ವಿಜ್ಞಾನದಲ್ಲಿ ಒಲವು ಮೂಡಿಸುವುದು ಹೇಗೆ? – ಒಂದು ಅನುಭವ

– ಪ್ರಶಾಂತ ಸೊರಟೂರ.

ವಿಜ್ಞಾನದ ಉಪಯೋಗಗಳನ್ನು ನಾವು ಪ್ರತಿದಿನ ಪಡೆಯುತ್ತಿದ್ದರೂ, ವಿಜ್ಞಾನ ಹೊಮ್ಮಿಸಿದ ತಂತ್ರಜ್ಞಾನಗಳ ಬಳಕೆಯಿಲ್ಲದೇ ಇಂದು ಬದುಕು ಕಷ್ಟ ಅಂತಾ ಅನುಭವಕ್ಕೆ ಬಂದರೂ, ಅದರ ಕಲಿಕೆಯಲ್ಲಿ ನಾವು ಇನ್ನೂ ಹಿಂದೇಟು ಹಾಕುತ್ತೇವೆ. ಅದರಲ್ಲೂ ಶಾಲೆಯಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವೆಂದರೆ ಕಬ್ಬಿಣದ ಕಡಲೆಯೇ ಸರಿ! “ಅದ್ಯಾಕೇ ಈ ವಿಷಯಗಳು ಇವೆ?” ಅಂತಾ ಹಲವು ಮಕ್ಕಳಿಗೆ ಅನ್ನಿಸುತ್ತಿರುವುದನ್ನು ಕಾಣಬಹುದು. ಪದವಿಯ ಹಂತಕ್ಕೆ ಹೋಗುವ ವಿದ್ಯಾರ್ಥಿಗಳೂ ಕೂಡ ಕಾಟಾಚಾರಕ್ಕೆ ಇಲ್ಲವೇ ತಂತ್ರಜ್ಞಾನ ಕಲಿಕೆಯಿಲ್ಲದೆ ಉದ್ಯೋಗ ಸಿಗುವುದಿಲ್ಲ ಅನ್ನುವ ಕಾರಣಕ್ಕಾಗಿಯೇ ಕಲಿಯುತ್ತಾರೆ ಹೊರತು ನಿಜವಾಗಿ ಅದರಲ್ಲಿ ಆಸಕ್ತಿ ಇಟ್ಟುಕೊಂಡು ಕಲಿಯುವುದು ತುಂಬಾ ಕಡಿಮೆ.

“ವಿಜ್ಞಾನದಲ್ಲಿ ಯಾಕೆ ಮಕ್ಕಳಿಗೆ ಅಷ್ಟು ಆಸಕ್ತಿ ಹುಟ್ಟುವುದಿಲ್ಲ” ಅನ್ನುವುದಕ್ಕೆ ಹಲವು ಕಾರಣಗಳಿರಬಹುದು. ಈ ನಿಟ್ಟಿನಲ್ಲಿ ಹಲವಾರು ಶಾಲೆಯ ಮಕ್ಕಳೊಂದಿಗೆ ಒಡನಾಡಿದಾಗ ನನಗಾದ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಮುನ್ನೋಟ, ಕನ್ನಡಿಗರ ಏಳಿಗೆಗೆ ಸಂಬಂಧಿಸಿದ ಪುಸ್ತಕಗಳಿಗೆ ಮೀಸಲಾದ ಮಳಿಗೆಯಾಗಿದ್ದು, ಅದರ ಜತೆಗೆ ಕನ್ನಡ ಮಾಧ್ಯಮದ ಶಾಲೆಗಳಿಗೆ ಭೇಟಿಕೊಟ್ಟು ದಾನಿಗಳ ನೆರವಿನಿಂದ ಮಕ್ಕಳಿಗೆ ವಿಜ್ಞಾನದ ಪುಸ್ತಕಗಳನ್ನು ಹಂಚುವ ಕೆಲಸವನ್ನು ಮಾಡುತ್ತಿದೆ. ಕನ್ನಡದಲ್ಲಿ ವಿಜ್ಞಾನದ ಬರಹಗಳನ್ನು ಮೂಡಿಸುತ್ತಿರುವ ನಮ್ಮ ಅರಿಮೆ ತಂಡ, ಮುನ್ನೋಟ ತಂಡದೊಂದಿಗೆ ಸೇರಿ ಹಲವು ಶಾಲೆಗಳಿಗೆ ಭೇಟಿಕೊಟ್ಟಾಗ ಆಗಿರುವ ಅನುಭವದ, ಚರ್ಚೆಯ ಸಾರಾಂಶವನ್ನು ಇಲ್ಲಿ ಬರೆದಿರುವೆ.

