum) ಎಂದು ಹೇಳಬಹುದು. ಇದು ತೊಗಲಿನ ಹೊರಪದರವೂ ಹವ್ದು. ಈ ಪದರವು, ಹಲವು ಸಾಲುಗಳ, ಚಪ್ಪಟ್ಟೆಯಾದ, ಸತ್ತ ಕೊಂಪರೆಗೂಡುಗಳನ್ನು ಹೊಂದಿರುತ್ತದೆ. ಈ ಪದರದ ಸತ್ತ ಕೊಂಪರೆಗೂಡುಗಳು ಕಳಚಿ ಬೀಳುತ್ತಲಿರುತ್ತವೆ. ಹೀಗೆ ಬಿದ್ದ ಕೊಂಪರೆಗೂಡುಗಳ ತಾಣಕ್ಕೆ, ಒಳ ಪದರಗಳಿಂದ, ಕೊಂಪರೆಗೂಡುಗಳು ಬಂದು ನೆಲೆಗೊಳ್ಳುತ್ತವೆ.

togalu_1_8

ನಡುತೊಗಲ್ಪರೆ (dermis):  (ಚಿತ್ರ  1, 2, 3, 4, 8 & 9)

ಮೇಲ್ತೊಗಲ್ಪರೆಗೆ ಹೋಲಿಸಿದರೆ, ನಡುತೊಗಲ್ಪರೆ ದಪ್ಪಗಿರುತ್ತದೆ. ನಡುತೊಗಲ್ಪರೆಯು ಕಟ್ಟಲೆಮೀರಿದ ಒತ್ತಾದ ಕೂಡಿಸುವ ಗೂಡುಕಟ್ಟು (irregular dense connective tissue), ನರಗಳು, ನೆತ್ತರು ಹಾಗು ನೆತ್ತರುಗೊಳವೆಗಳನ್ನು ಹೊಂದಿದೆ. ನಡುತೊಗಲ್ಪರೆಯು ತೊಗಲಿಗೆ ಹಿನ್ನೆಳೆತ (elasticity) ಹಾಗು ಬಲವನ್ನು ಕೊಡುತ್ತದೆ.

togalu_1_9

ನಡುತೊಗಲ್ಪರೆಯಲ್ಲಿ ಎರಡು ಹೊದಿಕೆಗಳಿರುತ್ತವೆ. ಮುಂಚಾಚು ಹೊದಿಕೆ (papillary layer) & ಬಲೆಬಗೆಯ ಹೊದಿಕೆ (reticular layer).

i)    ಮುಂಚಾಚು ಹೊದಿಕೆ (papillary layer): ಮೇಲ್ತೊಗಲ್ಪರೆಯ ಕೆಳ ಬಾಗದಲ್ಲಿ ಇರುವ ಮುಂಚಾಚು ಹೊದಿಕೆಯು, ಬೆರಳಿನ ಇಟ್ಟಳದಂತಿರುವ ಮುಂಚಾಚುಗಳನ್ನು (projection/papillae) ಹೊಂದಿದ್ದು, ಈ ಮುಂಚಾಚುಗಳು ಮೇಲ್ತೊಗಲ್ಪರೆಯೆಡೆಗೆ ಚಾಚಿಕೊಂಡಿರುತ್ತವೆ. ಮುಂಚಾಚುಗಳು ನಡುತೊಗಲ್ಪರೆಯ ಹೊರ ಮಯ್ ಹರವನ್ನು (surface area) ಹೆಚ್ಚಿಸುತ್ತವೆ. ಜೊತೆಗೆ ಮುಂಚಾಚುಗಳಲ್ಲಿ ನರಗಳು ಹಾಗು ನೆತ್ತರುಕೊಳವೆಗಳಿರುತ್ತವೆ. ಈ ಮುಂಚಾಚುಗಳಲ್ಲಿ ಹರಿಯುವ ನೆತ್ತರು, ಮೇಲೆತೊಗಲ್ಪರೆಗೆ ಬೇಕಾದ ಆರಯ್ವಗಳು ಹಾಗು ಉಸಿರುಗಾಳಿಯನ್ನು (oxygen) ಉಣಿಸಿದರೆ, ನರಗಳು ಮೇಲ್ತೊಗಲ್ಪರೆಯ ಮೂಲಕ ಮುಟ್ಟರಿವು (sense of touch), ನೋವರಿವು (sense of pain) ಹಾಗು ಬಿಸುಪರಿವುಗಳನ್ನು (sense of temperature) ತಿಳಿದುಕೊಳ್ಳಲು ನೆರವಾಗುತ್ತವೆ.

