ಅರಗೇರ‍್ಪಾಟು – ಬಾಗ 1

ಈ ಸರಣಿ ಬರಹದ ಗುರಿ ಕೆಳಗಿನ ಪ್ರಶ್ನೆಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸುವುದಾಗಿದೆ.

  • ಅರಗಿಸಿಕೊಳ್ಳುವುದು ಎಂದರೇನು?
  • ಈ ಕೆಲಸ ನಮ್ಮ ಮಯ್ಗೆ ಯಾಕೆ ಬೇಕು?
  • ಈ ಕೆಲಸದಲ್ಲಿ  ತೊಡಗಿಕೊಳ್ಳುವ ನಮ್ಮ ಮಯ್  ಅಂಗಗಳು (organs) ಯಾವುವು? ಅವು ಹೇಗೆ ಕೆಲಸವನ್ನು ಮಾಡುತ್ತವೆ?

ನಾವು ಉಣ್ಣುವ ಆಹಾರವನ್ನು ಶಕ್ತಿ (energy), ಆರಯ್ವಗಳು (nutrients) ಮತ್ತು ತರುಮಾರ‍್ಪಿನ ಕಸಗಳನ್ನಾಗಿ (metabolic wastes) ಬದಲಾಯಿಸುವ ಹಮ್ಮುಗೆಯನ್ನು ಅರಗಿಸಿಕೊಳ್ಳುವಿಕೆ ಎಂದು ಹೇಳಬಹುದು.

 

ಅರಗಿಸಿಕೊಳ್ಳುವ ಹಮ್ಮುಗೆಯಲ್ಲಿ ತೊಡಗಿಕೊಳ್ಳುವ ಅಂಗಗಳ (organs) ಗುಂಪನ್ನು ಅರಗೇರ‍್ಪಾಟು ಎಂದು ಹೇಳಬಹುದಾಗಿದೆ. ಈ ಹಮ್ಮುಗೆಯಿಂದ ಬರುವ ಆರಯ್ವಗಳು ಮತ್ತು ಕಸುವು, ನಮ್ಮ ಮಯ್ ಸರಿಯಾಗಿ ಕೆಲಸ ಮಾಡಲು ಬೇಕೇಬೇಕು. ಇವುಗಳಿಲ್ಲದೇ ಮನುಶ್ಯ ಬದುಕಲಾರ. ಜೊತೆಗೆ, ಆಹಾರದಲ್ಲಿರುವ ನಮ್ಮ ಮಯ್ಗೆ ಬೇಡವಾದ ಕಸ ಮತ್ತು ನಂಜುಗಳನ್ನು ಹೊರಗೆಡಹುವ ಕೆಲಸವನ್ನೂ ಅರಗೇರ‍್ಪಾಟು ಮಾಡುತ್ತದೆ.

ಅರಗೇರ್ಪಾಟಿನ ಮುಕ್ಯವಾದ ರಚನೆಗಳೆಂದರೆ, ಆಹಾರ ಸಾಗುವ ಕೂಳುಗೊಳವೆ (digestive tract) ಮತ್ತು ಈ ಕೊಳವೆಗೆ ಹೊಂದಿಕೊಂಡಿರುವ ಅಂಗಗಳು. ಈಗ ಅರಗೇರ್ಪಾಟಿನ ಒಡಲರಿಮೆಯನ್ನು ತಿಳಿಯೋಣ.

ಅರಗೇರ‍್ಪಾಟು ಕೂಳುಗೊಳವೆ ಮತ್ತು ಕೂಳುಗೊಳವೆಗೆ ಹೊಂದಿಕೊಂಡಿರುವ ಸುರಿಕಗಳನ್ನು (glands) ಒಳಗೊಂಡಿರುತ್ತದೆ.

chitra 1ಕೂಳುಗೊಳವೆಯು ಬಾಯಿ (mouth/buccal cavity), ಅನ್ನನಾಳ (esophagus), ಹೊಟ್ಟೆ (stomach), ಸಣ್ಣ ಕರುಳು (small intestine), ದೊಡ್ಡ ಕರುಳು (large intestine), ನೆಟ್ಟಗರುಳು (rectum) ಮತ್ತು ಗೊಳ್ಳೆ (anus) ಎಂಬ ಬಾಗಗಳನ್ನು ಒಳಗೊಂಡಿದೆ. ಅರಗಿಸುವಿಕೆಗೆ ನೆರವಾಗಲು ಕೂಳುಗೊಳವೆಗೆ ಹೊಂದಿಕೊಂಡಿರುವ ಸುರಿಕಗಳೆಂದರೆ ಉಗುಳು ಸುರಿಕ (salivary gland), ಈಲಿ (liver), ಮತ್ತು ಅರಗುಸುರಿಕ (pancreas).