FB_IMG_1530981351900

ಶಾಲೆಯ ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಮಾತನಾಡಲು ಶುರು ಮಾಡಿದಾಗ “ಯಾರಿಗೆ ವಿಜ್ಞಾನ ಇಷ್ಟ?” ಅನ್ನುವ ಪ್ರಶ್ನೆ ಕೇಳಿದಾಗ ಹೆಚ್ಚು ಕಡಿಮೆ ಎಲ್ಲ ಮಕ್ಕಳೂ “ನನಗಿಷ್ಟ” ಅನ್ನುತ್ತಾರೆ. “ಇಷ್ಟ ಇಲ್ಲ” ಅಂದರೆ ಶಿಕ್ಷಕರು ಬಯ್ಯಬಹುದು ಇಲ್ಲವೇ ಗುಂಪಿನಲ್ಲಿ ಎಲ್ಲರೂ “ಇಷ್ಟ” ಅನ್ನುತ್ತಿದ್ದಾರೆ ನಾನು ಹೇಗೆ “ಇಲ್ಲ” ಅನ್ನಲಿ ಅನ್ನುವ ಅಳುಕು ಮಕ್ಕಳಲ್ಲಿ ಇರುವುದು ಗಮನಕ್ಕೆ ಬಂದಿತು. ಮುಂದಿನ ಪ್ರಶ್ನೆಯಾಗಿ “ವಿಜ್ಞಾನ ಯಾಕೆ ಇಷ್ಟ?” ಅಂತಾ ಕೇಳಿದಾಗ, ಹೆಚ್ಚಿನ ಮಕ್ಕಳು “ಅದರಲ್ಲಿ ಪ್ರಯೋಗಗಳಿರುತ್ತವೆ ಅದಕ್ಕೆ ಇಷ್ಟ” ಎಂದು ಹೇಳುತ್ತಾರೆ.

ಮುಂದುವರೆಯುತ್ತಾ, “ಹಾಗಾದರೆ ವಿಜ್ಞಾನ ಅಂದರೇನು? ಯಾಕೆ ಅದನ್ನು ಕಲಿಯಬೇಕು?” ಅಂತಾ ಕೇಳಿದಾಗ ಹೆಚ್ಚಿನ ಮಕ್ಕಳು ನಿಜವಾಗಿ ಅವಕ್ಕಾಗಿ ಉತ್ತರಕ್ಕೆ ತಡಕಾಡುತ್ತಿರುವುದನ್ನು ಕಂಡೆ. ಕೆಲವು ಮಕ್ಕಳು ಈ ಪ್ರಶ್ನೆಗೆ ಉತ್ತರವಾಗಿ ಜೀವಕೋಶಗಳು, ಪರಿಸರ ಮುಂತಾದ ಪಠ್ಯಪುಸ್ತಗಳಲ್ಲಿರುವ ಪಾಠದ ಹೆಸರಗಳನ್ನು ಹೇಳಿದರು. ಕೆಲವೇ ಕೆಲವು ಮಕ್ಕಳು “ವಿಜ್ಞಾನ ಕಲಿತರೆ ನಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು” ಅನ್ನುವಂತಹ ಉತ್ತರಗಳನ್ನು ನೀಡಿದರು.

ಈ ಮೇಲಿನ ಪ್ರಶ್ನೋತ್ತರಗಳಿಂದ ಕಂಡುಬಂದಿದ್ದೇನೆಂದರೆ,

  • ಹೆಚ್ಚಿನ ಮಕ್ಕಳಿಗೆ “ವಿಜ್ಞಾನ” ಎಂಬುದು ಒಂದು “ಪಠ್ಯಪುಸ್ತಕದ ವಿಷಯ” ಅಷ್ಟೆ.
  • ಪ್ರಯೋಗಗಳ (ಅಂದರೆ ಮಾಡಿನೋಡುವುದರ) ಮೂಲಕ ಹೇಳಿದರೆ ವಿಜ್ಞಾನ ಕಲಿಯುವುದು ಮಕ್ಕಳಿಗೆ ಇಷ್ಟ.

ಮಾತುಕತೆಯ ಮುಂದಿನ ಅಂಗವಾಗಿ ಅವರಿಗೆ ವಿಜ್ಞಾನಿಗಳ ಬದುಕನ್ನು ಚಿಕ್ಕ ಕತೆಗಳ ರೂಪದಲ್ಲಿ ಹೇಳಿದೆ.