ii)    ಬಲೆಬಗೆಯ ಹೊದಿಕೆ (reticular layer): ಮುಂಚಾಚು ಹೊದಿಕೆಯ ಕೆಳಗಿರುವ ಬಲೆಬಗೆಯ ಹೊದಿಕೆಯು, ಮುಂಚಾಚು ಹೊದಿಕೆಗಿಂತ ದಪ್ಪ ಹಾಗು ಬಲವಾಗಿರುತ್ತದೆ. ಬಲೆಬಗೆಯ ಹೊದಿಕೆಯ ಅಂಟುವುಟ್ಟು (collagen) ಹಾಗು ಪುಟಿ ನಾರುಗಳನ್ನು (elastic fibers) ಹೊಂದಿರುವ ಕಟ್ಟಲೆಮೀರಿದ ಒತ್ತಾದ ಕೂಡಿಸುವ ಗೂಡುಕಟ್ಟುಗಳನ್ನು (irregular dense connective tissue) ಹೊಂದಿರುತ್ತದೆ. ಈ ನಾರುಗಳು ಎಲ್ಲಾ ದಿಕ್ಕಿನಲ್ಲೂ ಹರಡಿಕೊಂಡಿರುವುದರಿಂದ, ಇದು ತೊಗಲಿಗೆ ಬಲ ಹಾಗು ಹಿನ್ನೆಳೆತಗಳನ್ನು (elasticity) ಒದಗಿಸುತ್ತದೆ. ತೊಗಲಿನ ಗೂಡುಗಳ ಒತ್ತಡ ಹಾಗು ನೋವಿನ ಅರಿವುಗಳನ್ನು ತಿಳಿಯಲು ನೆರವಾಗುವಂತೆ, ನೆತ್ತರುಗೊಳವೆಗಳನ್ನೂ ಹೊಂದಿರುತ್ತದೆ.

ಕೆಳತೊಗಲ್ಪರೆ / ಒಳತೊಗಲ್ಪರೆ (hypodermis):

ತೊಗಲಿನ ಕಟ್ಟಾಳದ (deeper) ಪದರವೆ ಕೆಳತೊಗಲ್ಪರೆ. ಇದನ್ನು ನಡುತೊಗಲ್ಪರೆಯ ಕೆಳಗೆ ಕಾಣಬಹುದು. ತೊಗಲು ಹಾಗು ತೊಗಲಿನ ಅಡಿಯಲ್ಲಿರುವ ಎಲುಬುಗಳು ಹಾಗು ಕಂಡಗಳ ನಡುವೆ ಕೆಳತೊಗಲ್ಪರೆಯು ಬಳುಕುವ ಕೊಂಡಿಯನ್ನು ಮಾಡುತ್ತದೆ. ಜೊತೆಗೆ ಕೊಬ್ಬನ್ನು ಕೂಡಿಟ್ಟುಕೊಳ್ಳುವ ಕಣಜವೂ ಹವ್ದು. ಕೆಳತೊಗಲ್ಪರೆಯು ಸಡಿಲವಾಗಿ ಜೋಡಿಸಿದ ಹಿನ್ನೆಳೆಕ (elastin) ಹಾಗು ಅಂಟುವುಟ್ಟುಕದ (collagen) ನಾರುಗಳನ್ನು ಹೊಂದಿರುವ ಕಿರೆಡೆಯ ಕೂಡಿಸುವ ಗೂಡುಗಳನ್ನು (areolar connective tissue) ಹೊಂದಿದೆ.

ಈ ಬಗೆಯ ಇಟ್ಟಳವು ತೊಗಲು ಸುಳುವಾಗಿ ಜಗ್ಗಲು ಹಾಗು ಅಲುಗಾಡಲು ನೆರವಾಗುತ್ತದೆ. ಕೆಳತೊಗಲ್ಪರೆಯಲ್ಲಿ ಇರುವ ಕೊಬ್ಬಿನ ಗೂಡುಕಟ್ಟು ಕಸುವನ್ನು ಕೊಬ್ಬಿನ ಟ್ರಯ್-ಗ್ಲಿಸರಯ್ಡ್ ಬಗೆಯಲ್ಲಿ ಕೂಡಿಟ್ಟುಕೊಂಡಿರುತ್ತದೆ. ಜೊತೆಗೆ ಕೊಬ್ಬಿನ ಗೂಡುಕಟ್ಟು, ಮಯ್ಯೊಳಗಿನ ಕಂಡಗಳಿಂದ ಮಾಡಲ್ಪಟ್ಟ ಬಿಸುಪನ್ನು (temperature) ಹಿಡಿದಿಟ್ಟು ಕೊಳ್ಳುವ ಮೂಲಕ, ಮಯ್ ಬಿಸುಪನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ಮುಂದಿನ ಕಂತಿನಲ್ಲಿ ತೊಗಲೇರ‍್ಪಾಟಿಗೆ ಹೊಂದಿಕೊಂಡಿರುವ ಕೂದಲುಗಳು, ಉಗುರುಗಳು ಹಾಗು ಹೊರಸುರಿಕೆಗಳ ಬಗ್ಗೆ ತಿಳಿದುಕೊಳ್ಳೋಣ.

(ತಿಳುವಳಿಕೆ ಮತ್ತು ಚಿತ್ರ ಸೆಲೆಗಳು: 1) innerbody.com 2) en.wikipedia.org,  3) daviddarling.info, 4)  dartmouth.edu, 5) studyblue.com, 6) wikipedia.org/wiki/Melanocyte  7) en.wikipedia.org/wiki/Merkel_cell, 8) en.wikipedia.org/wiki/Langerhans_cell, 9)en.wikipedia.org/wiki/Dermis)

Bookmark the permalink.

Comments are closed.

Comments are closed