ಬಾಯಿ/ಬಾಯ್ಕುಳಿ (ora/buccal cavity):  ಬಾಯಿಗೆ ಹೊಂದಿಕೊಂಡಿರುವ ಮುಕ್ಯವಾದ ಅಂಗಗಳೆಂದರೆ ತುಟಿಗಳು, ನಾಲಿಗೆ, ಹಲ್ಲುಗಳು ಮತ್ತು ಜೊಲ್ಲು ಸುರಿಕಗಳು

ತುಟಿಗಳು:

ಮೇಲ್ದುಟಿ ಮತ್ತು ಕೆಳದುಟಿ ಎಂದು ಗುರುತಿಸಬಹುದಾದ ತುಟಿಗಳು, ಬಾಯಿಯ ಹೊರ ಬಾಗವನ್ನು ಸುತ್ತುವರೆದಿರುತ್ತವೆ. ಆಹಾರವನ್ನು ಜಗಿಯುವಾಗ ಮತ್ತು ಜಗಿಯದ ಹೊತ್ತಿನಲ್ಲಿ ಬಾಯಿಯನ್ನು ಮುಚ್ಚಲು ಇವು ನೆರವಾಗುತ್ತವೆ. ಪದಗಳ ಉಲಿಯುವಿಕೆ ಮತ್ತು ಮೊಗನುಡಿತದಲ್ಲೂ  (facial expression) ತುಟಿಗಳು ಪಾಲ್ಗೊಳ್ಳುತ್ತವೆ.

ತುಟಿಯು ಹಲವು ಬಗೆಯ ಕಟ್ಟಿನ ಕಂಡಗಳು (skeletal muscles) ಮತ್ತು ಅರಿವಿನ ನರಗಳನ್ನು(sensory nerves) ಹೊಂದಿದ್ದು, ಇವು ತಿನ್ನುತ್ತಿರುವ ಆಹಾರದ ಮಂದತೆ (consistency) ಮತ್ತು ಬಿಸುಪಿನ (temperature) ಅರಿವನ್ನು ತಿಳಿಯಲು ನೆರವಾಗುತ್ತವೆ. ಮೇಲ್ದುಟಿಯು ಮೂಗಿನ ಕೆಳಗಿನಿಂದ ಆರಂಬವಾಗಿ, ಇಕ್ಕೆಲಗಳಲ್ಲಿ ಹರಡಿ ಬದಿಗಳಲ್ಲಿ ಮೂಗ್ತುಟಿ (nasolabial) ನೆರಿಗೆಗಳೊಡನೆ (folds) ಹೊಂದಿಕೊಂಡರೆ, ಕೆಳ ಬಾಗವು ವರ‍್ಮಿಲಿಯನ್ (vermilion) ಗೆರೆಗೆ ಸೇರಿಕೊಳ್ಳುತ್ತದೆ. ಕೆಳದುಟಿಯು, ವರ‍್ಮಿಲಿಯೊನ್ ತುದಿಯಿಂದ ಆರಂಬವಾಗಿ, ಬದಿಗಳಲ್ಲಿ ತುಟಿಯಂಚಿಗಳನ್ನೂ (commissures), ಕೆಳಬಾಗದಲ್ಲಿ ದವಡೆಯನ್ನು ಸೇರಿಕೊಳ್ಳುತ್ತದೆ.