  • ಗೆಲಿಲಿಯೋ ಮೊದಲ ಬಾರಿಗೆ ಭೂಮಿಯ ಸುತ್ತ ಗ್ರಹಗಳು ಮತ್ತು ಸೂರ್ಯ ಸುತ್ತುವುದಿಲ್ಲ ಬದಲಾಗಿ ಸೂರ್ಯ ನಡುವಿನಲ್ಲಿದ್ದು ಭೂಮಿ ಸೇರಿದಂತೆ ಉಳಿದ ಗ್ರಹಗಳು ಆತನ ಸುತ್ತ ಸುತ್ತುತ್ತವೆ ಅಂತಾ ಹೇಳಿದ್ದು ಮತ್ತು ಅದಕ್ಕೆ ಸಮಾಜ ಅವರನ್ನು ಹೀಯಾಳಿಸಿದ್ದರ ಬಗ್ಗೆ ಮತ್ತು ಹೀಯಾಳಿಕೆಗೆ ಎದೆಗುಂದದೆ ಗೆಲಿಲಿಯೋ ಮುನ್ನಡೆದುದರ ಕುರಿತಾಗಿಯೂ ಹೇಳಿದೆ.
  • ಅಲೆಕ್ಸಾಂಡರ್ ಗ್ರಾಹಂ ಬೆಲ್ ಅವರು ತಮ್ಮ ತಾಯಿಯ ಕಿವುಡುತನದಿಂದ ನೊಂದು ಸುಮ್ಮನಾಗಿರದೇ ಶಬ್ದ ಮತ್ತು ಅದರ ಸಾಗಾವಿಕೆಯ ಬಗ್ಗೆ ಅಧ್ಯಯನ ನಡೆಸಿದರು. ಇದೇ ಮುಂದೆ ಅವರು ಟೆಲಿಫೋನ್ ಕಂಡುಹಿಡಿಯಲು ಅಡಿಪಾಯವಾಗಿದ್ದರ ಕುರಿತು ತಿಳಿಸಿದೆ.
  • ಶ್ರೀನಿವಾಸ ರಾಮಾನುಜನ್ ತುಂಬಾ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡರೂ, ಅವರು ಗಣಿತದಲ್ಲಿ ಮಾಡಿದ ಮೇರುಮಟ್ಟದ ಕೆಲಸದ ಬಗ್ಗೆ ಹೇಳಿದೆ.
  • ವಿಶ್ವೇಶ್ವರಯ್ಯನವರು ಜೋಗದಿಂದ ದುಮ್ಮಿಕ್ಕುವ ನೀರು ಕಂಡು ಬೇರೆಯವರಂತೆ ಬರೀ ಮುದಗೊಳ್ಳದೇ ಅದರಲ್ಲಿ ಅಡಗಿರುವ ಶಕ್ತಿಯ ಬಳಕೆಯ ಬಗ್ಗೆ ಮುಂದಾಗಿದ್ದರ ಕುರಿತು ಹೇಳಿದೆ.

ಕತೆಯ ಜತೆಗೆ ಆಯಾ ವಿಜ್ಞಾನಿಗಳ ಚಿತ್ರ ಗುರುತಿಸಲು ಇಲ್ಲವೇ ಅವರು ಮಾಡಿದ ಕೆಲಸದ ಬಗ್ಗೆ ಪ್ರಶ್ನೆ ಕೇಳಿ ಅದಕ್ಕೆ ಸರಿಯಾಗಿ ಉತ್ತರಿಸಿದ ಮಕ್ಕಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಿದೆ. ಕತೆ ಮತ್ತು ಬಹುಮಾನ ಮಕ್ಕಳಿಗೆ ಇಷ್ಟವಾದವು ಅನ್ನಿಸಿತು. ವಿಜ್ಞಾನಿಗಳು ತಮ್ಮ ಜೀವನದುದ್ದಕ್ಕೂ ಹಲವು ಕಷ್ಟಗಳನ್ನು ಎದುರಿಸಿದರೂ ಹೇಗೆ ಸಾಧನೆ ಮಾಡಿದರು ಅನ್ನುವುದನ್ನು ಮನವರಿಕೆ ಮಾಡುವ ಉದ್ದೇಶದಿಂದ ಮಾತುಕತೆಯಲ್ಲಿ ಈ ಮೇಲಿನ ಬಗೆ ಅಳವಡಿಸಿಕೊಂಡೆ.

ಮುಂದುವರೆಯುತ್ತಾ, ಕಣ್ಕಟ್ಟಿನ ಮಾದರಿಗಳಲ್ಲಿ ಒಂದಾದ “ತಿರುಗುವ ಹಾವುಗಳು” (Rotating Snakes) ಚಿತ್ರವನ್ನು ಮಕ್ಕಳಿಗೆ ತೋರಿಸಿದಾಗ, ಚಿತ್ರಗಳು ತಿರುಗುತ್ತಿರುವಂತೆ ಕಾಣುವುದು ಆದರೆ ನಿಜವಾಗಿ ಅವು ತಿರುಗದೇ ನಮ್ಮ ಮಿದುಳಿಗೆ ಉಂಟಾಗುವ “ಅನಿಸಿಕೆ” ಎಂದು ತಿಳಿಸಿದೆ. ಹಾಗೆನೇ ವಿಜ್ಞಾನ ಕೂಡ ಬರೀ ಕಣ್ಣಿಗೆ ಕಾಣುವುದನ್ನು ನಿಜವೆಂದು ಬಗೆಯದೇ ವಿಷಯದ ಆಳಕ್ಕೆ ಇಳಿಯಲು ನೆರವಾಗುತ್ತದೆ ಎಂದು ಕೊಂಡಿ ಬೆಸೆಯಲು ಪ್ರಯತ್ನಿಸಿದೆ.

Rotating Sankes

ಲಕ್ಷಗಟ್ಟಲೇ ವರುಷಗಳಿಂದ ಮನುಷ್ಯ ಹಂತ ಹಂತವಾಗಿ ಹೇಗೆ ತನ್ನ ಅರಿವನ್ನು ಹಿಗ್ಗಿಸಿಕೊಳ್ಳುತ್ತಾ ಬಂದಿದ್ದಾನೆ ಎನ್ನುವುದನ್ನು ಕೆಳಗಿನ ಚಿತ್ರದ ಮೂಲಕ ಚರ್ಚಿಸಿದೆ. ಸುತ್ತಣವನ್ನು ಅರಿಯದೇ ಹಾಗೆಯೇ ಇದ್ದು ಬಿಟ್ಟಿದ್ದರೆ ಮನುಷ್ಯ ಕೂಡ ಇತರೆ ಪ್ರಾಣಿಗಳಂತೆ ಆಗಿ ಬಿಡುತ್ತಿದ್ದ. ಚಿಕ್ಕ-ಚಿಕ್ಕದಾಗಿ ಎಡೆಬಿಡದೇ ಇಟ್ಟ ಕಲಿಕೆಯ ಹೆಜ್ಜೆಗಳು ಇಂದು ನಮ್ಮ ನೆರವಿಗೆ ಬಂದಿವೆ. ಹಾಗಾಗಿ ವಿಜ್ಞಾನದಲ್ಲಿ ಪ್ರತಿಯೊಬ್ಬರ ಯೋಚನೆ, ತೊಡಗುವಿಕೆ ಮನುಕುಲಕ್ಕೆ ಬೇಕಾಗಿದೆಯೆಂದೆ. (ಮಕ್ಕಳೆಡೆಗೆ ಕೈ ತೋರಿಸುತ್ತಾ)

Evolution_Science

ಮಕ್ಕಳನ್ನು ಮಾತುಕತೆಯಲ್ಲಿ ಇನ್ನಷ್ಟು ತೊಡಗಿಸಲು ಮತ್ತು ನಿಜವಾಗಿ ವಿಜ್ಞಾನ ಎಂದರೇನು ಅಂತಾ ಮನವರಿಕೆ ಮಾಡಲು ಏನು? ಏಕೆ? ಹೇಗೆ?” ಅನ್ನುವ ಚಟುವಟಿಕೆಯೊಂದನ್ನು ರೂಪಿಸಿದೆ. ಮಕ್ಕಳಿಗೆ ಇಷ್ಟವಾಗುವಂತೆ ಮಲ್ಲಿಗೆ, ಸಂಪಿಗೆ, ಗುಲಾಬಿ, ತಾವರೆ ಎಂಬ ಹೆಸರು ಆಯ್ದುಕೊಂಡು ಮೂರು-ನಾಲ್ಕು ತಂಡಗಳನ್ನು ಮಾಡಿದೆ.

FB_IMG_1530981332618

ಈ ಚಟುವಟಿಕೆಯಲ್ಲಿ ಪ್ರತಿಯೊಂದು ತಂಡ ಮೂರು ಪ್ರಶ್ನೆಗಳನ್ನು ಕೇಳಬೇಕು. ಆ ಪ್ರಶ್ನೆಗಳು ಹೇಗಿರಬೇಕೆಂದರೆ,

– ಸುತ್ತಮುತ್ತ ಕಾಣುವ ಏನೇ ಕುತೂಹಲ, ಅಚ್ಚರಿಗಳನ್ನು ಹುಟ್ಟಿಸಿದ ಪ್ರಶ್ನೆಗಳಾಗಿರಬೇಕು.

– ಕೇಳುವ ಪ್ರಶ್ನೆಗಳು ಅವರ ಅನುಭವಗಳಾಗಿರಬೇಕು ಹೊರತು ಪಠ್ಯಪುಸ್ತಕಗಳಿಂದ ಎತ್ತುಕೊಂಡಿದ್ದು ಆಗಿರಬಾರದು.

– ಕೇಳುವ ಪ್ರಶ್ನೆಗಳಿಗೆ ಉತ್ತರ ಗೊತ್ತಿರಬೇಕಂತಿಲ್ಲ, ಬರೀ ಚಂದದ ಪ್ರಶ್ನೆಗಳನ್ನು ಕೇಳಿದರೆ ಸಾಕು.

ಪ್ರಶ್ನೆಗಳನ್ನು ಕಲೆಹಾಕಲು 10 ನಿಮಿಷಗಳ ಸಮಯ ಗೊತ್ತುಪಡಿಸಿದೆ.

ಚಟುವಟಿಕೆ ಶುರು ಮಾಡುತ್ತಿರುವಂತೆ ಕೆಲವು ಮಕ್ಕಳು ಗುನುಗುಟ್ಟುತ್ತಾ ಕುಳಿತರು ಇನ್ನು ಕೆಲವು ಮಕ್ಕಳು ಬೇರೆಯ ಮಕ್ಕಳೊಂದಿಗೆ ಬೆರೆಯದೇ ಒಬ್ಬಂಟಿಯಾಗಿ ಕುಳಿತುಕೊಂಡಿದ್ದರು. ಚಟುವಟಿಕೆಯ ಬಗ್ಗೆ ಇನ್ನಷ್ಟು ತಿಳಿಸಲು,