ವರ‍್ಮಿಲಿಯನ್- ತೊಗಲುಗಳ ಗಡಿಯಲ್ಲಿ, ನವಿರಾದ ತಿಳಿ ಗೆರೆಯೊಂದು ಕಾಣಿಸಿಕೊಳ್ಳುತ್ತದೆ. ಈ ಗೆರೆಯು ತೊಗಲು ಮತ್ತು ವರ‍್ಮಿಯನ್‍ಗಳ ನಡುವೆ ಇರುವ ವ್ಯತ್ಯಾಸ ಎದ್ದು ಕಾಣುವಂತೆ ಮಾಡುತ್ತದೆ. ಮೇಲ್ದುಟಿಯ ವರ‍್ಮಿಲಿಯನ್ ನಲ್ಲಿ ಎರಡು ಏರಿದ ರಚನೆಗಳು ಇರುತ್ತವೆ; ಇದರಿಂದಾಗಿ ಮೇಲ್ದುಟಿಯ ವರ‍್ಮಿಯಿಯನ್ ಗೆರೆಯು, ಒಲವಿನ ದೇವನೆಂದೇ ಹೆಸರುವಾಸಿಯಾಗಿರುವ ಕ್ಯುಪಿಡನ (cupid) ಕಯ್ಯಲ್ಲಿರುವ ಬಿಲ್ಲಿನಂತೆ ಕಾಣುತ್ತದೆ. ಈ  ಹಿನ್ನೆಲೆಯಿಂದಾಗಿ ಇದಕ್ಕೆ ‘ಕ್ಯುಪಿಡ್’ನ  ಬಿಲ್ಲು’ (cupid’s bow) ಎಂಬ ಹೆಸರಿದೆ.

chitra 2ಮೇಲ್ದುಟಿಯ ನಡುವಿನಲ್ಲಿ, ಮೂಗಿನ ಕೆಳಬಾಗದಿಂದ, ವರ್ಮಿಲಿಯನ್ ಗೆರೆಯ ವರೆಗೆ ಎರಡು ಏರಿದ ನೇರವಾಗ ಗೆರೆಗಳಿದ್ದು; ಇವುಗಳ ನಡುವೆ ಕಾಲುವೆಯಂತಹ ರಚನೆಯಿರುತ್ತದೆ. ಈ ರಚನೆಯನ್ನು ‘ಒಲವುಕ’ (Philtrum) (ಗ್ರೀಕ್ ನುಡಿಯ philtron ಪದದಿಂದ philtrum ಹುಟ್ಟಿಕೊಂಡಿದೆ; philtron ಪದವು ಒಲವು, ಸೊಬಗು, ಮುದ್ದುತನ ಎನ್ನುವ ಹುರುಳನ್ನು ಕೊಡುವುದರಿಂದ, philtrum ಗೆ ಕನ್ನಡದಲ್ಲಿ ‘ಒಲವುಕ’ ಎಂದು ಹೇಳಬಹುದು.)

ನಾಲಿಗೆ:

ನಾಲಿಗೆಯು ಬಾಯಿ ಮತ್ತು ಬಾಯ್ಗಂಟಲುಗಳಿಗೆ (oropharynx) ಚಾಚಿಕೊಂಡಿರುತ್ತದೆ. ನಾಲಿಗೆ ತುಂಬಾ ಸುಲಬವಾಗಿ ಹಲವು ದಿಕ್ಕುಗಳಲ್ಲಿ ಬಾಗುವ ಮತ್ತು ಹಲವು ಬಗೆಯ ರಚನೆಯನ್ನು ಹೊಂದುವ ಅಳವನ್ನು ಹೊಂದಿದೆ. ರುಚಿಯನ್ನು ಗುರುತಿಸುವುದರ ಜೊತೆಗೆ ಉಲಿಯಲು, ಆಹಾರವನ್ನು ಜಗಿಯಲು, ನುಂಗಲು ಮತ್ತು ಹಲ್ಲುಗಳನ್ನು ಚೊಕ್ಕವಾಗಿಡಲು ನಾಲಿಗೆ ನೆರವಾಗುತ್ತದೆ.