“ನೋಡಿ ಮಕ್ಕಳೇ ಪ್ರತಿದಿನ ಬೆಳಿಗ್ಗೆ ಎದ್ದಾಗಿನಿಂದ ತಿಂಡಿ ತಿಂದು, ಶಾಲೆಗೆ ಬಂದು ಪಾಠ ಓದಿ, ಊಟ ಮಾಡಿ, ಆಟವಾಡಿ, ಸಂಜೆ ಮನೆಗೆಲಸ ಮಾಡಿ, ರಾತ್ರಿ ಊಟ ಮಾಡಿ ಮಲಗುವವರೆಗೂ ಹಲವಾರು ವಿಷಯಗಳು ನಿಮಗೆ ಕಂಡಿರುತ್ತವೆ. ಕೆಲವು ವಿಷಯಗಳನ್ನು ನಿಮ್ಮನ್ನು ಕುತೂಹಲಕ್ಕೆ ಈಡು ಮಾಡಿರಬಹುದು. ಉದಾ: ನಾವೇಕೆ ನಿದ್ದೆ ಮಾಡುತ್ತೇವೆ? ಎಲೆಗಳು ಹಸಿರಾಗೇಕೆ ಇರುತ್ತವೆ? ಮಣ್ಣು ಹೇಗೆ ಉಂಟಾಯಿತು? ನೀರಡಿಕೆ ಏಕೆ ಆಗುತ್ತದೆ? ಮುಂತಾದ ಕುತೂಹಲದ ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟಿರಬಹುದು. ಅಂತಹ ಪ್ರಶ್ನೆಗಳನ್ನು ಕೇಳುವುದೇ ಇಂದಿನ ಆಟ. ಹಾಗಾಗಿ ಪಠ್ಯಪುಸ್ತಕಗಳನ್ನು ಪಕ್ಕಕ್ಕಿಟ್ಟು ನಿಮ್ಮ ಸುತ್ತಮುತ್ತಲಿನಲ್ಲಿ ಕಂಡುಬಂದ ಅಚ್ಚರಿಯ ವಿಷಯಗಳ ಬಗ್ಗೆ ಗಮನಿಸಿ”

ಅಂದಾಗ, ಮಕ್ಕಳು ಒಗ್ಗೂಡಿ ಪ್ರಶ್ನೆಗಳನ್ನು ಕಲೆಹಾಕಲು ಮುಂದಾದರು. “ಪಠ್ಯಪುಸ್ತಕದಾಚೆಗೆ, ಎಷ್ಟೇ ಚಿಕ್ಕದಾದ, ಸುಲಭವೆನಿಸುವ ಪ್ರಶ್ನೆಗಳನ್ನು ಕೇಳಬಹುದು” ಅಂದಾಗ ಅವರಲ್ಲಿ ಹುರುಪು ಹೆಚ್ಚಿದ್ದನ್ನು ಗಮನಿಸಿದೆ. ಪ್ರತಿಯೊಂದು ತಂಡದ ಪರವಾಗಿ ಯಾರಾದರೂ ಒಬ್ಬರು ಪ್ರಶ್ನೆ ಕಲೆಹಾಕಿ, ಕೇಳಲು ಹೇಳಿದೆ.

ಪ್ರಶ್ನೆ ಕಲೆಹಾಕುವಾಗ ಹೆಚ್ಚಿನ ಮಕ್ಕಳು ಆ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕಂಡಿತು. ಗೊತ್ತುಪಡಿಸಿದ ಹೊತ್ತು ಮುಗಿಯುತ್ತಿದ್ದಂತೆ ಹಲವು ಮಕ್ಕಳು ಕೈ ಎತ್ತಿ, “ನಾನು ಕೇಳುತ್ತೇನೆ…ನಾನು ಕೇಳುತ್ತೇನೆ” ಅಂತಾ ಮುಂದಾದರು.

IMG-20180804-WA0002

ಮಕ್ಕಳು ಕೇಳಿದ ಮೊದಲ ಕೆಲವು ಪ್ರಶ್ನೆಗಳು ಮತ್ತೇ ಪಠ್ಯಪುಸ್ತಕಗಳಿಂದ ಆಯ್ದುಕೊಂಡಿದ್ದು ಆಗಿದ್ದವು. (ಉದಾ: ಜೀವಕೋಶದಲ್ಲಿ ಮೈಟೋಕಾಂಡ್ರಿಯಾದ ಕೆಲಸವೇನು?) ಆದರೆ ಚಟುವಟಿಕೆ ಮುಂದುವರೆದಂತೆ ಅವರಿಗೆ ಇನ್ನಷ್ಟು ಒಳ್ಳೊಳ್ಳೆ ಪ್ರಶ್ನೆಗಳು ಬರಲು ತೊಡಗಿದವು. ಮಕ್ಕಳು ಕೇಳಿದ ಕೆಲವು ಪ್ರಶ್ನೆಗಳನ್ನು ಕೆಳಗೆ ಕೊಟ್ಟಿರುವೆ,

  • ನಾವು ಆಕಳಿಸಿದಾಗ ಕಣ್ಣೀರು ಏಕೆ ಬರುತ್ತದೆ?!
  • ಮನುಷ್ಯ ಸತ್ತ ಕೆಲವು ಗಂಟೆಗಳಲ್ಲಿ ವಾಸನೆ ಏಕೆ ಬರುತ್ತದೆ?! [ಈ ಪ್ರಶ್ನೆ ಕೇಳಿದ ಮಗು ಕೆಲವು ದಿನಗಳ ಮುಂಚೆ ತನ್ನ ಮನೆಯ ಪಕ್ಕ ಯಾರೋ ತೀರಿಹೋದದ್ದನ್ನು ಗಮನಿಸಿತ್ತು]
  • ನಾವು ವರುಷಗಳು ಕಳೆದಂತೆ ಏಕೆ, ಹೇಗೆ ಬೆಳೆಯುತ್ತೇವೆ?!
  • ಈರುಳ್ಳಿ ಹೆಚ್ಚುವಾಗ ಕಣ್ಣೀರು ಏಕೆ ಬರುತ್ತದೆ!? [ಈ ಪ್ರಶ್ನೆ ಕೇಳಿದ ಮಗು ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತದೆ. ಆಗ ಈ ಪ್ರಶ್ನೆ ಬಂದಿತಂತೆ]
  • ನಮ್ಮ ಮೈಯಲ್ಲಿ ರಕ್ತ ಹೇಗೆ ಉಂಟಾಗುತ್ತದೆ?!

ಹೌದು, ಹೌದು ಅನ್ನಿಸುವ ಮೇಲಿನಂತಹ ಪ್ರಶ್ನೆಗಳಲ್ಲದೇ ಮೇಲ್ನೋಟಕ್ಕೆ ಸ್ವಲ್ಪ ತಮಾಶೆ ಅನ್ನಿಸಿದರೂ, ಮಕ್ಕಳ ಎಲ್ಲೆಯಿಲ್ಲದ ಕುತೂಹಲವನ್ನು ತೋರ್ಪಡಿಸುವ ಕೆಳಗಿನ ಪ್ರಶ್ನೆಗಳನ್ನೂ ಕೇಳಿದರು,

  • ಮನುಷ್ಯರು ಮಾತಾಡುತ್ತಾರೆ ಆದರೆ ನಮ್ಮ ಮನೆಯ ಹಸು ಏಕೆ ಮಾತಾಡುವುದಿಲ್ಲ?! [ಈ ಮಗುವಿಗೆ ತಮ್ಮ ಹಸುವಿನ ಕೊಟ್ಟಿಗೆಯಲ್ಲಿ ಈ ಪ್ರಶ್ನೆ ಮೂಡಿತ್ತಂತೆ]
  • ಚುಕ್ಕೆ ಬಾಳೆಹಣ್ಣಿನ ಮೇಲೆ ಚುಕ್ಕೆಗಳಿರುತ್ತವೆ ಆದರೆ ಏಲಕ್ಕಿ ಬಾಳೆಹಣ್ಣಿನಲ್ಲಿ ಏಲಕ್ಕಿ ಏಕಿರುವುದಿಲ್ಲ!?
  • ಬಸ್ಸು, ರೈಲು ಗಾಡಿಗಳಿದ್ದರೂ ವಿಮಾನ ಏಕೆ ಕಂಡುಹಿಡಿದರು?

ಚಟುವಟಿಕೆಯಲ್ಲಿ ಒಳ್ಳೆಯ ಪ್ರಶ್ನೆ ಕೇಳಿ ಗೆದ್ದ ತಂಡದಿಂದ ಶಾಲೆಗೆ ಉಡುಗೊರೆಯಾಗಿ ವಿಜ್ಞಾನದ ಪುಸ್ತಕವೊಂದನ್ನು ಕೊಡಲಾಯಿತು. ಚಟುವಟಿಕೆಯ ಬಳಿಕ ಮನೆಯಲ್ಲಿಯೇ ಮಾಡಬಹುದಾದ ವಿಜ್ಞಾನ ಪ್ರಯೋಗಗಳ ಪುಸ್ತಕಗಳನ್ನು ಎಲ್ಲ ಮಕ್ಕಳಿಗೆ ಕೊಡಲಾಯಿತು.

IMG-20180825-WA0005

ಒಟ್ಟಾರೆಯಾಗಿ ಈ ಚಟುವಟಿಕೆ ಮಕ್ಕಳನ್ನು ತುಂಬಾ ಹುರುಪುಗೊಳಿಸಿದ್ದು ಕಂಡು ಬಂದಿತು. “ಮಕ್ಕಳು ಇಷ್ಟು ಹುರುಪಿನಿಂದ ನಮ್ಮೊಡನೆ ಒಡನಾಡುವುದಿಲ್ಲ. ಪ್ರಶ್ನೆ ಕೇಳುವುದಕ್ಕೆ ಮುಂದೆ ಬರುವುದಿಲ್ಲ” ಅನ್ನುವಂತಹ ಅನುಭವಗಳನ್ನು ಶಾಲೆಯ ಶಿಕ್ಷಕರು ಹಂಚಿಕೊಂಡರು.