ಮುನುಶ್ಯರ ನಾಲಿಗೆಯು ಕಟ್ಟಿನ ಕಂಡದಿಂದ (skeletal muscle) ಮಾಡಲ್ಪಟ್ಟಿದ್ದು, ಈ ಕಂಡದ ಹೊರ ಮಯ್ಯನ್ನು ತೆಳುವಾದ ಲೋಳ್ಪರೆ (mucus membrane) ಮುಚ್ಚಿರುತ್ತದೆ. ನಾಲಿಗೆಯ ಬಾಗಕ್ಕೆ ತಕ್ಕಂತೆ ಲೋಳ್ಪರೆ ಹಲವು ಬಗೆಯ ರಚನೆಯ ಮಾರ್ಪಾಡುಗಳನ್ನು ಹೊಂದಿರುತ್ತದೆ. ಕಂಡದ ನಾರುಗಳು (muscle fibers) ಮೂರು ದಿಕ್ಕುಗಳಲ್ಲಿ ಒಂದರಮೇಲೊಂದು ಅಡ್ಡವಾಗಿ ಸಾಗುತ್ತವೆ ಹಾಗು ಈ ನಾರುಗಳು ಕಂತೆಗಳಂತಿದ್ದು (muscle bundle), ಅವುಗಳನ್ನು ಕೂಡಿಸುವ ಗೂಡುಕಟ್ಟು (connective tissue) ಬೇರ್ಪಡಿಸಿರುತ್ತದೆ. ಅಡಿಲೋಳ್ಪರೆಯ (lamina propria) ಕೂಡಿಸುವ ಗೂಡುಕಟ್ಟುಗಳು ಕಂಡಗಳ ಕಂತೆಗಳ (muscle bundle) ನಡುವೆ ತೂರುವುದರಿಂದ, ಲೋಳ್ಪರೆಯು ಗಟ್ಟಿಯಾಗಿ ಕಂಡಕ್ಕೆ ಅಂಟಿಕೊಂಡಿರುತ್ತದೆ. ನಾಲಿಗೆಯ ಅಡಿಯ ಹೊರಮಯ್ (ventral surface) ಲೋಳ್ಪರೆ ನುಣುಪಾಗಿರುತ್ತದೆ. ನಾಲಿಗೆಯ ಮೇಲಿನ ಹೊರಮಯ್ (dorsal surface) ಲೋಳ್ಪರೆಯು ಅಂಕುಡೊಂಕಾಗಿದ್ದು, ಹಲವು ಬಗೆಯ ನಾಲಿಗೆಯ-ಮುಂಚಾಚುಗಳನ್ನು (lingual papillae) ಹೊಂದಿರುತ್ತದೆ.

chitra 3ನಾಲಿಗೆಯ ಮೇಲಿನ ಹಿಂಬದಿಯು V-ರಚನೆಯ ಗೆರೆಯನ್ನು ಹೊಂದಿರುತ್ತದೆ; ಈ ಗೆರೆಯನ್ನು ಕೊನೆ-ಗೆರೆ (terminal sulcus) ಎಂದು ಕರೆಯಲಾಗುತ್ತದೆ. ಈ ಗೆರೆಯು ನಾಲಿಗೆಯನ್ನು ಮುಂತುಂಡು ಮತ್ತು ಹಿಂತುಂಡುಗಳಾಗಿ ಪಾಲುಗೊಳಿಸುತ್ತದೆ. ಹಿಂತುಂಡು ನಾಲಿಗೆಯು ಬೇರನ್ನು ಹೊಂದಿದ್ದು, ಇದರ ಹೊರಮಯ್ ನಾಲಿಗೆಯ ಬಾಯ್ತೆಪೆಗಳನ್ನು (lingual tonsils) ಹೊಂದಿರುವ ಹಲವು ಉಬ್ಬುಗಳನ್ನು ಕಾಣಬಹುದು. ನಾಲಗೆಲ್ಲು (hyoid bone) ಮತ್ತು ದವಡೆಗಳ ನಡುವೆ ಇರುವ ನಾಲಿಗೆಯ ಬೇರು, ನಾಲಿಗೆಯನ್ನು ಬಾಯಿಯ ನೆಲಕ್ಕೆ ಅಂಟಿಸುತ್ತದೆ. ನಾಲಿಗೆಯ ಈ ಬಾಗವು ಅಲುಗಾಡುವುದಿಲ್ಲ.

ಮುಂತುಂಡಿನಲ್ಲಿ ನಾಲಿಗೆಯ ಮಯ್ ಮತ್ತು ನಾಲಿಗೆಯ ತುದಿ ಇರುತ್ತವೆ. ಕಚ್ಚಲ್ಲುಗಳಿಗೆ (incisors) ಒರಗಿಕೊಳ್ಳುವ ನಾಲಿಗೆಯ ತುದಿ ತುಂಬಾ ಸುಲಬವಾಗಿ ಅಲುಗಾಡಬಲ್ಲದು. ನಾಲಿಗೆಯ ಮಯ್, ಅಲುಗಾಡುವ ಅಳವನ್ನು ಹೊಂದಿರುತ್ತದೆ. ಇದರ ಹೊರ ಮಯ್ ಮೇಲೆ ಕಂಡುಬರುವ ಮುಂಚಾಚುಗಳು, ಹೊರ ಮಯ್ಗೆ ಒರಟುತನವನ್ನು ಕೊಡುತ್ತವೆ.