ವಿಜ್ಞಾನವೆಂದರೆ ನಮ್ಮ ಸುತ್ತಮುತ್ತಲಿನ ವಿಷಯಗಳ ಸುತ್ತ ಕುತೂಹಲ ಬೆಳೆಸಿಕೊಳ್ಳುವುದು, ಅವುಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವುದೇ ವಿಜ್ಞಾನದ ಗುರಿಯಾಗಿದೆ. ಸರಿ ಯಾವುದೆಂದು ಮೇಲ್ನೋಟಕ್ಕೆ ನೋಡದೇ ಆಳವಾಗಿ ಒರೆಗೆಹಚ್ಚುವುದು ವಿಜ್ಞಾನದ ತಳಹದಿ. ಪಠ್ಯಪುಸ್ತಕಗಳಲ್ಲಿರುವ ಪಾಠಗಳನ್ನು ಓದಿ, ಪರೀಕ್ಷೆ ಬರೆಯುವುದಷ್ಟೇ ವಿಜ್ಞಾನವಲ್ಲ ಅನ್ನುವುದನ್ನು ನಾವು ತಿಳಿದುಕೊಳ್ಳಬೇಕೆಂದು ತಿಳಿಸಿದಾಗ ಮಕ್ಕಳು ಚಟುವಟಿಕೆಗಳಲ್ಲಿ ಪಾಲ್ಗೊಂಡ ನಲಿವಿನೊಂದಿಗೆ ಹೌದೆನ್ನುವಂತೆ ತಲೆತೂಗಿದರು.

ಮೇಲಿನ ಶಾಲೆಯ ಮಕ್ಕಳೊಂದಿಗಿನ ಒಡನಾಟದಿಂದ ನನಗಾದ ಕಲಿಕೆಯೆಂದರೆ,

1. ವಿಜ್ಞಾನ ಕಲಿಸುವುದರಲ್ಲಿ ನಾವು ಮುಖ್ಯವಾಗಿ ಎಡವುತ್ತಿರುವುದೆಲ್ಲಿ ಎಂದರೆ, ವಿಜ್ಞಾನ ನಮ್ಮ ಬದುಕಿನ ಸುತ್ತನೇ ಇರುವ, ನಮ್ಮ ಸುತ್ತಣದ ತಿಳುವಳಿಕೆ ಅನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡುವಲ್ಲಿ ಸೋಲುತ್ತಿರುವುದು. ವಿಜ್ಞಾನ ಹೇಗೆ ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿದೆ ಅನ್ನುವುದನ್ನು ಮೊದಲು ತಿಳಿಸಬೇಕು ಅದಾದ ಬಳಿಕವೇ ಪಠ್ಯಪುಸ್ತಕದಲ್ಲಿರುವ ಪಠ್ಯಕ್ರಮದಂತೆ ಕಲಿಸಲು ಮುಂದಾಗಬಹುದು. ಈ ಬಗೆಯನ್ನು ಪ್ರತಿಯೊಂದು ಪಾಠಕ್ಕೂ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ, ’ಅಣು’ ಪಾಠವನ್ನು ಕಲಿಸುವ ಮುನ್ನ, ನಮ್ಮ ಸುತ್ತಮುತ್ತ ಕಾಣುವ ವಸ್ತುಗಳ ಜತೆಗೆ ನಮ್ಮ ಮೈ ಕೂಡ ಮೂಲದಲ್ಲಿ ಅಣುಗಳಿಂದ ಆಗಿರುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ’ಅಣು’ಗಳ ಬಗ್ಗೆ ಅಧ್ಯಯನ ನಡೆಸಿದುದರಿಂದ ಉದಾಹರಣೆಗೆ ನೀರಿನ ಗುಣಗಳನ್ನು ಚನ್ನಾಗಿ ತಿಳಿಯಲು ಆಯಿತು, ಹೆಚ್ಚು ಗಟ್ಟಿಯಾದ, ಹಗುರವಾದ ವಸ್ತುಗಳನ್ನು ಕಂಡುಹಿಡಿಯಲು ಸಾಧ್ಯವಾಯಿತು, ವಸ್ತುವೊಂದು ಇನ್ನೊಂದು ವಸ್ತುವಿನೊಡನೆ ಹೇಗೆ ಬೆರೆಯುತ್ತದೆ ಅನ್ನುವುದನ್ನು ಅರಿಯಲು ನೆರವಾಯಿತು ಹೀಗೆ ಮುಂದುವರೆಯಬಹುದು.

2. ಕಲಿಕೆಯಲ್ಲಿ ಮಕ್ಕಳ “ಪಾಲ್ಗೊಳ್ಳುವಿಕೆ” ತುಂಬಾ ಮುಖ್ಯ. ಹಾಗಾಗಿ ಶಾಲೆಯ ಕೋಣೆಯಲ್ಲಿ ಕಲಿಕೆ ಬರೀ ಶಿಕ್ಷಕರಿಂದ ಮಕ್ಕಳೆಡೆಗೆ ಹರಿಯದೇ, ಎರಡೂ ಬದಿಯಿಂದ ಚರ್ಚೆಯ, ಪ್ರಶ್ನೋತ್ತರಗಳ ರೂಪದಲ್ಲಿ ನಡೆದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಮಕ್ಕಳು ಹೆಚ್ಚು ತೊಡಗಿದಷ್ಟು ಕಲಿಕೆ ಸುಲಭ.

3. ವಿಜ್ಞಾನ ಕಲಿಕೆಯಲ್ಲಿ “ಓದಿ” ಕಲಿಯುವುದರ ಜತೆಗೆ “ಮಾಡಿ” ಕಲಿಯುವುದಕ್ಕೆ ಒತ್ತುಕೊಡಬೇಕು. ಈ ನಿಟ್ಟಿನಲ್ಲಿ ಕಿರಿದಾದರೂ ಪರವಾಗಿಲ್ಲ ಪ್ರತಿಯೊಂದು ಶಾಲೆ ವಿಜ್ಞಾನದ ಪ್ರಯೋಗಮನೆಯನ್ನು ಹೊಂದಿರಬೇಕು. ಶಾಲೆಯ ಕೋಣೆಯಲ್ಲಿ ಕಲಿಸುವಾಗಲೂ ಕೂಡಾ ಶಿಕ್ಷಕರು ಪಾಠಕ್ಕೆ ಸಂಬಂಧಿಸಿದ ಕಿರು ಪ್ರಯೋಗಗಳನ್ನು ಮಾಡಿ ತೋರಿಸಬಹುದು.

4. ಮಕ್ಕಳ ಯೋಚನೆಯ ಹರಿವನ್ನು ಕಟ್ಟಿಹಾಕುವುದಾಗಲಿ ಇಲ್ಲವೇ “ಇದೇ ದಾರಿ ಸರಿಯಾದುದು”, “ಹೀಗೆನೇ ಯೋಚನೆ ಮಾಡಬೇಕು” ಅನ್ನುವುದನ್ನು ಕಲಿಸುಗರು ಮಾಡಬಾರದು. ಮಕ್ಕಳಿಗೆ ರೆಕ್ಕೆ ಬಡಿಯಲು ಬಿಟ್ಟಷ್ಟು ಅವರು ಹೊಸ ದಿಕ್ಕುಗಳನ್ನು ಅರಸಲು ಸಾಧ್ಯವಾಗುತ್ತದೆ. ಕಲಿಸುಗರು ಮಕ್ಕಳೊಂದಿಗೆ ಗೆಳೆಯ/ಗೆಳತಿಯಂತೆ ಬೆರೆತಷ್ಟೂ ಕಲಿಕೆ, ಕಲಿಸುವಿಕೆ ಸುಲಭವಾಗುತ್ತದೆ. [ಹಾಗಂತ ಬರೀ ತರ್ಲೆ ಮಾಡಲು ಬಿಡುವುದು ಅಂತಲ್ಲಾ:-) ]

5. ಪಠ್ಯಪುಸ್ತಕಗಳು ಕನ್ನಡದ ನುಡಿ ಸೊಗಡಿಗೆ ಒಗ್ಗುವಂತೆ ಮಾಡಬೇಕು. ಈಗಿರುವ ಪಠ್ಯಪುಸ್ತಕಗಳಲ್ಲಿ ತುಂಬಾ ಕಷ್ಟಕರವಾದ ಪದಗಳು, ವಾಕ್ಯಗಳ ಬಳಕೆ ಮಾಡಲಾಗಿದೆ. ವಿಜ್ಞಾನ ಅವರಿಗೆ ಬರೀ ಪಠ್ಯಕ್ರಮದ ವಿಷಯ, ಅದಕ್ಕೂ ಅವರ ಪರಿಸರಕ್ಕೂ ನಂಟಿಲ್ಲ ಅನ್ನಿಸುವುದಕ್ಕೆ ಇದು ಕೂಡ ಕಾರಣ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಸರಕಾರ ಕೂಡಲೇ ಗಮನಹರಿಸಿ, ಸರಿಪಡಿಸಬೇಕು. ತಾಯ್ನುಡಿ ಮಾಧ್ಯಮದಲ್ಲಿ ಕಲಿಕೆಯ ಪ್ರಯೋಜನ ಮಕ್ಕಳು ಪಡೆಯುವಂತಾಗಲು ಇದು ಆಗಬೇಕು. ಇಲ್ಲವಾದರೆ ಪಠ್ಯಪುಸ್ತಕಗಳ ಚೌಕಟ್ಟಿನಲ್ಲಿ ನೋಡಿದಾಗ ಇಂಗ್ಲೀಶ್ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯತ್ಯಾಸವೇನೂ ಉಳಿಯುವುದಿಲ್ಲ. ಎರಡೂ ಪಠ್ಯಪುಸ್ತಕಗಳೂ ಮಕ್ಕಳಿಗೆ ದೂರವಾದ ಪದಗಳಿಂದ ಪರಕೀಯವಾಗಿ ಬಿಡುತ್ತವೆ.

[ಪದಗಳ ಬಳಕೆಯ ಬಗ್ಗೆ ನಡೆಸಿದ ಅಧ್ಯಯನ ವರದಿಯನ್ನು ಓದಲು ಇಲ್ಲಿಗೆ ಹೋಗಿ ]

ಶಾಲೆಯ ಮಕ್ಕಳೊಂದಿಗೆ ಒಡನಾಡುವ ನಮ್ಮ ತಂಡದ ಕೆಲಸ ಮುಂದುವರೆಯಲಿರುವುದರಿಂದ, ಈ ನಿಟ್ಟಿನಲ್ಲಿ ಇನ್ನಷ್ಟು ಕಲಿಕೆಯಾಗುವುದಂತೂ ನಿಜ. ಹಾಗಾಗಿ ಈ ಬರಹ ಮುಂದೊಮ್ಮೆ ಮತ್ತಷ್ಟು ಹಿಗ್ಗಬಹುದು.

Bookmark the permalink.

Comments are closed.

Comments are closed