ನಾಲಿಗೆಯಲ್ಲಿ ನಾಲ್ಕು ಬಗೆಯ ನಾಲಿಗೆ ಮುಂಚಾಚುಗಳಿರುತ್ತವೆ. ಅವುಗಳ ವಿವರ ಈ ಕೆಳಗಿನಂತಿದೆ,

chitra 41) ನಾರ್-ಬಗೆ ಮುಂಚಾಚು (Filiform papillae): ನಾಲಿಗೆಯ ಮೇಲೆ ಹೇರಳವಾಗಿ ಇರುವ ಇವು, ಉದ್ದನೆಯ ಬೆಣೆಗಳಂತೆ ಕಾಣುತ್ತವೆ. ನಾರ್-ಬಗೆಯ ಮುಂಚಾಚು ಹೆಚ್ಚಿನ ಮಟ್ಟದ ಕೊಂಪರೆ ಮುನ್ನನ್ನು (keratin protein) ಹೊಂದಿರುವುದರಿಂದ, ಅವುಗಳ ಹೊರಮಯ್ ಬೂದು ಇಲ್ಲವೆ ಬಿಳಿಯ ಬಣ್ಣದಂತೆ ಕಾಣುತ್ತವೆ. ಸಾಮಾನ್ಯವಾಗಿ ಮುಂಚಾಚುಗಳ ಲೋಳ್ಪರೆಯಲ್ಲಿ ರುಚಿಮೊಗ್ಗುಗಳು (taste buds) ಹುದುಗಿರುತ್ತವೆ. ಆದರೆ ನಾರ್-ಬಗೆ ಮುಂಚಾಚಿನಲ್ಲಿ ರುಚಿಮೊಗ್ಗುಗಳು ಇರುವುದಿಲ್ಲ. ನಾರ್-ಬಗೆ ಮುಂಚಾಚು ನಾಲಿಗೆಗೆ ಒರಟುತನವನ್ನು ಕೊಡುತ್ತದೆ; ಈ ಒರಟುತನವು ಜಗಿಯುವಾಗ, ಆಹಾರವನ್ನು ಹಿಡಿದಿಡುವ ಮತ್ತು ಸಾಗಿಸುವಲ್ಲಿ ನೆರವಾಗುತ್ತದೆ.

2) ಅಣಬೆ-ಬಗೆ ಮುಂಚಾಚು (fungiform papillae): ಎಣಿಕೆಯಲ್ಲಿ  ಕಡಿಮೆ ಇರುವ ಇವು ತುಂಬಾ ಕಡಿಮೆ ಮಟ್ಟದಲ್ಲಿ ಕೊಂಪರೆ ಮುನ್ನನ್ನು ಹೊಂದಿರುತ್ತವೆ. ಅಣಬೆಯಂತೆ ಕಾಣುವ ಅಣಬೆ-ಬಗೆ ಮುಂಚಾಚುಗಳು ನಡುವಿನಲ್ಲಿ ಕೂಡಿಸುವ ಗೂಡುಕಟ್ಟಿನ ತಿರುಳಿದ್ದರೆ, ಹೊರಗಿನ ಲೋಳ್ಪರೆಯಲ್ಲಿ ರುಚಿಮೊಗ್ಗುಗಳು ಹರಡಿಕೊಂಡಿರುತ್ತವೆ.

3) ಎಲೆ-ಬಗೆ ಮುಂಚಾಚು (foliate papillae): ನಾಲಿಗೆಯ ಅಂಚುಗಳಲ್ಲಿ ಸಮಾನ ಅಂತರದಲ್ಲಿ ಉಬ್ಬು-ತಗ್ಗುಗಳನ್ನು ಮಾಡುವ ಈ ಮುಂಚಾಚುಗಳು ಅಶ್ಟಾಗಿ ಹಬ್ಬಿಕೊಂಡಿರುವುದಿಲ್ಲ.

4) ಬಟ್ಟಲು ಮುಂಚಾಚು (vallate papillae): ಉಳಿದ ಮೂರು ಬಗೆಯ ಮುಂಚಾಚುಗಳಿಗೆ ಹೋಲಿಸಿದರೆ, ಇವುಗಳ ಎಣಿಕೆ ಕಡಿಮೆ ಇದ್ದರೂ, ಇವುಗಳ ಗಾತ್ರ ದೊಡ್ಡದಿರುತ್ತದೆ. ಮನುಶ್ಯರಲ್ಲಿ ಕಂಡುಬರುವ ರುಚಿಮೊಗ್ಗುಗಳನ್ನು ಒಟ್ಟಾರೆ ಲೆಕ್ಕಕ್ಕೆ ತೆಗೆದುಕೊಂಡರೆ, 50% ಕ್ಕೂ ಹೆಚ್ಚು ರುಚಿಮೊಗ್ಗುಗಳು, ಬಟ್ಟಲು ಮುಂಚಾಚಿನಲ್ಲಿ ಕಂಡುಬರುತ್ತದೆ. ಬಟ್ಟಲು ಮುಂಚಾಚುಗಳ ಅಡ್ಡಳತೆ 1-3 ಮಿಲಿಮೀಟರ್ ಇರುತ್ತದೆ. V-ರಚನೆಯ ಕೊನೆ-ಗೆರೆಯ ಮುಂಬದಿಯಲ್ಲಿ 7-12 ಬಟ್ಟಲು ಮುಂಚಾಚುಗಳು ಇರುತ್ತವೆ. ಜೊಲ್ಲು-ಸುರಿಕದ ಕೊಳವೆಗಳು ಜೊಲ್ಲನ್ನು ಬಟ್ಟಲು ಮುಂಚಾಚುಗಳ ಸುತ್ತಲು ಇರುವು ಸಂದುಗಳಿಗೆ ಸುರಿಸುತ್ತವೆ.

ಈ ಬಗೆಯ ಅಗಳಿನ (moat) ಏರ‍್ಪಾಟು, ಬಟ್ಟಲು ಮುಂಚಾಚುಗಳ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ರುಚಿಮೊಗ್ಗುಗಳ ಮೇಲೆ ತ ಡೆಯಿಲ್ಲದೆ ಹರಿಕಗಳನ್ನು ಸುರಿಸಲು ನೆರವಾಗುತ್ತದೆ. ಈ ಬಗೆಯ ಹರಿಕದ ಸುರಿಸುವಿಕೆ ರುಚಿಮೊಗ್ಗುಗಳ ಸುತ್ತಲೂ ಸೇರಿಕೊಳ್ಳುವ ಆಹಾರದ ಕಿರುತುಣುಕುಗಳನ್ನು ಜಾಡಿಸಿ, ರುಚಿಮೊಗ್ಗುಗಳು ಹೊಸ ರುಚಿಯರಿವಿಗೆ (sense of taste/ gustatory stimuli) ತೆರೆದುಕೊಳ್ಳಲು ನೆರವಾಗುತ್ತದೆ. ಜೊಲ್ಲಿನ ಹರಿಕದಲ್ಲಿ ಇರುವ ಕೊಬ್ಬಳಿಕದೊಳೆ (Lipase), ರುಚಿಮೊಗ್ಗುಗಳ ಮೇಲೆ ನೀರಂಜುಕದ (hydrophobic) ಪಸೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ನೀರಂಜುಕದ ಪಸೆ ರುಚಿಮೊಗ್ಗುಗಳನ್ನು ಸುತ್ತುವರೆದರೆ, ಅದು ರುಚಿಮೊಗ್ಗುಗಳು ರುಚಿಯರಿವಿಕೆ ತೆರೆದುಕೊಳ್ಳುವುದನ್ನು ತಡೆಯುತ್ತದೆ.

ರುಚಿಮೊಗ್ಗುಗಳು (taste buds):

ರುಚಿಮೊಗ್ಗುಗಳು ನಾಲಿಗೆಯ ಮೇಲಲ್ಲದೇ ಬಾಯಿಯ ಉಳಿದ ಕಡೆಗಳಲ್ಲೂ ಇರುತ್ತವೆ. ನಾಲಿಗೆ ಮತ್ತು ಬಾಯಿಯ ಹಲಹದಿ ಮೇಲ್ಪರೆಯಲ್ಲಿ (stratified epithelium) ಹುದುಗಿರುವ ರುಚಿಮೊಗ್ಗುಗಳು ಮೊಟ್ಟೆಯಂತಹ ರಚನೆಯನ್ನು ಹೊಂದಿದ್ದು, 50-75 ಗೂಡುಗಳಿಂದ ಮಾಡಲ್ಪಟ್ಟಿರುತ್ತವೆ. ರುಚಿಮೊಗ್ಗಿನ ಹೆಚ್ಚಿನ ಗೂಡುಗಳು ರುಚಿಗೂಡುಗಳಾಗಿದ್ದು (taste cells), ಈ ರುಚಿಗೂಡುಗಳು ಏಳರಿಂದ ಹತ್ತು ದಿನಗಳ ಬಾಳ್ವಿಕೆಯನ್ನು (life span) ಹೊಂದಿರುತ್ತದೆ. ರುಚಿಮೊಗ್ಗುಗಳಲ್ಲಿ ಕಂಡುಬರುವ ಉಳಿದ ಬಗೆಯ ಗೂಡುಗಳೆಂದರೆ ತೆಳ್ಳನೆಯ ನೆರವಿನ ಗೂಡುಗಳು  (supportive cells) ಮತ್ತು ಅಡಿ ಗೂಡುಗಳು (basal cells).

chitra 5ರುಚಿಮೊಗ್ಗುಗಳು ಅಡಿ ಪರೆಯ (basal lamina) ಮೇಲೆ ನೆಲೆಸಿರುತ್ತವೆ. ತೊರೆ ಅರಿವಿನ ನರಗಳು (afferent sensory nerve) ಅಡಿ ಪರೆಯನ್ನು ತೂರಿಕೊಂಡು ರುಚಿಗೂಡುಗಳೊಡನೆ ಬೆಸೆದುಕೊಂಡಿರುತ್ತವೆ. ರುಚಿಗೂಡುಗಳ ಮೇಲ್ ತುದಿಯಲ್ಲಿ ಮಿನ್ಗೊಂಡೆಗಳು (microvilli) ರುಚಿ-ಗಿಂಡಿಗಳ ಮೂಲಕ ಹೊರ ಚಾಚಿಕೊಂಡಿರುತ್ತವೆ. ಜೊಲ್ಲಿನಲ್ಲಿ ಕರಗಿದ ರುಚಿಕಗಳು (tastants), ಮಿನ್ಗೊಂಡೆಗಳನ್ನು ತಾಕಿದಾಗ, ರುಚಿಗೂಡುಗಳ ಮೇಲಿರುವ ರುಚಿ ಪಡೆಕಗಳೊಡನೆ (taste receptors) ಒಡನಾಟವನ್ನು (interaction) ಆರಂಬಿಸುತ್ತವೆ.

ರುಚಿಗಳ ಬಗೆ:  

ರುಚಿಮೊಗ್ಗುಗಳು ಅಯ್ದು ಬಗೆಯ ರುಚಿಕಗಳನ್ನು ಗುರುತಿಸುವ ಅಳವನ್ನು ಹೊಂದಿವೆ. ಅವು ಯಾವುವೆಂದರೆ ಉಪ್ಪು, ಹುಳಿ, ಸಿಹಿ, ಕಹಿ ಮತ್ತು ಇನಿ-ಸವಿ (Umami). ಉಪ್ಪು ಮತ್ತು ಹುಳಿ ರುಚಿಗಳನ್ನು ಮಿಂತುಣುಕುಗಳು (ions) ಉಂಟುಮಾಡುತ್ತವೆ. ಸಿಹಿ, ಕಹಿ ಮತ್ತು ಇನಿ-ಸವಿ ರುಚಿಗಳನ್ನು G-ಮುನ್ನು-ಜೋಡಿಸಿದ ಪಡೆಕಗಳು (G-protein-coupled receptors) ಹೊಂದಿಸುತ್ತವೆ.

chitra 6(ಮುಂದುವರೆಯುತ್ತದೆ…)

(ಮಾಹಿತಿ ಮತ್ತು ಚಿತ್ರ ಸೆಲೆಗಳು: histonano.com/books, sunvalleygroup.co.za, emedicine.medscape.com, healthhype.com, thesalience.wordpress.com)

Bookmark the permalink.

One Comment

  1. Pingback: meritking

Comments are closed